ಔಷಧಗಾರಿಕೆ
ಔಷಧಗಾರಿಕೆ: ವೈದ್ಯವಿಜ್ಞಾನದಲ್ಲಿ ಔಷಧಗಳ ಗುರುತಿಸುವಿಕೆ, ಜಮಾವಣೆ, ತಯಾರಿಕೆ, ಜೋಪಾಸನೆ, ಹಂಚಿಕೆ ಮತ್ತು ಶಿಷ್ಟೀಕರಣದ ವಿಜ್ಞಾನ (ಫಾರ್ಮಸಿ). ಔಷಧ ವಿಜ್ಞಾನದಲ್ಲಿ (ಫಾರ್ಮಾಕಾಲಜಿ) ಇದೊಂದು ಭಾಗ. ಮದ್ದುಗಳನ್ನು ತಯಾರಿಸಲು ಗಿಡಮರಗಳನ್ನು ಬೆಳೆಸುವುದೂ ರಾಸಾಯನಿಕ ವಸ್ತುಗಳನ್ನು ಹೊಸದಾಗಿ ತಯಾರಿಸುವುದೂ ರೋಗನಿವಾರಣೆ, ಪರೀಕ್ಷೆ, ಚಿಕಿತ್ಸೆಗಳಲ್ಲಿ ಮದ್ದುಗಳಾಗಿ ಬಳಕೆಯಾಗುವ ವಸ್ತುಗಳ ಬಿಡಿಪರೀಕ್ಷೆ, ಗುಣಮಟ್ಟ ನಿರ್ಧರಿಸುವುದೂ ಔಷಧಗಾರನ (ಫಾರ್ಮಸಿಸ್ಟ್) ಕೆಲಸಗಳೇ. ಗುಳಿಗೆ, ಮಾತ್ರೆ, ಲೇಪ, ಮುಲಾಮು, ದ್ರವ, ಮುಚ್ಚರೆಗಳು (ಕ್ಯಾಪ್ಸುಲ್ಸ್) ಚುಚ್ಚಿ ಹೋಗಿಸುವ ಕ್ರಿಮಿಶದ್ಧ (ಸ್ಟರಿಲೈಸ್ಡ್) ಮದ್ದುಗಳೇ ಮುಂತಾದವನ್ನು ಈತ ವೈದ್ಯನ ನಿಯಮಗಳಿಗೆ (ಪ್ರಿಸ್ಕ್ರಿಪ್ಷನ್ಸ್) ಸರಿಯಾಗಿ ತಯಾರಿಸಿ ಕೊಡುತ್ತಾನೆ.
ಔಷಧಗಾರಿಕೆ ಹೇಗೆ ಚಿಗುರಿತೆಂಬುದನ್ನು ಸುಲಭವಾಗಿ ಊಹಿಸುವಂತಿಲ್ಲ. ಗಾಯವಾದಾಗ ಸೊಪ್ಪುಸದೆ ಹಾಕಿ ಕಟ್ಟಿದಾಗ, ವಾತಿಭೇದಿ ಆದವನಿಗೆ ನೀರು ಕುಡಿಸಿದಾಗ ಔಷಧಗಾರಿಕೆ ಮಾಡಿದಂತಾಯಿತು ಎನ್ನಬಹುದು. ಗ್ರೀಕರ ಪುರಾಣದಲ್ಲಿ, ಈಸ್ಕುಲೇಪಿಯಸ್ (ನೋಡಿ- ಈಸ್ಕುಲೇಪಿಯಸ್) ಮದ್ದುಗಳನ್ನು ತಯಾರಿಸಿ ನೀಡುವ ಕೆಲಸವನ್ನು ಸುಂದರಿ ಆರೋಗ್ಯದೇವತೆಗೆ ವಹಿಸಿದ್ದನಂತೆ, ಈಜಿಪ್ಟಿನ ಪುಜಾರಿ ವೈದ್ಯರಲ್ಲೂ ಔಷಧಗಾರರಿದ್ದರು.
ಹಿಂದಿನ ಕಾಲದಲ್ಲಿ ವೈದ್ಯರೆಲ್ಲರೂ ಔಷಧಗಾರಿಕೆಯನ್ನು ಕಲಿತಿರಬೇಕಿತ್ತು. ಪುರಾತನ ಗ್ರೀಕರೂ ರೋಮನ್ ವೈದ್ಯರೂ ಔಷಧಗಾರಿಕೆಗೂ ವೈದ್ಯಕಲೆಗೂ ವ್ಯತ್ಯಾಸ ಕಂಡಿದ್ದರು. ಮಧ್ಯಕಾಲದ ಯುರೋಪಿನಲ್ಲಿ ಈ ವ್ಯತ್ಯಾಸ ಅಷ್ಟಾಗಿರದೆ ವೈದ್ಯರು ತಮ್ಮ ಮದ್ದುಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಆದರೆ ಮೂರ್ ಜನರ ಪ್ರಭಾವದಿಂದ ಔಷಧಗಾರಿಕೆ ಬೇರೆಯಾಯಿತು. 18ನೆಯ ಶತಮಾನದ ನಡುವಿನಲ್ಲಿ ಫ್ರಾನ್ಸಿನ ಸೇನೆಯಲ್ಲಿ ಔಷಧಗಾರನ ಖಾತೆಯೊಂದನ್ನು ತೆರೆಯಲಾಯಿತು. ಪೆನ್ಸಿಲ್ವೇನಿಯ ಆಸ್ಪತ್ರೆಯಲ್ಲಿ ಮದ್ದುಗಳನ್ನು ತಯಾರಿಸಿಕೊಡಲು ಬೇರೊಬ್ಬ ಗಂದಿಗನನ್ನು (ಅಪೊತೆಕರಿ) ನೇಮಿಸಿ ಇದನ್ನು ಜಾರಿಗೆ ತಂದವ ಬೆಂಜಮಿನ್ ಫ್ರಾಂಕ್ಲಿನ್. ವೈದ್ಯಶಾಸ್ತ್ರದೊಂದಿಗೇ ಔಷಧಗಾರಿಕೆ ವಿಜ್ಞಾನವೂ ಮುಂದುವರಿಯುತ್ತಿದೆ. ಮೊಟ್ಟಮೊದಲು ಔಷಧಗಾರಿಕೆಯ ಕಾಲೇಜನ್ನು ತೆರೆದುದು (1821) ಅಮೆರಿಕದ ಫಿಲಿಡಿಲ್ಫಿಯದಲ್ಲಿ. ಆಮೇಲೆ ಬ್ರಿಟನ್, ಯುರೋಪುಗಳಲ್ಲೂ ತೆರೆಯಲಾಯಿತು. ಹಲವು ವಿಶ್ವವಿದ್ಯಾನಿಲಯಗಳಲ್ಲೂ ಇದರ ವ್ಯಾಸಂಗಗಳು ಮೊದಲಾದುವು. ಪ್ರಪಂಚದಲ್ಲಿ ಎಲ್ಲೆಲ್ಲೂ ಈಗ ಬೇರೆಯಾಗಿಯೇ ಎಷ್ಟೋ ಔಷಧಗಾರಿಕೆಯ ಶಾಲೆ, ಕಾಲೇಜುಗಳು ಕೆಲಸ ಮಾಡುತ್ತಿವೆ.
ಶಿಕ್ಷಣ: ಔಷಧಗಾರಿಕೆಯ ಪದವಿ ವ್ಯಾಸಂಗದ ಅವಧಿ ನಾಲ್ಕು ವರ್ಷಗಳಿಗೂ ಮೀರಿ ಇದೆ. ಇದರಲ್ಲಿ ಮುಂದೆ ಡಾಕ್ಟೊರೇಟ್ ಪದವೀಧರರಾಗಲು ಅವಕಾಶಗಳಿವೆ. ಈ ಪದವೀಧರರು ಮುಖ್ಯವಾಗಿ ಸಂಶೋಧನೆ, ಕೃತಕ ತಯಾರಿಕೆ, ಶಿಕ್ಷಣಗಳಿಗಾಗಿ ಇರುವವರು.
ಬೇನೆ ಬಿದ್ದವರ ಚಿಕೆತ್ಸೆ ಮಾಡಲು ಮದ್ದುಗಳನ್ನು ನೀಡುವವರ ಔಷಧಗಾರಿಕೆಯ ಶಿಕ್ಷಣಕ್ಕೆ ಜೀವ, ರಸಾಯನ, ಭೌತವಿಜ್ಞಾನಗಳ ತಿಳಿವಳಿಕೆ ಚೆನ್ನಾಗಿರಲೇಬೇಕು. ಔಷಧಗಾರಿಕೆ ಕಾಲೇಜುಗಳ ಮೂಲ ಶಿಕ್ಷಣದಲ್ಲಿ ಭೌತ, ರಸಾಯನ, ಜೀವ, ಏಕಾಣುಜೀವಿ, ಶಿಲ್ಪತಂತ್ರ, ಅಂಗಕ್ರಿಯೆ, ಔಷಧ, ಔಷಧನೀಡಿಕೆ-ಇವೇ ಮುಂತಾದ ಹಲವಾರು ವಿಜ್ಞಾನಗಳಲ್ಲಿ ಕಡ್ಡಾಯವಾಗಿ ಶಿಕ್ಷಣ ದೊರೆಯುತ್ತದೆ. ಅಲ್ಲದೆ, ಸಾಮಾನ್ಯ ಅರಿವೂ ನುಡಿಯ ತಿಳಿವೂ ಇರಬೇಕು. ಔಷಧಗಾರಿಕೆಯ ಕಸಬಿನಲ್ಲಿ ವ್ಯಾಪಾರ ಉದ್ಯಮಗಳೂ ಸೇರಿರುವುದರಿಂದ ಆ ಸಂಬಂಧದಲ್ಲೂ ಹೆಚ್ಚಿನ ತಿಳಿವನ್ನು ಕೊಡುವರು. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು, ಮಣಿಪಾಲಗಳಲ್ಲಿ ಔಷಧಗಾರಿಕೆ ಕಾಲೇಜುಗಳಿವೆ.
ಕಾಯಿದೆ ಕಟ್ಟಳೆ[edit] ಔಷಧಗಾರಿಕೆ ನಡೆಸಬೇಕೆನ್ನುವವರು ಮೊದಲು ಸರಕಾರದಿಂದ ನೇಮಿತವಾದ ಔಷಧಕಾರಿಕೆ ಮಂಡಲಿಯಿಂದ ಸೂಚಿತವಾದ ಔಷಧಗಾರಿಕೆ ಕಾಲೇಜಿನಿಂದ ಅರ್ಹತಾಪತ್ರ (ಡಿಪ್ಲೊಮ) ಇಲ್ಲವೇ ಪದವಿಯ ಅರ್ಹತೆ, ಅನುಭವ ಪಡೆದಿರಬೇಕು. ಆಗ ಔಷಧಗಾರಿಕೆ ನಡೆಸಲು ಕಾನೂನಿನಂತೆ ಹಕ್ಕು ಬಾಧ್ಯತೆಗಳು ಇರುತ್ತವೆ. ಇಂಥವನು ನೋಂದಾಯಿತ ಔಷಧಗಾರ (ರಿಜಿಸ್ಟರ್ಡ್ ಫಾರ್ಮಸಿಸ್ಟ್). ಔಷಧಗಾರಿಕೆಯ ಕಾಯಿದೆಗಳಲ್ಲಿ ಔಷಧಗಾರಿಕೆ ನಡೆಸಲು ಮುಖ್ಯವಾಗಿ ಪಾಲಿಸಬೇಕಾದ ನಿಯಮಗಳು ಇರುವುವಲ್ಲದೆ ವಿಷ ವಸ್ತುಗಳನ್ನು ಮಾರಲೂ ಮಂಪರಿಕ (ನಾರ್ಕೋಟಿಕ್) ಮದ್ದುಗಳನ್ನು ಕೊಡಲೂ ಅಪಾಯಕರ ಮದ್ದುಗಳ ಮೇಲೆ ಹಾಗೆಂದು ನಮೂದಿಸಿ ಮಾರಲೂ ಗೊತ್ತಾದ ಇನ್ನೂ ಕೆಲವು ಕಾಯಿದೆಗಳಿವೆ. ಈ ಕಾಯಿದೆಗಳಲ್ಲಿ ಮದ್ದುಗಳ ವಿಚಾರ ಬಂದಾಗಲೆಲ್ಲ ಆಯಾ ದೇಶದ ಅಧಿಕೃತ ಔಷಧಮಂಜರಿಯಲ್ಲಿ (ಫಾರ್ಮಕೋಪಿಯ) ಸೂಚಿಸಿರುವ ಮದ್ದುಗಳ ಗುಣಮಟ್ಟಗಳನ್ನು ಪಾಲಿಸುವುದು ಕಡ್ಡಾಯ.
1948ರ ಔಷಧಗಾರಿಕೆ ಕಾಯಿದೆಯ ಪ್ರಕಾರ ಭಾರತದ ಔಷಧಗಾರಿಕೆಯ ಮಂಡಲಿ ನೇಮಕವಾಗಿದೆ. ಔಷಧಗಾರಿಕೆಯ ಕಸುಬು, ಆಚರಣೆಗಳನ್ನು ಚೆನ್ನಾಗಿಯೂ ಔಷಧಗಾರಿಕೆಯ ಕಾಯಿದೆಯನ್ನು ಪುರ್ತಿಯಾಗಿಯೂ ಜಾರಿಗೆ ತರುವುದು, ಔಷಧಗಾರಿಕೆಯಲ್ಲಿ ಹೆಚ್ಚಿನ ಮಟ್ಟದ ತರಬೇತು ಮುಂದುವರಿಸಲು ಒತ್ತಾಸೆ ಕೊಡುವುದು, ಈ ಕಸಬಿನ ವಿಚಾರವಾಗಿ ಜನರಿಗೆ ಸರಿಯಾದ ತಿಳಿವಳಿಕೆ ಕೊಡುವುದು-ಈ ಮಂಡಲಿಯ ಮುಖ್ಯ ಗುರಿಗಳು.
