ಐಬೆಕ್ಸ್‌

ದ್ವಂದ್ವ ನಿವಾರಣೆ

ಐಬೆಕ್ಸ್‌: ದಕ್ಷಿಣ ಯುರೋಪು, ಮಧ್ಯ ಏಷ್ಯ, ಏಷ್ಯ ಮೈನರುಗಳಲ್ಲಿ ಕಂಡುಬರುವ, ಸ್ಥೂಲವೂ ದೃಢವೂ ಆದ ಮೈಕಟ್ಟುಳ್ಳ ಕಾಡುಮೇಕೆಗಳ ಪೈಕಿ ಒಂದು. ಕ್ಯಾಪ್ರ ಜಾತಿಗೆ ಸೇರಿದೆ. ಪರ್ವತ ಪ್ರದೇಶಗಳಲ್ಲೇ ಇದರ ವಾಸ ಹೆಚ್ಚು. ಒಂದಾನೊಂದು ಕಾಲದಲ್ಲಿ ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ಪರ್ವತ ಶ್ರೇಣಿಗಳಲ್ಲಿ ಇದು ಕಾಣಸಿಗುತ್ತಿತ್ತು. ಐಬೆಕ್ಸ್‌ ನೋಡುವುದಕ್ಕೆ ಅಂದವಾದ ಪ್ರಾಣಿ. ಹೆಗಲವರೆಗಿನ ಎತ್ತರ 40". ಉದ್ದ ಸು. 4¼'. ಕೊಂಬು ಬಾಗಿದ್ದು ಉದ್ದಕ್ಕೂ ಗಚ್ಚುಗಚ್ಚಾಗಿ, ಗರಗಸದಂತಿದೆ. ಹೆಣ್ಣುಗಳ ಕೊಂಬು ನೇರ, ಮೋಟು. ಗಂಡುಗಳಿಗೆ ಗಡ್ಡವುಂಟು. ಅವುಗಳ ಮೈತುಂಬ ಒರಟಾದ ಬಿರುಸು ಕೂದಲುಗಳಿವೆ. ಬೇಸಗೆ ಯಲ್ಲಿ ಕೂದಲು ಸಣ್ಣಗಿದ್ದು ಬೂದುಬಣ್ಣಕ್ಕಿರುತ್ತದೆ. ಶೀತಕಾಲ ದಲ್ಲಿ ಉದ್ದವಾದ ಹಳದಿ-ಕೆಂಪು ಬಣ್ಣದ ಕೂದಲು ಈ ಸಣ್ಣ ತೆಳು ಕೂದಲನ್ನು ಮುಚ್ಚಿಕೊಳ್ಳುತ್ತದೆ.

