ರೈತ ಬೆಳೆಯನ್ನು ಬೆಳೆಯುವ ಬೆಳಸನ್ನು ಶೇಖರಿಸಿ, ಪರಿಷ್ಕರಿಸುವ ತಾಣವನ್ನು ಕಣಎಂದು ಕರೆಯಲಾಗಿದೆ. ಬೆಳೆದ ಪೈರನ್ನು ಕಟಾವು ಮಾಡಿ ಅವನ್ನೇಲ್ಲ ಮೆದೆ ಅಥವಾ ಬಣವೆಗೆ ಹಾಕಿದ ಮೇಲೆ ಕಣವನ್ನು ತಯಾರಿಸುವರು. ಸಂಕ್ರಾಂತಿ ಹಬ್ಬ ಮುಗಿದ ಮೇಲೆ ಒಕ್ಕಣೆ ಮಾಡುವುದರಿಂದ ಹಬ್ಬದ ದಿನ ರೈತರು ಮೆದೆಗೆ, ಮನೆಯ ಸೂರಿಗೆ, ದನದ ಕೊಟ್ಟಿಗೆಗೆ ಪತ್ರೆ ಸಿಕ್ಕಿಸಿ ಬಂದು ಹಬ್ಬ ಮಾಡಿದ ಮೇಲೆ ಕಣಜ ಸಿದ್ದಪಡಿಸುವರು. ಕೆಲವು ಕಡೆ ಹಬ್ಬಕ್ಕೆ ಮೊದಲೆ ಕಣಜವನ್ನು ಅಣಿಗೊಳಿಸುತ್ತಾರೆ.

Fields in Záhorie (Slovakia) - a typical Central European agricultural region.
Domestic sheep and a cow (heifer) pastured together in ದಕ್ಷಿಣ ಆಫ್ರಿಕಾ.
A Sumerian harvester's sickle made from baked clay (ca. 3000 BC).
Threshing of grain in ancient Egypt
Agricultural calendar from a manuscript of Pietro de Crescenzi.

ವ್ಯವಸಾಯ ಸಂಬಂಧಿಯಾಗಿ ಕಣ

ಬದಲಾಯಿಸಿ

ಕುಯ್ದ ಫಸಲನ್ನು ಹಸನು ಮಾಡಿ ಧಾನ್ಯವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಕಣ ಮಾಡುವುದು, ಒಕ್ಕಣೆ ಮಾಡುವುದು ಎನ್ನುತ್ತಾರೆ. ಮೇಟಿ ನಾಟುವುದು, ತೆನೆ ಮುರಿಸಿ ಹಂತಿ ಕಟ್ಟುವುದು, ಮೇದ ಕಂಕಿಗಳನ್ನು ವಿಂಗಡಿಸುವುದು, ತೂರಿ ರಾಶಿ ಮಾಡುವುದು, ಮೇಟಿಯ ರಾಶಿ, ಬುದ್ದಿವಂತಲಿಂಗನ ರಾಶಿ (ಬೂದ), ಕರಿಭಂಟ, ಬಿಳಿಭಂಟ,ಗೋಪಾಳ, ದಾನಧರ್ಮ ಇವೆಲ್ಲಾ ರೈತರು ವ್ಯವಸಾಯ ಸಂಬಂಧಿ ಕಣಜದಲ್ಲಿ ಪಾಲಿಸುವ ಸಂಪ್ರದಾಯಗಳು.

