ಔಲುಮೀನು: ಓಫಿಯೋಸೆಫ್ಯಾಲಿಡೆ ಅಥವಾ ಚಾನಿಡೆ ಕುಟುಂಬಕ್ಕೆ ಸೇರಿದ ಸಿಹಿನೀರಿನ ಎಲುಬು ಮೀನುಗಳ ಒಂದು ಪ್ರಭೇದ. ಹಾವಿನತಲೆ ಮೀನುಗಳೆಂದು ಪ್ರಸಿದ್ಧವಾಗಿವೆ. ಸಾಮಾನ್ಯವಾಗಿ ಹೂಮೀನೆಂದೂ ಇಂಗ್ಲಿಷಿನಲ್ಲಿ ಮರಲ್ ಎಂದೂ ಕರೆಯಲಾಗುವ ಇದರ ಶಾಸ್ತ್ರೀಯ ನಾಮ ಓಫಿಸಿಫ್ಯಾಲಸ್ ಮರೂಲಿಯಸ್ (ಚಾನ್ನಾ ಮರೂಲಿಯಸ್). ಇದು ಮಧ್ಯ ಆಫ್ರಿಕ, ಭಾರತ, ದಕ್ಷಿಣ ಚೀನಗಳ ಮೂಲನಿವಾಸಿ; ಕರ್ನಾಟಕ ರಾಜ್ಯದ ಕೆರೆಗಳಲ್ಲೂ ಸಾಮಾನ್ಯವಾಗಿ ಸಿಕ್ಕುತ್ತದೆ. ಆಹಾರಕ್ಕಾಗಿ ಇದನ್ನು ಹಿಡಿಯುತ್ತಾರೆ.[೧]

ಬೆಳೆವಣಿಗೆ ನಿಧಾನ. ಸಾಮಾನ್ಯವಾಗಿ ೧೮೦ ಸೆಂಮೀ ವರೆಗೂ ಬೆಳೆಯುವುದು. ದೇಹ ಸ್ವಲ್ಪ ದುಂಡಗೆ ನೀಳವಾಗಿ ಬಾಲದ ಭಾಗದಲ್ಲಿ ಕೊಂಚ ಚಪ್ಪಟೆಯಾಗಿದೆ. ಮೈಮೇಲೆ ಸೈಕ್ಲಾಯ್ಡ್‌ ಅಥವಾ ಟೀನಾಯ್ಡ್‌ ಹುರುಪೆಗಳಿವೆ. ದೇಹದುದ್ದಕ್ಕೂ ಮೂರು ಪಂಕ್ತಿಗಳಲ್ಲಿ ಜೋಡಣೆಗೊಂಡಿರುವ ದೊಡ್ಡ ಮಚ್ಚೆಗಳಿವೆ. ಉದರಭಾಗದ ಎರಡನೆಯ ಜೊತೆ ಈಜುರೆಕ್ಕೆಗಳು ಕೊಂಚ ಮುಂದಕ್ಕಿವೆ. ಮಿಕ್ಕ ಹಾವಿನತಲೆ ಮೀನುಗಳಲ್ಲಿರುವಂತೆ ಇದರಲ್ಲಿಯೂ ಗಾಳಿಯನ್ನು ಸೇವಿಸಲು ಕಿವಿರುಕೋಣೆಯಲ್ಲಿ ಸಹಕಾರಿ ಶ್ವಾಸಾಂಗಗಳಿವೆ. ಇವು ಇರುವುದರಿಂದಲೇ ಈ ಜಾತಿಯ ಮೀನುಗಳು ನೀರಿನ ಹೊರಗೂ ಹೆಚ್ಚು ಬದುಕಬಲ್ಲುವು. ಇದು ಮಾಂಸಾಹಾರಿ ಮೀನು. ಈ ಮೀನಿನ ಆಹಾರ ಸಾಧಾರಣವಾಗಿ ಇತರ ಸಣ್ಣ ಮೀನುಗಳು, ಕಪ್ಪೆಗಳು, ಮತ್ತು ನೀರಿನಲ್ಲಿ ವಾಸಿಸುವ ಕೀಟಗಳು.[೨]

ಗಂಡು ಮತ್ತು ಹೆಣ್ಣುಮೀನುಗಳಿಗೆ ಬಾಹ್ಯರೂಪದಲ್ಲಿಯಾಗಲಿ ಬಣ್ಣದಲ್ಲಾಗಲಿ ವ್ಯತ್ಯಾಸವಿಲ್ಲ. ನೀರಿನಲ್ಲಿನ ಜೊಂಡಿನ ಮಧ್ಯೆ ಹೆಣ್ಣುಮೀನು ಮೊಟ್ಟೆಯಿಡುತ್ತದೆ. ಮೊಟ್ಟೆಯಿಡಲು ಹೆಣ್ಣಿಗೆ ಗಂಡುಮೀನು ಜೊಂಡಿನ ಮಧ್ಯೆ ಸ್ಥಳ ಮಾಡಿಕೊಂಡಿರುವುದಲ್ಲದೆ ಮೊಟ್ಟೆಯೊಡೆದು ಮರಿಗಳು ಹೊರಬರುವ ತನಕ ಮೊಟ್ಟೆಗಳ ರಕ್ಷಣೆಯನ್ನು ವಹಿಸಿಕೊಳ್ಳುವುದೂ ಉಂಟು.

ಉಲ್ಲೇಖನೆಗಳು: ಬದಲಾಯಿಸಿ

  1. http://www.prajavani.net/news/article/2013/05/14/168955.html[ಶಾಶ್ವತವಾಗಿ ಮಡಿದ ಕೊಂಡಿ]
  2. http://www.agrifarming.in/tag/murrel-fish-cultivation-in-kerala/[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಔಲುಮೀನು&oldid=1182776" ಇಂದ ಪಡೆಯಲ್ಪಟ್ಟಿದೆ