ಕಟ್ಟಳೆಗಳು, ಶೈಕ್ಷಣಿಕ

ಕಟ್ಟಳೆಗಳು, ಶೈಕ್ಷಣಿಕ : ಸಾರ್ವಜನಿಕ ಶಿಕ್ಷಣದ ಯಾವುದಾದರೂ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂದಿಗಂದಿಗೆ ರೂಪುಗೊಂಡು ಸದ್ಯದಲ್ಲಿ ಆಚರಣೆಯಲ್ಲಿರುವ ಶಾಸನ, ಅಧಿಕೃತ ಆಜ್ಞೆ, ವ್ಯವಹಾರ ವಿಧಿ, ಕಾನೂನು ಬದ್ಧ ಸಾಂಪ್ರದಾಯಿಕ ನಿಬಂಧನೆ, ಲಿಖಿತಸೂತ್ರ ಇತ್ಯಾದಿಗಳನ್ನು ಸಂಗ್ರಹಿಸಿ ವ್ಯವಸ್ಥಿತ ರೀತಿಯಲ್ಲಿ ಜೋಡಿಸಿರುವ ನಿಯಮಾವಳಿ (ಕೋಡ್ಸ್‌, ಎಜುಕೇಷನಲ್). ಉದಾ: ಶಾಲೆಯ ಮಕ್ಕಳ ನಡೆವಳಿಕೆಗೆ ಸಂಬಂಧಿಸಿದ ಶಾಲೆಯ ಕಟ್ಟಳೆ, ಖಾಸಗಿ ಮತ್ತು ಸ್ಥಳೀಯ ಸರ್ಕಾರದ ಶಿಕ್ಷಣ ಸಂಸ್ಥೆಗಳಿಗೆ ಸಹಾಯಧನ ನೀಡಲು ಆಧಾರವೆನಿಸಿಸುವ ಸಹಾಯಕ ಅನುದಾನ ಕಟ್ಟಳೆ, ಇತ್ಯಾದಿ. ಕೆಲವು ವೇಳೆ ರಾಜ್ಯವೊಂದರ ಶಿಕ್ಷಣ ಕ್ಷೇತ್ರದಲ್ಲಿ ಆಚರಣೆಯಲ್ಲಿರುವ ಸಮಗ್ರ ವಿಧಿನಿಯಮಾದಿಗಳಿಗೆಲ್ಲ ಒಟ್ಟಿಗೆ ಈ ಹೆಸರನ್ನು ಬಳಸುವುದುಂಟು. ಆ ಕಾನೂನುಗಳು ಅಧಿಕೃತವಾಗಿ ಹೊರಟವಾಗಿರ ಬಹುದು, ಅನಧಿಕೃತವಾಗಿದ್ದು ಆಚರಣೆಯಲ್ಲಿರತಕ್ಕವೂ ಆಗಿರಬಹುದು. ಆದರೆ ಅವೆಲ್ಲ ಲಿಖಿತರೂಪದಲ್ಲಿರತಕ್ಕವೇ ಆಗಿರಬೇಕು. ಹಾಗೆ ಸಂಗ್ರಹಿಸತಕ್ಕ ಕಟ್ಟಳೆ ಸಾರ್ವಜನಿಕ ಶಿಕ್ಷಣದ ಒಂದು ವಿಶಾಲ ಕ್ಷೇತ್ರಕ್ಕೆ ಸಂಬಂಧಿಸಿರಬಹುದು (ಉದಾ: ಶೈಕ್ಷಣಿಕ ಹಣಕಾಸಿನ ಕಟ್ಟಳೆ) ಅಥವಾ ಅದರ ಒಂದು ಸಂಕುಚಿತ ಕ್ಷೇತ್ರಕ್ಕೆ ಸಂಬಂಧಿಸಿರಬಹುದು (ಉದಾ: ಪರೀಕ್ಷೆಗೆ ಸಂಬಂಧಿಸಿದ ಕಟ್ಟಳೆ). ಯಾವ ಕ್ಷೇತ್ರಕ್ಕೆ ಸಂಬಂಧಿಸಿದವೇ ಆಗಲಿ ಅವೆಲ್ಲ ಲಿಖಿತ ರೂಪದಲ್ಲಿದ್ದು, ಆ ಕ್ಷೇತ್ರದ ಶೈಕ್ಷಣಿಕ ಕಾರ್ಯಾಚರಣೆಗೂ ಕಾರ್ಯಕ್ರಮಗಳಿಗೂ ಸಮಗ್ರತೆಯನ್ನೂ ಸಂಬದ್ಧತೆಯನ್ನೂ ತರುವ ರೂಪದಲ್ಲಿರುತ್ತವೆ. ಶೈಕ್ಷಣಿಕ ಕಟ್ಟೆಳೆಗಳಲ್ಲಿ ಬಹುಮುಖ್ಯವೆನಿಸಿದ ಸಹಾಯಧನ ಕಟ್ಟಳೆಯನ್ನು ಮಾತ್ರ ಈ ಲೇಖನದಲ್ಲಿ ವಿಶದವಾಗಿ ಪರಿಶೀಲಿಸಲಾಗಿದೆ. ಬೇರೆಬೇರೆ ಕಾಲಗಳಲ್ಲಿ ರೂಪಿಸಲಾದ ಆ ನಿಯಮಗಳಲ್ಲಿ ಒಂದಕ್ಕೊಂದಕ್ಕೆ ಇರಬಹುದಾದ ಗೊಂದಲ, ಭಿನ್ನತೆ ಇತ್ಯಾದಿಗಳನ್ನು ನಿವಾರಿಸಿ ಸಾಮರಸ್ಯವನ್ನು ತರುವಂತೆಯೂ ಉದ್ದೇಶಿಸಿದ ಅರ್ಥವನ್ನು ಮೂಡಿಸುವಂತೆಯೂ ಅವು ಕ್ರೋಡೀಕೃತವಾಗಿರುತ್ತವೆ.

ಕಟ್ಟಳೆಯನ್ನು ಕ್ರೋಡೀಕರಿಸುವ ಕ್ರಮ ಬದಲಾಯಿಸಿ

ಸದ್ಯದಲ್ಲಿ ಆಚರಣೆಯಲ್ಲಿರುವ ಹಾಗೂ ಶಾಶ್ವತ ರೀತಿಯ ಕಾನೂನುಗಳನ್ನೆಲ್ಲ ಕ್ಷೇತ್ರಾನುಕ್ರಮವಾಗಿ ಒಂದೆಡೆ ಜೋಡಿಸುವುದು ಕಟ್ಟಳೆಯ ಕ್ರೋಡೀಕರಣದಲ್ಲಿ ಅನುಸರಿಸಲಾಗುತ್ತಿರುವ ಸಾಮಾನ್ಯ ವಿಧಾನ, ಅದರಲ್ಲಿ ತೊಡೆದು ಹಾಕಿರುವ, ಸ್ಥಳೀಯವಾಗಿರುವ ಅಥವಾ ವಿಶಿಷ್ಟವೂ ತಾತ್ಕಾಲಿಕವೂ ಆಗಿರುವ ವಿಧಿನಿಯಮಾದಿಗಳನ್ನು ಸೇರಿಸುವಂತಿಲ್ಲ. ತಿದ್ದುಪಡಿಯಾಗಿರತಕ್ಕ ವಿಧಿನಿಯಮಗಳನ್ನು ಅವುಗಳ ತಿದ್ದಿದ ಸ್ವರೂಪದಲ್ಲಿ ಸೇರಿಸಬೇಕು. ಒಮ್ಮೆ ಹೀಗೆ ಕ್ರೋಡೀಕರಿಸಿದ ಕಟ್ಟಳೆಯನ್ನು ಮತ್ತೆ ನೂತನ ಕಾನೂನುಗಳನ್ನಾಗಿ ಅಂಗೀಕರಿಸದಿರುವುದೂ ಮೂಲ ಕಾನೂನುಗಳ ಪಾಠದಲ್ಲಿ ಬದಲಾವಣೆ ಮಾಡದಿರುವುದೂ ಕ್ರೋಡೀಕರಣದ ಎರಡು ವಿಶಿಷ್ಟ ಲಕ್ಷಣಗಳು. ಹಾಗೆ ಕ್ರೋಡೀಕರಿಸಿದ ನಿಯಮಾವಳಿಯ ಒಂದೊಂದು ನಿಯಮಕ್ಕೂ ಅಧಿಕೃತ ಬೆಂಬಲವನ್ನು ದೊರಕಿಸಲಾಗದಿದ್ದರೂ ಅವೆಲ್ಲ ಸದ್ಯದಲ್ಲಿ ಆಚರಣೆಯಲ್ಲಿದೆಯೆಂಬ ಅಧಿಕೃತ ಬೆಂಬಲವನ್ನಾದರೂ ನೀಡಬೇಕಾಗುತ್ತದೆ. ಬೇರೆಬೇರೆ ಕ್ಷೇತ್ರ್ರಗಳಿಗೆ ಸಂಬಂಧಿಸಿದ ನಿಯಮಗಳಲ್ಲಿರಬಹುದಾದ ಸೌಲಭ್ಯಗಳನ್ನು ಆಯ್ದು ಪ್ರತ್ಯೇಕ ಕ್ಷೇತ್ರವೊಂದರ ಕಟ್ಟಳೆಯ ಅಂಗವಾಗಿ ಸೇರಿಸುವಂತಿಲ್ಲ. ಹಾಗೆಯೆ, ಭಿನ್ನರೀತಿ ಸೌಲಭ್ಯಗಳನ್ನು ಒಳಗೊಂಡಂತೆ ತೋರುವ ನಿಯಮಗಳನ್ನೂ ಕೈಬಿಡುವಂತಿಲ್ಲ.[೧]

ಕ್ರೋಡೀಕರಣದ ಅಗತ್ಯ ಬದಲಾಯಿಸಿ

ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದ ಮತ್ತು ಸದ್ಯದಲ್ಲಿ ಆಚರಣೆಯಲ್ಲಿರುವ ಕಾನೂನುಗಳು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಅಧಿಕಾರ ಮೂಲಗಳಿಂದ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೊರಟಿರುತ್ತವೆ. ಅವುಗಳಲ್ಲಿ ಕೆಲವು ವ್ಯವಹಾರದಲ್ಲಿರುವ ಲಿಖಿತ ನಿಯಮಗಳು, ಇನ್ನು ಕೆಲವು ರಾಜ್ಯದ ಶಾಸನ ಸಭೆ ಅಂಗೀಕರಿಸಿದವು. ಮತ್ತೆ ಕೆಲವು ನ್ಯಾಯಾಲಯ ನೀಡಿದ ತೀರ್ಮಾನ, ಅಭಿಪ್ರಾಯ ಮತ್ತು ಅವುಗಳಿಂದ ಉದ್ಭವಿಸಿದವು. ಇನ್ನು ಕೆಲವು ಕಾರ್ಯನಿರ್ವಾಹಕಾಂಗ ಕಾನೂನಿಗೆ ವಿರುದ್ಧವೆನಿಸಿದಂತೆ ರೂಪಿಸಿದವು ಅಥವಾ ಸಾಂಪ್ರದಾಯಿಕ ನಿಯಮಗಳಿಗೆ ಪುರಕವಾಗುವಂತೆ ಅನುಗೊಳಿಸಿದವು. ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಆ ನಿಯಮಗಳೆಲ್ಲ ಅವುಗಳ ಸದ್ಯದ ಸ್ವರೂಪದಲ್ಲಿ ಒಂದು ಕಡೆ ಕಾರ್ಯನಿರತರ ಮುಂದಿರುವುದು ಅಗತ್ಯ. ಆದ್ದರಿಂದ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ನಿಯಮಗಳನ್ನೆಲ್ಲ ಆಯುಧ ಅವುಗಳ ಸದ್ಯದ ಸ್ವರೂಪದಲ್ಲಿ ವ್ಯವಸ್ಥಿತ ರೀತಿಯಲ್ಲಿ ಕ್ರೋಡೀಕರಿಸಿ ಸಿದ್ಧಪಡಿಸುವುದು ಆಡಳಿತ ಸೌಲಭ್ಯಕ್ಕೆ ಅನಿವಾರ್ಯವಾಗುತ್ತದೆ.[೨] ಕಟ್ಟಳೆಯ ಪುನರ್ವಿಮರ್ಶೆ: ಸದ್ಯದಲ್ಲಿ ಆಚರಣೆಯಲ್ಲಿರುವ ಶಾಶ್ವತ ರೀತಿಯ ಮತ್ತು ಸಾರ್ವತ್ರಿಕ ಸ್ವರೂಪದ ನಿಯಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಕ್ರೋಡೀಕರಿಸುವುದರ ಜೊತೆಗೆ ಅಧಿಕೃತ ವ್ಯಕ್ತಿ ಅಥವಾ ಮಂಡಲಿ ಪುನರ್ವಿಮರ್ಶಿಸುವುದೂ ಅಗತ್ಯ. ಹಾಗೆ ಪುನರ್ವಿಮರ್ಶಿತ ನಿಯಮಾವಳಿ ಮತ್ತೆ ಶಾಸನ ಸಭೆಯ ಅಂಗೀಕಾರ ಪಡೆಯಬೇಕಾಗುವುದು. ಸಾಮಾನ್ಯವಾಗಿ ಶಾಸನ ಸಭೆ ಇಡೀ ನಿಯಮಾವಳಿಯನ್ನು ಒಟ್ಟಿಗೆ ಅಂಗೀಕರಿಸಲು ಅನೇಕ ವೇಳೆ ಇಚ್ಛಿಸುವುದಿಲ್ಲ. ಅದರ ಒಂದೊಂದು ನಿಯಮವನ್ನೂ ಪ್ರತ್ಯೇಕವಾಗಿ ಪರಿಶೀಲನೆಗೆ ತೆಗೆದುಕೊಳ್ಳಲು ಬಂiÀÄಸುವುಂಟು. ಪುನರ್ವಿಮರ್ಶೆ ಲಿಖಿತ ನಿಯಮಾದಿಗಳಿಗೆ ಮಾತ್ರವೇ ಹೊರತು ಲಿಖಿತವಲ್ಲದವಕ್ಕೆ ಅನ್ವಯಿಸುವುದಿಲ್ಲ. ಕೆಲವು ವೇಳೆ ಪುನರ್ವಿಮರ್ಶೆಗಿಂತ ಹೆಚ್ಚು ವ್ಯಾಪಕವೆನ್ನಬಹುದಾದ ರೀತಿಯಲ್ಲಿ ಕ್ರೋಡೀಕರಿಸುವುದೂ ಉಂಟು. ಸರ್ವಮಾನ್ಯ ಲಿಖಿತ ಕಾನೂನುಗಳಲ್ಲಿ ಕಂಡಬರುವ ಲೋಪದೋಷಗಳನ್ನು ನಿವಾರಿಸುವುದೇ ಇದರ ಉದ್ದೇಶ.

ಸಹಾಯಧನದ ಕಟ್ಟಳೆ ಬದಲಾಯಿಸಿ

ಸಾರ್ವಜನಿಕ ಶಿಕ್ಷಣದಲ್ಲಿ ಸರ್ಕಾರದ ಸಂಸ್ಥೆಗಳಂತೆ ಖಾಸಗಿ ಮತ್ತು ಸ್ಥಳೀಯ ಸರ್ಕಾರದ ಸಂಸ್ಥೆಗಳೇ ಪ್ರಧಾನವಾಗಿದ್ದರೂ ಪ್ರಾಥಮಿಕ ಪುರ್ವ, ಪ್ರೌಢ ಮತ್ತು ಉನ್ನತ ಶಿಕ್ಷಣಕ್ಷೇತ್ರಗಳಲ್ಲಿ ಖಾಸಗಿ ಮತ್ತು ಸ್ಥಳೀಯ ಸರ್ಕಾರದ ಶಿಕ್ಷಣ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿವೆ. ಅವೂ ಸಾರ್ವಜನಿಕ ಶಿಕ್ಷಣದಲ್ಲಿ ಭಾಗವಹಿಸುವುದರಿಂದ ಸರ್ಕಾರದ ಧನಸಹಾಯಕ್ಕೆ ಅವು ಅರ್ಹತೆ ಹೊಂದಿರುತ್ತವೆ. ಈ ಸಹಾಯಧನದ (ಸಹಾಯಕ ಅನುದಾನ) ಪದ್ಧತಿ, ಸಹಾಯ ಪಡೆಯತಕ್ಕ ಖಾಸಗಿ ಸಂಸ್ಥೆಯ ಆಡಳಿತ ಮಂಡಲಿ ಇತರ ಮೂಲಗಳಿಂದ ತನ್ನ ಪಾಲಿನ ಒಂದಷ್ಟು ಹಣವನ್ನು ಒದಗಿಸಿಕೊಳ್ಳಬೇಕೆಂಬ ತತ್ತ್ವದ ಮೇಲೆ ಏರ್ಪಟ್ಟಿದೆ. ಸಾಮಾನ್ಯವಾಗಿ ಖಾಸಗಿ ಅಥವಾ ಸ್ಥಳೀಯ ಸರ್ಕಾರಗಳ ಶಿಕ್ಷಣಸಂಸ್ಥೆಗಳಿಗೆ ಅಷ್ಟಾಗಿ ಧನದ ಬೆಂಬಲ ಇಲ್ಲದ್ದರಿಂದ ಅವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟಡ, ಅಧ್ಯಾಪಕ ವರ್ಗ, ಉಪಕರಣಗಳು, ಗ್ರಂಥಾಲಯ, ಪ್ರಯೋಗಾಲಯ-ಇತ್ಯಾದಿ ಸೌಲಭ್ಯಗಳು ಅಷ್ಟು ಸಮರ್ಪಕವಾಗಿರಲಾರವು. ಅದರಿಂದ ಅವು ಸಮಪರ್ಕವಾಗಿ ಕೆಲಸ ಮಾಡಲಾರದೆ ಸಾರ್ವಜನಿಕ ಶಿಕ್ಷಣಸೇವೆಯ ಒಂದು ಪ್ರಧಾನ ಅಂಗ ಕರ್ತವ್ಯವಿಮುಖವಾದಂತಾಗುವುದು. ಹಾಗಾಗದಂತೆ ನೋಡಿಕೊಳ್ಳುವ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವುದಕ್ಕಾಗಿ ಸರ್ಕಾರ ಅದಕ್ಕೆ ಸಹಾಯಧನ ನೀಡಬೇಕಾಗುತ್ತದೆ. ಹಾಗೆ ಸಾರ್ವಜನಿಕ ಬೊಕ್ಕಸದಿಂದ ಖಾಸಗಿ ಸಂಸ್ಥೆಗಳಿಗೆ ಹಣವನ್ನು ನೀಡುವಾಗ ಹಲವು ನೀತಿನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನೀತಿನಿಯಮಗಳು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅಧಿಕಾರ ಮೂಲಗಳಿಂದ ರೂಪುಗೊಂಡಿರುತ್ತವೆ. ಸಹಾಯಧನ ನೀಡಿಕೆಗೆ ಸಂಬಂಧಿಸಿದ ಷರತ್ತುಗಳು, ಕಾರ್ಯಕ್ರಮ, ಧನಸಹಾಯದ ಪ್ರಮಾಣವನ್ನು ಸೂಚಿಸುವ ಸೂತ್ರ-ಇವನ್ನೆಲ್ಲ ಒಳಗೊಂಡಂತೆ ರೂಪಿಸಿರುವ ರಾಜ್ಯಸರ್ಕಾರದ ಅಧಿಕೃತ ನಿಯಮಾವಳಿಯೇ ಸಹಾಯಧನದ ಕಟ್ಟಳೆ ಅಥವಾ ಸಹಾಯಕ ಅನುದಾನ ಸಂಹಿತೆ (ಗ್ರಾಂಟ್-ಇನ್-ಏಡ್ ಕೋಡ್). ಈ ನಿಯಮಗಳು ರಾಜ್ಯ ಶಾಸನಗಳ ಮೂಲಕ ಇಲ್ಲವೆ ಸರ್ಕಾರದ ಕಾರ್ಯನಿವಾರ್ಹಕಾಂಗದ ರೂಪುಗೊಂಡು, ಅಂದಿಗಂದಿಗೆ ಪುನರ್ವಿಮರ್ಶಿತವಾಗಿ, ತಿದ್ದುಪಡಿಯಾಗಿ ಅಥವಾ ಹೊಸದಾಗಿ ರಚನೆಯಾಗಿ ಲಿಖಿತ ರೂಪದಲ್ಲಿರುತ್ತವೆ. ಸದ್ಯದಲ್ಲಿ ಸಂಬಂಧಿಸಿದ ಹಿಂದಿನ ಎಲ್ಲ ನಿಯಾಮವಳಿಗಳ ಬದಲು ಇದು ಪುರ್ಣವಾಗಿ ಆಚರಣೆಗೆ ಬಂದಿರುತ್ತದೆ.

ಸಹಾಯಧನಕ್ಕೆ ಅರ್ಹತೆ ಬದಲಾಯಿಸಿ

ಬೇರೆ ಬೇರೆ ರಾಜ್ಯಗಳಲ್ಲಿ ರೂಪಿಸಿರುವ ಬೇರೆ ಬೇರೆ ಅನುದಾನ ನಿಯಮಾವಳಿಗಳು ರಾಜ್ಯಸರ್ಕಾರದ ಧನಸಹಾಯವನ್ನು ಪಡೆಯಲು ಬೇರೆ ಬೇರೆ ರೀತಿಯ ಷರತ್ತುಗಳನ್ನು ವಿಧಿಸುತ್ತವೆ. ಅವುಗಳಲ್ಲಿ ಮುಖ್ಯವಾದವನ್ನು ಇಲ್ಲಿ ಸೂಚಿಸಿದೆ: 1 ರಾಜ್ಯದ ಶಿಕ್ಷಣಶಾಖೆ ಅಥವಾ ಸರ್ಕಾರದಿಂದ ಅಂಗೀಕೃತವಾದ ವಿಶ್ವವಿದ್ಯಾನಿಲಯ, ಕೊಲಿಜಿಯೆಟ್ ಅಥವಾ ಪ್ರಿ ಯೂನಿವರ್ಸಿಟಿ ಮಂಡಲಿ ನಿರ್ಧರಿಸಿರುವ ಪಠ್ಯಕ್ರಮವನ್ನು ಅನುಸರಿಸಿ ಅದು ಕಟ್ಟಡ, ಉಪಕರಣ ಗ್ರಂಥಾಲಯ, ಪ್ರಯೋಗಾಲಯ, ಅಧ್ಯಾಪಕವರ್ಗ ಇತ್ಯಾದಿಗಳ ಬಗ್ಗೆ ರೂಪಿಸಿರುವ ನೀತಿನಿಯಮಗಳನ್ನು ಪಾಲಿಸಬೇಕು. 2 ಧನಸಹಾಯ ಪಡೆಯತಕ್ಕ ಸಂಸ್ಥೆಗೆ ಪ್ರತ್ಯೇಕ ಆಡಳಿತ ಮಂಡಲಿ ಇರಬೇಕು; ಅದರಲ್ಲಿ ಖಾಸಗಿ ಸಂಸ್ಥೆಯ ಪ್ರತಿನಿಧಿ, ಸರ್ಕಾರದ ಪ್ರತಿನಿಧಿ, ಅಧ್ಯಾಪಕರ ಪ್ರತಿನಿಧಿ ಮತ್ತು ಆ ಪ್ರದೇಶದಲ್ಲಿ ಶಿಕ್ಷಣದಲ್ಲಿ ಆಸಕ್ತಿಯುಳ್ಳ ಜನತಾ ಪ್ರತಿನಿಧಿ-ಸದಸ್ಯರಾಗಿರಬೇಕು; ಆ ಪ್ರದೇಶದಲ್ಲಿ ಶಿಕ್ಷಣದಲ್ಲಿ ಆಸಕ್ತಿಯುಳ್ಳ ಜನತಾ ಪ್ರತಿನಿಧಿ-ಸದಸ್ಯರಾಗಿರಬೇಕು; ಆ ಮಂಡಲಿಯ ರಚನೆ, ಹೊಣೆಗಾರಿಕೆ, ಅಧಿಕಾರವ್ಯಾಪ್ತಿ ಇತ್ಯಾದಿ ಅಂಶಗಳ ಬಗ್ಗೆ ಅನುದಾನ ನಿಯಮಾವಳಿಯಲ್ಲಿ ಉಲ್ಲೇಖವಿರುತ್ತದೆ. 3 ಅಧ್ಯಾಪಕರನ್ನು ನೇಮಿಸಿಕೊಳ್ಳುವಾಗ ಅವರ ವಿದ್ಯಾರ್ಹತೆ, ವಿಶೇಷ ತರಬೇತು ಸಂಬಳ ಭತ್ಯೆಗಳು ಮತ್ತು ಇತರ ಸೇವಾ ವಿವರಗಳ ಬಗ್ಗೆ ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸಬೇಕು. 4 ಅನುದಾನ ನಿಯಮಾವಳಿಯಲ್ಲಿ ಸೂಚಿಸಿರುವ ಪ್ರಮಾಣದಂತೆ ಆಡಳಿತ ಸಂಸ್ಥೆ ತನ್ನ ಪಾಲಿನ ಹಣವನ್ನು ಒದಗಿಸಬೇಕು. ಖಾಸಗಿ ಶಾಲೆ ಮತ್ತು ಕಾಲೇಜುಗಳಿಗೆ ಸಂಬಂಧಿಸಿದ ಅನುದಾನ ನಿಯಮಾವಳಿಗಳು: ಸದ್ಯದಲ್ಲಿ ಪ್ರಚಾರದಲ್ಲಿರುವ ಅನುದಾನ ನಿಯಮಾವಳಿಗಳು ಎಲ್ಲ ಶಿಕ್ಷಣ ಸಂಸ್ಥೆಗಳು ಸಮಾನವೆಂಬ ದೃಷ್ಟಿಯಲ್ಲಿ ರೂಪುಗೊಂಡಿವೆ. ಇದರಿಂದ ಒಳ್ಳೆಯ ಸಂಸ್ಥೆಗೆ ತಕ್ಕಷ್ಟು ಸಹಾಯಧನದ ಪ್ರೋತ್ಸಾಹ ದೊರೆಯಲಾರದು. ಸರಿಯಾಗಿ ಕೆಲಸ ಮಾಡದ ಸಂಸ್ಥೆಗಳಿಗೂ ಅಧಿಕ ಧನಸಹಾಯ ದೊರಕಬಹುದು. ಅಂಥ ದುರ್ಬಲ ಸಂಸ್ಥೆಗಳಲ್ಲಿ ಅಧ್ಯಾಪಕರ ಸೇವಾವಧಿಯ ಹಕ್ಕು, ಸಂಬಳಗಳ ಬಟವಾಡೆ ಇತ್ಯಾದಿಯಾದ ರಕ್ಷಣೆ ಇರುವುದಿಲ್ಲ; ಕಾರ್ಯಕ್ರಮ, ಶಿಸ್ತು, ಪರೀಕ್ಷಾ ಫಲಿತಾಂಶ ಇತ್ಯಾದಿ ಅಂಶಗಳಲ್ಲೂ ಅವು ತೀರ ಕೆಳಮಟ್ಟದಲ್ಲಿರುತ್ತವೆ. ಅವುಗಳ ಕೆಲಸವನ್ನು ಉತ್ತಮಪಡಿಸಲು ಶಿಕ್ಷಣಶಾಖೆ ವ್ಯಾಪಕವಾದ ಕಟ್ಟುಕಟ್ಟಳೆಗಳನ್ನು ರೂಪಿಸಿ ಅವನ್ನು ಎಲ್ಲ ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಇದರಿಂದ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ಕಿರುಕುಳವುಂಟಾಗಿ ಸ್ವತಂತ್ರ ಸನ್ನಿವೇಶದಲ್ಲಿ ಕೆಲಸ ಮಾಡುವ ಅವಕಾಶ ತಪ್ಪಿಹೋಗಿದೆ. ಈ ತೊಂದರೆಯನ್ನು ತಪ್ಪಿಸಲು ಅನುದಾನ ನಿಯಮಾವಳಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಸಂಸ್ಥೆಗಳಲ್ಲಿ ವ್ಯತ್ಯಾಸ ಕಲ್ಪಿಸಿ, ಅನುದಾನ ನೀಡಲು ನೆರವಾಗುವಂತೆ ವಿಭೇದ ಕಲ್ಪಿಸಬಹುದಾದ ಅವಕಾಶವಿರಬೇಕು. ಉತ್ತಮ ಅಧ್ಯಾಪಕ ವರ್ಗವನ್ನು ನೇಮಿಸಿಕೊಂಡು ನಿಷ್ಠೆಯಿಂದ ಕೆಲಸ ಮಾಡುತ್ತ ಹೆಚ್ಚು ದಕ್ಷತೆಯನ್ನು ವ್ಯಕ್ತಪಡಿಸುವ ಸಂಸ್ಥೆಗೆ ಅಧಿಕ ಸ್ವಾತಂತ್ರ್ಯವನ್ನೂ ಹೆಚ್ಚು ಧನಸಹಾಯವನ್ನೂ ನೀಡುವಂತಿರಬೇಕು. ಅಂಥ ದಕ್ಷ ಶಿಕ್ಷಣ ಸಂಸ್ಥೆಗಳಿಂದಲೇ ಶಿಕ್ಷಣರಂಗದಲ್ಲಿ ಪ್ರಗತಿ ಸಾಧ್ಯವಾಗುವುದು. ಕೊಠಾರಿ ಶಿಕ್ಷಣ ಆಯೋಗ ಸೂಚಿಸುವಂತೆ ಅವು ಮುಂದಿನ ಶಿಕ್ಷಣ ಸುಧಾರಣೆಯ ಬೆಳೆಗೆ ಬೀಜವಿದ್ದಂತೆ. ಮಿಕ್ಕ ದುರ್ಬಲ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಕಠಿಣ ನಿಯಮಗಳನ್ನು ಸೇರಿಸಬಹುದು. ಆ ಮೂಲಕ ಅವುಗಳ ಕಾರ್ಯಕ್ರಮಗಳ ಬಗ್ಗೆ ಕಟ್ಟು ನಿಟ್ಟಾದ ಒತ್ತಾಯವನ್ನು ತರಬಹುದಾದರೂ ಅವಕ್ಕಿರಬಹುದಾದ ಎಡರುತೊಡರುಗಳ ಬಗ್ಗೆ ಸಹಾನುಭೂತಿ ಅಗತ್ಯ. ಆ ಮೂಲಕ ಅಂಥ ದುರ್ಬಲ ಸಂಸ್ಥೆಗಳು ತಮ್ಮ ದಕ್ಷತೆಯನ್ನು ಹೆಚ್ಚಿಸಿಕೊಳ್ಳುವಂತಾಗಬೇಕು. ಹಾಗೆ ಹೆಚ್ಚಿಸಿಕೊಳ್ಳ ಲಾರದವನ್ನು ಸರ್ಕಾರ ವಹಿಸಿಕೊಳ್ಳಬೇಕು ಅಥವಾ ಮುಚ್ಚಿಬಿಡಬೇಕು.

