ಒಟ್ಟೊ ವಾನ್ ಬಿಸ್ಮಾರ್ಕ್
ಒಟ್ಟೊ ವಾನ್ ಬಿಸ್ಮಾರ್ಕ್ ಅಥವಾ ಆಟೊ ಫಾನ್ ಬಿಸ್ಮಾರ್ಕ್ (1ಎಪ್ರಿಲ್ 1815 – 30 ಜುಲೈ 1898), ಜರ್ಮನಿಯನ್ನು ಒಂದುಗೂಡಿಸಿ ಅದನ್ನು ಯುರೋಪಿನ ಶಕ್ತಿಯನ್ನಾಗಿ ಬೆಳೆಸಿದ ಮಹಾನ್ ನಾಯಕ.
ಒಟ್ಟೊ ವಾನ್ ಬಿಸ್ಮಾರ್ಕ್ | |
---|---|
ಒಟ್ಟೊ ವಾನ್ ಬಿಸ್ಮಾರ್ಕ್ 1890ರ ಅಗೋಸ್ಟ್ ತಿಂಗಳಲ್ಲಿ | |
Monarch | Wilhelm I (1871–1888) Frederick III (1888) Wilhelm II (1888–1890) |
ಪೂರ್ವಾಧಿಕಾರಿ | None (office established) |
ಉತ್ತರಾಧಿಕಾರಿ | Leo von Caprivi |
ಅಧಿಕಾರ ಅವಧಿ 23 September 1862 – 1 January 1873 | |
Monarch | Wilhelm I |
ಪೂರ್ವಾಧಿಕಾರಿ | Adolf of Hohenlohe-Ingelfingen |
ಉತ್ತರಾಧಿಕಾರಿ | Albrecht von Roon |
11th Minister President of the Kingdom of Prussia
| |
ಅಧಿಕಾರ ಅವಧಿ 9 November 1873 – 20 March 1890 | |
Monarch | Wilhelm I (1873–1888) Frederick III (1888) Wilhelm II (1888–1890) |
ಪೂರ್ವಾಧಿಕಾರಿ | Albrecht von Roon |
ಉತ್ತರಾಧಿಕಾರಿ | Leo von Caprivi |
ಅಧಿಕಾರ ಅವಧಿ 1867 – 1871 | |
ರಾಷ್ಟ್ರಪತಿ | Wilhelm I |
ಪೂರ್ವಾಧಿಕಾರಿ | none (Confederation established) |
ಉತ್ತರಾಧಿಕಾರಿ | German Empire |
ಅಧಿಕಾರ ಅವಧಿ 1862 – 1890 | |
Monarch | Wilhelm I (1862–1888) Frederick III (1888) Wilhelm II (1888–1890) |
ಪೂರ್ವಾಧಿಕಾರಿ | Albrecht von Bernstorff |
ಉತ್ತರಾಧಿಕಾರಿ | Leo von Caprivi |
ವೈಯಕ್ತಿಕ ಮಾಹಿತಿ | |
ಜನನ | Schönhausen, Prussia | ೧ ಏಪ್ರಿಲ್ ೧೮೧೫
ಮರಣ | 30 July 1898 Friedrichsruh, German Empire | (aged 83)
ರಾಜಕೀಯ ಪಕ್ಷ | None |
ಸಂಗಾತಿ(ಗಳು) | Johanna von Puttkamer |
ಧರ್ಮ | Lutheranism |
ಸಹಿ |
ಈತ ಜರ್ಮನಿಯ ಪ್ರಥಮ ಚಾನ್ಸಲರ್. ಜರ್ಮನಿಯ ಏಕೀಕರಣ ಸಾಧಿಸಿದ ಉಕ್ಕಿನ ಮನುಷ್ಯನೆಂದು ಹೆಸರಾದ ಈತ ರಾಜ ನೀತಿಜ್ಞ ಹಾಗೂ ಚಾಣಾಕ್ಷ ಆಡಳಿತಗಾರ.
