ಅರ್ಥಶಾಸ್ತ್ರದ ಐತಿಹಾಸಿಕ ಪಂಥ

(ಐತಿಹಾಸಿಕ ಪಂಥ ಇಂದ ಪುನರ್ನಿರ್ದೇಶಿತ)

ಐತಿಹಾಸಿಕ ಪಂಥ: ಅಭಿಜಾತ ಅರ್ಥಶಾಸ್ತ್ರಜ್ಞರ ಅಮೂರ್ತ ಹಾಗೂ ನಿಗಮನ ಸಿದ್ಧಾಂತಗಳಿಗೆ ಪ್ರತಿಕ್ರಿಯೆಯಾಗಿ ಪ್ರಥಮತಃ ಜರ್ಮನಿಯಲ್ಲೂ ಅನಂತರ ಇತರ ದೇಶಗಳಲ್ಲೂ ಉದ್ಭವಿಸಿದ ಪಂಥ (ಹಿಸ್ಟಾರಿಕಲ್ ಸ್ಕೂಲ್). ಆರ್ಥಿಕ ಜೀವನದ ವಸ್ತುಸ್ಥಿತಿಗತಿಗಳನ್ನು ಅರಿಯಬೇಕಾದರೆ ಅರ್ಥಶಾಸ್ತ್ರಜ್ಞರು ಇತಿಹಾಸವನ್ನು ವೀಕ್ಷಿಸಬೇಕೆಂಬುದು ಈ ಪಂಥದ ಲೇಖಕರ ಮುಖ್ಯ ವಾದ. ಆರ್ಥಿಕ ಸೂತ್ರಗಳ ವಿಕಸನ ಶೀಲತೆಯನ್ನು ವಿಶೇಷವಾಗಿ ಒತ್ತಿ ಹೇಳಿದ್ದು ಈ ಪಂಥದವರ ಮುಖ್ಯ ಸಾಧನೆ.

ವಾಸ್ತವವಾಗಿ ನೋಡುವುದಾದರೆ ಇದು ಒಂದು ಪಂಥವಲ್ಲ; ಹಲವು ಪಂಥಗಳ ಒಂದು ಗುಂಪು. ಒಂದು ರಾಷ್ಟ್ರದ ಆರ್ಥಿಕ ಜೀವನದ ಸ್ವರೂಪ. ಆ ದೇಶದ ಇತಿಹಾಸದ ಒಂದು ಮುಖ. ಅದು ಆ ದೇಶಕ್ಕೆ ಆ ಕಾಲಕ್ಕೆ ವಿಶಿಷ್ಟವಾದದ್ದು. ಅದು ಗತಕಾಲದ ಸಂತಾನವಾದ್ದರಿಂದ ಇತಿಹಾಸದ ಅಭ್ಯಾಸದಿಂದ ಮಾತ್ರವೇ ಸುಸ್ಪಷ್ಟವಾಗತಕ್ಕದ್ದು. ಇದು ಈ ಪಂಥದವರ ವಾದಮೂಲ. ಅಭಿಜಾತ ಪಂಥದವರ ದೃಷ್ಟಿ ಕಾಲದೇಶಾತೀತ. ಇಡಿಯಾಗಿ ನೋಡುವ ಬದಲು ಬಿಡಿಯಾಗಿ ನೋಡುವುದೇ ಅವರ ಪದ್ಧತಿಯಾಗಿತ್ತು. ಆದರೆ ಮಾನವ ಸಾಮಾಜಿಕವಾಗಿ ಪಾತ್ರವಹಿಸುವ ಎಲ್ಲ ಕ್ಷೇತ್ರಗಳ ಕುಂದಣದಲ್ಲಿ ಅರ್ಥಶಾಸ್ತ್ರವನ್ನೂ ಇಟ್ಟು ನೋಡುವ ಪರಿಪಾಟಿಯನ್ನು ಬೆಳೆಸಿದವರು ಐತಿಹಾಸಿಕ ಪಂಥದವರು. ಅರ್ಥಶಾಸ್ತ್ರಕ್ಕೆ ಸಾಮಾಜಿಕ ಸಿದ್ಧಾಂತದ ತಳಹದಿ ಹಾಕಿದವರು ಇವರೇ ಎನ್ನಬಹುದು.