ಶಿಕ್ಷಣ ಶಾಖೆ ಬದಲಾಯಿಸಿ

ಶಿಕ್ಷಣ ಶಾಖೆ ಖಾಸಗಿ ಶಿಕ್ಷಣಸಂಸ್ಥೆಗಳಿಗೆ ಧನಸಹಾಯ ನೀಡುವಂತೆ ರಾಜ್ಯ ಸರ್ಕಾರಗಳು ಕಾಲೇಜುಗಳಂಥ ಉನ್ನತ ಶಿಕ್ಷಣಸಂಸ್ಥೆಗಳಿಗೂ ಧನಸಹಾಯ ನೀಡುತ್ತದೆ. ಸದ್ಯದಲ್ಲಿ ಅದಕ್ಕಾಗಿ ಸರ್ಕಾರದ ಕಾಲೇಜುಗಳೊಡನೆ ಖಾಸಗಿ ಕಾಲೇಜುಗಳನ್ನು ಸಮಾನವಾಗಿ ಭಾವಿಸಿ ಅನುದಾನ ನಿಯಮಾವಳಿಯನ್ನು ರೂಪಿಸಿದೆ. ಅವುಗಳ ನಿಯಂತ್ರಣದ ಬಗ್ಗೆಯೂ ಅಂಥದೇ ಏಕರೀತಿಯ ದೃಷ್ಟಿಯನ್ನನುಸರಿಸಲಾಗುತ್ತಿದೆ. ಪ್ರೌಢಶಾಲೆಗಳಲ್ಲಿ ಕಂಡುಬರುವ ಈ ತೊಂದರೆ ಉನ್ನತ ಮಟ್ಟದ ಶಿಕ್ಷಣದಲ್ಲೂ ಆಗುತ್ತಿದೆ. ಆದ್ದರಿಂದ ಶಾಲೆಗಳ ಅನುದಾನದ ಬಗ್ಗೆ ಸೂಚಿಸಿರುವ ವಿಭೇದಕಾರಕ ನಿಯಮಾವಳಿ ಕಾಲೇಜುಗಳ ಅನುದಾನ ಮತ್ತು ನಿಯಂತ್ರಣದ ಬಗ್ಗೆಯೂ ರಚನೆಯಾಗಬೇಕು. ಆ ಮೂಲಕ ಒಳ್ಳೆಯ ಕಾಲೇಜುಗಳಿಗೆ ಹೆಚ್ಚು ಸ್ವಾತಂತ್ರವನ್ನು ಹೆಚ್ಚು ಧನಸಹಾಯವನ್ನೂ ನೀಡುವ ಅವಕಾಶವಾಗಬೇಕು.ಸಹಾಯಧನದ ನಿಯಮಾವಳಿಯನ್ನು ರೂಪಿಸುವಾಗ ಕೆಳಗಿನ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.

1. ಸಂಸ್ಥೆಯ ಆವರ್ತ (ರೆಕರಿಂಗ್) ವೆಚ್ಚದ ಬಗ್ಗೆ ಸಹಾಯಧನ ನೀಡುವಾಗ, ಸಂಸ್ಥೆ ಖಾಸಗಿ ಚಂದಾ ಹಣದಿಂದ ಕಟ್ಟಿಸಿರುವ ಕಟ್ಟಡವಾದರೆ ಶಾಲೆಯ ಅಥವಾ ಕಾಲೇಜಿನ ಕಟ್ಟಡಕ್ಕೆ ಸೂಕ್ತ ಬಾಡಿಗೆ ಹಣವನ್ನು ಅನುದಾನ ನೀಡಿಕೆಗೆ ಸೇರಿಸಿಕೊಳ್ಳಬೇಕು. ಅನಾವರ್ತ (ನಾನ್-ರೆಕರಿಂಗ್) ವೆಚ್ಚದ ಬಗ್ಗೆ ಇಂಥ ಸಮಸ್ಯೆ ಉದ್ಭವಿಸುವುದಿಲ್ಲ.

2. ಆವರ್ತ ವ್ಯಯವನ್ನು ಅಧ್ಯಾಪಕರ ವೆಚ್ಚ ಮತ್ತು ಅಧ್ಯಾಪಕೇತರರ ವೆಚ್ಚ ಎಂದು ಎರಡು ಭಾಗ ಮಾಡಿ, ಅಧ್ಯಾಪಕರ ವೆಚ್ಚದಲ್ಲಿ ಅವರಿಗೆ ನಿಷ್ಕರ್ಷಿತವಾಗಿರುವಂತೆ ಕೊಡುವ ಸಂಬಳ, ಭತ್ಯ, ಸಾರಿಗೆ ವೆಚ್ಚ ಇತ್ಯಾದಿಗಳಿಗೆ ವ್ಯಯ ಮಾಡಿದ ಹಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಆದರೆ ಅಧ್ಯಾಪಕೇತರ ವೆಚ್ಚಗಳ ಬಗ್ಗೆ ತೊಡಕಾಗಬಹುದು. ಆದ್ದರಿಂದ ಆ ಬಗ್ಗೆ ಶಾಲಾಕಾಲೇಜುಗಳು ಮಾಡಬಹುದಾದ ಕನಿಷ್ಠ ಮತ್ತು ಗರಿಷ್ಠ ಮಿತಿಗಳನ್ನು ರೂಪಿಸಬಹುದು. ಅಥವಾ ಅಧ್ಯಾಪಕರ ವೆಚ್ಚದ ಒಂದು ಪ್ರಮಾಣವನ್ನಾದರೂ ಗೊತ್ತುಮಾಡಬಹುದು. ಹೀಗೆ ಸರ್ಕಾರ ಅಥವಾ ವಿಶ್ವವಿದ್ಯಾನಿಲಯ ನಿರ್ಧರಿಸಿದ ಮಿತಿಯೊಳಗೆ ಶಾಲೆ ಅಥವಾ ಕಾಲೇಜು ತನ್ನ ಕಾರ್ಯಕ್ರಮದ ಹಿತದೃಷ್ಟಿಯಲ್ಲಿ ಎಷ್ಟನ್ನಾದರೂ ವ್ಯಯ ಮಾಡಲು ಸ್ವಾತಂತ್ರ್ಯ ಹೊಂದಿರಬೇಕು.

3. ಸಹಾಯಧನವನ್ನು ನೀಡುವಾಗ, ಆಯಾ ಶಾಲೆ ಅಥವಾ ಕಾಲೇಜು ಬೋಧನೆಯ ಶುಲ್ಕ(ತೆರ)ದಿಂದ ಸಂಗ್ರಹಿಸಿದ ಹಣವನ್ನು ಕಳೆದು ಉಳಿದ ಹಣವನ್ನು ನೀಡಲಾಗುವುದು; ಕೆಲವು ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಸ್ವೇಚ್ಛೆಯಾಗಿ ಅಧಿಕ ದರದ ತೆರವನ್ನು ಸಂಗ್ರಹಿಸಿ ಅದನ್ನು ಚಂದಾ ಎಂದು ರಸೀದಿ ಕೊಡುವುದುಂಟು. ಆದ್ದರಿಂದ ಖಾಸಗಿ ಸಂಸ್ಥೆಗಳಿಗೆ ಅಂಗೀಕಾರ ನೀಡುವಾಗ ಅದು ಸಂಗ್ರಹಿಸಬಹುದಾದ ತೆರದ ಪರಮಾವಧಿ ಮೊತ್ತವನ್ನು ನಿರ್ಧರಿಸಬೇಕು. ಜೊತೆಗೆ ಅದು ಕೊಡಬೇಕಾದ ತೆರದ ರಿಯಾಯಿತಿ (ಫ್ರೀಷಿಪ್ಸ್‌) ಸಂಖ್ಯೆಯನ್ನೂ ನಿರ್ಧರಿಸಬೇಕು, ವಿಶ್ವವಿದ್ಯಾನಿಲಯದ ಅಥವಾ ಸರ್ಕಾರದ ಸಂಸ್ಥೆಗಳಲ್ಲಿ ಸಂಗ್ರಹಿಸುವ ಶುಲ್ಕದ ದರಕ್ಕಿಂತ ಹೆಚ್ಚಾಗಿ ಸಂಗ್ರಹಿಸಲು ಅವಕಾಶವಿತ್ತರೂ ಆ ಬಗ್ಗೆ ಸರಿಯಾದ ಲೆಕ್ಕವಿಡುವಂತೆ ಕಡ್ಡಾಯ ಮಾಡಿ ಆ ಹಣವನ್ನು ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಅವಕಾಶವೀಯಬಹುದು.