ಬದುಕು
ಬದಲಾಯಿಸಿಬಿಸ್ಮಾರ್ಕ್ 1815 ಏಪ್ರಿಲ್ 1 ರಂದು ಬ್ರಾಂಡೆನ್‍ಬರ್ಗಿನ ಷಾನ್ ಹೌಸೆನ್ ಎಂಬ ಊರಿನಲ್ಲಿ ಜನಿಸಿದ. ತಂದೆ ಫರ್ಡಿನೆಂಡ್ ಫಾನ್ ಬಿಸ್ಮಾರ್ಕ್. ಈತ ಯೂಂಗ್‍ಕರ್ ಗುಂಪಿನ ಜಮೀನುದಾರ ಹಾಗಾ ನಿವೃತ್ತ ಸೈನ್ಯಾಧಿಕಾರಿ. ತಾಯಿ ವಿಲ್‍ಹೆಲ್ ಮೈನ್ ಮೆಂಕನ್. ಬಿಸ್ಮಾರ್ಕ್ ಇವರ ಮೂರನೆಯ ಮಗ.
ಬರ್ಲಿನ್ನಿನ ಶಾಲೆಯಲ್ಲಿ ಓದು ಆರಂಭಿಸಿದ. 17ನೆಯ ವಯಸ್ಸಿನಲ್ಲಿ ನ್ಯಾಯಶಾಸ್ತ್ರ ವ್ಯಾಸಂಗಕ್ಕಾಗಿ ಗಟಿಂಗೆನ್ ವಿಶ್ವವಿದ್ಯಾಲಯ ಸೇರಿದ. ಬಿಸ್ಮಾರ್ಕ್‍ನ ವಿದ್ಯಾರ್ಥಿ ಜೀವನ ಶಿಸ್ತು ಸಂಯಮಗಳಿಂದ ಕೂಡಿರಲಿಲ್ಲ ಎನ್ನುವರು. ಜಗಳಗಂಟನಾಗಿದ್ದ. 1835ರಲ್ಲಿ ನ್ಯಾಯಶಾಸ್ತ್ರದಲ್ಲಿ ಪದವಿಗಳಿಸಿದ ಅನಂತರ ಸ್ವಲ್ಪಕಾಲ ಬರ್ಲಿನ್ನಿನ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸಿದ. 1837ರಲ್ಲಿ ಅಷೆನ್ನಿನಲ್ಲಿ ಅಧಿಕಾರಿಯಾಗಿ ನೇಮಕಗೊಂಡ. ಮರು ವರ್ಷ ಅದೇ ಹುದ್ದೆಯಲ್ಲಿ ಪಾಟ್ಸ್ ಡ್ಯಾಮಿಗೆ ಹೋದ. ಅಲ್ಲಿ ಗಾರ್ಡ್‍ಜಾಗರ್ ರೆಜಿಮೆಂಟಿನಲ್ಲಿದ್ದ. 1838ರ ಶರತ್ಕಾಲದಲ್ಲಿ ಗ್ರೀಫ್ ಸ್ವಾಲ್ಡಿಗೆ ಹೋಗಿ ಅಲ್ಲಿಯ ಎಲ್ಡೆನಾ ಅಕಾಡೆಮಿಯಲ್ಲಿ ವ್ಯವಸಾಯದ ಬಗೆಗೆ ಅಧ್ಯಯನ ನಡೆಸಿದ. ಕುಟುಂಬದ ಆರ್ಥಿಕ ಕಷ್ಟ ಪರಿಸ್ಥಿತಿಯಿಂದಾಗಿ ತನ್ನ ಹುದ್ದೆ ತೊರೆದು (1839) ಪೊಮೆರೀನಿಯಾದಲ್ಲಿ ತನ್ನ ಕುಟುಂಬಕ್ಕೆ ಸೇರಿದ್ದ ಹೊಲಗದ್ದೆಗಳ ಉಸ್ತುವಾರಿ ವಹಿಸಿಕೊಂಡ. ಇಲ್ಲಿದ್ದಾಗಲೇ ಹೆಗೆಲ್, ಕಾಂಟ್, ಸ್ಪಿನೋಜಾ, ಸ್ಟ್ರಾಸ್, ಫರ್‍ಬಕ್ ಮುಂತಾದ ವಿದ್ವಾಂಸರ ಕೃತಿಗಳ ಅಧ್ಯಯನ ಮುಂದುವರಿಸಿದ. ಇಂಗ್ಲೆಂಡ್ ಫ್ರಾನ್ಸ್ ದೇಶಗಳಿಗೆ ಪ್ರವಾಸ ಹೋಗಿ ಬಂದ. ಬಾಲ್ಯದಿಂದಲೂ ಈತನಿಗೆ ಮತಶ್ರದ್ಧೆ ಇರಲಿಲ್ಲವಾದರೂ ಮುಂದೆ ಪೊಮೆರೇನಿಯನ್ ಪಯೆಟೆಸ್ಟ್ ಕ್ರೈಸ್ತ ಪಂಥಕ್ಕೆ ಸೇರಿದ.
ರಾಜಕೀಯ
ಬದಲಾಯಿಸಿಬಿಸ್ಮಾರ್ಕನದು ಆರಡಿಗೂ ಮೀರಿದ ಭವ್ಯಕಾಯ. ಸೂಕ್ಷ್ಮಗ್ರಹಣಶಕ್ತಿ, ವ್ಯಾಪಕ ಭೌದ್ಧಿಕ ಆಸಕ್ತಿ, ಅಪೂರ್ವ ಸಿದ್ಧಿ ಎನ್ನಬಹುದಾದ ಭಾಷಾಸಾಮರ್ಥ್ಯ್ಯ, ಮತ್ತು ಶೀಘ್ರನಿರ್ಣಯ ತೆಗೆದುಕೊಳ್ಳಬಲ್ಲ ಶಕ್ತಿ ಈತನಿಗೆ ಇದ್ದುವು. ಮೇಲಾಗಿ ಅದೃಷ್ಟವೂ ಒಲಿದಿತ್ತು. ನಿಯಮಗಳನ್ನು ಜಾರಿಗೆ ತರುವಲ್ಲಿ ಈತ ಮೊದಮೊದಲು ಅನುಸರಿಸಿದ ಕಠಿಣ ವಿಧಾನ ಈತನ ರಾಜಕೀಯ ಬೆಳೆವಣೆಗೆಗೆ ಪೋಷಕವಾಯಿತು. ಭೋಜನ ಪಾನಾದಿ ವಿಷಯಗಳಲ್ಲಿ ಈತನಿಗೆ ತುಂಬ ಒಲವು. 1847ರಲ್ಲಿ ಈತ ಜೋಹನ್ನ ಫಾನ್ ಷಟ್ಕಮರ್ ಎಂಬಾಕೆಯನ್ನು ಮದುವೆಯಾದ. ನಿರರ್ಗಳ ಮಾತುಗಾರಿಕೆಯಿಂದ ಜನರನ್ನು ಆಕರ್ಷಿಸಬಲ್ಲವನಾಗಿದ್ದರೂ ಬಿಸ್ಮಾರ್ಕ್ ಏಕಾಂತ ಪ್ರಿಯ. ಈತನಿಗೆ ಸ್ನೇಹಿತರೂ ಕಡಿಮೆ. ರಾಜನ ಆಪ್ತ ಸಲಹಾಸಮಿತಿಯಾದ ಕ್ಯಾಮರಿಲ್ಲಾದ ಸದಸ್ಯರಾಗಿದ್ದ ಗೆಳೆಯರು ಈತನಿಗೆ ಇದ್ದು ರಾಜಕೀಯ ಸಂಪರ್ಕ ಬೆಳೆಯಲಾರಂಭಿಸಿತು.
1848-50ರಲ್ಲಿ ಪ್ರಷ್ಯನ್ ಸಂವಿಧಾನಾತ್ಮಕ ವಿವಾದದಲ್ಲಿ ಬಿಸ್ಮಾರ್ಕ್ ತೀರಬಿಗುವಾದ ಕನ್ಸರ್‍ವೇಟಿವ್ ನಿಲುವನ್ನು ತಳೆದು ಪ್ರಸಿದ್ಧಿ ಹೊಂದಿದ್ದ. ಲಿಬರಲ್ಲರ ಚಟುವಟಿಕೆಗಳಿಗೆ ಪ್ರತಿಯಾಗಿ ರಾಜಕೀಯ ಸಂಸ್ಥೆಗಳನ್ನೂ ಪತ್ರಿಕೆಗಳನ್ನೂ ಸ್ಥಾಪಿಸಲು ಕಾರಣನಾದ. 1848ರ ಪ್ರಷ್ಯನ್ ಸಂಯುಕ್ತ ಡಯೆಟ್ಟಿನ ಪ್ರತಿನಿಧಿಯಾಗಿದ್ದ ಈತ ಪ್ರಜಾಪ್ರಭುತ್ವದ ವಿರೋಧಿಯಾದ ಸಾರ್ವಭೌಮಾಧಿಕಾರವುಳ್ಳ ಸರ್ಕಾರ ಇರಬೇಕೆಂದು ಪ್ರತಿಪಾದಿಸಿದ್ದ. ಪ್ರಷ್ಯಾ ತನ್ನ ರಾಜರುಗಳಿಂದ ಬೆಳೆದಿದೆಯೇ ಹೊರತು ಜನತೆಯಿಂದಲ್ಲ ಎನ್ನುವುದು ಈತನ ಅಭಿಪ್ರಾಯವಾಗಿತ್ತು. 1849ರಲ್ಲಿ ಪ್ರಷ್ಯನ್ ಕೆಳಮನೆಯ ಮತ್ತು 1850ರಲ್ಲಿ ಎರ್ಫರ್ಟ್ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಬಿಸ್ಮಾರ್ಕ್ ಆಸ್ಟ್ರಿಯಾ ಮತ್ತು ರಷ್ಯದೊಡನೆ ನಾಲ್ಕನೆಯ ಫ್ರೆಡರಿಕ್ ವಿಲಿಯಮ್ ಮಾಡಿಕೊಂಡ ಷರತ್ತಿನ ಒಪ್ಪಂದ ಸಮರ್ಥಿಸಿ ಮಾತನಾಡಿದ. ಸುಪ್ರೀತನಾದ ರಾಜ 1851 ಮೇನಲ್ಲಿ ಬಿಸ್ಮಾರ್ಕನನ್ನು ಫ್ರಾಂಕ್‍ಫರ್ಟಿನ ಫೆಡರಲ್ ಡಯೆಟ್ಟಿನಲ್ಲಿ ಪ್ರಷ್ಯದ ಪ್ರತಿನಿಧಿಯಾಗಿ ನೇಮಿಸಿದ. ಇಲ್ಲಿದ್ದಾಗ ಬಿಸ್ಮಾರ್ಕ್ ರಾಜ್ಯಾಡಳಿತದ ಒಳಮರ್ಮಗಳನ್ನೆಲ್ಲ ಅರ್ಥಮಾಡಿಕೊಂಡ ಆಂತರ್ಯದಲ್ಲಿ ಆಸ್ಟ್ರಿಯಾವು ಪ್ರಷ್ಯದ ಪ್ರಾಬಲ್ಯ ಹಾಳುಮಾಡುವ ಪ್ರಯತ್ನ ಅರಿತ ಬಿಸ್ಮಾರ್ಕ್ ಪ್ರತಿಯಾಗಿ ಆಸ್ಟ್ರಿಯಾದ ಪ್ರಾಬಲ್ಯ ಮುರಿಯಲು ನಿರ್ಧರಿಸಿದ. ರಾಜಕೀಯ ಜೀವನದಲ್ಲಿ ಸಮಯಸಾಧಕತೆಯೇ ಮುಖ್ಯ ಪಾತ್ರವಹಿಸುತ್ತದೆಂಬುದನ್ನು ಗ್ರಹಿಸಿದ ಈತ ಕೆಲವೊಮ್ಮೆ ನೀತಿ ನಿಯಮಗಳಿಗೆ ತಿಲಾಂಜಲಿ ನೀಡಲೂ ಹಿಂದೆಗೆಯಲಿಲ್ಲ. ಬಿಸ್ಮಾರ್ಕ್ ರಾಜನ ಹಾಗೂ ಕ್ಯಾಮರಿಲ್ಲಾದ ಆಭಿಪ್ರಾಯಗಳನ್ನೂ ಮೀರಿ ವರ್ತಿಸಿದ. ಪರಿಣಾಮವಾಗಿ ರಾಜನಿಗೆ ಬಿಸ್ಮಾರ್ಕ್‍ನಲ್ಲಿ ನಂಬಿಕೆ ವಿಶ್ವಾಸ ಕುಸಿದವು.
