ಒಡಂಬಡಿಕೆ (ನ್ಯಾಯಶಾಸ್ತ್ರದಲ್ಲಿ)

ಒಡಂಬಡಿಕೆ, ನ್ಯಾಯಶಾಸ್ತ್ರದಲ್ಲಿ: ಒಡಂಬಡಿಕೆ, ಒಪ್ಪಂದ ಮತ್ತು ಕರಾರು ಎಂಬ ಪದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ. ಆದರೆ ನ್ಯಾಯಶಾಸ್ತ್ರದಲ್ಲಿ ಇವಕ್ಕೆ ವಿಶಿಷ್ಟ ಅರ್ಥಗಳಿವೆ. ಆಧುನಿಕ ಭಾರತದ ನ್ಯಾಯಸೂತ್ರಗಳು ಇಂಗ್ಲಿಷ್ ನ್ಯಾಯಸೂತ್ರಗಳ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದು ಇಂಗ್ಲಿಷ್ ಭಾಷೆಯಲ್ಲಿರುವ ಕಾರಣ ಒಡಂಬಡಿಕೆ, ಒಪ್ಪಂದ ಮತ್ತು ಕರಾರು ಶಬ್ದಗಳನ್ನು ಕ್ರಮವಾಗಿ ಇಂಗ್ಲಿಷಿನ ಕವಿನಂಟ್, ಅಗ್ರಿಮೆಂಟ್ ಮತ್ತು ಕರಾರು ಎಂಬ ಅರ್ಥಗಳಲ್ಲಿ ಇಲ್ಲಿ ಬಳಸಲಾಗಿದೆ. ಒಪ್ಪಂದ ಮತ್ತು ಕರಾರು-ಈ ಎರಡೂ ಪದಗಳನ್ನು ಭಾರತದ ಕರಾರುಗಳ ಕಾಯಿದೆಯಲ್ಲಿ ವಿವರಿಸಲಾಗಿದೆ .

ಇಬ್ಬರು ಅಥವಾ ಹೆಚ್ಚು ಜನರು ಗುಂಪುಗಳು ಪರಸ್ಪರವಾಗಿ ಒಪ್ಪಿರುವುದೇ ಒಡಂಬಡಿಕೆ (ಕವಿನಂಟ್). ಒಡಂಬಡಿಕೆಯೂ ಒಪ್ಪಂದವೇ ಆದರೂ ಒಡಂಬಡಿಕೆ ಮಾಡಿಕೊಂಡ ಉಭಯ ಪಕ್ಷದವರಿಗೂ ತನ್ಮೂಲಕ ಪರಸ್ಪರ ಲಾಭ ಅಥವಾ ಪ್ರತಿಫಲ ದೊರೆಯಲೇಬೇಕಾಗಿಲ್ಲ. ಉಭಯ ಪಕ್ಷಗಳ ಒಪ್ಪಂದ ವಿವರಣಾತ್ಮಕವಾಗಿರುವುದು ಒಡಂಬಡಿಕೆಯ ಲಕ್ಷಣ. ಇವು ಒಂದು ಅಥವಾ ಹಲವು ವಿಷಯಗಳ ಸತ್ಯತೆಯ ಬಗ್ಗೆ ಒಪ್ಪಿರುವುದನ್ನು ಅಥವಾ ಏನನ್ನಾದರೂ ಮಾಡಲು ಇಲ್ಲವೆ ಮಾಡದಿರಲು ಒಪ್ಪಿರುವುದನ್ನು ಒಡಂಬಡಿಕೆ ಸೃಷ್ಟೀಕರಿಸುತ್ತದೆ.

ಸ್ವರೂಪ

ಬದಲಾಯಿಸಿ

ಒಡಂಬಡಿಕೆಗೆ ನಿರ್ದಿಷ್ಟ ಸ್ವರೂಪ-ನಮೂನೆ (ಫಾರ್ಮ್)-ಅಥವಾ ಶಬ್ದಗಳ ಆವಶ್ಯಕತೆ ಇಲ್ಲ. ನಿರೂಪಣೆ ಸ್ಪಷ್ಟವಾಗಿದ್ದರೆ ಸಾಕು. ಯಾವೊಂದು ದೇಶದ ನ್ಯಾಯ ವ್ಯವಸ್ಥೆಯನ್ವಯ ಮಾಡಿಕೊಳ್ಳುವ ಒಡಂಬಡಿಕೆಗಳು, ಸಾಧಾರಣವಾಗಿ ವ್ಯಕ್ತಿಗೂ ಚರ ಮತ್ತು ಸ್ಥಿರ ಸ್ವತ್ತುಗಳಿಗೂ ಸಂಬಂಧಿಸಿರುತ್ತವೆ.

ವಿಧಗಳು

ಬದಲಾಯಿಸಿ

ಯಾವೊಬ್ಬ ವಿಶಿಷ್ಟ ವ್ಯಕ್ತಿಗೆ ಲಾಭದಾಯಕವಾಗುವ ಅಥವಾ ನಿರ್ದಿಷ್ಟ ವ್ಯಕ್ತಿಯೇ ಒಪ್ಪಂದದ ನಿರ್ವಹಣೆಗೆ ಹೊಣೆ ಎಂದು ಸೂಚಿಸುವ ಒಡಂಬಡಿಕೆಗಳು ವ್ಯಕ್ತಿಗತ ಒಡಂಬಡಿಕೆಗಳು. ಚರಾಸ್ತಿಗೆ ಸಂಬಂಧಿಸಿಯೂ ಒಡಂಬಡಿಕೆಗಳು ಇರುತ್ತವೆ. ಆದರೆ ನಿತ್ಯ ಜೀವನದಲ್ಲಿ ನಾವು ಕಾಣುವ ಅನೇಕ ಒಡಂಬಡಿಕೆಗಳು ಭೂಮಿಗೆ ಸಂಬಂಧಿಸಿರುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಮೂರು ರೀತಿಯವು ಇರುತ್ತವೆ. ಭೂಮಿಯ ವಿಕ್ರಿಯ ವಿಲೇಖದಲ್ಲಿ (ಕ್ರಯಪತ್ರ) ಹೇಳಿದ ಒಡೆತನದ ಹಕ್ಕುಬಾಧ್ಯತೆಗಳ ಬಗೆಗಿನ ಲೋಪದೋಷಗಳಿಗೆ ಪ್ರತಿಯಾಗಿ ಭದ್ರತೆ ಸೂಚಿಸುವ ಒಡಂಬಡಿಕೆಗಳು. ಗೇಣಿದಾರಿ ಮತ್ತು ಕೌಲು ಇವುಗಳ ಬಗೆಗಿನ ಒಡಂಬಡಿಕೆಗಳು. ಮೂರನೆಯದಾಗಿ ನಿರ್ಬಂಧಕ (ರಿಸ್ಟ್ರಿಕ್ಟಿವ್) ಒಡಂಬಡಿಕೆಗಳು. ಈ ನಿರ್ಬಂಧಕ ಒಡಂಬಡಿಕೆಗಳು ಭೂಮಿಗಳ ಸಂಬಂಧದಲ್ಲಿನ ಷರತ್ತುಗಳು ಮತ್ತು ಅವುಗಳ ಅನುಭೋಗದ ಹಕ್ಕುಗಳಿಗೆ ಸಂಬಂಧಿಸಿರುತ್ತವೆ. ಇಂಥ ಒಡಂಬಡಿಕೆಗಳು ಸಾಮಾನ್ಯವಾಗಿ ಭೂಮಿಗಳೊಂದಿಗೆ ಸಹಗಾಮಿ ಎಂದು ಹೇಳಬಹುದು.

ಹಾನಿಪುರ್ತಿ ವಸೂಲಿಯ ದೃಷ್ಟಿಯಿಂದ ಒಡಂಬಡಿಕೆಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸ್ವತಂತ್ರ ಒಡಂಬಡಿಕೆ ಎಂದರೆ ಉಭಯ ಪಕ್ಷಗಳಲ್ಲಿ ಯಾರೊಬ್ಬರೂ ಇನ್ನೊಬ್ಬರು ಒಡಂಬಡಿಕೆಯನ್ನು ಮುರಿದಿರುವ ಕಾರಣದ ಮೇಲೆ, ಇನ್ನೊಬ್ಬರ ತತ್ಸಂಬಂಧದ ಹಕ್ಕುಗಳನ್ನು ಅವಲಂಬಿಸದೆ ಹಾನಿಪುರ್ತಿಯನ್ನು ಪಡೆಯಲು ಸಾಧ್ಯವಾಗಿರುವಂಥ ಒಡಂಬಡಿಕೆ. ಒಂದು ಒಡಂಬಡಿಕೆ ತತ್ಪೂರ್ವದ ಒಡಂಬಡಿಕೆಯನ್ನು ಕಾರ್ಯಗತಗೊಳಿ ಸುವುದನ್ನು ಅವಲಂಬಿಸಿದ್ದರೆ ಅಂಥದನ್ನು ಆಶ್ರಿತ ಅಥವಾ ಅವಲಂಬಿ (ಡಿಪೆಂಡೆಂಟ್) ಒಡಂಬಡಿಕೆ ಎನ್ನುತ್ತಾರೆ. ಉಭಯ ಪಕ್ಷಗಳು ಏಕಕಾಲದಲ್ಲಿ ನಿರ್ವಹಿಸುವಂತೆ ಒಪ್ಪಿಕೊಂಡದ್ದು ಇನ್ನೊಂದು ಬಗೆಯ ಒಡಂಬಡಿಕೆ. ಇಂಥ ಒಡಂಬಡಿಕೆಯನ್ನು ಸಹಗಾಮಿ ಒಡಂಬಡಿಕೆ ಎನ್ನಲಾಗುತ್ತಿದೆ.