ಕಂಬುಜದ ವಾಸ್ತುಶಿಲ್ಪ

ಕಂಬುಜದ ವಾಸ್ತುಶಿಲ್ಪ : ಬಹಳ ಪ್ರಾಚೀನ ಕಾಲದಿಂದಲೂ ಭಾರತದೊಡನೆ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದ್ದ ಕಂಬುಜ ದೇಶ, ಈ ಸಂಬಂಧಗಳ ಫಲವಾಗಿ ಹೊಸ ಶೈಲಿಯ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಾಣ ಮಾಡಿ, ವಿಶ್ವದ ಇತಿಹಾಸದಲ್ಲೇ ಮಹತ್ತ್ವಸ್ಥಾನ ಪಡೆದಿದೆ. ಕಂಬುಜದ ವಾಸ್ತುಶಿಲ್ಪ ಕಲಾಕೃತಿಗಳು ಹಾಳಾಗಿ ಅರಣ್ಯಗಳ ಮಧ್ಯದಲ್ಲಿ ಶತಮಾನಗಳ ಕಾಲ ಮುಚ್ಚಿಹೋಗಿದ್ದುವು. 1860ರಲ್ಲಿ ಹೆನ್ರಿ ಮೌ ಹೆತ್ ಎಂಬ ಪ್ರಕೃತಿವಿಜ್ಞಾನಿ ಆಂಕೋರ್ವಾಟ್ ದೇವಾಲಯದ ಅವಶೇಷಗಳನ್ನು ಪತ್ತೆ ಹಚ್ಚಿ ಕಂಬುಜದ ವಾಸ್ತುಶಿಲ್ಪ ಅಧ್ಯಯನಕ್ಕೆ ತಳಹದಿ ಹಾಕಿದ. ಅನಂತರ ಐಮೊನೀರ್, ಸೀಡಸ್, ಬ್ರಿಗ್ಸ್‌ ಮುಂತಾದ ವಿದ್ವಾಂಸರು ಹೊಸ ಹೊಸ ದೇವಾಲಯಗಳನ್ನು ಪತ್ತೆ ಮಾಡಿದುದೇ ಅಲ್ಲದೆ ಆಳವಾದ ಸಂಶೋಧನೆ ನಡೆಯಿಸಿ, ಕಂಬುಜದ ವಾಸ್ತುಶಿಲ್ಪದ ವಿಷಯದಲ್ಲಿ ತಿಳಿವಳಿಕೆಯನ್ನುಂಟು ಮಾಡಿದ್ದಾರೆ.

ಕಂಬುಜ (ಕಾಂಬೊಡಿಯಾ)
ಹೆಬ್ಬಾಗಿಲು

ಕಂಬುಜದ ವಾಸ್ತುಶಿಲ್ಪ

ಬದಲಾಯಿಸಿ

ಕಂಬುಜದ ವಾಸ್ತುಶಿಲ್ಪ ಶೈಲಿಯನ್ನು ಆಂಕೋರ್ ಪುರ್ವ ಮತ್ತು ಆಂಕೋರ್ ಎಂದು ವಿಭಾಗಿಸಬಹುದು. ಮೊದಲನೆಯ ಶೈಲಿಯನ್ನು ಇಂಡೊಖ್ಮರ್ ಎಂದೂ ಎರಡನೆಯದನ್ನು ಖ್ಮರ್ ಎಂದೂ ಕರೆಯುವುದಂಟು. ಕಂಬುಜದ ಪ್ರಾಚೀನತೆಯ ವಾಸ್ತುಶಿಲ್ಪ ಕೃತಿಗಳು ಫೂನಾನ್ ರಾಜ್ಯಕ್ಕೆ ಸೇರಿದವು. ಪ್ರ.ಶ. 1-7ನೆಯ ಶತಮಾನದವರೆಗಿನ ಈ ಕಲೆಯ ಉಗಮದ ವಿಷಯದಲ್ಲಿ ಖಚಿತವಾದ ಮಾಹಿತಿ ದೊರಕಿಲ್ಲ. ಭಾರತದಂತೆ ಕಂಬುಜದಲ್ಲಿಯೂ ಕಲ್ಲಿನ ಬಳಕೆಗೆ ಮುಂಚೆ ವಾಸ್ತುಶಿಲ್ಪ ಕೃತಿಗಳು ಮರದಲ್ಲಿ ನಿರ್ಮಿತವಾಗುತ್ತಿದ್ದುವು. ಸುಲಭವಾಗಿ ನಾಶವಾಗಿ ಹೋಗುವ ಮರದ ಕಟ್ಟಡಗಳು, ಶಿಲ್ಪಗಳು ನಮಗೆ ಉಪಲಬ್ಧವಾಗಿಲ್ಲವಾದುದರಿಂದ ಆ ಕಾಲದ ವಾಸ್ತುಶಿಲ್ಪಗಳ ಸ್ವರೂಪ ತಿಳಿಯದಾಗಿದೆ ಅನಂತರ ಇಟ್ಟಿಗೆಗಳಿಂದ ನಿರ್ಮಿತವಾದ ದೇವಾಲಯಗಳಲ್ಲಿ ಚೌಕವಾದ ಹಜಾರ ಮತ್ತು ಶಿಖರಗಳಿದ್ದುವು. ಇವು ಗುಪ್ತರ ಕಾಲದ ದೇವಾಲಯಗಳನ್ನು ವಿಶೇಷವಾಗಿ ಹೋಲುತ್ತವೆ.[]

