ಅಸಂಭಾವ್ಯ ಪಾತ್ರಗಳ ಭ್ರಾಮಕ ಜಗತ್ತಿನ ದೈನ್ಯ ನಾಯಕರು ವಿಜಯಾದಿ ಕೀರ್ತಿ ಭಾಗ್ಯಗಳನ್ನು ಪಡೆವಂಥ ಅದ್ಭುತಗಳಿಂದ ಕೂಡಿರುವ ರಮಣೀಯ ಕಥನ (ಮೆರ್ಖನ್).

ಪರಿಚಯ ಬದಲಾಯಿಸಿ

ಲೋಕವಿಖ್ಯಾತ ಜಾನಪದ ವಿದ್ವಾಂಸ ಸ್ಟಿತ್ ಥಾಂಪ್ಸನ್ ಇದನ್ನು ಕುರಿತು ಹೇಳಿರುವ ಮಾತುಗಳಿವು. ಮೆರ್ಖನ್ ಆಶಯಗಳ ಅಥವಾ ಫಟನೆಗಳ ಆನುಪುರ್ವಿಯನ್ನೊಳಗೊಂಡು ಕೆಲಮಟ್ಟಿಗೆ ದೊಡ್ಡದಾಗಿರುವ ಕಥೆ. ಅದು ಗೊತ್ತಾದ ಸ್ಥಳ ಅಥವಾ ಪಾತ್ರಗಳಿಲ್ಲದ ಅವಾಸ್ತವ ಪ್ರಪಂಚದಲ್ಲಿ ಚಲಿಸುತ್ತದೆಯಲ್ಲದೆ ಅದ್ಭುತಗಳಿಂದ ತುಂಬಿರುತ್ತದೆ. ಈ ಅಸಂಭಾವ್ಯ ಜಗತ್ತಿನಲ್ಲಿ ದೈನ್ಯ ನಾಯಕರು ವಿರೋಧಿಗಳನ್ನು ಕೊಲ್ಲುತ್ತಾರೆ, ಸಾಮ್ರಾಜ್ಯವನ್ನು ಗೆಲ್ಲುತ್ತಾರೆ ಮತ್ತು ರಾಜಕುಮಾರಿಯರನ್ನು ಮದುವೆಯಾಗುತ್ತಾರೆ.ಕಟ್ಟುಕಥೆ ಜಗತ್ತಿನ ಜನಪದ ಕಥೆಗಳಲ್ಲಿ ಕಂಡುಬರುವ ಒಂದು ಪ್ರಮುಖ ಪ್ರಕಾರ. ಮೆರ್ಖನ್ ಜರ್ಮನ್ ಭಾಷೆಯ ಪದ. ಮೊದಲ ಬಾರಿಗೆ ಇದು ಗ್ರಿಮ್ ಸೋದರರು 1813ರಲ್ಲಿ ಹೊರತಂದ ಜನಪದ ಕಥಾಸಂಕಲನ ಕಿನ್ಡರ್-ಉನ್ಡ್‌ ಹಾಉಸ್ ಮೆರ್ಖನ್ ಮೂಲಕವಾಗಿ ಪ್ರಕಾಶನಗೊಂಡಿತು. ಮೊದಮೊದಲು ಇದರ ಕಡೆಗೆ ಹೆಚ್ಚಿನ ಗಮನ ಹರಿಯದಿದ್ದರೂ ಸಾರ್ವತ್ರಿಕ ಸ್ವೀಕಾರ ಇದಕ್ಕೆ ಸಿಗದಿದ್ದರೂ ಆಧುನಿಕ ವಿದ್ವಾಂಸರು ಈಚೆಗೆ ಇದರ ಪ್ರಾಮುಖ್ಯವನ್ನು ಒಪ್ಪಿಕೊಂಡಿರುವಂತೆ ಕಾಣುತ್ತದೆ. ಇದಕ್ಕೆ ಸಂವಾದಿಯಾಗಿ ಇಂಗ್ಲಿಷಿನಲ್ಲಿ ಫೇಯ್ರಿ ಟೇಲ್, ಹೌಸ್ ಹೋಲ್ಡ್‌ ಟೇಲ್ ಎಂಬ ಪದಗಳನ್ನು ಬಳಸಿದ್ದರೂ ಅವು ಅಷ್ಟು ತೃಪ್ತಿಕರವಾಗಿಲ್ಲ. ಫೆಯ್ರಿ ಟೇಲ್ ಅಥವಾ ಅಜ್ಜಿ ಕಥೆ (ಕಿನ್ನರ ಕಥೆ) ಎನಿಸಿಕೊಂಡ ಬಹುಸಂಖ್ಯಾತ ಕಥೆಗಳಲ್ಲಿ ಫೆಯ್ರೀಸ್ ಅಥವಾ ಕಿನ್ನರರೇ ಇರುವುದಿಲ್ಲ. ಹೌಸ್ಹೋಲ್ಡ್‌ ಟೇಲ್ ಅಥವಾ ಕೌಟುಂಬಿಕ ಕಥೆ ಶಾಸ್ತ್ರೀಯವಾಗಿ ತುಂಬ ವ್ಯಾಪಕವಾದು ದೆನಿಸುತ್ತದೆ. ಆದ್ದರಿಂದ ಇವೆರಡು ಮಾತುಗಳೂ ಮೂಲ ಜರ್ಮನ್ ಪದದ ಮೂಲಾರ್ಥವನ್ನು ಪುರ್ಣವಾಗಿ ಸೂಚಿಸಲಾರವೆಂದು ಕೆಲವರ ಮತ. ಫ್ರೆಂಚಿನ ಕೊಂಟೆ ಪಾಪ್ಯುಲಯಿರೆ, ನಾರ್ವೆಯ ಪವೆಟೈರ್, ಸ್ವಿಟ್ಜರ್ಲೆಂಡಿನ ಸಾಗಾ, ರಷ್ಯದ ಸ್ಕಾಜ್óಕಾ ಮೊದಲಾದವು ಮೆರ್ಖನಿನ ಸಂವಾದಿ ಪದಗಳು. ಆದರೆ ಇವು ಯಾವಾಗಲೂ ನಿಖರವಾಗಿ ಒಂದೇ ಅರ್ಥವ್ಯಾಪ್ತಿಯನ್ನು ಹೊಂದಿರುತ್ತವೆ ಎಂಬುದರಲ್ಲಿ ಸಂಶಯವಿದ್ದೇ ಇದೆ. ಈ ಎಲ್ಲ ಪದಗಳೂ ವಿವರಿಸಲು ಯತ್ನಿಸಿರುವುದು ಸಿಂಡ್ರೆಲ, ಸ್ನೋವೈಟ್, ಹನ್ಸೆಲ್ ಮತ್ತು ಗ್ರೆಟಲ್ನಂಥ ಕಥೆಗಳನ್ನು. ಈ ಸಂದಿಗ್ಧತೆಯನ್ನು ನಿವಾರಿಸಲು ಕಿಮೀಯರಟ ಪದವನ್ನು ಬಳಕೆಗೆ ತರುವಂತೆ ಸ್ಟಿತ್ ಥಾಂಪ್ಸನ್ ಸಲಹೆ ಮಾಡಿದ್ದಾನೆ. ಇದು ಕಿಮೀಯರ ಪದದಿಂದ ನಿಷ್ಪನ್ನವಾದುದು. ಸಿಂಹದ ತಲೆಯೂ ಆಡಿನ ಒಡಲೂ ಹಾವಿನ ಬಾಲವೂ ಉಳ್ಳ ರಾಕ್ಷಸಾಕಾರದ ಅದ್ಭುತ ಪ್ರಾಣಿಯೊಂದನ್ನು ದೃಷ್ಟಿಯಲ್ಲಿಟ್ಟುಕೊಂಡು ಥಾಂಪ್ಸನ್ ಈ ಪದವನ್ನು ರೂಪಿಸಿದಂತೆ ಕಾಣುತ್ತದೆ. ಅಸಂಭಾವ್ಯತೆ ಇಂಥ ಕಲೆಗಳಿಗೆ ತಿರುಳಾಗಿರುವುದೇ ಇದಕ್ಕೆ ಕಾರಣವಾಗಿರಬೇಕು. ಆದರೆ ಈ ಪದವೂ ಹೆಚ್ಚು ಬಳಕೆಗೆ ಬಂದಂತೆ ಕಾಣುವುದಿಲ್ಲ. ಕನ್ನಡದಲ್ಲಿ ಮೆರ್ಖನ್ಗೆ ಸಂವಾದಿಯಾಗಿ ಕಟ್ಟುಕಥೆ ಎಂಬ ಪದವನ್ನು ಹಾ.ಮಾ. ನಾಯಕರು ಮೊಟ್ಟಮೊದಲು ರೂಪಿಸಿ ಚಲಾವಣೆಗೆ ತಂದರು. ಇದು ಹೆಚ್ಚು ಔಚಿತ್ಯಪುರ್ಣವಾಗಿದೆ ಎಂದು ಹೇಳಬಹುದು.

