ಕಂಪಣ್ಣ : ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸೋದರರಲ್ಲಿ ಎರಡನೆಯವ. ಉಳಿದ ನಾಲ್ವರು ಕ್ರಮವಾಗಿ ಹರಿಹರ, ಬುಕ್ಕ ಮಾರಪ್ಪ ಮತ್ತು ಮುದ್ದಪ್ಪ, ಒಂದನೆಯ ಸಂಗಮ, ತಾಯಿ ಶಾರದೆ, ಈತ ಕೊಡವಾಲೂರಿನ 1346-47ರ ಶಾಸನವೊಂದರ ಪ್ರಕಾರ ಪೂರ್ವ ಪಶ್ಚಿಮ ಸಮುದ್ರಾಧೀಶ್ವರನೆಂಬ ಬಿರುದು ಹೊತ್ತು, ಕಡಪ ಮತ್ತು ನೆಲ್ಲೂರು ಜಿಲ್ಲೆಗಳನ್ನೊಳಗೊಂಡ ತೆಲುಗು ಸೀಮೆಯಲ್ಲಿ ತನ್ನ ಅಣ್ಣ ಹರಿಹರನ ಸಮಕಾಲೀನನೂ ಮಾಂಡಲಿಕನೂ ಆಗಿ ಅಧಿಕಾರ ನಡೆಸುತ್ತಿದ್ದ. ರಾಜ್ಯವಿಸ್ತರಣೆಯ ಕಾರ್ಯದಲ್ಲಿ ಹರಿಹರನಿಗೆ ಇವನಿಂದ ಬಹಳ ಒತ್ತಾಸೆ ಸಿಕ್ಕಿತೆಂದು ಅನೇಕ ಆಧಾರಗಳಿಂದ ತಿಳಿದುಬರುತ್ತದೆ. ಬಹಳ ಮಟ್ಟಿಗೆ ಈತ ಸ್ವತಂತ್ರ್ಯನಾಗಿಯೇ ಆಳುತ್ತಿದ್ದಿರಬೇಕು. ಕಂಪಣ್ಣನ ಅನಂತರ ಇವನ ಮಗ ಸಂಗಮ ಆಳುತ್ತಿದ್ದನೆಂಬುದಾಗಿ ತಿಳಿಸುವ ಬಿಟ್ರಗುಂಟೆಯ ಶಾಸನದಿಂದ ಈ ಅಂಶ ವ್ಯಕ್ತಪಡುತ್ತದೆ.

ಇಂದಿನ ನೆಲ್ಲೂರು ಅಥವಾ ವಿಕ್ರಮ ಸಿಂಹಪುರ ಈತನ ರಾಜಧಾನಿಯಾಗಿತ್ತು. ಸುಭದ್ರ ಕೋಟೆಯಿದ್ದ ಉದಯಗಿರಿ ಈ ರಾಜ್ಯಕ್ಕೆ ಸೇರಿದ್ದುದರಿಂದ ಉದಯಗಿರಿ ರಾಜ್ಯವೆಂಬ ಹೆಸರು ರೂಢಿಯಲ್ಲಿತ್ತು. ಬಹುಶಃ ಕೋಲಾರ ಜಿಲ್ಲೆಯ ಹಲವು ಭಾಗಗಳು ಈತನ ಆಡಳಿತಕ್ಕೆ ಸೇರಿದ್ದುವು. ಸಂಗಮ ಸೋದರರು ಹೊಯ್ಸಳ ಮುಮ್ಮಡಿ ಬಲ್ಲಾಳನ ಸೇವೆಯಲ್ಲಿದ್ದರು. ವಾರಂಗಲ್ವರೆಗೂ ಹಬ್ಬಿದ್ದ ಮುಸ್ಲಿಮ್ ದಾಳಿಗಳನ್ನು ತಡೆದು ದಕ್ಷಿಣ ದೇಶವನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಕಂಪಣ್ಣನನ್ನು ಪುರ್ವತೀರದ ಮಾಂಡಲಿಕನನ್ನಾಗಿ ಹೊಯ್ಸಳ ಬಲ್ಲಾಳ ನೇಮಿಸಿದ್ದನೆಂದು ತಿಳಿದುಬರುತ್ತದೆ. ವೀರ ಕಂಪಣ್ಣನ ಮಂತ್ರಿ ಸೋಮಪ್ಪ ಅಲ್ಲಿಯ ದೇವಾಲಯಕ್ಕೆ ಭೂಮಿಯನ್ನು ದತ್ತಿ ಬಿಟ್ಟಿದ್ದನೆಂಬುದು ಟೇಕಲ್ ಶಾಸನದಿಂದ (1343) ಗೊತ್ತಾಗುತ್ತದೆ. ಮಹಾಮಂಡಲೇಶ್ವರ, ಅರಿರಾಯ ವಿಭಾಡ ಮತ್ತು ಭಾಷೆಗೆ ತಪ್ಪುವ ರಾಯರ ಗಂಡನೆಂದು ಕಂಪಣ್ಣನನ್ನು ಆ ಶಾಸನ ಹೊಗಳುತ್ತದೆ. ಹರಿಹರ- ಬುಕ್ಕರಿಗೂ ಇವೇ ಬಿರುದುಗಳಿದ್ದು ಅವರ ಸಮಾನಸ್ಕಂಧತೆಯನ್ನು ತೋರಿಸುತ್ತದೆ. 1346ರಲ್ಲಿ ಈ ಐವರು ಸೋದರರೂ ಶೃಂಗೇರಿಗೆ ಭೇಟಿ ಕೊಟ್ಟು ಜಗದ್ಗುರು ಶ್ರೀ ವಿದ್ಯಾ ತೀರ್ಥರ ಅನುಗ್ರಹ ಪಡೆದರೆಂಬುದು ಅಲ್ಲಿಯ ಶಾಸನವೊಂದರಿಂದ ವ್ಯಕ್ತವಾಗುವ ವಿಚಾರ. 1346ರಲ್ಲಿ ಕಂಪಣ್ಣನ ಮುಖ್ಯಮಂತ್ರಿ ಮುದ್ರಾಚಿಡ್ಡಿ ಸಾಯಣ್ಣ ಒಡೆಯನೇ ಮಾಧವಾಚಾರ್ಯರ (ವಿದ್ಯಾರಣ್ಯ) ತಮ್ಮ ಸಾಯಣಾಚಾರ್ಯ. ಈತ ಇಮ್ಮಡಿ ಸಂಗಮನ ಅನಂತರ 1364-65ರಲ್ಲಿ ಬುಕ್ಕರಾಯನ ಪರವಾಗಿ ನೆಲ್ಲೂರು ಪ್ರಾಂತ್ಯಾಧಿಕಾರಿಯಾಗಿದ್ದಂತೆ ತಿಳಿದುಬರುತ್ತದೆ. ಸಾಯಣ್ಣನ ತಮ್ಮ ಭೋಗನಾಥ ಕಂಪಣ್ಣನ ನರ್ಮ ಸಚಿವನಾಗಿದ್ದ. ಕಂಪಣ್ಣ 1355ರಲ್ಲಿ ಮೃತನಾದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಂಪಣ್ಣ&oldid=944995" ಇಂದ ಪಡೆಯಲ್ಪಟ್ಟಿದೆ