ಒಕ್ಕಲಿಗರ ಪತ್ರಿಕೆ

ಒಕ್ಕಲಿಗರ ಪತ್ರಿಕೆ: 1906ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಒಕ್ಕಲಿಗರ ಸಂಘದ ಮುಖಪತ್ರ. ಸಂಘದ ಧ್ಯೇಯೋದ್ದೇಶಗಳನ್ನು ಸಾಧಿಸಲು ಸಹಾಯಕವಾಗುವಂತೆ ಅದರ ಆಶ್ರಯದಲ್ಲಿ 1907 ಮಾರ್ಚ್ 15ರಂದು ಶುಕ್ರವಾರ ಈ ಪತ್ರಿಕೆಯ ಪ್ರಕಟನೆ ಆರಂಭವಾಯಿತು. ಆಗ ಬೆಂಗಳೂರಿನಲ್ಲಿ ಗಣ್ಯ ಅಡ್ವೊಕೇಟರಾಗಿದ್ದ ಸಿ. ಲಕ್ಷ್ಮಣಗೌಡ ಈ ಪತ್ರಿಕೆಯ ಪ್ರಥಮ ಸಂಪಾದಕರು.

ಧ್ಯೇಯೋದ್ಧೇಶಗಳು

ಬದಲಾಯಿಸಿ

ಮೊದಲನೆಯ ಸಂಚಿಕೆಯ ಸಂಪಾದಕೀಯದಲ್ಲಿ ಈ ಪತ್ರಿಕೆಯ ಧ್ಯೇಯಧೋರಣೆಗಳನ್ನು ಕುರಿತು ಪ್ರಸ್ತಾಪಿಸುತ್ತ, ವರ್ತಮಾನ ಪತ್ರಿಕೆಗಳು ಯಾವ ದೇಶದಲ್ಲಿ ಹೆಚ್ಚುತ್ತ ಬರುತ್ತವೋ ಆ ದೇಶ ನವನಾಗರಿಕತೆಯಲ್ಲಿ ಉನ್ನತಸ್ಥಿತಿಗೆ ಬರುತ್ತಿರುವುದು ಎಂಬ ಅಭಿಪ್ರಾಯ ಸೂಚಿಸಿ, ಜಪಾನ್ ದೇಶದಲ್ಲಿ ವೃತ್ತಪತ್ರಿಕೆಗಳು ದಿನದಿನಕ್ಕೆ ಹೆಚ್ಚಾದ ಕಾರಣ ಕೇವಲ 50 ವರ್ಷಗಳೊಳಗಾಗಿ ಜಪಾನ್ ದೇಶೀಯರು ಪ್ರಪಂಚದ ಪ್ರಮುಖ ದೇಶೀಯರೊಳಗೆ ತಾವೂ ಪ್ರಮುಖರಾಗಿ ಪ್ರಖ್ಯಾತಿ ಪಡೆದಿರುತ್ತಾರೆ ಎಂದು ಅವರು ವಾದಿಸಿದ್ದಾರೆ. ಮುಂದುವರಿಯುತ್ತ ಅವರು ಯಾವ ಜನರ ಕ್ಷೇಮವನ್ನು ಈ ಪತ್ರಿಕೆ ಮುಖ್ಯವಾಗಿ ಉದ್ದೇಶಿಸಿರುವುದೋ ಅವರ ಪುರೋಭಿವೃದ್ಧಿಯಿಂದ ದೇಶಕ್ಕೆ ಔನ್ನತ್ಯವುಂಟಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿ, ಪಂಡಿತ-ಪಾಮರರು, ಹಳ್ಳಿಗರು-ಪಟ್ಟಣಿಗರ ಮಧ್ಯೆ ಅನ್ಯೋನ್ಯತೆ ಬೆಳೆಯುವುದು ದೇಶದ ಅಭಿವೃದ್ದಿಗೆ ಅತ್ಯಂತ ಸಹಕಾರಿಯಾಗುವುದೆಂಬ ವಿಷಯ ಪ್ರಸ್ತಾಪಿಸಿ, ದೇಶೋನ್ನತಿ ಕಾರಣ ಭೂತವಾದ ಏರ್ಪಾಡುಗಳನ್ನು ಮಾಡಿಕೊಳ್ಳಬೇಕಾದರೆ ಇಂಥ ಅನ್ಯೋನ್ಯತೆ ಅತ್ಯಾವಶ್ಯಕವಾಗಿರುತ್ತದೆಂದು ಹೇಳಿ, ಐಕಮತ್ಯಕ್ಕೆ ನ್ಯೂನತೆ ಉಂಟಾಗದಂತೆ ಪ್ರಯತ್ನಪಡಬೇಕೆಂಬುವುದು ತಮ್ಮ ಉದ್ದೇಶವಾಗಿರುತ್ತದೆಂದು ಘೋಷಿಸಿ ಈ ತಮ್ಮ ಪ್ರಯತ್ನದಲ್ಲಿ “ಸರ್ವರೂ ಚೈತನ್ಯ ಕೊಟ್ಟು ಇದನ್ನು ಅಭಿವೃದ್ಧಿಪಡಿಸತಕ್ಕ ರೀತಿಗಳನ್ನು ತೋರಿಸಿಕೊಡುತ್ತ ಬರುವರೆಂದು ದೃಢವಾಗಿ ನಂಬಿದ್ದೇವೆ” ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ಪತ್ರಿಕೆಯಲ್ಲಿ ಅನೇಕ ವಿಷಯಗಳನ್ನು ಕುರಿತು ಬಗೆಬಗೆಯ ಉತ್ತಮ ಲೇಖನಗಳಲ್ಲದೆ ಒಳದೇಶದ ವೃತ್ತಾಂತ, ವರ್ತಮಾನ ಸಂಗ್ರಹ, ಮೈಸೂರು ಗೆಜೆಟ್, ಇಂಡಿಯ ದೇಶದ ವೃತ್ತಾಂತ, ಸರ್ಕಾರಿ ಹುಕುಂಗಳು-ಎಂಬ ಶಿರೋನಾಮೆಗಳಲ್ಲಿ ಎಲ್ಲ ಕಡೆಗಳ ಮುಖ್ಯ ವಾರ್ತೆಗಳು ಪ್ರಕಟವಾಗುತ್ತಿದ್ದುವು. ಮೊದಲನೆಯ ಸಂಚಿಕೆಯಲ್ಲಿ ಪ್ರಕಟವಾದ ದವಸದ ಬ್ಯಾಂಕುಗಳು ಎಂಬ ಲೇಖನದ ಒಂದು ವಾಕ್ಯ ಹೀಗಿದೆ: ಗ್ರಾಮಸ್ಥರಿಗೆ ಸಾಧ್ಯವಾದ ಮಟ್ಟಿಗೂ ಬ್ಯಾಂಕುಗಳಿಂದಾಗುವ ಪ್ರಯೋಜನಗಳನ್ನು ಹೇಳಿ, ಅವರನ್ನು ಪರಸ್ಪರ ಸಹಾಯಕರನ್ನಾಗಿ ಮಾಡಿ, ಹಣಕ್ಕೆ ಬದಲಾಗಿ ದವಸವನ್ನು ಬಂಡವಾಳಕ್ಕೆ ಕೊಡುವಂತೆ ಬೋಧಿಸಿದರೆ ಸಾರ್ಥಕವಾಗುತ್ತದೆಂದು ತಿಳಿದು ನಮ್ಮ ಘನ ಸರ್ಕಾರದವರು ಗ್ರಾಮಗಳಲ್ಲಿ ದವಸದ ಬ್ಯಾಂಕುಗಳನ್ನು ಏರ್ಪಡಿಸುತ್ತಿದ್ದಾರೆ.

