ಕಡಲ ಹಂದಿ
ಕಡಲ ಹಂದಿ

ಕಡಲ ಹಂದಿ

ಬದಲಾಯಿಸಿ

ಸಿಟೇಸಿಯ ಗಣದ ಫೋಸೀನ ಜಾತಿಯ ಜಲವಾಸಿ ಸ್ತನಿ (ಸೀ ಹಾಗ್). ಇಂಗ್ಲಿಷಿನಲ್ಲಿ ಪಾರ್ಪಾಯಿಸ್ ಎನ್ನುತ್ತಾರೆ. ತಿಮಿಂಗಿಲ ಮತ್ತು ಡಾಲ್ಫಿನ್ನುಗಳ ಹತ್ತಿರ ಸಂಬಂಧಿ. ದೇಹದ ಆಕಾರ ಡಾಲ್ಫಿನಿನಂತೆಯೇ. ಆದರೆ ಅದರಂತೆ ಮೂತಿ ಚೂಪಾಗಿಲ್ಲ. ದೇಹದ ಉದ್ದ ಸು. 1.2-1.8 ಮೀ. ಬಣ್ಣ ಸಾಮಾನ್ಯವಾಗಿ ಕಪ್ಪು. ಹೊಟ್ಟೆಯ ಭಾಗ ಬಿಳಿ. ತಲೆ ಗುಂಡಗಿದೆ. ಬಾಯಿ ಅಗಲ. ಒಂದೊಂದು ದವಡೆಯಲ್ಲಿ 32-56 ಹಲ್ಲುಗಳಿವೆ. ಕುತ್ತಿಗೆಯ ಕಸೇರುಗಳು ಒಂದರೊಡನೊಂದು ಕೂಡಿಕೊಂಡಿವೆ. ಮುಂಗಾಲುಗಳು ಜಾಲಪಾದಗಳಾಗಿ ಮಾರ್ಪಟ್ಟು ಈಜಲು ನೆರವಾಗಿವೆ. ಬೆನ್ನಿನ ಮೇಲೆ ತ್ರಿಕೋಣಾಕಾರದ ಬೆನ್ನಿನ ಈಜುರೆಕ್ಕೆಯೊಂದಿದೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ತೀರಪ್ರದೇಶದಲ್ಲಿ ಕಾಣಬರುವ ಇದು ಸಾಮಾನ್ಯವಾಗಿ ದೊಡ್ಡ ದೊಡ್ಡ ಗುಂಪುಗಳಲ್ಲಿ ವಾಸಿಸುತ್ತದೆ. ಒಂದೊಂದು ಗುಂಪಿನಲ್ಲೂ 20-100 ಪ್ರಾಣಿಗಳಿರುತ್ತವೆ ಸಾಧಾರಣವಾಗಿ ಸಮುದ್ರದಲ್ಲೇ ವಾಸಿಸಿದರೂ ಕೆಲವೊಮ್ಮೆ ದೊಡ್ಡ ನದಿಗಳಿಗೆ ವಲಸೆ ಬರುವುದೂ ಉಂಟು. ಹೆರ್ರಿಂಗ್ ಮೀನು. ಬಂಗಡೆ, ಸ್ಕ್ವಿಡ್ ಮುಂತಾದುವು ಇದರ ಆಹಾರ. ಋತುಕಾಲ ಬೇಸಗೆ. ಹೆಣ್ಣು ಒಂದು ಸಲಕ್ಕೆ ಒಂದೇ ಮರಿಯನ್ನು ಈಯುತ್ತದೆ. ಗರ್ಭಧಾರಣೆ ಕಾಲ ಸು. 1 ವರ್ಷ. ತಾಯಿ ಒಂದು ಕಡೆ ವಾಲಿಕೊಂಡು ಈಜುತ್ತ ಮರಿಗೆ ಹಾಲುಣಿಸುವುದು ಇದರ ಸೋಜಿಗ. ಪ್ರಪಂಚದ ಹಲವೆಡೆ ಇದರ ಮಾಂಸವನ್ನು ತಿನ್ನುತ್ತಾರೆ. ಇಂಗ್ಲೆಂಡಿನ ರಾಜ ಎಂಟನೆಯ ಹೆನ್ರಿ ಕಾಲದಲ್ಲಿ ಇದರ ಮಾಂಸವನ್ನು ರಾಜಭೋಜನಕೂಟಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದರಂತೆ.[][]

ಇದೇ ಗಣಕ್ಕೆ ಸೇರಿದ ಫೋಸಿನಾಯ್ಡಿಸ್ ಮತ್ತು ನಿಯೋಫೋಸೀನ ಎಂಬ ಜಾತಿಯ ಪ್ರಾಣಿಗಳನ್ನೂ ಕಡಲ ಹಂದಿಗಳೆಂದೇ ಕರೆಯುವುದುಂಟು.

ಫೋಸಿನಾಯ್ಡಿಸ್

ಬದಲಾಯಿಸಿ

ಉತ್ತರ ಪೆಸಿಫಿಕ್ ಸಾಗರದ ಅಲ್ಯೂಷಿಯನ್ ದ್ವೀಪಗಳಲ್ಲಿ ವಾಸಿಸುತ್ತದೆ.

ನಿಯೋಫೋಸೀನ

ಬದಲಾಯಿಸಿ

ಭಾರತ, ಬೋರ್ನಿಯೊ ಮತ್ತು ಜಪಾನಿನ ತೀರ ಪ್ರದೇಶಗಳಲ್ಲಿ ಕಾಣಬರುತ್ತದೆ. ಇದರ ಬಣ್ಣ ಕಪ್ಪು. ಬೆನ್ನಿನ ಈಜುರೆಕ್ಕೆ ಇಲ್ಲ. ಸಾಮಾನ್ಯವಾಗಿ ಸಮುದ್ರತೀರಗಳಲ್ಲಿ ವಾಸಿಸಿದರೂ ಕೆಲವೊಮ್ಮೆ ಇರವಾಡಿ ಮುಂತಾದ ಪುರ್ವ ಏಷ್ಯದ ನದಿಗಳಲ್ಲಿ ನೂರಾರು ಮೈಲಿ ದೂರ ಒಳಕ್ಕೆ ಸಾಗಿ ಬರುವುದುಂಟು.[][]

ಉಲ್ಲೇಖಗಳು

ಬದಲಾಯಿಸಿ