ಫೂನಾನಿನ ವಾಸ್ತುಶಿಲ್ಪ

ಬದಲಾಯಿಸಿ

ಆದುದರಿಂದ ಫೂನಾನಿನ ವಾಸ್ತುಶಿಲ್ಪ ಕೃತಿಗಳು ಪುರ್ಣ ಭಾರತೀಯ ಶೈಲಿಗೆ ಸೇರಿದವು ಎಂದು ಹೇಳಬಹುದಾಗಿದೆ. ಈ ಕಲೆಯ ಕೊನೆಯ ಹಂತವನ್ನು ಆಂಕೋರ್ ಬೊರೈ ಎಂಬಲ್ಲಿ ನೋಡಬಹುದು. ಹಿಂದೂ ಮತ್ತು ಬೌದ್ಧ ದೇವಾಲಯಗಳಿಗೆ ಪ್ರಸಿದ್ಧವಾದ ಆಂಕೋರ್ ಬೊರೈಯಲ್ಲಿ ಹಿಂದೂ ಮತ್ತು ಬೌದ್ಧ ದೇವತೆಗಳ ಶಿಲ್ಪಗಳೂ ವಿಶೇಷವಾಗಿದೆ. ಫ್ನಾಮ್ದಲ್ಲಿ ದೊರಕಿರುವ ಹರಿಹರ, ವಿಷ್ಣು, ಬಲರಾಮ-ಈ ಶಿಲ್ಪಗಳು ಫೂನಾನಿನ ಶಿಲ್ಪಗಳಲ್ಲಿ ಅತಿಮುಖ್ಯವಾದವು. ಹರಿಹರನ ವಿಗ್ರಹವಂತೂ ಬಹು ಸುಂದರವಾಗಿದೆ. ಒಂದು ಭಾಗದಲ್ಲಿ ವಿಷ್ಣುವಿನ, ಮತ್ತೊಂದು ಭಾಗದಲ್ಲಿ ಈಶ್ವರನ ಅಂಶಗಳನ್ನು ಹೊಂದಿರುವ ಈ ಮೂರ್ತಿ ಹೆಚ್ಚು ಅಲಂಕಾರಗಳಿಲ್ಲದೆ ಬಲು ಸರಳವಾಗಿದೆ. ಸು. ಇದೇ ಕಾಲಕ್ಕೆ ಸೇರಬಹುದಾದ ಮತ್ತೊಂದು ಶಿಲ್ಪವೆಂದರೆ ವತ್ಖೊ ಎಂಬಲ್ಲಿನ ಗೋವರ್ಧನಗಿರಿಧಾರಿ ಕೃಷ್ಣ. ವತ್ ರೊಮೊಲೊಕ್ ವಿಹಾರದಲ್ಲಿ ದೊರಕಿರುವ ಮರಳುಶಿಲೆಗಳಿಂದ ನಿರ್ಮಿತವಾದ ಬುದ್ಧನ ಶಿಲ್ಪ ಭಾರತದಲ್ಲೇ ನಿರ್ಮಾಣವಾಯಿತೋ ಎನ್ನುವಷ್ಟು ಭಾರತೀಯತೆಯನ್ನು ಪ್ರದರ್ಶಿಸುತ್ತದೆ.[]

