ಏಮೀಲ್ ಡರ್ಕ್‍ಹೈಮ್

ಏಮೀಲ್ ಡರ್ಕ್‍ಹೈಮ್ - ಮೊತ್ತಮೊದಲ ಫ್ರೆಂಚ್ ಸಮಾಜಶಾಸ್ತ್ರಜ್ಞ. ಆ ಶಾಸ್ತ್ರದ ಸಂಸ್ಥಾಪಕರಲ್ಲಿ ಒಬ್ಬ. ಸಾಮಾಜಿಕ ಸಿದ್ಧಾಂತಾಧ್ಯಯನಕ್ಕೆ ಹೊಸ ತಿರುವು ಕೊಟ್ಟ ಇಬ್ಬರಲ್ಲಿ ಒಬ್ಬ. (ಮತ್ತೊಬ್ಬ ಮಾಕ್ಸ್ ವೇಬರ್).

ಬದುಕು ಬದಲಾಯಿಸಿ

ಡರ್ಕ್‍ಹೈಮ್ ಇಫಿನಲ್ ಎಂಬ ನಗರದಲ್ಲಿ ರ್ಯಾಬೈ ಕುಟುಂಬವೊಂದರಲ್ಲಿ ಜನಿಸಿದ. ಜಾತ್ಯಾತೀತ ಶಾಲೆಯೊಂದರಲ್ಲಿ ವಿದ್ಯೆ ಕಲಿಯುವುದರ ಜೊತೆಗೆ ಹೀಬ್ರ್ಯೂ ಬೈಬಲ್ಲಿನ ಹಳೆಯ ಒಡಂಬಡಿಕೆ ಮತ್ತು ಯೊಹೂದ್ಯರ ಧರ್ಮಶಾಸ್ತ್ರ ತಾಲ್ಮೂದ್‍ಗಳನ್ನು ಅಧ್ಯಯನಮಾಡಿದ. 1879ರಲ್ಲಿ ಫ್ರಾನ್ಸಿನ ಬುದ್ಧಿಜೀವಿಗಳಲ್ಲಿ ಗಣ್ಯರನ್ನು ತರಪೇತು ಮಾಡುವ ಇಕೋಲ್ ನಾರ್ಮೆಲ್ ಸೂಪರಿಯಂ ಕಾಲೇಜನ್ನು ಸೇರಿ ಪದವೀಧರನಾದ. ಇಲ್ಲಿ ಇದ್ದಾಗಲೇ ಅಂದಿನ ಸುಪ್ರಸಿದ್ಧ ಇತಿಹಾಸಕಾರನಾದ ಪ್ಯೂಸ್ಟೇ ಡೀ ಕಾಲಂಗೇ ಮತ್ತು ಸುಪ್ರಸಿದ್ಧ ತತ್ತ್ವಶಾಸ್ತ್ರಜ್ಞನಾದ ಏಮೀಲ್ ಬೋಟ್ರೊ ಎಂಬುವರ ವಿಚಾರಧಾರೆ ಮತ್ತು ಬರೆವಣಿಗೆಗೆ ಮಾರು ಹೋಗಿ ಅವರ ಆರಾಧಕನಾದ ಬಾರ್ಡೊ ವಿಶ್ವವಿದ್ಯಾಲಯದಲ್ಲಿ ಮೊಟ್ಟಮೊದಲ ಸಮಾಜಶಾಸ್ತ್ರ ಪ್ರಾಧ್ಯಾಪಕನಾದ.

ಬರಹ ಬದಲಾಯಿಸಿ

1893ರಲ್ಲಿ ಫ್ರೆಂಚ್ ಪಂಡಿತ ಪದವಿಗಾಗಿ ತನ್ನ ಮಹಾಪ್ರಬಂಧವಾದ ದಿ ಡಿವಿಷನ್ ಆಫ್ ಲೇಬರ್ ಮತ್ತು ಲ್ಯಾಟಿನ್ ಮಹಾ ಪ್ರಬಂಧವಾದ ಮಾಂಟೆಸ್ಕ್ಯೂ ಸಿದ್ಧಪಡಿಸಿದ. 1912ರಲ್ಲಿ ತನ್ನ ಕೊನೆಯದಾದ ದಿ ಎಲಿಮೆಂಟರಿ ಫಾರಮ್ಸ್ ಆಫ್ ರಿಲಿಜಿಯಸ್ ಲೈಫ್ ಗ್ರಂಥವನ್ನು ಪ್ರಕಟಿಸಿದ.