ಇತಿಹಾಸ ಬದಲಾಯಿಸಿ

ಜರ್ಮನರು ಮೆರ್ಖನ್ ಪದದ ಬಳಕೆಯಲ್ಲಿ ನಿಖರತೆಯನ್ನು ತರಲು ವಿಶೇಷ ಪ್ರಯತ್ನ ಮಾಡಿರುವರಾದರೂ ಖಾಸಗಿ ಸೂತ್ರ ವಿವರಣೆಯಲ್ಲಿ ಅದು ಪರ್ಯವಸಾನ ವಾದಂತೆ ಕಾಣಬರುತ್ತದೆ. ಸಾಮಾನ್ಯವಾಗಿ ಜರ್ಮನಿಯಲ್ಲಿ ಬಳಕೆಯಲ್ಲಿರುವ ಈ ಪದ ಬಹಳ ಸಡಿಲವಾದುದು. ನಿಜವಾಗಿಯೂ ಗ್ರಿಮ್ ಸೋದರರ ಹಾಉಸ್ ಮೆರ್ಖನ್ನಲ್ಲಿನ ಎಲ್ಲ ಕಥೆಗಳನ್ನೂ ಗಮನಿಸಿದಾಗ ಈ ಪದದ ಅರ್ಥವ್ಯಾಪ್ತಿ ವಿಶಾಲವೆಂದು ಕರೆದಿರುವ ಸ್ನೋವೈಟ್, ಫೆಯ್ತ್ಫುಲ್ ಜಾನ್ ಮತ್ತು ದಿ ಫ್ರಾಗ್ ಪ್ರಿನ್ಸ್‌ ನಂಥವು ಮಾತ್ರವಲ್ಲದೆ, ಅವಿವೇಕದ ಕಥೆಗಳು, ಸಂಚಿತ ಕಥೆಗಳು, ದಡ್ಡರ ಕಥೆಗಳು, ಸಾಧುಗಳು ಮತ್ತು ಸ್ಥಳ ಐತಿಹ್ಯಗಳು, ಮಧ್ಯಯುಗದ ಧಾರ್ಮಿಕ ಕಥೆಗಳು, ಮತ್ತಿತರ ಅನೇಕ ವಿನೋದ ಹಾಗೂ ಗೂಢಚರಿತ್ರಾಂಶಗಳಿರುವ ಕಥೆಗಳನ್ನು ಕಾಣುತ್ತೇವೆ. ಆಲ್ಬರ್ಟ್ ವೆಸೆಲ್ಸ್ಕಿಯ ಪ್ರಕಾರ ಸಿಂಡ್ರೆಲ ಒಂದೇ ನಿಜವಾದ ಮೆರ್ಖನ್ ರೀತಿಯದು. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಅನಿರ್ದಿಷ್ಟತೆ ತಲೆದೋರುತ್ತದೆ. ಈ ವಿಶಾಲ ದೃಷ್ಟಿಯಲ್ಲಿ ಮೆರ್ಖನ್ ಉಪಯೋಗಿಸುವಾಗ ಇದಕ್ಕೂ ಸಾಗಾಗಳಿಗೂ ಇರುವ ವ್ಯತ್ಯಾಸವನ್ನು ತಿಳಿಯಬೇಕು. ಮೆರ್ಖನ್ ಸಂಕೀರ್ಣ ಚಿತ್ರಣವೆಂದೂ ಸಾಗಾ ಸರಳ ಚಿತ್ರಣವೆಂದೂ ಹೇಳಲಾಗಿದೆ. ಸಾಗಾ ಕಥಾವಕ್ತೃ ವಾಸ್ತವವೆಂದು ನಂಬಿದ ವಸ್ತುಗಳಿಗೆ ಸಂಬಂಧಿಸಿದ್ದು ಅಥವಾ ಶ್ರೋತೃಗಳು ನಂಬುವಂತೆ ಹೇಳಿದ್ದು. ಇದರಲ್ಲಿ ಇತಿಹಾಸ ಅಥವಾ ಇತಿಹಾಸಾಭಾಸದ ವಿಷಯಗಳೂ ಇರಬಹುದು. ಆದರೆ ಮೆರ್ಖನ್ ಸಂಪುರ್ಣವಾಗಿ ಕಲ್ಪಿತವಸ್ತುವನ್ನುಳ್ಳದ್ದು. ಮೆರ್ಖನಿಗೂ ನಾವೆಲ್ಲಕ್ಕೂ ಇರುವ ವ್ಯತ್ಯಾಸವನ್ನೂ ಇಲ್ಲಿ ಗಮನಿಸಬಹುದು. ಇವೆರಡರ ಸಂಬಂಧವೂ ಹೆಚ್ಚುಕಡಿಮೆ ಮೇಲಿನದನ್ನೇ ಹೋಲುತ್ತದೆ. ಮೆರ್ಖನಿನದು ಭ್ರಾಮಕ ಜಗತ್ತಾದರೆ, ನಾವೆಲ್ಲದ್ದು ವಾಸ್ತವಾಭಾಸ ಜಗತ್ತೆಂದು ಹೇಳಬಹುದು. ಆದರೆ ಎಷ್ಟೋ ಸಾರಿ ಇವೆರಡಕ್ಕಿರುವ ವ್ಯತ್ಯಾಸವನ್ನು ತೋರಿಸಲು ಸಾಧ್ಯವಾಗುವುದಿಲ್ಲ.