4. ಅನುದಾನವನ್ನು ನಿರ್ಧರಿಸುವಾಗ ಅನುಸರಿಸಬಹುದಾದ ಸೂತ್ರವೊಂದನ್ನು ಕೊಠಾರಿ ಶಿಕ್ಷಣ ಆಯೋಗ ಸೂಚಿಸಿದೆ. ಅದನ್ನಿಲ್ಲಿ ಉಲ್ಲೇಖಿಸಬಹುದು: ಅಧ್ಯಾಪಕರೆಲ್ಲರ ಸಂಬಳದ ಹಣ, ಅಧ್ಯಾಪಕೇತರ ಬಾಬ್ತುಗಳಿಗೆ ಖರ್ಚು ಮಾಡಿದ ಒಟ್ಟು ಹಣ ಅಥವಾ ಆ ಬಗ್ಗೆ ಹಾಕಿರುವ ಗರಿಷ್ಠ ಮಿತಿ (ಅವೆರಡರಲ್ಲಿ ಕಡಿಮೆಯಾದ್ದು), ಇವೆರಡರ ಮೊತ್ತದಲ್ಲಿ ಆಡಳಿತಸಂಸ್ಥೆ ಕೊಡಬೇಕೆಂದು ನಿರ್ಧಾರವಾಗಿರುವ ಪಾಲು ಹಣವನ್ನು (ಬೋಧನೆಯ ತೆರದಿಂದ ಸಂಗ್ರಹಿಸಿದ ಹಣದಿಂದ ಇದನ್ನು ಕೊಡಕೂಡದು. ಸಂಸ್ಥೆ ತನ್ನ ಸ್ವಂತ ಆದಾಯದಿಂದ ಅಥವಾ ನಿಧಿಯಿಂದ ಕೊಡಬೇಕು) ನಿಯಮಾನುಸಾರ ವಿದ್ಯಾರ್ಥಿಗಳಿಗೆ ಶುಲ್ಕದ ರಿಯಾಯಿತಿಯನ್ನು ಕೊಟ್ಟ ಮೇಲೆ ಸಂಗ್ರಹವಾದ ಶುಲ್ಕದ ಒಟ್ಟು ಹಣವನ್ನೂ ಕಟಾಯಿಸಿಕೊಂಡು ಮಿಕ್ಕುದನ್ನು ಸಹಾಯಧನವಾಗಿ ಕೊಡಬೇಕು.

ಖಾಸಗಿ ಸಂಸ್ಥೆಗಳು ಬದಲಾಯಿಸಿ

ಖಾಸಗಿ ಸಂಸ್ಥೆಗಳು ನೀಡಬೇಕಾದ ತಮ್ಮ ಪಾಲಿನ ಹಣದ ಪ್ರಮಾಣ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆಬೇರೆಯಾಗಿದೆ. ಹೇಗೆ ಇರಲಿ, ನೂತನ ಸನ್ನಿವೇಶಗಳಿಗೆ ಹೊಂದಿಸಿಕೊಳ್ಳಲು ಅನುಕೂಲಿಸುವಂತೆ ಅದರ ಪಾಲು ಹಣದ ಪ್ರಮಾಣವನ್ನು ಅಂದಿಗಂದಿಗೆ ಪುನರ್ವಿಮರ್ಶಿಸುವುದು ಅಗತ್ಯ. ಯುದ್ಧಾ ನಂತರದ ದಿನಗಳಲ್ಲಿ ಶಿಕ್ಷಣಕ್ಷೇತ್ರ ಅಗಾಧವಾಗಿ ವಿಸ್ತರಿಸಿದ್ದು, ಖಾಸಗಿ ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಲಾರದ ಫಲವಾಗಿ ಅವುಗಳ ಪಾಲುಹಣವನ್ನು ಏಕಪ್ರಕಾರವಾಗಿ ಕಡಿಮೆ ಮಾಡಲಾಗುತ್ತಿದೆ. ಆದ್ದರಿಂದ ಸರ್ಕಾರದಿಂದ ಬರುವ ಅನುದಾನ ಶೇ.50-100ರವರೆಗೂ ಹೆಚ್ಚಿದೆ.ಈಚೆಗೆ ಪ್ರೌಢಶಾಲೆಯ ಹಂತದಲ್ಲಿ ಶಿಕ್ಷಣವನ್ನು ಉಚಿತಗೊಳಿಸಲಾಗುತ್ತಿದೆ. ಇದರ ಫಲವಾಗಿ ಪ್ರೌಢಶಾಲೆಗಳ ಅನುದಾನ ನಿಯಮಾವಳಿ ಬದಲಾಗಹತ್ತಿದೆ. ಖಾಸಗಿ ಶಾಲೆಗಳು ಸರ್ಕಾರದ ಈ ನೀತಿಯನ್ನೊಪ್ಪಿ, ಶುಲ್ಕವನ್ನು ಸಂಗ್ರಹಿಸದಿದ್ದರೆ ಮಾತ್ರ ಅವಕ್ಕೆ ಅನುದಾನ ದೊರಕುವುದು. ಇಲ್ಲವಾದರೆ ಅವು ಸ್ವತಂತ್ರ ಶಿಕ್ಷಣ ಸಂಸ್ಥೆಗಳಾಗಿ ಉಳಿಯಬೇಕಾಗುತ್ತದೆ. ಆಗ ಅದಕ್ಕೆ ಸಾರ್ವಜನಿಕ ಬೊಕ್ಕಸದಿಂದ ಅನುದಾನ ದೊರಕಲಾರದು ; ಮಿಕ್ಕ ಖಾಸಗಿ ಶಾಲೆಗಳಿಗೆ ಉದಾರವಾಗಿ ಅನುದಾನ ದೊರಕುವುದು.

ಪ್ರೌಢಶಾಲೆಗಳಿಗೆ ಅನುದಾನವನ್ನು ನಿರ್ಧರಿಸುವಾಗ ಮೇಲಿನ ಸೂತ್ರದೊಡನೆ ಈ ಎರಡು ಟಿಪ್ಪಣಿಗಳನ್ನೂ ಪರಿಗಣಿಸಬೇಕಾಗುತ್ತದೆ ಬದಲಾಯಿಸಿ

1. ಅಧ್ಯಾಪಕೇತರ ವ್ಯಯದ ಗರಿಷ್ಠ ಮಿತಿಯನ್ನು ಬೇರೆಬೇರೆ ವಿಧದ ಶಾಲೆಗಳಿಗೆ ಬೇರೆಬೇರೆಯಾಗಿ ಗೊತ್ತು ಮಾಡಬೇಕು; ಹಿಂದುಳಿದ ಭಾಗಗಳ ಶಾಲೆಗಳಿಗೂ ಬಾಲಿಕಾ ಪಾಠಶಾಲೆಗಳಿಗೂ ಸೂಕ್ತ ರೀತಿಯ ವಿಭೇದಕ ಮಿತಿಗಳನ್ನು ನಿರ್ಧರಿಸಬೇಕು. ತಮ್ಮ ಪಾಲುಹಣವನ್ನು ಒದಗಿಸುವುದಕ್ಕಾಗಿ ಪ್ರೌಢಶಾಲೆ 50,000 ರೂಪಾಯಿಯನ್ನೂ ಉನ್ನತ ಪ್ರೌಢಶಾಲೆ 1,00,000 ರೂಪಾಯಿಯನ್ನೂ ದತ್ತಿಯಾಗಿ ಹೊಂದಿರಬೇಕು. ಅದು ಸಾಧ್ಯವಾಗುವರೆಗೆ ಆಯಾ ಸಂಸ್ಥೆಯ ಆಡಳಿತ ಮಂಡಲಿ ಆ ದತ್ತಿಗೆ ಬರತಕ್ಕ ಬಡ್ಡಿ ಹಣದಷ್ಟನ್ನು ಒದಗಿಸಬೇಕು.