1859 ಮೇಯಲ್ಲಿ ಈತ ಸೆಂಟ್ ಪೀಟರ್ಸ್ ಬರ್ಗಿಗೆ ರಾಯಭಾರಿಯಾಗಿ ತೆರಳಬೇಕಾಯಿತು. ಇಲ್ಲಿದ್ದಾಗ ಬಿಸ್ಮಾರ್ಕನಿಗೆ ರಷ್ಯದ ವಿದೇಶಾಂಗ ಸಚಿವರಾದ ಪ್ರಿನ್ಸ್ ಗೋರ್ಷ ಕೋವನ ಸ್ನೇಹ ಉಂಟಾಯಿತು. ಆಸ್ಟ್ರಿಯಾವನ್ನು ಹಾಗೂ ಫ್ರಾನ್ಸ್ ದೇಶವನ್ನು ಸಾಮೋಪಾಯದಿಂದ ಪ್ರತ್ಯೇಕಗೊಳಿಸುವಲ್ಲಿ ಆತನ ನೆರವು ಸಿಕ್ಕಿತು. 1862ರಲ್ಲಿ ಬಿಸ್ಮಾರ್ಕ್ ಫ್ರಾನ್ಸಿಗೆ ಪ್ರಷ್ಯದ ರಾಯಭಾರಿಯಾಗಿ ಹೋದ. ಈತ ಇಲ್ಲಿದ್ದುದು ಸ್ವಲ್ಪಕಾಲ ಮಾತ್ರ. ಪ್ರಷ್ಯದ ರಾಷ್ಟ್ರೀಯ ಸಭೆಯಲ್ಲಿ ಉಂಟಾದ ಸೈನಿಕ ವಿವಾದವನ್ನು ಬಗೆಹರಿಸಲು ರಾಜನು ಬಿಸ್ಮಾರ್ಕನನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಯಿತು. ಅದೇ ವರ್ಷದ ಸೆಪ್ಟೆಂಬರಿನಲ್ಲಿ ತಾತ್ಕಾಲಿಕ ಸಚಿವ ಸಂಪುಟದ ಮುಖ್ಯಸ್ಥನಾದ. ಅನಂತರ ವಿದೇಶೀ ವ್ಯವಹಾರಗಳ ಹೊಣೆ ಹೊತ್ತ. ಹಳೆಯ ಬಜೆಟ್ಟಿನಂತೆಯೇ ತೆರಿಗೆಗಳನ್ನು ವಸೂಲು ಮಾಡುವುದಾಗಿ ಘೋಷಿಸಿ ಬಿಸ್ಮಾರ್ಕ್‍ಜನಪ್ರಿಯನಾದ. ಸಪ್ಟೆಂಬರ್ 20 ರಂದು ಸಮಿತಿ ಸಭೆಯಲ್ಲಿ ಆತ ಸಾರಿದ: “ಇಂದಿನ ಮಹಾನ್ ಸಮಸ್ಯೆಗಳನ್ನು ಭಾಷಣಗಳಿಂದಾಗಲಿ ಬಹುಮತದ ನಿರ್ಣಯಗಳಿಂದಾಗಲಿ ಪರಿಹರಿಸಲು ಸಾಧ್ಯವಿಲ್ಲ. 1848 ಮತ್ತು 1849ರಲ್ಲಿ ಸಂಭವಿಸಿದ ಪ್ರಮಾದಗಳು ಭಾಷಣ ನಿರ್ಣಯಗಳಿಂದ ಆದಂಥವು. ಈಗಿನ ಸಮಸ್ಯೆಗಳನ್ನು ರಕ್ತಪಾತದಿಂದ ಪರಿಹರಿಸಬೇಕು”. ಒಟ್ಟಾರೆ ರಾಷ್ಟ್ರೀಯ ಸಂರಕ್ಷಣೆಗೆ ಸಂಬಂಧಿಸಿದಂತೆ ಒಮ್ಮತದ ನಿರ್ಣಯ ಸಭೆಗಳಿಂದ ಸಾಧ್ಯವಾಗದ ಸನ್ನಿವೇಶ ಸಂದರ್ಭಗಳು ಉಂಟಾದಾಗ ಸರ್ಕಾರ ಕಠಿಣಕ್ರಮ ಕೈಗೊಳ್ಳಬೇಕಾಗುತ್ತದೆ ಎನ್ನುವುದು ಈತನ ಅಭಿಪ್ರಾಯ. ಪತ್ರಿಕೆಗಳಿಗೆ ನಿರ್ಬಂಧ ಹೇರಲಾಯಿತು. ವಿರೋಧಿಗಳ ದಮನಕ್ಕೆ ಉಗ್ರಕ್ರಮ ಕೈಗೊಳ್ಳಲಾಯಿತು. 1863ರಲ್ಲಿ ಪೋಲೆಂಡಿನ ಬಂಡಾಯವನ್ನು ಅಡಗಿಸುವ ರಷ್ಯದ ಅರಸನ ಪ್ರಯತ್ನಗಳಿಗೆ ಬಿಸ್ಮಾರ್ಕ್ ಸಹಾಯ ಹಸ್ತ ನೀಡುವ ನಿರ್ಧಾರ ಕೈಗೊಂಡಾಗ ಆತ ಲಿಬರಲ್ಲರ ಪ್ರಬಲ ವಿರೋಧ ಟೀಕೆಗಳಿಗೆ ಗುರಿಯಾಗಬೇಕಾಯಿತು. ಮುಂದಿನ ದಶಕದೊಳಗೆ ಬಿಸ್ಮಾರ್ಕನ ಆಂತರಿಕ ಹಾಗೂ ವಿದೇಶೀ ನೀತಿಗಳಿಂದಾಗಿ ಯೂರೊಪಿನಲ್ಲಿ ಮೂರು ಕದನಗಳು ಸಂಭವಿಸಿದುವು. ಇವುಗಳ ಪರಿಣಾಮವಾಗಿ ಜರ್ಮನ್ ರಾಜ್ಯಗಳ ಏಕೀಕರಣ ಸಾಧ್ಯವಾಯಿತು.
ಬಿಸ್ಮಾರ್ಕ್ ಆಸ್ಟ್ರಿಯದ ಸಹಕಾರದೊಂದಿಗೆ 1864ರಲ್ಲಿ ಡೆನ್ಮಾರ್ಕನ್ನು ಸೋಲಿಸಿ ಷ್ಲೆಸ್‍ವಿಗ್-ಹೋಲ್ ಸ್ಟೈನನ್ನು ಪ್ರಷ್ಯಕ್ಕೆ ಸೇರಿಸಿಕೊಂಡ. ಆಸ್ಟ್ರಿಯ ಮತ್ತು ಪ್ರಷ್ಯಗಳ ನಡುವೆ ಈಗ ಕೆಲವು ಪ್ರದೇಶಗಳ ಒಡೆತನದ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು. 1866ರಲ್ಲಿ ಆಸ್ಟ್ರಿಯಾ ಮತ್ತು ಇಟಲಿಗಳು ಪರಸ್ಪರ ಕಾದಾಡಲಾರಂಭಿಸಿದಾಗ ಪ್ರಷ್ಯ ಆಸ್ಟ್ರಿಯದ ಮೇಲೆ ಯುದ್ಧ ಘೋಷಿಸಿತು. ಪ್ರಷ್ಯದ ಸೈನ್ಯ ಹ್ಯಾನೋವರ್ ಸಾಕ್ಸನಿ, ಹೆಸ್ ಮತ್ತು ಕ್ಯಾಸಲ್ ಪ್ರದೇಶಗಳನ್ನು ಗೆದ್ದು ಮೇನ್ ನದಿಯನ್ನು ದಾಟಿ ಬವೇರಿಯವನ್ನು ಪ್ರವೇಶಿಸಿ ಆಸ್ಟ್ರಿಯಾದ ಸೈನ್ಯವನ್ನು ಸೋಲಿಸಿತು. ಒಪ್ಪಂದವಾಗಿ ಷ್ಲೆಸ್‍ವಿಗ್-ಹೋಲ್‍ಸ್ಟೈನ್ ಪ್ರಷ್ಯಕ್ಕೆ ಸೇರಿದವು. ಆಸ್ಟ್ರಿಯ ಜರ್ಮನಿಯಿಂದ ಹೊರಗಾಯಿತು. 1867ರಲ್ಲಿ ಪ್ರಷ್ಯದ ನಾಯಕತ್ವದಲ್ಲಿ ಉತ್ತರ ಜರ್ಮನ್ ಒಕ್ಕೂಟ ಸ್ಥಾಪಿತವಾಯಿತು. 1870ರಲ್ಲಿ ಸ್ಟೇನಿನ ಉತ್ತರಾಧಿಕಾರದ ಸಮಸ್ಯೆ ಫ್ಯಾರಿಕೋ ಪ್ರಷ್ಯನ್ ಯುದ್ಧಕ್ಕೆ ದಾರಿಮಾಡಿತು. ಪ್ರಷ್ಯ ರಾಜನ ಸಂಬಂಧಿ ಲಿಯೋಪೋಲ್ಡ್ ಸ್ಟೇನಿನ ರಾಜನಾಗಲು ಬಿಸ್ಮಾರ್ಕ್ ಸಹಕರಿಸಿದ. ಇದರಿಂದ ಫ್ರಾನ್ಸಿನ ಮೂರನೆಯ ನೆಪೋಲಿಯನ್ನರಿಗೆ ಕೋಪಬಂತು. 1870ರಲ್ಲಿ ಫ್ರಾನ್ಸಿಗೂ ಪ್ರಷ್ಯಕ್ಕೂ ಯುದ್ಧ ನಡೆದು ಫ್ರಾನ್ಸ್ ಸೋತಿತು. 1871 ಮೇ 10ರಂದು ಫ್ರಾಂಕ್‍ಫರ್ಟ್ ಒಪ್ಪಂದವಾಗಿ ಆಲ್ಸೇಸ್ ಮತ್ತು ಲೊರೇನುಗಳ ಬಹುಭಾಗ ಜರ್ಮನಿಗೆ ಸೇರಿತು. ಪ್ರಷ್ಯದ ದೊರೆಯನ್ನು ಜರ್ಮನಿಯ ಚಕ್ರವರ್ತಿಯೆಂದು ವರ್ಸೇಲ್ಸ್ ಅರಮನೆಯಲ್ಲಿ ಘೋಷಿಸಲಾಯಿತು. ಜರ್ಮನ್ ಸಾಮ್ರಾಜ್ಯ ಸ್ಥಾಪನೆಯಾಗಿ ಬಿಸ್ಮಾರ್ಕ್ ಜರ್ಮನ್ ರಾಷ್ಟ್ರದ ಪ್ರಥಮ ಚಾನ್ಸಲರ್ ಅಧಿಕಾರ ವಹಿಸಿಕೊಂಡ.