ಆದ್ಯಪ್ರವರ್ತಕರು

ಬದಲಾಯಿಸಿ

ಜರ್ಮನ್ ಭಾಷೆಯಾಡುವ ದೇಶಗಳಲ್ಲಿ 1843ರಿಂದ ಸುಮಾರು ನಲವತ್ತು ವರ್ಷಗಳ ಕಾಲ ಅತ್ಯಂತ ಪ್ರಭಾವಶಾಲಿಯಾಗಿದ್ದ ಐತಿಹಾಸಿಕ ಪಂಥವನ್ನು ಆಡಂ ಮುಲ್ಲರನ (1779-1820) ಕಾಲದಿಂದಲೂ ಅರಸಬಹುದಾಗಿದೆ. ಮುಲ್ಲರನ ದೃಷ್ಟಿಯಲ್ಲಿ ಅರ್ಥವ್ಯವಸ್ಥೆಯೆಂಬುದು ಲಾಭಕ್ಕಾಗಿ ಶ್ರಮಿಸುವವರ ಒಂದು ಪ್ರತ್ಯೇಕ ವಿಭಾಗವಲ್ಲ. ಇದು ಆರ್ಷೇಯ ಕಾಲದಿಂದಲೂ ಬೆಳೆದು ಬಂದಿರುವ ಸಾಮಾಜಿಕ ವ್ಯವಸ್ಥೆಯ ಒಂದು ಅಂಗ. ಕಟ್ಟು, ಕಟ್ಟಳೆ, ಶಿಕ್ಷಣ, ರಾಜಕೀಯ, ಮತ ಇವುಗಳಿಗೂ ಅರ್ಥವ್ಯವಸ್ಥೆಗೂ ವಿನಾ ಸಂಬಂಧ. ಇತಿಹಾಸದೊಂದಿಗೆ ಇವು ಬದಲಾದಂತೆಲ್ಲ ಅರ್ಥವ್ಯವಸ್ಥೆಯೂ ವ್ಯತ್ಯಾಸವಾಗುವುದು ಅನಿವಾರ್ಯ. ಹಣವೆಂಬುದು ಕೂಡ ಆಂತರಿಕ ಸಹಕಾರ ಮನೋಭಾವದ ಒಂದು ಮೂರ್ತರೂಪ. ಅನೇಕ ಅಭಿಜಾತ ಅರ್ಥಶಾಸ್ತ್ರಜ್ಞರು ಭಾವಿಸಿದ್ದಂತೆ ಇವನ ದೃಷ್ಟಿಯಲ್ಲಿ ಸರ್ಕಾರ ಅನಿಷ್ಟವೂ ಅನಿವಾರ್ಯವೂ ಆದ, ಹದ್ದುಬಸ್ತಿನಲ್ಲಿಡಬೇಕಾದ ಒಂದು ವ್ಯವಸ್ಥೆಯಲ್ಲ. ಸರ್ಕಾರೀ ಅರ್ಥನೀತಿ ಈತನ ದೃಷ್ಟಿಯಲ್ಲಿ ಒಂದು ಉತ್ಪಾದೀ ಬಲ.

ಆಡಂ ಮುಲ್ಲರನಿಗೂ ಆತನ ಜಾಡಿನಲ್ಲಿ ನಡೆದ ಇತರ ಅರ್ಥಶಾಸ್ತ್ರಜ್ಞರಿಗೂ ಸ್ಥೂಲವಾಗಿ ಜೆ.ಜಿ. ಫಿಕ್ಟೆ ಮತ್ತು ಜಾರ್ಜ್ ವಿಲ್ಹೆಲ್ಮ್‌ ಫ್ರೆಡ್ರಿಕ್ ಹೆಗೆಲ್ ಈ ದಾರ್ಶನಿಕರ ಭಾವನೆಗಳು ಆಧಾರ. ಉದಾರ ಅಭಿಜಾತ ಪಂಥೀಯರಂತೆ ಫಿಕ್ಟೆಯೂ ವ್ಯಕ್ತಿಸ್ವಾತಂತ್ರ್ಯದ ಪ್ರಬೋಧಕ ಆದರ್ಶವನ್ನೇ ಎತ್ತಿಹಿಡಿದನಾದರೂ ಸರ್ಕಾರಕ್ಕೊಂದು ಸಾಮಾಜಿಕ ಗುರಿಯಿರಬೇಕೆಂದೂ ಸರ್ಕಾರದ ಅಧಿಕಾರದ ವಿಸ್ತರಣೆಯಾಗಬೇಕೆಂದೂ ಆತ ವಾದಿಸಿದ. ಹೆಗೆಲನಂತೂ ಸರ್ಕಾರದ ಸ್ವತಂತ್ರ ಸರ್ವವ್ಯಾಪಕತ್ವದ ಪ್ರತಿಪಾದಕ. ಅವನ ದೃಷ್ಟಿಯಲ್ಲಿ ವ್ಯಕ್ತಿಗಳು ಇದರ ಸಾಧನಗಳು ಮಾತ್ರ; ಸರ್ಕಾರವೆಂಬ ಶರೀರದಲ್ಲಿ ವ್ಯಕ್ತಿಗಳಿಗೆ ಅಂಗಗಳ ಸ್ಥಾನ. ಆದರೆ ಬ್ರಿಟಿಷ್ ಮತ್ತು ಫ್ರೆಂಚ್ ಅಭಿಜಾತ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿತ್ತು. ವಿವಿಧ ವ್ಯಕ್ತಿಗಳ ಹಿತಾಸಕ್ತಿಗಳ ಮತ್ತು ವಿವೇಚನಾಯುತ ಕಾರ್ಯಾಚರಣೆಗಳ ಅನ್ಯೋನ್ಯ ಕ್ರಿಯೆಗಳ ಪರಿಣಾಮವಾಗಿ ಆರ್ಥಿಕ ಜೀವನ ರೂಪುಗೊಳ್ಳುವುದೆಂಬುದು ಅವರ ಭಾವನೆಯಾಗಿತ್ತು. ಒಬ್ಬೊಬ್ಬನೂ ತನ್ನತನ್ನ ಹಿತ ಸಾಧಿಸಿಕೊಂಡರೆ ಸಮಷ್ಟಿಯ ಹಿತವೂ ಸಾಧಿಸಿದಂತೆ - ಎಂಬುದು ಅವರ ನಂಬಿಕೆ.

ಐತಿಹಾಸಿಕ ಪಂಥದ ಮೇಲೆ ಮೊಟ್ಟಮೊದಲು ಹೆಚ್ಚಿನ ಪ್ರಭಾವ ಬೀರಿದವನೆಂದರೆ ಫ್ರೆಡರಿಕ್ ಲಿಸ್ಟ್‌. 1841ರಲ್ಲಿ ಪ್ರಕಟವಾದ ಆತನ ಅಭಿಪ್ರಾಯಗಳಿಗೆ ಜರ್ಮನ್ ರಾಷ್ಟ್ರೀಯತ್ವದ ಭಾವನೆಯೇ ಮೂಲ. ನೆಪೋಲಿಯನ್ನನ ವಿರುದ್ಧವಾಗಿ ಪ್ರಬಲ ಜರ್ಮನ್ ರಾಷ್ಟ್ರ ನಿರ್ಮಾಣ ಮಾಡಬೇಕೆಂಬ ಹಂಬಲಕ್ಕೆ ಬೆಂಬಲವಾಗಿ ಲಿಸ್ಟನ ಆರ್ಥಿಕ ಭಾವನೆಗಳು ರೂಪುಗೊಂಡುವು. ಪ್ರಪಂಚದ ನಾನಾ ರಾಷ್ಟ್ರಗಳು ಸಮಾನವಾದ ಶಕ್ತಿ ಗಳಿಸದಿರುವುದಕ್ಕೆ ಆಯಾ ರಾಷ್ಟ್ರಗಳ ಇತಿಹಾಸ ಸಂಗತಿಗಳೇ ಕಾರಣ. ಅಭಿವೃದ್ಧಿ ಹೊಂದದ ರಾಷ್ಟ್ರಗಳ ಬೆಳೆವಣಿಗೆಗಾಗಿ ಶೈಶವ ಕೈಗಾರಿಕೆಗಳಿಗೆ ರಕ್ಷಣೆ ನೀಡಬೇಕೆಂಬುದು ಅವನ ಸಿದ್ಧಾಂತ. ಆಡಂ ಸ್ಮಿತ್ತನ ದೃಷ್ಟಿಯಲ್ಲಿ ಪದಾರ್ಥೋತ್ಪಾದನೆ ಮಾತ್ರವೇ ಉತ್ಪಾದೀಶ್ರಮ; ಉಳಿದದ್ದೆಲ್ಲ ವ್ಯರ್ಥ. ಆದರೆ ಲಿಸ್ಟ್‌ ಹೀಗೆ ಭಾವಿಸಿರಲಿಲ್ಲ. ಆತನ ದೃಷ್ಟಿಯಲ್ಲಿ ಒಂದು ದೇಶದ ನಿಜವಾದ ಸಂಪತ್ತು ಅವರ ಸರಕುದಾಸ್ತಾನುಗಳಲ್ಲ; ಅಲ್ಲಿಯ ಜನರ ಬುದ್ಧಿಶಕ್ತಿ, ಕ್ರಿಯಾಸಾಮಥರ್ಯ್‌ ಇವೇ ನಿಜವಾದ ಸಂಪತ್ತು.