ಸಂಬೊರ್ ಪ್ರೆಕುಕ್

ಬದಲಾಯಿಸಿ

7ನೆಯ ಶತಮಾನದ ಮೊದಲ ಭಾಗದಲ್ಲಿ ನಿರ್ಮಾಣವಾದ ಈಶಾನಪುರವೇ ಈಗಿನ ಸಂಬೊರ್ ಪ್ರೆಕುಕ್. ಇದೊಂದು ವಾಸ್ತುಶಿಲ್ಪ ಕಲಾ ಕೇಂದ್ರ. ಇಟ್ಟಿಗೆಯಿಂದಲೇ ನಿರ್ಮಾಣವಾದ ಶಿಖರಗಳು ಇಲ್ಲಿಯ ವೈಶಿಷ್ಟ್ಯ. ಮೆದುಗಾರೆಯಿಂದ ಮಾಡಿದ ಶಿಲ್ಪಫಲಕಗಳಲ್ಲಿ ವಿಷ್ಣು, ಲೋಕೇಶ್ವರ, ಮತ್ತು ಇತರ ದೇವತೆಗಳ ಶಿಲ್ಪಗಳಿವೆ. ಇಲ್ಲಿಯ ಸ್ತ್ರೀವಿಗ್ರಹಗಳು ಸೌಂದರ್ಯದ ದೃಷ್ಟಿಯಿಂದ ಗಮನಾರ್ಹ, ಕಂಬುಜದ ವಾಸ್ತುಶಿಲ್ಪದ ಮುಂದಿನ ಹಂತವನ್ನು ಪ್ರಸತ್ ಅಂದೆತ್, ಪ್ರೆಖ್ಮೆಂಗ್ ಮತ್ತು ಕೊಂಪೊಂಗ್ಗಳಲ್ಲಿ ಕಾಣಬಹುದು. 7ನೆಯ ಶತಮಾನದ ಉತ್ತರಾರ್ಧ ಮತ್ತು 8ನೆಯ ಶತಮಾನದ ಆದಿಭಾಗದಲ್ಲಿ ನಿರ್ಮಿತವಾದ ಇಲ್ಲಿಯ ದೇವಾಲಯಗಳಲ್ಲಿ ಶಿಲ್ಪಗಳು ವಿಶೇಷವಾಗಿವೆ. ಪ್ರಸತ್ ಅಂದೆತ್ ದೇವಾಲಯದ ಹರಿಹರ ಶಿಲ್ಪ ಆಂಕೋರ್ ಪುರ್ವ ಕಂಬುಜದಲ್ಲಿ ಅತ್ಯುತ್ತಮ ಶಿಲ್ಪಕೃತಿಯೆಂದು ಪರಿಗಣಿತವಾಗಿದೆ. ಮುಖ ಲಕ್ಷಣಗಳಲ್ಲಿ ಇದು ಕಂಬುಜದ ಸ್ವಂತಿಕೆಯನ್ನು ಪ್ರದರ್ಶಿಸಿದರೂ ಇತರ ವಿಷಯಗಳಲ್ಲಿ ಭಾರತೀಯವೆನಿಸುತ್ತದೆ. ಇಲ್ಲಿಗೆ ಆಂಕೋರ್ ಪುರ್ವ (ಇಂಡೋಖ್ಮರ್) ಶೈಲಿ ಕೊನೆಗೊಂಡಿತು.ಅನಂತರ ಬೆಳೆದು ಬಂದ ಆಂಕೋರ್ ಕಲಾಶೈಲಿ 9ನೆಯ ಶತಮಾನದಿಂದ ಪ್ರಾರಂಭವಾಗಿ ಐದು ಶತಮಾನಗಳ ಕಾಲ ಬೆಳಗಿತು. ಶೈಲಿಯ ದೃಷ್ಟಿಯಿಂದ ಇದನ್ನು ಪುರ್ವಾರ್ಧ (9-11ನೆಯ ಶತಮಾನದವರೆಗೆ) ಮತ್ತು ಉತ್ತರಾರ್ಧ (11-13ನೆಯ ಶತಮಾನದವರೆಗೆ) ಎಂದು ವಿಭಾಗಿಸಬಹುದು. ಪುರ್ವಾರ್ಧದಲ್ಲಿ ಕುಲೆನ್, ಪ್ರಿಹ್ಕೊ, ಒಖೆಂಗ್, ಕೊಹ್ಕೆರ್, ಬಾಂಟೆಶ್ರೀ, ಮತ್ತು ಕ್ಲಿಯಾಂಗ್ ಎಂದು ಮುಖ್ಯವಾದ ಸ್ಥಳೀಯ ಪ್ರಭೇದಗಳನ್ನು ನೋಡಬಹುದು.

ಕುಲೆನ್ ಶೈಲಿಯ ವಾಸ್ತುಶಿಲ್ಪ

ಬದಲಾಯಿಸಿ

9ನೆಯ ಶತಮಾನದ ಪುರ್ವಾರ್ಧದಲ್ಲಿ ಬೆಳೆದುಬಂದ ಕುಲೆನ್ ಶೈಲಿಯ ವಾಸ್ತುಶಿಲ್ಪಗಳನ್ನು ಫ್ನಾಮ್ ಕುಲೆನ್ನಲ್ಲಿ ನೋಡುತ್ತೇವೆ. ಇಲ್ಲಿ ಜಾವ ಮತ್ತು ಚಂಪ ರಾಜ್ಯದ ಶಿಲ್ಪಪ್ರಭಾವಗಳು ಕಂಡುಬರುತ್ತವೆ. ವಿವಿಧ ಕಟ್ಟಡಗಳನ್ನು ಒಂದು ಕ್ರಮವನ್ನನುಸರಿಸಿ ನಿರ್ಮಿಸುವ ವಿನ್ಯಾಸ ಪ್ರಾರಂಭವಾದುದು. ಈ ಕಾಲದಲ್ಲಿ. ಶಿಲ್ಪಗಳಲ್ಲಿ ಮಕರತೋರಣಗಳು, ಲತೆಗಳು, ಕಾಲಮುಖಗಳು ವಿಶೇಷವಾಗಿದೆ. ಪ್ರ.ಶ. 9ನೆಯ ಶತಮಾನದ ಕೊನೆಯ ಭಾಗದಲ್ಲಿ ನಿರ್ಮಾಣವಾದ ಪ್ರಿಹ್ಕೊ ಶೈಲಿಯ ದೇವಾಲಯಗಳು ಪ್ರಸತ್ ಕೊಕ್ಪೊ ಮತ್ತು ರೋಲೊಗಳಲ್ಲಿವೆ. ಪ್ರಿಹ್ಕೊನಲ್ಲಿರುವ ಇಟ್ಟಿಗೆಯ ಆರು ಶಿಖರಗಳು, ಲೊಲೈನಲ್ಲಿರುವ ನಾಲ್ಕು ಶಿಖರಗಳು ಮತ್ತು ಬಕಾಂಗಿನ ಎಂಟು ಶಿಖರಗಳು ಈ ಕಾಲದವು. ಇವು ಸುಂದರವಾಗಿವೆ. ಶಿಲ್ಪವಿನ್ಯಾಸದಲ್ಲಿ ಹೊಸ ಪ್ರಯೋಗಗಳು ಕಾಣುತ್ತವೆ. ಸ್ತ್ರೀ ಮತ್ತು ಪುರುಷರ ಶಿಲ್ಪಗಳಲ್ಲಿ ಆಭರಣಗಳು ವಿಶೇಷವಾಗಿವೆ.

ಒಖೆಂಗ್ ಶೈಲಿಯ ವಾಸ್ತುಶಿಲ್ಪಗಳು

ಬದಲಾಯಿಸಿ

9ನೆಯ ಶತಮಾನದ ಆದಿಭಾಗದಲ್ಲಿ ನಿರ್ಮಿತವಾದ ಒಖೆಂಗ್ ಶೈಲಿಯ ವಾಸ್ತುಶಿಲ್ಪಗಳು ಅನೇಕ ದೃಷ್ಟಿಗಳಿಂದ ಪ್ರಾಮುಖ್ಯ ಪಡೆದಿವೆ. ಆಗ ಇಟ್ಟಿಗೆ ಗೋಪುರಗಳ ಜೊತೆಗೆ ಕಲ್ಲಿನ ಗೋಪುರಗಳೂ ನಿರ್ಮಾಣವಾಗತೊಡಗಿದುವು. ಆಂಕೋರಿನ ರೂಪುರೇಖೆಗಳನ್ನು ಫ್ನಾಮ್ ಒಖೆಂಗ್ನಲ್ಲಿ ಪ್ರಯೋಗ ಮಾಡಿ ನೋಡಿದರೋ ಎನ್ನುವಂತೆ ತೋರುತ್ತದೆ. ಹಂತಹಂತದ ಪಿರಮಿಡ್ಡಿನ ಆಕಾರದ ಶಿಖರಗಳು, ಆ ಶಿಖರಗಳ ಸಮಾನಂತರ ನಿರ್ಮಾಣ, ಅವುಗಳ ಸುತ್ತಲಿನ ಜಗುಲಿಗಳು ಮುಂತಾದವು ಇಲ್ಲಿ ರೂಪುಗೊಂಡು, ಮಾದರಿಯಾಗಿ ಮುಂದೆ ಸ್ಥಿರವಾದುವು. ಫ್ನಾಮ್ ಒಖೆಂಗ್ನಲ್ಲಿ ಐದು ಹಂತಗಳಿದ್ದು, ಪ್ರತಿ ಹಂತದಲ್ಲೂ ಹನ್ನೆರಡು ಗೋಪುರಗಳಿವೆ.4ನೆಯ ಜಯವರ್ಮ ಮಹಾರಾಜ (921-41) ತನ್ನ ರಾಜಧಾನಿಯನ್ನು ಯಶೋಧರಪುರದಿಂದ ಕೊಹ್ಕೆರ್ ಎಂಬಲ್ಲಿಗೆ ಬದಲಾಯಿಸಿ, ಹೊಸ ವಾಸ್ತು ಶಿಲ್ಪಶೈಲಿಗೆ ಕಾರಣನಾದ. ಈ ಶೈಲಿ ಕಂಬುಜದ ಇತಿಹಾಸದಲ್ಲೇ ಗಣ್ಯ ಸ್ಥಾನ ಪಡೆದಿದೆ. ಕೊಹ್ಕೆರನ ಶಿಲ್ಪಗಳು ಜೀವಂತವಾಗಿರುವಂತೆ ತೋರುತ್ತವೆ. ಅಂಗಾಂಗಗಳು ಚಲಿಸುತ್ತವೆಯೋ ಎನ್ನುವ ಭ್ರಾಂತಿ ಬರುವಂತೆ ಕೆತ್ತಿರುವ ಈ ಶಿಲ್ಪಗಳ ಅಂಗವಿನ್ಯಾಸ ಬಲು ಮೋಹಕ. ನರ್ತನ ಮಾಡುತ್ತಿರುವ ಶಿವ, ಹಾರುತ್ತಿರುವ ಗರುಡ, ವಾಲಿ-ಸುಗ್ರೀವ ಮೊದಲಾದವು ಉತ್ತಮ ಕೃತಿಗಳು. ಆಂಕೋರ್ ಶೈಲಿಯ ಮುಖ್ಯಾಂಶಗಳಲ್ಲೊಂದಾದ ಹಸನ್ಮುಖ ಶಿಲ್ಪಗಳು ಪ್ರಾರಂಭವಾದುದು ಕೊಹ್ಕೆರ್ನಲ್ಲಿ.