1871ರಿಂದ 1890ರ ತನಕ ಬಿಸ್ಮಾರ್ಕ್ ಚಾನ್ಸಲರ್ ಆಗಿದ್ದು ಜರ್ಮನಿಯ ಆಂತರಿಕ ಆಡಳಿತ ಮತ್ತು ವಿದೇಶಾಂಗ ನೀತಿಯಲ್ಲಿ ತನ್ನದೇ ಧೋರಣೆ ಅನುಸರಿಸಿ ಬಲಿಷ್ಠ ಭೂ ಮತ್ತು ನೌಕಾಪಡೆ ಸ್ಥಾಪಿಸಿದ. ರಾಷ್ಟ್ರದ ಚರ್ಚೆಗೆ ರಾಜನದೇ ಪರಮಾಧಿಕಾರವೆಂದು ಘೋಷಿಸಿದ. ತನ್ನನ್ನು ವಿರೋಧಿಸಿದ ಕ್ಯಾತೊಲಿಕರ ಚಳವಳಿಯನ್ನು ಹತ್ತಿಕ್ಕಿದರೂ 1878ರ ಅನಂತರ ಅವರ ಜೊತೆ ಒಂದು ಒಡಂಬಡಿಕೆಗೆ ಬಂದು ಅವರಿಗೆ ಕೆಲವು ಸವಲತ್ತುಗಳನ್ನು ನೀಡಿದ. 1879ರಲ್ಲಿ ಫ್ರಾನ್ಸ್ ಮತ್ತು ರಷ್ಯ ದೇಶಗಳ ವಿರುದ್ಧ ಆಸ್ಟ್ರಿಯ ಮತ್ತು ಇಟಲಿಗಳೊಡನೆ ರಕ್ಷಣಾ ಒಪ್ಪಂದ ಮಾಡಿಕೊಂಡ, ಆಫ್ರಿಕ ಖಂಡದಲ್ಲೂ ಪೆಸಿಫಿಕ್ ಸಾಗರ ದ್ವೀಪಗಳಲ್ಲೂ ಜರ್ಮನ್ ವಸಾಹತುಗಳನ್ನು ಸ್ಥಾಪಿಸಿದ. ಜರ್ಮನಿಯ ಸೈನ್ಯಬಲ, ನೌಕಾಬಲ ಇವನ ಕಾಲದಲ್ಲಿ ಬೆಳೆದುವು. ಬಿಸ್ಮಾರ್ಕ್ ಸಾಮ್ರಾಜ್ಯವಾದಿಯಾದರೂ 1883ರಲ್ಲಿ ಸಮಾಜವಿಮೆ, ವೃದ್ಧಾಪ್ಯವೇತನ ಮೊದಲಾದವನ್ನು ಪ್ರಥಮವಾಗಿ ಜಾರಿಗೆ ತಂದ. ಜರ್ಮನಿಯಲ್ಲಿ ಹೊಸ ಕೈಗಾರಿಕೆಗಳನ್ನೂ ತಾಂತ್ರಿಕ ವಿದ್ಯಾಭ್ಯಾಸವನ್ನೂ ಬ್ಯಾಂಕುಗಳನ್ನೂ ಸ್ಥಾಪಿಸಿದನಲ್ಲದೆ ರೈಲು ಮಾರ್ಗಗಳನ್ನು ನಿರ್ಮಿಸಿದ ಕೂಡ. ಇದರಿಂದಾಗಿ ಜರ್ಮನಿ ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿತು.
ಎರಡನೆಯ ವಿಲಿಯಮ್ ಪಟ್ಟಕ್ಕೆ ಬಂದ ಬಳಿಕ ರಾಜ್ಯದ ಆಡಳಿತದ ಮೇಲೆ ಬಿಸ್ಮಾರ್ಕ್ ಹೊಂದಿದ್ದ ಹತೋಟಿ ಕ್ರಮೇಣ ಕ್ಷೀಣಿಸಬೇಕಾಗಿ ಬಂತು. ಒಂದನೆಯ ವಿಲಿಯಮ್ ಹಾಗೂ ಮೂರನೆಯ ಫ್ರೆಡರಿಕ್ ಕಾಲದಲ್ಲಿ ಬಿಸ್ಮಾರ್ಕನಿಗೆ ಪ್ರಬಲ ವಿರೋಧ ವ್ಯಕ್ತವಾದರೂ ಆತನ ಸ್ಥಾನಮಾನಕ್ಕೆ ಯಾವ ಚ್ಯುತಿಯೂ ಬಂದಿರಲಿಲ್ಲ. ಆದರೆ ಎರಡನೆಯ ವಿಲಿಯಮ್ ಆತ್ಮವಿಶ್ವಾಸಿ ಮತ್ತು ಮಹತ್ತ್ವಾಕಾಂಕ್ಷಿ. ಸಾಮಾಜಿಕವಲ್ಲದ ಕಾನೂನುಗಳ ಮುಂದುವರಿಕೆ ಹಾಗೂ ಮಂತ್ರಿಗಳಿಗಿರಬೇಕಾದ ಹಕ್ಕುಗಳ ವಿಷಯಗಳಲ್ಲಿ ಬಿಸ್ಮಾರ್ಕ್ ಮತ್ತು ರಾಜನ ನಡುವೆ ಗಂಭೀರ ಭಿನ್ನಾಭಿಪ್ರಾಯ ಉಂಟಾಯಿತು. 1890 ಮಾರ್ಚ್ 18ರಂದು ಬಿಸ್ಮಾರ್ಕ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ. ಎರಡು ದಿನಗಳ ಅನಂತರ ಲಾವೆನ್‍ಬರ್ಗಿನಲ್ಲಿ ಡ್ಯೂಕ್ ಆಗಿ ಇರಲು ಸಮ್ಮತಿ ನೀಡಿದ.
ಬಿಸ್ಮಾರ್ಕನಿಗೆ ರಾಜಕೀಯ ಆಸಕ್ತಿ ಇನ್ನೂ ಅಳಿದಿರಲಿಲ್ಲ. 1891ರಲ್ಲಿ ಹ್ಯಾನೋವರಿನಿಂದ ಶಾಸನ ಸಭೆಗೆ ಆಯ್ಕೆಯಾದರೂ ಎರಡು ವರ್ಷಗಳ ಅನಂತರ ಮರುಚುನಾವಣೆಗೆ ನಿಲ್ಲಲು ನಿರಾಕರಿಸಿದ. 1894ರಲ್ಲಿ ತನ್ನ ಇಳಿವಯಸ್ಸಿನಲ್ಲಿ ಬಿಸ್ಮಾರ್ಕನಿಗೂ ರಾಜನಿಗೂ ಮತ್ತೆ ರಾಜಿಯಾಯಿತು. 1895ರಲ್ಲಿ ಜರ್ಮನಿಯಲ್ಲೆಡೆ ಬಿಸ್ಮಾರ್ಕ್‍ನ 80ನೆಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಜರ್ಮನಿಯ ಕಬ್ಬಿಣದ ಮನುಷ್ಯ ಎಂಬ ಖ್ಯಾತಿ ಪಡೆದ ಬಿಸ್ಮಾರ್ಕ್ 1898 ಜುಲೈ 30ರಂದು ಮೃತನಾದ.