ಓಡೊಂಟಾರ್ನಿಥಿಸ್
ಓಡೊಂಟಾರ್ನಿಥಿಸ್: ಆರ್ಕಿಯಾಪ್ಟೆರಿಕ್ಸ್, ಹೆಸ್ಟೆರಾರ್ನಿಸ್ ಮತ್ತು ಇಕ್ತಿಯಾರ್ನಿಸ್ ಎಂಬ ಮೂರು ಲುಪ್ತವಂಶಿ ಪಕ್ಷಿಗಳ ಗಣಕ್ಕೆ ಮಾರ್ಷ್ ಎಂಬುವನು 1880ರಲ್ಲಿ ಮೊದಲು ಬಳಸಿದ ಹೆಸರು. ಈತ ಕೊನೆಯ ಎರಡು ಪಕ್ಷಿಗಳ ಪಳೆಯುಳಿಕೆಗಳನ್ನು ಕಂಡುಹಿಡಿದು ಇವು ಮೂರೂ ಬೇರೆ ಬೇರೆ ಉಪಗಣಗಳಿಗೆ ಸೇರಿದವೆಂದು ಸೂಚಿಸಿದ. ಆದರೆ ಈ ವರ್ಗೀಕರಣವನ್ನು ಈಗ ಕೈಬಿಡಲಾಗಿದೆ. ಬದಲು ಜುರಾಸಿಕ್ ಯುಗದ ಆರ್ಕಿಯಾಪ್ಟೆರಿಕ್ಸ್ ಪಕ್ಷಿ ಆರ್ಕಿಯಾರ್ನಿಥಿಸ್ ಉಪವರ್ಗಕ್ಕೂ ಕ್ರಿಟೇಷಸ್ ಯುಗದ ಉಳಿದವರೆಡು ನಿಯಾರ್ನಿಥಿಸ್ ಉಪವರ್ಗಕ್ಕೂ ಸೇರಿದವೆಂದು ಭಾವಿಸಲಾಗಿದೆ. ಪಳೆಯುಳಿಕೆಗಳನ್ನು ಮಾತ್ರ ಬಿಟ್ಟಿರುವ ಈ ಮೂರು ವಿವಿಧ ಪಕ್ಷಿಗಳು ನಿಸರ್ಗದ ಒಂದು ಅಪುರ್ವ ಕಾಣಿಕೆಯೆಂದು ಪಕ್ಷಿವಿಜ್ಞಾನಿಗಳು ತಿಳಿದಿದ್ದಾರೆ. ಇವುಗಳಿಗೆ ಕೊಕ್ಕು ಇದೆ; ಆದರೆ ಬಾಯಲ್ಲಿ ಹಲ್ಲಿರುವುದು ಒಂದು ವಿಶೇಷ; ಮುಂಗೈ ಮಾರ್ಪಾಟಾಗಿ ರೆಕ್ಕೆಯಾಗಿರುವುದಲ್ಲದೆ ರೆಕ್ಕೆಯಲ್ಲಿ ಕೈಬೆರಳುಗಳೂ ಉಗುರೂ ಇರುವುದು ಒಂದು ಕೌತುಕದ ವಿಷಯ. ಬಾಲದ ಭಾಗ ಉದ್ದವಾಗಿದ್ದು ಅದರ ಎರಡೂ ಕಡೆ ಗರಿಗಳಿವೆ. ಈ ವೈಚಿತ್ರ್ಯವನ್ನು ಊಹಿಸಿದಾಗ ನಮಗೆ ಅರಿವಾಗುವುದು ಇವು ಅರ್ಧ ಉರಗ ಅರ್ಧ ಪಕ್ಷಿಗಳೆಂದು. ಇದರಿಂದಾಗಿ ಯಾವುದೊ ಒಂದು ಜಾತಿಯ ಉರಗ ಕಾಲಕ್ರಮದಲ್ಲಿ ಪಕ್ಷಿಯಾಗಿ ವಿಕಾಸ ಹೊಂದಿತು ಎಂಬ ಸಿದ್ಧಾಂತಕ್ಕೆ ಜೀವ ವಿಕಾಸ ವಿಜ್ಞಾನಿಗಳು ಬಂದಿರುತ್ತಾರೆ. (ನೋಡಿ- ಆರ್ಕಿಯಾಪ್ಟೆರಿಕ್ಸ್)