ಐತಿಹಾಸಿಕ ಕಾದಂಬರಿ

ಐತಿಹಾಸಿಕ ಕಾದಂಬರಿ: ಇತಿಹಾಸದ (ಚರಿತ್ರೆ) ವಸ್ತುವನ್ನಾರಿಸಿಕೊಂಡು ರಚಿಸಿದ ಕಾದಂಬರಿ (ಹಿಸ್ಟಾರಿಕಲ್ ನಾವೆಲ್). ಹಿಂದೆ ಆಗಿಹೋದ ಸಂಗತಿಗಳನ್ನು ಹೆಚ್ಚಿಸದೆ ಕುಗ್ಗಿಸದೆ ಯಥಾವತ್ತಾಗಿ ನಿರೂಪಿಸುವ ಲೇಖನವೇ ಇತಿಹಾಸ. ಮುಖ್ಯವಾಗಿ ಅದು ನಡೆದ ನಿಜಾಂಶದ ಪ್ರಾಮಾಣಿಕ ವರದಿ. ಅದರಲ್ಲಿ ಇತಿಹಾಸಕಾರನ ವೈಯಕ್ತಿಕ ಅಭಿಮತಕ್ಕಾಗಲಿ ಸ್ವಂತ ಕಲ್ಪನೆಗಾಗಲಿ ಆಸ್ಪದ ದೊರಕದು. ಕಾದಂಬರಿಯಾದರೋ ಸಾಹಿತಿ ತಾನೇ ನಿರ್ಮಾಣಗೈಯುವ ಕಥನಸಾಹಿತ್ಯ. ಮನುಷ್ಯರನ್ನೂ ಅವರ ಹಿನ್ನೆಲೆಯನ್ನೂ ತಸ್ವೀರು ತೆಗೆಯುವಂತೆ ಪ್ರತಿಚಿತ್ರಿಸುವ ಹೆಬ್ಬಯಕೆಯ ದೃಢನಿಷ್ಠುರ ವಾಸ್ತವಿಕ ಕಾದಂಬರಿಯಲ್ಲೂ ಅಂಶಗಳ ಆಯ್ಕೆ, ಬದಲಾವಣೆ, ಅಷ್ಟಿಷ್ಟು ಜರುಗುವುದರಿಂದ ಕೃತಿಕಾರನ ಕೈವಾಡ ಕಂಡೇ ಕಾಣುತ್ತದೆ. ಹಾಗಾದರೆ ಇತಿಹಾಸದ ಹೊಣೆಗಾರಿಕೆಯನ್ನೂ ಕಾದಂಬರಿಯ ಹೊಣೆಗಾರಿಕೆಯನ್ನೂ ಒಂದೇ ಕೃತಿಯಲ್ಲಿ ನೆರವೇರಿಸಿ ಗೆಲ್ಲುವುದೆಂತು? ಬಂಧನ, ಸ್ವಾತಂತ್ರ್ಯ ಎರಡನ್ನೂ ಒಟ್ಟಿಗೇ ಸಾಧಿಸಿ ನಿಲ್ಲುವುದೆಂತು? ಅದೇ ಐತಿಹಾಸಿಕ ಕಾದಂಬರಿಯ ಪ್ರಧಾನ ಸಮಸ್ಯೆ, ಅಚ್ಚರಿ, ಸೊಬಗು, ಆನಂದ.

ಐತಿಹಾಸಿಕ ಕಾದಂಬರಿಸಂಪಾದಿಸಿ

ಬಿಡಿಸುವುದಕ್ಕೆ ಕಷ್ಟಕರವಾದರೂ ಬಿಡಿಸಲೇ ಆಗದ ಪ್ರಶ್ನೆಯಲ್ಲ, ಈ ಯಥಾರ್ಥತೆ ಕಲ್ಪನೆಗಳ ಸಮರಸ ಮಿಳಿತ. ಅತ್ಯುತ್ತಮ ಐತಿಹಾಸಿಕ ಕಾದಂಬರಿಗಳು ಕೆಲವಾದರೂ ಹುಟ್ಟಿಬಂದಿವೆ. ಮೊದಲನೆಯದಾಗಿ, ಸಾಹಿತಿಯ ವಿಭಾವನಾಶಕ್ತಿ (ಇಮ್ಯಾಜಿನೇಷನ್) ಸ್ಮೃತಿಶಕ್ತಿಯಾಗಿಯೂ (ಮೆಮೊರಿ) ಸೃಷ್ಟಿಶಕ್ತಿಯಾಗಿಯೂ (ಕ್ರಿಯೇಷನ್) ಅವಿರೋಧ ಹೊಂದಾಣಿಕೆಯಿಂದ ಕೆಲಸಮಾಡಬಲ್ಲುದು. ಟಾಲ್ಸ್ಟಾಯ್ ಮಹಾಶಯನ ವಾರ್ ಅಂಡ್ ಪೀಸ್ ಎಂಬ ಮೇರುಕಾದಂಬರಿಯಲ್ಲಿ ರಷ್ಯದ ಮೇಲೆ ನೆಪೋಲಿಯನ್ ಹೂಡಿದ ದಂಡಯಾತ್ರೆಯ ನೂರಾರು ವಿವರಗಳೂ ಆ ಕಾಲದಲ್ಲಿದ್ದು ಬದುಕು ಸಾಗಿಸಿದವೆನ್ನಲಾದ ಕೆಲವು ಕುಟುಂಬಗಳ ಕಾಲ್ಪನಿಕ ವ್ಯಕ್ತಿಚಿತ್ರಣವೂ ಅಚ್ಚುಕಟ್ಟಾಗಿ ಸುರಮ್ಯವಾಗಿ ಕೂಡಿಕೊಂಡಿವೆ. ಹೆನ್ರಿ ಎಸ್ಮಂಡ್ ಕಾದಂಬರಿಯಲ್ಲಿ ಥ್ಯಾಕರೆ ತನ್ನ ಹಿಂದಣ ಶತಮಾನದ ರಾಜಕೀಯ ಆಗುಹೋಗನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಶ್ರೀಮಂತ ಸಂಸಾರದ ಸುಖದುಃಖಕ್ಕೆ ಜೀವಂತ ಕಳೆಕೊಟ್ಟಿದ್ದಾನೆ. ಎರಡನೆಯದಾಗಿ, ಚರಿತ್ರೆಯ ಹಲವು ಘಟನಾವಳಿಗಳಿಗೆ ಸಮಂಜಸ ಪ್ರಾರಂಭ, ಮಧ್ಯ, ಮುಕ್ತಾಯಗಳಿದ್ದು ಮಾರ್ಪಾಟು ಕೇಳದೆ ಸಾಹಿತ್ಯ, ಕಥೆಗಳಾಗುವ ಗುಣವುಂಟು. ಹೀಗಾಯ್ತು ಎಂಬುದು ಚರಿತ್ರೆಯ ಗುರಿ; ಹೀಗಾಗಬಹುದು ಎಂಬುದು ಸಾಹಿತ್ಯದ ಗುರಿ. ಎರಡೂ ವಿಭಿನ್ನವಾದರೂ ಕೆಲವೊಮ್ಮೆ ಹಾಗಾಗಬಹುದು ಎಂಬಂತೆಯೇ ಹಾಗಾದದ್ದು ಮನವೊಪ್ಪಿರುತ್ತದೆ. ಚರಿತ್ರೆಯ ಯಥಾರ್ಥ ಸತ್ಯವೇ ಸಾಹಿತ್ಯದ ವಿಭಾವನಾ ಸತ್ಯದ ರೂಪವನ್ನು ತಳೆಯುತ್ತದೆ.[೧]

ಭೂತಕಾಲಸಂಪಾದಿಸಿ

ಭೂತಕಾಲದ ಯಾವುದೇ ಶತಮಾನವಾಗಲಿ ಅದನ್ನು ಐತಿಹಾಸಿಕ ಕಾದಂಬರಿಕಾರ ತನ್ನ ಕಥೆಗೆ ಅಳವಡಿಸಿಕೊಳ್ಳಬಹುದು; ಎಂದರೆ ಅದರಲ್ಲೇ ತಾನು ಜೀವಿಸುತ್ತಿರುವೆನೆಂಬ ಭಾವನೆಯೂ ಆ ಸಮಯದ ಸಮಾಜವೇ ತನ್ನದು, ಆ ಜನರೇ ತನ್ನ ನೆರೆಹೊರೆ, ಗುರುತುಪರಿಚಯ ಎಂಬ ತನ್ಮಯತೆಯೂ ಅವನಿಗೆ ಅತ್ಯಾವಶ್ಯಕ. ಅಳಿದುಹೋಗಿರುವ ಸ್ಥಿತಿಗತಿ, ವ್ಯವಹಾರ, ವಾತಾವರಣಗಳಿಗೆ ಅವ ನು ಒಂದು ವಿಧದ ಪರಕಾಯಪ್ರವೇಶ ನಡೆಸಬೇಕು. ಬೆನ್ನಿಗಂಟಿದ ಭೂತದಂತಿರುವ ಸಮಕಾಲೀನತೆಯನ್ನು ಪುರ್ತಿಯಾಗಿ ಉಚ್ಚಾಟನೆ ಮಾಡಬೇಕು. ಇಲ್ಲದಿದ್ದರೆ ಸತ್ಯಕ್ಕೆ ಘಾಸಿ ಬರಬಹುದು. ನಂಬಿಕೆ, ನಡೆವಳಿಕೆ, ಸಂಕಲ್ಪ, ಸಾಧನೆಗಳಲ್ಲಿ ದೇಶದೇಶಕ್ಕೆ ವ್ಯತ್ಯಾಸ; ಅವಧಿ ಅವಧಿಗೆ ವ್ಯತ್ಯಾಸ. ಕಲಬೆರಕೆ ಮಾಡಿ ಕೆಡಿಸಿದ್ದಾನೆಂಬ ಆಪಾದನೆ ತಟ್ಟದಂತೆ ಬಲು ಎಚ್ಚರದಿಂದ ಇರಬೇಕಾಗುತ್ತದೆ, ಐತಿಹಾಸಿಕ ಕಾದಂಬರಿಕಾರ. ಬಿಲ್ಲುಬಾಣ ಕತ್ತಿ ಭರ್ಜಿಗಳೇ ಆಯುಧವಾಗಿದ್ದ ಘಟ್ಟವನ್ನು ಚಿತ್ರಿಸುತ್ತ ಬಂದೂಕು ಬಾಂಬುಗಳ ಮಾತನ್ನು ಎತ್ತದೇ ಸಾಗುವುದು ಸುಲಭ. ಸ್ತ್ರೀಸ್ವಾತಂತ್ರ್ಯ, ಧಣಿಯೂ ಮನುಷ್ಯ ಜೀತದಾಳೂ ಮನುಷ್ಯ ಎಂಬ ಬುದ್ಧಿ, ದೇಶಭಕ್ತಿ ಬೇರೆ ರಾಜ ಭಕ್ತಿ ಬೇರೆ ಎಂಬ ತತ್ತ್ವ- ಮೊದಲಾದ ಆಧುನಿಕ ಧೋರಣೆಗಳನ್ನು ಮಧ್ಯಯುಗಕ್ಕೊ ಪ್ರಾಚೀನಕಾಲಕ್ಕೊ ಕಿಂಚಿತ್ತೂ ಅನ್ವಯಿಸದೆ ಇರುವುದು ಅಷ್ಟೊಂದು ಸುಲಭವಲ್ಲ. ಅಲ್ಲೊಂದು ಇಲ್ಲೊಂದು ಪ್ರಾಸಂಗಿಕ ವಾಕ್ಯ, ಅದೊಂದು ಇದೊಂದು ಸಣ್ಣಪುಟ್ಟ ಕಾರ್ಯ-ಇಂಥ ಅಮುಖ್ಯ ವಿಚಾರದಲ್ಲಿ ಮಿಶ್ರಣವಾದರೆ ಅದೇನೂ ದೊಡ್ಡ ದೋಷವಲ್ಲ; ಕಾದಂಬರಿಯ ಹರವು ವಿಶಾಲ. ಕಂಬಳಿಯಲ್ಲಿ ಬೆರತಿರುವ ಪಕರಿ ನೂಲಿನ ಎಳೆಗಳನ್ನು ಎಣಿಸುವವರಾರು? ಅಂಥ ಎಷ್ಟು ಹಿಂದಿನದನ್ನು ಎಟುಕಿಸಿಕೊಳ್ಳಬಹುದೋ ಅಷ್ಟೇ ಹಿಂದಕ್ಕೆ ಕಾದಂಬರಿಕಾರ ಕೈ ನೀಡಿದರೆ ಲೇಸು. ಗೌತಮಬುದ್ಧನ ವಿಷಯವಾಗಿ ಕಾದಂಬರಿ ಬರೆಯಲು ಯಾವ ಸಾಹಿತಿಗೆ ತಾನೇ ಅಭಿಲಾಷೆಯಿಲ್ಲ? ಆದರೆ ಬರೆಯಬಲ್ಲ ಸಮರ್ಥರು ಎಷ್ಟು ಮಂದಿ?[೨]

ವಿನಾ ಸಾಹಿತ್ಯಸಂಪಾದಿಸಿ

ಸಮಯ, ಸನ್ನಿವೇಶದ ವರ್ಣನೆಗೆ ಹೆಚ್ಚು ಜಾಗವನ್ನಿತ್ತು ಪಾತ್ರವರ್ಗದ ಕೆತ್ತನೆಗೆ ಕಡಿಮೆ ಲಕ್ಷ್ಯ ನೀಡಿದರೆ ಚರಿತ್ರೆಗೇನೂ ಊನವಿಲ್ಲ; ಆದರೆ ಕಾದಂಬರಿ ಹಾಗೆ ಮಾಡಿದರೆ ಅದು ಚರಿತ್ರೆಯ ನಕಲಾಗುತ್ತದೆಯೇ ವಿನಾ ಸಾಹಿತ್ಯವಾಗಿ ಪರಿಗಣಿತವಾಗಲಾರದು. ಕಾರ್ಲೈಲನ ಅಭಿಪ್ರಾಯದಂತೆ ಚರಿತ್ರೆಯೂ ಪ್ರಬಲ ವ್ಯಕ್ತಿಗಳ ಆಳ್ತನದ ನಿರೂಪಣೆ. ಎಂದಮೇಲೆ ಅಪ್ಪಟ ಗದ್ಯಸಾಹಿತ್ಯವಾದ ಕಾದಂಬರಿಯಲ್ಲಿ ಪಾತ್ರಗಳಿಗೇ ಪ್ರಾಧಾನ್ಯವಲ್ಲವೇ? ಐತಿಹಾಸಿಕ ಕಾದಂಬರಿಯ ಜನಕನೆಂಬ ಹೆಸರನ್ನು ಪಡೆದ ಸರ್ ವಾಲ್ಟರ್ ಸ್ಕಾಟ್ ಪಾತ್ರವರ್ಗದ ವಿಷಯದಲ್ಲಿ ಒಂದು ನಿಯಮವನ್ನು ತನ್ನ ಅನುಷ್ಠಾನಕ್ಕೆ ವಿಧಿಸಿಕೊಂಡಂತೆ ಕಾಣುತ್ತದೆ. ನಾಯಕಸ್ಥಾನವನ್ನು ದೊರೆ, ದಂಡಾಧೀಶ ಇತ್ಯಾದಿ ಪ್ರಖ್ಯಾತರಿಗೆ ಕೊಡಕೂಡದು; ಸಾಹಸಿಗಳಾದರೂ ಸಾಮಾಜಿಕ ಹಂತಗಳಲ್ಲಿ ಕೊಂಚ ಕೆಳಗಿನವರಿಗೆ ಕೊಡತಕ್ಕದ್ದು. ಇದೇ ಆ ಸೂತ್ರ. ಐತಿಹಾಸಿಕ ಕಾದಂಬರಿಕಾರರೆಲ್ಲರೂ ಸರಿಸುಮಾರಾಗಿ ಸ್ಕಾಟನ ಪದ್ಧತಿಯನ್ನೇ ಹಿಂಬಾಲಿಸಿದ್ದಾರೆ. ಹಾಗೆ ನಿಯಂತ್ರಿಸುವುದರಿಂದ ಕೃತಿಕಾರನಿಗೆ ಯಥೋಚಿತವಾಗಿ ಕಲ್ಪನೆಮಾಡುವ ಧಾರಾಳ ಲಭಿಸುತ್ತದೆ. ಸ್ಕಾಟನ ಕ್ವೆಂಟಿನ್ ಡರ್ವರ್ಡ್ ಕಥೆಯಲ್ಲಿನ ಕಥಾನಾಯಕ ಒಬ್ಬ ಆಗಂತುಕ ತರುಣ ಯೋಧ. ಅರಸ ಲೂಯಿ ಮತ್ತು ಪ್ರಾಂತಾಧೀಶ ಬರ್ಗಂಡಿ-ಇವರ ಹೋರಾಟ ಹಿನ್ನೆಲೆಯ ಕಥಾವಸ್ತು. ಹಾಗೆಯೇ ಅಲೆಕ್ಸಾಂಡರ್ ಡ್ಯೂಮಾನ ದಿ ತ್ರಿ ಮಸ್ಕೆಟಿಯರ್ಸ್ ಎಂಬ ಕಥೆಯಲ್ಲಿ ಆಥೊ, ಪೋರ್ತೊ ಮೊದಲಾದ ನಾಲ್ವರು ಅಸದೃಶ ವೀರಭಟರೇ ಕಥಾನಾಯಕರು. ರಾಜ, ರಾಣಿ, ಪ್ರಧಾನಿಗಳ ಸೆಣಸಾಟ ಹಿನ್ನೆಲೆಯ ಕಥಾವಸ್ತು.

ಸ್ಕಾಟ್ ಮತ್ತು ಡ್ಯೂಮಾರ ರಚನೆಸಂಪಾದಿಸಿ

ಸ್ಕಾಟ್ ಮತ್ತು ಡ್ಯೂಮಾರ ರಚನೆಗಳು ದಿಟವಾಗಿ ಐತಿಹಾಸಿಕ ಕಾದಂಬರಿಗಳಲ್ಲ, ಇತಿಹಾಸದ ಛಾಯೆಯನ್ನು ಹೊತ್ತ ಸಾಹಸಕಥೆಗಳು, ಅಚ್ಚರಿ ಕಥೆಗಳು (ರೊಮಾನ್ಸಸ್)-ಎಂಬ ಆಕ್ಷೇಪಣೆಯಿದೆ. ಅದು ಸ್ವಲ್ಪಮಟ್ಟಿಗೆ ಸರಿ. ಐತಿಹಾಸಿಕತೆ ಡ್ಯೂಮಾಗಿಂತ ಸ್ಕಾಟನಲ್ಲಿ ಅಧಿಕ. ಆದರೂ ಇಬ್ಬರೂ ರೊಮ್ಯಾಂಟಿಕ್ ಯುಗದ ಸಾಹಿತಿಗಳು. ರೋಮಾಂಚಗೊಳಿಸುವ ಧೀರ ಕೃತ್ಯಗಳ ಕಡೆಗೇ ಅವರ ಒಲವು. ಹದಿನೆಂಟನೆಯ ಶತಮಾನದ ಕೊನೆ ಭಾಗದಲ್ಲಿ ಅಮಾನುಷ ವಿದ್ಯಮಾನಗಳೂ ಇತರ ವೈಪರೀತ್ಯಗಳೂ ನಿಬಿಡವಾದ ಕಟ್ಟುಕಥೆಗಳನ್ನು ಚಾರಿತ್ರಿಕವೆಂದು ಪ್ರಕಟಿಸುವ ವ್ಯಾಪಾರವಿತ್ತು. ಅಂಥ ವಿಕೃತಿಗಳ ವಿಕಾರವನ್ನು ತೊಡೆದುಹಾಕಿ ನಿಜವಾಗಿ ಚಾರಿತ್ರಿಕವೆನಿಸಿಕೊಳ್ಳಬಲ್ಲ ಕಾದಂಬರಿಯನ್ನು ಹೊರತಂದ ಕೀರ್ತಿ ಸ್ಕಾಟನದು. ಯುರೋಪಿನ ಮಧ್ಯಯುಗದ ಬಾಹ್ಯಲಕ್ಷಣಗಳನ್ನು ಬಣ್ಣಿಸುವಾಗ ಆತ ಏನೇ ತಪ್ಪು ಮಾಡಿದರೂ ಅದರ ಆಂತರ್ಯವನ್ನು ಚೆನ್ನಾಗಿ ಪ್ರತಿಬಿಂಬಿಸಿದ. ಅವನ ವಿಧಾನದ ಕಾದಂಬರಿಯನ್ನು ಐತಿಹಾಸಿಕ ಸಾಹಸದ ಕಥೆ, ಅಚ್ಚರಿ ಕಥೆಯೆಂದು (ಹಿಸ್ಟಾರಿಕಲ್ ರೊಮಾನ್ಸ್‌) ಕರೆದಿದ್ದಾರೆ. ಹಾಗೆ ಕರೆದರೆ ಅನ್ಯಾಯವಲ್ಲ.

ಐತಿಹಾಸಿಕ ಕಾದಂಬರಿಯ ವಿಮರ್ಶೆಸಂಪಾದಿಸಿ

ಐತಿಹಾಸಿಕ ಕಾದಂಬರಿಯ ವಿಮರ್ಶೆಯಲ್ಲಿ ಅದರಲ್ಲಿರುವ ನಿರ್ದುಷ್ಟ ಚಾರಿತ್ರಿಕಾಂಶ ಎಷ್ಟು, ಖಚಿತ ಕವಿಕಲ್ಪನಾಂಶ ಎಷ್ಟು ಎಂಬ ತಾರತಮ್ಯ ವೀಕ್ಷಣೆ ಅತ್ಯಂತ ಮುಖ್ಯ. ಕನ್ನಡದಲ್ಲಿ ಬಂದಿರುವ ರಾಜಪುತ್ರರನ್ನು ಕುರಿತ ಕಥೆಗಳನ್ನೂ ಶಿವಾಜಿ, ಶಾಂತಲ, ಟಿಪ್ಪುಸುಲ್ತಾನ್, ಚನ್ನಬಸವನಾಯಕ ಮುಂತಾದವರ ಕಥೆಗಳನ್ನೂ ಈ ದೃಷ್ಟಿಯಿಂದ ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕು. ಐತಿಹಾಸಿಕ ಕಾದಂಬರಿಕಾರ ಸುತ್ತುನೋಟ ನೋಡುತ್ತ ಹಿಂದಣ ಕೆಲವು ತಲೆಮಾರುಗಳ ದೃಶ್ಯಪರಂಪರೆಯನ್ನು ಓದುಗರ ಮುಂದೆ ಇಡಬಹುದು. ಅಂಥ ವಿರಚನೆಗೆ ಕಾಲದ ಒಂದು ಅವಧಿಯ ಕಾದಂಬರಿಯೆಂದು ಹೆಸರು ಅಥವಾ ಒಬ್ಬ ವ್ಯಕ್ತ್ತಿಯನ್ನು ಕೇಂದ್ರದಲ್ಲಿಟ್ಟು ಅವನಿಗೆ ಸಂಬಂಧಿಸಿದ ಘಟನಾವಳಿಗಳನ್ನು ಮಾತ್ರ ನಾಟಕೀಯವಾಗಿ ವಿವರಿಸುತ್ತ ಕಥೆ ಹೇಳಬಹುದು. ಇಂಥ ಕೃತಿ ಉತ್ಪ್ರೇಕ್ಷೆಯನ್ನು ಒಳಗೊಂಡು ಅಚ್ಚರಿ ಕಥೆಯಾಗಿ ಬಿಡುವ ಸಂಭವವುಂಟು ಅಥವಾ ಅವಧಿಯೂ ವ್ಯಕ್ತಿಗಳೂ ಸಮಪ್ರಮಾಣದಲ್ಲಿ ಯುಕ್ತರೀತಿಯಿಂದ ಸೇರಿಕೊಂಡು ಅದು ಹೆಚ್ಚೊ ಇವರು ಹೆಚ್ಚೊ ಎಂಬ ಸಂದೇಹ ಏಳದಂತೆ ಸುಂದರ ಸಾಹಿತ್ಯಮಾರ್ಗವನ್ನು ಕೃತಿಕಾರ ತುಳಿಯಬಹುದು. ಇದೇ ಐತಿಹಾಸಿಕ ಕಾದಂಬರಿಯ ನೈಜ ಪ್ರಕಾರವೆಂದು ತಜ್ಞರ ಮತ.

ಚರಿತ್ರೆಸಂಪಾದಿಸಿ

ಚರಿತ್ರೆಯಿಂದ ನಮಗೆ ಗತಕಾಲದ ಕೇವಲ ಹೊರಮೈನ ವಿಶದ ಪರಿಚಯವಾಗುತ್ತದೆ-ಎಂಬ ದೂರು ಉಂಟು. ಇದು ಅತಿಯಾದ ಅಭಿಮಾನದಿಂದ ಹೇಳುವ ಮಾತು. ಉತ್ತಮ ಚರಿತ್ರಕಾರನಿಗೆ ಒಳಗಣ್ಣು ಇದ್ದೇ ಇರುತ್ತದೆ. ಆಗುಹೋಗುಗಳ ಆಂತರ್ಯವನ್ನು ಭೇದಿಸಿ ಅಲ್ಲಿ ಹುದುಗಿರುವ ಒಲವು ನಿಲುವು ಉದ್ದೇಶ ಮುಂತಾದ ಮೂಲಾಂಶಗಳನ್ನು ಆತ ಹೊರಕ್ಕೆಳೆಯಬಲ್ಲ. ಆದರೆ ಹಾಗೆ ಮಾಡುವಾಗ ಅವನು ಕೋಚುಪಾಚನ್ನು ತಿದ್ದಲಾಶಿಸುವುದಿಲ್ಲ. ನಿಜತ್ವವೇ ಅವನ ಏಕೈಕ ಗುರಿ. ಐತಿಹಾಸಿಕ ಕಾದಂಬರಿಕಾರ ಓರೆಕೋರೆಗಳು ಬಾಧಿಸದ ಸಂಗತಿಗಳನ್ನು ಆಯ್ದುಕೊಂಡು, ಸ್ವಲ್ಪ ಸೇರಿಸಿ, ಎಲ್ಲವನ್ನೂ ಸರಿಯಾಗಿ ಜೋಡಿಸಿ, ಒಟ್ಟಿನಲ್ಲಿ ಕಥೆ ಸ್ವಾರಸ್ಯಪುರ್ಣವೂ ಆಹ್ಲಾದಕರವೂ ಆಗುವಂತೆ ಮಾಡುತ್ತಾನೆ. ಮೇಲಾಗಿ ಜೀವಂತ ಪಾತ್ರಗಳ ರಸಭರಿತ ನಾಟಕವನ್ನು ಆಡಿಸುತ್ತಾನೆ, ನಮ್ಮ ಮುಂದೆ. [೩]

ಉಲ್ಲೇಖಗಳುಸಂಪಾದಿಸಿ