ಹಳೆಯ ಪಂಥ

ಬದಲಾಯಿಸಿ

ಮುಲ್ಲರ್, ಲಿಸ್ಟ್‌ ಮುಂತಾದವರ ಮೂಲಭಾವನೆಗಳ ತಳಹದಿಯ ಮೇಲೆ ಜರ್ಮನಿಯ ಹಳೆಯ ಇತಿಹಾಸ ಪಂಥ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ನಿಚ್ಚಳವಾಗಿ ಮೂಡಿ ಬಂತು. ಇದರ ಅಧ್ವರ್ಯುಗಳು ಮೂರು ಜನ: ಡಬ್ಲ್ಯು. ರಾಷೆರ್ (1817-94). ಬ್ರೂನೊ ಹಿಲ್ಡೆ ಬ್ರಾಂಟ್ (1812-78) ಮತ್ತು ಕೆ.ಕ್ನೀಸ್ (1821-98). ಇವರು ಮೂವರೂ ಮಾಕರ್ಸ್‌ನ ಸಮಕಾಲೀನರು. ಇತಿಹಾಸ, ರಾಜ್ಯಶಾಸ್ತ್ರಗಳೆರಡನ್ನೂ ಅಭ್ಯಾಸ ಮಾಡಿದ್ದ ರಾಷೆರ್ ವಿವೇಕಯುತ ರಾಜಕಾರಣಕ್ಕೆ ಇತಿಹಾಸದ ಅನುಭವವೇ ಆಧಾರವಾಗಬೇಕೆಂದು ಪ್ರತಿಪಾದಿಸಿದ. ಆರ್ಥಿಕ ವಿವೇಚನೆಯ ಹಿಂದೆ ಇತಿಹಾಸ ಪ್ರಜ್ಞೆ ಇರಬೇಕೆಂಬುದು ಅವನ ವಾದ. ರಿಕಾರ್ಡೊವಿನ ನಿಗಮನ ಸಿದ್ಧಾಂತಗಳನ್ನು ಈತ ತಳ್ಳಿಹಾಕಲಿಲ್ಲವಾದರೂ ಅನುಭವಕ್ಕೆ ಇವನು ಕೊಟ್ಟ ಬೆಲೆ ಅಧಿಕ. ಅರ್ಥಶಾಸ್ತ್ರಕ್ಕೆ ಇತಿಹಾಸ ಪೋಷಕವಾಗಬೇಕು; ಆರ್ಥಿಕ ವ್ಯವಸ್ಥೆಗಳ ಮತ್ತು ಸ್ಥಿತಿಗತಿಗಳ ವರ್ಣನೆಯೇ ಅರ್ಥಶಾಸ್ತ್ರದ ಆದಿ ಮತ್ತು ಅಂತ್ಯ ಎಂಬುದು ಈತನ ವಾದ ಸಾರವೆನ್ನಬಹುದು.

ಅಭಿಜಾತ ಮಾರ್ಗವನ್ನು ಇನ್ನೂ ತರ್ಕಬದ್ಧವಾಗಿ ಟೀಕಿಸಿದವನೆಂದರೆ ಬ್ರೂನೊ ಹಿಲ್ಡ್‌ಬ್ರಾಂಟ್. ಎಲ್ಲ ಕಾಲದೇಶಗಳಿಗೂ ಅನ್ವಯವಾಗುವ ಸಹಜ ಆರ್ಥಿಕ ಸೂತ್ರಗಳನ್ನು ಅನ್ವೇಷಿಸುವುದಾಗಿಯೂ ಕಂಡುಹಿಡಿದಿರುವುದಾಗಿಯೂ ಹೇಳಿಕೊಳ್ಳುತ್ತಿದ್ದ ಅಭಿಜಾತ ಪಂಥದ ವಾದವನ್ನು ಈತ ತಳ್ಳಿಹಾಕಿದ. ವಿಭಿನ್ನ ರಾಷ್ಟ್ರಗಳ ಮತ್ತು ಇಡೀ ಮಾನವತೆಯ ಬೆಳೆವಣಿಗೆಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವುದು ಅರ್ಥಶಾಸ್ತ್ರದ ಉದ್ದೇಶ ಎಂದು ಈತ ಬರೆದಿದ್ದಾನೆ.

ಹಳೆಯ ಐತಿಹಾಸಿಕ ಪಂಥದ ಸ್ಥಾಪಕ ತ್ರಿಮೂರ್ತಿಗಳಲ್ಲಿ ಮೂರನೆಯವನಾದ ಕೆ.ಕ್ನೀಸನದು ಇತರರಿಗಿಂತ ಹೆಚ್ಚು ಖಚಿತವಾದ ವಿಚಾರಧಾರೆಯೆನ್ನಬಹುದು. ಇತಿಹಾಸದ ಅಧ್ಯಯನವೇ ಅರ್ಥಶಾಸ್ತ್ರದ ನ್ಯಾಯವಾದ ಮಾರ್ಗವೆಂದು ಇವನ ವಾದ. ಭೌತವಿಜ್ಞಾನಗಳಲ್ಲಿರುವಂಥ ಸೂತ್ರಗಳನ್ನು ಅಳವಡಿಸುವುದು ಸಾಧ್ಯವಿಲ್ಲ. ಸಾಮಾಜಿಕ ಬೆಳೆವಣಿಗೆಯ ಕ್ರಮದಲ್ಲಿ ಆವರ್ತಿಸುವ ಕೆಲವು ಪ್ರವೃತ್ತಿಗಳನ್ನು ಗಮನಿಸಿ ಅವುಗಳ ಸಾದೃಶ್ಯಗಳನ್ನು ಸೂಚಿಸಬಹುದಷ್ಟೆ ಇದು ಸಾಹಸ ಅಭಿಪ್ರಾಯ.

ಸಾಮ್ಯವಾದದ ಪ್ರತಿಪಾದಕನಾದ ಕಾರ್ಲ್ಮಾಕರ್ಸ್‌ನ ಮಾರ್ಗವೂ ಹಳೆಯ ಐತಿಹಾಸಿಕ ಪಂಥವೂ ಮೂಲತಃ ಒಂದೇ ಎಂದು ತೋರುವುದಾದರೂ ಇವೆರಡೂ ವಿಭಿನ್ನವಾದವು. ಇತಿಹಾಸ ದೃಷ್ಟಿಯೇನೋ ಎರಡಕ್ಕೂ ಸಾಮಾನ್ಯ ಉತ್ಪಾದನ ಬಲಗಳಿಗೆ ಅನುಗುಣವಾದ ಮಾನವರ ಪ್ರತಿಕ್ರಿಯೆಯನ್ನು ಕುರಿತು ಇಬ್ಬರೂ ವಿವೇಚನೆ ನಡೆಸಿದರು. ಆದರೆ ನಾನಾ ಅರ್ಥವ್ಯವಸ್ಥೆಗಳು ಬದಲಾಗಿ ಅಂತಿಮವಾಗಿ ಸಾಮ್ಯವಾದದ ಸ್ಥಾಪನೆಯಾಗುವುದೆಂದು ಮಾಕ್ರ್ಸ್‌ ನಂಬಿದ್ದ. ಐತಿಹಾಸಿಕ ಪಂಥದವರು ಈ ದೃಷ್ಟಿಯನ್ನೊಪ್ಪಲು ಸಿದ್ಧರಿರಲಿಲ್ಲ. ಇತಿಹಾಸದ ಗತಿಯನ್ನಷ್ಟೆ ಅವರು ಒತ್ತಿ ಹೇಳಿದರು. ನಾನಾ ಸಮಾಜ ವ್ಯವಸ್ಥೆಗಳು ಇರುವುದು ಸಾಧ್ಯವೆಂದು ಅವರ ನಂಬಿಕೆ. ಅರ್ಥವ್ಯವಸ್ಥೆಯ ಅಡಿಪಾಯದ ಮೇಲೆ ಸಾಮಾಜಿಕ ವ್ಯವಸ್ಥೆಗಳ ರಚನೆಯಾಗುವುದೆಂದು ಮಾಕ್ರ್ಸ್‌ ನಂಬಿದ್ದರೆ, ಇದಕ್ಕೆ ವಿರುದ್ಧವಾದ ಕಲ್ಪನೆ ಐತಿಹಾಸಿಕ ಪಂಥೀಯರದು.

ಆಧುನಿಕ ಪಂಥ

ಬದಲಾಯಿಸಿ

ಆಧುನಿಕ ಐತಿಹಾಸಿಕ ಪಂಥದ ಅರ್ಥಶಾಸ್ತ್ರಜ್ಞರು ಹಳೆಯ ಪಂಥದವರು ಬಿಟ್ಟಲ್ಲಿಂದ ಮುನ್ನಡೆದರು. ವಿಶ್ವದ ಐತಿಹಾಸಿಕ ಆರ್ಥಿಕ ಅಭಿವೃದ್ಧಿಯತ್ತ ಹಳೆಯ ಪಂಥದವರು ದೃಷ್ಟಿ ಹಾಯಿಸಿದರೆ ಹೊಸ ಪಂಥದವರು ವಿಶಿಷ್ಟ ಕ್ಷೇತ್ರಗಳ ಅಭ್ಯಾಸಕ್ಕೆ ಈ ದೃಷ್ಟಿಯನ್ನು ಅನ್ವಯಿಸಲು ಯತ್ನಿಸಿದರು. ಗಸ್ಟಾಫ್ ಷ್ಮಾಲರ್ (1838-1917) ಹೊಸ ಪಂಥದ ಸ್ಥಾಪಕ. ಇಂಗ್ಲೆಂಡ್, ಫ್ರಾನ್ಸ್‌, ಇಟಲಿ, ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲೂ ಇದು ಪ್ರಚಾರವಾಯಿತು. ಐತಿಹಾಸಿಕ ಅನುಗಮನ-ನಿಗಮನ, ವಿಶಿಷ್ಟದೃಷ್ಟಿ-ಸಾಧಾರಣೀಕರಣ, ವಿವರಣೆ, ಸಮಾಜನೀತಿ, ಕಾರ್ಮಿಕ ಸಮಸ್ಯೆ ಮುಂತಾದ ವಿಚಾರಗಳಲ್ಲಿ ಇತಿಹಾಸ ಪಂಥದವರು ಹೆಚ್ಚು ಆಸಕ್ತಿ ವಹಿಸಿದರು. 19ನೆಯ ಶತಮಾನ ಮುಕ್ತಾಯವಾಗುವ ವೇಳೆಗೆ ಜರ್ಮನಿಯ ಸಾಂಬಾರ್ಟ್, ಮ್ಯಾಕ್ಸ್‌ ವೆಬರ್ ಮುಂತಾದವರು ಈ ನಿಟ್ಟಿನಲ್ಲಿ ಹೆಚ್ಚಿನ ವಿಚಾರ ಹರಿಸಿದರು.