2. ಪ್ರೌಢಶಾಲೆಗಳಲ್ಲಿ ಶಿಕ್ಷಣವನ್ನು ಉಚಿತವಾಗಿ ಮಾಡಿರುವ ಕಡೆ (ಅನುದಾನ ಸೂತ್ರದಲ್ಲಿ ಸೂಚಿಸಿರುವ) ಸಂಗ್ರಹಿಸಿದ ಶುಲ್ಕದಷ್ಟು ಹಣವನ್ನು ಅನುದಾನ ಹಣದಿಂದ ಕಟಾಯಿಸಿಕೊಳ್ಳುವ ಅಂಶವನ್ನು ಕೈಬಿಡಬೇಕು. ಅನಾವರ್ತ ವೆಚ್ಚದ ಬಗ್ಗೆ ಖಾಸಗಿ ಶಾಲೆಯ ಆಡಳಿತ ಸಂಸ್ಥೆ ಒಟ್ಟು ವೆಚ್ಚದ ಬಹುಭಾಗವನ್ನು ವಹಿಸಬೇಕು. ಆದ್ದರಿಂದ ಒಟ್ಟು ವೆಚ್ಚದ ಶೇ. 50ರಷ್ಟು ಮಾತ್ರ ಅನುದಾನವನ್ನು ನೀಡಬಹುದು. ಶಿಕ್ಷಣದಲ್ಲಿ ಹಿಂದುಳಿದ ಪ್ರದೇಶಗಳ ಪಾಠಶಾಲೆಗಳಿಗೂ ಬಾಲಕಿಯರ ಪಾಠಶಾಲೆಗಳಿಗೂ ಆ ಪ್ರಮಾಣವನ್ನು ಹೆಚ್ಚಿಸಬಹುದು. ಹಾಗೆಯೇ ಬೇರೆಬೇರೆ ವಿಧದ ಪಾಠಶಾಲೆಗಳಿಗೂ ಆ ಪ್ರಮಾಣವನ್ನು ಹೆಚ್ಚುಕಡಿಮೆಯಾಗಿ ನಿಗದಿ ಮಾಡಬಹುದು.ಮೇಲಿನ ಅನುದಾನ ಸೂತ್ರ ಸಾಮಾನ್ಯ ಸಂದರ್ಭಗಳಿಗೆ ಅನ್ವಯಿಸುತ್ತದೆ. ವಿಶೇಷ ಸಂದರ್ಭಗಳಿಗಾಗಿ ಕೆಲವು ಷರತ್ತುಗಳನ್ನು ನಿಯಮಾವಳಿ ಒಳಗೊಂಡಿರಬೇಕು. ಅಧ್ಯಾಪಕರನ್ನು ಸತತವಾಗಿ ಉಳಿಸಿಕೊಳ್ಳದಿರುವಿಕೆ, ಅವರಿಗೆ ಸೂಕ್ತ ಸೌಲಭ್ಯ ನೀಡದಿರುವಿಕೆ, ಅಶಿಸ್ತು, ಕಡಿಮೆ ಫಲಿತಾಂಶ-ಇವುಗಳಿಗಾಗಿ ಅನುದಾನವನ್ನು ಕಡಿಮೆ ಮಾಡುವ ಅವಕಾಶವಿರಬೇಕು. ಹಾಗೂ ಒಳ್ಳೆಯ ಅಧ್ಯಾಪಕರನ್ನು ನೇಮಿಸಿಕೊಂಡು, ಉತ್ತಮ ಆದರ್ಶವನ್ನು ಪ್ರದರ್ಶಿಸಿ, ದಕ್ಷತೆ ನಿಷ್ಠೆಗಳಿಂದ ಕೆಲಸ ಮಾಡಿ, ಉತ್ತಮ ಫಲಿತಾಂಶವನ್ನು ಸಾಧಿಸುವ ಶಾಲೆಯ ಅಭಿವೃದ್ಧಿಗೂ ಅವು ನಡೆಸುವ ಪ್ರಯೋಗಗಳಿಗೂ ಹೆಚ್ಚಿನ ಅನುದಾನ ನೀಡುವ ಅವಕಾಶವೂ ಇರಬೇಕು.ಸಾಮಾನ್ಯವಾಗಿ ಎಲ್ಲ ಅನುದಾನ ನಿಯಮಾವಳಿಗಳಲ್ಲೂ ಅನುದಾನ ಬಂiÀÄಸುವ ಖಾಸಗಿ ಸಂಸ್ಥೆಗಳು ಲಾಭದ ದೃಷ್ಟಿಯಿಲ್ಲದೆ ಧರ್ಮಾರ್ಥವಾಗಿ ಕೆಲಸ ಮಾಡಬೇಕೆಂಬ ನಿಯಮವುಂಟು. ಜೊತೆಗೆ ರಾಜ್ಯದ ಧರ್ಮಸಂಸ್ಥೆಗಳ ಕಾಯಿದೆಯ ಪ್ರಕಾರವನ್ನು ನೋಂದಣಿ ಆಗಬೇಕೆಂಬ ಷರತ್ತೂ ಇರುವುದುಂಟು. ಆದ್ದರಿಂದ ಖಾಸಗಿ ಮಾಲೀಕತ್ವವನ್ನು ಹೊಂದಿ ಲಾಭ ದೃಷ್ಟಿಯಿಂದ ಹೊರಟ ಸಂಸ್ಥೆಗಳಿಗೆ ಅಂಗೀಕಾರ ನೀಡಬಹುದಾದರೂ ಅವಕ್ಕೆ ಅನುದಾನವನ್ನು ನಿರಾಕರಿಸಬೇಕು. ಕೆಲವು ರಾಜ್ಯಗಳ ಅನುದಾನ ನಿಯಮಾವಳಿಯಲ್ಲಿ ಅಗತ್ಯವೆನಿಸಿದಾಗ ಅಂಗೀಕಾರವನ್ನು ಹಿಂತೆಗೆದುಕೊಳ್ಳುವ ಷರತ್ತೂ ಇರುತ್ತದೆ. ಆದರೆ ಈ ಅಸ್ತ್ರವನ್ನು ನಿಜವಾಗಿ ಪ್ರಯೋಗಿಸುತ್ತಿಲ್ಲ, ಹಾಗೆ ಮಾಡಿದರೆ ಅಲ್ಲಿರುವ ಅಧ್ಯಾಪಕರಿಗೆ ಕೆಲಸ ಹೋಗುವುದಲ್ಲದೆ ಅಲ್ಲಿಯ ಜನರಿಗೆ ವಿದ್ಯಾಸೌಲಭ್ಯ ದೊರಕದಂತಾಗಬಹುದು. ಅಂಥ ಶಾಲೆಗಳನ್ನು ಸರ್ಕಾರವೇ ವಹಿಸಿಕೊಂಡರೆ ಆ ತೊಂದರೆಗಳಿಗೆ ಅವಕಾಶವಾಗುವುದಿಲ್ಲ; ಜೊತೆಗೆ ಹೀನಸ್ಥಿತಿಯಲ್ಲಿರುವ ಇತರ ಶಾಲೆಗಳಿಗೂ ಅದು ಒಂದು ಎಚ್ಚರಿಕೆಯಾಗಬಹುದು.


ಸ್ಥಳೀಯ ಸರ್ಕಾರದ ಶಾಲಾಕಾಲೇಜುಗಳಿಗೆ ಅನುದಾನ ನಿಯಮಾವಳಿ ಬದಲಾಯಿಸಿ

ಭಾರತದಲ್ಲಿ ಜಿಲ್ಲಾ ಪರಿಷತ್ತು, ತಾಲೂಕು ಅಭಿವೃದ್ಧಿ ಮಂಡಲಿ ಇತ್ಯಾದಿ ಸ್ಥಳೀಯ ಸರ್ಕಾರದ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳಿಗೂ ಕಾಲೇಜುಗಳಿಗೂ ಸರ್ಕಾರದ ಅನುದಾನವನ್ನು ಕೊಡಲಾಗುತ್ತಿದೆ. ಅದಕ್ಕಾಗಿ ರಚಿಸಿರುವ ನಿಯಮಾವಳಿ ಅಷ್ಟಾಗಿ ಸಮರ್ಪಕವಾಗಿಲ್ಲ. ಕೆಲವು ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರ ಅದಕ್ಕಾಗಿ ಎತ್ತುವ ತೆರಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡಾಗ ಆಗಿರುವ ವ್ಯಯದಲ್ಲಿ ಕಂಡುಬರುವ ಖಾತಾ ಹಣವನ್ನು ತುಂಬಿಕೊಡುವುದು ಆಚರಣೆಯಲ್ಲಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಒಟ್ಟು ವೆಚ್ಚದ ಒಂದು ನಿಗದಿ ಮಾಡಿರುವ ಶೇಕಡಾ ಪ್ರಮಾಣದಲ್ಲಿ ಅನುದಾನ ನೀಡಲಾಗುವುದು. ಮೊದಲ ಪದ್ಧತಿಯಲ್ಲಿ ಪ್ರಭಾವಶಾಲಿ ಸಂಸ್ಥೆಗಳಿಗೆ ಹೆಚ್ಚು ಹಣವನ್ನೂ ಮಿಕ್ಕವಕ್ಕೆ ಕಡಿಮೆ ಹಣವನ್ನೂ ಹಂಚುವ ಅವಕಾಶವಾಗುವುದು. ಎರಡನೆಯ ಪದ್ಧತಿಯಲ್ಲಿ ಬಲವಾದ ಜಿಲ್ಲೆಗಳು ಹೆಚ್ಚು ವ್ಯಯಮಾಡಿ ಹೆಚ್ಚು ಅನುದಾನದ ಹಣ ಪಡೆಯುವುದಕ್ಕೂ ಬಡಜಿಲ್ಲೆಗಳೂ ಕಡಿಮೆ ಪಡೆಯುವುದಕ್ಕೂ ದಾರಿಯಾಗುತ್ತದೆ; ಜೊತೆಗೆ, ಮಾಡಿರುವ ಖರ್ಚಿನಲ್ಲಿ ಯಾವುದು ಸರಿ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವ ಕಷ್ಟವೂ ತಲೆದೋರುತ್ತದೆ. ಇನ್ನು ಕೆಲವು ರಾಜ್ಯಗಳಲ್ಲಿ ಒಟ್ಟಾರೆ ಸಹಾಯಧನವನ್ನು (ಬ್ಯಾಕ್ ಗ್ರಾಂಟ್) ನಿಷ್ಕರ್ಷಿಸುವ ಪದ್ಧತಿಯೂ ಇದೆ. ಈ ಪದ್ಧತಿಯಲ್ಲಿ ಆಯವ್ಯಯವನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವುದು ಕಷ್ಟ; ಹಾಗೂ ಶಿಕ್ಷಣದ ವೆಚ್ಚ ದಿನದಿನಕ್ಕೂ ಹೆಚ್ಚುತ್ತಿರುವ ಈ ಕಾಲದಲ್ಲಿ ಇದು ಹಿತಕರವಾದ ಪದ್ಧತಿಯೇ ಅಲ್ಲ, ಆದ್ದರಿಂದ ಸದ್ಯದಲ್ಲಿ ಆಚರಣೆಯಲ್ಲಿರುವ ಸಹಾಯಧನದ ನಿಯಮಾವಳಿಯನ್ನು ಸುಧಾರಿಸಬೇಕು. ಮೊದಲನೆಯದಾಗಿ, ಸರ್ಕಾರ ಮಂಜೂರು ಮಾಡಿರುವಂತೆ ಅಧ್ಯಾಪಕರು, ಮೇಲ್ವಿಚಾರಕರು, ಕಾರ್ಯಾಲಯದ ಸಿಬ್ಬಂದಿ ಇವರೆಲ್ಲರ ಸಂಬಳ ಇತ್ಯಾದಿಗಳ ಒಟ್ಟು ಹಣದಲ್ಲಿ ಶೇ.100ರಷ್ಟನ್ನು ಅನುದಾನವಾಗಿ ಕೊಡಬೇಕು. ಆಗ, ವಿದ್ಯಾರ್ಥಿ ಸಂಖ್ಯಾಬಲಕ್ಕನುಗುಣವಾಗಿ ಅಧ್ಯಾಪಕರನ್ನೂ ಅಧ್ಯಾಪಕರ ಸಂಖ್ಯೆಗನುಗುಣವಾಗಿ ಮೇಲ್ವಿಚಾರಕರನ್ನೂ ನೇಮಕ ಮಾಡಿಕೊಳ್ಳಬಹುದಾದ ಅವಕಾಶವಿರುತ್ತದೆ. ಹಾಗೆ ನೇಮಕ ಮಾಡಿಕೊಳ್ಳಬಹುದಾದ ಅಧ್ಯಾಪಕರ ಮತ್ತು ಮೇಲ್ವಿಚಾರಕರ ಸಂಖ್ಯೆಯನ್ನು ಪುರ್ವಭಾವಿಯಾಗಿ ನಿರ್ಧರಿಸಬೇಕು. ಎರಡನೆಯದಾಗಿ, ಕಾರ್ಯಾಲಯದ ಸಿಬ್ಬಂದಿಯ ವೆಚ್ಚದ ಬಗ್ಗೆ ವಿದ್ಯಾರ್ಥಿಸಂಖ್ಯಾಬಲಕ್ಕನುಗುಣವಾಗಿ ಅನುದಾನದ ಮೊತ್ತವನ್ನು ನಿರ್ಧರಿಸಬೇಕು. ಇದನ್ನು ಪ್ರತಿವರ್ಷವೂ ಪುನರ್ವಿಮರ್ಶಿಸುತ್ತಿರಬೇಕು. ಮೂರನೆಯದಾಗಿ, ಸ್ಥಳೀಯ ಸರ್ಕಾರ ಎತ್ತುವ ಶಿಕ್ಷಣದ ತೆರಿಗೆ ಮತ್ತು ಸರ್ಕಾರ ನೀಡುವ ಅನುದಾನದ ಹಣ ಆ ಸಂಸ್ಥೆಗೇ ಸೇರಿದ್ದಾಗಿದ್ದು ಅದರ ಶಿಕ್ಷಣದ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗಬೇಕು. ಕೊನೆಯದಾಗಿ, ಅನಾವರ್ತ ವ್ಯಯಗಳ ಬಗ್ಗೆ ಪ್ರತ್ಯೇಕವಾಗಿ ಒಟ್ಟು ವ್ಯಯದ ಅರ್ಧದಷ್ಟು ಸಹಾಯಧನ ನೀಡಬೇಕು. ಈ ರೀತಿ ಅನುದಾನ ನಿಯಮಗಳನ್ನು ಪುನರ್ವಿಮರ್ಶಿಸುವಾಗ ಶಿಕ್ಷಣ ಸೇವಸೌಲಭ್ಯ ಎಲ್ಲ ಕಡೆಗೂ ಸಮಾನವಾಗಿ ದೊರಕುವಂತೆ ಮಾಡುವುದೇ ಮುಖ್ಯ ಉದ್ದೇಶವಾಗಿರಬೇಕು. ವರ್ಷದ ಅಂತ್ಯದೊಳಗಾಗಿ ಸಹಾಯಧನವನ್ನು ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ ಅದನ್ನು ಅನಂತರ ಪಡೆದುಕೊಳ್ಳುವ ಅವಕಾಶ ಇರಬೇಕು. ಆಗ ಆ ಹಣವನ್ನು ನಿಧಾನವಾಗಿ ಎಚ್ಚರಿಕೆಯಿಂದ ಬಳಸಿಕೊಳ್ಳಲು ಅನುಕೂಲವಾಗುವುದು.

ಪೌರಸಭೆಗಳ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನಿಯಮಾವಳಿ ಬದಲಾಯಿಸಿ

ತಾವು ನಡೆಸುವ ಶಿಕ್ಷಣ ಸಂಸ್ಥೆಗಳಿಗಾಗಿ ಪೌರಸಭೆಗಳು ಮನೆಗಂದಾಯದ ಮೇಲೆ ಶಿಕ್ಷಣದ ತೆರಿಗೆಯನ್ನು ಎತ್ತುವರಷ್ಟೆ, ಚಿಕ್ಕ ಪೌರಸಭೆಗಳಿಗೆ ಅದರಿಂದ ತಕ್ಕಷ್ಟು ಆದಾಯ ಬರುವಂತಿಲ್ಲ. ಆದ್ದರಿಂದ ಸರ್ಕಾರ ಸಹಾಯಧನ ನೀಡುವ ಬಗ್ಗೆ ಈ ಅಂಶವನ್ನು ಗಣನೆಗೆ ತೆಗೆದುಕೊಂಡು ಎಲ್ಲ ಪೌರಸಭೆಗಳೂ ಸಮಾನ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ಅವಕಾಶವಾಗುವಂತೆ ನಿಯಮಗಳನ್ನು ರಚಿಸಬೇಕು, ಪ್ರಾಥಮಿಕ ಶಿಕ್ಷಣಕ್ಕಾದರೆ ಪ್ರತಿ ಮಗುವಿನ ಶಿಕ್ಷಣಕ್ಕೂ ಪ್ರತಿವರ್ಷವೂ 50 ರೂ. ವ್ಯಯವಾಗುವುದೆಂದು ಭಾವಿಸಿ, ಆಯಾ ಪ್ರದೇಶದಲ್ಲಿ ಎತ್ತುವ ತೆರಿಗೆಯ ಜೊತೆಗೆ ಮಿಕ್ಕಿದ್ದನ್ನು ತುಂಬಿಕೊಡಬೇಕು. ಆಗ ಕಡಿಮೆ ತೆರಿಗೆ ಸಂಗ್ರಹವಾಗುವ ಕಡೆ ಹೆಚ್ಚಿಗೆ ಶೇ. ಪ್ರಮಾಣದ ಅನುದಾನವನ್ನೂ ಅಧಿಕ ತೆರಿಗೆ ಸಂಗ್ರಹವಾಗುವ ಕಡೆ ಕಡಿಮೆ ಶೇ. ಪ್ರಮಾಣದ ಅನುದಾನವನ್ನೂ ಗೊತ್ತು ಮಾಡಬಹುದು. ಇಂಥ ಅನುದಾನ ಪದ್ಧತಿಗೆ ಶಿಕ್ಷಣ ಸೇವಾಸೌಲಭ್ಯದ ಸಮೀಕರಣ ತತ್ತ್ವ ಎನ್ನುವರು.

ಕರ್ನಾಟಕ ರಾಜ್ಯದಲ್ಲಿ ಪ್ರೌಢಶಾಲೆಗಳ ಅನುದಾನ ನಿಯಮಾವಳಿ ಬದಲಾಯಿಸಿ

ಕರ್ನಾಟಕ ರಾಜ್ಯದಲ್ಲಿ ಪ್ರೌಢಶಾಲೆಗಳ ಅನುದಾನಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿರುವ 1967ರ ನಿಯಮಾವಳಿ ಮೇಲಿನ ಆದರ್ಶ ತತ್ತ್ವಗಳಲ್ಲಿ ಕೆಲವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದಂತಿದೆ. ಸಹಾಯಧನಕ್ಕೆ ಅರ್ಹತೆ ಪಡೆಯಲಿಚ್ಛಿಸುವ ಶಾಲೆ ಮಾನ್ಯತೆ ಪಡೆದಿರಬೇಕು; ಜೊತೆಗೆ ಆಡಳಿತ ಸಂಸ್ಥೆ ಆರಂಭದಲ್ಲಿ ನಿರ್ದಿಷ್ಟ ಠೇವಣಿಯನ್ನು ಇಡಬೇಕು. ಅನಂತರ ಆರಂಭವಾಗುವ ಪ್ರತಿ ತರಗತಿಗೂ ಅಧಿಕ ಠೇವಣಿ ಕೂಡಿಸಿಡಬೇಕು. ಶಾಲೆ ಸಂಗ್ರಹಿಸುವ ಬೋಧನೆಯ ಶುಲ್ಕವನ್ನು ಸರ್ಕಾರದ ಬೊಕ್ಕಸಕ್ಕೆ ಕಟ್ಟಬೇಕು. ಸಂಸ್ಥೆ ಸಂಗ್ರಹಿಸುವ ಚಂದಾಹಣ, ಠೇವಣಿಯ ಮೇಲೆ ಗಳಿಸಿದ ಬಡ್ಡಿಯ ಹಣ, ಸಹಾಯಧನ ಇತ್ಯಾದಿ ಆದಾಯದಿಂದ ಬರುವ ಹಣವನ್ನು ತನ್ನ ಹೆಸರಿನಲ್ಲಿ ಲೆಕ್ಕವಿಡಬೇಕು, ವಾರ್ಷಿಕ ಆದಾಯ ವೆಚ್ಚದಲ್ಲಿ ಅದನ್ನೆಲ್ಲ ತೋರಿಸಬೇಕು. ಆ ಬಗ್ಗೆ ಇಟ್ಟಿರುವ ಲೆಕ್ಕವನ್ನು ಅಂಗೀಕೃತ ಲೆಕ್ಕಪರೀಕ್ಷಕರಿಂದ ತನಿಖೆ ಮಾಡಿಸಿ ಶಿಕ್ಷಣ ಶಾಖೆಯ ಪರೀಕ್ಷೆ-ನಿರೀಕ್ಷೆಗಳಿಗೆ ಒಳಪಡಿಸಬೇಕು. ಆಡಳಿತ ಮಂಡಲಿ ಅಧ್ಯಾಪಕರನ್ನೂ ಇತರ ಸಿಬ್ಬಂದಿಯವರನ್ನೂ ಅದಕ್ಕಾಗಿ ರೂಪಿಸಿರುವ ನಿಯಮಗಳಿಗನುಸಾರವಾಗಿ ನೇಮಿಸಿಕೊಂಡು ಅನಂತರ ಶಿಕ್ಷಣಾಧಿಕಾರಿಗಳ ಒಪ್ಪಿಗೆಯನ್ನೂ ಪಡೆಯಬೇಕು. ಆಡಳಿತ ಮಂಡಲಿ ತನ್ನ ಆದಾಯದ ಹಣವನ್ನು ಆ ಸಂಸ್ಥೆಯ ಕಾರ್ಯಕ್ರಮಗಳಿಗಲ್ಲದೆ ಮಿಕ್ಕಾವ ಬಾಬಿಗೂ ವ್ಯಯ ಮಾಡಕೂಡದು. ಪ್ರತಿ ತರಗತಿಯಲ್ಲೂ ಸರಾಸರಿ ದೈನಂದಿನ ಹಾಜರಾತಿ 20ಕ್ಕಿಂತ ಕಡಿಮೆ ಇರುವ ಪ್ರೌಢಶಾಲೆಗಳಿಗೆ ಸಹಾಯಧನ ದೊರಕುವಂತಿಲ್ಲ. ಎಲ್ಲ ಪ್ರೌಢಶಾಲೆಗಳಲ್ಲೂ ಹತ್ತನೆಯ ತರಗತಿ ಪುರ್ತ ಬೋಧನೆಯ ಶುಲ್ಕದ ವಿನಾಯಿತಿ ಇರಬೇಕು (ತೇರ್ಗಡೆಯಾಗದ ವಿದ್ಯಾರ್ಥಿಗಳನ್ನುಳಿದು). ಹಾಗೇನಾದರೂ ಶುಲ್ಕವನ್ನು ಎತ್ತಿದರೆ ಅಥವಾ ತೇರ್ಗಡೆಯಾದವರಿಂದ ಅಧಿಕ ಶುಲ್ಕ ಸಂಗ್ರಹಿಸಿದರೆ ಅಂಥ ಶಾಲೆಗಳಿಗೆ ಧನಸಹಾಯ ನೀಡುವುದಿಲ್ಲ. ಶಿಕ್ಷಣ ಶಾಖೆಯ ನಿಯಮಗಳನ್ನು ಆಲಿಸದಿದ್ದರೆ ಅಥವಾ ಇತರ ಸೂಕ್ತ ಕಾರಣಗಳಿಗಾಗಿ ಧನಸಹಾಯವನ್ನು ನಿಲ್ಲಿಸಬಹುದು ಅಥವಾ ಕಡಿಮೆ ಮಾಡಬಹುದು. ಹಾಗೂ ಸರ್ಕಾರ ಅಂಗೀಕರಿಸದಿರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಕೂಡದು. ಇಷ್ಟೊಂದು ಷರತ್ತುಗಳನ್ನೊಳಗೊಂಡಿರುವುದರಿಂದ ಖಾಸಗಿ ಶಾಲೆಗಳಿಗೆ ಕೊಠಾರಿ ನಿಯೋಗ ಸೂಚಿಸಿದಷ್ಟು ಸ್ವಾತಂತ್ರ್ಯ ಇರುವುದಿಲ್ಲ. ಜೊತೆಗೆ ದಕ್ಷತೆಯಿಂದ ಕೆಲಸ ಮಾಡುವ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನವನ್ನಾಗಲಿ ದುರ್ಬಲ ಸಂಸ್ಥೆಗಳಿಗೆ ಹಿಡಿತವನ್ನಾಗಲಿ ತೋರಿಸುವ ಭೇದಕ ನೀತಿಯೂ ಅದರಲ್ಲಿ ಕಂಡುಬರುವುದಿಲ್ಲ.

ಸಹಾಯಧನದ ಮೊತ್ತವನ್ನು ನಿಷ್ಕರ್ಷಿಸುವ ವಿಧಾನ ಬದಲಾಯಿಸಿ

ಶಾಲೆ ಮಾನ್ಯತೆ ಪಡೆದ ಅನಂತರದ ಮೊದಲ ಮೂರು ವರ್ಷಕಾಲ ಮಕ್ಕಳ ಸರಾಸರಿ ಹಾಜರಾತಿಯನ್ನು ಆಧಾರ ಮಾಡಿಕೊಂಡು ವರ್ಷದಲ್ಲಿ ಹತ್ತು ತಿಂಗಳ ಕಾಲದ ಆಧ್ಯಾಪಕರ ಸಂಬಳವನ್ನು ಲೆಕ್ಕಹಾಕಿ ಸಾಂಕೇತಿಕ ಧನಸಹಾಯವನ್ನು ನೀಡಲಾಗುವುದು. ಮೂರನೆಯ ವರ್ಷದ ಅನಂತರ ಪುರ್ಣ ಪ್ರಮಾಣದ ಅನುದಾನ ದೊರಕುವುದು. ಆಧ್ಯಾಪಕರ ಮತ್ತು ಇತರ ಸಿಬ್ಬಂದಿಯವರ ಸಂಬಳ ಭತ್ಯಾದಿಗಳನ್ನು ಪುರ್ಣವಾಗಿ ನೀಡಲಾಗುವುದು. ಅಧಿಕೃತ ಸಾಮಾನ್ಯ ವ್ಯಯಗಳಿಗೂ ಇತರ ವ್ಯಯಗಳಿಗೂ ತಗಲುವ ಸಾದಿಲ್ವಾರು ಹಣವನ್ನು ಗೊತ್ತುಪಡಿಸಿರುವ ಗರಿಷ್ಠ ಮಿತಿಯೊಳಗೆ ಧನಸಹಾಯ ನೀಡಲಾಗುವುದು. ಸರ್ಕಾರದ ಅನುಮತಿಯೊಡನೆ ಮಾಡುವ ಇನ್ನಾವುದಾದರೂ ಅಗತ್ಯ ಖರ್ಚಿನ ಬಗ್ಗೆ ಅದಕ್ಕಾಗಿ ಗೊತ್ತು ಮಾಡಿರುವ ಗರಿಷ್ಠ ಮಿತಿಯೊಳಗೆ ಧನಸಹಾಯ ನೀಡಲಾಗುವುದು. ಸಂಸ್ಥೆಗೆ ಸೇರಿದ ಕಟ್ಟಡ ಆಟದ ಮೈದಾನ ಇತ್ಯಾದಿಗಳ ರಿಪೇರಿ, ಕಂದಾಯ ಇತ್ಯಾದಿಗಳ ಬಗ್ಗೆ ತಗಲುವ (ನಿಗದಿ ಮಾಡಿರುವ ಗರಿಷ್ಠ ಮಿತಿಯೊಳಗೆ) ವೆಚ್ಚವನ್ನು ಅನುದಾನವಾಗಿ ಕೂಡುವುದುಂಟು. ಬಾಡಿಗೆ ಕಟ್ಟಡವಾದರೆ ಶಿಕ್ಷಣಶಾಖೆ ನಿರ್ಧರಿಸಿರುವ ಕೆಲವು ನಿಯಮಗಳ ಪ್ರಕಾರ ಬಾಡಿಗೆ ಹಣವನ್ನೂ ಕೊಡಲಾಗುವುದು. ಹೊಸದಾಗಿ ಕಟ್ಟಡ ಕಟ್ಟುವುದಕ್ಕೂ ಉಪಕರಣ, ಆಟದ ಮೈದಾನ ಮುಂತಾದವನ್ನು ಕೊಳ್ಳುವುದಕ್ಕೂ ತಗಲುವ ವೆಚ್ಚದ ಶೇ.50ರಷ್ಟನ್ನು ಅನುದಾನವಾಗಿ ಕೊಡಲಾಗುವುದು. ಶಾಲೆ ಕೈಗೊಳ್ಳುವ ಶೈಕ್ಷಣಿಕ ಪ್ರವಾಸಗಳಿಗೂ ನಡೆಸುತ್ತಿರುವ ನೂತನ ರೀತಿಯ ಶೈಕ್ಷಣಿಕ ಪ್ರಯೋಗಗಳಿಗೂ ಧನಸಹಾಯ ನೀಡುವುದಕ್ಕೂ ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಿದೆ.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-08-14. Retrieved 2016-10-24.
  2. http://kannada.webdunia.com/article/news-in-kannada/no-intention-to-criminalise-marital-rape-govt-116031100024_1.html