ಒಂದನೆಯ ಪಾಣಿಪತ್ ಯುದ್ಧ

ಒಂದನೆಯ ಪಾಣಿಪತ್ ಯುದ್ಧದೊಂದಿಗೆ ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಬೀಜಾಂಕುರವಾಯಿತು. ಪಾಣಿಪತ್ ಈಗಿನ ಹರ್ಯಾನಾದಲ್ಲಿರುವ ಒಂದು ಸ್ಥಳ.ಈ ಯುದ್ಧವಾದದ್ದು ಕ್ರಿ.ಶ. ೧೫೨೬ರಲ್ಲಿ

ಏಪ್ರಿಲ್ ೧೨ರಂದು ನಡೆದ ಈ ಯುದ್ಧದಲ್ಲಿ ಕಾಬೂಲಿನ ರಾಜ, ತೈಮೂರನ ವಂಶಜ , ಜಹೀರ್‍ ಅಲ್ ದೀನ ಮುಹಮ್ಮದ್ ಬಾಬರನು ದೆಹಲಿಯ ಸುಲ್ತಾನ ಇಬ್ರಾಹಿಮ್ ಲೋಧಿಯ ದೊಡ್ಡ ಸೈನ್ಯವನ್ನು ಸೋಲಿಸಿದನು.

ಬಾಬರನ ಸೈನ್ಯದಲ್ಲಿ ೧೫,೦೦೦ ಪದಾತಿಗಳೂ, ೧೫ ರಿಂದ ೨೦ ಫಿರಂಗಿಗಳಿದ್ದವೆಂದು ಅಂದಾಜಿದೆ. ಲೋಧಿಯ ಸೈನ್ಯದಲ್ಲಿ ೩೦,೦೦೦ ದಿಂದ ೪೦,೦೦೦ ಸೈನಿಕರೂ, ಕೊನೆಯ ಪಕ್ಷ ೧೦೦ ಆನೆಗಳೂ ಇದ್ದು, ದಂಡಿನ ಸಹಾಯಕರೂ ಸೇರಿದಂತೆ ೧೦೦,೦೦೦ ಜನರಿದ್ದರು. ಲೋಧಿಯ ಸೈನ್ಯದಲ್ಲಿ ಫಿರಂಗಿಗಳಿರದಿದ್ದರಿಂದಲೂ, ಆನೆಗಳು ಫಿರಂಗಿಯ ಶಬ್ದಕ್ಕೆ ಹೆದರುವುದರಿಂದಲೂ, ಈ ಯುದ್ಧದಲ್ಲಿ ಬಾಬರನ ಫಿರಂಗಿಗಳು ನಿರ್ಣಾಯಕವಾದವು. ಆನೆಗಳು ಫಿರಂಗಿಯಿಂದ ಗಾಬರಿಯಾಗಿ ಓಡುವಾಗ, ಅವುಗಳ ಕಾಲಿಗೆ ಸಿಕ್ಕಿ ಲೋಧಿಯ ಸೈನಿಕರು ಮರಣವನ್ನಪಿದರು . ಪ್ರಭಾವೀ ಮುಖಂಡನಾಗಿದ್ದ ಬಾಬರ್‍ ಶಿಸ್ತಿನ ಸೈನ್ಯದ ಮುಂದಾಳುವಾಗಿದ್ದ.

ಯುದ್ಧದಲ್ಲಿ ಲೋಧಿ ಮರಣವನ್ನಪ್ಪಿದ. ಅವನ ಅನೇಕ ಸೈನ್ಯಾಧಿಕಾರಿಗಳು ಹಾಗೂ ಸಾಮಂತರುಗಳು ಯುದ್ಧಾನಂತರ ತಮ್ಮ ನಿಷ್ಠೆಯನ್ನು ದೆಹಲಿಯ ಹೊಸ ನಾಯಕನಿಗೆ ಬದಲಾಯಿಸಿದರು. ಈ ಯುದ್ಧದಿಂದ ಮೊಘಲ್ ಸಾಮ್ರಾಜ್ಯ ಮೊದಲಾಯಿತು. ಮೊಘಲ್ ಶಬ್ದದ ಮೂಲ ಮೊಂಗೋಲ್ ಶಬ್ದದಿಂದ ಬಂದಿದ್ದು , ಅದು ಬಾಬರನ ಹಾಗೂ ಅವನ ಸೈನ್ಯಾಧಿಕಾರಿಗಳ ತುರ್ಕಿ , ಮಂಗೋಲ ಮೂಲವನ್ನು ಸೂಚಿಸುತ್ತದೆ. ಆದರೂ ಅವನ ಸೈನಿಕರಲ್ಲಿ ಬಹತೇಕ ಜನ ಪಠಾಣ, ಭಾರತೀಯ ಅಥವಾ ಮಧ್ಯ ಏಶಿಯಾದ ಮಿಶ್ರ ವಂಶಗಳ ಮೂಲದವರಾಗಿದ್ದರು.