ಕಠಿಣ ಚರ್ಮಿಗಳು : ಅಕಶೇರುಕಗಳ ಗುಂಪಿನ ಸಂಧಿಪದಿಗಳ ವಂಶದ ಒಂದು ವರ್ಗ (ಕ್ರಸ್ಟೇಸಿಯ). ಏಡಿ, ನಳ್ಳಿ, ಸೀಗಡಿ, ಮುಂತಾದ ಪ್ರಾಣಿಗಳು ಈ ವರ್ಗಕ್ಕೆ ಸೇರುತ್ತವೆ. ಇವು ಹೆಚ್ಚಾಗಿ ಜಲವಾಸಿಗಳು. ಇವುಗಳ ದೇಹ ಇತರ ಸಂಧಿಪದಿಗಳಂತೆ ಶಿರ, ಎದೆ ಮತ್ತು ಉದರ ಎಂದು ಮೂರು ಭಾಗಗಳಾಗಿದ್ದರೂ, ಶಿರ ಮತ್ತು ಎದೆಯ ಭಾಗಗಳು ಬೆಳೆವಣಿಗೆಯಲ್ಲಿ ಕೂಡಿಕೊಂಡು ಒಂದೇ ಭಾಗವಾಗಿ ಕಾಣುತ್ತದೆ. ಇದನ್ನು ಸೆಫಲೊಥೊರ್ಯಾಕ್ಸ್‌ (ಶಿರೋವಕ್ಷ) ಎಂದು ಕರೆಯುತ್ತಾರೆ. ಪ್ರತಿ ಖಂಡಕ್ಕೂ ಊಧರ್ವ್‌ ಭಾಗದಲ್ಲಿ ಇರಬೇಕಾದ ಟೆರ್ಗಎಂಬ ಬಾಹ್ಯ ಅಸ್ಥಿಪಂಜರದ ಭಾಗಗಳೆಲ್ಲವೂ ಕೂಡಿಕೊಂಡು ಕ್ಯಾರಪೇಸ್ ಎಂಬ ಒಂದು ಕವಚ ನಿರ್ಮಾಣವಾಗಿದೆ. ಇದು ಸೆಫೆಲೊಥೊರ್ಯಾಕ್ಸ್‌ ಭಾಗವನ್ನು ರಕ್ಷಿಸುತ್ತದೆ. ಖಂಡಭಾಗಗಳು ಕೂಡಿಕೊಂಡಿದ್ದರೂ ಪ್ರತಿ ಖಂಡದಿಂದ ಬೆಳೆಯುವ ಜೊತೆ ಉಪಾಂಗಗಳು ಬೇರೆಯಾಗಿಯೇ ಉಳಿದಿವೆ. ಈ ವರ್ಗದ ಪ್ರಾಣಿಗಳಲ್ಲಿ ಎರಡು ಜೊತೆ ಕುಡಿಮೀಸೆಗಳಿರುವುದು ವಿಶೇಷವಾದ ಲಕ್ಷಣ.[೧]

ಶಿರದ ಪ್ರಬುದ್ಧಾವಸ್ಥೆ= ಬದಲಾಯಿಸಿ

ಶಿರದ ಭಾಗದಲ್ಲಿ ಸಾಮಾನ್ಯವಾಗಿ ಚೆನ್ನಾಗಿ ರೂಪುಗೊಂಡ ಒಂದು ಜೊತೆ ಸಂಯುಕ್ತಾಕ್ಷಿಗಳಿವೆ. ಇವಕ್ಕೆ ಬೇಕಾದ ಹಾಗೆ ತಿರುಗಿಸಬಹುದಾದ ಒಂದೊಂದು ತೊಟ್ಟು ಇದೆ. ಶಿರದ ಭಾಗ ಐದು ಖಂಡ ಭಾಗಗಳಿಂದ ಕೂಡಿದೆ. ಇವನ್ನು ಪ್ರಬುದ್ಧಾವಸ್ಥೆಯಲ್ಲಿ ಪ್ರತ್ಯೇಕವಾಗಿ ಗುರುತಿಸುವುದು ಸಾಧ್ಯವಾಗದಿದ್ದರೂ ಅವುಗಳಲ್ಲಿರುವ ಐದು ಜೊತೆ ಉಪಾಂಗಗಳಿಂದ ಅವನ್ನು ಗುರುತಿಸಬಹುದು. ಎರಡು ಜೊತೆ ಕುಡಿ ಮೀಸೆಗಳು, ಒಂದು ಜೊತೆ ದವಡೆ, ಎರಡು ಜೊತೆ ದವಡೆ ಪಾದಗಳು ಇವೆ. ಇವಕ್ಕೆ ಕ್ರಮವಾಗಿ ಆಂಟೆನ್ಯೂಲ್, ಆಂಟೆನ, ಮ್ಯಾಂಡಿಬಲ್, ಮ್ಯಾಕ್ಸಿಲುಲೆ ಮತ್ತು ಮ್ಯಾಕ್ಸಿಲ ಎಂದು ಹೆಸರು. ಇವು ಮುಖ್ಯವಾಗಿ ಇಂದ್ರಿಯಾಂಗಗಳು ಮತ್ತು ಆಹಾರವನ್ನು ಅಗಿಯುವ ಅಂಗಗಳು ಆಗಿವೆ.ಎದೆ ಮತ್ತು ಉದರಗಳನ್ನು ನಿರ್ದಿಷ್ಟವಾಗಿ ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಈ ಹೆಸರುಗಳ ಉಪಯೋಗದಲ್ಲಿ ಅಸ್ಪಷ್ಟತೆ ಇದೆ. ಕಾಲುಗಳಿರುವ ಮತ್ತು ಕಾಲುಗಳಿಲ್ಲದ ಭಾಗಗಳನ್ನು ಅಥವಾ ಜನನರಂಧ್ರದ ಮುಂಭಾಗ ಮತ್ತು ಹಿಂಭಾಗಗಳನ್ನು ಸೂಚಿಸಲು ಈ ಹೆಸರುಗಳನ್ನು ಉಪಯೋಗಿಸಿದ್ದಾರೆ. ಆದರೆ ಅಭ್ಯಾಸದ ಅನುಕೂಲಕ್ಕಾಗಿ ಜನನರಂಧ್ರದ ಮುಂದಿರುವ ಭಾಗಗಳು ಎದೆಯ ಭಾಗವೆಂದೂ ಹಿಂದಿರುವುದು ಉದರಭಾಗವೆಂದೂ ಭಾವಿಸಿಕೊಳ್ಳಬಹುದು. ಅಂದರೆ ಜನನರಂಧ್ರವಿರುವ ಖಂಡವೇ ಎದೆಯ ಭಾಗದ ಕೊನೆಯ ಖಂಡವಾಗುತ್ತದೆ. ಪ್ರಭೇದಗಳಿಂದ ಪ್ರಭೇದಗಳಿಗೆ ಈ ಭಾಗದಲ್ಲಿನ ಖಂಡಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ.[೨]

ಸೆಫೆಲೊಥೊರ್ಯಾಕ್ಸಿನ ಊಧರ್ವ್‌ ಭಾಗ ಬದಲಾಯಿಸಿ

ಸೆಫೆಲೊಥೊರ್ಯಾಕ್ಸಿನ ಊಧರ್ವ್‌ ಭಾಗದಲ್ಲಿರುವ ಕ್ಯಾರಪೇಸ್ ಎಂಬ ದಪ್ಪ ಬಾಹ್ಯ ಅಸ್ಥಿಪಂಜರ ಈ ವರ್ಗದ ಪ್ರಾಣಿಗಳ ಪ್ರಮುಖ ಸಾಮಾನ್ಯ ಲಕ್ಷಣ. ಇದು ಊಧರ್ವ್‌ಭಾಗದ ಚರ್ಮದ ಮಡಿಕೆಯಿಂದ ಉದ್ಭವಿಸುತ್ತದೆ. ಮಾದರಿಯ (ಟಿಪಿಕಲ್) ಅವಸ್ಥೆಯಲ್ಲಿ ತಲೆ ಮತ್ತು ಎದೆಯ ಸ್ವಲ್ಪ ಭಾಗ ಬೆತ್ತಲೆಯಾಗಿರಬಹುದು. ಇನ್ನು ಕೆಲವದರಲ್ಲಿ ಇದು ಸಂಪುರ್ಣ ನಶಿಸಿಹೋಗಿರುವುದೂ ಉಂಟು. ಅನೊಸ್ಟ್ರೇಕ ಮತ್ತು ಕೋಪಿಪೋಡಗಳಲ್ಲಿ ಬಹುಶಃ ಇಲ್ಲದೆಯೇ ಇರಬಹುದು. ರಚನೆಯಲ್ಲಿ ಚಪ್ಪಟೆ ಹಾಗೂ ಅಗಲವಾದ ಗುರಾಣಿಯಂತಿರಬಹುದು ಅಥವಾ ಆಸ್ಟ್ರಕೋಡದಲ್ಲಿರುವಂತೆ ದ್ವಿಭಾಗಿಯಾಗಿ ಊಧರ್ವ್‌ಭಾಗದಲ್ಲಿ ಚಿಲಕವೂ (ಹಿಂಜ್) ಇರಬಹುದು; ಸಿರ್ರಿಪೀಡಿಯದಲ್ಲಿ ಇದು ಪುರ್ಣ ಪ್ರಾಣಿಯನ್ನೇ ಆವರಿಸುವ ಚಿಪ್ಪಾಗಿದೆ. ಇದು ಆವರಿಸಿರುವ ಕೋಣೆಯನ್ನು ಕಿವಿರುಕೋಣೆ, ಮ್ಯಾಂಟಲ್ ಕುಹರ ಮುಂತಾದ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಈ ಭಾಗ ಬೆಳೆಯುತ್ತಿರುವ ಮರಿಗಳಿಗೆ ರಕ್ಷಣೆಯನ್ನು ಒದಗಿಸಬಹುದೆಂದು ಹೇಳುತ್ತಾರೆ. ತಲೆಯ ಭಾಗದ ಟೆರ್ಗಗಳೆಲ್ಲ ಕೂಡಿ ಊಧರ್ವ್‌ ಫಲಕವಾಗಿದೆ. ಊಧರ್ವ್‌ಫಲಕ ಮುಂಭಾಗದಲ್ಲಿ ಮೊನಚಾದ ರಾಸ್ಟ್ರಂ ಆಗಿ ಚಾಚಿಕೊಂಡಿದೆ. ತಲೆಯ ಹಿಂದಿನ ತುದಿಯ ಊಧರ್ವ್‌ ಭಾಗದಲ್ಲಿ ಊಧಾರ್ವ್‌ಂಗ ಎಂಬ ಒಂದು ರಚನೆ ಇದೆ. ಇದನ್ನು ಕತ್ತಿನ ಗ್ರಂಥಿ ಎಂದೂ ಕರೆಯುತ್ತಾರೆ. ಇದನ್ನು ಕೆಲವು ಕಠಿಣಚರ್ಮಿಗಳು (ಕ್ಲ್ಯಾಡೊಸೀರ ಮತ್ತು ಕಾಂಕೋಸ್ಟ್ರೇಕ) ಆಧಾರಗಳಿಗೆ ಅಂಟಿಕೊಳ್ಳಲು ಉಪಯೋಗಿಸುತ್ತವೆ. ಮಿಕ್ಕ ಪ್ರಾಣಿಗಳಲ್ಲಿ ಇದರ ಕಾರ್ಯ ಏನು ಎಂಬುದು ಇನ್ನೂ ಸರಿಯಾಗಿ ಗೊತ್ತಿಲ್ಲ.

ಉಪಾಂಗಗಳು ಬದಲಾಯಿಸಿ

ಪ್ರತಿಯೊಂದು ಖಂಡದಲ್ಲೂ ಒಂದು ಜೊತೆ ಉಪಾಂಗಗಳಿವೆ. ಇವು ತಾವಿರುವ ಖಂಡ ಭಾಗ ಮತ್ತು ನಿರ್ವಹಿಸುವ ಕಾರ್ಯಗಳನ್ನನುಸರಿಸಿ ಮಾರ್ಪಟ್ಟಿವೆ. ಮೂಲತಃ ಉಪಾಂಗಗಳಲ್ಲಿ ಎರಡು ಕವಲುಗಳಿವೆ. ಆದ್ದರಿಂದ ಇವಕ್ಕೆ ಇಕ್ಕವಲು (ಬೈರೇಮಸ್) ಉಪಾಂಗಗಳೆಂದು ಹೆಸರು. ಒಂದು ಮಾದರಿಯ ಇಕ್ಕವಲು ಉಪಾಂಗದಲ್ಲಿ ಕೆಳಕಂಡ ಭಾಗಗಳಿವೆ: ಬುಡದಲ್ಲಿ ಪ್ರೋಟೊಪೊಡೈಟ್ ಎಂಬ ತೊಟ್ಟಿನಂಥ ರಚನೆಯಿದೆ. ಇದರ ಕೆಳಗೆ ಕಾಕ್ಸ ಮತ್ತು ತುದಿಯಲ್ಲಿ ಬೇಸಿಸ್ ಎಂಬ ಎರಡು ಅಂಗಗಳಿವೆ. ಪೋಡೊಮಿಯರ್ ಎಂಬುದರ ಸಹಾಯದಿಂದ ಉಪಾಂಗ ತನ್ನ ನಿರ್ದಿಷ್ಟ ಖಂಡಕ್ಕೆ ಅಂಟಿಕೊಂಡಿದೆ. ಬೇಸಿಸ್ ತನ್ನ ಬಿಡಿಯಾದ ತುದಿಯಲ್ಲಿ ಎರಡು ಎಲೆಯಂತೆ ಅಗಲವಾದ ಕವಲುಗಳನ್ನು ಹೊಂದಿದೆ. ಈ ಕವಲುಗಳಿಗೆ ಅವು ದೇಹದ ಒಳಭಾಗದ ಕಡೆಗಿವೆಯೋ ಅಥವಾ ಹೊರಭಾಗದ ಕಡೆಗಿವೆಯೋ ಎಂಬುದನ್ನು ಅನುಸರಿಸಿ ಕ್ರಮವಾಗಿ ಎಂಡೊಪೊಡೈಟ್ ಮತ್ತು ಎಕ್ಸೊಪೊಡೈಟ್ ಎಂಬ ಹೆಸರಿವೆ. ಈ ಉಪಾಂಗಗಳು ಎಲೆಯಂತೆ ಅಗಲವಾಗಿದ್ದರೆ ಅವನ್ನು ಫಿಲ್ಲೊಪೋಡಿಯಂ ಎಂದೂ ಉದ್ದವಾಗಿ ಕಡ್ಡಿಕಡ್ಡಿಗಳಂತೆ ಇದ್ದರೆ ಸ್ಟೆನೊಪೋಡಿಯಂ ಎಂದೂ ಕರೆಯುವರು.

ಕಠಿಣಚರ್ಮಿ ಬದಲಾಯಿಸಿ

ಕಠಿಣಚರ್ಮಿಗಳಲ್ಲಿ ಉಪಾಂಗಗಳ ಆಕಾರ, ರಚನೆ ಮತ್ತು ನಿರ್ವಹಿಸುವ ಕೆಲಸ ಇವುಗಳಲ್ಲಿ ಹೆಚ್ಚಿನ ವೈವಿಧ್ಯತೆ ಇದೆ. ಇದನ್ನು ಅರ್ಥಮಾಡಿಕೊಳ್ಳಲು ಸೀಗಡಿಯ ಉಪಾಂಗಗಳನ್ನು ಉದಾಹರಣೆಯಾಗಿ ಅಭ್ಯಾಸಮಾಡಿದರೆ ಸುಲಭವಾಗಬಹುದು. ಸೀಗಡಿ ಕಡಲು ಮತ್ತು ಸಿಹಿನೀರಿನ ನದಿಗಳಲ್ಲಿ ದೊರಕುತ್ತದೆ. ಇದರ ದೇಹದಲ್ಲಿ ಸೆಫಲೊಥೊರ್ಯಾಕ್ಸ್‌ ಮತ್ತು ಉದರಭಾಗಗಳಿವೆ. ಸೆಫೆಲೊಥೊರ್ಯಾಕ್ಸ್‌, ಶಿರ ಮತ್ತು ಎದೆಯ ಭಾಗಗಳು ಕೂಡಿಕೊಂಡು ಉಂಟಾಗಿದೆ. ಈ ಭಾಗದ ಖಂಡವಿಂಗಡಣೆ ಸುಲಭವಾಗಿ ಕಾಣುವುದಿಲ್ಲ. ಆದರೆ ಉದರಭಾಗದಲ್ಲಿ ಆರು ಖಂಡಗಳನ್ನು ಸುಲಭವಾಗಿ ಗುರುತಿಸಬಹುದು. ಇವು ಬಿಡಿ ಬಿಡಿಯಾಗಿವೆ. ಶಿರದ ಭಾಗದಲ್ಲಿ ಐದು ಜೊತೆ, ಎದೆಯ ಭಾಗದಲ್ಲಿ ಎಂಟು ಜೊತೆ ಮತ್ತು ಉದರ ಭಾಗದಲ್ಲಿ ಆರು ಜೊತೆ, ಒಟ್ಟು 19 ಜೊತೆ ಉಪಾಂಗಗಳಿವೆ. ಉಪಾಂಗಗಳನ್ನು ಖಂಡಗಳಿಗನುಸಾರವಾಗಿ ಕೆಳಗೆ ಕ್ರಮವಾಗಿ ವಿವರಿಸಿದೆ: 1. ಆಂಟೆನ್ಯೂಲ್: ಇದರ ತೊಟ್ಟಿನ ಭಾಗದಲ್ಲಿ ಪ್ರೀಕಾಕ್ಸ, ಕಾಕ್ಸ ಮತ್ತು ಬೇಸಿಸ್ ಎಂದು ಮೂರು ಭಾಗಗಳಿವೆ. ಬೇಸಿಸ್ ತನ್ನ ಮುಂದಿನ ತುದಿಯಲ್ಲಿ ಬಹುಖಂಡವುಳ್ಳ ತೆಳ್ಳಗೆ ಉದ್ದವಾದ ಕುಡಿಮೀಸೆಗಳನ್ನು ಹೊಂದಿದೆ. ಇವು ಸ್ಪರ್ಶಾಂಗಗಳು. 2. ಆಂಟೆನ: ಪ್ರೋಟೊಪೊಡೈಟ್ ಭಾಗ ತುಂಬ ಚಿಕ್ಕದು. ಒಂದು ಕವಲು ಅಗಲವಾಗಿ ಕಿವಿಯ ಆಲೆಯಂತೆ ಹರಡಿದೆ. ಇನ್ನೊಂದು ತುಂಬ ಉದ್ದವಾದ ಬಹುಖಂಡವುಳ್ಳ ಕುಡಿಮೀಸೆಯಾಗಿದೆ ಇದೂ ಕೂಡ ಸ್ಪರ್ಶಾಂಗವೇ. ಆಹಾರ ಮತ್ತು ತನ್ನ ಪರಿಸರವನ್ನು ಪರೀಕ್ಷಿಸುವ ಘ್ರಾಣೇಂದ್ರಿಯವೂ ಹೌದು. 3. ಮ್ಯಾಂಡಿಬಲ್: ಕವಲಗಳು ಕ್ಷೀಣವಾಗಿವೆ. ಬುಡದ ಪ್ರೊಟೊಪೊಡೈಟ್ ಬಲಯುತವಾಗಿ ಗದೆಯಾಕಾರದ ಮತ್ತು ಬಾಚಿಯಾಕಾರದ ರಚನೆಯಾಗಿದೆ. ಇದರ ಮೇಲೆ ದಂತಿಗಳಿದ್ದು (ಡೆಂಟಿಕಲ್) ಅವು ಆಹಾರವನ್ನು ಅಗಿಯಲು ಸಹಕರಿಸುತ್ತವೆ. ದವಡೆಗಳು ಬಲವಾಗಿವೆ. 4. ಮ್ಯಾಕ್ಸಿಲುಲೆ: ಇದು ಒಂದು ದವಡೆಪಾದ. ಇದರಲ್ಲಿ ಬಾಯಿಯ ಬಳಿಗೆ ನೀರು ಬರುವಂತೆ ಪ್ರವಾಹವನ್ನು ಉಂಟುಮಾಡುವ ಲೋಮಾಂಗಗಳಿವೆ. ಆದ್ದರಿಂದ ಇದು ಆಹಾರವನ್ನು ಬಾಯಿಯೆಡೆಗೆ ತರಲು ಸಹಕರಿಸುತ್ತದೆ. 5. ಮ್ಯಾಕ್ಸಿಲ: ಇದೂ ಕೂಡ ದವಡೆಪಾದ. ಆಹಾರವನ್ನು ಬಾಯಿ ಬಳಿಗೆ ತರುವಲ್ಲಿ ಸಹಕರಿಸುತ್ತದೆ.

ಎಕ್ಸೊಪೊಡೈಟ್ಗಳು ಬದಲಾಯಿಸಿ

6,7,8-ಮಾಕ್ಸಿಲ್ಲಿಪೀಡ್: ಇವುಗಳಲ್ಲಿ ಎಕ್ಸೊಪೊಡೈಟ್ಗಳು ಕ್ರಮೇಣ ಕ್ಷೀಣವಾಗಿ ಹೋಗುತ್ತವೆ. ಇವುಗಳ ಮೇಲೆ ಶ್ವಾಸಾಂಗವಾದ ಎಪಿಪೊಡೈಟುಗಳಿವೆ. ಇವು ಭ್ರಣೇಂದ್ರಿಯ ಗಳಾಗಿಯೂ ಸ್ಪರ್ಶಾಂಗಗಳಾಗಿಯೂ ಕೆಲಸ ಮಾಡುತ್ತವೆಯಲ್ಲದೆ ಆಹಾರವನ್ನು ಹಿಡಿದು ಪ್ರಾಣಿಗೆ ಒದಗಿಸುವುದರಲ್ಲಿ ಸಹಾಯ ಮಾಡುತ್ತವೆ. 9. ಮೊದಲನೆಯ 10. ಎರಡನೆಯ 11. ಮೂರನೆಯ ನಡೆಪಾದಗಳು : 12. ನಾಲ್ಕನೆಯ 13. ಐದನೆಯ ನಡಿಗೆಗೆ ಸಹಕಾರಿಯಾದ ಇವುಗಳಲ್ಲಿ ಎಕ್ಸೊಪೊಡೈಟ್ ಸಂಪುರ್ಣವಾಗಿ ಮರೆಯಾಗಿದೆ. ಎಂಡೊಪೊಡೈಟಿನ ಖಂಡಗಳು ಉದ್ದವಾಗಿ ಬೆಳೆದು ಕಾಲುಗಳಾಗಿವೆ. ಮೊದಲನೆಯ ಎರಡು ಜೊತೆಯಲ್ಲಿ ತುದಿಯಲ್ಲಿ ಇಕ್ಕಳದ ರೀತಿಯ ರಚನೆಗಳಿವೆ. ಇವು ಆಹಾರವನ್ನು ಹಿಡಿಯಲು ಸಹಕರಿಸುತ್ತವೆ. ಒಂದೊಂದರ ಮೇಲೂ ಕಿವಿರುಗಳಿವೆ. 14.ಮೊದಲನೆಯ ಈಜುಪಾದ: ಗಂಡಿನಲ್ಲಿ ಇಕ್ಕವಲು ರಚನೆ. ಆದರೆ ಎಕ್ಸೊಪೊಡೈಟ್ ಮತ್ತು ಎಂಡೊಪೊಡೈಟ್ಗಳು ಕೂಡಿಕೊಂಡು ಸಂಭೋಗಕ್ರಿಯೆಗೆ ಸಹಕಾರಿಯಾಗಿವೆ. ಆದರೆ ಹೆಣ್ಣಿನಲ್ಲಿ ಇವು ನಶಿಸಿಹೋಗಿ ಹೆಸರಿಗೆ ಮಾತ್ರ ಇವೆ. 15 ಎರಡನೆಯ ಈಜುಪಾದ : ಇದೂ ಇಕ್ಕವಲು ರಚನೆ. ಗಂಡಿನಲ್ಲಿ ಸಂಭೋಗಕ್ಕೆ ಸಹಕಾರಿಯಾಗಿದೆ. ಹೆಣ್ಣಿನಲ್ಲಿ ಚಿಕ್ಕದ್ದು ಮತ್ತು ಉಪಯೋಗವಿಲ್ಲದ್ದು.

16 ಮೂರನೆಯ ಈಜುಪಾದ: ಕಿವಿರು ಕೋಣೆಯಲ್ಲಿ ಸದಾ ಹೊಸ ನೀರು ಇರುವಂತೆ ಪ್ರವಾಹವನ್ನು ಉಂಟುಮಾಡುತ್ತದೆ. ಹೆಣ್ಣಿನಲ್ಲಿ ಮೊಟ್ಟೆಗಳು ಅಂಟಿಕೊಳ್ಳಲು ಸಹಕಾರಿಯಾಗಿದೆ. 17-18 ಈಜುಪಾದಗಳು ಮೂರನೆಯದರಂತೆಯೇ ಇವೆ.

19 ಬಾಲಪಾದ ಬದಲಾಯಿಸಿ

ಚಿಮ್ಮಿ ಹಿಂದಕ್ಕೆ ಈಜಲು ಸಹಕರಿಸುತ್ತದೆ.ಪ್ರಬುದ್ಧಾವಸ್ಥೆಯಲ್ಲಿ ರಚನೆ ಮತ್ತು ಕಾರ್ಯಗಳಲ್ಲಿ ಭಿನ್ನತೆಗಳನ್ನು ಪ್ರದರ್ಶಿಸಿದರೂ ಇವು ಬೆಳೆವಣಿಗೆಯಿಂದ ಸಾದೃಶಾಂಗಗಳು. ಲಾಬ್ಸ್ಟರ್ ಮತ್ತು ಏಡಿಗಳಲ್ಲಿ ಮೊದಲನೆಯ ನಡೆಪಾದದ ತುದಿಯ ಇಕ್ಕಳಗಳು ದೊಡ್ಡವಾಗಿ ಬೆಳೆದು, ರಕ್ಷಣೆ ಮತ್ತು ಆಕ್ರಮಣದಲ್ಲಿ ಸಹಕಾರಿಯಾಗಿವೆ. ಒಂದು ಜಾತಿಯ ಏಡಿಯಲ್ಲಿ ಈ ನಡೆಪಾದಗಳು ಚಾಚಿಕೊಂಡಾಗ ಹನ್ನೆರಡು ಅಡಿ ಉದ್ದ ಇರುತ್ತವೆ. ಪಿಟೀಲು ಏಡಿಯಲ್ಲಿ ಈ ಕಾಲುಗಳು ಒಂದಕ್ಕೊಂದು ತಾಕಿದಾಗ ಒಂದು ರೀತಿಯ ನಾದ ಮೂಡುತ್ತದೆ. ಒಂದು ಜಾತಿಯ ಕಡಲುಏಡಿಯಲ್ಲಿ ಹೆಣ್ಣನ್ನು ಆಕರ್ಷಿಸುವ ಸಲುವಾಗಿ ಗಂಡಿನಲ್ಲಿ ಒಂದು ನಡೆಪಾದ ವಿಶೇಷವಾಗಿ ಬೆಳೆದಿದೆ. ಹೀಗೆ ಪ್ರಾಣಿಯ ಜೀವನಕ್ರಮ, ಅದು ವಾಸಿಸುವ ಸ್ಥಳ, ಆಹಾರ ಗಳಿಕೆಯ ಕ್ರಮಗಳನ್ನನುಸರಿಸಿ ಅಂಗಗಳು ವೈವಿಧ್ಯಮಯವಾಗಿ ಮಾರ್ಪಟ್ಟಿರುವುದನ್ನು ಈ ವರ್ಗದಲ್ಲಿ ಕಾಣಬಹುದು. ಕೆಲವು ಉಪಾಂಗಗಳು ಕೆಲವು ಪ್ರಾಣಿಗಳಲ್ಲಿ ಕಳೆದುಹೋಗಬಹುದು. ಇವೇ ಅಲ್ಲದೆ ಕೆಲವು ಪ್ರಾಣಿಗಳಲ್ಲಿ ಆನುಷಂಗಿಕ ಉಪಾಂಗಗಳಿವೆ (ಅಕ್ಸೆಸರಿ, ಅಪೆಂಡೇಜೆಸ್). ಬಾಯಿಯ ಮುಂದಿನ ಮೇಲುತುಟಿ (ಲೇಬ್ರಂ) ಮತ್ತು ಮ್ಯಾಂಡಿಬಲ್ಗಳ ಹಿಂದಿನ ಕೆಳತುಟಿ (ಮೆಟಸ್ಟೋಮ್) ಮುಂತಾದುವು ಅನುಷಂಗಿಕ ಉಪಾಂಗಗಳಲ್ಲಿ ಮುಖ್ಯವಾದುವು. ಆಕಸ್ಮಿಕವಾಗಿ ಕಳೆದುಹೋದ ಅಥವಾ ಊನವಾದ ಉಪಾಂಗಗಳನ್ನು ಮುಂದಿನ ಪೊರೆ ಬಿಡುವಿಕೆಯ ಕಾಲದಲ್ಲಿ ಪುನರುತ್ಪಾದಿಸಿಕೊಳ್ಳುವ ಶಕ್ತಿಯೂ ಊನವಾಗಿ ಗಾಯವಾದ ಮತ್ತು ಶತ್ರುಗಳು ಹಿಡಿದ ಉಪಾಂಗಗಳನ್ನು ಕಳಚಿಕೊಂಡು ರಕ್ಷಿಸಿಕೊಳ್ಳುವ ಕ್ರಮವೂ ಕಠಿಣಚರ್ಮಿಗಳ ವಿಶಿಷ್ಟ ಲಕ್ಷಣ.

ಒಳ ಅಸ್ಥಿಪಂಜರ ಬದಲಾಯಿಸಿ

ಹೊರ ಕ್ಯೂಟಿಕಲ್ ಒಳಕ್ಕೆ ಚಾಚಿಕೊಂಡು ಅಪೊಡಿಮ್ಗಳೆಂಬ ಒಳ ಅಸ್ಥಿಪಂಜರ ಆಗಿದೆ. ಇದು ಸ್ನಾಯುಗಳು ಅಂಟಿಕೊಳ್ಳಲು ಸಹಕಾರಿಯಾಗಿದೆ. ಇವು ಕೆಲವೊಮ್ಮೆ ಕೂಡಿಕೊಂಡು ಎಂಡೊಫ್ರಾಗ್ಮಲ್ ಅಸ್ಥಿಪಂಜರ ಮತ್ತು ಎಂಡೊಸ್ಟರ್ನೈಟ್ ಎಂಬ ಚೌಕಟ್ಟುಗಳಾಗಿ ರೂಪುಗೊಳ್ಳಬಹುದು.

ನರಮಂಡಲ ಬದಲಾಯಿಸಿ

ಕಠಿಣಚರ್ಮಿಗಳ ನರಮಂಡಲ ಸಂಧಿಪದಿಗಳಲ್ಲಿನ ನರಮಂಡಲ ವಿಕಾಸದ ವಿವಿಧ ರೂಪಗಳನ್ನು ಪ್ರದರ್ಶಿಸುತ್ತದೆ. ಮಾದರಿಯ (ಆದರ್ಶ) ಸಂಧಿಪದಿ ಅವಸ್ಥೆಯಿಂದ ತೀವ್ರ ಸಂಕೀರ್ಣತೆಯ ರೂಪದವರೆಗೂ ಮಾರ್ಪಟ್ಟಿರಬಹುದು. ಬಹಳ ಪ್ರಾಚೀನವಾದ ಮತ್ತು ಹಿಂದುಳಿದ ರಚನೆಯನ್ನು ಬ್ರಾಂಕಿಯೊಪೋಡದಲ್ಲಿ ಕಾಣಬಹುದು. ಇದರಲ್ಲಿ ಬಾಯಿಯ ಹಿಂಭಾಗದಲ್ಲಿ ಕುಡಿಮೀಸೆಯ ನರಗ್ರಂಥಿಗಳು ಇವೆ. ಇದರ ಹಿಂದೆ ಪ್ರತಿ ಕಂಡಕ್ಕೂ ಒಂದೊಂದು ಜೊತೆ ನರಗ್ರಂಥಿಗಳುಂಟು. ವೆಂಟ್ರಲ್ ನರಹುರಿಗಳು ಬೇರೆ ಬೇರೆಯಾಗಿದ್ದು ಅಲ್ಲಲ್ಲಿ ಅವುಗಳ ನಡುವೆ ನರಸಂಬಂಧಗಳಿರುವುದರಿಂದ ಏಣಿಯಂತೆ ಕಾಣುತ್ತದೆ. ಮೆಲಕಾಸ್ಟ್ರೇಕ ಗಣದ ಕೆಳದರ್ಜೆಯ ಜೀವಿಗಳಲ್ಲಿ ಕುಡಿಮೇಸೆಯ ನರಗ್ರಂಥಿಗಳು ಮಿದುಳಿನೊಂದಿಗೆ ಸೇರಿ ಹೋಗಿವೆ. ಮತ್ತು ವೆಂಟ್ರಲ್ ನರಹುರಿಗಳು ಹತ್ತಿರ ಹತ್ತಿರವಾಗಿವೆ. ಇತರ ಕಠಿಣಚರ್ಮಿಗಳಲ್ಲಿ ವೆಂಟ್ರಲ್ ನರಹುರಿಗಳು ತುಂಬ ಮಾರ್ಪಟ್ಟಿವೆ. ಗಂಟಲು ಕೆಳಗಿನ ನರಗ್ರಂಥಿಗಳು ವದನಾಂಗಗಳ ಖಂಡಗಳಿಗಾಗಿ ರೂಪುಗೊಂಡು, ಏಡಿಗಳಲ್ಲಿ ಒಂದು ವೆಂಟ್ರಲ್ ನರಗ್ರಂಥಿಗಳ ಗುಂಫನ ಏರ್ಪಟ್ಟಿದೆ. ರೈಜೊ಼ಕಿಫಾಲದಲ್ಲಿ ಇರುವ ಒಂದೇ ಒಂದು ನರಗ್ರಂಥಿಯಿಂದ ಎಲ್ಲೆಡೆಗೂ ನರಗಳು ಹೊರಡುತ್ತವೆ. ಮುಂದುವರಿದ ಕಠಿಣ ಚರ್ಮಿಗಳಲ್ಲಿ ಗಂಟಲಿನ ಮೇಲೆ ಮಿದುಳು, ಕೆಳಗೆ ಸಬ್ಇಸಾಫಿಜಿಯಲ್ ನರಗ್ರಂಥಿಗಳು ಮತ್ತು ಗಂಟಲಿನ ಸುತ್ತಲು ಇವನ್ನು ಬಂಧಿಸುವ ನರಗಳೂ ಇದ್ದು ಇದರ ಹಿಂಭಾಗದಲ್ಲಿ ಕೊನೆಯ ಖಂಡದ ವರೆಗೂ ಹರಡಿರುವ ಜೋಡಿ ವೆಂಟ್ರಲ್ ನರಹುರಿಗಳು ಇವೆ. ಅಲ್ಲದೆ ಅನುವೇದನಾ (ಸಿಂಪತೆಟಿಕ್) ನರ ಮಂಡಲವೂ ಇವೆ.

ಜ್ಞಾನೇಂದ್ರಿಯಗಳು ಬದಲಾಯಿಸಿ

ಸ್ವತಂತ್ರ ಜೀವನ ನಡೆಸುವ ಕಠಿಣಚರ್ಮಿಗಳಲ್ಲಿ ಜ್ಞಾನೇಂದ್ರಿಯಗಳು ಚೆನ್ನಾಗಿ ರೂಪುಗೊಂಡಿವೆ. ಮುಖ್ಯವಾದುವು ಎರಡು ರೀತಿಯ ಕಣ್ಣುಗಳು, ಸಂಯುಕ್ತಾಕ್ಷಿಗಳು ಮತ್ತು ಮಧ್ಯಾಕ್ಷಿಗಳು. ಕೋಪಿಪೋಡ ಮತ್ತು ಪ್ರಬುದ್ಧ ಸಿರ್ರಿಪೀಡಿಯಗಳನ್ನು ಬಿಟ್ಟರೆ ಮಿಕ್ಕೆಲವುಗಳಲ್ಲಿಯೂ ಒಂದೊಂದು ಜೊತೆ ಸಂಯುಕ್ತಾಕ್ಷಿಗಳಿವೆ. ಈ ಕಣ್ಣುಗಳಿಗೆ ತೊಟ್ಟುಗಳಿರಬಹುದು ಅಥವಾ ಇಲ್ಲಿದಿರಬಹುದು. ತೊಟ್ಟುಗಳಿರುವುದರಿಂದ ಇವೂ ಕೂಡ ಮಾರ್ಪಟ್ಟ ಉಪಾಂಗಗಳು ಎಂಬ ಭಾವನೆಗೆ ಎಡೆಕೊಟ್ಟಿವೆ. ಆದರೆ ಇವಕ್ಕೆ ಅನುವಾದ ಖಂಡ ಇಲ್ಲದಿರುವುದರಿಂದಲೂ ಬೆಳೆವಣಿಗೆಯ ಮೊದಲ ಹಂತಗಳಲ್ಲಿ ತೊಟ್ಟುಗಳು ಇಲ್ಲದಿರುವುರಿಂದಲೂ ಈ ಭಾವನೆಗೆ ಅಂಗೀಕಾರ ದೊರಕಿಲ್ಲ. ಮಧ್ಯಾಕ್ಷಿ ಸಾಮಾನ್ಯವಾಗಿ ನಾಪ್ಲಿಯಸ್ ಡಿಂಭದಲ್ಲಿ ಮಾತ್ರ ಇದೆ. ಇದು ಬಹುಪಾಲು ಪ್ರಬುದ್ಧ ಪ್ರಾಣಿಗಳಲ್ಲಿಯೂ ಉಳಿಯಬಹುದು.ಇದರಲ್ಲಿ ವರ್ಣದ್ರವ್ಯದ ಮೂರು ಬಟ್ಟಲುಗಳಿವೆ; ಮಧ್ಯದಲ್ಲಿ ಒಂದು, ಅಕ್ಕಪಕ್ಕಗಳಲ್ಲಿ ಎರಡು ರತಿಯೊಂದು ಬಟ್ಟಲೂ ರೆಟಿನಲ್ (ಅಕ್ಷಿಪಟಲದ) ಜೀವಕೋಶಗಳಿಂದ ತುಂಬಿದೆ. ಈ ಜೀವಕೋಶಗಳ ಹೊರತುದಿಗಳು ನರತಂತುಗಳಾಗಿ ಮುಂದುವರಿದಿವೆ. ಆದ್ದರಿಂದ ಕಸೇರುಕಗಳಲ್ಲಿರುವಂತೆಯೇ ಇಲ್ಲಿಯೂ ಇಂದ್ರಿಯ ಜೀವಕೋಶಗಳೂ ತಲೆಕೆಳಗಾಗಿವೆ. ಕೆಲವೊಮ್ಮೆ ಒಂದೊಂದು ಬಟ್ಟಲಿಗೂ ಒಂದೊಂದು ಮಸೂರವಿರುತ್ತದೆ. ಕೆಲವು ಕೋಪಿಪೋಡಗಳಲ್ಲಿ ಪಕ್ಕದ ಬಟ್ಟಲುಗಳೆರಡೂ ನಡುವಿನದರಿಂದ ಪ್ರತ್ಯೇಕವಾಗಿ ಪಾಶರ್ವ್‌ದ ಅಕ್ಷಿಗಳಾಗುತ್ತವೆ. ದೇಹದ ಮೇಲೆಲ್ಲ ಹರಡಿರುವ ಮುಳ್ಳುಗಳು ಇತರ ಜ್ಞಾನಾನುಭವಗಳ ಗ್ರಹಣೆಗೆ ಸಹಕರಿಸುತ್ತವೆ. ಅವುಗಳ ಜೀವರಸದಲ್ಲಿ ನರತಂತುಗಳಿರುತ್ತವೆ. ಈ ಮುಳ್ಳುಗಳಲ್ಲಿ ಬಹುಪಾಲು ಅನೇಕ ರೀತಿಯಲ್ಲಿ ಕವಲೊಡೆದಿರುತ್ತವೆ. ಡೆಕಪೊಡ ಮತ್ತು ಸಿಂಕಾರ್ಡಿಯ ಗುಂಪಿನ ಪ್ರಾಣಿಗಳಲ್ಲಿ ಆಂಟೆನ್ಯೂಲಿನ ಬುಡದಲ್ಲಿ ಮತ್ತು ಮೈಸಿಡೀ ಗುಂಪಿನವುಗಳಲ್ಲಿ ಉದರಭಾಗದ ಆರನೆಯ ಉಪಾಂಗದ ಎಂಡೊಪೊಡೈಟ್ ಮೇಲೆ ಸ್ಟ್ಯಾಟೊಸಿಸ್ಟುಗಳೆಂಬಕುಳಿಗಳಿವೆ. ಈ ಕುಳಿಯ ಭಿತ್ತಿಯಲ್ಲಿ ನವುರಾದ ರೋಮಗಳೂ ಅದರ ಒಳಗೆ ಮರಳಿನಕಣಗಳೂ ಇವೆ. ಸ್ಟ್ಯಾಟೊಸಿಸ್ಟುಗಳು ಸಮತೋಲನದ ಜ್ಞಾನೇಂದ್ರಿಯ ಗಳು. ಅನೇಕ ಆಂಟೆನ್ಯೂಲ್ ಮತ್ತು ಆಂಟೆನಗಳ ಮೇಲೆ ಈಸ್ತಟ್ಯಾಸ್ಕ್‌್ಸ ಎಂಬ ಘ್ರಾಣೇಂದ್ರಿಯ ರೋಮಗಳಿವೆ. ಅಲ್ಲದೆ ಅನೇಕ ಕಠಿಣಚರ್ಮಿಗಳ ಶಿರದ ಮುಂತುದಿಯಲ್ಲಿ ಹಣೆಯ ಅಂಗ (ಫ್ರಾಂಟಲ್ ಆರ್ಗನ್) ಎಂಬೊಂದು ರಚನೆ ಇದೆ. ಇದೂ ಕೂಡ ಜ್ಞಾನೇಂದ್ರಿಯ.

ವರ್ಣ ವಿನ್ಯಾಸ ಬದಲಾಯಿಸಿ

ಕಠಿಣಚರ್ಮಿಗಳಿಗೆ ಒಂದಿಲ್ಲೊಂದು ರೀತಿಯ ಬಣ್ಣ ಉಂಟು. ಕೆಂಪು, ಕಿತ್ತಲೆ, ನೇರಳೆ, ಹಸಿರು, ನೀಲಿ, ಕಂದು, ಕಪ್ಪು ಮುಂತಾದ ಬಣ್ಣಗಳಿರುತ್ತವೆ. ಒಂದೇ ಪ್ರಭೇದದಲ್ಲಿ ಎಲ್ಲ ಬಣ್ಣಗಳೂ ಇಲ್ಲದಿರಬಹುದು, ಇವುಗಳಲ್ಲಿ ಹೆಚ್ಚು ಬಣ್ಣಗಳು ಲಿಪೊಕ್ರೋಮ್ ಎಂಬ ವಸ್ತುವಿನಿಂದಾದವು. ಕಂದು ಮತ್ತು ಕಪ್ಪು ಬಣ್ಣಗಳು ಮೆಲಾನಿನಿಂದಾದವು. ಇವುಗಳಲ್ಲಿ ಬಹುಪಾಲು ಕವಲೊಡೆದ ಜೀವಕೋಶಗಳಲ್ಲಿರುತ್ತವೆ (ಕ್ರೊಮ್ಯಾಟೊಫೋರ್). ಆದರೆ ನೀಲಿ ಮತ್ತು ಬಹುಶಃ ಕೆಲವು ಇತರ ಬಣ್ಣಗಳು ಅಂಗಾಂಶಗಳಲ್ಲಿ ಕರಗಿ ಹರಡಿರಬಹುದು. ಈ ಕ್ರೊಮ್ಯಾಟೊಪೋರುಗಳು ಎಪಿಡರ್ಮಲ್ ಪದರದಲ್ಲಿ, ಡರ್ಮಿಸ್ನಲ್ಲಿ ಅಥವಾ ಒಳಗಿನ ಅಂಗಗಳ ಸಂಯೋಜಕ ಅಂಗಾಂಶಗಳಲ್ಲಿ ಇರಬಹುದು. ಈ ಬಣ್ಣ ಕವಲುಗಳಿಗೆ ಹರಿಯುವುದರಿಂದ ಅಥವಾ ಅವುಗಳಿಂದ ವಾಪಸ್ಸು ಚಲಿಸುವುದರಿಂದ ವರ್ಣಕೋಶಗಳು ಸಂಕುಚಿಸುವ ಅಥವಾ ಹಿಗ್ಗುವ ಕ್ರಿಯೆಯನ್ನು ತೋರುತ್ತವೆ. ಈ ಕ್ರಿಯೆಗೆ ಬೆಳಕು ಮತ್ತು ಬೆಳಕಿನ ತೀವ್ರತೆ ಪ್ರಚೋದಕವಾಗಿ ವರ್ತಿಸುತ್ತವೆ. ಅಲ್ಲದೆ ಹಿನ್ನೆಲೆಯೂ ಪ್ರತಿಕ್ರಿಯೆಗೆ ಕಾರಣವಾಗಬಹುದು. ಅತಿ ತೀವ್ರವಾದ ಬೆಳಕಿನಲ್ಲಿ ಅಥವಾ ಬೆಳಕನ್ನು ಹೀರುವ ಹಿನ್ನೆಲೆಯಲ್ಲಿ ಈ ವರ್ಣಕೋಶಗಳು ವಿಸ್ತರಿಸುತ್ತವೆ. ಕಡಿಮೆ ತೀವ್ರತೆಯ ಬೆಳಕಿನಲ್ಲಿ ಅಥವಾ ಬೆಳಕನ್ನು ಹರಡುವ ಹಿನ್ನೆಲೆಯಲ್ಲಿ ಅವು ಸಂಕುಚಿತವಾಗುತ್ತವೆ. ಆದರೆ ಈ ಪ್ರಚೋದನ ಕ್ರಮದಲ್ಲಿ ಕಣ್ಣುಗಳು ನೇರವಾಗಿ ಭಾಗವಹಿಸುವುದಿಲ್ಲ. ಬೆಳಕಿನ ಪ್ರಚೋದನೆ ಕೆಲವು ಅಂತಸ್ರಾವಕ ಗ್ರಂಥಿಗಳ ಮೇಲೆ ಪರಿಣಾಮ ಬೀರಿ ಅವು ಹಾರ್ಮೋನು ಗಳನ್ನು ಉತ್ಪತ್ತಿ ಮಾಡುವಂತೆ ಮಾಡಿ, ಇದರಿಂದ ಮುಂದಿನ ಪ್ರತಿಕ್ರಿಯೆ ನಡೆಯುತ್ತದೆ.


ಅನ್ನನಾಳ ಬದಲಾಯಿಸಿ

ಸಾಮಾನ್ಯವಾಗಿ ಇದು ನೇರವಾದ ಒಂದು ನಾಳ. ಇದರಲ್ಲಿ ಮುನ್ನಾಳ, ನಡುನಾಳ ಮತ್ತು ಹಿನ್ನಾಳಗಳೆಂಬ ಮೂರು ಭಾಗಗಳಿವೆ. ಮುನ್ನಾಳ ಮತ್ತು ಹಿನ್ನಾಳಗಳು (ಸ್ಟೊಮೇಡಿಯಂ ಮತ್ತು ಪ್ರೊಕ್ಟೋಡಿಯಂ) ಎಪಡರ್ಮಿಸಿನಿಂದ ಉದ್ಭವಿಸಿದ ಭಾಗಗಳು. ಇವಕ್ಕೆ ಕ್ಯೂಟಿಕಲಿನ ಅನುಲೇಪನವಿದೆ. ಮುನ್ನಾಳದ ಸ್ನಾಯುಗಳು ಬಲಯುತವಾಗಿದ್ದು ಕೆಲವೊಮ್ಮೆ ಹಲ್ಲು ಅಥವಾ ಮುಳ್ಳುಗಳನ್ನು ಬೆಳೆಸಿಕೊಂಡಿವೆ. ಮೆಲಕಾಸ್ಟ್ರೇಕ ಗುಂಪಿನ ಪ್ರಾಣಿಗಳಲ್ಲಿ ಈ ಅಂಶಗಳೂ ಸೇರಿ ಬಹಳ ಜಟಿಲವಾದ ಪ್ರೊವೆಂಟ್ರಿಕ್ಯುಲಸ್(ಜಠರ) ಆಗಿದೆ. ಇದರಲ್ಲಿ ಜಠರ “ಯಂತ್ರ”ವೂ (ಮಿಲ್) ಆಹಾರದ ರಸಗಳಿಂದ ಕಣಗಳನ್ನು ಶೋಧಿಸುವ, ಮುಳ್ಳುಗಳಿಂದಾದ ಒಂದು ಶೋಧಕಾಂಗವೂ ಇವೆ. ಈ “ಯಂತ್ರ” ಮತ್ತು ಶೋಧಕಾಂಗಗಳೂ ಪ್ರತ್ಯೇಕವಾದ ಕಾರ್ಡಿಯಾಕ್ ಮತ್ತು ಪೈಲಾರಿಕ್ ಕೋಣೆಗಳಲ್ಲಿವೆ. ನಡುನಾಳದ ಮುಂದಿನ ತುದಿಯಲ್ಲಿ ಒಂದು ಅಥವಾ ಹೆಚ್ಚು ಜೊತೆ ಅಪಸರಣಾಂಗಗಳು (ಹೆಪ್ಯಾಟಿಕ್ ಸೀಕೆ) ಇವೆ. ಇವು ಸ್ರಾವ ಮತ್ತು ಹೀರುವ ಕಾರ್ಯಗಳಲ್ಲಿ ಸಹಕರಿಸುತ್ತವೆ. ಕೆಲವೊಮ್ಮೆ ಇವು ಕವಲೊಡೆದು ಪಿತ್ತಜನಕಾಂಗವೂ ಆಗಬಹುದು. ಕಸೇರುಗುಗಳ ಪಿತ್ತಜನಕಾಂಗಕ್ಕೆ ವ್ಯತಿರಿಕ್ತವಾಗಿ ಇದು ಜೀರ್ಣಿಸಲು ಬೇಕಾದ ಎಲ್ಲ ಎಂಜೈ಼ಮುಗಳನ್ನು ಉತ್ಪತ್ತಿ ಮಾಡುತ್ತದೆಯಲ್ಲದೆ ಜೀರ್ಣವಾದ ಆಹಾರವನ್ನೂ ಹೀರಿಕೊಳ್ಳುತ್ತದೆ. ಹೆಚ್ಚಿನ ಓಷಕಾಂಶಗಳನ್ನು ಗ್ಲೈಕೊಜೆನ್ ಅಥವಾ ಕೊಬ್ಬಿನ ರೂಪದಲ್ಲಿ ಶೇಖರಿಸಿಡುವುದರಲ್ಲೂ ಇದು ಸಹಕಾರಿ. ಕೆಲವು ಜೀವಿಗಳಲ್ಲಿ ಹಿನ್ನಾಳ ಇಲ್ಲ. ನಡುನಾಳ ಬೇರಾವ ಸಂಬಂಧವನ್ನೂ ಕಲ್ಪಿಸದೆ ಹಠಾತ್ತನೆ ಕೊನೆಯಾಗುತ್ತದೆ. ರೈಜೊ಼ಕಿಫಾಲ ಮತ್ತು ಕೆಲವು ಕೋಪಿಪೋಡಗಳಲ್ಲಿ ಅನ್ನನಾಳ ಇಡೀ ಜೀವಿತ ಕಾಲದಲ್ಲಿ ಇರುವುದಿಲ್ಲ. ಇವು ಪರತಂತ್ರ ಜೀವನ ಕಾಲದಲ್ಲಿ, ಪುರ್ತಿ ಜೀವಮಾನಕ್ಕೆ ಸಾಕಾಗುವಷ್ಟು ಆಹಾರವನ್ನು ಚರ್ಮದ ಮೂಲಕ ಹೀರಿಕೊಳ್ಳುತ್ತವೆ.

ವಿಸರ್ಜನೆ ಬದಲಾಯಿಸಿ

ಆಂಟೆನಲ್ ಮತ್ತು ಮ್ಯಾಕ್ಸಿಲರಿ ಗ್ರಂಥಿಗಳೆಂಬ ಎರಡು ಜೊತೆ ಮುಖ್ಯ ಶುದ್ಧೀಕರಣಾಂಗಗಳಿವೆ. ಇವು ಅವುಗಳ ಹೆಸರು ಸೂಚಿಸುವಂತೆ ಆಯಾ ಉಪಾಂಗದ ಬುಡದಲ್ಲಿ ಹೊರಕ್ಕೆ ತೆರೆಯುತ್ತವೆ. ಸಾಮಾನ್ಯವಾಗಿ ಬೆಳೆವಣಿಗೆಯಲ್ಲಿ ಇವು ಒಂದಾದ ಮೇಲೊಂದರಂತೆ ಕಾಣಿಸಿಕೊಳ್ಳುತ್ತದೆ. ಎರಡೂ ಗ್ರಂಥಿಗಳು ಏಕಕಾಲದಲ್ಲಿಯೆ ಕಾರ್ಯನಿರ್ವಹಿಸುವುದು ಬಹಳ ಅಪುರ್ವ, ಬ್ರಾಂಕಿಯೊಪೊಡದಲ್ಲಿ ಆಂಟೆನಲ್ ಗ್ರಂಥಿ ಡಿಂಭದ ಶುದ್ಧೀಕರಣಾಂಗ, ಮ್ಯಾಕ್ಸಿಲರಿ ಗ್ರಂಥಿ ವಯಸ್ಕ ಪ್ರಾಣಿಯ ಶುದ್ಧೀಕರಣಾಂಗ. ಆದರೆ ಡೆಕಪೊಡದಲ್ಲಿ ಆಂಟೆನಲ್ ಗ್ರಂಥಿಯೇ ವಯಸ್ಕ ಪ್ರಾಣಿಯ ಶುದ್ಧೀಕರಣಾಂಗ, ಪ್ರತಿಯೊಂದು ಗ್ರಂಥಿಯಲ್ಲಿಯೂ ಒಂದು ತುದಿಯ ಕೋಶ ಮತ್ತು ಒಂದು ನಾಳವಿದೆ. ಈ ನಾಳ ತುದಿಯ ಕೋಶದಿಂದ ಹೊರಟು ಹೊರಕ್ಕೆ ತೆರೆಯುತ್ತದೆ. ತುದಿಯ ಕೋಶ ಮತ್ತು ನಾಳಗಳು ಸಂದಿಸುವಲ್ಲಿ ಒಂದು ವಲಯ (ಸ್ಫಿಂಕ್ಟರ್) ಸ್ನಾಯುವಿದೆ. ಡೆಕಪೊಡಗಳ ಆಂಟಿನಲ್ ಗ್ರಂಥಿಗಳು ಬಲು ಜಟಿಲವಾಗಿದೆ.

ಉಸಿರಾಟ ಬದಲಾಯಿಸಿ

ಪುಟ್ಟ ದೇಹವುಳ್ಳ ಕಠಿಣಚರ್ಮಿಗಳು, ಅದರಲ್ಲಿಯೂ ಕೋಪಿಪಾಡ್ಗಳು ದೇಹದ ಹೊರಮೈ ಮೂಲಕ ಉಸಿರಾಡುತ್ತವೆ. ಆದರೆ ದಪ್ಪ ಅಸ್ಥಿಪಂಜರವುಳ್ಳ ಪ್ರಾಣಿಗಳಲ್ಲಿ ಉಸಿರಾಟಕ್ಕೆ ಪ್ರತ್ಯೇಕವಾದ ಅಂಗಗಳಿವೆ. ಕ್ಯಾರಪೇಸಿನ ಒಳಚರ್ಮವೇ ಉಸಿರಾಟಕ್ಕೆ ಅನುವಾಗಬಹುದು. ಕೆಲವು ಮೆಲಕಾಸ್ಟ್ರೇಕಗಳಲ್ಲಿ ಉಪಾಂಗಗಳ ಪ್ರೊಟೊಪೊಡೈಟುಗಳ ಮೇಲೆ ಬೆಳೆಯುವ ಪ್ರವರ್ಧಗಳು ಮತ್ತು ಮಡಿಕೆ ಮಡಿಕೆಯಾಗಿರುವ ಅಥವಾ ಕವಲೊಡೆದ ಕಿವಿರುಗಳು ಇವೆ. ಅವು ಬೆಳೆಯುವ ಸ್ಥಳವನ್ನನುಸರಿಸಿ ಕಿವಿರುಗಳನ್ನು ವಿಂಗಡಿಸಿದ್ದಾರೆ: 1 ಆರ್ತೊಬ್ರ್ಯಾಂಕ್; ಇವು ಹೊರ ಅಸ್ಥಿಪಂಜರವನ್ನು ದೇಹಕ್ಕೆ ಅಂಟಿಸುವ ಆರ್ತಾಯಿಡಲ್ ಪಟಲಕ್ಕೆ ಅಂಟಿಕೊಂಡಿವೆ. 2 ಪೋಡೋಬ್ರ್ಯಾಂಕ್: ಇವು ಉಪಾಂಗಗಳ ಬುಡಕ್ಕೆ ಅಂಟಿಕೊಂಡಿವೆ. 3 ಪ್ಲುರೊಬ್ರ್ಯಾಂಕ್; ಮೇಲಿನ ಹೊರ ಅಸ್ಥಿಪಂಜರದ ಫಲಕ ಕೆಳಗಿನ ಫಲಕವನ್ನು ದಾಟಿ ಪಕ್ಕದಲ್ಲಿ ಚಾಚಿ ಪ್ಲೊರಾನ್ ಎಂಬೊಂದು ಅವಕಾಶವನ್ನು ರಚಿಸುತ್ತದೆ. ಕಿವಿರುಗಳು ಆ ಜಾಗದಲ್ಲಿ ಬೆಳಯುತ್ತವೆ. ಕಿವಿರುಗಳಿರುವ ಭಾಗಕ್ಕೆ ಸದಾ ಹೊಸನೀರಿನ ಪುರೈಕೆ ಆಗುವಂತೆ ನೀರಿನ ಪ್ರವಾಹವನ್ನುಂಟುಮಾಡಲು ಕೆಲವು ಉಪಾಂಗಗಳೂ ಸಹಕರಿಸುತ್ತವೆ. ನೆಲದ ಮೇಲೆ ವಾಸಿಸುವ ಕಠಿಣಚರ್ಮಿಗಳಲ್ಲಿ ಗಾಳಿಯಲ್ಲಿ ಉಸಿರಾಡಲು ವಿಶೇಷ ಅಂಗಗಳಿಲ್ಲ. ಕಿವಿರುಕೋಣೆಯ ಗೋಡೆ ರಕ್ತನಾಳಗಳಿಂದ ಆವೃತವಾಗಿ ಶ್ವಾಸಕೋಶದಂಥ ರಚನೆ ರೂಪುಗೊಂಡಿದೆ.

ರಕ್ತಪರಿಚಲನೆ ಬದಲಾಯಿಸಿ

ರಕ್ರಪರಿಚಲನೆಯ ಕ್ರಮದಲ್ಲೂ ಒಂದು ರೀತಿಯ ವಿಕಾಸವನ್ನು ಕಾಣಬಹುದು. ಕೆಲವು ಕಠಿಣಚರ್ಮಿಗಳಲ್ಲಿ ನಳಿಕೆಯಾಕಾರದ ಕೊಳವೆಯೊಂದು ಅನ್ನನಾಳದ ಮೇಲೆ ಹರಡಿದೆ. ಇದರ ಮುಂದಿನ ತುದಿಯಲ್ಲಿ ಒಂದು ಅಯೋರ್ಟ ಇದೆ. ಆದರೆ ಸರಿಯಾಗಿ ರೂಪುಗೊಂಡ ರಕ್ತನಾಳಗಳಿಲ್ಲ. ದೇಹದ ಅಂಗಾಶಗಳ ನಡುವೆ ಇರುವ ಬಿರುಕುಗಳಲ್ಲಿ ರಕ್ತ ಹರಿಯುತ್ತದೆ. ಈ ಬಿರುಕುಗಳನ್ನು ಹಿಮೋಸೀಲ್ ಎಂದು ಕರೆಯುತ್ತಾರೆ. ಇವುಗಳ ರಕ್ತಕ್ಕೆ ಬಣ್ಣವಿಲ್ಲ. ಬಹುತೇಕ ಪ್ರಾಣಿಗಳ ರಕ್ತದಲ್ಲಿ ಬಿಳಿಯ ರಕ್ತಕಣಗಳಿವೆ. ಮೆಲಕಾಸ್ಟ್ರೇಕ ಗುಂಪಿನ ಪ್ರಾಣಿಗಳ ರಕ್ತದಲ್ಲಿ ಹಿಮೋಸಯಾನಿನ್ ಎಂಬ ದ್ರವ್ಯವಿದೆ. ಕೆಲವು ಪ್ರಾಣಿಗಳಲ್ಲಿ ಹಿಮೋಗ್ಲಾಬಿನ್ ಕೂಡ ಇದೆ.

ಜನನೇಂದ್ರಿಯಗಳು ಬದಲಾಯಿಸಿ

ಕೆಲವು ಪ್ರಾಣಿಗಳ ವಿನಾಹ (ತೊಟ್ಟಿಲ್ಲದ ಸಿರ್ರಿಪೀಡಿಯ, ಕೆಲವು ಐಸೊಪಾಡ್ಗಳು ಇತ್ಯಾದಿ,) ಮಿಕ್ಕೆಲ್ಲವೂ ಭಿನ್ನ ಲಿಂಗಿಗಳು, ಬ್ರಾಂಕಿಯೊಪೊಡ ಮತ್ತು ಆಸ್ಟ್ರಕೋಡಗಳಲ್ಲಿ ಪಿತೃರಹಿತ ಸಂತಾನಕ್ರಿಯೆ (ಪಾರ್ಥನೊಜೆನಿಸಿಸ್) ನಡೆಯುತ್ತದೆ. ಸಾಮಾನ್ಯವಾಗಿ ಗಂಡು ಹೆಣ್ಣುಗಿಂತ ಚಿಕ್ಕದು. ಸಂಭೋಗ ಕಾಲದಲ್ಲಿ ಹೆಣ್ಣನ್ನು ತಬ್ಬಿ ಹಿಡಿಯಲು ಮತ್ತು ರೇತ್ರಾಣುಗಳನ್ನು ವರ್ಗಾಯಿಸಲು ಮಾರ್ಪಟ್ಟ ಉಪಾಂಗಗಳಿವೆ. ಜನನೇಂದ್ರಿಯಗಳು ಸಾಮಾನ್ಯವಾಗಿ ಟೊಳ್ಳಾದ ಅಂಗಗಳು. ಇವುಗಳಿಂದ ಹೊರಟ ನಾಳಗಳು ನೇರವಾಗಿ ಹೊರಕ್ಕೆ ತೆರೆಯುತ್ತವೆ.

ಜೀವನ ಚರಿತ್ರೆ ಬದಲಾಯಿಸಿ

ಜೀವನ ಚರಿತ್ರೆ ನೇರವಾದುದಲ್ಲ. ಬೆಳೆವಣಿಗೆಯಲ್ಲಿ ಸಾಮಾನ್ಯವಾಗಿ ಅನೇಕ ಡಿಂಭಾವಸ್ಥೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮೊಟ್ಟೆಯಿಂದ ನಾಪ್ಲಿಯಸ್ ಎಂಬ ಮೊಟ್ಟೆಯಾಕಾರದ ಡಿಂಭ ಹೊರಬರುತ್ತದೆ. ಮುಂದಿನ ತುದಿ ತುಂಬ ಅಗಲ, ಖಂಡ ವಿಂಗಡಣೆ ಇಲ್ಲ. ಮೂರು ಜೊತೆ ಉಪಾಂಗಗಳಿವೆ; ಒಕ್ಕವಲಿನ ಆಂಟೆನ್ಯೂಲ್ಗಳು, ಇಕ್ಕವಲಿನ ಆಂಟೆನಗಳು ಹಾಗೂ ಮ್ಯಾಂಡಿಬಲ್ಗಳು, ಮಧ್ಯದ ಅಕ್ಷಿ ಇರುತ್ತವೆ. ಒಂದು ದೊಡ್ಡ ಲೇಬ್ರಂ ಇದೆ. ಅನ್ನನಾಳದಲ್ಲಿ ಮೂರು ಭಾಗಗಳನ್ನು ಗುರುತಿಸಬಹುದು. ಆಂಟೆನಲ್ ಗ್ರಂಥಿಗಳು ಇರಬಹುದು. ಕಠಿಣಚರ್ಮಿಗಳ ಪ್ರತಿಯೊಂದು ಗುಂಪಿನಲ್ಲಿಯೂ ಈ ಡಿಂಭಾವಸ್ಥೆ ಉಂಟು. ಕೆಲವು ಪ್ರಾಣಿಗಳ ಜೀವನ ಚರಿತ್ರೆಯಲ್ಲಿ ಈ ಡಿಂಭಾವಸ್ಥೆಯೂ ಭ್ರೂಣಾವಸ್ಥೆಯಲ್ಲಿ ಕಳೆದು ಮೆಟನಾಪ್ಲಿಯಸ್ ಅಥವಾ ಜೊóಯಿಯ ಅವಸ್ಥೆ ಅಥವಾ ಪ್ರಬುದ್ಧಾವಸ್ಥೆಯ ಪ್ರಾಣಿಗಳೇ ಮೊಟ್ಟೆಗಳಿಂದ ಹೊರಬರಬಹುದು. ನಾಪ್ಲಿಯಸ್ ಡಿಂಭ ಪೊರೆ ಬಿಟ್ಟು ಪ್ರೊಟೊಜೊ಼ಹಿಯ ಆಗಿ ಬೆಳೆಯುತ್ತದೆ ಇದರಲ್ಲಿ ನಾಪ್ಲಿಯಸಿಗಿಂತಲೂ ಮೂರು ಜೊತೆ ಉಪಾಂಗಗಳು ಹೆಚ್ಚಾಗಿರುತ್ತವೆ ಮತ್ತು ಮೂರರಿಂದ ಎಂಟರವರೆಗಿನ ಖಂಡಗಳ ಅಂಕುರ ಕಾಣಿಸಕೊಳ್ಳುತ್ತವೆ. ಇದು ಜೊ಼ಯಿಯ ಆಗಿ ಬೆಳೆಯುತ್ತದೆ. ಈ ಡಿಂಭಾವಸ್ಥೆಯಲ್ಲಿ ಸೆಫಲೊಥೊರ್ಯಾಕ್ಸ್‌ ಮತ್ತು ಉದರಗಳು ನಿರ್ದಿಷ್ಟವಾಗಿ ರೂಪುಗೊಂಡಿರುತ್ತವೆ. ಒಂದರಿಂದ ಎಂಟು ಜೊತೆಗಳವರೆಗೆ ಉಪಾಂಗಗಳಿರುತ್ತವೆ. ಹಾಗೂ ಇನ್ನೂ ಆರು ಜೊತೆ ಬೆಳೆಯುತ್ತಿರುತ್ತವೆ, ಇದರ ಶಿರಸ್ಸಿನ ಭಾಗದಲ್ಲಿ ಮುಳ್ಳಿರುವುದು ಈ ಡಿಂಭದ ಮುಖ್ಯ ಲಕ್ಷಣ. ಜೊ಼ಯಿಯ ಡಿಂಭವು ಹೆಚ್ಚು ಕಡಿಮೆ ಪ್ರಬುದ್ಧ ಸೈಕ್ಲಾಪ್ಪುಗಳನ್ನೇ ಹೋಲುತ್ತದೆ. ಜೊ಼ಯಿಯ ಪೊರೆ ಕಳಚಿ ಪ್ರಬುದ್ಧ ಮೈಸಿಸ್ ಪ್ರಾಣಿಯನ್ನು ಹೋಲುವ ಮೈಸಿಸ್ ಅವಸ್ಥೆಯನ್ನು ತಲುಪುತ್ತದೆ. ಇದರ ಸೆಫಲೊಡೊರ್ಯಾಕ್ಸಿನಲ್ಲಿ ಎಂಟು ಜೊತೆ ಉಪಾಂಗಗಳಿದ್ದು ಒಂದೊಂದು ಉಪಾಂಗವೂ ತನ್ನ ನಿರ್ದಿಷ್ಟ ಕ್ರಿಯೆಯನ್ನು ನಿರ್ವಹಿಸಲು ತಕ್ಕಂತೆ ಮಾರ್ಪಟ್ಟಿರುತ್ತದೆ.

ಸೀಗಡಿ ಬದಲಾಯಿಸಿ

ಸೀಗಡಿಗಳಲ್ಲಿ ಮೈಸಿಸ್ ಡಿಂಭ ನೇರವಾಗಿ ಪ್ರಬುದ್ಧ ಪ್ರಾಣಿಯಾಗಿ ಬೆಳೆಯುತ್ತದೆ.ಆದ್ದರಿಂದ ಸೀಗಡಿಯು ತನ್ನ ವಿಕಾಸಕ್ಕೆ ಕಾರಣವಾದ ಪ್ರಾಣಿಗಳನ್ನು ತನ್ನ ಡಿಂಭಾವಸ್ಥೆಯ ವಿವಿಧಹಂತಗಳಲ್ಲಿ ನೆನೆಸಿಕೊಳ್ಳುತ್ತದೆ ಎಂದು ಪ್ರಾಣಿವಿಜ್ಞಾನಿಗಳು ಭಾವಿಸುತ್ತಾರೆ. ಲಾಬ್ಸ್ಟರ್ ಪ್ರಾಣಿಯ ಜೀವನಚರಿತ್ರೆಯಲ್ಲಿ ಮೈಸಿಸ್ ಅವಸ್ಥೆಯೊಂದರ ವಿನಹ ಮಿಕ್ಕ ಡಿಂಭಾವಸ್ಥೆಗಳಾವುವೂ ಇಲ್ಲ. ಆದರೆ ಏಡಿಗಳ ಬೆಳೆವಣಿಗೆಯಲ್ಲಿ ಮೈಸಿಸ್ ಬದಲು ಮೆಗಲೋಪ ಎಂಬೊಂದು ಡಿಂಭಾವಸ್ಥೆ ಇದೆ. ಇದರಲ್ಲಿ ಸೆಫಲೊಥೊರ್ಯಾಕ್ಸ್‌ ಭಾಗ ಪುರ್ಣವಾಗಿ ರೂಪುಗೊಂಡಿದ್ದು ಕೇವಲ ಉದರ ಭಾಗ ಮಾತ್ರ ಅಪುರ್ಣ ವಾಗಿರುತ್ತದೆ.ಕೆಲವು ಸಾರಿ ನಾನಾ ರೀತಿಯ ಜೀವನಗಳಿಗೆ ಕಠಿಣಚರ್ಮಿಗಳೂ ಹೊಂದಿಕೊಂಡು ಅವುಗಳ ದೇಹ ಮಾರ್ಪಡುವುದರಿಂದ ಪ್ರಬುದ್ಧಾವಸ್ಥೆಯಲ್ಲಿ ಅವನ್ನು ಗುರುತಿಸುವುದು ಕಷ್ಟವಾಗುತ್ತದೆ. ಉದಾಹರಣೆಗೆ, ಲಿಪಾಸ್, ಬಾರ್ಕಲ್ ಮತ್ತು ಸ್ಯಾಕ್ಯುಲೈನಗಳು. ಲಿಪಾಸ್ ಮತ್ತು ಬಾರ್ನಕಲ್ಗಳಲ್ಲಿ ದೇಹ ತುಂಬ ಕ್ಷೀಣವಾಗಿ ತಮ್ಮ ರಕ್ಷಣೆಗೆ ಹೊರಚಿಪ್ಪುಗಳನ್ನು ಬೆಳೆಸಿಕೊಂಡಿವೆ. ಮೊದಲು ನೋಡುವವರಿಗೆ ತಟ್ಟನೆ ಅವು ಮೃದ್ವಂಗಿಗಳ ವಂಶಕ್ಕೆ ಸೇರಿದ ಪ್ರಾಣಿಗಳಿರಬಹುದೆಂದು ತೋರುತ್ತದೆ. ಹಾಗೆಯೇ ಸ್ಯಾಕ್ಯುಲೈನದ ಪರತಂತ್ರ ಜೀವನದಿಂದಾಗಿ, ಅದರ ಅಂಗಾಂಗಗಳೆಲ್ಲವೂ ನಶಿಸಿ ಹೋಗಿ, ಅದು ಕೇವಲ ಮೊಟ್ಟೆಗಳನ್ನು ಉತ್ಪತ್ತಿ ಮಾಡುವ ಚೀಲದಂತೆ ಕಾಣುತ್ತದೆ. ಇವುಗಳ ಜೀವನ ಚರಿತ್ರೆಯನ್ನು ಅಭ್ಯಾಸ ಮಾಡಿದಾಗ ಮಾತ್ರ ವಿಶಿಷ್ಟವಾದ ಡಿಂಭಾವಸ್ಥೆಗಳನ್ನು ಕಂಡುಹಿಡಿದು ಇವು ಕಠಿಣಚರ್ಮಿಗಳ ವರ್ಗಕ್ಕೆ ಸೇರಿದ ಪ್ರಾಣಿಗಳು ಎಂದು ಗುರುತಿಸಬಹುದು. ಆದುದರಿಂದ ಡಿಂಭಗಳು ಈ ವರ್ಗದ ಪ್ರಾಣಿಗಳ ವಿಶೇಷ ಲಕ್ಷಣ ಅಂದರೆ ಅತಿಶಯೋಕ್ತಿಯಾಗಲಾರದು.

ವರ್ಗೀಕರಣ ಬದಲಾಯಿಸಿ

ಈ ವರ್ಗವನ್ನು ಅನೇಕ ಗುಣಗಳ ಆಧಾರದ ಮೇಲೆ ವರ್ಗೀಕರಿಸಿದ್ದಾರೆ. ಹಿಂದೆ ಇವನ್ನು ಮೆಲಕಾಸ್ಟ್ರೇಕ ಮತ್ತು ಎಂಟಮಾಸ್ಟ್ರೇಕ ಎಂದು ಎರಡು ಮುಖ್ಯ ಉಪವರ್ಗಗಳಾಗಿ ವರ್ಗೀಕರಿಸುತ್ತಿದ್ದರು. ಆದರೆ ಈಗ ಇವುಗಳ ಬಗ್ಗೆ ಹೆಚ್ಚು ವಿಷಯಗಳು ತಿಳಿದುಬಂದಂತೆ ಹಿಂದೆ ಒಂದು ಗಣವೆಂದು ಗುರುತಿಸಿದ್ದ ಕೆಲವು ಗುಂಪುಗಳಿಗೆ ಉಪವರ್ಗದ ಸ್ಥಾನವನ್ನು ಕೊಟ್ಟು, ಎಂಟಮಾಸ್ಟ್ರೇಕ ಉಪವರ್ಗವನ್ನು ಕೈಬಿಟ್ಟಿದ್ದಾರೆ. ಉಪವರ್ಗ 1: ಬ್ರ್ಯಾಂಕಿಯೊಪೋಡ : ಸ್ವತಂತ್ರ ಜೀವಿಗಳು, ಸಂಯುಕ್ತಾಕ್ಷಿಗಳಿವೆ. ಸಾಮಾನ್ಯವಾಗಿ ಕ್ಯಾರಪೇಸ್ ಇದೆ. ಕನಿಷ್ಠ ನಾಲ್ಕು ಜೊತೆ ಮುಂಡಭಾಗದ ಪಾದಗಳಾದರೂ ಇವೆ. ಕಠಿಣಚರ್ಮಿಗಳಲ್ಲಿಯೇ ಇವು ಬಹಳ ಕೆಳಮಟ್ಟದ ಪ್ರಾಣಿಗಳು. ಗಣ 1 : ಅನೊಸ್ಟ್ರೇಕ : ಕ್ಯಾರಪೇಸ್ ಇಲ್ಲ. ಕಣ್ಣುಗಳಿಗೆ ತೊಟ್ಟುಗಳಿವೆ. ಒಕ್ಕವಲು ಅಂಟೆನಗಳಿವೆ. ಅನೇಕ ಜೊತೆ ಒಂದೇ ರೀತಿಯ ಮುಂಡಪಾದಗಳಿವೆ. ಉದಾ: ಕೈರೊಸಿಫ್ಯಾಲಸ್, ಆರ್ಟೀಮಿಯ. ಗಣ 2 : ಲಿಪೊಸ್ಟ್ರೇಕ : ಈ ಗುಂಪಿನ ಪ್ರಾಣಿಗಳೆಲ್ಲ ಪಳೆಯುಳಿಕಗಳಾಗಿವೆ. ಉದಾ: ಲೆಪಿಡೊಕ್ಯಾರಿಸ್. ಗಣ 3 : ನೋಟೊಸ್ಟ್ರೇಕ : ಮುಂಡದ ಮೇಲೆ ಬಹಳ ಅಗಲವಾದ ಕ್ಯಾರಪೇಸ್ ಇದೆ : ತೊಟ್ಟಿಲ್ಲದ ಕಣ್ಣುಗಳು ಒಂದಕ್ಕೊಂದು ಬಹಳ ಹತ್ತಿರದಲ್ಲಿವೆ. ಅನೇಕ ಮುಂಡಪಾದಗಳಿವೆ. ಇವುಗಳಲ್ಲಿ ಮೊದಲನೆಯ ಜೊತೆ ಮಿಕ್ಕೆಲ್ಲವಗಳಿಂದ ತುಂಬ ಭಿನ್ನ. ಉದಾ: ಏಪಸ್ ಮತ್ತು ಲೆಪಿಡ್ಯೂರಸ್. ಗಣ 4 : ಡಿಪ್ಲೊಸ್ಟ್ರೇಕ : ಮುಂಡ ಮತ್ತು ಪಾದಗಳನ್ನು ಮುಚ್ಚುವ ಅಡಕವಾದ ಕ್ಯಾರಪೇಸ್ ಇದೆ. ತೊಟ್ಟಿಲ್ಲದ ಕಣ್ಣುಗಳೂ ದೊಡ್ಡ ಇಕ್ಕವಲಿನ ಆಂಟೆನಗಳೂ 4 ರಿಂದ 27 ಜೊತೆ ಮುಂಡಪಾದಗಳೂ ಇವೆ, ಉದಾ: ಇಸ್ತೀರಿಯ, ಡ್ಯಾಫ್ನಿಯ. ಉಪವರ್ಗ 2, ಆಸ್ಟ್ರಕೋಡ : ಸ್ವತಂತ್ರ ಜೀವಿಗಳು, ಸಂಯುಕ್ತಾಕ್ಷಿಗಳು ಇರಬಹುದು ಅಥವಾ ಇಲ್ಲದಿರಬಹುದು. ದ್ವಿಭಾಗಿಯಾದ ಮತ್ತು ಅಡಕ್ಟರ್ ಸ್ನಾಯುವುಳ್ಳ ಕ್ಯಾರಪೇಸ್ ಇದೆ. ಎರಡಕ್ಕಿಂತ ಹೆಚ್ಚು ಮುಂಡಪಾದಗಳಿಲ್ಲ, ಇವುಗಳಲ್ಲಿ ಪಿತೃರಹಿತಸಂತಾನೋತ್ಪತ್ತಿ ಬಹಳ ಸಾಮಾನ್ಯ, ಕೆಲವು ಜಾತಿ ಪ್ರಾಣಿಗಳಲ್ಲಿ ಇದುವರೆಗೂ ಗಂಡುಗಳೇ ಸಿಕ್ಕಿಲ್ಲ, ಉದಾ: ಸೈಪ್ರಿಸ್ ಮತ್ತು ಸೈಪ್ರಿಡಿನ. ಉಪವರ್ಗ 3, ಕೋಪಿಪೋಡ : ಸ್ವತಂತ್ರ ಜೀವಿಗಳೂ ಅಥವಾ ಪರತಂತ್ರ ಜೀವಿಗಳು, ಸಂಯುಕ್ತಾಕ್ಷಿಗಳಾಗಲೀ ಕ್ಯಾರಪೇಸ್ ಆಗಲೀ ಇಲ್ಲ. ಸಾಮಾನ್ಯವಾಗಿ ಆರು ಜೊತೆ ಎದೆಯ ಉಪಾಂಗ ಗಳಿವೆ. ಇದರಲ್ಲಿ ಮೊದಲನೆಯದು ಒಕ್ಕವಲು. ಉದರ ಭಾಗದಲ್ಲಿ ಉಪಾಂಗಗಳಿಲ್ಲ. ದೇಹ ಬುಗುರಿಯಾಕಾರ, ಅಥವಾ ಗದೆಯಾಕಾರ, ಖಂಡ ವಿಂಗಡಣೆಯಿಲ್ಲದಿರಬಹುದು. ದೇಹ ಗುಗುರಿ ಯಾಕಾರ, ಅಥವಾ ಗದೆಯಾಕಾರ, ಖಂಡ ವಿಂಗಡಣೆಯಿಲ್ಲದಿರಬಹುದು. ಖಂಡವಿಂಗಡಣೆ ಇರುವ ಪ್ರಾಣಿಗಳಲ್ಲಿ ಇರಬೇಕಾದ ಖಂಡ ಸಂಖ್ಯೆ ನಿರ್ದಿಷ್ಟ-16. ಉದಾ: ಸೈಕ್ಲಾಪ್ಸ್‌. (ಚಿತ್ರ 1).

ಬ್ರಾಂಕಿಯೂರ ಬದಲಾಯಿಸಿ

ಉಪವರ್ಗ 4, ಬ್ರಾಂಕಿಯೂರ: ತಾತ್ಕಾಲಿಕ ವಾಗಿ ಮೀನುಗಳಲ್ಲಿ ಪರತಂತ್ರ ಜೀವಿಗಳಾಗಿರುತ್ತವೆ. ಸಂಯುಕ್ತಾಕ್ಷಿ ಗಳು, ಹೀರುಬಾಯಿ ಇವೆ, ಉದರ ಭಾಗದಲ್ಲಿ ಖಂಡ ವಿಂಗಡಣೆ ಯಾಗಲೀ ಪಾದಗಳಾಗಲೀ ಇಲ್ಲ, ಎದೆಯ ಭಾಗದಲ್ಲಿ ನಾಲ್ಕು ಜೊತೆ ಇಕ್ಕವಲು ಪಾದಗಳಿವೆ. ಇವುಗಳ ಎಕ್ಸೊಪೊಡೈಟ್ಗಳು ತುದಿಯಲ್ಲಿ ಹರಡಿವೆ. ಈ ಉಪವರ್ಗದ ಪ್ರಾಣಿಗಳೂ ಮೇಲೆ ನೋಡಲು ಕೋಪಿಪೋಡಗಳನ್ನೇ ಹೋಲುತ್ತವೆ. ಇವನ್ನು ಸಾಮಾನ್ಯವಾಗಿ ಕಾರ್ಪ್‌ ಮೀನಿನ ಹೇನು ಎಂದು ಕರೆಯುತ್ತಾರೆ. ಉದಾ: ಆರ್ಗುಲಸ್. (ಚಿತ್ರ 2). ಉಪವರ್ಗ5, ಸಿರ್ರಿಪೀಡಿಯ : ಇವು ಒಂದು ಜಾಗಕ್ಕೆ ಅಂಟಿಕೊಂಡು ಜೀವಿಸುತ್ತವೆ. ಬಹುತೇಕ ಉಭಯಲಿಂಗಿಗಳು. ಪ್ರಬುದ್ಧ ಪ್ರಾಣಿಯಲ್ಲಿ ಸಂಯುಕ್ತಾಕ್ಷಿಗಳಿಲ್ಲ. ಕ್ಯಾರಪೇಸ್ ಚಿಪ್ಪಿನಂತೆ ಪ್ರಾಣಿಯನ್ನು ಆವರಿಸುತ್ತದೆ. ಸಾಮಾನ್ಯವಾಗಿ ಆರು ಜೊತೆ ಇಕ್ಕವಲು ಎದೆಯ ಪಾದಗಳಿವೆ, ಇವನ್ನು ಪ್ರಬುದ್ಧಾವಸ್ಥೆಯಲ್ಲಿ ಕಠಿಣಚರ್ಮಿಗಳೆಂದು ಗುರುತಿಸುವುದು ಕಷ್ಟ. ಗಣ 1, ಥೊರ್ಯಾಸಿಕ : ಅನ್ನನಾಳಗಳಿವೆ. ಆರು ಜೊತೆ ಎದೆಯ ಪಾದಗಳಿವೆ. ಉದರ ಭಾಗದಲ್ಲಿ ಖಂಡಗಳಿಲ್ಲ. ಇವು ಬಾಯಿಯ ಭಾಗದಿಂದ ಯಾವುದಾದರೂ ಆಧಾರಕ್ಕೆ ಸ್ಥಿರವಾಗಿ ಅಂಟಿಕೊಂಡಿರುತ್ತವೆ. ಉದಾ: ಲಿಪಾಸ್. ಗಣ 2. ಆಕ್ರೊಥೊರ್ಯಾಸಿಕ: ಭಿನ್ನ ಲಿಂಗಿಗಳು, ಅನ್ನನಾಳವಿದೆ. ಆರಕ್ಕಿಂತಲೂ ಕಡಿಮೆ ಜೊತೆ ಎದೆಯ ಪಾದಗಳಿವೆ. ಉದರ ಭಾಗದಲ್ಲಿ ಖಂಡಗಳಿಲ್ಲ. ಉದಾ: ಆಲ್ಸಿಪ್ಟಿ. ಗಣ 3. ಏಪೋಡ: ಉಭಯ ಲಿಂಗಿಗಳು. ಚಿಪ್ಪು, ಎದೆಯ ಪಾದ, ಗುದದ್ವಾರ, ಯಾವುವೂ ಇಲ್ಲ, ಮಡಿಕೆ ಗಳಿಂದ ದೇಹವು ಉಂಗುರಗಳಾಗಿ ವಿಭಾಗ ವಾಗಿದೆ. ಉದಾ: ಪ್ರೋಟಿಯೊಲಿಪಾಸ್. ಗಣ 4: ರೈಜೊ಼ಕಿಫಾಲ: ಡೆಕಪಾಡ್ ಕಠಿಣಚರ್ಮಿಗಳಲ್ಲಿ ಪರತಂತ್ರ ಜೀವಿಗಳಾಗಿ ವಾಸಿಸುತ್ತವೆ. ಅನ್ನನಾಳವಿಲ್ಲ. ಪ್ರಬುದ್ಧ ಪ್ರಾಣಿಯಲ್ಲಿ ಉಪಾಂಗಗಳಿಲ್ಲ. ಎಳೆಗಳಂಥ ಹೀರು ಬೇರುಗಳನ್ನು ಬೆಳೆಸಿಕೊಂಡು ಆಶ್ರಯದಾತ ಪ್ರಾಣಿಯ ದೇಹವನ್ನು ಆವರಿಸುತ್ತವೆ. ಉದಾ: ಸ್ಯಾಕ್ಯುಲೈನ. (ಚಿತ್ರ 3) ಗಣ 5: ಆಸ್ಕೊಥೊರ್ಯಾಸಿಕ : ಪರತಂತ್ರ ಜೀವಿಗಳೂ. ಅನ್ನನಾಳವಿದೆ. ಆರು ಜೊತೆ ಎದೆಯ ಪಾದಗಳಿವೆ. ಉದಾ: ಲಾರಾ. ಉಪವರ್ಗ 6. ಮೆಲಕಾಸ್ಟ್ರೇಕ : ಸಾಮಾನ್ಯವಾಗಿ ತೊಟ್ಟಿರುವ ಸಂಯುಕ್ತಾಕ್ಷಿಗಳಿವೆ. ಎದೆಯಲ್ಲಿ ಎಂಟು ಖಂಡಗಳಿವೆ. ಅದನ್ನು ಕ್ಯಾರಪೇಸ್ ಮುಚ್ಚಿದೆ. ಆರು ಖಂಡಗಳಿರುವ (ಅಪರೂಪವಾಗಿ ಏಳಿರುವ) ಉದರ ಭಾಗವಿದೆ. ಎಲ್ಲ ಖಂಡಗಳಿಗೂ ಉಪಾಂಗಗಳಿವೆ. ಈ ಉಪವರ್ಗದಲ್ಲಿ ವೈವಿಧ್ಯತೆಯನ್ನು ತೋರುವ ಹೇರಳ ಸಂಖ್ಯೆಯ ಪ್ರಭೇದಗಳಿವೆ. ಗಣ 1. ಲೆಪ್ಟೊಸ್ಟ್ರೇಕ : ಏಳು ಉದರ ಖಂಡಗಳಿವೆ. ಪಾದಗಳು ಫಿಲ್ಲೊಪೋಡಿಯಂ ಮಾದರಿಯವು. ಎದೆಯ ಯಾವ ಖಂಡಕ್ಕೂ ಕೂಡಿಕೊಳ್ಳದ ಕ್ಯಾರಪೇಸ್ ಇದೆ. ಉದಾ: ನೆಬೇಲಿಯ. ಗಣ 2. ಹಾಪ್ಲೊಕ್ಯಾರಿಡ : ಮೂರು ಎದೆಯ ಖಂಡಗಳೊಂದಿಗೆ ಕೂಡಿದ ಕ್ಯಾರಪೇಸ್ ಇದೆ. ಉದಾ: ಸ್ಕ್ವಿಲ್ಲ. (ಚಿತ್ರ 4) ಗಣ 3. ಸಿನ್ಕ್ಯಾರಿಡ : ಕ್ಯಾರಪೇಸ್ ಇಲ್ಲ. ಉದಾ: ಅನಾಸ್ಪಿಡಿಸ್. ಗಣ 4. ಪೆರಕ್ಯಾರಿಡ : ಕ್ಯಾರಪೇಸ್ ನಾಲ್ಕಕ್ಕಿಂತ ಹೆಚ್ಚಾಗಿ ಎದೆಯ ಖಂಡಗಳೊಂದಿಗೆ ಕೂಡಿಕೊಂಡಿಲ್ಲ. ಇದರ ಭಿನ್ನತೆಯೇ ಮುಂದಿನ ವರ್ಗೀಕರಣಕ್ಕೆ ಮೂಲ. ಉಪಗಣ 1. ಮೈಸಿಡೇಸಿಯ : ಉದಾ : ಮೈಸಿಸ್. ಉಪಗಣ 2. ಕ್ಯುಮೇಸಿಯ : ಉದಾ : ಡೈಯಾಸ್ಟೈಲಿಸ್. ಉಪಗಣ 3. ಟ್ಯಾನಾಯ್ಡೇಸಿಯ : ಉದಾ : ಟ್ಯಾನಿಸ್ ಉಪಗಣ 4. ಐಸೊಪೋಡ : ಕ್ಯಾರಪೇಸ್ ಇಲ್ಲ. ದೇಹ ಕೆಳಗಿನಿಂದ ಪಕ್ಕಕ್ಕೆ ಚಪ್ಪಟೆಯಾಗಿದೆ. ಉದಾ : ಲಿಗಿಯ. ಚಿತ್ರ-5 ಉಪಗಣ 5. ಆಂಫಿಪೋಡ : ಕ್ಯಾರಪೇಸ್ ಇಲ್ಲ. ಪಕ್ಕದಿಂದ ಪಕ್ಕಕ್ಕೆ ದೇಹ ಚಪ್ಪಟೆಯಾಗಿದೆ. ಉದಾ: ಕ್ಯಾಪ್ರಿಲ್ಲ. ಗಣ 5. ಯೂಕ್ಯಾರಿಡ : ಕ್ಯಾರಪೇಸ್ ಎದೆಯ ಎಲ್ಲ ಖಂಡಗಳೊಂದಿಗೆ ಕೂಡಿಕೊಂಡಿದೆ. ಉದಾ : ನಳ್ಳಿ, ಏಡಿ, ಸೀಗಡಿ ಇತ್ಯಾದಿ.

ಉಲ್ಲೇಖಗಳು ಬದಲಾಯಿಸಿ