ಒಣಗಿಸಿರುವ ಮೇವು
ಒಣಗಿಸಿರುವ ಮೇವು ಎಂದರೆ ಸಸ್ಯ ಬಿಡುವ ಸಮಯದಲ್ಲಿ ಕಟಾವು ಮಾಡಿ ಒಣಗಿಸಿ ಅದರ ಆಹಾರಾಂಶಗಳು ಹಾಳಾಗದಂತೆ, ದೀರ್ಘಕಾಲ ಕೆಡದಂತೆ ಸಂಗ್ರಹಿಸಿಡಿರುವ ದನಗಳ ಮೇವು. ಇಂಗ್ಲಿಷಿನಲ್ಲಿ ‘ಹೇ’ ಎನ್ನುತ್ತಾರೆ. ‘ಹೇ’ ತಯಾರಿಕೆಯ ಕ್ರಮದಿಂದ ‘ಮೇವಿನ’ ಉಪಯುಕ್ತತೆ ಹೆಚ್ಚುವುದರ ಜೊತೆಗೆ ಅದರ ಸಾಗಣೆಯೂ ಸುಲಭ ಸಸ್ಯದಲ್ಲಿ ಕಾಳು ದೊರೆತ ಮೇಲೆ ಕಟಾವುಮಾಡಿ ಶೇಖರಿಸಿದ ಮೇವಿನಲ್ಲಿ ಆಹಾರಾಂಶಗಳು ನಷ್ಟವಾಗಿರುತ್ತವೆ. ಒಣಗಿದ್ದರೂ ಇಂಥ ಮೇವನ್ನು ಒಣಗಿಸಿದ ಮೇವು ಎನ್ನಲಾಗದು. ಸೂಡಾನ್ ಹುಲ್ಲು, ಜಾನ್ಸನ್ ಹುಲ್ಲು, ಗರಿಕೆ, ಓಟ್ಸ್, ರೈ, ಸಿಹಿ ಅಥವಾ ಒಗರು ಜೋಳ, ತಿಮೋತಿ, ಆಲ್ಫಾಲ್ಫ, ಸೋಯಾಬೀನ್ಸ್, ಕೆಂಪು ಕ್ಲೋವರ್, ಅಲಸಂದೆ, ಕುಡ್ಜು, ನೆಲೆಗಡಲೆ, ಹೆಸರು, ಉದ್ದು ಮುಂತಾದುವುಗಳಿಂದ ಹೇ ಅಥವಾ ಒಣಗಿಸಿದ ಮೇವನ್ನು ತಯಾರಿಸಬಹುದು.
ಒಣಮೇವನ್ನು ಸಿದ್ಧಪಡಿಸುವಾಗ ಹಸಿ ಮೇವಿನ ನೀರಿನ ಅಂಶವನ್ನು ತಗ್ಗಿಸುವುದು ಮುಖ್ಯ. ಸಾಮಾನ್ಯವಾಗಿ ಹಸಿಮೇವನ್ನು ಬಿಸಿಲಿನಲ್ಲಿ ಅಥವಾ ಯಂತ್ರಗಳ ನೆರವಿನಿಂದ ಒಣಗಿಸುತ್ತಾರೆ. ಹೀಗೆ ಮಾಡುವಾಗ ಮೇವಿನ ಆಹಾರಾಂಶಗಳು ನಷ್ಟವಾಗದಂತೆ ಎಚ್ಚರವಹಿಸಬೇಕು.
ಒಣಮೇವಿನ ತಯಾರಿಕೆಯಲ್ಲಿ ಹಸಿಮೇವಿನ ಬೆಳೆವಣಿಗೆ, ಹಾಗೂ ಕಟಾವಿನ ಕಾಲಾವಧಿ ಮುಖ್ಯಪಾತ್ರ ವಹಿಸುತ್ತವೆ. ಹುಲ್ಲು ಹೆಚ್ಚು ಬಲಿತರೆ ಅದರಲ್ಲಿನ ಪ್ರೋಟೀನ್ ಅಂಶ ತಗ್ಗುತ್ತದೆ. ಅಲ್ಲದೇ ಕಾಂಡದಲ್ಲಿ ನಾರಿನ ಪ್ರಮಾಣ ಹೆಚ್ಚುತ್ತದೆ. ಕಾಳಾಗುವ ಕಾಲ ಸಮೀಪಿಸಿದಂತೆಲ್ಲ ಸಸ್ಯದಲ್ಲಿನ ಆಹಾರಾಂಶಗಳನ್ನು ಜಾನುವಾರುಗಳು ಜೀರ್ಣಿಸಿಕೊಳ್ಳುವುದು ಕಠಿಣವಾಗುತ್ತದೆ. ಆದ್ದರಿಂದ ಸಸ್ಯಗಳು ಸಾಕಷ್ಟು ಎಳೆಯವಿದ್ದಾಗ, ಹೆಚ್ಚಿನ ಇಳುವರಿ ಸಿಗುವ ತೆರದಲ್ಲಿ, ಒಣಗಿಸುವುದಕ್ಕೆ ಅನುಕೂಲವಾದ ಹವೆಯಿದ್ದಾಗ, ಕಟಾವು ಮಾಡುವುದು ಉಚಿತ.
ಹೊಲದಲ್ಲಿ ಕೊಯ್ಲಿನ ಹುಲ್ಲು ಮಳೆಗೆ ಸಿಕ್ಕಿದರೆ ಮೇವಿನ ಗುಣ ಮತ್ತು ಉಪಯುಕ್ತತೆ ಕಡಿಮೆ ಆಗುತ್ತವೆ. ಹೊಲಗಳಲ್ಲಿ ಕೊಯ್ದು ಒಟ್ಟಿದ ಹಸಿಮೇವು ಸರಿಯಾಗಿ ಒಣಗಲು ಅದನ್ನು ಆಗಾಗ್ಗೆ ತಿರುವಿ ಹಾಕಬೇಕು. ಅನಂತರ ರಾಶಿ ಮಾಡಬೇಕು. ಏನೇ ಆದರೂ ಬಿಸಿಲಲ್ಲಿ ಒಣಗಿಸಿದ ಮೇವಿನಲ್ಲಿ ಪೌಷ್ಟಿಕಾಂಶ ಗಣನೀಯವಾಗಿ ಕಡಿಮೆಯಾಗುತ್ತದೆ.
ಯಂತ್ರಗಳ ಸಹಾಯದಿಂದ ಬಿಸಿಗಾಳಿಯನ್ನು ಉತ್ಪತ್ತಿ ಮಾಡಿ ಹಸಿಮೇವನ್ನು ಒಣಗಿಸಬಹುದು. ಈ ವಿಧಾನದಿಂದ ಮೇವು ಬೇಗ ಒಣಗುತ್ತದೆ. ಆದ್ದರಿಂದ ಮೇವಿನಲ್ಲಿ ಹೆಚ್ಚು ಬದಲಾವಣೆಗಳಾಗುವುದಿಲ್ಲ. ಹೀಗೆ ಒಣಗಿಸಿದ ಮೇವು ಹಸಿರಾಗಿಯೇ ಇರುತ್ತದೆ; ಮತ್ತು ಅದರ ರಚನೆ ಹಾಗೂ ಆಹಾರಾಂಶ ಪುರೈಕೆಯ ಶಕ್ತಿ ಎಲ್ಲವೂ ಹಸಿರು ಮೇವಿಗೆ ಸಮನಾಗಿರುತ್ತವೆ. ಹೀಗೆ ಕೃತಕ ರೀತಿಯಿಂದ ಒಣಗಿಸಿ ತಯಾರಿಸಿದ ಮೇವಿನ ಆಹಾರಾಂಶ ಸಾಮಾನ್ಯವಾಗಿ ಬಿಸಿಲಿನಲ್ಲಿ ಒಣಗಿಸಿದ ಮೇವಿನ ಆಹಾರಾಂಶಕ್ಕಿಂತ ಉತ್ತಮ. ಕೃತಕ ರೀತಿಯಲ್ಲಿ ತಯಾರಾದ ಒಣ ಮೇವಿನಲ್ಲಿ ಕೆರೋಟೀನ್ ಆಹಾರಾಂಶ ನಾಶವಾಗುವುದಿಲ್ಲ; ಬಿ ಮತ್ತು ಡಿ ಜೀವಸತ್ವಗಳೂ ಕುಂದುವುದಿಲ್ಲ. ಒಣಗಿಸಿದ ಮೇವಿನ ಮೆದೆಗಳನ್ನು ಮಳೆ ನೀರಿನಿಂದ ತೋಯದಂತೆ ಕಾಪಾಡಬೇಕು ಮತ್ತು ಕ್ರಮವರಿತು ಮೆದೆ ಹಾಕಬೇಕು. ಕ್ರಮವಿಲ್ಲದ ಮೆದೆ ಹಾಕಿದರೆ ಸುಲಭವಾಗಿ ಗಾಳಿ ಮಳೆಗಳ ಹೊಡೆತಕ್ಕೆ ಸಿಕ್ಕಿ ಮೇವು ಕೆಡುತ್ತದೆ.
ಹಸಿ ಮೇವಿನಲ್ಲಿ 70 ಪ್ರತಿಶತ ನೀರಿರುತ್ತದೆ. ಒಣಗಿಸಿದ ಮೇವಿನಲ್ಲಿ ತೇವಾಂಶ ಸು.ಶೇ.15 ಮಾತ್ರ ಇರುತ್ತದೆ; ಆದ್ದರಿಂದ ಹಸಿ ಮೇವಿನಲ್ಲಿರುವುದಕ್ಕಿಂತ ಹೆಚ್ಚಿನ ಆಹಾರಾಂಶ ದೊರಕುತ್ತದೆ. ಕೆಲವು ಸಮಯದಲ್ಲಿ ಮಾತ್ರ ಯಥೇಚ್ಛವಾಗಿ ಸಿಕ್ಕುವ ಹಸಿ ಮೇವನ್ನು ಕೊಯ್ದು ಒಣಗಿಸಿ ‘ಹೇ’ ಮಾಡಿದರೆ ದನಕರುಗಳಿಗೆ ಹೆಚ್ಚಿನ ಪರಿಮಾಣದಲ್ಲಿ ಒಳ್ಳೆಯ ಮೇವು ಸಿಗುವಂತಾಗುತ್ತದೆ. ಹಸಿ ಮೇವನ್ನು ಒಣಗಿಸಿದಾಗ ದೊರೆಯುವ ಪ್ರಮಾಣ ಮೂಲ ಪ್ರಮಾಣದ ಶೇ.20-25 ಮಾತ್ರ.