ಭಾರತದಲ್ಲಿ ಹೊರಗಿನಿಂದ ತರಿಸಿಕೊಂಡ, ದೇಶದಲ್ಲಿ ತಯಾರಿಸಿದ, ಮಾರುವ, ಹಂಚುವ ಮದ್ದುಗಳ ಗುಣಮಟ್ಟದ ಮೇಲಿನ ಹತೋಟಿಯು ಔಷಧಗಳ ಕಾಯಿದೆ, 1940 ಮತ್ತೆ 1955, 1961, 1962ರ ತಿದ್ದುಪಡಿಗಳೂ ಮತ್ತದರ ಮೇಲೆ ರಚಿಸಿದ ಕಟ್ಟಳೆಗಳ ಕೈಯಲ್ಲಿದೆ. ಮುಖ್ಯವಾಗಿ ಇದು ರಾಜ್ಯಗಳ ಜವಾಬ್ದಾರಿ. ಈ ಕಾಯಿದೆ ಸುಗಮವಾಗಿ ಆಚರಣೆಗೆ ಬರುವಂತೆ ಹಲವು ಅಧಿಕೃತ ಸಮಿತಿಗಳನ್ನು ಕೇಂದ್ರ ಸರ್ಕಾರ ನೇಮಿಸಿದೆ. ಕೊಲ್ಕೊತ್ತದಲ್ಲಿರುವ ಕೇಂದ್ರ ಔಷಧಗಳ ಪ್ರಯೋಗಾಲಯ ಮೊಟ್ಟಮೊದಲನೆಯ ಸಮಿತಿಯಾಗಿ, ಅಲ್ಲಿಗೆ ಕೇಂದ್ರ ಸರ್ಕಾರ ಇಲ್ಲವೇ ರಾಜ್ಯಗಳ ಅಧಿಕಾರಿಗಳು ಕಳುಹಿಸಿದ ಔಷಧಗಳ ಮಾದರಿಗಳನ್ನು ಬಿಡಿಪರೀಕ್ಷೆ ಮಾಡಿ ವರದಿ ಸಲ್ಲಿಸುವುದು, ಔಷಧಿಗಳ, ಚಮತ್ಕಾರೀ ಪರಿಹಾರಗಳ (ಆಕ್ಷೇಪಕರ ಜಾಹೀರಾತುಗಳು) ಕಾಯಿದೆ, 1954ರ ಪ್ರಕಾರ ಕಾಮಚೋದಕಗಳು, ಎಂಥೆಂಧ ಮೇಹರೋಗಗಳು, ಹೆಂಗಸರ ಕಾಯಿಲೆಗಳಿಗೂ ಸುಲಭ ಗುಣಕಾರಿ ಎನ್ನುವ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ.[೧]
ಸಂಸ್ಥೆಗಳು[edit] ಔಷಧಗಾರರ ರಾಷ್ಟ್ರೀಯ ಸಂಸ್ಥೆಗಳು ಬಹಳ ಇವೆ. (1841)ರಲ್ಲಿ ಸ್ಥಾಪನೆಯಾದ ಗ್ರೇಟ್ ಬ್ರಿಟನ್ನಿನ ಔಷಧ ತಯಾರಿಕಾ ಸಂಘ ಇಂಥದೊಂದು ಮಾದರಿ, ಅಮೆರಿಕದ ಔಷಧ ತಯಾರಿಕಾ ಸಂಘದಲ್ಲಿ ಈ ಶಾಖೆಯ ಎಲ್ಲ ವಿಭಾಗಗಳೂ ಸೇರಿವೆ. ಭಾರತದಲ್ಲೂ 1938ರಿಂದಲೇ ಇಂಥ ಒಂದು ಸಂಘವಿದೆ. ಇವಲ್ಲದೆ ಔಷಧ ಮಾರಾಟಗಾರರ ಸಂಘಗಳೂ ಇವೆ. 1912ರಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಔಷಧ ತಯಾರಿಕಾ ಸಂಘದಲ್ಲಿ ಸುಮಾರು 35 ರಾಷ್ಟ್ರೀಯ ಸಂಘಗಳು ಒಂದುಗೂಡಿವೆ.
