ಒಂದು ಶಿಕಾರಿಯ ಕಥೆ (ಕನ್ನಡ ಚಲನಚಿತ್ರ)

ಒಂದು ಶಿಕಾರಿಯ ಕಥೆ 2020ನೇ ಇಸವಿಯಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಇದನ್ನು ಸಚಿನ್ ಶೆಟ್ಟಿ ನಿರ್ದೇಶಿಸಿದ್ದಾರೆ. ಚಿತ್ರದ ಕಥೆಯನ್ನೂ ಸಹ ಸಚಿನ್ ಅವರೇ ಬರೆದಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಸಿರಿ ಪ್ರಹ್ಲಾದ್, ಪ್ರಸಾದ್ ಚೇರ್ಕಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಅಭಿಮನ್ಯು ಪ್ರಜ್ವಲ್ ವಿರೋಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು 2020 ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು[].

ಒಂದು ಶಿಕಾರಿಯ ಕಥೆ
ಚಲನಚಿತ್ರದ ಚಿತ್ರಪಟ
ನಿರ್ದೇಶನಸಚಿನ್ ಶೆಟ್ಟಿ
ನಿರ್ಮಾಪಕರಾಜೀವ್ ಶೆಟ್ಟಿ ಮತ್ತು ಸಚಿನ್ ಶೆಟ್ಟಿ
ಲೇಖಕಸಚಿನ್ ಶೆಟ್ಟಿ
ಕಥೆಸಚಿನ್ ಶೆಟ್ಟಿ
ಪಾತ್ರವರ್ಗಪ್ರಮೋದ್ ಶೆಟ್ಟಿ, ಸಿರಿ ಪ್ರಹ್ಲಾದ್, ಅಭಿಮನ್ಯು ಪ್ರಜ್ವಲ್, ಪ್ರಸಾದ್ ಚೇರ್ಕಾಡಿ, ಎಂ ಕೆ ಮಠ, ಶ್ರೀ ಪ್ರಿಯಾ
ಸಂಗೀತಸೀನ್ ಗೊನ್ಸಾಲ್ವಿಸ್ ಮತ್ತು ಸನತ್ ಬಳ್ಕೂರು
ಛಾಯಾಗ್ರಹಣಯೋಗೇಶ್ ಗೌಡ
ಸಂಕಲನಬಿ ಎಸ್ ಕೆಂಪರಾಜು
ಬಿಡುಗಡೆಯಾಗಿದ್ದು೦೬ ಮಾರ್ಚ್, ೨೦೨೦
ಅವಧಿ೧೩೧ ನಿಮಿಷ
ದೇಶಭಾರತ
ಭಾಷೆಕನ್ನಡ

ಈ ಚಿತ್ರವು ಶೆಟ್ಟಿ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಚಿತ್ರ. ಸಚಿನ್ ಶೆಟ್ಟಿ ಅವರು ಈ ಚಿತ್ರದ ಮೂಲಕ ಚಿತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲದೆ, ಯೋಗೀಶ್ ಗೌಡ ಅವರು ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಸೀನ್ ಗೊನ್ಸಾಲ್ವಿಸ್ ಸಂಗೀತ ನಿರ್ದೇಶಕರಾಗಿ ಮತ್ತು ಸನತ್ ಬಳ್ಕೂರು ಸೌಂಡ್ ಇಂಜಿನಿಯರ್ ಆಗಿ ಈ ಚಿತ್ರಕ್ಕೆ ದುಡಿದಿದ್ದಾರೆ. ಚಿತ್ರದ ಪ್ರಧಾನ ಛಾಯಾಗ್ರಹಣವು 11 ಸೆಪ್ಟೆಂಬರ್ 2018 ರಂದು ಪ್ರಾರಂಭವಾಯಿತು.

ಕಥಾವಸ್ತು

ಬದಲಾಯಿಸಿ

ಶಂಭು ಶೆಟ್ಟಿ ಮೂಲತಃ ಅಹಿಂಸಾವಾದಿ. ತಪ್ಪಿ ಒಂದು ಇರುವೆಯನ್ನೂ ಸಾಯಿಸದ ವ್ಯಕ್ತಿತ್ವ. ಮಗನ ಅಹಿಂಸಾವಾದ ತನ್ನ ಕೊನೆಗಾಲಕ್ಕಾದರೂ ಬದಲಾಗಬಹುದೆಂಬ ಆಸೆ ಅಪ್ಪಣ್ಣ ಶೆಟ್ಟರದ್ದು. ಒಂದು ಸಂದರ್ಭದಲ್ಲಿ ಶಿಕಾರಿಯ ಕೋವಿಯನ್ನು ಕೈಗೆತ್ತಿಕೊಳ್ಳುವ ಶಂಭು ಶೆಟ್ಟಿಯ ಬದುಕು ನಾನಾ ತಿರುವುಗಳನ್ನು ಪಡೆಯುತ್ತದೆ.

ಚಿತ್ರೀಕರಣ

ಬದಲಾಯಿಸಿ

ನಿರ್ದೇಶಕ ಸಚಿನ್ ಶೆಟ್ಟಿ ಅವರು 2018 ರ ಆರಂಭದಲ್ಲಿ ಚಿತ್ರದ ಕಥೆಯನ್ನು ಬರೆದಿದ್ದರು. ಆದರೆ ಸೆಪ್ಟೆಂಬರ್ 2018 ರಲ್ಲಿ ಚಿತ್ರದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಕರ್ನಾಟಕದ ಭಾಗಗಳಲ್ಲಿ, ಆಗುಂಬೆ, ತೀರ್ಥಹಳ್ಳಿ, ಕೊಪ್ಪ, ಕುಂದಾಪುರ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣವನ್ನು ನಡೆಸಲಾಯಿತು. ಚಿತ್ರದಲ್ಲಿ ಕಂಡುಬರುವ ಹಿನ್ನೀರಿನ ಭಾಗಗಳನ್ನು ತೀರ್ಥಹಳ್ಳಿಯಲ್ಲಿ ಚಿತ್ರೀಕರಿಸಲಾಗಿದೆ.

ಪಾತ್ರ ಪರಿಚಯ

ಬದಲಾಯಿಸಿ

ಶಂಭು ಶೆಟ್ಟಿ- ಪ್ರಮೋದ್ ಶೆಟ್ಟಿ ಯುವಕ ಶಂಭು ಶೆಟ್ಟಿ- ಆದರ್ಶ ರಂಗಾಯಣ ಹರಿ - ಎಮ್ ಕೆ ಮಠ ಉಮಾ (ಹರಿಯ ಮಗಳು) - ಸಿರಿ ಪ್ರಹ್ಲಾದ್ ಮೋಹನ- ಪ್ರಜ್ವಲ್ ಅಕ್ಕು (ಮೋಹನನ ತಂಗಿ)- ಶ್ರೀ ಪ್ರಿಯಾ ಹರ್ಷ- ಪ್ರಸಾದ್‌ ಚೇರ್ಕಾಡಿ

ಬಿಡುಗಡೆ

ಬದಲಾಯಿಸಿ

ಒಂದು ಶಿಕಾರಿಯ ಕಥೆ 6 ಮಾರ್ಚ್ 2020 ರಂದು ಬಿಡುಗಡೆಯಾಯಿತು.

ವಿಮರ್ಶೆ

ಬದಲಾಯಿಸಿ

ಚಲನಚಿತ್ರವು ವೀಕ್ಷಕರಿಂದ ಮತ್ತು ಚಲನಚಿತ್ರ ವಿಮರ್ಶಕರಿಂದ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಪ್ರಜಾವಾಣಿಯು ಪ್ರಮುಖ ಪಾತ್ರಗಳ ಕಥೆ, ನಿರೂಪಣೆ ಮತ್ತು ಅಭಿನಯವನ್ನು ಶ್ಲಾಘಿಸುವ ಧನಾತ್ಮಕ ವಿಮರ್ಶೆಯನ್ನು ನೀಡಿತು. ಇನ್ನೊಂದು ಕನ್ನಡ ದೈನಿಕ ಉದಯವಾಣಿಯು ಚಲನಚಿತ್ರದ ಹೃದಯವನ್ನು ಮಿಡಿಯುತ್ತಿದೆ ಎಂದು ಹೇಳುತ್ತಾ ನಿರ್ದೇಶಕ ಮತ್ತು ಪ್ರದರ್ಶಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿತು. ಟೈಮ್ಸ್ ಆಫ್ ಇಂಡಿಯಾ ಇದಕ್ಕೆ ಮೂರು ನಕ್ಷತ್ರಗಳನ್ನು ನೀಡುತ್ತಾ 'ಒಂದು ಶಿಕಾರಿಯ ಕಥೆಯು ಶ್ಲಾಘನೀಯ ಪ್ರಯತ್ನವಾಗಿದೆ, ಅದು ಮಾನವನ ಮನಸ್ಸಿನ ದೌರ್ಬಲ್ಯಗಳನ್ನು ಸಮರ್ಥವಾಗಿ ಸೆರೆಹಿಡಿಯುತ್ತದೆ' ಎಂದಿತು.

ಕೋವಿಡ್ ಸಂದರ್ಭದಲ್ಲಿ ಬಿಡುಗಡೆಯಾದುದರಿಂದ ಈ ಚಿತ್ರ ಹೆಚ್ಚು ಮಂದಿಯನ್ನು ತಲುಪಲಿಲ್ಲ. ಆದರೆ ೨೦೨೦ರ ಸಾಲಿನ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಈ ಚಲನಚಿತ್ರ ಆಯ್ಕೆಯಾಯಿತು. ಅಲ್ಲದೆ ಕನ್ನಡ ಸಿನಿಮಾ ವಿಭಾಗದ ಎರಡನೇ ಅತ್ಯುತ್ತಮ ಚಿತ್ರ ಪುರಸ್ಕಾರವನ್ನು ಪಡೆದುಕೊಂಡಿತು[].

ಸುಮಾರು ೨ ಕೋಟಿ ಬಜೆಟ್ ಹೊಂದಿದ್ದ ಈ ಚಿತ್ರ ಅಂತಿಮವಾಗಿ ೧೮ ಲಕ್ಷ ಗಳಿಸುವಷ್ಟೇ ಶಕ್ತವಾಯಿತು[].

ಉಲ್ಲೇಖಗಳು

ಬದಲಾಯಿಸಿ
  1. "Awards" (PDF). biffes.org. ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಸರ್ಕಾರ. Archived from the original (PDF) on 14 ಆಗಸ್ಟ್ 2022. Retrieved 4 October 2022.
  2. "Awards" (PDF). biffes.org. ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಸರ್ಕಾರ. Archived from the original (PDF) on 14 ಆಗಸ್ಟ್ 2022. Retrieved 4 October 2022.
  3. "Sandalwood Box Office Collection 2020". sacnilk.com. Sacnilk Technologies Pvt. Ltd. Retrieved 4 October 2022.