ಒಡಂಬಡಿಕೆ (ರಾಜಕೀಯ)

ಒಡಂಬಡಿಕೆ (ರಾಜಕೀಯ) ಎರಡು ಅಥವಾ ಎರಡಕ್ಕೂ ಹೆಚ್ಚು ಪಕ್ಷಗಳು ಅಥವಾ ರಾಷ್ಟ್ರಗಳು ಯಾರ ಒತ್ತಾಯಕ್ಕೂ ಒಳಪಡದೆ, ಕೆಲ ಕಾರ್ಯಗಳನ್ನು ಮಾಡಲು ಅಥವಾ ಮಾಡದೆ ಇರಲು ಮಾಡಿಕೊಂಡ ಒಡಂಬಡಿಕೆಯ ಉದಾಹರಣೆಗಳನ್ನು ನಾವು ಇತಿಹಾಸ ಗ್ರಂಥಗಳಲ್ಲಿ ಕಾಣಬಹುದು.

ಚಂದ್ರಗುಪ್ತನ ಮಂತ್ರಿಯಾಗಿದ್ದ ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಮನು ಹಾಗೂ ಪ್ರಜೆಗಳ ನಡುವೆ ಆದ ಒಡಂಬಡಿಕೆಯನ್ನು ಚರ್ಚಿಸುತ್ತಾನೆ. ಪ್ರಜೆಗಳು ಅರಾಜಕ ಸ್ಥಿತಿಯಲ್ಲಿದ್ದಾಗ, ಮತ್ಸ್ಯ ನ್ಯಾಯದಿಂದಾಗಿ ತೊಂದರೆಗೊಳಪಡುತ್ತಿದ್ದ ಅವರು ಮನುವನ್ನು ತಮ್ಮ ದೊರೆಯನ್ನಾಗಿ ಚುನಾಯಿಸಿಕೊಂಡು, ತಾವು ಬೆಳೆದದ್ದರಲ್ಲಿ 1/6 ಭಾಗವನ್ನು ಆತನಿಗೆ ಒಪ್ಪಿಸುವುದಾಗಿಯೂ ದೊರೆ ಪ್ರಜೆಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿಯೂ ಒಡಂಬಡಿಕೆಯಾಗಿತ್ತೆಂದು ಆತ ತಿಳಿಸುತ್ತಾನೆ. ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ಗಳಲ್ಲಿ ಕ್ರೈಸ್ತ ಪ್ರೆಸ್ಬಿಟಿಯರಿಯನ್ ಮತಸ್ಥಾಪನೆ ಮಾಡಿದ ವಿಧಿ ವಿಹಿತವಾದ ಸಂಧಿ ಮತ್ತು ಒಡಂಬಡಿಕೆಗಳು ಪ್ರಸಿದ್ಧವಾಗಿವೆ.

ಭಾರತದಲ್ಲಿ

ಬದಲಾಯಿಸಿ

ಭಾರತದ ಆಧುನಿಕ ಇತಿಹಾಸದಲ್ಲಿ ಇದಕ್ಕೆ ಒಂದು ನಿದರ್ಶನ ಕೊಡಬಹುದು. ಭಾರತದಲ್ಲಿ ಈಸ್ಟ್‌ ಇಂಡಿಯ ಕಂಪನಿ ಅಧಿಕಾರ ನಡೆಸುತ್ತಿದ್ದ ಕಾಲದಲ್ಲಿ ಅಧಿಕಾರಿ ವರ್ಗವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ಲಾಸಿ ಯುದ್ದದ ಅನಂತರ ಅದು ತನ್ನ ನೌಕರರೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಅದರ ಪ್ರಕಾರ ನೌಕರರು ತಾವು ಕಂಪನಿಯೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳುವುದಾಗಿ ವಚನ ನೀಡಿದರು.

ಅಂತಾರಾಷ್ಟ್ರೀಯ ಕ್ಷೇತ್ರ

ಬದಲಾಯಿಸಿ

ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ರಾಷ್ಟ್ರಗಳಕೂಟದ ಸ್ಥಾಪನೆಯ ಒಡಂಬಡಿಕೆ ಪ್ರಸಿದ್ದವಾದದ್ದು. ಪ್ರಥಮ ಮಹಾಯುದ್ದದ ಅಂತ್ಯದಲ್ಲಿ ಮುಂದೆ ಯುದ್ದಗಳಾಗದಂತೆ ನೋಡಿಕೊಳ್ಳುವ ಪ್ರಯತ್ನದ ಅಂಗವಾಗಿ ರಾಷ್ಟ್ರಗಳ ಕೂಟದ ಒಡಂಬಡಿಕೆಗೆ ಹಲವು ರಾಷ್ಟ್ರಗಳು ಸಹಿ ಹಾಕಿದ್ದುವು. ಈ ಒಡಂಬಡಿಕೆಯಲ್ಲಿ 26 ನಿಬಂಧನೆಗಳಿದ್ದುವು. ವಿಶ್ವಶಾಂತಿ ಸೌಹಾರ್ದ ಸ್ಥಾಪನೆಯೇ ಅದರ ಉದ್ದೇಶ. ವಿಶ್ವಸಂಸ್ಥೆಯ ಸನ್ನದೂ ಪ್ರಪಂಚದ ರಾಷ್ಟ್ರಗಳ ನಡುವೆ ಆದ ಒಡಂಬಡಿಕೆಯೇ ಆಗಿದೆ. ಇವೇ ಅಲ್ಲದೆ ಅಂತಾರಾಷ್ಟ್ರೀಯ ಸ್ವರೂಪದ ಅನೇಕ ಒಡಂಬಡಿಕೆಗಳನ್ನು ನಾವು ಕಾಣಬಹುದು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: