ಕಟ್ಟಿನ ಕರೆ : ಕೆಳಗಿನ ನ್ಯಾಯಪೀಠದಲ್ಲಿ ಅಥವಾ ಅರೆನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುವ ತೆರಿಗೆ ಅಧಿಕಾರಗಳ ಸಮ್ಮುಖದಲ್ಲಿ ವಿಚಾರಣೆಗೆ ಬಂದ ಮೊಕದ್ದಮೆಯ ಕಟ್ಟನ್ನು-ಎಂದರೆ ಸಂಬಂಧಪಟ್ಟ ಕಾಗದಪತ್ರಗಳನ್ನು-ಕಳುಹಿಸಿಕೊಡಬೇಕೆಂದು ಪರಮೋಚ್ಛ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯದವರು ಕೊಡುವ ಆಜ್ಞಾಪತ್ರ (ಸರ್ಷಿಯೊರೇರೈ). ಕಕ್ಷಿಗೆ ಹೆಚ್ಚು ಶೀಘ್ರವಾಗಿ ನಿಶ್ಚಿತವಾದ ನ್ಯಾಯ ದೊರಕುವಂತೆ ಅಥವಾ ತಪ್ಪು ಆಕ್ರಮಗಳನ್ನು ಸರಿಪಡಿಸುವ ಸಲುವಾಗಿ ಕೈಕೊಳ್ಳುವ ಕ್ರಮವಿದು. ಕೆಳನ್ಯಾಯಾಲಯದಲ್ಲಿ ತನಗೆ ನ್ಯಾಯ ದೊರಕಿಲ್ಲವೆಂದೋ ಅಲ್ಲಿ ನ್ಯಾಯವಾದ ವಿಚಾರಣೆಯಾಗುವುದಿಲ್ಲವೆಂದೋ ಕಕ್ಷಿಯಿಂದ ಆಕ್ಷೇಪಣೆ ಬಂದಾಗ ಹೀಗೆ ಮಾಡಬಹುದು. ಪ್ರಜೆಗಳ ಹಕ್ಕುಗಳಿಗೆ ಬಾಧೆಯಾದ ಪ್ರಶ್ನೆಗಳನ್ನು ನಿರ್ಧರಿಸುವ ಬಗ್ಗೆ ವಿಚಾರಣೆ ನಡೆಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಕಳುಹಿಸಿಕೊಡಬೇಕೆಂದು ಕೆಳಗಿನ ನ್ಯಾಯಪೀಠಕ್ಕೆ ಉಚ್ಚನ್ಯಾಯಾಲಯ ನೀಡಿದ ಆಜ್ಞೆಯಿದು-ಎಂಬುದು ಹ್ಯಾಲ್ಸ್‌ಬರಿಯ ಅಭಿಪ್ರಾಯ.

ಚಾರಿತ್ರಿಕ ಹಿನ್ನೆಲೆ

ಬದಲಾಯಿಸಿ

ದಿನದಿನಕ್ಕೆ ಸರ್ಕಾರದ ಕೆಲಸ ಕಾರ್ಯಗಳು ವಿಸ್ತಾರಗೊಳ್ಳುತ್ತವೆ. ಅದರೊಂದಿಗೆ ಕಾನೂನುಗಳೂ ನಿಯಮಗಳೂ ಹೆಚ್ಚುತ್ತಿವೆ. ಅವುಗಳ ಪಾಲನೆಗೆ ರೂಢವಾಗಿರುವ ನ್ಯಾಯಾಲಯಗಳು ಸಾಕಾಗುವುದಿಲ್ಲ. ಅದಕ್ಕಾಗಿ ಕಾನೂನುಗಳ ಮೂಲಕ ಅಧಿಕಾರಿಗಳಿಗೆ, ನ್ಯಾಯಪೀಠಗಳಿಗೆ (ಟ್ರೈಬ್ಯೂನಲ್) ನ್ಯಾಯವನ್ನು ಇತ್ಯರ್ಥಿಸುವ ಹಕ್ಕುಗಳನ್ನು ಕೊಡಲಾಗುತ್ತಿದೆ. ಅವರು ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಬರುವಂತೆ ಮಾಡಲು ಉಚ್ಚನ್ಯಾಯಾಲಯಗಳಿಗೆ ಅವರ ಕೆಲಸಕಾರ್ಯಗಳ ಮೇಲೆ ಪರಾಮರ್ಶೆ ಮಾಡುವ ಅಧಿಕಾರ ಅಗತ್ಯ. ಬ್ರಿಟನಿನಲ್ಲಿ ಈ ಅಧಿಕಾರವನ್ನು ಕಿಂಗ್ಸ್‌ ಬೆಂಚ್ಗಳು ವಿಶೇಷಾಧಿಕಾರದ ಆe್ಞÁ ಪತ್ರಗಳ ಮೂಲಕ ಸಾಧಿಸುತ್ತಿದ್ದುವು. ಇಂಗ್ಲೆಂಡಿನಲ್ಲಿ 1938ರಲ್ಲಿ ಆದ ಒಂದು ಕಾಯಿದೆಯಲ್ಲಿ ಕಟ್ಟಿನ ಕರೆ, ಪರಮಾಜ್ಞೆ (ಮ್ಯಾಂಡೇಮಸ್) ಮತ್ತು ಪ್ರತಿಬಂಧಕಾಜ್ಞೆಗಳನ್ನು ಉಚ್ಚನ್ಯಾಯಾಲಯಗಳು ಕೊಡಕೂಡದೆಂದೂ ಅವನ್ನು ಹಿಂದೆ ಕೊಡುತ್ತಿದ್ದ ಸಂದರ್ಭಗಳಲ್ಲಿ ಸೂಕ್ತ ಆದೇಶಗಳನ್ನು ಕೊಡಬೇಕೆಂದೂ ವಿಧಿಸಲಾಯಿತು. ಇದರಿಂದ ವಿಧಾನದಲ್ಲಿ ಹೆಚ್ಚು ಕಡಿಮೆ ಆಯಿತೇ ಹೊರತು ಅವುಗಳ ಸಂಬಂಧವಾಗಿರುವ ಕಾನೂನಿನಲ್ಲಿ ವಿಶೇಷವಾಗಿ ಯಾವ ವ್ಯತ್ಯಾಸವೂ ಆಗಿಲ್ಲ.[]

ಸುಪ್ರೀಂ ಕೋರ್ಟುಗಳು

ಬದಲಾಯಿಸಿ

ಭಾರತದ ಸಂವಿಧಾನ ಜಾರಿಗೆ ಬರುವ ಮೊದಲೆ ಕೋಲ್ಕತ್ತ, ಚೆನ್ನೈ ಮತ್ತು ಮುಂಬೈಯಲ್ಲಿ ಸ್ಥಾಪಿಸಲಾದ ಸುಪ್ರೀಂ ಕೋರ್ಟುಗಳು ಈ ಆಜ್ಞಾಪತ್ರಗಳನ್ನು ನೀಡುವ ಅಧಿಕಾರವನ್ನು ವಿವಿಧ ರಾಜಸನ್ನದುಗಳಿಂದ ಪಡೆದಿದ್ದುವು. ಆ ಹಕ್ಕುಗಳನ್ನು ಹೊಂದಿದ ಅಲ್ಲಿಯ ಹೈ ಕೋರ್ಟುಗಳೂ ಇವನ್ನು ಜಾರಿಮಾಡಬಹುದಾಗಿತ್ತು. ಆದರೆ ಈ ಅಧಿಕಾರ ಆ ರಾಜ್ಯಗಳ ಮುಖ್ಯ ಅಧಿಪತ್ಯದ ಪಟ್ಟಣಗಳಿಗೂ (ಪ್ರೆಸಿಡೆನ್ಸಿ ಟೌನ್ಸ್‌) ಅವುಗಳಲ್ಲಿ ನೆಲೆಸಿದವರಿಗೂ ಸೀಮಿತವಾಗಿತ್ತು.. 1877ರಲ್ಲಿ ನಿರ್ದಿಷ್ಟ ಪರಿಹಾರ ಕಾಯಿದೆಯ (ಸ್ಪೆಸಿಫಿಕ್ ರಿಲೀಫ್ ಆಕ್ಟ್‌) 50ನೆಯ ಕಲಮು ಪರಮಾಜ್ಞೆಯ ಹಕ್ಕನ್ನು ತೆಗೆದು ಅದಕ್ಕೆ ಪ್ರತಿಯಾಗಿ ಅದರ 45ನೆಯ ಕಲಂ ಪ್ರಕಾರ ಆದೇಶ ನೀಡುವ ಹಕ್ಕನ್ನಿತ್ತಿತ್ತು. 1898ರಲ್ಲಿ ಕ್ರಿಮಿನಲ್ ಪ್ರೊಸಿಜರ್ ಕೋಡಿನ 491ನೆಯ ವಿಧಿಯಲ್ಲಿ ಆಸಾಮಿ ಹಾಜರಿ ಹುಕಂ ಹಕ್ಕನ್ನು ತೆಗೆದು ಬದಲಾಗಿ ಆದೇಶ ನೀಡುವ ಹಕ್ಕನ್ನು ಕೊಡಲಾಗಿತ್ತು. 1923ರಲ್ಲಿ ಈ ಹಕ್ಕನ್ನು ಎಲ್ಲ ಹೈಕೋರ್ಟುಗಳಿಗೂ ಕೊಡಲಾಯಿತು. ಇದು ರೀತಿಯಲ್ಲಿ ಭೇದವಾದುದೇ ಹೊರತು ಹಕ್ಕಿನಲ್ಲಿ ಆದ ಹೆಚ್ಚು ಕಡಿಮೆಯಲ್ಲ. ಈಗ ಅವನ್ನೆಲ್ಲ ತೆಗೆದು ಹಾಕಲಾಗಿದೆ. ಭಾರತ ಸಂವಿಧಾನದ 32ನೆಯ ಮತ್ತು 226ನೆಯ ಅನುಚ್ಛೇದಗಳು ಕ್ರಮವಾಗಿ ಪರಮೋಚ್ಚ ಮತ್ತು ಉಚ್ಚನ್ಯಾಯಾಲಯಗಳಿಗೆ ಈ ರೀತಿಯ ಆಜ್ಞೆ ಆಥವಾ ನಿರ್ದೇಶನ ನೀಡುವ ಅಧಿಕಾರವನ್ನಿತ್ತಿದೆ. ಪರಮೋಚ್ಚ ನ್ಯಾಯಾಲಯಕ್ಕೆ ನೀಡಲಾದ ಅಧಿಕಾರದ ವ್ಯಾಪ್ತಿ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಮಾತ್ರ. ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗಲೂ ಇತರ ವಿಚಾರಗಳಲ್ಲೂ ವಿಚಾರಣೆ ನಡೆಸಲು ಉಚ್ಚನ್ಯಾಯಾಲಯಕ್ಕೆ ಅಧಿಕಾರವಿದೆ. ವಿವಿಧ ಬಗೆಯ ಆಜ್ಞೆ ಅಥವಾ ಹುಕುಮುಗಳಲ್ಲಿ (ರಿಟ್) ಕಟ್ಟಿನ ಕರೆಯಾಜ್ಞೆ ಒಂದು.[]ಕಾನೂನುಬದ್ಧ ಅಧಿಕಾರವನ್ನು ಮೀರಿ ನಡೆಯಲಾಗಿದೆಯೆಂದು ಕಂಡಾಗ ಅದರ ಅಥವಾ ವಿಚಾರಣೆಯಾದ ಇಲ್ಲವೇ ಆಗಲಿರುವ ವಿವಾದಗಳ ಕಾಗದಪತ್ರಗಳನ್ನೂ ಅವುಗಳ ಕ್ರಮಬದ್ಧತೆಯನ್ನೂ ಪರಾಮರ್ಶಿಸುವ ಉದ್ದೇಶದಿಂದ ಅವನ್ನು ಕಳುಹಿಸಿಕೊಡಬೇಕೆಂದು ಹುಕುಂ ಮಾಡಲಾಗುತ್ತದೆ.

ಕಟ್ಟಿನ ಕೆರೆಯ ಮುಖ್ಯಾಂಶಗಳು

ಬದಲಾಯಿಸಿ

ನ್ಯಾಯಾಲಯಗಳೆನಿಸಲಾರದ ಮತ್ತು ಹಾಗೆ ಮಾನ್ಯತೆ ಪಡೆಯಲಾರದ ನ್ಯಾಯಮಂಡಳಿಯ ನಡೆವಳಿಗಳನ್ನು ಅಂಕೆಯಲ್ಲಿರಿಸಿಕೊಳ್ಳಲು ಆe್ಞÁಪತ್ರಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಪ್ರಜೆಗಳ ಹಕ್ಕುಗಳಿಗೆ ಬಾಧೆ ತರುವಂಥ ಪ್ರಶ್ನೆಗಳನ್ನು ನಿರ್ಧರಿಸುವಲ್ಲಿ ಕಾನೂನು ಬದ್ಧ ಅಧಿಕಾರಿಯಾಗಲಿ, ನ್ಯಾಯಾಲಯದಂತೆ ಕಾರ್ಯ ಮಾಡಲು ಬದ್ಧವಾದ ಯಾವುದಾದರೂ ಮಂಡಳಿಯಾಗಲಿ ತನ್ನ ಕಾನೂನುಬದ್ಧ ಅಧಿಕಾರಕ್ಕೆ ಮೀರಿ ನಡೆದರೆ ಈ (ಕಟ್ಟಿನ ಕರೆ ಮತ್ತು ನಿಷೇಧಾತ್ಮಕ) ಆಜ್ಞೆಗಳ ಮೂಲಕ ಅವನ್ನು ತನ್ನ ಅಂಕೆಯಲ್ಲಿ ಇರಿಸಿಕೊಳ್ಳಲು ಉನ್ನತ ನ್ಯಾಯಾಲಯಕ್ಕೆ ಅಧಿಕಾರವಿದೆಯೆಂಬುದು ಆಟ್ಕಿನ್ ಎಲ್.ಜೆ.ನೀಡಿರುವ ಒಂದು ತೀರ್ಪಿನಲ್ಲಿ (1924) ನಿರ್ಣಯ ಮಾಡಲಾಗಿದೆ. ಆಟ್ಕಿನ್ ನಿರ್ಣಯದಲ್ಲಿ ಕಟ್ಟಿನ ಕರೆಯ ಈ ಕೆಲವು ಮುಖ್ಯ ಅಂಶಗಳು ಅಡಕವಾಗಿವೆ:

1. ಕಟ್ಟಿನ ಕರೆ ಪಡೆಯುವ ನ್ಯಾಯಮಂಡಲಿಯೆಂದರೆ ಕನಿಷ್ಠ ನ್ಯಾಯಪೀಠಗಳು ಮಾತ್ರವಲ್ಲ. ನ್ಯಾಯಾಧೀಶರಂತೆ ವರ್ತಿಸುವ ಹೊಣೆಯುಳ್ಳ ವ್ಯಕ್ತಿ, ಮಂಡಲಿ ಅಥವಾ ಅಧಿಕಾರಿಯನ್ನು ಇದರಲ್ಲಿ ಸೇರಿಸಬೇಕು, ಸ್ಥಳೀಯ ಮಂಡಳಿ, ಕಾನೂನಿನ ಪ್ರಕಾರ ಏರ್ಪಟ್ಟ ಮಂಡಲಿ, ಅಧಿಕಾರಿ, ಮಂತ್ರಿ, ಸರಕಾರದ ವಿವಿಧ ಭಾಗಗಳು-ಮುಂತಾದವುಗಳ ಮೇಲೆ ಇದನ್ನು ಪ್ರಯೋಗಿಸಲಾಗಿದೆ. ಅದರೆ ಹೀಗೆ ಕಟ್ಟಿನ ಕರೆ ಪಡೆಯುವ ವ್ಯಕ್ತಿ ಅಥವಾ ಮಂಡಳಿ ಅಥವಾ ಅಧಿಕಾರಿ, ಆಜ್ಞೆ ನೀಡುವ ಉಚ್ಚನ್ಯಾಯಾಲಯಕ್ಕೆ ಕೆಳಗಿರಬೇಕು; ಅಲ್ಲದೆ ಉಚ್ಚನ್ಯಾಯಾಲಯದ ಆಡಳಿತದ ಅಥವಾ (ಭಾರತದಲ್ಲಿ) ಕ್ರಮದ ಕಾರಣದ (ಲಾಸ್ ಆಫ್ ಆಕ್ಷನ್) ವ್ಯಾಪ್ತಿಯೊಳಗೆ ಬರಬೇಕು. ಆದರೆ ಇದನ್ನು ಧರ್ಮಕ್ಕೆ ಸಂಬಂಧಿಸಿದ ನ್ಯಾಯಾಲಯಗಳಿಗೆ ಅನ್ವಯಿಸಲಾಗುವುದಿಲ್ಲ.

2. ಕಟ್ಟಿನ ಕರೆಯನ್ನು ಖಾಸಗಿ (ಪ್ರೈವೇಟ್) ನ್ಯಾಯಮಂಡಲಿಗೆ ಕೊಡಲು ಸಾಧ್ಯವಿಲ್ಲ. ಖಾಸಗಿ ಒಪ್ಪಂದದ ಪ್ರಕಾರ ಕಾನೂನುಬದ್ಧ ಪಂಚಾಯಿತಿದಾರನ ನಿಷ್ಕರ್ಷೆಗೆ ಒಂದು ವಿಚಾರವನ್ನು ಬಿಟ್ಟಲ್ಲಿ ಅಲ್ಲಿ ಕಟ್ಟಿನ ಕರೆ ನೀಡಬಹುದಾದರೂ ಕಾನೂನುಬದ್ಧ ಅಧಿಕಾರವಿಲ್ಲದ ಪಂಚಾಯಿತಿದಾರನಿಗೆ ಅಥವಾ ಮಂಡಲಿಗೆ ಕಟ್ಟಪ್ಪಣೆಯನ್ನು ವಿಧಿಸಲಾಗುವುದಿಲ್ಲ. ಒಂದು ಊರಿನವರು ಒಟ್ಟಾಗಿ ತಮ್ಮ ವಿವಾದಗಳನ್ನೆಲ್ಲ ತೀರಿಸಲು ಒಂದು ಸಮಿತಿ ಮಾಡಿ ವಿವಾದಗಳನ್ನು ಅದಕ್ಕೊಪ್ಪಿಸಬಹುದು, ಅಂಥ ಸಮಿತಿ ಕಾನೂನುಬದ್ಧವಲ್ಲವಾದ್ದರಿಂದ ಅದಕ್ಕೆ ಕಟ್ಟಿನ ಕರೆ ಆಜ್ಞೆ ನೀಡಲು ಸಾಧ್ಯವಿಲ್ಲ.