ಡರ್ಕ್‍ಹೈಮನ ಮುಖ್ಯ ಸೈದ್ಧಾಂತಿಕ ನಿರೂಪಣೆ ಹೀಗಿದೆ: ಸಮಾಜ ಇತರ ಶಾಸ್ತ್ರಭಾಗಗಳಿಂದ ಬೇರೆಯಾಗಿದ್ದು ತನ್ನ ಸದಸ್ಯರ ಮೇಲೆ ನಿರ್ಬಂಧಿತ ಪ್ರಭಾವ ಬೀರುವಂಥದಾಗಿದೆ. ಈ ನಿರ್ಬಂಧ ಸಾಮಾಜಿಕ ಕಾನೂನುಗಳು ಮತ್ತು ಸಾಮೂಹಿಕ ನೈತಿಕ ನಿಯಮಗಳು ಹಾಗೂ ಮೌಲ್ಯಗಳಿಂದ ಬಂದುದಾಗಿದೆ. ಇಂಥ ಕಟ್ಟುಪಾಡುಗಳು ಬಿಗಿಯಾಗಿದ್ದಾಗ ವ್ಯಕ್ತಿ ತನ್ನ ಸ್ವಂತ ಆಚಾರ ವಿಚಾರಗಳನ್ನು ತಡೆಹಿಡಿದು ಸಾಮಾಜಿಕ ನಿಯಮಗಳಿಗನುಸಾರ ನಡೆಯುತ್ತಾನಾಗಿ ಇಡೀ ಸಮಾಜದ ಸ್ಥಿರತೆ ಉಳಿದುಬರುತ್ತದೆ. ಆದರೆ ಹಲವೊಮ್ಮೆ ಸಾಮಾಜಿಕ ಕಟ್ಟುಪಾಡುಗಳು ಮುರಿದುಬಿದ್ದಾಗ ಮಾನವ ಪ್ರವೃತ್ತಿಯ ಮೇಲಿನ ಸಾಮಾಜಿಕ ನಿಯಂತ್ರಣ ಪರಿಣಾಮಕಾರಿಯಾಗದೆ ಆತ ತನ್ನದೇ ಆದ ತಂತ್ರಗಳನ್ನು ಬಳಸಲು ಪ್ರಾರಂಭಿಸುತ್ತಾನೆ. ಈ ಸ್ಥಿತಿಯನ್ನೇ ಅಪ್ರತಿಮಾನತೆ (ಆ್ಯನಮೀ)ಎನ್ನತ್ತಾರೆ. ಸಾಮಾಜಿಕ ಸ್ಥಿರತೆ ಎರಡು ರೀತಿಯದು. ಒಂದು ಆಂಗಿಕ ಸ್ಥಿರತೆ, ಎರಡನೆಯದು ಯಾಂತ್ರಿಕ ಸ್ಥಿರತೆ. ಈ ಎರಡೂ ವಿಶ್ಲೇಷಣಾತ್ಮಕವಾಗಿದ್ದು ಶ್ರಮವಿಭಜನೆಯಲ್ಲಿ ರಚನಾತ್ಮಕ ಪ್ರಭೇದವುಳ್ಳವಾಗಿವೆ. ಡರ್ಕ್‍ಹೈಮನ ಎಲ್ಲ ಸಾಮಾಜಿಕ ವಿಶ್ಲೇಷಣೆಗಳಲ್ಲಿಯೂ ಈ ಎರಡೂ ಅಂಶಗಳನ್ನು ಗುರುತಿಸಬಹುದು.

ಡರ್ಕ್‍ಹೈಮ್ ತನ್ನ ಏಕವಿಷಯಪ್ರಬಂಧವಾದ ಸೂಯಿಸೈಡ್ ಎಂಬುದರಲ್ಲಿ ಆತ್ಮಹತ್ಯೆಯ ವಿವಿಧ ಪ್ರಕಾರಗಳನ್ನು ಚರ್ಚಿಸಿದ್ದಾನೆ. ಇವನಂತೆ, ಮುಖ್ಯ ಪ್ರಕಾರಗಳೆಂದರೆ-ಸ್ವಾರ್ಥಪರ, ಅಪ್ರತಿಮಾನ ಪರಾರ್ಥಪರ ಮತ್ತು ಕರ್ಮಪರ. ತನ್ನ ಪ್ರಬಂಧದಲ್ಲಿ ಪರಾರ್ಥಪರ ಆತ್ಮಹತ್ಯೆಗಳ ಬಗೆಗೆ ವಿವರವಾಗಿ ಚರ್ಚಿಸಿದ್ದಾನೆ.

ತನ್ನ ಮತ್ತೊಂದು ಮುಖ್ಯ ಗ್ರಂಥ ಧಾರ್ಮಿಕ ಜೀವನದ ಪ್ರಾಥಮಿಕ ರೀತಿಗಳನ್ನು ಕುರಿತ ಗ್ರಂಥದಲ್ಲಿ ಧಾರ್ಮಿಕ ನಡೆವಳಿಕೆಗಳ ಮೂಲಗಳ ಬಗೆಗೆ ಚರ್ಚಿಸಿದ್ದಾನಲ್ಲದೆ ಗ್ರಂಥದ ಬಹುಭಾಗವನ್ನು ಆಸ್ಟ್ರೇಲಿಯದ ಆದಿಮಾನವ ಸಮೂಹದಲ್ಲಿನ ಧಾರ್ಮಿಕ ನಂಬಿಕೆ, ಪಂಥಗಳ ವಿಶ್ಲೇಷಣಾತ್ಮಕ ಅಧ್ಯಯನಕ್ಕೆ ಮೀಸಲಿರಿಸಿದ್ದಾನೆ. ಸಮಾಜ ವಿಜ್ಞಾನಗಳಲ್ಲಿ ಕ್ರಮ ವಿಧಾನಗಳ ಬಳಕೆಯ ಅಧ್ಯಯನ ಮಾಡಿ ಡರ್ಕ್‍ಹೈಮ್ ಸಮಾಜಿಕ ವಿಧಾನದಲ್ಲಿನ ನಿಯಮಗಳನ್ನು ಕುರಿತು ಬರೆದಿರುವ ಗ್ರಂಥದಲ್ಲಿ ಆಚಾರಾರ್ಥಕ ವಿಶ್ಲೇಷಣ (ಫಂಕ್ಷನಲ್ ಅನ್ಯಾಲಿಸಿಸ್) ಕ್ರಮದ ಪ್ರಾಮುಖ್ಯವನ್ನು ಚರ್ಚಿಸಿದ್ದಾನೆ.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: