ಕೌಪೀನ

(ಕಚ್ಚೆ ಇಂದ ಪುನರ್ನಿರ್ದೇಶಿತ)

ಕೌಪೀನ ಅಥವಾ ಲಂಗೋಟಿಯು ತುಂಡುದಟ್ಟಿಯಾಗಿ ಭಾರತೀಯ ಪುರುಷರು ಧರಿಸುವ ಒಂದು ಒಳ ಉಡುಪು. ಇದನ್ನು ಸಾಮಾನ್ಯವಾಗಿ ಪೈಲವಾನರು ವ್ಯಾಯಾಮ ಮಾಡುವಾಗ ಅಥವಾ ಸಾಂಪ್ರದಾಯಿಕ ಕುಸ್ತಿ ಅಖಾಡಾಗಳಲ್ಲಿ ಗುದ್ದಾಡುವಾಗ / ತರಬೇತಿಯ ಅವಧಿಗಳಲ್ಲಿ / ಅಭ್ಯಾಸದಲ್ಲಿ ಧರಿಸುತ್ತಾರೆ. ಇದು ಹತ್ತಿ ಬಟ್ಟೆಯ ಆಯತಾಕಾರದ ಪಟ್ಟಿಯನ್ನು ಹೊಂದಿರುತ್ತದೆ ಮತ್ತು ಇದನ್ನು ಧರಿಸುವವನ ಸೊಂಟದ ಸುತ್ತ ಭದ್ರಪಡಿಸಲು ಇರುವ ಬಟ್ಟೆಯ ನಾಲ್ಕು ತುದಿಗಳಿಗೆ ಜೋಡಿಸಿದ ದಾರಗಳ ನೆರವಿನಿಂದ ಜನನಾಂಗಗಳನ್ನು ಮುಚ್ಚಲು ಬಳಸಲಾಗುತ್ತದೆ.

ಭಾರತದಲ್ಲಿ ಕೌಪೀನವು ಕುಸ್ತಿ ಅಥವಾ ಕಬಡ್ಡಿಯಂತಹ ಬಹುತೇಕ ಪ್ರತಿ ರೂಪದ ದೈಹಿಕವಾಗಿ ಆಯಾಸಗೊಳಿಸುವ ಕ್ರೀಡೆಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪುರುಷ ಕ್ರೀಡಾ ಉಡುಪಾಗಿದೆ. ಇದನ್ನು ಪ್ರಾಚೀನ ಕಾಲದಿಂದ ಕ್ರೀಡಾಪಟುಗಳು ಮತ್ತು ಶರೀರವರ್ಧನದಲ್ಲಿ ತೊಡಗಿರುವವರು ತರಬೇತಿ ಮತ್ತು ವ್ಯಾಯಾಮದ ಅವಧಿಯಲ್ಲಿ ಧರಿಸುತ್ತಾ ಬಂದಿದ್ದಾರೆ. ಇದು ಜಿಮ್ ಶಾರ್ಟ್ಸ್‌ಗಳ ಸಮಕಾಲೀನ ಬಳಕೆಯನ್ನು ಹೋಲುತ್ತದೆ. ಈಗಲೂ ಕೌಪೀನವನ್ನು ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಬಳಸಲಾಗುತ್ತದೆ. ಮುಂಚೆ ಲಂಗೋಟಿಯನ್ನು ಯಾವುದೇ ರೂಪದ ದೈಹಿಕವಾಗಿ ಆಯಾಸಗೊಳಿಸುವ ಚಟುವಟಿಕೆಯಲ್ಲಿ ಧರಿಸಲಾಗುತ್ತಿತ್ತು. ಕುಸ್ತಿಪಟುಗಳು ಹಲವುವೇಳೆ ತಮ್ಮ ಜನನಾಂಗಗಳನ್ನು ರಕ್ಷಿಸಲು ಕೆಳಗೆ ಜಿ ಸ್ಟ್ರಿಂಗ್ ಆಕಾರದ ರಕ್ಷೆಯನ್ನು ಧರಿಸುತ್ತಾರೆ.

ಕೌಪೀನವು ಬಹಳ ಪ್ರಾಚೀನ ರೂಪದ ಕ್ರೀಡಾ ಉಡುಪಾಗಿದೆ ಮತ್ತು ಮುಂಚಿನ ವೈದಿಕ ಕಾಲದಿಂದಲೂ (ಕ್ರಿ.ಪೂ. ೨೦೦೦-೧೫೦೦) ಬಳಕೆಯಲ್ಲಿದೆ. ಇದು ಆ ಕಾಲದಲ್ಲಿ ಬರೆದ ಹಿಂದೂ ಪವಿತ್ರ ಧರ್ಮಗ್ರಂಥವಾದ ಸಾಮವೇದದಲ್ಲಿನ ಒಂದು ಶ್ಲೋಕದಿಂದ ಸ್ಪಷ್ಟವಾಗಿದೆ. ಇದು ಸಂಭೋಗದ ಅವಧಿಯಲ್ಲಿ ಕೌಪೀನದ ಬಳಕೆಯನ್ನು ಪ್ರೋತ್ಸಾಹಿಸುತ್ತದೆ.[] ಶಿವನ ಭಕ್ತರು ಕೌಪೀನವನ್ನು ಧರಿಸುತ್ತಿದ್ದರು ಎಂದು ಹೇಳಲಾಗಿದೆ.

ಹಿಂದೂಗಳಿಗೆ ತಪಶ್ಚರ್ಯಕ್ಕೆ ಸಂಬಂಧಿಸಿದಂತೆ ಇದು ಧಾರ್ಮಿಕ ಮಹತ್ವವನ್ನು ಹೊಂದಿದೆ. ನಿಜವಾದ ತಪಸ್ವಿಯು ಕೌಪೀನವನ್ನು ಬಿಟ್ಟು ಬೇರೆ ಏನೂ ಧರಿಸಬಾರದು ಎಂದು ಭಾಗವತ ಪುರಾಣವು ಆಜ್ಞಾಪಿಸುತ್ತದೆ. ಕೆಲವೊಮ್ಮೆ ಸ್ವತಃ ಶಿವನು ಕೌಪೀನವನ್ನು ಧರಿಸಿರುವಂತೆ ಚಿತ್ರಿಸಲಾಗುತ್ತದೆ. ಪಳನಿಯ ಮುರುಗನ್ ಮತ್ತು ಹನುಮಂತ ಕೂಡ ಈ ಉಡುಪನ್ನು ಧರಿಸುತ್ತಾರೆ ಎಂದು ಹೇಳಲಾಗಿದೆ. ಕೌಪೀನ ಅಥವಾ ಲಂಗೋಟಿಯನ್ನು ಬ್ರಹ್ಮಚರ್ಯೆಯೊಂದಿಗೆ ಸಂಬಂಧಿಸಲಾಗುತ್ತದೆ. ತಪಶ್ಚರ್ಯೆಯ ಮಹತ್ವವನ್ನು ಪ್ರತಿಪಾದಿಸಲು ಆದಿ ಶಂಕರರು ಕೌಪೀನ ಪಂಚಕಮ್ ಎಂಬ ಶ್ಲೋಕವನ್ನು ರಚಿಸಿದರು. ಜನಪ್ರಿಯ ಚಿತ್ರಗಳಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ಸಂತರಾಗಿದ್ದ ಸಮರ್ಥ ರಾಮದಾಸರು ಯಾವಾಗಲೂ ಲಂಗೋಟಿಯನ್ನು ಧರಿಸಿರುವಂತೆ ತೋರಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Alter, Joseph S. (1992). The wrestler's body: identity and ideology in north India. University of California Press. pp. 305 pages. ISBN 9780520076976.
"https://kn.wikipedia.org/w/index.php?title=ಕೌಪೀನ&oldid=869331" ಇಂದ ಪಡೆಯಲ್ಪಟ್ಟಿದೆ