ಐತಿಹಾಸಿಕ ಪಂಥದಿಂದ ಪ್ರಭಾವಿತರಾದ ಅಮೆರಿಕನ್ ಅರ್ಥಶಾಸ್ತ್ರಜ್ಞರು ಅನೇಕ ಮಂದಿ. 1920ರ ದಶಕದಲ್ಲಿ ಜೆ.ಆರ್.ಕಾಮನ್ಸ್‌, ಆರ್.ಜಿ.ಟಗ್ವೆಲ್, ಎ.ಬಿ.ವುಲ್ಫ್‌, ಸಿ.ಇ.ಏರ್ಸ್‌, ಡಬ್ಲ್ಯು. ಎಚ್.ಹ್ಯಾಮಿಲ್ಟನ್, ಎ.ಎಂ. ಕೋಪಲ್ಯಾಂಡ್, ಡಬ್ಲ್ಯು.ಇ. ಆಟ್ಕಿನ್ಸ್‌ ಮುಂತಾದವರು ಅಮೆರಿಕನ್ ಬೋಧನ ಸಂಶೋಧನ ವಿಧಾನವೊಂದರ ಪ್ರತಿಪಾದಕರು. ಬ್ರಿಟಿಷ್ ನವ ಅಭಿಜಾತ ಪಂಥದ ಅಮೂರ್ತ ಸಿದ್ಧಾಂತ ದೃಷ್ಟಿಯನ್ನೆ ಬಿಟ್ಟುಕೊಡಲು ಹವಣಿಸಿದವರು ಇವರು. ಸಾಮಾಜಿಕ-ಮಾನಸಿಕ ಮತ್ತು ಸಾಮಾಜಿಕ-ನೈತಿಕ ದೃಷ್ಟಿಯಲ್ಲಿ ಆರ್ಥಿಕ ವರ್ತನೆಯ ನಿರೀಕ್ಷಣೆಗೆ ಇವರು ನೀಡಿದ ಪ್ರಾಶಸ್ತ್ಯ ಹೆಚ್ಚಿನದು. ಆರ್ಥಿಕ ಮಾನವನೆಂಬ ಮಿಥ್ಯೆಯ ಗುಳ್ಳೆಯನ್ನು ಇವರು ಒಡೆಯಲೆತ್ನಿಸಿದರು. ಮಾನವನ ಚರ್ಯೆಯ ಹಿಂದೆ ಸುಖದೃಷ್ಟಿಯೇ ಪ್ರಧಾನವೆಂಬ ವಾದವೂ ಇವರಿಂದ ಗೇಲಿಗೆ ಒಳಗಾಯಿತು. ಮಾನವನ ವರ್ತನೆ, ಅವನ ಅಗತ್ಯಗಳು, ಬಂiÀÄಕೆಗಳು, ಆತನ ಸಾಧನೋಪಾಯಗಳು-ಇವೆಲ್ಲ ಅತ್ಯಂತ ಜಟಿಲವೂ ಸರ್ವದಾ ಪರಿವರ್ತನಶೀಲವೂ ಆದ ವಿಕಾಸದ ಪರಿಣಾಮಗಳು. ವಿಶಿಷ್ಟ ಸಾಮಾಜಿಕ ಸಂಸ್ಥೆ ಸಂಪ್ರದಾಯಗಳಿಂದ ಈ ವಿಕಾಸ ರೂಪುಗೊಳ್ಳುತ್ತದೆಯಾದ್ದರಿಂದ ಇದು ಒಂದು ದೃಷ್ಟಿಯಲ್ಲಿ ಸಾಂಸ್ಥಿಕವಾದದ್ದು (ಇನ್ಸ್‌ಟಿಟ್ಯೂಷನಲ್). ಆರ್ಥಿಕ ಸಂಸ್ಥೆಗಳ ವಿಕಾಸ ಮಾರ್ಗದಲ್ಲಿ ಅವು ಅನುಭವಿಸುವ ಪರಿವರ್ತನೆಗಳ, ಮಾನವರ ಆರ್ಥಿಕ ವರ್ತನೆಯ ಹಿಂದಿನ ಮನೋವೈಚಿತ್ರ್ಯಗಳ ಆಮೂಲಾಗ್ರ ಅಭ್ಯಾಸದಿಂದ ಮಾತ್ರವೇ ಆರ್ಥಿಕ ಸಂಬಂಧಗಳ ನಿಜ ಸ್ವರೂಪವನ್ನರ್ಥಮಾಡಿಕೊಳ್ಳುವುದು ಸಾಧ್ಯ. ಅರ್ಥವ್ಯವಸ್ಥೆಯ ಚಲನಾತ್ಮಕ ಸ್ವಭಾವದ ಅವಲೋಕನವೇ ಸಂಸ್ಥಾವಾದಿಗಳ (ಇನ್ಸ್‌ಟಿಟ್ಯೂಷನಲಿಸ್ಟ್‌್ಸ) ದೃಷ್ಟಿಯಲ್ಲಿ ಪ್ರಧಾನ. ಜರ್ಮನ್ ಐತಿಹಾಸಿಕ ಪಂಥದ ಮೂಲ ಭಾವನೆಗಳನ್ನೆ ಅಮೆರಿಕನ್ ಸಂಸ್ಥಾವಾದವೂ ಹೋಲುವುದೆಂಬುದು ಗಮನಿಸಬೇಕಾದ ಅಂಶ. ಜರ್ಮನ್ ಇತಿಹಾಸ ಪಂಥದವರಂತೆ ಸಂಸ್ಥಾವಾದಿಗಳು ಕೂಡ ಅರ್ಥನೀತಿಯ ಗುರಿಗಳನ್ನು ನಿರ್ದೇಶಿಸುವಾಗ ಈ ಗುರಿಗಳಿಂದ ಜನತೆಯ ಮೇಲಾಗುವ ಮಾನಸಿಕ ಪರಿಣಾಮಗಳನ್ನೂ ಸಾಮಾಜಿಕ-ನೈತಿಕ ಪ್ರಭಾವಗಳನ್ನೂ ಗಮನಿಸಬೇಕೆಂದು ಹೇಳಿದರು.

ಸಂಸ್ಥಾವಾದಿಗಳ ಈ ಮೌಲ್ಯನಿರೀಕ್ಷಣವಾದವನ್ನು ಹ್ಯಾಡ್ಲೆ, ಸೆಲಿಗ್ಮನ್, ಮೇಯೊ-ಸ್ಮಿತ್ ಮೊದಲಾದ ಅನೇಕರು ಒಪ್ಪಲಿಲ್ಲ.

ಈ ಎಲ್ಲ ವಾದ-ಪ್ರತಿವಾದಗಳಿಂದ ಅರ್ಥನೀತಿಯ ಮೇಲೆ ಪರಿಣಾಮಗಳಾದುವು. ನಿರಪೇಕ್ಷ ಆರ್ಥಿಕ ಸ್ವಾತಂತ್ರ್ಯದ ಅಮೂರ್ತ ಸಿದ್ಧಾಂತಗಳನ್ನು ಬದಿಗೊತ್ತಿ, ಆರ್ಥಿಕ ಸಂಸ್ಥೆಗಳ ವಾಸ್ತವಿಕ ಬೆಳೆವಣಿಗೆಗಳಿಗೂ ವ್ಯಕ್ತಿಗಳ ಮತ್ತು ಸಾಮಾಜಿಕ-ಆರ್ಥಿಕ ಗುಂಪುಗಳ ವರ್ತನೆಗೂ ಹೆಚ್ಚಿನ ಪ್ರಾಧಾನ್ಯ ನೀಡಬೇಕೆಂಬುದು ಸಂಸ್ಥಾವಾದಿಗಳ ತರ್ಕಸಾರ. ಅಗತ್ಯವೆಂದು ಕಂಡುಬಂದರೆ ಸರ್ಕಾರಿ ಆರ್ಥಿಕ ಯೋಜನೆ, ನಿಯಂತ್ರಣ ಇವನ್ನು ಸ್ವಾಗತಿಸಬೇಕೆಂದೂ ಇವರು ವಾದಿಸಿದರು. ಸಾಮಾಜಿಕ-ನೈತಿಕ ಕಲ್ಯಾಣ ಸಾಧಿಸುವುದು ಮುಖ್ಯವೆಂಬುದು ಇವರ ಮತವಾಗಿತ್ತು.

ಅಮೂರ್ತ ಸಿದ್ಧಾಂತ, ಅನುಭವವೇದ್ಯ ವಿಚಾರ, ಅಂಕಿ-ಅಂಶಗಳ ಅಧ್ಯಯನ, ಗಣಿತಶಾಸ್ತ್ರ-ಇತಿಹಾಸ ದೃಷ್ಟಿಗಳ ಅನ್ವಯ-ಇವೆಲ್ಲವನ್ನೂ ಒಳಗೊಂಡ ಸಮಗ್ರ ಅರ್ಥಶಾಸ್ತ್ರ ಈಗತಾನೇ ಮೈತಳೆಯುತ್ತಿದೆಯೆನ್ನಬಹುದು. ಸಮಾಜ ಜೀವನದ ಸಮಗ್ರದೃಷ್ಟಿಯನ್ನು ಪ್ರತಿಪಾದಿಸಿ, ನಾನಾ ಸಾಮಾಜಿಕ ವರ್ತನೆಗಳು ಪರಸ್ಪರ ಪುರಕವೆಂಬ ವಿಚಾರಕ್ಕೆ ಪ್ರಚೋದನೆ ನೀಡಿದ್ದೇ ಐತಿಹಾಸಿಕ ಪಂಥದ ನಿಜವಾದ ಸಾಧನೆ. (ಕೆ.ಡಿ.)