ಕಡಬ (ಗುಬ್ಬಿ ತಾಲುಕು)
ಕಡಬ
ಬದಲಾಯಿಸಿತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ಕಸಬೆಯಿಂದ ನೈಋತ್ಯಕ್ಕೆ 19 ಕಿಮೀ ದೂರದಲ್ಲಿ ಶಿಂಷಾನದಿಯ ಬಲದಂಡೆಯ ಮೇಲೆ ನಿಟ್ಟೂರು - ಮಾಯಸಂದ್ರ ಹಾದಿಯಲ್ಲಿರುವ ಗ್ರಾಮ. 1886ರವರೆಗೆ ಕಡಬ ಇದೇ ಹೆಸರಿನ ತಾಲ್ಲೂಕಿನ ಕೇಂದ್ರವಾಗಿತ್ತು. ಈಗ ಇದು ಹೋಬಳಿ ಕೇಂದ್ರ.[೧]
ಕಡಬ ಇತಿಯಾಸ
ಬದಲಾಯಿಸಿದಶರಥರಾಮ ಚತುರ್ವೇದಿಮಂಗಲಂ ಎಂಬುದು ಇಲ್ಲಿನ ತಮಿಳುಶಾಸನಗಳಲ್ಲಿ ಕಂಡುಬರುವ ಈ ಊರಿನ ಪ್ರಾಚೀನ ಹೆಸರು. ಹೆಸರೇ ಸೂಚಿಸುವಂತೆ ಈ ಊರು ಒಂದು ಪ್ರಾಚೀನ ಅಗ್ರಹಾರ. ಇದು ಹೆಬ್ಬಾರ್ ಶ್ರೀವೈಷ್ಣವರ ಪಂಚಗ್ರಾಮಗಳಲ್ಲಿ ಒಂದು. ರಾಮಾನುಜಾ ಚಾರ್ಯರು ಇಲ್ಲಿ ನೆಲಸಿದ್ದಂತೆ ಪ್ರತೀತಿ ಇದೆ. ಕದಂಬ ಋಷಿ ಇಲ್ಲಿನ ಶಿಂಷುಪ (ಶಿಂಷಾ) ನದಿಯ ದಡದಲ್ಲಿ ತಪಸ್ಸು ಮಾಡುತ್ತಿದ್ದುದ್ದರಿಂದ ಊರಿಗೆ ಕಡಬ ಎಂದು ಹೆಸರಾಯಿತೆಂದೂ ರಾಮ ಲಂಕೆಯಿಂದ ಹಿಂದಿರುಗುವಾಗ ಸೀತೆಯ ಇಚ್ಫೆಯಂತೆ ಇಲ್ಲಿನ ತಟಾಕವನ್ನು ನಿರ್ಮಾಣ ಮಾಡಿದನೆಂದೂ ಸ್ಥಳಪುರಾಣ ತಿಳಿಸುತ್ತದೆ.[೧][೨]
ಕಡಬ ದೇವಲಯ ಮತ್ತು ಅದರ ಚರಿತ್ರೆ
ಬದಲಾಯಿಸಿಇಲ್ಲಿ ರಾಮ, ಕೈಲಾಸೇಶ್ವರ ಮತ್ತು ಹನುಮಾನ್ ದೇವಾಲಯಗಳಿವೆ. ರಾಮ ದೇವಾಲಯ ಒಂದೇ ಸಾಲಿನಲ್ಲಿ ಮೂರು ಗರ್ಭಗುಡಿಗಳಿರುವ ಕಣಶಿಲೆಯ ಕಟ್ಟಡ. ಹೆಸರು ರಾಮದೇವಾಲಯವಾದರೂ ಈಗ ಇಲ್ಲಿ ರಾಮವಿಗ್ರಹವಿಲ್ಲ. ಉತ್ತರದ ಗರ್ಭಗುಡಿಯಲ್ಲಿ ಯೋಗಾನರಸಿಂಹ, ಮಧ್ಯದಲ್ಲಿ ಜನಾರ್ದನ ದಕ್ಷಿಣದಲ್ಲಿ ವೇಣುಗೋಪಾಲ ವಿಗ್ರಹಗಳಿವೆ. ಯೋಗಾನರಸಿಂಹ ಹೊಯ್ಸಳ ಕಾಲದ ಶಿಲ್ಪ. ಉಳಿದೆರಡು ಪಾಳೆಯಗಾರರ ಕಾಲದ್ದು. ಕೆಲವು ತಮಿಳು ಶಾಸನಗಳ ತುಂಡುಗಳು ಕಟ್ಟಡದಲ್ಲಿ ಅಸ್ತವ್ಯಸ್ತವಾಗಿ ಸೇರಿಹೋಗಿದೆ. ಪ್ರಾಯಶಃ ಹೊಯ್ಸಳರ ಕಾಲದ ಮೂಲದೇವಾಲಯ ಪಾಳೆಯಗಾರರ ಕಾಲದಲ್ಲಿ ಪುನರ್ನಿರ್ಮಿತ ವಾಗಿರುವಂತೆ ತೋರುತ್ತದೆ. ದೇವಾಲಯದ ಮುಂದೆ ಸು.8ಮೀ ಎತ್ತರದ ಗರುಡಗಂಬವಿದೆ. ಗ್ರಾಮದ ಈಶಾನ್ಯದಲ್ಲಿ ಶಿಂಷಾ ಮತ್ತು ಕೆರೆಯ ಸಮೀಪದಲ್ಲಿ ಕೈಲಾಸೇಶ್ವರ ದೇವಾಲಯವಿದೆ. ಇದೂ ಕಣಶಿಲೆಯ ಸಾಮಾನ್ಯ ರೀತಿಯ ಚಿಕ್ಕ ಕಟ್ಟಡ. ಇದರ ಮುಂದೆಯೂ ಸು.6ಮೀ ಎತ್ತರದ ದೀಪದ ಕಂಬವಿದೆ. ಕೆರೆಯ ಪುರ್ವದ ತೂಬಿನ ಬಳಿ ಹನುಮಾನ್ ಗುಡಿ ಇದೆ. ಇದರ ಬಳಿ ಇರುವ ಸು.5ಮೀ ಎತ್ತರದ ಉಯ್ಯಾಲೆ ಕಂಬ ಕೆತ್ತನೆಯ ಲತಾವಿನ್ಯಾಸಗಳಿಂದ ಸುಂದರವಾಗಿ ಅಲಂಕೃತವಾಗಿದೆ.[೧][೨]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ "ಆರ್ಕೈವ್ ನಕಲು". Archived from the original on 2015-04-21. Retrieved 2016-10-20.
- ↑ ೨.೦ ೨.೧ http://www.onefivenine.com/village.dont?method=displayVillage&villageId=67591