ಕಣದ ಬಾಹ್ಯ ಪರಿಚಯ

ಬದಲಾಯಿಸಿ

ಮೊದಲು ಕಣದ ಜಾಗವನ್ನು ಹುಲ್ಲು-ಮುಳ್ಳುಗಳಿಲ್ಲದಂತೆ ಕೆತ್ತಿ ಸ್ವಚ್ಛಗೊಳಿಸ ಬೇಕು. ಅದರಲ್ಲಿ ನೀರು ಚಿಮುಕಿಸಿ ಹತ್ತು ಜೊತೆ ಎತ್ತಿಗೆ ಬಂತಿ ಕಟ್ಟುತ್ತಾರೆ. ಉತ್ತರ ಕರ್ನಾಟಕದ ಕೆಲವು ಕಡೆ ನೆಲದ ಮೇಲಿನ ಕಸವನ್ನೇಲ್ಲ ಕಿತ್ತು, ಕೆಸರಾಗುವಂತೆ ನೀರಾಕಿ, ಅದರ ಮೇಲೆ ಹೊಟ್ಟನ್ನು ಹಾಕಿ ಕಾಲಿನಿಂದ ತುಳಿದು ಹದ ಮಾಡಿ ಕಣವನ್ನು ಸಿದ್ದಗೊಳಿಸುವರು. ನಂತರ ತೆಂಗಿನ ಗರಿಯಿಂದ ಕಟ್ಟಿದ ಸಾಣಿಯಿಂದ ಮೇಟಿಯ ಸುತ್ತಲೂ ಸಿತ್ತಿಸಿ ಇದ್ದಿಲು, ಕಸಕಡ್ಡಿ, ಬೂದಿಯಿಂದ ಬಿರುಕು ಮುಚ್ಚಿ ಕಣವನ್ನು ತಗ್ಗು, ದಿಣ್ಣೆಗಳಿಲ್ಲದಂತೆ ಸಮತಟ್ಟು ಮಾಡುವರು. ಮೆದೆ ಹಾಕಿದವರೆಲ್ಲರೂ ಬಂದು ಕಣದ ಕೆಲಸ ಮಾಡುತ್ತಾರೆ. ಅವರವರ ಸ್ಥಿತಿಗೆ ಅನುಗುಣವಾಗಿ ನಾಲ್ಕೆತ್ತಿನ ಕಣ ಅಥವಾ ಎಂಟೆತ್ತಿನ ಕಣವನ್ನು ಸಿದ್ದಗೊಳಿಸಿದ ಮೇಲೆ ಕಣದ ಸುತ್ತಲೂ ಬೂದಿಯಿಂದ ಗೆರೆ ಹಾಕಿ ಗುರುತು ಮಾಡುವರು. ಸಾಮಾನ್ಯವಾಗಿ ಪ್ರತಿವರ್ಷವೂ ಒಂದೇ ಸ್ಥಳದಲ್ಲಿ ಕಣ ಮಾಡುವುದರಿಂದ ಬೆಳೆ ಹುಲುಸಾಗುತ್ತದೆ ಎಂಬ ನಂಬಿಕೆಯೂ ಇದಕ್ಕೆ ಕಾರಣವಾಗಿದೆ. ರೈತರ ದೃಷ್ಟಿಯಲ್ಲಿ ಕಣ ತುಂಬಾ ಪವಿತ್ರವಾದ ಸ್ಥಳ.

ಮೇಟಿಯ ವಿಶೇಷತೆ

ಬದಲಾಯಿಸಿ

'ಮೇಟಿ' ಕಣದ ಕೇಂದ್ರ ಬಿಂದು. ಕಣದ ಮಧ್ಯದಲ್ಲಿ ನೆಡುವ ಒಂದಾಳುದ್ದದ ಬಿದಿರು, ಆಲ, ಸುರಗಿ ಅಥವಾ ಬನ್ನಿಮರದ ಕಂಬಕ್ಕೆ ಮೇಟಿ ಎನ್ನುವರು. ಜನಪದರು ಇದನ್ನು ಲಕ್ಷ್ಮೀ ಎಂದು ಪರಿಭಾವಿಸಿ ಪೂಜೆ ಮಾಡುವರು. ಮೈಸೂರು ಮತ್ತು ಮಂಡ್ಯ ಕಡೆ ಸಗಣಿ ಉಂಡೆಯ ಬೆನಕನ ನೆತ್ತಿ ಮೇಲೆ ಹಸಿ ಗರಿಕೆ ಹುಲ್ಲನ್ನು ಸಿಕ್ಕಿಸಿ ಒಂದನ್ನು ಮೇಟಿಯ ಮೇಲೂ, ಮೂರನ್ನು ಮೇಟಿಯ ತಳದಲ್ಲಿ ಇರಿಸಿ, ತುಂಬೆ ಹೂ, ಕುಂಕುಮ ಮುಂತಾದ ಪೂಜಾ ದ್ರವ್ಯಗಳಿಂದ ಪೂಜಿಸಿ ಬಂದವರಿಗೆಲ್ಲಾ ಕಡಲೆಪುರಿಯನ್ನು ಪ್ರಸಾದವಾಗಿ ಹಂಚುವರು.

ಕಣದ ಕಾರ್ಯ/ವೈಖರಿ

ಬದಲಾಯಿಸಿ

ಮಾರನೆ ದಿನ ಕಣವನ್ನು ಸಗಣಿ ನೀರಿನಿಂದ ತಾರಿಸಿ, ರಾಗಿ ಹಸಿಟಿನಲ್ಲಿ ಸೂರ್ಯ-ಚಂದ್ರರನ್ನು ಬರೆಯುವರು. ನಂತರ ಕಣವನ್ನು ಪ್ರದಕ್ಷಿಣೆ ಹಾಕಿ ವಿಭೂತಿ ಉದುರಿಸುತ್ತಾರೆ. ಇದಕ್ಕೆ 'ಕಣ ಸಾರಿಸಿ ಬಟ್ಟಿಡೋದು' ಎನ್ನುತ್ತಾರೆ. ಆಮೇಲೆ ಪೇರಿಸಿದ ಕುಪ್ಪೆ/ಮೆದೆ/ಬಣವೆಯನ್ನು ಕಿತ್ತು ಕಣದಲ್ಲಿ ಹರಡಿ 'ಗುಂಡು ಕಟ್ಟುತ್ತಾರೆ'. ಗುಂಡು ಎಂದರೆ ಕಲ್ಲನ ದೊಡ್ಡ ರೋಲರ್. ಇದನ್ನು ಎತ್ತುಗಳಿಂದ ಎಳೆಸುತ್ತಾರೆ. ಗುಂಡು ಹೊಡೆದ ಹಾಗೆ ತಿರುವಿ ತೆನೆಯನ್ನು ಒದರುತ್ತಾರೆ. ಹೀಗೆ ಬೇರ್ಪಟ್ಟ ಧಾನ್ಯವನ್ನು 'ಮಿದಿ'/ಹಸನು ಮಾಡದಿರುವ ಧಾನ್ಯದ ರಾಶಿ. ಹೀಗೆ ಹಸನು ಮಾಡಿದ ರಾಶಿಗೆ ಪೂಜೆ ಮಾಡಬೇಕು. ಕುಂಬಾರ ಗಾಳಿ, ರಾಶಿಗಾಳಿ, ಕೋಳೂರ ಗಾಳಿ ಬೀಸಿದಾಗ ಥಂಡಿ ಬಿದ್ದು ಹಿಂಗಾರಿನ ಬೆಳೆಯ ರಾಶಿ ಹುಲುಸಾಗುವುದೆಂದು ರೈತರು ಭಾವಿಸುವರು.

ಕಣದ ಬಗೆಗಿರುವ ಜನಪದ ಗೀತೆಗಳು

ಬದಲಾಯಿಸಿ
  • ಕಣವೇ ಮಂಟಪವಾಯ್ತೊ ಗುಣವಂತ ಬಸವೇಶ

ಹೊಣೆಗಾರ ರೈತ ದಂಡೇಶ/ಕಣ ಮೇಟಿ
ಗಣಿ ಗುರುವು ಕಣಕೆ ಪ್ರಭುಲಿಂಗೊ

  • ಶರಣ ಮಡಿವಾಳಾದ ಕರಿಭಂಟ ಕಣದಾಗ

ಹರಳಾದ ಕಣಕ ಬಿಳಿಭಂಟ/ಪ್ರಭುಲಿಂಗ
ಗುರು ಬುದ್ದಿವಂತ ಲಿಂಗಾದ

  • ರಾಸಿ ಗಾಳಿಯು ಬೀಸಿ ಸೂಸಿ ಹರಿಯಿತು ಕಣವು

ಕೂಸ ಕೋಳೂರ ಕಡೆಗಾಳಿ/ಬೀಸಿಂದು
ಮೀಸಲು ರಾಸಿ ಜಂಗಮಕೆ

  • ಸುಂಕರಾಶಿಯ ಕಣಕೆ ಸಂಕದೇವನ ಬಲವು

ಕಂಕಿಯಾ ಕಣಕೆ ನಿನ ಬಲವು/ಮಾದೇವಿ
ಸೊಂಕಿದರೆ ರಾಶಿ ಕಣತುಂಬಿ

ಕಣದ ಆಚರಣೆ

ಬದಲಾಯಿಸಿ

ಬೆಳೆದ ಪೈರಿಗೆ ರೋಗ ಬರದೆ ಹುಲುಸಾಗಲಿ ಎಂದು ರೈತರು ಕಣದಲ್ಲಿ ಹಬ್ಬ ಮಾಡುವ ಸಂಪ್ರದಾಯ ಕೆಲವು ಕಡೆ ಇದೆ. ಸಾಮಾನ್ಯವಾಗಿ ಈ ಹಬ್ಬ ಬೆಳದಿಂಗಳಲ್ಲಿ ನಡೆಯುತ್ತದೆ. ಹಸನು ಮಾಡಿದ ರಾಶಿಗೆ ಪೂಜೆ ಮಾಡುವುದೆ ಕಣದ ಹಬ್ಬ. ಮೊದಲು ದೊಡ್ಡ ರಾಶಿ ಮಾಡಿ, ಅದರ ಮುಂದೆ ಎರಡು ಸಣ್ಣ ಗುಡ್ಡೆ ಮಾಡುತ್ತಾರೆ. ರಾಶಿಯ ಪಕ್ಕದಲ್ಲಿ ಮೂರು ವೊರ, ಎರಡು ಬರಲು ಇಡುತ್ತಾರೆ. ಸಗಣಿಯಲ್ಲಿ ಪಿಳ್ಳೇರಾಯನ ಮಾಡಿ ಹೂ ಸಿಕ್ಕಿಸಿ ರಾಶಿಯ ತುದಿಯಲ್ಲಿ ಇಡುತ್ತಾರೆ. ರಾಶಿಗೆ ಮಾವಿನ ಎಲೆ ಸಿಕ್ಕಿಸಿ ಕಾಯೊಡೆದು, ಅದರ ಹಾಲನ್ನು ರಾಶಿಗೆ ಚಿಮುಕಿಸುತ್ತಾರೆ. ಇದೇ ಕಾಯಿ ಹಾಲನ್ನು ಹಗೇವಿಗೂ ಚಿಮುಕಿಸಿ ಅದರೊಳಗೆ ರಾಶಿ ತುಂಬುವರು. ರಾಶಿ ಪೂಜೆ ನಂತರ ಬಂದವರೆಲ್ಲರಿಗೂ ಕಡಲೆಪುರಿ ಹಂಚುತ್ತಾರೆ. ರೈತ ತಾನು ಗಳಿಸಿದ ಫಸಲನ್ನು ದಾನ ಮಾಡುವುದರಲ್ಲಿ ಪ್ರವೀಣನಾಗಿರುತ್ತಾನೆ. ತನಗೆ ಸಹಕಾರ ನಿಡಿದ ಬಡಗಿ, ಕಮ್ಮಾರ, ಸಹ ರೈತರು ಮುಂತಾದವರಿಗೆ ದಾನ ಧರ್ಮ ಮಾಡುವನು. ನಂತರ ಭೂತಾಯಿಗೆ ಕಡೆಯ ಚರಗ ಹಾಕಿ ಅತಿಥಿಗಳೊಂದಿಗೆ ತೃಪ್ತಿಯಾಗುವಂತೆ ಉಂಡು, ರಾತ್ರಿಯೆಲ್ಲಾ ಜಾಗರಣೆ ಇದ್ದು ಬೆಳಗಿನ ಜಾವ ಕೋಳಿ ಕೂಗೊ ಹೊತ್ತಿಗೆ ರಾಶಿಯನ್ನು ತುಂಬುವರು.

ಕಣದ ಕೆಲವು ನಿಯಮ-ನಿಷೇಧಗಳು

ಬದಲಾಯಿಸಿ

ಕಣದಲ್ಲಿ ಕೆಲವು ನಿಯಮಗಳನ್ನು ನಿಷ್ಠೆಯಿಂದ ಆಚರಿಸುವರು. ಕಣದಲ್ಲಿರುವಾಗ ಪ್ರತಿಯೊಬ್ಬರ ತಲೆಯ ಮೇಲು ಒಂದು ತುಂಡು ಬಟ್ಟೆ ಇರಬೇಕು. ಕಣದಲ್ಲಿರುವಾಗ ಕಾಲಿಗೆ ಚಪ್ಪಲಿ ಹಾಕಿಕೊಳ್ಳ ಬಾರದು. ಧೂಮಪಾನ ಮಾಡಬಾರದು, ಯಾರನ್ನೂ ಹವ್ಯಾಚ ಶಬ್ದಗಳಿಂದ ಬೈಯ್ಯಬಾರದು. ಎಲೆ-ಅಡಿಕೆ ಮೆಲ್ಲಬಾರದು. ಮುಟ್ಟಾದವರು, ವಿಧವೆಯರು ಕಣವನ್ನು ಪ್ರವೇಶಿಸ ಬಾರದು. ಕಣದಲ್ಲಿರುವವರು ಹೊರಗಿರುವವರನ್ನು ಕೂಗಿ ಕರೆಯ ಬಾರದು. ಜಗಳ ಆಡಬಾರದು, ಕೈಕಟ್ಟಿ ನಿಲ್ಲಬಾರದು, ಕಣದೊಳಗೆ ಬಂದ ಮುತೈದೆಯರನ್ನು ಬರಿಗೈಲಿ ಹೊರಗೆ ಕಳುಹಿಸ ಬಾರದು.

ಆಕರ ನೆರವು

ಬದಲಾಯಿಸಿ
  • ಕನ್ನಡ ಜಾನಪದ ವಿಶ್ವಕೋಶ -ಸಂಪುಟ-೧

ಉಲ್ಲೇಖ

ಬದಲಾಯಿಸಿ


[] [] []

  1. "ಆರ್ಕೈವ್ ನಕಲು". Archived from the original on 2016-03-06. Retrieved 2015-05-29.
  2. http://www.prajavani.net/article/%E0%B2%A6%E0%B3%8A%E0%B2%A1%E0%B3%8D%E0%B2%A1%E0%B2%95%E0%B2%AE%E0%B2%B0%E0%B2%B5%E0%B2%B3%E0%B3%8D%E0%B2%B3%E0%B2%BF-%E0%B2%95%E0%B3%83%E0%B2%B7%E0%B2%BF-%E0%B2%95%E0%B2%A3-%E0%B2%A8%E0%B2%BF%E0%B2%B0%E0%B3%8D%E0%B2%AE%E0%B2%BE%E0%B2%A3%E0%B2%95%E0%B3%8D%E0%B2%95%E0%B3%86-%E0%B2%9A%E0%B2%BE%E0%B2%B2%E0%B2%A8%E0%B3%86
  3. http://www.bangalorewaves.com/articles/bangalorewaves-article-details.php?val1=NTMy
"https://kn.wikipedia.org/w/index.php?title=ಕಣ_(ಕೃಷಿ)&oldid=1249876" ಇಂದ ಪಡೆಯಲ್ಪಟ್ಟಿದೆ