ಕಡಲ ಸರ್ಪ

ಕಡಲ ಸರ್ಪ

ಬದಲಾಯಿಸಿ

ಇದು ಒಂದು ಸರ್ಪರೂಪಿ ಸಾಗರದ ದೈತ್ಯ. ಪೌರಾಣಿಕ ಸಂಬಂಧವಾದದ್ದು; ಕಾಲ್ಪನಿಕವಾದದ್ದು. ವಿಶಾಲವಾದ ಸಾಗರಗಳಲ್ಲಿ ಯಾನ ಮಾಡಿದ ಹಿಂದಿನ ನಾವಿಕರು ತಾವು ನೋಡಿದುದಾಗಿ ಇದನ್ನು ವರ್ಣಿಸಿದ್ದಾರೆ. ಇದರ ಬಗ್ಗೆ ಅನೇಕ ದಂತಕಥೆಗಳನ್ನು ಕಟ್ಟಿರುವುದೂ ಉಂಟು. ಆದರೆ ವೈಜ್ಞಾನಿಕವಾಗಿ ಇದುವರೆವಿಗೂ ಈ ಬಗೆಯ ಕಡಲ ಸರ್ಪಗಳನ್ನು ಸರಿಯಾಗಿ ಕಂಡವರಿಲ್ಲ. ಅಂತು ಕಡಲ ಸರ್ಪದ ಭ್ರಮೆ ಹುಟ್ಟಿಸುವ ಹಲವು ಸಂದರ್ಭಗಳು ಕಂಡುಬರುವುದುಂಟು. ಅವುಗಳಲ್ಲಿ ಮುಖ್ಯವಾದವು ಇವು; ಹಲವು ಕಡಲ ಹಂದಿ ಅಥವಾ ಪಾರ್ಪಾಯಿಸ್ಗಳು ಸಾಗರದಲ್ಲಿ ಈಜುವಾಗ ಯಾವಾಗಲೂ ಒಂದರ ಹಿಂದೆ ಮತ್ತೊಂದು ಒಂದೇ ಸಾಲಿನಲ್ಲಿ ಈಜುವುದುಂಟು. ಅವು ನೀರಿನ ಮೇಲಾಯದಲ್ಲಿ ಈಜುವಾಗ ಗಾಳಿಸೇವನೆಗಾಗಿ ಆಗಾಗ್ಗೆ ಮೇಲೇಳುವುದೂ ಉಂಟು. ಇವುಗಳ ಬೆನ್ನಿನ ಮೇಲಿನ ಈಜುರೆಕ್ಕೆ ಅವುಗಳ ಗತಿಯನ್ನು ಕೂಡ ತೋರಿಸುತ್ತದೆ. ಈ ಕಡಲ ಹಂದಿಗಳ ಸಾಲು ನೀಳ ಹಾಗೂ ಡೊಂಕುಡೊಂಕಾಗಿರುವುದರಿಂದ ಅದು ಕಡಲ ಸರ್ಪವಿರಬೇಕೆಂದು ದೂರದಿಂದ ನೋಡಿದವರು ಭ್ರಮಿಸಿರಲಿಕ್ಕೂ ಸಾಕು. ಸೀಟೋ ರೈನಸ್ ಮಾಕ್ಸಿಮಸ್ ಎಂಬ ಷಾರ್ಕ್ಮೀನು ಸಾಧಾರಣವಾಗಿ ಒಂದರ ಹಿಂದೆ ಒಂದು ಜೊತೆಗೂಡಿ ಈಜುವುದು ಮತ್ತೊಂದು ನಿದರ್ಶನ. ಇದರ ಉದ್ದ ಸು. 18 ಮೀ ಇರುತ್ತದೆ. ರಿಗ್ಯಾಲಿಕಸ್ ಗ್ಲೆಸ್ನೆ ಎಂಬ ಮೀನು ಮತ್ತೊಂದು ಉದಾಹರಣೆಯಾಗಿದೆ. [][]

ಕಡಲ ಸರ್ಪ ಲಕ್ಷಣಗಳು

ಬದಲಾಯಿಸಿ

ಇದರ ದೇಹ ರಿಬ್ಬನ್ನಿನ ಆಕಾರ, 6 ಮೀ ಉದ್ದ, 60 ಪೌಂಡು ತೂಕ. ಈಜುವಾಗ ಸರ್ಪದಂತೆ ತನ್ನ ದೇಹವನ್ನು ಅಂಕುಡೊಂಕಾಗಿ ಮಾಡಿಕೊಳ್ಳುತ್ತದೆ. ಇದರ ಬೆನ್ನಿನ ಮೇಲಿನ ಈಜುರೆಕ್ಕೆ ದೇಹಾದ್ಯಂತ ಹರಡಿದೆ. ಇದರ ಮುಂದಿನ 10-15 ಈಜುರೆಕ್ಕೆಯ ದಿಂಡುಗಳು ಉದ್ದವಾಗಿದ್ದು ತಲೆಯ ಮೇಲೆ ಹರಡಿರುವುದುಂಟು. ಈ ಪ್ರಾಣಿಯನ್ನು ಕೆರಳಿಸಿದಾಗ ಈ ದಿಂಡುಗಳು ಎದ್ದು ನಿಂತು ಭಯಂಕರವಾಗಿ ಕಾಣುತ್ತವೆ. ದೇಹ ಬೆಳ್ಳಿಯಂತೆ ಬಿಳುಪು. ಈಜುರೆಕ್ಕೆ ಹವಳದಂತೆ ಕೆಂಪು. ಮೆಡಿಟರೇನಿಯನ್ ಸಮುದ್ರದಲ್ಲಿ ವಾಸಿಸುವ ನೆಮರ್ಟೀನಿಯ ಹುಳುಗಳು ಸು. 9 ಮೀ-13.7 ಮೀ ಉದ್ದ ಬೆಳೆಯುವುದರಿಂದ ಇವು ಕೂಡ ಕಡಲ ಸರ್ಪದ ಭ್ರಮೆ ಹುಟ್ಟಿಸಿವೆ. ಆರ್ಕಿತ್ಯೂತಿಸ್ ಜಾತಿಯ ದೈತ್ಯ ಸ್ಕ್ವಿಡ್ 15 ಮೀ ಬೆಳೆಯುವುದೇ ಅಲ್ಲದೆ ಅದರ ಬಾಹು ಸು. 9 ಮೀ-13.7 ಮೀ ಉದ್ದವಿದ್ದು ಹಾವಿನಂತೆ ಕಾಣಬರುತ್ತದೆ. ಪೆಸಿಫಿಕ್ ಸಾಗರದ ದೈತ್ಯಾಕಾರದ ಹಾವುಮೀನಿನಂತಿರುವ ಕ್ಲಾಮಿಡೊಸೆಲಕಿ ಜಾತಿಯ ಷಾರ್ಕ್ ಮೀನು ಕೂಡ ಕಡಲ ಸರ್ಪದ ಭ್ರಮೆ ಹುಟ್ಟಿಸಿರಬಹುದು. ಹೆಬ್ಬಾವು ರೂಪದ, ಚೂವು ತಲೆ, ತೊಳೆಗಾಲು ರೂಪದ ಬಾಹುಗಳಿಂದ ಕೂಡಿ ಸು. 18 ಮೀ-21 ಮೀ ಉದ್ದ ಬೆಳೆಯುತ್ತಿದ್ದ ಗತಕಾಲದ (ಕ್ರಿಟೇಷಸ್ ಕಾಲದ) ಸರೀಸೃಪಗಳು ಸಾಗರದಲ್ಲಿ ಇಂದೂ ಬದುಕಿದ್ದು ಆಗಾಗ್ಗೆ ಕಾಣಿಸಿಕೊಳ್ಳುತ್ತವೆಂದೂ ಮತ್ತೆ ಕೆಲವರ ಭ್ರಮೆ.[][]

ಉಲ್ಲೇಖಗಳು

ಬದಲಾಯಿಸಿ