ವಿವಿಧಗಳು ಬದಲಾಯಿಸಿ

ನಿರೂಪಕರು ಕೇವಲ ಆನಂದಕೋಸ್ಕರವಾಗಿಯೇ ಹೇಳಿದ ಕಥೆ ಮೆರ್ಖನ್, ಇದು ವಾಸ್ತವವಾಗಿ ನಂಬಿ ಬಂದದ್ದೂ ಅಲ್ಲ ಅಥವಾ ನಡೆದದ್ದೂ ನಡೆಯಬಹುದಾದದ್ದೂ ಅಲ್ಲ. ಪಶ್ಚಿಮ ಯುರೋಪ್ಮತ್ತು ಅದರಿಂದ ಪ್ರಭಾವಿತಗೊಂಡ ಪ್ರದೇಶಗಳನ್ನು ಬಿಟ್ಟು ಉಳಿದ ಪ್ರಪಂಚದ ಇತರ ಭಾಗಗಳಲ್ಲಿನ ಸಾಹಿತ್ಯವನ್ನು ನೋಡಿದರೆ ಈ ವ್ಯತ್ಯಾಸ ನಿಜವಾಗಿಯೂ ಕಥಾವಕ್ತೃಗಳ ಮನಸ್ಸಿನಲ್ಲಿದ್ದಂತೆ ಕಾಣುವುದಿಲ್ಲ. ಎಲ್ಲಿಯವರೆಗೆ ಕಥೆಗಳಲ್ಲಿ ನಂಬಿಕೆಯ ಅಂಶ ಇರುತ್ತದೆಯೊ ಅಲ್ಲಿಯವರೆಗೆ ಅವನ್ನು ಕೇವಲ ಕಾಲ್ಪನಿಕವೆಂದು ತಳ್ಳಿಹಾಕಲಾಗುವುದಿಲ್ಲ. ಈ ಕಾರಣಕ್ಕಾಗಿಯೆ ಕೆಲವು ಲೇಖಕರು ಮೆರ್ಖನ್ನ ಲಕ್ಷಣಗಳನ್ನು ಪಶ್ಚಿಮ ಐರೋಪ್ಯ ಸಂಸ್ಕೃತಿಗೆ ಮಿತಿಗೊಳಿಸಲು ಆಪೇಕ್ಷಿಸಿದಂತೆ ಕಾಣುತ್ತದೆ. ಒಂದೇ ರೀತಿಯ ಕಥಾವಸ್ತುಗಳ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿಯೂ ವ್ಯಕ್ತವಾಗುವುದರಿಂದ ಕಥಾವಕ್ತೃವಿನ ನಂಬಿಕೆ ಅಥವಾ ಅಪನಂಬಿಕೆಯನ್ನು ಆಧರಿಸಿ ಅವನ್ನು ವರ್ಗೀಕರಿಸುವುದು ಉಪಯುಕ್ತವಲ್ಲವೆಂದು ತೋರುತ್ತದೆ. ನಿರ್ದಿಷ್ಟ ಕಥೆಯೊಂದು ಒಂದು ಭಾಗದವರಿಗೆ ಮೆರ್ಖನ್ ಆಗಿದ್ದು ಇನ್ನೊಂದು ಭಾಗದವರಿಗೆ ಆಗದಿರುವುದು ಸಾಧ್ಯವಿಲ್ಲ. ಈ ಸ್ಥಿತಿಯನ್ನೇ ಗಮನಿಸಿ ಆಲ್ಬರ್ಟ್ ವೆಸೆಲ್ಸ್ಕಿ ಮೆರ್ಖನ್ ಪದವನ್ನು ಗ್ರಿಮ್ ಸೋದರರ ಕಥೆಗಳಲ್ಲಿ ನಿರ್ದಿಷ್ಟ ಶೈಲಿ ಮತ್ತು ಕಥನ ಪ್ರವೃತ್ತಿಯುಳ್ಳ ಸಮೂಹಗಳಿಗೆ ಮಾತ್ರ ಪರಿಮಿತಿಗೊಳಿಸಲು ಬಂiÀÄಸಿದ. ಇವನ ಅಭಿಪ್ರಾಯದಂತೆ ಸ್ನೋವೈಟ್, ಸಿಂಡ್ರೆಲ, ಹನ್ಸೆಲ್ ಮತ್ತು ಗ್ರೆಟಿಲ್, ಪುಸ್ ಇನ್ ಬೂಟ್ಸ್‌, ಫೆಯ್ತ್‌ಫುಲ್ ಜಾನ್ಸ್‌- ಇವುಗಳೇ ಪ್ರಾತಿನಿಧಿಕ ಸ್ವರೂಪದ, ಆದರ್ಶ ಮೆರ್ಖನ್ ಮಾದರಿಗಳು. ಇವುಗಳ ನಿಶ್ಚಿತ ಶೈಲಿಯನ್ನು ವಿಶ್ಲೇಷಣೆ ಮಾಡಿ, ಈ ರೂಪ ಪ್ರಾಯಶಃ ಪುನರುಜ್ಜೀವನ ಕಾಲಕ್ಕಿಂತ ಮುನ್ನ ಮತ್ತು 16ನೆಯ ಶತಮಾನಕ್ಕಿಂತ ಹಿಂದೆ ರಚಿತವಾಗಿರಲಿಲ್ಲವೆಂದು ಆತ ತಿಳಿಸುತ್ತಾನೆ. ಆದರೆ ಗ್ರೀಮ್ ಸೋದರರೇ ಮೊದಲಾದವರಲ್ಲಿ ಕಂಡುಬರುವ ಈ ವಿಶೇಷ ಶೈಲಿಯ ಕಥೆಗಳು ಸಾಕಷ್ಟು ಪ್ರತ್ಯೇಕವೂ ಸ್ವತಂತ್ರವೂ ಆದ ಅಸ್ತಿತ್ವವನ್ನು ಪಡೆದು ಬೇರೆ ಕಡೆಯೂ ರಚಿತವಾಗಿರಲಿಕ್ಕೆ ಸಾಕು. ಐರೋಪ್ಯ ಸಾಹಿತ್ಯವನ್ನು ಪರಿಶೀಲಿಸಿದರೆ ಜನಪ್ರೀತಿ ಪಡೆದಿರುವ ಯಾವುದೇ ಜನಪದ ಕಥೆ, ತನ್ನ ಜೀವನೇತಿಹಾಸದಲ್ಲಿ 16ನೆಯ ಶತಮಾನಕ್ಕಿಂತ ಹಿಂದಿನದಾಗಿರುತ್ತದೆ. ವೆಸೆಲ್ಸ್ಕಿ ಸಲಹೆ ಮಾಡಿರುವ ಹಾಗೆ ಮೆರ್ಖನ್ ಪದವನ್ನು ವಿಶೇಷ ಶೈಲಿಯವಕ್ಕೆ ಮಾತ್ರ ಮಿತಿಗೊಳಿಸಿದರೆ ಬಹಳವಾಗಿ ಪ್ರಸಿದ್ಧಿ ಪಡೆದಿರುವ ಇತರ ಅಸಂಖ್ಯಾತ ಪಾಠಗಳು ಈ ವ್ಯಾಪ್ತಿಗೆ ಸೇರದೆ ಬಿಟ್ಟು ಹೋಗುವ ಅವಕಾಶವಿದೆ ಎಂದು ಸ್ಟಿತ್ ಥಾಂಪ್ಸನ್ ಎಚ್ಚರಿಸಿದ್ದಾನೆ. ಆದ್ದರಿಂದ ವೆಸಲ್ಸ್ಕಿಯ ವಿಭಾಗಕ್ರಮ ಖಂಡಿತವಾಗಿಯೂ ಮೌಲಿಕವಲ್ಲ. ಇಂಥ ವಿಸ್ತಾರವಾದ ಹಾಗೂ ಸಡಿಲವಾದ ಪದದ ಬಳಕೆಯನ್ನು ಹಾಗೆ ಸಂಕುಚಿತಗೊಳಿಸುವುದು ಸರಿಯಲ್ಲ-ಎಂದು ಥಾಂಪ್ಸನ್ ಮತ್ತೊಂದೆಡೆ ಅಭಿಪ್ರಾಯಪಡುತ್ತಾನೆ. ಒಟ್ಟಾರೆ ಹೇಳುವುದಾದರೆ, ಈ ಪದ ಇಂಗ್ಲಿಷಿನ ಫೋಕ್ ಟೇಲ್ಗೆ (ಜನಪದ ಕಥೆ) ಸಂವಾದಿಯಾದುದು. ಅಜ್ಜಿಕಥೆಯನ್ನು (ನೋಡಿ-ಅಜ್ಜಿಕಥೆ) ಇಲ್ಲಿ ನೆನಸಿಕೊಳ್ಳಬಹುದು. ಪ್ರಾಯಶಃ ಮೆರ್ಖನ್ ಗದ್ಯ ಕಥೆಗಳಲ್ಲಿನ ಪುರಾಣ (ಮಿತ್) ಮತ್ತು ಐತಿಹ್ಯಗಳನ್ನು (ಲೆಜೆಂಡ್) ಬಿಟ್ಟು ಉಳಿದೆಲ್ಲ ಪ್ರಕಾರಗಳನ್ನೂ ಒಳಗೊಳ್ಳುತ್ತವೆಂದು ಹೇಳಬಹುದು. ಅದ್ಭುತಕಥೆ, ವಿನೋದಕಥೆ, ಕಿನ್ನರಕಥೆ, ಪ್ರಾಣಿಕಥೆ, ಸೂತ್ರಕಥೆ, ಅತಿಮಾನುಷಕಥೆ ಇತ್ಯಾದಿಗಳೆಲ್ಲ ಇದರ ಒಡಲಿನಲ್ಲಿ ಸೇರಿಕೊಳ್ಳುತ್ತವೆ. ಅದ್ದರಿಂದ ಇದು ವ್ಯಾಪಕಾರ್ಥದ ಒಂದು ಪದ. ಆದರೆ ಪಾಶ್ಚಾತ್ಯ ವಿದ್ವಾಂಸರು ಕಥೆಗಳ ಪ್ರಮುಖ ವರ್ಗವೊಂದಕ್ಕೆ ಮಾತ್ರ ಇದನ್ನು ಬಳಸಿರುವುದರಿಂದ, ಜನಪದ ಕಥೆಗಳಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. [೧] ಕಟ್ಟುಕಥೆ ನಿರ್ದಿಷ್ಟ ಕಾಲ ಅಥವಾ ಸ್ಥಳಗಳಿಗೆ ಸಂಬಂಧಿಸಿರುವುದಿಲ್ಲವೆಂದು ಅಗಲೇ ಹೇಳಿದ್ದಾಗಿದೆ. ಸಾಮಾನ್ಯವಾಗಿ ಕಥೆಯಲ್ಲಿ ರಾಜರಾಣಿಯರು, ರಾಜಕುಮಾರ ರಾಜಕುಮಾರಿಯರು, ಸೇವಕರು ಕಾಣಿಸಿಕೊಳ್ಳುತ್ತಾರೆ. ಒಬ್ಬ ನಾಯಿಕೆ ಅಥವಾ ನಾಯಕ ಇರುವುದುಂಟು. ನಾಯಿಕೆ ಕಿರಿಯ ಮಗಳು, ಮಾಟಗಾತಿಯರು, ರಾಕ್ಷಸರು, ಬೃಹದ್ದೇಹಿಗಳು ಮೊದಲಾದ ಅತಿಮಾನುಷ ಪಾತ್ರಗಳೂ ಸೇರಿಕೊಂಡಿರುತ್ತವೆ. ಕಥೆ ಸಹಜವಾಗಿ ಮಂತ್ರಜಾಲ, ರೂಪ ಪರಿವರ್ತನೆಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆಗಳು, ಒಗಟುಗಳು, ಅನ್ವೇಷಣೆಗಳು ಬಹುತೇಕ ಕಥೆಗಳ ಕಥನಸೂತ್ರವಾಗಿರುವಂತೆ ಕಾಣುತ್ತದೆ. ಕಥೆಯಲ್ಲಿ ಮೂರರ ಸಂಖ್ಯೆ ಪದೇ ಪದೇ ಬರುವುದು ಮತ್ತೊಂದು ವೈಶಿಷ್ಟ್ಯ. ಉದಾಹರಣೆಗೆ, ರಾಜಕುಮಾರಿ ಮೂರು ಜನ ಹೆಣ್ಣು ಮಕ್ಕಳಲ್ಲಿ ಕಿರಿಯವಳಾಗಿರುವುದು. ಇದಲ್ಲದೆ ಶಾಬ್ದಿಕ ಸೂತ್ರಗಳಾದ ಪ್ರಾಸ, ಗೀತೆ ಮೊದಲಾದವು ಪುನರಾವರ್ತಿಸುತ್ತ ಕಥೆಯ ಕಟ್ಟಡದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವುದೊಂದು ಇದರ ವಿಶೇಷ. ಸಾಮಾನ್ಯವಾಗಿ ಒಳ್ಳೆಯ ಮನುಷ್ಯರಿಗೇ ಗೆಲುವು ದೊರೆಯುವುದು ಇಂಥ ಕಥೆಗಳ ಮಗುದೊಂದು ಗಮನಾರ್ಹ ಅಂಶ. ಇವರು ಉತ್ತಮರು ಮಾತ್ರವಾಗಿರದೆ, ಶ್ರೀಮಂತರೂ ಆಗಿರುತ್ತಾರೆ. ಇವರು ರಾಜಋಷಿಗಳಾಗಿರಲೂಬಹುದು. ಹಳೆಯ ರಾಜ ಕೆಟ್ಟವನಾಗಿದ್ದರೆ ಅಗ ಸಾಮಾನ್ಯವಾಗಿ ಒಳ್ಳೆಯ ರಾಜಕುಮಾರನೊಬ್ಬ ಜಯಗಳಿಸುವುದುಂಟು. ಇಂಥ ಕಥೆಗಳ ಸಂವಿಧಾನದಲ್ಲಿ ಕೆಲಮಟ್ಟಿಗೆ ಸಂಕೀರ್ಣತೆ ಗೋಚರಿಸಬಹುದು.

ಪೀಳಿಗೆಯ ಬದಲಾಯಿಸಿ

ಕಟ್ಟು ಕಥೆ ಕಾಲದಿಂದ ಕಾಲಕ್ಕೆ ಬಾಯಿಂದ ಬಾಯಿಗೆ ಹರಿದು ಬಂದಿರುವ ಕಂಠಸ್ಥ ಸಂಪ್ರದಾಯದ ಕಥೆ. ಅನೇಕ ಆಶಯಗಳು, ಫಟನಾ ಪರಂಪರೆಗಳು, ನಿರ್ದಿಷ್ಟ ದೀರ್ಘತೆ, ಸುಖಾಂತ ಮುಕ್ತಾಯ-ಇವು ರಚನೆಯಲ್ಲಿಯ ಕೆಲವು ಅಂಶಗಳು. ಧರ್ಮ, ತತ್ತ್ವ, ಇತಿಹಾಸ-ಇವುಗಳಲ್ಲಿ ಯಾವುದೊಂದೂ ಇದರಲ್ಲಿ ಇರುವುದಿಲ್ಲ. ಕಲ್ಪಿತ ಕಥೆಯಾಗಿರುವ ಇದು ಶುದ್ಧಾಂಗವಾಗಿ ಒಂದು ಕಲಾಕೃತಿ. ಇಂಥ ಕಥೆಗಳಿಗೆ ಮೇಲೆ ಹೇಳಿದಂತೆ ಸಿಂಡ್ರೆಲ, ಸ್ನೋವೈಟ್, ಹನ್ಸೆಲ್ ಮತ್ತು ಗ್ರೆಟಿಲ್, ದಿ ಫ್ರಾಗ್ ಪ್ರಿನ್ಸ್‌ ಮೊದಲಾದವು ನಿದರ್ಶನಗಳು. ಎಲ್ಲ ಭಾಷೆಗಳಲ್ಲಿಯೂ ಈ ರೀತಿಯ ಕಥೆಗಳು ಸಿಗುತ್ತವೆ. ಉದಾಹರಣೆಗೆ, ಕನ್ನಡದಲ್ಲಿಯ ಮಾಟಗಾತಿ (ಕರ್ಣಾಟಕ ಜನಪದ ಕಥೆಗಳು-ರಾಗೌ) ಸರ್ವವಿಧದಲ್ಲೂ ಗ್ರಿಮ್ ಸೋದರರ ಹನ್ಸೆಲ್ ಮತ್ತು ಗ್ರೆಟಲ್ ಕಥೆಯನ್ನು ಹೋಲುತ್ತದೆ. ಅಲ್ಲಿಯ ಹನ್ಸೆಲ್ ಮತ್ತು ಗ್ರೆಟಿಲ್ ಪಾತ್ರಗಳು ಇಲ್ಲಿಯ ಚಿನ್ನ ಮತ್ತು ಚೆನ್ನಿ. ಅಲ್ಲಿ ಇವರು ಹಿರಿ ಹೆಂಡತಿಯ ಮಕ್ಕಳಾಗಿದ್ದು ಮಲತಾಯಿಯ ಕ್ರೂರ ಅಸೂಯೆಗೆ ಪಾತ್ರವಾದರೆ, ಇಲ್ಲಿ ಸಿಕ್ಕಿದ ಮಕ್ಕಳಾಗಿದ್ದು ಅದೇ ಪರಿಣಾಮವನ್ನು ಅನುಭವಿಸುತ್ತಾರೆ. ಮುಂದೆ ಅವರನ್ನು ಕಾಡಿಗೆ ಬಿಡುವ ಪ್ರಯತ್ನ ಎರಡರಲ್ಲಿಯೂ ಒಂದೇ ರೀತಿಯಾಗಿದೆ. ಅವರನ್ನು ಕಾಡಿಗೆ ಬಿಟ್ಟು ಬರಲು ತಂದೆ ಕರೆದುಕೊಂಡು ಹೋಗುವಾಗ, ಹಿರಿಯವನಾದ ಹನ್ಸೆಲ್ ಅಥವಾ ಚೆನ್ನ ಹರಳು ಅಥವಾ ಕಲ್ಲುಗಳನ್ನು ದಾರಿಯುದ್ಧಕ್ಕೂ ಬಿಟ್ಟುಕೊಂಡು ಹೋಗಿ, ತಂದೆ ಹೊರಟು ಹೋದ ತರುವಾಯ ಅವುಗಳ ದಾರಿ ಹಿಡಿದು ಮನೆಗೆ ಬಂದು ಬಿಡುವುದು, ಎರಡನೆಯ ಸಾರಿ ಅದೇ ರೀತಿ ಹೋದಾಗ ರೊಟ್ಟಿ ಚೂರನ್ನು ದಾರಿಯುದ್ದಕ್ಕೂ ಬಿಡುತ್ತ ಹೋಗಿದ್ದು ಅವುಗಳನ್ನು ಪಕ್ಷಿಗಳು ತಿಂದುಕೊಂಡು ದಾರಿ ತಪ್ಪಿ ಹೋಗುವುದು ಎರಡು ಕಥೆಗಳಲ್ಲೂ ಒಂದೇ ರೀತಿಯಲ್ಲಿ ನಡೆಯುತ್ತದೆ. ಇದಲ್ಲದೆ ದಾರಿ ತಪ್ಪಿದ ಆ ಅಣ್ಣತಂಗಿಯರು ಕಾಣುವ ಮಾಟಗಾತಿ ಮತ್ತು ದೋಸೆ, ಮಿಠಾಯಿ, ಸಕ್ಕರೆ ಕಡ್ಡಿಯಿಂದ ಮಾಡಿದ ಅವಳ ಮನೆ ಎರಡರಲ್ಲೂ ಕಾಣಸಿಗುತ್ತವೆ. ಮುಕ್ತಾಯ ಮಾತ್ರ ಎರಡರಲ್ಲೂ ಸ್ವಲ್ಪ ಬೇರೆಬೇರೆಯಾಗಿದೆ. ಮಾಟಗಾತಿಯ ಕೈಗೆ ಸಿಕ್ಕಿದ ಹನ್ಸೆಲ್ ಮತ್ತು ಗ್ರೆಟಲ್ ಹೇಗೋ ತಪ್ಪಿಸಿಕೊಂಡು ಮತ್ತೆ ಮನೆ ಸೇರುವುದರಲ್ಲಿ ಅಲ್ಲಿಯ ಕಥೆ ಮುಕ್ತಾಯವಾಗುತ್ತದೆ. ಆದರೆ ಕನ್ನಡದ ಕಥೆಯಲ್ಲಿ ಹೆಚ್ಚಿನ ಬೆಳೆವಣಿಗೆಯನ್ನು ಕಾಣುತ್ತೇವೆ. ಇಲ್ಲಿಯ ಚೆನ್ನ ಮತ್ತು ಚೆನ್ನಿ ಮಾಟಗಾತಿಯ ಮಾಯದ ಬುರುಡೆ ಮತ್ತು ಕೊಳಲುಗಳನ್ನು ತೆಗೆದುಕೊಂಡು ಬಹಳ ಚಾಣಾಕ್ಷತನದಿಂದ ಅವಳ ಕ್ರೂರ ಹಿಡಿತದಿಂದ ಪಾರಾಗುತ್ತಾರೆ. ಮುಂದೆ ಹಿಂಬಾಲಿಸಿ ಬಂದ ಮಾಟಗಾತಿಯನ್ನು ಹಲವು ವಿಧದಲ್ಲಿ ಆಟವಾಡಿಸಿ, ಕಡೆಗೆ ಅವಳಿಗೆ ಸಿಕ್ಕಿಬಿಡುತ್ತಾರೆ. ಚೆನ್ನ ಜಿಂಕೆಯಾಗುವುದು, ಮುಂದೆ ರಾಜಕುಮಾರನೊಬ್ಬ ಬಂದು ಮಾಟಗಾತಿಯನ್ನು ಕೊಲ್ಲುವುದು, ಚೆನ್ನ ಮೂಲರೂಪಕ್ಕೆ ಬರುವುದು, ಅನಂತರ ಚೆನ್ನಿಯನ್ನು ರಾಜಕುಮಾರ ಮದುವೆಯಾಗುವುದು-ಹೀಗೆ ಕಥೆ ಮುಕ್ತಾಯಗೊಳ್ಳುತ್ತದೆ. ಹೀಗೆ ಹೆಚ್ಚಿನ ಸಾಮ್ಯವಿರುವ ಇಂಥ ಇನ್ನೂ ಆನೇಕ ಉದಾಹರಣೆಗಳಿವೆ. ದಿ ಫ್ರಾಗ್ ಪ್ರಿನ್ಸ್‌ ಕಥೆಗೆ ನಾಗೇಂದ್ರನ ಕಥೆಯನ್ನು ಹೋಲಿಸಬಹುದು. ಪ್ರಾಣಿಯೊಂದು ರಾಜಕುಮಾರನ ರೂಪ ತಾಳುವ ಆಶಯವೇ ಇವೆರಡರದೂ. ಸಿಂಡ್ರೆಲ ತಾಯಿ ಸತ್ತ ತಬ್ಬಲಿಯಾಗಿದ್ದು, ಮಲತಾಯಿಯ ಕ್ರೂರ ಹಿಂಸೆಗೆ ಗುರಿಯಾಗಿ, ದೇವಲೋಕದಲ್ಲಿಯ ಅವಳ ತಾಯಿಯ ನೆರವಿನಲ್ಲಿ ಬೆಳೆಯುವ ಕಥೆಯೇ ಅಗಿದೆ. ಇದಕ್ಕೆ ಬೇಕಾದರೆ ಚಿಕ್ಕ ಹೊನ್ನಿ ದೊಡ್ಡ ಹೊನ್ನಿ ಕಥೆಯನ್ನೇ ಉದಾರಿಸಬಹುದು. ಹೀಗೆ ಕಟ್ಟುಕಥೆ ಒಂದು ಸಾರ್ವತ್ರಿಕ ಮಾದರಿಯಾಗಿ ಕಾಣಿಸಿಕೊಳ್ಳುತ್ತದೆ. (ನೋಡಿ - ಗ್ರಿಮ್ ಸಹೋದರರು) (ಆರ್.ಜಿ.)

ಉಲ್ಲೇಖಗಳು ಬದಲಾಯಿಸಿ