3. ಪ್ರಜೆಗಳ ಹಕ್ಕುಗಳಿಗೆ ಬಾಧೆ ತರುವಂಥ ಪ್ರಶ್ನೆಗಳನ್ನು ನಿರ್ಧರಿಸಲು ಕಟ್ಟಿನಕರೆ ನೀಡಬಹುದು. ಕಟ್ಟಿನ ಕರೆ ಪಡೆಯುವ ನ್ಯಾಯಮಂಡಲಿಯೇ ಮುಂತಾದವಕ್ಕೆ ಪ್ರಜೆಗಳ ಹಕ್ಕುಗಳ ವಿಚಾರವಾಗಿ ನಿರ್ಧಾರ ಕೈಕೊಳ್ಳುವ ಅಧಿಕಾರವಿರಬೇಕು. ಹಕ್ಕುಗಳು ಎಂಬ ಪದಕ್ಕೆ ಇಲ್ಲಿ ವಿಶಾಲವಾದ ಅರ್ಥವಿದೆ. ಹಕ್ಕುಗಳು ವೈಯುಕ್ತಿಕ ಸ್ವಾತಂತ್ರ್ಯ ಅಥವಾ ಸ್ಥಿತಿಗೆ ಸಂಬಂಧಸಿದ್ದಾಗಿ ಇರಬಹುದು; ಅಥವಾ ಅವು ಒಡೆತನಕ್ಕೆ ಅಥವಾ ಹಣಕಾಸಿಗೆ ಅಥವಾ ಕರಾರುಗಳಿಗೆ ಸಂಬಂಧಿಸಿದವುಗಳಾಗಿರಬಹುದು.

4. ನ್ಯಾಯಾಲಯದಂತೆ ನಿರ್ವಹಿಸಬೇಕಾದ ಕಾರ್ಯಗಳಿಗೆಲ್ಲ ಇದು ವ್ಯಾಪಿಸುತ್ತದೆ. ಯಾವುದು ನ್ಯಾಯಾಲಯದ ಅಥವಾ ನ್ಯಾಯಾಧೀಶರಂತೆ ಮಾಡಿದ ಕಾರ್ಯ, ಯಾವ ಅಂಶಗಳಿದ್ದಲ್ಲಿ ಆ ಕಾರ್ಯವಾಗುತ್ತದೆ-ಎಂಬುದಕ್ಕೆ ಖಚಿತವಾದ ಉತ್ತರವಿನ್ನೂ ಸಿಕ್ಕಿಲ್ಲ. ಒಂದು ಕೃತಿ ನ್ಯಾಯಾಲಯದ (ಜುಡಿಷಿಯಲ್) ಅರೆನ್ಯಾಯಾಲಯದ (ಕ್ವಾಸೈಜುಡುಷಿಯಲ್) ತೀರ್ಪು ಹೌದೋ ಅಲ್ಲವೋ ಎಂಬುದನ್ನು ನಿರ್ಣಯಿಸಲು ಜಸ್ಟಿಸ್ ಎಸ್.ಕೆ.ದಾಸ್ ನೀಡಿರುವ ಸೂತ್ರಗಳು (1959) ಉಲ್ಲೇಖಾರ್ಹ, ಇಬ್ಬರೊಳಗೆ ವಿವಾದವಿದೆಯೆ? ಯಾವುದಾದರೊಂದು ಹಕ್ಕುಸಾಧನೆ ಕೇಳಿಕೆ (ಕ್ಲೇಮ್) ಇದೆಯೆ ಮತ್ತು ಅದಕ್ಕೆ ವಿರೋಧವಿದೆಯೇ? ತೀರ್ಪು ನೀಡಲು ಪುರಾವೆಗಳನ್ನು ತೆಗೆದುಕೊಳ್ಳಬೇಕೆ ಅಥವಾ ಪ್ರಮಾಣಪತ್ರದಿಂದ (ಆಫಿಡೇವಿಟ್) ನಿರ್ಧರಿಸಬೇಕೆ? ತೀರ್ಪು ಸಂಪುರ್ಣವಾಗಿ ಅಥವಾ ಭಾಗಶಃ ಯಾವುದಾದರೂ ಕಾರ್ಯನೀತಿ (ಪಾಲಿಸಿ) ಅಥವಾ ಸಮಯೌಚಿತ್ಯದೃಷ್ಟಿಯಿಂದ (ಎಕ್ಸ್‌ಪೀಡಿಯೆನ್ಸಿ) ಪ್ರಚೋದಿತವೆ? ಹಾಗಿದ್ದಲ್ಲಿ ತೀರ್ಪು ನೀಡುವಲ್ಲಿ ಪ್ರಸ್ತಾಪ (ಪ್ರಪೋಸಲ್), ವಿರೋಧ ಮತ್ತು ಪುರಾವೆಗಳನ್ನು ನೋಡಬೇಕೆ? ತೀರ್ಪು ನೀಡುವಾಗ ಮಂಡಲಿ ಕಾರ್ಯನೀತಿ ಅಥವಾ ಸಮಯೋಚಿತ್ಯವನ್ನು ಮಾತ್ರ ನೋಡಬೇಕೆ, ಅದರ ಮುಂದೆ ಯಾವ ರೀತಿಯ ಮೊಕದ್ದಮೆಯೂ ಇಲ್ಲವೆ? ಪರಿಶೀಲನೆಗೆ ಒಳಗಾದ ಮಂಡಲಿ, ಅಧಿಕಾರಿ ಅಥವಾ ವ್ಯಕ್ತಿಗೆ ನ್ಯಾಯಾಲಯ ಅಥವಾ ಅರೆನ್ಯಾಯಾಲಯದಂತೆ ವರ್ತಿಸಬೇಕಾದ ಬಾಧ್ಯತೆ ಇದೆಯೆ ಇಲ್ಲವೆ? ಈ ಮೊದಲಾದ ಸಮಸ್ಯೆಗಳನ್ನು ತೀರ್ಮಾನಿಸಲು ಈ ಅಂಶಗಳನ್ನು ಗಮನಿಸಬೇಕು. ಕೇವಲ ಆಡಳಿತ ಸಂಬಂಧವಾದ ತೀರ್ಪುಗಳ ಬಗ್ಗೆ ಕಟ್ಟಿನ ಕರೆ ಆಜ್ಞೆ ಸಾಧ್ಯವಿಲ್ಲ.

6. ಕಾನೂನುಬದ್ಧ ಅಧಿಕಾರಕ್ಕೆ ಮೀರಿ ನಡೆದರೆ: ನ್ಯಾಯಪೀಠ, ಮಂಡಲಿ ಅಥವಾ ಅಧಿಕಾರಿ ಯಾವ ಅಧಿಕಾರವೂ ಇಲ್ಲದೆ ನಡೆದಾಗ, ಸ್ವಾಭಾವಿಕ ನ್ಯಾಯಕ್ಕೆ (ನ್ಯಾಚುರಲ್ ಜಸ್ಟಿಸ್) ವಿರೋಧ ಮಾಡಿದಾಗ, ತನಗೆ ಕೊಟ್ಟ ಅಧಿಕಾರವನ್ನು ಉಪಯೋಗಿಸದಿದ್ದಾಗ, ಹೀಗಾಗಿದೆಯೆಂದು ಕಾಗದಪತ್ರಗಳಲ್ಲಿ ಮೇಲುನೋಟಕ್ಕೆ ಕಂಡುಬಂದರೆ ಉಚ್ಚನ್ಯಾಯಾಲಯ ಅವನ್ನು ತಿದ್ದಲು ಕಟ್ಟಿನ ಕರೆ ಆಜ್ಞೆ ನೀಡಬಹುದು.

7. ಭಾರತದಲ್ಲಿ ಕಟ್ಟಿನ ಕರೆ ಆಜ್ಞೆಯನ್ನು ರೂಢವಾಗಿರುವ ನ್ಯಾಯಾಲಯಗಳ ಮೇಲೆ ಕೊಡವುದಿಲ್ಲವೆಂಬುದು ಗಮನಿಸಬೇಕಾದ ಮುಖ್ಯ ಅಂಶ. ನ್ಯಾಯಾಲಯ ವೆನಿಸಿಕೊಳ್ಳದ ಮತ್ತು ಹಾಗೆ ಮಾನ್ಯತೆ ಪಡೆಯದ ನ್ಯಾಯಮಂಡಲಿ, ಅಧಿಕಾರಿ ಅಥವಾ ವ್ಯಕ್ತಿಯ ಕಾರ್ಯದ ಮೇಲೆ ಅದನ್ನು ಪ್ರಯೋಗಿಸಲಾಗುತ್ತದೆ. ಇವು ಅಥವಾ ಇವರು ನ್ಯಾಯಾಲಯ ಅಥವಾ ಅರೆನ್ಯಾಯಾಲಯದಂತೆ ವರ್ತಿಸಿದ ವಿಚಾರಗಳಲ್ಲಿ ಕಟ್ಟಿನ ಕರೆ ವಿಧಿಸಬಹುದು.

ಭಾರತದ ಸಂವಿಧಾನದಲ್ಲಿ

ಬದಲಾಯಿಸಿ

ಭಾರತದ ಸಂವಿಧಾನದ 32 ಮತ್ತು 226ನೆಯ ಅನುಚ್ಛೇದಗಳು ಕ್ರಮವಾಗಿ ಪರಮೋಚ್ಚ ನ್ಯಾಯಾಲಯಕ್ಕೂ ಉಚ್ಚನ್ಯಾಯಾಲಯಕ್ಕೂ ಪ್ರಚಲಿತವಿರುವ ಇತರ ಆಜ್ಞೆಗಳೊಡನೆ ಕಟ್ಟಿನ ಕರೆಯಾಜ್ಞೆಯ ಹಕ್ಕನ್ನೂ ಕೊಟ್ಟಿವೆ. ಪ್ರಜೆಯ ಹಕ್ಕುಗಳನ್ನು ಜಾರಿಗೆ ತರುವ ಉದ್ದೇಶದಿಂದ ಇವನ್ನು ವಿಧಿಸಿರುವುದರಿಂದ ಇವಕ್ಕೆ ಮೂಲತಃ ಹಕ್ಕು ಇರಬೇಕಾದ್ದು ಆವಶ್ಯ.226ನೆಯ ಅನುಚ್ಛೇದದ ವ್ಯಾಪ್ತಿಯ ವಿಚಾರವಾಗಿ ಕೆಳಗಿನ ನ್ಯಾಯಪೀಠಗಳು ಅಥವಾ ಮಂಡಳಿಗಳು ಅಥವಾ ಅಧಿಕಾರಿಗಳು ತಮಗೇನೂ ಕ್ಷೇತ್ರಾಧಿಕಾರವಿಲ್ಲದೆ ಅಥವಾ ತಮ್ಮ ಕ್ಷೇತ್ರಾಧಿಕಾರವನ್ನು ಮೀರಿ ಅಥವಾ ಸ್ವಾಭಾವಿಕ ನ್ಯಾಯಕ್ಕೆ ವಿರೋಧವಾಗಿ ಅಧಿಕಾರವನ್ನು ಉಪಯೋಗಿಸಿದ್ದರೆ, ಇಲ್ಲವೇ ಕಾಗದಪತ್ರಗಳಲ್ಲಿ ಮೇಲ್ನೋಟಕ್ಕೆ ವ್ಯಕ್ತವಾಗುವ ತಪ್ಪುಗಳಿದ್ದರೆ ಮತ್ತು ಆ ಕೃತಿ ಅಥವಾ ನಿಪ್ಕೃತಿಯಿಂದಾಗಿ ಅಥವಾ ಮೀರಿದ ನಡೆವಳಿ ಯಿಂದಾಗಿ ಅನ್ಯಾಯವಾಗಿದೆಯೆಂಬುದು ಸ್ಪಷ್ಟವಾಗಿದ್ದರೆ ಅಂಥ ಗಂಭೀರ ಪರಿಸ್ಥಿತಿಯಲ್ಲಿ 226ನೆಯ ಅನುಚ್ಛೇದದಲ್ಲಿ ಹೇಳಿರುವಂತೆ ಆe್ಞÁಪತ್ರ ಜಾರಿ ಮಾಡಲು ಹಕ್ಕು ಕೊಡುವುದು ಉದ್ದೇಶವೆಂಬುದಾಗಿ ಭಾರತದ ಪರಮೋಚ್ಚ ನ್ಯಾಯಾಲಯದ ಒಂದು ತೀರ್ಪಿನಲ್ಲಿ (ಎ.ಪಿ.ಆರ್.1952 ಎಸ್.ಸಿ.192) ವಿವರಿಸಲಾಗಿದೆ.

ಇಂಗ್ಲಿಷ್ ಪದ್ಧತಿ

ಬದಲಾಯಿಸಿ

32 ಮತ್ತು 226ನೆಯ ಅನುಚ್ಛೇದಗಳು ಇಂಗ್ಲಿಷ್ ನ್ಯಾಯದ ಆಜ್ಞೆಗಳ ಸ್ವರೂಪದಂತೆಯೇ ಇರುವುವಾದರೂ ನಾವು ಇವುಗಳ ವಿಚಾರದಲ್ಲಿ ಇಂಗ್ಲಿಷ್ ಪದ್ಧತಿಯಲ್ಲಿ ಕೈಗೊಳ್ಳುವ ವಿಶೇಷ ಕ್ರಮವೇ ಮುಂತಾದವನ್ನೇ ಅನುಸರಿಸಬೇಕೆಂದಿಲ್ಲ. ನಾವು ಸಮರ್ಪಕವಾದ ವಿಚಾರಗಳಲ್ಲಿ ಇರುವ ಇಂಗ್ಲಿಷ್ ಮೂಲತತ್ತ್ವಗಳನ್ನು ಇರಿಸಿಕೊಂಡಲ್ಲಿ ನಾವು ಸಮರ್ಪಕವಾದ ವಿಚಾರಗಳಲ್ಲಿ ಸಮರ್ಪಕವಾದ ಆದೇಶ ಅಥವಾ ಕಟ್ಟಿನ ಕರೆಯಾಜ್ಞೆ ಕೊಡಬಲ್ಲೆವು ಎಂಬುದು ಜಸ್ಟಿಸ್ ಮುಖರ್ಜಿ ನೀಡಿರುವ ಒಂದು ತೀರ್ಪು (1955 ಎಸ್.ಸಿ.ಜೆ. 695). ಆದ್ದರಿಂದ ಕಟ್ಟಿನ ಕರೆ ಆಜ್ಞೆ ನೀಡುವಾಗ ಭಾರತದ ನ್ಯಾಯಾಲಯಗಳು ಇಂಗ್ಲಿಷ್ ನ್ಯಾಯಾಲಯದಲ್ಲಿ ಈ ಬಗ್ಗೆ ಇರತಕ್ಕ ಮೂಲತತ್ತ್ವಗಳನ್ನು ಇರಿಸಿಕೊಳ್ಳಬೇಕಾಗುತ್ತದೆ.

ಪರಮೋಚ್ಚ ನ್ಯಾಯಾಲಯ

ಬದಲಾಯಿಸಿ

32ನೆಯ ಅನುಚ್ಛೇದದ ಪ್ರಕಾರ ಪರಮೋಚ್ಚ ನ್ಯಾಯಾಲಯ ಭಾರತಾದ್ಯಂತ ಈ ಆಜ್ಞೆಗಳನ್ನು ಜಾರಿಮಾಡಬಹುದು. ಆದರೆ ಅವು ಮೂಲಭೂತ ವಿಚಾರಗಳಲ್ಲಿ ಮಾತ್ರ. 15ನೆಯ ತಿದ್ದುಪಡಿಗೆ ಮುಂಚೆ ಸಂವಿಧಾನದ 226ನೆಯ ಅನುಚ್ಛೇದದ ಎರಡು ತಡೆಗಳಿಂದ ಕೂಡಿತ್ತು. ಒಂದನೆಯದು, ಉಚ್ಚ ನ್ಯಾಯಾಲಯಗಳು ತಮ್ಮ ಕ್ಷೇತ್ರಾಧಿಕಾರಿಗಳೊಳಗೆ ಮಾತ್ರ, ಅವುಗಳ ಒಳಗಿನ ಆಧಿಕಾರಿಗಳಿಗೆ ಅಥವಾ ಮಂಡಲಿಗಳಿಗೆ ಮಾತ್ರ ಆಜ್ಞೆ ನೀಡಬಹುದಿತ್ತು. ಕ್ರಮದ ಕಾರಣ ಉಚ್ಚನ್ಯಾಯಾಲಯದ ಅಧಿಕಾರ ಕ್ಷೇತ್ರದಲ್ಲಿದ್ದರೆ 226ನೆಯ ಅನುಚ್ಛೇದ ಕೊಟ್ಟಿರುವ ವಿಸ್ತಾರವಾದ ಹಕ್ಕುಗಳನ್ನು ಅನುಲಕ್ಷಿಸಿ ಅಲ್ಲಿ ಹೇಳಿದ ಆಜ್ಞೆ ಅಥವಾ ನಿರ್ದೇಶನಗಳನ್ನಲ್ಲದೆ (ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದುದು ಮಾತ್ರವಲ್ಲದೆ), ಯಾವ ಆದೇಶ ಅಥವಾ ಸೂಚನೆಗಳನ್ನು ಯಾರ ಮೇಲಾಗಲಿ ಯಾವ ವಿಚಾರದಲ್ಲಾಗಲಿ ಕೊಡಬಹುದೆಂದು ವಾದಿಸಲಾಯಿತು. ಆ ಅನುಚ್ಛೇದವನ್ನು ಅಕ್ಷರಶಃ ತೆಗೆದುಕೊಂಡು ಅದಕ್ಕೆ ಆಷ್ಟೊಂದು ವ್ಯಾಪಕ ಅರ್ಥವನ್ನು ಕೊಡಕೂಡದೆಂದು ತೀರ್ಪು ನೀಡಲಾಗಿದೆ. ಯಾವ ವಿಚಾರದಲ್ಲಾಗಲಿ ಎಂಬುದನ್ನು ಸ್ಥಾಪಿತವಾದ ತತ್ತ್ವಗಳ ಪ್ರಕಾರ ಅರ್ಥ ಮಾಡಬೇಕು. ಇದು ಆಜ್ಞೆಗಳಿಗೂ ಆದೇಶಗಳಿಗೂ ಅನ್ವಯಿಸುತ್ತದೆ. 226ನೆಯ ಅನುಚ್ಛೇದ ಸಾಮಾನ್ಯವಾಗಿ ಪರಿಹಾರ (ರಿಲೀಫ್) ಹೊಂದಲು ಇರುವ ಅರ್ಜಿ ಅಥವಾ ವ್ಯಾಜ್ಯಗಳ ಬದಲಾಗಿ ಉಪಯೋಗಿಸಲು ಸಾಧನವಲ್ಲ. ನ್ಯಾಯಾಧೀಶರಂತೆ ಮಾಡಿದ ಕೆಲಸವನ್ನು ಮೇಲಿಂದ ವಿಚಾರಣೆ ಮಾಡಲು ಮಾತ್ರ ಕಟ್ಟಿನ ಕರೆಯನ್ನು ಉಪಯೋಗಿಸಲಾಗುವುದು.