ಬಾಂಟೆಶ್ರೀ ದೇವಾಲಯಗಳು

ಬದಲಾಯಿಸಿ

ಮುಂದಿನ ಹಂತವನ್ನು ಬಾಂಟೆಶ್ರೀ ಎಂಬಲ್ಲಿ ನೋಡಬಹುದು. ವಾಸ್ತುಶಿಲ್ಪ ಇತಿಹಾಸದಲ್ಲೇ ಒಂದು ವಿಶಿಷ್ಟ ಸ್ಥಾನ ಗಳಿಸಿರುವ ಬಾಂಟೆಶ್ರೀ ದೇವಾಲಯಗಳು ಯಜ್ಞವರಾಹನೆಂಬ ಬ್ರಾಹ್ಮಣನ ನೇತೃತ್ವದಲ್ಲಿ ರಾಜೇಂದ್ರವರ್ಮ ಮಹಾರಾಜನ ಕಾಲದಲ್ಲಿ ನಿರ್ಮಾಣವಾದುವು. ಇಲ್ಲಿಯ ದೇವಾಲಯಗಳು ಒಂದೇ ಸಾಲಿನಲ್ಲಿರುವ ಮೂರು ಗೋಪುರಗಳನ್ನೊಳಗೊಂಡಿವೆ. ಇವುಗಳಿಗಿಂತ ಇಲ್ಲಿಯ ಶಿಲ್ಪಗಳು ಹೆಚ್ಚು ಸುಂದರವಾದವು. ಆಂಕೋರ್ವಾಟ್ನ ಶಿಲ್ಪಗಳಿಗಿಂತ ಇದು ಹೆಚ್ಚು ಸುಂದರವಾಗಿದೆಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಭಾರತೀಯ ಪುರಾಣಗಳು ಮತ್ತಿತ್ತರ ಗ್ರಂಥಗಳಿಂದ ಸ್ಫೂರ್ತಿಪಡೆದ ಶಿಲ್ಪಗಳು ದೇವತೆಗಳ ಅದ್ಭುತಕಾರ್ಯಗಳನ್ನು ವಿಸ್ತಾರವಾಗಿ ರೂಪಿಸಿದರು. ಮಹಿಷಾಸುರಮರ್ದಿನಿಯ ಶಿಲ್ಪವಂತೂ ಅದ್ಭುತವಾಗಿದೆ. ಕಂಸವಧೆ, ರಾವಣ ಕೈಲಾಸವನ್ನು ಅಲುಗಿಸುತ್ತಿರುವುದು, ವಿಷ್ಣುವಿನ ವಿವಿಧ ಅವತಾರಗಳು ಮೊದಲಾದವು ಉತ್ತಮ ಶಿಲ್ಪಗಳು. ಕೆಲವು ಶಿಲ್ಪಗಳಲ್ಲಿ ಚಿನ್ನದ ಕುಸುರಿಕೆಲಸದಷ್ಟು ಸೂಕ್ಷ್ಮವಾಗಿರುವ ಕೌಶಲವೂ ಕಾಣಿಸುತ್ತದೆ.

ಕ್ಲಿಯಾಂಗ್ ಶೈಲಿಯ ದೇವಾಲಯಗಳು

ಬದಲಾಯಿಸಿ

ಪ್ರ.ಶ. 11ನೆಯ ಶತಮಾನದ ಮೊದಲ ಭಾಗದಲ್ಲಿ ಕ್ಲಿಯಾಂಗ್ ಶೈಲಿಯ ದೇವಾಲಯಗಳು ಬೆಳಕಿಗೆ ಬಂದುವು. ಫಿಮೆನಕಗಳಲ್ಲಿ ನಿಮಾರ್ಣವಾದ ಗೋಪುರಗಳು ಈ ಕಾಲಕ್ಕೆ ಸೇರಿದವು. ಇದಾದ ಅನಂತರ ಬಾಫುವಾನ್ ಶೈಲಿ ಬೆಳಕಿಗೆ ಬಂತು. ಇಲ್ಲಿಯ ದೇವಾಲಯ ಐದು ಹಂತಗಳಲ್ಲಿರುವ ಬೃಹತ್ ಗೋಪುರ. 1,440' ಉದ್ದ, 560' ಅಗಲ, 160' ಎತ್ತರವಾಗಿರುವ ಇಲ್ಲಿಯ ಶಿಖರ ಗಮನಾರ್ಹ. ಬಾಫುವಾನ್ ಶಿಲ್ಪಶೈಲಿಯನ್ನು ಸುಧಾರಣೆಗಳಿಂದ ಅತ್ಯುತ್ತಮಗೊಳಿಸಿ ಹೊಸದಾದ ಶೈಲಿಯನ್ನು ಆರಂಭಿಸಿದ ಕೀರ್ತಿ ಎರಡನೆಯ ಸೂರ್ಯವರ್ಮನಿಗೆ ಸೇರುತ್ತದೆ. ಸೂರ್ಯವರ್ಮನ (1113-45) ಕಾಲ ಕಂಬುಜದ ಸಾಂಸ್ಕೃತಿಕ ಇತಿಹಾಸದಲ್ಲಿ ಪುರ್ವಕಾಲ. ಸೂರ್ಯವರ್ಮ ಸ್ಥಾಪಿಸಿದ ಆಂಕೋರ್ವಾಟ್ ವಿಶ್ವವಿಖ್ಯಾತವಾಗಿದೆ. ಇಲ್ಲಿಯ ದೇವಾಲಯದ ಮಧ್ಯಾಂಗಣದ ಸುತ್ತಲೂ ಮೇಲ್ಚಾವಣೆಯಿರುವ ಹಾದಿಯೊಂದು 5,100' ಉದ್ದ, 4,500' ಅಗಲ ಇರುವ ಪ್ರದೇಶವನ್ನು ಹೊರವಲಯದಿಂದ ಬೇರ್ಪಡಿಸುತ್ತದೆ. ಪಶ್ಚಿಮಾಭಿಮುಖವಾಗಿರುವ ಈ ದೇವಾಲಯವನ್ನು ಪ್ರವೇಶಿಸಲು, 1,500' ಉದ್ದದ ಭವ್ಯವಾದ ರಾಜಪಥವಿದೆ. ಇದರ ಎರಡು ಕಡೆಗಳಲ್ಲೂ ಕಲ್ಲಿನ ನಾಗ-ನಾಗಿನಿಯರ ಶಿಲ್ಪಗಳಿವೆ. ಪ್ರವೇಶದ್ವಾರದಲ್ಲಿರುವ ಸಿಂಹದ ಸಾಲುಶಿಲ್ಪಗಳು ಈ ಕಟ್ಟಡದ ಮಹತ್ತ್ವವನ್ನು ಪ್ರವೇಶದಲ್ಲೇ ತೋರಿಸಿಕೊಡುತ್ತವೆ. ಕೊನೆಯದಾದ ಹಂತದಲ್ಲಿ ಈಶ್ವರನ ದೇವಾಲಯವಿದೆ. ಇದರ ಶಿಖರ 210' ಎತ್ತರವಾಗಿದ್ದು ದೂರದಿಂದಲೂ ಎದ್ದುಕಾಣುತ್ತದೆ. ಒಟ್ಟಿನಲ್ಲಿ ವಾಸ್ತುಕಲೆಯಲ್ಲಿ ಇದೊಂದು ಮಹತ್ಸಾಧನೆ. ಆಂಕೋರ್ವಾಟ್ನಲ್ಲಿ ವಾಸ್ತು ಮತ್ತು ಶಿಲ್ಪಕಲೆಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯ ಎನ್ನುವುದು ನಿರ್ಧರಿಸಲಾಗದ ಪ್ರಶ್ನೆ. ಈ ಎರಡು ಕಲೆಗಳೂ ಒಂದಕ್ಕೊಂದು ಪುರಕವಾಗಿ ಮಿತವಾಗಿರುವುದು ಇಲ್ಲಿಯ ವೈಶಿಷ್ಟ್ಯ. ಅರೆ ಉಬ್ಬು ಶಿಲ್ಪಗಳನ್ನು ಕೆತ್ತುವ ಕಲೆಯಲ್ಲಿ ಇಲ್ಲಿ ಪರಿಣತಿ ಸಾಧಿಸಿದೆ. ರಾಮಾಯಣ ಮಹಾಭಾರತಗಳ ಕಥೆಗಳಿಂದ ಸ್ಫೂರ್ತಿ ಬಂದಿದೆ. ರಾಮರಾವಣರ ಯುದ್ಧ, ರಾವಣ ಜಟಾಯುವನ್ನು ಶಿಕ್ಷಿಸುವುದು, ಹನುಮಂತ ಲಂಕೆಯನ್ನು ಸುಡುವುದು, ರಾವಣ ಸೀತೆಯನ್ನು ಅಪಹರಿಸುವುದು, ಕುರುಕ್ಷೇತ್ರಯುದ್ಧ ಮುಂತಾದವನ್ನು ಶಿಲ್ಪಿ ಅತ್ಯುತ್ತಮವಾಗಿ ಕೆತ್ತನೆ ಮಾಡಿ ಕಂಬುಜದ ಜನಗಳ ಮನಸ್ಸನ್ನು ಸೊರೆಗೊಂಡಿದ್ದಾನೆ. ಅಪ್ಸರ ಸ್ತ್ರೀಯರನ್ನು ವಿಶೇಷ ಆಸಕ್ತಿಯಿಂದ ಕಡೆದಿದ್ದಾನೆ. ಎಲ್ಲೆಲ್ಲಿ ನೋಡಿದರೂ ಸುಂದರವಾದ ತೆಳ್ಳಗೆ ಬಳುಕುವ, ಆಭರಣ ಭೂಷಿತೆಯರಾದ ಅಪ್ಸರೆಯರ ಮೂರ್ತಿಗಳು. ಇವುಗಳಲ್ಲಿ ಶಿಲ್ಪಿ ಕಲೆಯ ಪರಾಕಾಷ್ಠೆಯನ್ನು ಕಾಣಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಕಂಬುಜದ ಚರಿತ್ರೆ

ಬದಲಾಯಿಸಿ

ಈ ರೀತಿಯ ಸೂಕ್ಷ್ಮವೂ ಸುಂದರವೂ ಆದ ವಾಸ್ತುಶಿಲ್ಪಗಳ ನಿರ್ಮಾಣವಾದ ಅನಂತರ, ಕಂಬುಜದಲ್ಲಿ ಬೃಹತ್ ಪ್ರಮಾಣದ ವಾಸ್ತುಶಿಲ್ಪ ಕೃತಿಗಳು ನಿರ್ಮಾಣವಾದುವು. ಕಂಬುಜದ ಚರಿತ್ರೆಯಲ್ಲಿ ಶ್ರೇಷ್ಠ ದೊರೆಯೆನಿಸಿಕೊಂಡಿರುವ ಏಳನೆಯ ಜಯವರ್ಮನೇ ಆಂಕೋರ್ ಥೊಮ್ ನಗರದ ನಿರ್ಮಾಪಕ. 1200ರಲ್ಲಿ ಪ್ರಾರಂಭವಾದ ಆಂಕೋರ್ ಥೋಮ್ ಕಟ್ಟಡಗಳು ಅವನ ಜೀವಿತ ಕಾಲದಲ್ಲೇ ಪುರ್ಣಗೊಂಡದ್ದು ಆತ ನೀಡಿದ ಆಶ್ರಯದ ಫಲ. 100' ಅಗಲ ಮತ್ತು 16 ಕಿಮೀ ಉದ್ದದ ಕಂದಕವನ್ನು ನಿರ್ಮಿಸಿ ಅದರ ಒಳಭಾಗದಲ್ಲಿ ಬೃಹದಾಕಾರದ ಗೋಡೆಗಳನ್ನು ನಿರ್ಮಿಸಿದ. ಈ ಶಿಖರಗಳ ನಾಲ್ಕು ಮುಖಗಳಲ್ಲಿಯೂ ಬೋಧಿಸತ್ತ್ವ ಲೋಕೇಶ್ವರನ ಶಿಲ್ಪಗಳಿವೆ. ಶಿಖರಗಳೇ ಬುದ್ದನ ರೂಪದಲ್ಲಿ ಮೂರ್ತಿವೆತ್ತಂತೆ ಇರುವುದು ಇಲ್ಲಿಯ ವೈಶಿಷ್ಟ್ಯ. ಇವು ಬೃಹತ್ ಪ್ರಮಾಣದಲ್ಲಿರುವುದು ಮಾತ್ರವಲ್ಲದೆ, ಕಲಾದೃಷ್ಟಿಯಿಂದಲೂ ಅದ್ಭುತಗಳಾಗಿದ್ದು, ಇವುಗಳ ಮುಗುಳ್ನಗೆ ಬಲು ದೂರದಿಂದಲೇ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತದೆ. ಆಂಕೋರ್ ಥೊಮ್ನ ಮಧ್ಯಭಾಗದಲ್ಲಿರುವ ಬಂiÀiÁನ್ ದೇವಾಲಯವಂತೂ ಶಿಖರಗಳ ಸಮೂಹ. ಇಲ್ಲಿಯ ಶಿಲ್ಪಗಳೂ ಬಾಂಟಿಕ್ಡೆ, ತಪ್ರೊಮ್, ನೀಕ್ ಪೀಯನ್, ಬಾಂಟೆಖ್ಮರ್, ವತ್ನೊಕೊರ್ ಮುಂತಾದ ಕಡೆಗಳ ಶಿಲ್ಪಗಳೂ ಮೋಹಕವಾಗಿವೆ. ಪ್ರಿಖಾನ್ ದೇವಾಲಯದಲ್ಲಿರುವ ಏಳನೆಯ ಜಯವರ್ಮನ ಶಿಲ್ಪವೂ ಉತ್ತಮ ಕೃತಿಗಳಲ್ಲೊಂದಾಗಿದೆ.ಜಯವರ್ಮನ ಮರಣಾನಂತರ ಕಂಬುಜದಲ್ಲಿ ವಾಸ್ತುಶಿಲ್ಪ ಸಂಪ್ರದಾಯ ಕ್ಷೀಣಿಸಿತು. ಬೌದ್ಧ ತಾಂತ್ರಿಕ ಧರ್ಮ ತಲೆಯೆತ್ತಿದಂತೆ ವಾಸ್ತುಕೃತಿಗಳ ನಿರ್ಮಾಣ ಕಡಿಮೆಯಾಗಿ, ಸಣ್ಣ ಸಣ್ಣ ಕಂಚಿನ ಮತ್ತು ತಾಮ್ರದ ವಿಗ್ರಹಗಳು ವಿಶೇಷವಾಗಿ ಬೆಳಕಿಗೆ ಬಂದುವು. ಆದರೆ ಇವು ಉತ್ತಮ ಕಲಾಕೃತಿಗಳಾಗಲಿಲ್ಲ. ಸೂರ್ಯವರ್ಮ ಜಯವರ್ಮರಂಥ ಕಲಾಭಿಮಾನಿ ದೊರೆಗಳು ಮತ್ತೆ ಕಂಬುಜದಲ್ಲಿ ಜನ್ಮ ತಾಳಲಿಲ್ಲ. ಹೀಗಾಗಿ ವಿಶ್ವವಿಖ್ಯಾತವಾಗಿದ್ದ ಕಂಬುಜದ ವಾಸ್ತುಶಿಲ್ಪ ಅವನತಿ ಹೊಂದಿತು.

ಉಲ್ಲೇಖಗಳು

ಬದಲಾಯಿಸಿ