Male Alpine ibex

ಏಷ್ಯದ ಐಬೆಕ್ಸಿನ ಕೊಂಬು ಗಳೂ ಮೈಬಣ್ಣವೂ ಮಿಕ್ಕ ಪ್ರದೇಶಗಳವಕ್ಕಿಂತ ಭಿನ್ನವಾಗಿವೆ. ಬೇಸಗೆಯಲ್ಲಿ ಅವು ಝರಿಗಳ ಕಡಿದಾದ ಇಳಿಜಾರುಗಳಲ್ಲಿ ಮೊಳೆಯುವ ಹುಲ್ಲುಚಿಗುರುಗಳಿಂದ ಆಕರ್ಷಿತವಾಗಿ ಹಿಮ ಪಂಕ್ತಿಯಿಂದ ಕೆಳಕ್ಕೆ ಇಳಿದು ಬರುತ್ತವೆ. ಗುಂಪಿನಲ್ಲಿ 12 ರಿಂದ 40 ಪ್ರಾಣಿಗಳಿರುತ್ತವೆ. ಸಾಮಾನ್ಯವಾಗಿ ಇವು ಮುಂಜಾವಿನಲ್ಲಿ, ಅನಂತರ ಮರಳಿ ಮುನ್ನೆಚ್ಚರಿಕೆಯಲ್ಲಿ ಮೇಯುತ್ತವೆ. ಅಲ್ಲದೆ ತಮ್ಮ ತಮ್ಮ ಮೇವಿನ ಸ್ಥಳಗಳನ್ನು ಪದೇ ಪದೇ ಬದಲಾಯಿಸುತ್ತಿರುತ್ತವೆ. ಮೇಯುವ ಸ್ಥಳಗಳ ಹಿಂದುಗಡೆಯ ಬೆಟ್ಟದ ಬೆನ್ನೇಣುಗಳೂ ಕಮರಿಗಳೂ ಅವಕ್ಕೆ ಒಳ್ಳೆಯ ಆಶ್ರಯವನ್ನು ಕೊಡುತ್ತವೆ. ಈ ಉನ್ನತ ಪ್ರದೇಶಗಳಿಗೆ ಅವು ವಿಶ್ರಾಂತಿಗಾಗಿಯೋ ಇಲ್ಲ ಭಯದಿಂದ ಪಾರಾಗಲೋ ಹೋಗುತ್ತವೆ. ಈ ಪ್ರದೇಶಗಳು ದುರ್ಗಮವಾಗಿರುವುದರಿಂದಲೂ ಈ ಪ್ರಾಣಿಗಳ ಹೆಣ್ಣುಗಳಿಗೆ ಚುರುಕಾದ ಕಣ್ಣುಗಳೂ ಶತ್ರುಗಳ ವಾಸನೆಯನ್ನು ಕಂಡುಹಿಡಿಯುವ ಸಾಮಥರ್ಯ್‌ವೂ ಜಾಗರೂಕತೆಯೂ ಇರುವುದರಿಂದ ಇವು ಆ ಜಾಗಗಳಲ್ಲಿ ನೆಮ್ಮದಿಯಾಗಿರಬಲ್ಲವು.

ಮುಂಬೇಸಗೆಯಲ್ಲಿ ವಯಸ್ಸಾದ ಗಂಡುಗಳು ಹೆಣ್ಣುಗಳ ಮತ್ತು ಮರಿಗಳ ಹತ್ತಿರದಲ್ಲಿದ್ದು ಗುಂಪಿನ ಯೋಗಕ್ಷೇಮ ನೋಡಿಕೊಳ್ಳುತ್ತವೆ. ಅಕ್ಟೋಬರ್ ತಿಂಗಳು ಇವಕ್ಕೆ ಬೆದೆಗಾಲ. ಮೇ ಅಥವಾ ಜೂನ್ ತಿಂಗಳಿನಲ್ಲಿ ಆಹಾರ ಸಮೃದ್ಧಿಯಾಗಿರುವಾಗ ಮರಿಹಾಕುತ್ತವೆ. ಈ ಮರಿಗಳು ಇತರೆಲ್ಲ ಮೇಕೆ ಕುರಿಗಳಂತೆ ಬಲುಬೇಗ ತಮ್ಮ ತಾಯ ಜೊತೆಗೆ ಬೆಟ್ಟದ ಬಿರುಕುಗಳಲ್ಲಿಯೂ ಬಂಡೆಗಳಲ್ಲಿಯೂ ಓಡಿಯಾಡಲು ಪ್ರಾರಂಭಿಸುತ್ತವೆ. ಮೈಕೆಳಭಾಗದಲ್ಲಿ ದಟ್ಟವಾದ ತುಪ್ಪಟವಿರುವುದರಿಂದ ಇವಕ್ಕೆ ಚಳಿ ಸೋಕದು. ಸಮೃದ್ಧವಾಗಿಯೂ ಮೃದುವಾಗಿಯೂ ದಟ್ಟವಾಗಿಯೂ ಇರುವ ಈ ತುಪ್ಪುಳಕ್ಕಾಗಿ ಇವನ್ನು ಜನ ಬೇಟೆಯಾಡುತ್ತಾರೆ.

ಸೈಬೀರಿಯದ ಐಬೆಕ್ಸ್‌ ಉಳಿದೆಲ್ಲ ಬೆಟ್ಟದ ಆಡುಗಳಿಗಿಂತ ದೊಡ್ಡದು. ಅಂದರೆ ಗಂಡು ಐಬೆಕ್ಸ್‌ ಗಾತ್ರದಲ್ಲಿ ಒಂದು ಸಣ್ಣ ಕತ್ತೆಯಷ್ಟಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: