ಕಂಚುಪ್ರಾಂತಿ
ಕಂಚುಪ್ರಾಂತಿ | |
---|---|
ಕಂಚುಪ್ರಾಂತಿ (ಪಶ್ಚಿಮಘಟ್ಟ) | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಉಪಪಂಗಡ: | ಮಾಕರಂಗಿನೇ(Macaranginae)
|
ಕುಲ: | ಮಾಕರಂಗ |
Species | |
ಮಾಕರಂಗ ಪೆಲ್ಟೇಟ |
ಕಂಚುಪ್ರಾಂತಿ(ಚಂದಕಲ,ಬಟ್ಲಚಂದ್ರಿಕೆ,ಉಪ್ಪಿಗೆ)ಮುಂತಾದ ಹೆಸರಿನಿಂದ ಕರೆಯಲ್ಪಡುವ ಸಣ್ಣ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹೇರಳವಾಗಿ ಕಂಡು ಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
ಬದಲಾಯಿಸಿಇದು ಯುಫೋರ್ಬೇಯೇಸಿ(Ephoriaceae)ಕುಟುಂಬಕ್ಕೆ ಸೇರಿದ್ದು,ಮಕರಂಗ ಪೆಲ್ಟಟಾ(Macaranga Peltata)ಎಂದು ಸಸ್ಯಶಾಸ್ತ್ರೀಯ ಹೆಸರು. ಮಕರಂಗ ಟೊಮೆಂಟೋಸ ಎಂಬುದು ಇದರ ಪರ್ಯಾಯ ನಾಮ. ಕನ್ನಡದಲ್ಲಿ ಚಂದಕನ್ನೆ ಎಂದೂ ಕರೆಯುವುದುಂಟು.ತುಳು ಬಾಷೆಯಲ್ಲಿ 'ಉಪ್ಪಳಿಗೆ'ಎಂದು ಹೆಸರಿದೆ.
ಸಸ್ಯದ ಗುಣಲಕ್ಷಣಗಳು
ಬದಲಾಯಿಸಿಸಣ್ಣ ಪ್ರಮಾಣದ ನಿತ್ಯಹರಿದ್ವರ್ಣದ ಮರ.ಗುರಾಣಿಯಂತಹ ದೊಡ್ಡ ಎಲೆಗಳು.ತ್ವರಿತ ಬೆಳವಣಿಗೆ ಇದೆ.ಸುಲಭವಾಗಿ ಪುನರುತ್ಪತ್ತಿ ಆಗುತ್ತದೆ.ದಾರುವು ಮೃದುವಾಗಿರುತ್ತದೆ.ಮಧ್ಯಮ ಎತ್ತರದ ಈ ಮರ ಬಂಗಾಲ, ಬಿಹಾರ, ಒರಿಸ್ಸ ಮತ್ತು ದಕ್ಷಿಣ ಭಾರತದ ಬೆಟ್ಟಗುಡ್ಡಗಳಲ್ಲಿ ಬೆಳೆಯುತ್ತದೆ. ಕೊಂಬೆಗಳು ಒರಟು, ಎಳೆಯ ರೆಂಬೆಗಳು ತುಪ್ಪುಳಭರಿತವಾಗಿವೆ. ತೊಗಟೆ ನಸುಕಪ್ಪು ಬಣ್ಣದ್ದು, ಎಲೆಗಳ ಉದ್ದ 5"-8"; ಅಗಲ 3¼"-5ಳಿ"; ಅಂಡಾಕಾರ ಅಥವಾ ದೀರ್ಘವೃತ್ತಾಕಾರವಾಗಿವೆ. ತಾವರೆ ಎಲೆಯಲ್ಲಿರುವಂತೆ ಎಲೆಯ ಅಲಗಿನ ತಳಭಾಗದ ಮಧ್ಯದಲ್ಲಿ ಅಂಟಿಕೊಂಡಿರುವ ಉದ್ದನೆಯ ತೊಟ್ಟಿದೆ. ಅಲಗು ಸರಳ, ಎಲೆಯ ಮೇಲ್ಭಾಗ ಹೊಳೆಯುತ್ತದೆ. ಕೆಳಭಾಗದಲ್ಲಿ ಅಂಟು ಸ್ರವಿಸುವ ರೋಮಗ್ರಂಥಿಗಳಿವೆ, ಎಲೆಗಳಲ್ಲಿ ಹಿಂದಕ್ಕೆ ಬಾಗಿರುವ, ಬೇಗ ಉದುರಿಹೋಗುವಂಥ ವೃಂತಪರ್ಣಗಳಿವೆ. ಎಲೆಗಳನ್ನು ದಕ್ಷಿಣ ಭಾರತದ ಹಲವು ಕಡೆ ಹಲಸು ಹಣ್ಣಿನ ಗಟ್ಟಿ ,ಹಾಗೂ ಇತರ ಅಕ್ಕಿಯಿಂದ ತಯಾರಿಸಲ್ಪಡುವ ಆಹಾರ ಬೇಯಿಸಿಡಲು ಉಪಯೋಗಿಸುವ ವಾಡಿಕೆಯಿದೆ. ಹೂಗಳು ಏಕಲಿಂಗಿಗಳು; ಸಂಕೀರ್ಣ ಪುಷ್ಪಗುಚ್ಛದಲ್ಲಿ ಜೋಡಣೆಗೊಂಡಿವೆ. ಪುಷ್ಪ ಪತ್ರಗಳ ಸಂಖ್ಯೆ ಮೂರು, ಕೇಸರಗಳು 2-3, ಹೆಣ್ಣು ಹೂವಿನಲ್ಲಿ ಅಂಟಾದ ದ್ರವದಿಂದ ಆವೃತವಾಗಿರುವ, ಒಂದೇ ಕೋಣೆಯನ್ನುಳ್ಳ ಅಂಡಾಶಯವಿದೆ. ಕಾಯಿ ಸಂಪುಟ ಮಾದರಿಯದು, ದುಂಡಗಿದೆ ಹಾಗೂ ರಸಗ್ರಂಥಿಗಳನ್ನು ಹೊಂದಿದೆ. ಬೀಜಗಳು ಗುಂಡಗೆ, ಗಟ್ಟಿಯಾಗಿ ಒರಟಾಗಿವೆ; ಬಣ್ಣ ಕಂದು, ವಂಶಾಭಿವೃದ್ಧಿ ಬೀಜಗಳ ಮೂಲಕ, ಮರದಿಂದ ಪ್ರಸಾರವಾದ ಬೀಜಗಳು ಮುಂಗಾರು ಮಳೆಯ ಸಮಯದಲ್ಲಿ ಮೊಳೆತು ಹುಲುಸಾಗಿ ಬೆಳೆಯುತ್ತವೆ
ಉಪಯೋಗಗಳು
ಬದಲಾಯಿಸಿಈ ಮರದಿಂದ ರಾಳ ತೆಗೆಯಬಹುದಾಗಿದೆ.ಕಾಗದಕ್ಕೆ ಗಂಜಿ ಕೊಡಲು,ಮುದ್ರೆಗಳಿಗೆ ಉಪಯೋಗವಾಗುತ್ತದೆ.ಇದನ್ನು ಫರಂಗಿಹುಣ್ಣಿಗೆ ಔಷಧವಾಗಿ ಉಪಯೋಗಿಸುವ ಕುರಿತು ಉಲ್ಲೇಖವಿದೆ. ಕಂಚುಪ್ರಾಂತಿಯ ಎಲೆಗಳನ್ನೂ ಸಣ್ಣ ರೆಂಬೆಗಳನ್ನೂ ಪಶ್ಚಿಮ ಕರಾವಳಿಯಲ್ಲಿ ಬತ್ತದ ಗದ್ದೆಗಳಿಗೆ ಹಸಿರು ಗೊಬ್ಬರವಾಗಿ ಬಳಸುತ್ತಾರೆ. ಎಲೆಗಳಲ್ಲಿ ಪೊಟ್ಯಾಷ್ ಹಾಗೂ ಸಾರಜನಕಗಳು ಅಧಿಕ ಪ್ರಮಾಣದಲ್ಲಿವೆ. ಈ ಮರವನ್ನು ಕಾಫಿತೋಟಗಳಲ್ಲಿ ನೆರಳಿಗಾಗಿ ಬೆಳೆಸುವುದೂ ಉಂಟು. ಎಲೆಯ ಕಾಂಡ, ಕಾಯಿ, ತೊಟ್ಟಿನ ಬುಡ ಮತ್ತು ಕತ್ತರಿಸಿದ ರೆಂಬೆಗಳಿಂದ ಒಂದು ಬಗೆಯ ಕೆಂಪು ಬಣ್ಣದ ಅಂಟುದ್ರವ ಒಸರುತ್ತದೆ. ಇದನ್ನು ಶೇಖರಿಸಿ ಮುದ್ದೆಗಳಂತೆ ಮಾಡಿ ಅಂಗಡಿಗಳಲ್ಲಿ ಮಾರುವುದುಂಟು. ನಾಣ್ಯ, ಎಲೆ, ಪದಕ ಮುಂತಾದವುಗಳ ಪಡಿಯಚ್ಚು ತೆಗೆಯಲು ಇದನ್ನು ಬಳಸುತ್ತಾರೆ; ಗೋಂದಿನಂತೆಯೂ ಉಪಯೋಗಿಸಬಹುದು, ಗುಹ್ಯರೋಗದ ವ್ರಣಗಳಿಗೆ ಲೇಪಿಸಲು ಇದರಿಂದ ತಯಾರಿಸಿದ ಸರಿಯನ್ನು (ಪೇಸ್ಟ್) ಉಪಯೋಗಿಸುತ್ತಾರೆ. ಎಲೆ ಮತ್ತು ತೊಗಟೆಯಿಂದ ಪಡೆದ ಕಷಾಯವನ್ನು ಹುಣ್ಣುಗಳನ್ನು ತೊಳೆಯಲು ಉಪಯೋಗಿಸುವುದುಂಟು. ಸ್ವಲ್ಪ ಕಂದು ಬಣ್ಣವುಳ್ಳ ಈ ಮರದ ಚೌಬೀನೆಯನ್ನು ಬೆಂಕಿಕಡ್ಡಿ ಮತ್ತು ಕಾಗದದ ಪಲ್ಪಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಅಧಾರ ಗ್ರಂಥಗಳು
ಬದಲಾಯಿಸಿ- ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