ಮೂಲಭೂತ ಹಕ್ಕು

ಬದಲಾಯಿಸಿ

32ನೆಯ ಅನುಚ್ಛೇದದ ಪ್ರಕಾರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಅಥವಾ ಚ್ಯುತಿಯ ಹೆದರಿಕೆ ಇದ್ದರೆ ಅರ್ಜಿದಾರ ತಕ್ಕ ಪರಿಹಾರ ಪಡೆಯಲು ಅರ್ಹನಾಗಿರುವುದೂ ಅವನ ಹಕ್ಕೆಂದು ಒಂದು ತೀರ್ಪಿನಲ್ಲಿ ಹೇಳಲಾಗಿದೆ. ಪರಿಹಾರ ಪಡೆಯುವ ಬೇರೆ ವಿಧಾನಗಳಿದ್ದರೂ ಮೇಲೆ ಹೇಳಿದ ಸಂದರ್ಭದಲ್ಲಿ ಅರ್ಜಿದಾರ ತಕ್ಕ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ. ಕೆಲವು ಮೊಕ್ಕದ್ದಮೆಗಳಲ್ಲಿ ಇದಕ್ಕೆ ವಿರೋಧವಾದ ಅಭಿಪ್ರಾಯ ವ್ಯಕ್ತವಾಗಿದ್ದರೂ ಅದು ಸರಿಯಲ್ಲ. 226ನೆಯ ಅನುಚ್ಛೇದದಲ್ಲಿ ಮೂಲಭೂತ ಹಕ್ಕುಗಳನ್ನು ಸಾಧಿಸುವ ವಿಚಾರವನ್ನು ಹಕ್ಕಾಗಿ ಕೊಟ್ಟಿಲ್ಲ. ಆದರೆ ಅದರ ಪ್ರಕಾರ ಮೂಲಭೂತ ಹಕ್ಕಿನ ವಿಚಾರದಲ್ಲಿ ಮಾತ್ರವಲ್ಲದೆ ಬೇರೆ ವಿಚಾರದಲ್ಲೂ ಆಜ್ಞೆ ಜಾರಿ ಮಾಡುವ ಹಕ್ಕಿದೆ. ಪರಿಹಾರ ನೀಡುವುದು ಉಚ್ಚನ್ಯಾಯಾಲಯದ ವಿವೇಚನೆಗೆ (ಡಿಸ್ಕ್ರಿಷನ್) ಒಳಪಟ್ಟ ಹಕ್ಕು. 32ನೆಯ ಮತ್ತು 226ನೆಯ ಅನುಚ್ಛೇದಗಳ ಪ್ರಕಾರ ನೀಡಲಾದ ಹಕ್ಕುಗಳನ್ನು ಕಾನೂನು ಪ್ರಕಾರ ತಿದ್ದುಪಡಿ ಮಾಡದೆ ಮೊಟಕು ಮಾಡುವುದು ಯಾವ ರೀತಿಯಿಂದಲೂ ಅಸಾಧ್ಯ. 32 ಮತ್ತು 226ನೆಯ ಅನುಚ್ಛೇದಗಳ ಪ್ರಕಾರ ಕಾಯಿದೆಗಳು ಅಸಿಂಧುವೆಂದು ಸಾರುವ ಹಕ್ಕುಗಳೂ ಇರುತ್ತವೆ. ಆದರೆ ಇಂಗ್ಲೆಂಡಿನಲ್ಲಿ ಇದು ಸಾಧ್ಯವಿಲ್ಲ. ಈ ಅನುಚ್ಛೇದಗಳಲ್ಲಿ ಕೊಟ್ಟ ಹಕ್ಕುಗಳನ್ನು ಸಾಮಾನ್ಯವಾಗಿ ಯಾವ ಕಾಯಿದೆಯೂ ಕಿತ್ತುಕೊಳ್ಳಲಾರವಾದರೂ ಅವನ್ನು ಕ್ರಮಬದ್ಧಪಡಿಸ (ರೆಗ್ಯುಲೇಟ್) ಬಹುದು. ಈ ವಿಧಾನದಿಂದ ಪುರ್ವನ್ಯಾಯದ ತತ್ತ್ವವನ್ನು ಈ ಅನುಚ್ಛೇದಗಳ ನ್ಯಾಯವಿಮರ್ಶೆಯಲ್ಲಿ ತೆಗೆದುಕೊಳ್ಳಲಾಗಿದೆ.ಆದರೆ 226ನೆಯ ಅನುಚ್ಛೇದವನ್ನು ಅತಿ ಅಗತ್ಯವಾದ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸಬೇಕಾದುದರಿಂದ ನ್ಯಾಯಾಲಯಗಳು ಆಜ್ಞೆ ಕೊಡುವಾಗ ಕೆಲವು ನಿರ್ಬಂಧಗಳನ್ನು ತಾವಾಗಿ ಇಟ್ಟುಕೊಂಡಿವೆ. ಇನ್ನೊಂದು ಪರಿಹಾರವಿದ್ದಲ್ಲಿ, ವಿನಾ ಕಾರಣ ಪರಿಹಾರ ಕೇಳಲು ವಿಳಂಬ ಮಾಡಿದ್ದರೆ, ಪರಿಹಾರ ಹೊಂದಲು ಅರ್ಹನಾಗದಷ್ಟು ಅವನ ನಡೆವಳಿಕೆ ಸರಿಯಿಲ್ಲದಿದ್ದರೆ, ವಾಸ್ತವಾಂಶದ ಬಗ್ಗೆ ವ್ಯಾಜ್ಯ (ಡಿಸ್ಟ್ಯೂಟ್ ಆಸ್ ಟು ಕ್ವೆಶ್ಚನ್ ಆಫ್ ಫ್ಯಾಕ್ಟ್‌) ಆಗಿದ್ದರೆ,-ಇಂಥ ಕಾರಣಗಳಿಗೆ ಉಚ್ಚನ್ಯಾಯಾಲಯ 226ನೆಯ ಅನುಚ್ಛೇದದ ಪ್ರಕಾರ ಪರಿಹಾರ ಕೊಡಲು ನಿರಾಕರಿಸಿದೆ.

ಕಟ್ಟಿನ ಕರೆಯಾಜ್ಞೆ

ಬದಲಾಯಿಸಿ

ಕಟ್ಟಿನ ಕರೆಯಾಜ್ಞೆ ನೀಡುವ ವಿಚಾರವನ್ನು ವಿಮರ್ಶಿಸುವಾಗ ನ್ಯಾಯಾಲಯಗಳು ಅಪೀಲುಗಳಲ್ಲಿ ಅನುಸರಿಸುವ ವಿಧಾನವನ್ನು ಅನುಸರಿಸುವುದಿಲ್ಲ. ರುಜುವಾತುಗಳಿಂದ ಕೆಳಗೆ ತೀರ್ಮಾನಿಸಲಾದ ವಿಚಾರಗಳನ್ನು ತನಿಖೆ ಮಾಡುವುದಿಲ್ಲ. ಹಕ್ಕನ್ನು ನಿರ್ಧರಿಸುವುದಿಲ್ಲ. ಇದ್ದ ಹಕ್ಕನ್ನು ಊರ್ಜಿತಗೊಳಿಸಿ ಅಪ್ಪಣೆ ಕೊಡುತ್ತದೆ. ಸಿವಿಲ್ ಹಕ್ಕುಗಳನ್ನು ಪ್ರತಿಪಾದನೆ ಮಾಡಲು ಕ್ರಮವಿಹಿತವಾಗಿ ಏರ್ಪಡಿಸಿದ ನ್ಯಾಯಾಲಯಗಳೂ ಕಾನೂನುಗಳೂ ಇರುವುದರಿಂದ, ಭಾರತದ ಸಂವಿಧಾನದಲ್ಲಿ ಅದನ್ನು ಬಾಹಿರಪಡಿಸದಿದ್ದರೂ ಕಟ್ಟಿನ ಕರೆಯ ಕ್ರಮವನ್ನು ಅವಕ್ಕೆ ಉಪಯೋಗಿಸಿರುವುದಿಲ್ಲ. ಕ್ರಿಮಿನಲ್ ಮೊಕದ್ದಮೆಗಳಲ್ಲಿ ರಾಜ್ಯ ಸಂವಿಧಾನಕ್ಕೆ ವಿರೋಧವಾಗಿದ್ದರೆ ಅಥವಾ ಯಾವುದಾದರೂ ನಿಬಂಧನೆಯ (ರೆಗ್ಯುಲೇಷನ್) ಉಲ್ಲಂಘನೆಯಾಗಿದ್ದು, ಅದರ ಪ್ರಕಾರ ಆಪಾದನೆಯಾಗಿದ್ದು, ಆ ನಿಬಂಧನೆಯೇ ಕಾನೂನಿನ ಅಧಿಕಾರವ್ಯಾಪ್ತಿಗೆ ಮೀರಿದ್ದಾಗಿದ್ದರೆ (ಅಲ್ಟ್ರಾವೈರಿಸ್) ಅಂಥ ಸಂದರ್ಭದಲ್ಲಿ ಕಟ್ಟಿನ ಕರೆಯಾಜ್ಞೆ ಜಾರಿ ಮಾಡಬಹುದು. ಆಪೀಲು ಮುಂತಾದ ಕ್ರಮಗಳು ಇರುವುದರಿಂದ ಕಟ್ಟಿನ ಕರೆಯ ಕ್ರಮವನ್ನು ಕ್ರಿಮಿನಲ್ ಮೊಕದ್ದಮೆಗಳಲ್ಲೂ ಉಪಯೋಗಿಸುವುದು ಅಪರೂಪವಾಗಿದೆ. ಕಟ್ಟಿ ಕರೆಯಾಜ್ಞೆಯನ್ನು ಪಾಲಿಸದಿದ್ದಲ್ಲಿ ಅಂಥವರು ನ್ಯಾಯಾಲಯದ ಅವಜ್ಞೆಯ (ಕಂಟೆಮ್ಟ್‌ ಆಫ್ ಕೋರ್ಟ್) ತಪ್ಪಿಗೆ ಗುರಿಯಾಗುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-07-02. Retrieved 2016-10-24.
  2. http://vijaykarnataka.indiatimes.com/district/kalaburagi/-/articleshow/28940060.cms