ಕನ್ನಡದಲ್ಲಿ ಏಳೆ

ಬದಲಾಯಿಸಿ

ಏಳೆಯ ಲಕ್ಷಣ ಮೊದಲು ಬರುವುದು "ಛಂದೋಂಬುಧಿ" ಗ್ರಂಥದಲ್ಲಿ. ಇದರ ಲಕ್ಷಣ ಪದ್ಯ ಹೀಗಿದೆ
ಭುಜಪಕ್ಷ ಪುರಗಣ ವ್ರಜದೊಳಾರರೊಳಕ್ಕು
ಮಜಗಣಮೇಳೆಗಿಭಗತೀ||

  • ಕ್ರಮವಾಗಿ ೨,೨ ಮತ್ತು ೩ಗಣಗಳ ಗುಂಪಿನಲ್ಲಿ ೬ನೇಯದು ಬ್ರಹ್ಮ ಹಾಗೂ ಉಳಿದವೆಲ್ಲ ವಿಷ್ಣುಗಣಗಳಾಗಿರುವುದು ಏಳೆಯ ಲಕ್ಷಣ.ಹಾಗೂ ಈ ಪದ್ಯದ ಸಾರ.

ಈ ಪದ್ಯದಲ್ಲಿ ಹೇಳಿದಂತೆ ಮೊದಲ ಪಾದದಲ್ಲಿ ಎರಡನೇ ವಿಷ್ಣುಗಣದ ನಂತರ ಒಂದು ಯತಿ ಬಂದು ಮೂರನೇ ಗಣದಲ್ಲಿ ಒಳಪ್ರಾಸ ಬರುತ್ತದೆ.
ಜಯಕೀರ್ತಿಯು "ಛಂದೋನುಶಾಸನ"ದಲ್ಲಿ ಹೇಳಿರುವುದು-
ತ್ರಿಪದೀ ತೃತೀಯಾಂಹ್ರಾವಪಮುಞ್ಚತ್ಯೇಲೇತಿ
ಸುಪಠಿತಾ ಗೇಯವಿದಜನೈಃ||

  • "ತ್ರಿಪದಿಯ ೩ನೇ ಪಾದವನ್ನು ಬಿಟ್ಟರೆ ಅದೇ ಏಳೆಯಾಗುತ್ತದೆಯೆಂಬುದಾಗಿ ಗೇಯವಿದರಾದ ಜನರಿಂದ ಹೇಳಲ್ಪಟ್ಟಿದೆ" ಎಂದು ಇದರ ಅರ್ಥ.

ತ್ರಿಪದಿಯ ಮೊದಲ ಸಾಲನ್ನು ಎರಡೆರಡು ಗಣಗಳಿಗೆ ವಿಭಾಗಿಸಿ ಜಯಕೀರ್ತಿ ನಾಲ್ಕು ಸಾಲುಗಳೆಂದು ಪರಿಗಣಿಸಿದ ಕಾರಣ ಅವನ ಪ್ರಕಾರ ೩ನೇ ಸಾಲು
ತ್ರಿಪದಿಯ ಎರಡನೇ ಸಾಲಾಗಿರುತ್ತದೆ. ಅಂದರೆ ತ್ರಿಪದಿಯ ಮೊದಲ ಮತ್ತು ಕೊನೆಯ ಸಾಲುಗಳಿಂದ ಏಳೆಯಾಗುತ್ತದೆ ಎಂದು ಲಕ್ಷಣ.

ಶಾರ್ಙ್ಗದೇವ

ಬದಲಾಯಿಸಿ

ಶಾರ್ಙ್ಗದೇವನ ಸಂಗೀತ ರತ್ನಾಕರದಲ್ಲಿ ಏಳೆಯ ಲಕ್ಷಣವನ್ನು ಹೀಗೆ ಹೇಳಿದ್ದಾನೆ-
"ಪಞ್ಚಕಾಮಾ ರತಿಶ್ಚೈಕಾ ಕಾಮೋಂತೇ ಚರಣ ತ್ರಯೇ"
೫ ಮದನ(ವಿಷ್ಣು ) ಒಂದು ರತಿ(ಬ್ರಹ್ಮ) ಮತ್ತು ಒಂದು ಮದನ(ವಿಷ್ಣು)ಗಣಗಳು ಬರಬೇಕೆಂದು ನಿಯಮ
ಏಳೆ ಎಂಬ ಶಬ್ದ ಸಂಸ್ಕೃತದ ಏಲಾ ಶಬ್ದದ ತದ್ಭವವಾಗಿ ಹುಟ್ಟಿಕೊಂಡಿರುವುದು ನಿಜವಾದರೂ ಕೆಲವೊಂದು ಸಂಸ್ಕೃತ ಲಾಕ್ಷಣಿಕರು ಹೇಳುವ ಏಲಾ ಒಂದು
ಮಾತ್ರಾ ವೃತ್ತವೂ ರತಿಲೇಖಾ ಎಂಬ ಪ್ರಬೇಧಗಳಿರುವುದೂ ಕಂಡುಬರುತ್ತದೆ, ಸೋಮೇಶ್ವರನ ಗ್ರಂಥದ ಈ ಏಲೆಗೂ ಜಯಕೀರ್ತಿನಾಗವರ್ಮರು ಹೇಳುವ
ಏಳೆಗೂ ಯಾವ ಸಂಬಂಧವೂ ಇಲ್ಲದಿರುವುದರಿಂದ "ಕರ್ಣಾಟ ವಿಷಯಜಾತಿ ಸಮುಚ್ಚಯ"ದಲ್ಲಿ ಬರುವ ಏಳೆಯೇ ಕನ್ನಡದಲ್ಲಿ ಬೆಳೆದು ಬಂದಿರುವುದು.
ಒಟ್ಟಾರೆಯಾಗಿ ಲಕ್ಷಣವೆಂದರೆ ೨ಸಾಲಿನ ಪದ್ಯ, ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣುಗಣಗಳು, ೨ನೇ ಗಣದ ಬಳಿಕ ಯತಿ, ೩ನೇ ವಿಷ್ಣುಗಣದಲ್ಲಿ ಒಳಪ್ರಾಸ
ಎರಡನೇ ಸಾಲಿನಲ್ಲಿ ಒಂದು ವಿಷ್ಣು ಒಂದು ಬ್ರಹ್ಮ ಮತ್ತು ಒಂದು ವಿಷ್ಣುಗಣಗಳು ಅನುಕ್ರಮವಾಗಿ ಬರುತ್ತವೆ. ಉದಾಹರಣೆ ಜಾನಪದ ಪದ್ಯ-
ಸುಬ್ಬಿ ಮೈ |ನೆರೆದಾಳ |ಸುಬ್ಬಿಗೇ |ನೊಯ್ಯಾಲೆ|
ಕೊಬ್ಬರಿ| ಕಾರ |ತಿಳಿದುಪ್ಪ ||

ಪ್ರಾಸವನ್ನು ಅಳವಡಿಸದೇ ಬರೆದಿರುವ ಪ್ರಯೋಗಗಳೂ ಇವೆ, ಉದಾಹರಣೆಗೆ-
ಮೂಡಣ ದಿಕ್ಕಿನ ಕತ್ತಲ ಹರಿದ್ಹೋಗಿ
ದಾಳಿಂಬ ಕದವು ಢಣಲೆಂದು||

ವಿಷ್ಣುಗಣದ ಬದಲು ರುದ್ರಗಣ ಪರ್ಯಾಯವಾಗಿ ಬರುವುದೂ ಇದೆ.
ಹಂದರದ| ಜನಕೇಳಿ| ಬಂಧುಬ|ಳಗ ಕೇಳಿ|
ಒಪ್ಪಿ ಮಗ|ಳೆನಗ| ಕೊಡಬೇಕ||

ಬ್ರಹ್ಮ ಸ್ಥಾನದಲ್ಲಿ ವಿಷ್ಣುಗಣ ಬರುವ ಪದ್ಯಗಳೂ ರಚಿಸಲದಪಟ್ಟಿವೆ
ಆರಿಯ| ಹೆಡೆಯಾಗಿ | ಬಾರಿಯ |ಗಣಿಯಾಗಿ|
ಮುತ್ತಿನ | ಹಗ್ಗಕ | ಕಡಗೋಲ||

ಈ ವರೆಗೆ ತಿಳಿದು ಬಂದಂತೆ ಕನ್ನಡದ ಯಾವ ಶಾಸನದಲ್ಲಿಯಾಗಲೀ ಯಾವ ಪ್ರಾಚೀನ ಕಾವ್ಯದಲ್ಲಿಯಾಗಲೀ ಒಂದೂ ಏಳೆ ಪದ್ಯ ದೊರೆತಿಲ್ಲ.
ಜನಪದ ಸಾಹಿತ್ಯದಲ್ಲಿ ಸ್ವಲ್ಪಮಟ್ಟಿಗೆ ಪ್ರಯೋಗ ಕಂಡುಬರುತ್ತದೆ. ಅಲ್ಲಿ ಕೆಲವು ಕಡೆ ಒಂದೊಂದು ಪದ್ಯ ಮುಗಿದ ಹಾಗೇ "ಕೋಲಣ್ಣ ಕೋಲೆ"
ಎಂದೋ ಅಥವಾ ಇನ್ನೇನನ್ನೋ ಹೇಳಿ ಅದೂ ತ್ರಿಪದಿಯ ಸ್ವರೂಪ ಹೊಂದುವುದು ಕಂಡುಬರುತ್ತವೆ.

ಬಿ ಎಂ ಶ್ರೀ

ಬದಲಾಯಿಸಿ

ಗ್ರಾಂಥಿಕ ಸಾಹಿತ್ಯದಲ್ಲಿ ' ಬಿ ಎಂ ಶ್ರೀಕಂಠಯ್ಯನವರು ಮೊದಲು ಏಳೆಗೆ ಪ್ರವೇಶ ದೊರಕಿಸಿಕೊಟ್ಟರು. ಹೊಂಗನಸುಗಳುಕವನ ಸಂಕಲನದ
ಕೊನೆಯಲ್ಲಿ "ಹಾರೈಕೆ" ಎಂಬ ಪದ್ಯ ದಲ್ಲಿ ೧೦ ಏಳೆ ಪದ್ಯಗಳಿವೆ. (೧೯೪೫)
[] ಉದಾ-
ಕನ್ನಡ ನುಡಿಪಯಿರ್ ಮುನ್ನಡೆ ತೆನೆತುಂಬಿ
ಪೊನ್ನಡ ಕಿಲ್ಗಂ ಪೊನ್ನಕ್ಕೆ||

[]ಎಸ್ ವಿ ಪರಮೇಶ್ವರ ಭಟ್ಟರು ಅಧಿಕ ಸಂಖ್ಯೆಯಲ್ಲಿ ಏಳೆ ಪದ್ಯಗಳನ್ನು ರಚಿಸಿದರು. ಅವರ "ತುಂಬೆ ಹೂವು" ಸಂಕಲನದ ಎಲ್ಲಾ ೭೦೦
ಮುಕ್ತಕಗಳು ಏಳೆ ಛಂದಸ್ಸಿನಲ್ಲಿಯೇ ರಚಿತವಾಗಿವೆ.
ಉದಾ-
ಹಂಗು ಹರಿದ ಮೇಲೆ ತೊಂಗೇನು ತೊಡರೇನು
ಸಂಗವ ತೊರೆದ ಮೇಲೇನು||

ಏಳೆಯ ಹಂದರ ತೀರಚಿಕ್ಕದಾದ ಕಾರಣ ಹಾಗೂ ಅದರಲ್ಲಿ ಭಾವವನ್ನು ವ್ಯಕ್ತಪಡಿಸುವುದು ಕಷ್ಟಕರವಾದ ಕಾರಣ ಕಾವ್ಯಗಳಲ್ಲಿ ಪ್ರಯೋಗ
ಮಾಡಿರುವುದೂ ಕಡಿಮೆ. ಅಲ್ಲದೇ ತ್ರಿಪದಿ ಸಾಂಗತ್ಯಾದಿಗಳ ಹರವೂ ಕುಕ್ಷಿಯೂ ಏಳೆಗೆ ಸಮೀಪಸ್ಥವಾಗಿ ವಿಶಾಲವಾಗಿರುವ ಕಾರಣ
ಏಳೆಗಿಂತ ಕವಿಗಳಿಗೆ ಆಸಕ್ತಿ ಅವುಗಳ ಕಡೆಗೆ ಹೊರಳಿರುವುದೂ ದಿಟವಾದದ್ದೇ ಆಗಿದೆ. ಏಳೆಯೇ ತ್ರಿಪದಿ ಸಾಂಗತ್ಯಗಳಿಗೆ ಮೂಲವೋ
ಅಥವಾ ತ್ರಿಪದಿಯಿಂದಲೇ ಏಳೆ ಹುಟ್ಟಿರುವುದೋ ಎಂಬ ವಿಚಾರ ಕೂಡ ಅನಿಶ್ಚಿತವಾಗಿ ಉಳಿದುಕೊಂಡಿದೆ.[]

ಉಲ್ಲೇಖಗಳು

ಬದಲಾಯಿಸಿ

ಉಲ್ಳೇಖ

ಬದಲಾಯಿಸಿ
"https://kn.wikipedia.org/w/index.php?title=ಏಳೆ&oldid=1159498" ಇಂದ ಪಡೆಯಲ್ಪಟ್ಟಿದೆ