ಏಕ ಅಕ್ಷೀಯ ಹರಳುಗಳು

ಏಕ ಅಕ್ಷೀಯ ಹರಳುಗಳು: ಚತುರ್ಮುಖಿ (ಟಿಟ್ರಗೋನಲ್) ಮತ್ತು ಷಣ್ಮುಖಿ (ಹೆಕ್ಸಗೋನಲ್) ವರ್ಗಗಳಿಗೆ ಸೇರಿದ ಹರಳುಗಳನ್ನು ಏಕ ಅಕ್ಷೀಯವೆನ್ನುತ್ತಾರೆ. ಇವುಗಳಲ್ಲಿ ಒಟ್ಟು ಮೂರು ಅಥವಾ ನಾಲ್ಕು ಅಕ್ಷಗಳಿದ್ದು, ಅವುಗಳಲ್ಲಿ ಎರಡು ಅಥವಾ ಮೂರು ಸಮನಾದ ಸಮತಲ ಸ್ಫಟಿಕಾಕ್ಷಗಳಾಗಿರುತ್ತವೆ. ಮೂರನೆಯ ಅಥವಾ ನಾಲ್ಕನೆಯ ಅಕ್ಷ ಅಸಮವಾಗಿದ್ದು, ಸಮತಲ ಸಪಾಟಕ್ಕೆ ಸಮಕೋನದಲ್ಲಿರುತ್ತದೆ. ಇದರಿಂದ ಈ ವರ್ಗದ ಹರಳುಗಳಲ್ಲಿ ಬೆಳಕಿನ ಕಿರಣಗಳು ಎಲ್ಲ ದಿಕ್ಕುಗಳಲ್ಲೂ ಒಂದೇ ವೇಗದಲ್ಲಿ ಚಲಿಸುವುದಿಲ್ಲ. ಈ ಹರಳುಗಳಲ್ಲಿ ಹಾದುಹೋಗುವ ಬೆಳಕು ಎರಡು ಕಿರಣಗಳಾಗಿ ವಿಭಾಗವಾಗುತ್ತದೆ. ಒಂದೇ ಪತನ ಕಿರಣದಿಂದುಂಟಾದ ಎರಡು ಕಿರಣಗಳಲ್ಲೊಂದು ಸಮತಲ ಅಕ್ಷಗಳ ಸಪಾಟದಲ್ಲಿ ಸ್ಪಂದಿಸುತ್ತದೆ. ಪ್ರಸಾರದ ದಿಕ್ಕು ಯಾವುದಾದರೂ ಈ ಕಿರಣಕ್ಕೆ ಒಂದೇ ರೀತಿಯ ವೇಗವಿರುತ್ತದೆ. ಇದರಿಂದ ಈ ಕಿರಣಕ್ಕೆ ಒಂದು ನಿರ್ದಿಷ್ಟವಾದ ಭಂಗಸೂಚಕವೂ ಗೋಳಾಕೃತಿಯ ತರಂಗಮುಖವೂ ಇವೆ. ಇದನ್ನೇ ಸಾಮಾನ್ಯ (ಆರ್ಡಿನರಿ) ಕಿರಣವೆನ್ನುವುದು. ಮತ್ತೊಂದು ಮೊದಲ ಕಿರಣಕ್ಕೆ ಸಮಕೋನದಲ್ಲಿ ಯಾವಾಗಲೂ ನೇರ ಸಪಾಟದಲ್ಲಿ ನೀಳ ಸ್ಫಟಿಕಾಕ್ಷಕ್ಕೆ ಸಮಾಂತರವಾಗಿ ಸ್ಪಂದಿಸುತ್ತದೆ. ಇದರ ವೇಗ ಹರಳಿನಲ್ಲಿ ವಿವಿಧ ದಿಕ್ಕುಗಳಲ್ಲಿ ಚಲಿಸಿದಂತೆ ವ್ಯತ್ಯಾಸಗೊಳ್ಳುತ್ತದೆ. ಇದರಿಂದ ಈ ಕಿರಣಕ್ಕೆ ಒಂದು ನಿರ್ದಿಷ್ಟವಾದ ಭಂಗಸೂಚಕವಿರದೆ ಅಂಡಾಕೃತಿಯ ತರಂಗ ಮುಖ ಮಾತ್ರ ಇದೆ. ಇದನ್ನು ಅಸಾಮಾನ್ಯ (ಎಕ್ಸ್ಟ್ರಾಡಿನರಿ) ಕಿರಣವೆನ್ನುತ್ತಾರೆ. ಏಕ ಅಕ್ಷೀಯ ಹರಳುಗಳಲ್ಲಿ ಸಾಧಾರಣ ಹಾಗೂ ಅಸಾಧಾರಣ ಕಿರಣಗಳು ವಿವಿಧ ವೇಗಗಳಲ್ಲಿ ಚಲಿಸುವುವಾದರೂ ನೀಳ ಸ್ಫಟಿಕಾಕ್ಷಕಕ್ಕೆ ಸಮಾಂತರವಾಗಿ ಚಲಿಸುವಾಗ ಮಾತ್ರ ಒಂದೇ ವೇಗಗತಿಯಲ್ಲಿರುತ್ತವೆ. ಈ ಕಾರಣ ಒಂದೇ ಭಂಗ ಸೂಚಕವಿದ್ದು, ದ್ವಿರಶ್ಮಿಭಂಗಕ್ಕೆ ಅವಕಾಶವಿರುವುದಿಲ್ಲ. ದ್ವಿರಶ್ಮಿಭಂಗವಿಲ್ಲದ ಈ ಅಕ್ಷವನ್ನೇ ದ್ಯುತಿ ಅಕ್ಷವೆನ್ನುವುದು (ಆಪ್ಟಿಕ್ ಆಕ್ಸಿಸ್). ಇಂಥ ದ್ಯುತಿ ಅಕ್ಷ ಈ ದ್ಯುತಿವರ್ಗದ ಹರಳುಗಳಲ್ಲಿ ಒಂದೇ ಒಂದು. ಈ ಕಾರಣ ಇವುಗಳನ್ನು ಏಕ ಅಕ್ಷೀಯವೆನ್ನುತ್ತಾರೆ. ಏಕ ಅಕ್ಷೀಯ ಹರಳುಗಳಲ್ಲಿ ಸಾಧಾರಣ ಹಾಗೂ ಅಸಾಧಾರಣ ಕಿರಣಗಳ ಪರಸ್ಪರ ವೇಗದ ಆಧಾರದ ಮೇಲೆ ಎರಡು ವರ್ಗಗಳಿವೆ. ಬೆಣಚುಗಲ್ಲು (ಕ್ವಾರ್ಟ್‌್ಸ) ಜಿûರ್ಕಾನ್ ಮುಂತಾದ ಖನಿಜಗಳಲ್ಲಿ ಸಾಧಾರಣ ರಶ್ಮಿಯ ವೇಗ ಅಸಾಧಾರಣ ಕಿರಣದ ವೇಗಕ್ಕಿಂತ ಹೆಚ್ಚಾಗಿರುವುದರಿಂದ ಅವುಗಳನ್ನು ಧನಸ್ಫಟಿಕಗಳೆಂದೂ ಕ್ಯಾಲ್ಸೈಟ್, ಅಪಟೈಟ್ ಮುಂತಾದ ಖನಿಜಗಳಲ್ಲಿ ಸಾಧಾರಣ ರಶ್ಮಿಯ ವೇಗ ಅಸಾಧಾರಣ ರಶ್ಮಿಯ ವೇಗಕ್ಕಿಂತ ಕಡಿಮೆಯಾಗಿರುವುದರಿಂದ ಅವನ್ನು ಋಣಸ್ಫಟಿಕಗಳೆಂದೂ ಕರೆಯುತ್ತಾರೆ.