ಈ ಸಂಘ, ಸಂಸ್ಥೆಗಳ ನೀತಿಸೂತ್ರಗಳು ಅಮೆರಿಕದಲ್ಲಿರುವಂತೆ ಎಲ್ಲೆಲ್ಲೂ ಜಾರಿಯಲ್ಲಿವೆ. ಮದ್ದುಗಳ ತಯಾರಿಕೆ, ದಾಸ್ತಾನು, ಕೊಡುಗೆಗಳಲ್ಲಿ ಗುಣಮಟ್ಟವನ್ನು ಕಾಪಾಡಿ ಜನರಿಗೆ ಸೇವೆ ಸಲ್ಲಿಸುವುದು ಮುಖ್ಯ ನೀತಿ. ಔಷಧಗಾರ ಇಷ್ಟಪಟ್ಟು ಮದ್ದುಗಳ ವಿಷಯದಲ್ಲಿನ ತನ್ನ ಹೆಚ್ಚಿನ ತಿಳಿವಳಿಕೆಯನ್ನು ಇತರ ಆರೋಗ್ಯ ಶಾಖೆಗಳವರಿಗೆ ನೀಡುವನು. ಔಷಧಗಾರ ತಾನಾಗಿ ಯಾವ ರೋಗಿಯನ್ನೂ ಪರೀಕ್ಷಿಸುವುದೂ ಇಲ್ಲ; ಮದ್ದನ್ನು ನಿಯಮಿಸುವುದೂ ಇಲ್ಲ. ಅಂಥ ಸಲಹೆ ಬೇಕೆಂದವರನ್ನು ನುರಿತ ವೈದ್ಯರಿಗೆ ಕಳುಹಿಸಿಕೊಡುವನು. ಅವನು ವೈದ್ಯ ನಿಯಮಿಸಿದ ಪಟ್ಟಿಯಂತೆ ಮದ್ದನ್ನು ಚಾಚೂ ತಪ್ಪದೆ ಎಚ್ಚರಿಕೆಯಿಂದ ಚೆನ್ನಾಗಿ ತಯಾರಿಸಿ ನೀಡುತ್ತಾನೆ.
ಮುಖ್ಯವಾಗಿ ಔಷಧಗಾರಿಕೆ ಶಾಲೆಗಳಲ್ಲೂ ಔಷಧ ತಯಾರಕರ ಪ್ರಯೋಗಾಲಯ ಗಳಲ್ಲೂ ಔಷಧ ತಯಾರಿಕೆಯಲ್ಲಿ ಸಂಶೋಧನೆ ನಡೆಯುತ್ತದೆ. ಮದ್ದುಗಳಾಗಿ ಬಳಸುವ ಹೊಸ ರಾಸಾಯನಿಕಗಳ ತಯಾರಿಕೆಯೂ ಗಿಡಮೂಲಿಕೆಗಳಿಂದ ಕ್ರಿಯಾಂಶಗಳನ್ನು ಚೊಕ್ಕ ರೂಪದಲ್ಲಿ ಬೇರ್ಪಡಿಸುವುದೂ ಇದರಲ್ಲಿ ಸೇರಿದೆ. ಮದ್ದುಗಳ ಗುಣಮಟ್ಟದ ನಿರ್ಧಾರವೂ ಮುಖ್ಯ ಕೆಲಸಗಳಲ್ಲಿ ಒಂದು. ಮದ್ದುಗಳ ತಯಾರಿಕೆ, ಬಳಕೆಗಳಿಗೆ ರಸಾಯನವಿಜ್ಞಾನದ ಅನ್ವಯವಿದು. ಇವೆಲ್ಲವೊಂದಿಗೆ ಮದ್ದುಗಳ ರೂಪ, ರುಚಿ, ರೋಗಿಗೆ ಹಿಡಿಸುವಂತೆ ಮಾಡುವ, ಒಪ್ಪುವಂತೆ ಕೊಡುವ ವಿಧಾನಗಳು, ಕೆಡದಂತೆ ಇರಿಸುವಿಕೆ, ಕರಗುವಿಕೆ ಮುಂತಾದವುಗಳ ಸಂಶೋಧನೆಯೂ ನಡೆವುದು (ನೋಡಿ- ಔಷಧಮಂಜರಿ; ಔಷಧವಿಜ್ಞಾನ).
ಉಲ್ಲೇಖನಗಳು:
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-10-04. Retrieved 2016-10-20.