ಓದುನಾಟಕಗಳು
ಓದುನಾಟಕಗಳು: ಮೂಲತಃ ಅಭಿನಯಕ್ಕಲ್ಲದೆ ಓದಿಗಾಗಿಯೇ ಸೃಷ್ಟಿಯಾದ ನಾಟಕಗಳು (ದಿ ಕ್ಲಾಸೆಟ್ ಪ್ಲೇಸ್),
ರಂಗಭೂಮಿಯ ನಾಟಕಗಳು ಮತ್ತು ಓದುನಾಟಕಗಳು
ಬದಲಾಯಿಸಿನಾಟಕ, ರೂಪಕ, ಡ್ರಾಮ, ಪ್ಲೇ-ಎಂಬ ಮಾತುಗಳು ಆಡಿದ್ದು, ಮಾಡಿದ್ದು, ತೋರಿದ್ದು ಎಂಬ ಅರ್ಥವನ್ನೇ ಸೂಚಿಸುತ್ತವಾದರೂ ಕೆಲವು ನಾಟಕಗಳು ಶ್ರವ್ಯಕಾವ್ಯಗಳಂತೆ ಓದಿದಾಗಲೂ ಅಷ್ಟೇ ಆನಂದವನ್ನು ಕೊಡುತ್ತವೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ರೋಮನ್ ನಾಟಕಕಾರನಾದ ಸೆನಕನ ರೂಪಕಗಳು ವಾಚನಕ್ಕೋಸ್ಕರವೇ ಬರೆದ ಕೃತಿಗಳು. ಗಯಟೆಯ ಫೌಸ್ಟ್ ನಾಟಕ ರಂಗಭೂಮಿಯ ನಿರ್ಮಾಪಕರಿಗೊಂದು ದೊಡ್ಡ ಸವಾಲು. ಷೆಲ್ಲಿಯ ಪ್ರೊಮಿಥಿಯಸ್ ಅನ್ಬೌಂಡ್ ಕೇವಲ ಓದುವ ನಾಟಕ, ಥಾಮಸ್ ಹಾರ್ಡಿ ತನ್ನ ಅತ್ಯಮೋಘ ಕೃತಿಯೆಂದೆಣಿಸುವ ದಿ ಡೈನಾಸ್ಟ್‌್ಸ ನಾಟಕವನ್ನು ಬರೆದುದು ಓದಿಗಾಗಿಯೇ, ಈ ನಾಟಕದ ವಸ್ತು ಅತಿ ಭವ್ಯವಾಗಿದ್ದು ವಿಸ್ತಾರವಾದ ಯುರೋಪಿನ ವಿವಿಧ ಕದನ ಕ್ಷೇತ್ರಗಳೇ ನಾಟಕದ ಕ್ರಿಯಾರಂಗಗಳಾಗಿವೆ. ಯುರೋಪಿನ ನಾನಾದೇಶಗಳ ವಿರುದ್ಧ ನೆಪೋಲಿಯನ್ ಹೂಡಿದ ಯುದ್ಧಗಳೇ ಈ ನಾಟಕದ ವಸ್ತು. ಹಾರ್ಡಿ ಇದನ್ನು ನಾಟಕೀಯವಾದ ಭವ್ಯ ಕಾವ್ಯ (ಡ್ರಾಮಾಟಿಕ್ ಎಪಿಕ್)-ಎಂದು ಕರೆದಿದ್ದಾನೆ. ಈ ನಾಟಕವನ್ನು ನಾವು ನಮ್ಮ ಕಲ್ಪನಾರಂಗದ ಮೇಲೆ ಒಳಗಣ್ಣಿನಿಂದ ಮಾತ್ರ ನೋಡಿ ಆನಂದಿಸಬಹುದು. ಇದೊಂದು ಉತ್ತಮ ಓದುನಾಟಕ. ನೋಡಲು ಅರ್ಹವಾದ ಅನೇಕ ನಾಟಕಗಳನ್ನು ಕೇವಲ ಓದಿನಿಂದ ಅರಿಯಲು ಸಾಧ್ಯವಾಗದಿರಬಹುದು.
ಹಾಗೆಯೇ ನಾಟಕದ ವಿಚಿತ್ರ ತಂತ್ರ ಮತ್ತು ತುಂಬ ಹರಹಿನ ರಂಗಸ್ಥಳಗಳಿಂದಾಗಿ ಕೆಲವು ನಾಟಕಗಳನ್ನು ಆಡಲು ಕಷ್ಟವಾದರೂ ಅವು ಓದಿ ಅರಿಯಲು ಯುಕ್ತವಾಗಿರುತ್ತವೆ. ರುದ್ರನಾಟಕದ ಆನಂದ ನೋಡಿದಾಗ ಹೇಗೋ ಹಾಗೆ ಅದನ್ನು ಓದಿದಾಗಲೂ ಸಿಗುತ್ತದೆಂದು ಮಿಲ್ಟನ್ ತನ್ನ ಸ್ಯಾಮ್ಸನ್ ಅಗೊನಿಸ್ಟೀಸ್ ನಾಟಕದ ಮುನ್ನುಡಿಯಲ್ಲಿ ಹೇಳಿದ್ದಾನೆ.
ಕೆಲವೊಮ್ಮೆ, ಆಯಾ ಕಾಲದೇಶಗಳ ರಂಗಭೂಮಿಗೆ ಅನುಗುಣವಾದ ಉತ್ತಮ ನಾಟಕಗಳನ್ನು, ಬೇರೊಂದು ಕಾಲದ ರಂಗಭೂಮಿಗೆ ಅಳವಡಿಸಲು ಕಷ್ಟಸಾಧ್ಯವಾದಾಗ ಅವನ್ನು ಬೇರೆ ಕಾಲದ ವಿಮರ್ಶಕರು ತಪ್ಪಾಗಿ ಅರ್ಥಮಾಡಿಕೊಂಡು, ಅವು ಕೇವಲ ಓದಲು ಅರ್ಹವಾದ ನಾಟಕಗಳೆಂದೂ ರಂಗಭೂಮಿಯ ಮೇಲೆ ಪ್ರದರ್ಶಿಸಲು ಸಾಧ್ಯವಾಗದ ಕೃತಿಗಳೆಂದೂ ಅಭಿಪ್ರಾಯಪಟ್ಟಿದ್ದಾರೆ. ಷೇಕ್ಸ್‌ಪಿಯರನ ಗಂಭೀರ ನಾಟಕಗಳಲ್ಲಿನ ಉನ್ನತ ಪಾತ್ರಸೃಷ್ಟಿ, ವಿಭಾವನಾಯುತವಾದ ಉತ್ಕೃಷ್ಟ ಕಾವ್ಯಮಯ ದೃಶ್ಯಗಳನ್ನು ರಂಗಭೂಮಿಯ ಮೇಲೆ ಪ್ರದರ್ಶಿಸುವುದು ಅಸಾಧ್ಯವೆಂದು ಚಾರಲ್ಸ್ ಲ್ಯಾಮ್ ಹೇಳಿದ್ದಾನೆ. ಷೇಕ್ಸ್‌ಪಿಯರನ ಲಿಯರ್ ನಾಟಕವನ್ನು ಅಭಿನಯಿಸಿ ತೋರಿಸುವುದು ದುಸ್ಸಾಧ್ಯವೆಂದು ಅವನ ಮತ, ಲ್ಯಾಮ್ನ ಮಾತನ್ನು ಹ್ಯಾಜ್ಲಿಟ್ ಸಮರ್ಥಿಸುತ್ತ ಈ ನಾಟಕವನ್ನು ರಚಿಸಿದ ಕವಿ ತಾನು ನೇಯ್ದ ಕಲ್ಪನೆಯ ಬಲೆಯಲ್ಲಿ ತಾನೇ ಚೆನ್ನಾಗಿ ಸಿಕ್ಕಿಬಿದ್ದಿದ್ದಾನೆ- ಎನ್ನುತ್ತಾನೆ. ಈ ಇಬ್ಬರು ವಿಮರ್ಶಕರ ಮಾತನ್ನು ಸ್ವಲ್ಪ ತಿದ್ದುತ್ತ ಬ್ರಾಡ್ಲೆ ಈ ನಾಟಕ ರಂಗಭೂಮಿ ಹಿಡಿಸಲಾರದಷ್ಟು ಅತ್ಯುನ್ನತ ಕೃತಿ-ಎನ್ನುತ್ತಾನೆ. ಆದರೆ ಈ ಶತಮಾನದ ಶ್ರೇಷ್ಠ ವಿಮರ್ಶಕ, ನಾಟಕಕಾರ ಹಾಗೂ ರಂಗಭೂಮಿಯ ನಿರ್ದೇಶಕನಾದ ಗ್ರೆನ್ವಿಲ್ ಬಾರ್ಕರ್ ಎಂಬಾತ ಲ್ಯಾಮ್, ಹ್ಯಾಜ್ಲಿಟ್, ಬ್ರಾಡ್ಲೆ ಮುಂತಾದವರ ತಪ್ಪು ಅಭಿಪ್ರಾಯವನ್ನು ತಿದ್ದಲು ಯತ್ನಿಸಿದ್ದಾನೆ. ಷೇಕ್ಸ್‌ಪಿಯರನ ನಾಟಕಗಳನ್ನು ಎಲಿಜ಼ಬೆತ್ ಕಾಲದಲ್ಲಿದ್ದ ರಂಗಭೂಮಿಯನ್ನು ಸಜ್ಜುಗೊಳಿಸಿ ಅದರ ಮೇಲೆ ಸರಿಯಾಗಿ ಪ್ರಯೋಗಿಸಿದಾಗ ಮಾತ್ರ ಅವುಗಳ ಸ್ವಾರಸ್ಯ ನಮಗೆ ತಿಳಿಯುವುದು-ಎಂದು ಅವನ ಅಭಿಪ್ರಾಯ. ಅದರಲ್ಲೂ ಕಿಂಗ್ ಲಿಯರ್ ನಾಟಕದ ಉತ್ಕೃಷ್ಟ ಕಾವ್ಯಶೈಲಿಯನ್ನು ನಟರು ಚೆನ್ನಾಗಿ ಅರಿತುಕೊಂಡು ಮಾತುಗಳನ್ನು ಸರಿಯಾಗಿ ಆಡಿದಾಗ ಆ ನಾಟಕ ಎಷ್ಟೊಂದು ಯಶಸ್ವಿಯಾಗಬಲ್ಲುದೆಂಬುದನ್ನು ತನ್ನ ಪ್ರಯೋಗಳಿಂದ ಗ್ರೆನ್ವಿಲ್ ಬಾರ್ಕರ್ ತೋರಿಸಿಕೊಟ್ಟಿದ್ದಾನೆ. ಕನ್ನಡದಲ್ಲಿ ಕುವೆಂಪು ಅವರ ಶೂದ್ರತಪಸ್ವಿಯನ್ನಾಗಲೀ ಬೆರಳ್ಗೆ ಕೊರಳ್ ಅನ್ನಾಗಲಿ ಅಭಿನಯಿಸುವುದು ಕಷ್ಟ ಸಾಧ್ಯ. ಹಿನ್ನೆಲೆಯ ಸಜ್ಜಿಕೆಯ ಸಂಕೀರ್ಣತೆ ಮತ್ತು ಪ್ರಕೃತಿಯ ಪಾತ್ರವಹಿಸುವಿಕೆಯಿಂದಾಗಿ ಅವು ಅಭಿನಯಿಸಲು ಅಸಾಧ್ಯವಾದುವು ಎಂದರೂ ತಡೆಯುತ್ತದೆ. ಆದರೆ ಅವು ಉತ್ತಮ ಓದುನಾಟಕಗಳಾಗಿವೆ.
ಒಟ್ಟಿನಲ್ಲಿ ಓದುನಾಟಕದ ಭಾಷೆ, ತಂತ್ರಗಳು ರಂಗಭೂಮಿಯ ನಾಟಕಕ್ಕಿಂತ ಭಿನ್ನವಾದವು. ಕಾದಂಬರಿಯಲ್ಲಿದ್ದಂತೆ ಓದುನಾಟಕದ ಮಾತಿನ ಗತಿ, ಲಯ ಓದುವವನ ದೃಷ್ಟಿಯಿಂದ ರಚಿತವಾದುದು. ಅದರಿಂದ ಒಂದು ವೇಳೆ ಮಾತುಗಳಲ್ಲಿ ಕ್ಲಿಷ್ಟತೆ, ಅಸ್ಪಷ್ಟತೆಯಿದ್ದರೆ ಓದುವವ ಪುನಃ ಓದಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೆ ರಂಗಸ್ಥಳ ನಿರ್ದೇಶನ ಅಥವಾ ಬೇರಾವ ರೀತಿಯ ಸೂಚನೆಗಳ ಮೂಲಕ ನಾಟಕಕಾರ ಮಾತುಗಳಿಗೂ ಘಟನೆಗಳಿಗೂ ವಿವರಣೆ ಕೊಟ್ಟು ವ್ಯಾಖ್ಯಾನ ಮಾಡಬಹುದು. ಇದಕ್ಕೆ ರಂಗಭೂಮಿಯ ನಾಟಕದಲ್ಲಿ ಅವಕಾಶವಿಲ್ಲ.