ಲೇಖಕರು

ಬದಲಾಯಿಸಿ

ಸರಳ ನೇರ ನಿರೂಪಣೆ, ವಸ್ತುನಿಷ್ಠಾತ್ಮಕ ವಿವೇಚನೆ, ಸಾಮಾನ್ಯನ ಹಿತದೃಷ್ಟಿಯ ಪ್ರತಿಪಾದನೆ-ಇವುಗಳಿಗೆ ಈ ಪತ್ರಿಕೆಯ ಲೇಖನಗಳು ಹೆಸರಾಗಿದ್ದವು. ಕೆ.ಎಂ. ತಿಮ್ಮೇಶಪ್ರಭು, ಕೆ.ಎಚ್. ರಾಮಯ್ಯ, ಬಿ.ಹನುಮಂತೇಗೌಡ, ಬಿ.ಪುಟ್ಟಸ್ವಾಮಯ್ಯ, ಟಿ.ಆರ್.ನರಸಿಂಹಯ್ಯ, ಬಿ.ಪುಟ್ಟಯ್ಯ, ಎಚ್.ಕೆ.ವೀರಣ್ಣಗೌಡ, ಡಿ.ಆರ್. ರಾಮಯ್ಯ ಅವರು ಈ ಪತ್ರಿಕೆಯ ಸಂಪಾದಕರಾಗಿದ್ದರು. 1928ರಲ್ಲಿ ವೀರಣ್ಣಗೌಡರ ನೇತೃತ್ವದಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಮೊದಲ ಬಾರಿಗೆ ವಿಶೇಷ ಸಂಚಿಕೆ ಪ್ರಕಟಿಸಿದ ಹೆಗ್ಗಳಿಕೆ ಒಕ್ಕಲಿಗರ ಪತ್ರಿಕೆಯದು. ಸು. 66 ವರ್ಷ ಕಾಲ ಜೀವಂತವಾಗಿದ್ದ ಪತ್ರಿಕೆ 1972 ಫೆಬ್ರವರಿ 6ರಂದು ಪ್ರಕಟಣೆ ನಿಲ್ಲಿಸಿತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: