ಕಡಲ ಪಶು
ಸೈರೀನಿಯ ಗಣಕ್ಕೆ ಸೇರಿದ ಸಸ್ಯಾಹಾರಿ ಸ್ತನಿ (ಸೀ ಕೌ). ಇದರಲ್ಲಿ 2 ಜಾತಿಗಳಿವೆ ಅವು ಡುಗಾಂಗ್ ಮತ್ತು ಮನಾಟಿ. ತಿಮಿಂಗಿಲದಂತೆಯೇ ಇದ್ದರೂ ಇವು ಆ ಜಾತಿಗೆ ಸೇರಿದವಲ್ಲ. ಇವಕ್ಕೂ ತಿಮಿಂಗಲದಂತೆ ಚಪ್ಪಟೆಯಾದ ಬಾಲವೂ ದೋಣಿ ಮೀಟುವ ಹುಟ್ಟಿನಂಥ ಮುಂಗಾಲೂ ಇವೆ. ತಿಮಿಂಗಿಲದಂತೆಯೇ ಹಿಂಗಾಲು ಇಲ್ಲ. ಇವು ಸಮುದ್ರದ ದಡದ ಸಮೀಪದಲ್ಲಿಯೇ ವಾಸಿಸುತ್ತವೆ. ಆಳ ನೀರಿಗೆ ಹೋಗುವುದೇ ಇಲ್ಲ. ಭಾರತ ಮತ್ತು ಆಸ್ಟ್ರೇಲಿಯ ಸಮುದ್ರತೀರದಲ್ಲಿ ಸಿಗುತ್ತವೆ.ಕಡಲಪಶುವೆಗ ಸಣ್ಣ ಕಣ್ಣು, ಚಿಕ್ಕ ಬಾಯಿ ಇದೆ. ಕಿವಿಗಳಿಗೆ ಆಲಿಕೆಗಳಿಲ್ಲ. ಸಣ್ಣ ತೂತು ಮಾತ್ರ ಇವೆ. ಸುಕ್ಕುಗಟ್ಟಿದ ಮರದ ತೊಗಟೆಯಂಥ ದಪ್ಪ ಚರ್ಮ, ಚರ್ಮದ ಕೆಳಗೆ ದಪ್ಪನಾದ ಕೊಬ್ಬಿನ ಬ್ಲಬರ್ ಇದೆ. ಕೆಲವು ವೇಳೆ ಚರ್ಮದ ಮೇಲೆ ವಿರಳವಾಗಿ ತೆಳುವಾದ ಕೂದಲು ಇರುತ್ತವೆ. ಜಡಸ್ವಭಾವದ ಸಾಧುಪ್ರಾಣಿ ಇದು. ಸಮುದ್ರಜೊಂಡೂ ಇತರ ಜಲಸಸ್ಯಗಳೂ ಇದರ ಆಹಾರ. ಒಂದು ಸಲಕ್ಕೆ ಒಂದು ಮರಿ ಹಾಕುತ್ತದೆ. ಮರಿಯನ್ನು ತಾಯಿ ತುಂಬ ಅಕ್ಕರೆಯಿಂದ ಸಾಕುತ್ತದೆ. ಹಾಲು ಕುಡಿಸುವಾಗ ಮರಿಯ ತಲೆಯನ್ನೂ ಎದೆಯನ್ನೂ ನೀರಿನಿಂದ ಮೇಲಕ್ಕೆತ್ತಿ ಮುಂಗಾಲುಗಳಿಂದ ಮನುಷ್ಯರಂತೆ ಹಿಡಿದುಕೊಳ್ಳುತ್ತದೆ. ಈ ಮಾನವಸದೃಶ ಗುಣವೇ ಹಿಂದೆ ಇವನ್ನು ಜಲಕನ್ಯೆ ಎಂದು ಕರೆಯಲು ಆಧಾರ ವಾಗಿರಬಹುದು. ಮನಾಟಿ ಉಷ್ಣದೇಶದ ನದಿಗಳಲ್ಲಿ ವಾಸಿಸುತ್ತದೆ. ಡುಗಾಂಗ್ ಮನಾಟಿಗಿಂತ ಚಿಕ್ಕದು. 1.5-2.1 ಮೀ ಗಳಷ್ಟು ಉದ್ದವಿದೆ. ಅರ್ಧಚಂದ್ರಾಕೃತಿಯ ಬಾಲವಿದೆ. ಕಾಲಿನಲ್ಲಿ ಬೆರಳುಗಳಿಲ್ಲ. ಹಿಂದಿನ ಕಾಲದಲ್ಲಿ ನೂರಾರು ಪ್ರಾಣಿಗಳುಳ್ಳ ದೊಡ್ಡ ಮಂದೆಗಳಾಗಿ ಸಮುದ್ರದಲ್ಲಿರುತ್ತಿದ್ದ ಇವು ಮನುಷ್ಯರನ್ನು ಕಂಡರೆ ಹೆದರುತ್ತಿರಲಿಲ್ಲ. ಆತ ಹತ್ತಿರ ಬಂದು ಮುಟ್ಟಿದರೂ ಸುಮ್ಮನಿರುತ್ತಿದ್ದುವು. ಆದರೆ ಈಗ ಅವುಗಳ ಸಂಖ್ಯೆ ತುಂಬ ಕಡಿಮೆಯಾಗಿದೆ ಯಲ್ಲದೆ ಅವಕ್ಕೆ ಮನುಷ್ಯನಲ್ಲಿದ್ದ ಸಲಿಗೆಯೂ ಹೋಗಿಬಿಟ್ಟಿದೆ.[೧][೨]