ಐರಣಿ
ಐರಣಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಒಂದು ಗ್ರಾಮ ಮತ್ತು ಪುಣ್ಯಕ್ಷೇತ್ರ. ತುಂಗಭದ್ರಾ ನದಿಯ ಎಡದಂಡೆಯ ಮೇಲೆ ರಾಣೆಬೆನ್ನೂರಿಗೆ ಪ್ರರ್ವದಲ್ಲಿ ಸು.22ಕಿಮೀ ದೂರದಲ್ಲೂ ಚಳಗೇರಿ ರೈಲು ನಿಲ್ದಾಣಕ್ಕೆ 10 ಕಿಮೀ ದೂರದಲ್ಲೂ ಇದೆ. ಮೆಡ್ಲೇರಿ ಹೋಬಳಿಗೆ ಸೇರಿದೆ. ಕೈಮಗ್ಗದ ಒರಟು ಉಣ್ಣೆಯ ಬಟ್ಟೆಗೆ ಈ ಗ್ರಾಮ ಪ್ರಸಿದ್ಧ. ಇಲ್ಲಿ ಪ್ರತಿ ಶುಕ್ರವಾರ ಸಂತೆ ಸೇರುತ್ತದೆ. ಈ ಗ್ರಾಮದ ಸಮೀಪದಲ್ಲಿ 762 ಮೀ ಎತ್ತರವಿರುವ ಐರಣಿ ಬೆಟ್ಟವಿದೆ.
ಐತಿಹ್ಯ
ಬದಲಾಯಿಸಿಐರಣಿಯಿಂದ 30 ಮೀ ದೂರದಲ್ಲಿ ತುಂಗಭದ್ರಾನದಿಯ ಎಡದಂಡೆಯ ಮೇಲೆ ಒಂದು ಹಳೆಯ ಕೋಟೆಯ ಅವಶೇಷವಿದೆ. ಶ್ರೀ ಜಗದ್ಗುರು ಮುಪ್ಪಿನಾರ್ಯ ಮಹಾಸ್ವಾಮಿಗಳು ಕಟ್ಟಿಸಿದ ಕೊಟ್ಟೂರೇಶ್ವರ ಮಠ ಅಥವಾ ಹೊಳೆ ಮಠವಿದೆ. ಇದನ್ನು ಮೊದಲು ಐರಾವತ ಕ್ಷೇತ್ರವೆಂದು ಕರೆಯುತ್ತಿದ್ದರೆಂದು ಹೇಳುವರು. ಇಲ್ಲಿ ಹುಚ್ಚಬಸವ ಸ್ವಾಮಿಗಳ, ಕೊಟ್ಟೂರಸ್ವಾಮಿಗಳ, ಉರಿಲಿಂಗದೇವರ ಮತ್ತು ಲಿಂಗಪ್ಪದೇವರ ಗದ್ದುಗೆಗಳಿವೆ. ಗೋಣಿಸ್ವಾಮಿ ಮಠ, ಕಣವಿಸಿದ್ಧೇಶ್ವರ ಆಲಯ, ತುಂಗಭದ್ರಾ ತಟಾಕದಲ್ಲಿ ಸಿದ್ಧನಾಯಕನ ಗದ್ದುಗೆಯೂ ಬೆಟ್ಟದ ಮೇಲೆ ಕೊಟ್ಟೂರೇಶ್ವರ, ಮಲ್ಲಿಕಾರ್ಜುನ, ಮುಂಡಬಸಪ್ಪ, ಮಳೆಮಲ್ಲಪ್ಪ ಆಲಯಗಳೂ ಸಿದ್ಧಾಶ್ರಮ ಮತ್ತು ಅವಧೂತಾಶ್ರಮಗಳೂ ಇದ್ದು, ಬೆಟ್ಟದ ಕೆಳಗೆ ಮದ್ದಾನೇಶ್ವರ ಆಲಯವಿದೆ. ಕಾರ್ತೀಕ ಮಾಸದ ಮತ್ತು ಚೈತ್ರ ಶುದ್ಧ ನವಮಿ ಪ್ರಜೆಗೆ ಇಲ್ಲಿ ಸಾವಿರಾರು ಮಂದಿ ಸೇರುವರು. ಐರಣಿಯನ್ನು ದಕ್ಷಿಣಕಾಶಿ ಎಂದೂ ಭಾವಿಸುತ್ತಾರೆ.