ಏಕೀಕರಣ, ಆಡಳಿತ ಮತ್ತು ರಾಜಕೀಯ

ಆಡಳಿತ: ಆಡಳಿತ ವೈಯಕ್ತಿಕವಾಗಿರಬಹುದು ಅಥವಾ ಸಾರ್ವಜನಿಕವಾಗಿರಬಹುದು. ಸರ್ಕಾರ ನಿಶ್ಚಿತ ಗುರಿ ತಲಪಲು ಕೈಕೊಳ್ಳುವ ಚಟುವಟಿಕೆ ಅಥವಾ ಕಾರ್ಯವಿಧಾನವೇ ಸಾರ್ವಜನಿಕ ಆಡಳಿತ. ಸರ್ಕಾರ ಆಡಳಿತ ಶಾಖೆಗಳಿಂದ ಕೂಡಿದ ವ್ಯವಸ್ಥೆ. ಸಾರ್ವಜನಿಕ ಆಡಳಿತ ಸುಲಭವಾದ ಕಾರ್ಯವಲ್ಲ. ಅದು ಅನೇಕ ಗುರಿಗಳನ್ನು ಏಕಕಾಲಕ್ಕೆ ಸಾಧಿಸಬೇಕಾಗುತ್ತದೆ. ಆದ್ದರಿಂದ ಅದು ಅನೇಕ ಆಡಳಿತ ಇಲಾಖೆಗಳನ್ನು ಹೊಂದಿರಬೇಕಾದ್ದು ಅನಿವಾರ್ಯ. ಆಧುನಿಕ ಸರ್ಕಾರಗಳ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದ್ದು ಅದು ಸಂರಕ್ಷಣೆ, ವಿದೇಶ ವ್ಯವಹಾರ, ಸಾರಿಗೆ ಸಂಪರ್ಕ, ಗೃಹ, ಹಣಕಾಸು, ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಕಾಯಿದೆ ಮುಂತಾದ ಅನೇಕ ಇಲಾಖೆಗಳನ್ನು ಹೊಂದಿರುತ್ತದೆ. ಈ ವಿಧದ ಇಲಾಖೆಗಳು ಏಕಕಾಲಕ್ಕೆ ಪ್ರತ್ಯೇಕವಾಗಿಯೂ ಆಡಳಿತಯಂತ್ರದ ಅಂಗಗಳಾಗಿಯೂ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ವಿವಿಧ ಇಲಾಖೆಗಳನ್ನು ಏಕೀಕರಿಸಿ ಒಂದು ಆಡಳಿತ ಯಂತ್ರವನ್ನು ಸಂಘಟಿಸುವ ಕಾರ್ಯವಿಧಾನವೇ ಆಡಳಿತ ಏಕೀಕರಣ. ಇಂಥ ಏಕೀಕೃತ ಆಡಳಿತಯಂತ್ರದಲ್ಲಿ ನಾನಾ ಇಲಾಖೆಗಳು ಅದರ ಅಂಗಗಳಾಗಿ ಚಟುವಟಿಕೆ ನಡೆಸಿ ಅದಕ್ಕೆ ಪೂರ್ಣತೆ ನೀಡುತ್ತವೆ. ಹೀಗೆ ಏಕೀಕರಿಸಲಾದ ಆಡಳಿತ ವ್ಯವಸ್ಥೆಯಲ್ಲಿ ಪ್ರತಿ ಕಾರ್ಯಸಂಸ್ಥೆಯೂ ನೇರವಾಗಿಯಾಗಲಿ ಇಲಾಖೆಗಳ ಮೂಲಕವಾಗಿಯಾಗಲಿ ಮುಖ್ಯ ಕಾರ್ಯದರ್ಶಿಯ ಅಥವಾ ಶಾಸನಾಂಗದ ನೇರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಇದರಿಂದ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಅಥವಾ ಯೋಜನೆಯನ್ನು ಸಿದ್ಧಪಡಿಸಲು ಅನುಕೂಲವಾಗುತ್ತದೆ. ಇಂಥ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ಮುಖ್ಯ ಕಾರ್ಯದರ್ಶಿಯಿಂದ ವಿವಿಧ ಇಲಾಖೆಗಳ ಮೂಲಕ ತಳದ ಕೊನೆಯವರೆಗೆ ಪಸರಿಸುತ್ತದೆ.[೧]

ಏಕೀಕೃತ ಆಡಳಿತ ವ್ಯವಸ್ಥೆ ಬದಲಾಯಿಸಿ

ಇಂದು ಸಾಮಾನ್ಯವಾಗಿ ಎಲ್ಲ ಸರ್ಕಾರಗಳೂ ಈ ವ್ಯವಸ್ಥೆ ಅನುಸರಿಸುತ್ತಿವೆ. ಭಾರತದಲ್ಲಿ ಕೂಡ ಏಕೀಕೃತ ಆಡಳಿತ ವ್ಯವಸ್ಥೆಯಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ರಾಷ್ಟ್ರಪತಿಯ ಹೆಸರಿನಲ್ಲಿ ಮತ್ತು ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿಯ ಅಧೀನಕ್ಕೊಳಪಟ್ಟಿರುತ್ತವೆ. ಈ ಪದ್ಧತಿ ಅನೇಕ ರೀತಿಯಿಂದ ಪ್ರಯೋಜನಕಾರಿಯಾದದ್ದು. ಇದರಿಂದಾಗಿ ಸರ್ಕಾರದ ವಿವಿಧ ಸೇವಾಸಂಸ್ಥೆಗಳನ್ನು ಒಗ್ಗೂಡಿಸಲು ಅನುಕೂಲವಾಗುತ್ತದೆ; ಅಧಿಕಾರವ್ಯಾಪ್ತಿ ಸರಾಗವಾಗಿ ಹೊಣೆಗಾರಿಕೆ ನಿಶ್ಚಿತವಾಗುತ್ತದೆ. ಅಲ್ಲದೆ ವಿವಿಧ ಇಲಾಖೆಗಳು ಒಂದೆಡೆ ಬರುವುದರಿಂದ ತಾಂತ್ರಿಕ ಅವಶ್ಯಕತೆಗಳನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು. ಕಾರ್ಯದ ಪುನರಾವರ್ತನೆ ಅಥವಾ ಘರ್ಷಣೆಯಾಗದಂತೆ ನೋಡಿಕೊಳ್ಳುವುದು ಸಾಧ್ಯ. ಇಲಾಖೆ-ಇಲಾಖೆಗಳ ನಡುವೆ ಸಹಕಾರ ಹೆಚ್ಚಿಸಿ ಆಡಳಿತ ಮಟ್ಟವನ್ನು ಸುಧಾರಿಸಲು ಅನುವಾಗುತ್ತದೆ. ಇದಲ್ಲದೆ ಆಯವ್ಯಯಗಳ ಅಂದಾಜನ್ನು ಯೋಗ್ಯರೀತಿಯಲ್ಲಿ ರಚಿಸಿ ಯೋಜನೆಗಳನ್ನು ಯಶಸ್ವಿಯಾಗಿಸಲೂ ಸಹಕಾರಿಯಾಗುತ್ತದೆ. ಆದ್ದರಿಂದ ಏಕೀಕೃತ ಆಡಳಿತ ವ್ಯವಸ್ಥೆಯಲ್ಲಿ ಸಮತೋಲನ ಸಾಧ್ಯ.[೨]

ಆಡಳಿತ ಸಂಸ್ಥೆಗಳ ಪುನರ್ ವಿಂಗಡಣೆ ಬದಲಾಯಿಸಿ

ಈ ಬಗೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕಾದರೆ ಆಡಳಿತ ಸಂಸ್ಥೆಗಳ ಪುನರ್ ವಿಂಗಡಣೆಯಾಗುವುದು ಅವಶ್ಯ. ಭಾರತ ಸ್ವಾತಂತ್ರ್ಯ ಪಡೆದ ಅನಂತರ ಈ ಪ್ರಕಾರದ ಆಡಳಿತ ವ್ಯವಸ್ಥೆ ರಚಿತವಾಗಿದ್ದು, ಆ ಕಾರ್ಯ ಮುಂದುವರಿಯುತ್ತಿದೆ. ಈ ರೀತಿ ಏಕೀಕೃತವಾದ ಆಡಳಿತ ವ್ಯವಸ್ಥೆಗೂ ಕೇಂದ್ರೀಕೃತ ಆಡಳಿತ ವ್ಯವಸ್ಥೆಗೂ ಬಹಳ ವ್ಯತ್ಯಾಸವುಂಟು. ಕೇಂದ್ರೀಕೃತ ಆಡಳಿತ ವ್ಯವಸ್ಥೆ ವಸ್ತುತಃ ಏಕೀಕೃತ ಆಡಳಿತ ವ್ಯವಸ್ಥೆಗೆ ವಿರುದ್ಧವಾದದ್ದು. ಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ, ಮೇಲಿನಿಂದ ಕೆಳಗಿನವರೆಗೆ ಅಧಿಕಾರ ಹಂತಹಂತವಾಗಿ ಹರಿದುಬರುತ್ತದೆ. ಇಂಥ ವ್ಯವಸ್ಥೆಯಲ್ಲಿ ಆಡಳಿತಯಂತ್ರ ನಿಧಾನವಾಗಿ ಚಲಿಸುವುದರಿಂದ ಆಡಳಿತ ಕಾರ್ಯಗಳಲ್ಲಿ ವಿಳಂಬವಾಗುವುದು ಸಹಜ. ಈ ದೋಷವನ್ನು ನಿವಾರಸಲೆಂದೇ ಆಡಳಿತದ ವಿಕೇಂದ್ರಿಕರಣವನ್ನು ಅನುಮೋದಿಸಲಾಗಿದೆ. ಆದರೆ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲೂ ಅನೇಕ ನ್ಯೂನತೆಗಳಿರುವುದು ಕಂಡುಬಂದಿದೆ. ಹೀಗೆ ಕೇಂದ್ರೀಕೃತ ಮತ್ತು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗಳಿಗಿಂತ ಏಕೀಕೃತ ಆಡಳಿತ ವ್ಯವಸ್ಥೆಯೇ ಹೆಚ್ಚು ಉಪಯುಕ್ತವಾದದ್ದೆನ್ನಬಹುದು. ಈ ಕಾರಣದಿಂದ ಇಂದು ಅನೇಕ ರಾಷ್ಟ್ರಗಳು ತಮ್ಮ ಆಡಳಿತ ಯಂತ್ರರಚನೆಯಲ್ಲಿ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣಗಳಿಗಿಂತ ಏಕೀಕೃತ ಆಡಳಿತ ವ್ಯವಸ್ಥೆಯನ್ನು ಹೆಚ್ಚುಹೆಚ್ಚಾಗಿ ಅಳವಡಿಸಿಕೊಳ್ಳುತ್ತಲಿವೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲೂ ಏಕೀಕೃತ ಆಡಳಿತ ವ್ಯವಸ್ಥೆಯನ್ನು ಕಾಣಬಹುದು.

ರಾಜಕೀಯ ಬದಲಾಯಿಸಿ

ಒಂದು ಭೌಗೋಳಿಕ ಪ್ರದೇಶದಲ್ಲಿರುವ ಜನರನ್ನೆಲ್ಲ ಒಂದು ಸರ್ಕಾರ ಅಥವಾ ಆಡಳಿತವ್ಯವಸ್ಥೆಗೆ ಒಳಪಡಿಸಿ, ಅವರಲ್ಲಿ ತಾವೆಲ್ಲ ಒಂದೆಂಬ ಭಾವನೆ ಮೂಡುವಂತೆ ಕ್ರಮಕೈಕೊಳ್ಳುವುದೇ ರಾಜಕೀಯ ಏಕೀಕರಣ. ಒಂದು ಆಡಳಿತವ್ಯವಸ್ಥೆಗೆ ಒಳಪಟ್ಟವರು ಒಂದು ರಾಷ್ಟ್ರದವರೆಂಬ ಕಲ್ಪನೆ ಹೊಂದಿ ಏಕೀಭವಿಸುವುದು ಸಹಜವೂ ಅನಿವಾರ್ಯವೂ ಆಗಿ ಪರಿಣಮಿಸಬಹುದು. ಸಾಮಾನ್ಯವಾಗಿ ಒಂದು ರಾಷ್ಟ್ರದಲ್ಲಿ ಅನೇಕ ಬುಡಕಟ್ಟುಗಳೂ ಜನಾಂಗಗಳೂ ಧರ್ಮಗಳೂ ಹಿತಾಸಕ್ತಿಗಳೂ ರಾಜಕೀಯ ಪಕ್ಷಗಳೂ ಗುಂಪುಗಳೂ ಪ್ರದೇಶಗಳೂ ಇರುತ್ತವೆ. ಇವನ್ನೆಲ್ಲ ಒಂದುಗೂಡಿಸಿ ಇವೆಲ್ಲ ಯಾವುದಾದರೊಂದು ಸಾಮಾನ್ಯ ಸೂತ್ರಕ್ಕೆ ಬದ್ಧವಾಗುವ ಹಾಗೆ ಮಾಡುವುದು ರಾಜಕೀಯ ಏಕೀಕರಣದ ಗುರಿ. ರಾಜಕೀಯ ವ್ಯಕ್ತಿಗಳ, ಘಟಕಗಳ, ಗುಂಪುಗಳ, ಸ್ಥಳೀಯ ಸಂಸ್ಥೆಗಳ, ಪ್ರದೇಶಗಳ ಅಥವಾ ದೇಶಗಳ ನಡುವೆ ಏಕತೆ ಸಾಧಿಸಿ ಅವುಗಳ ಪರಸ್ಪರ ರಾಜಕೀಯ ಚಟುವಟಿಕೆಗಳಿಗೆ ಒಂದು ನಿರ್ದಿಷ್ಟ ರೂಪು ಕೊಡುವುದೇ ರಾಜಕೀಯ ಏಕೀಕರಣ ಅಥವಾ ಅನುಕಲನ. ರಾಜಕೀಯ ಏಕೀಕರಣದ ಬಗ್ಗೆ ಏಕ್ ಕೆಲವು ಮುಖ್ಯ ಅಂಶಗಳನ್ನು ಸೂಚಿಸಿದ್ದಾನೆ: 1. ರಾಜ್ಯದ ಆಡಳಿತದ ಬಗ್ಗೆ ಪ್ರಜೆಗಳಿಗೆ ದೃಢವಾದ ಭಕ್ತಿಯಿರಬೇಕು. ರಾಜ್ಯ ತಮಗಿಂತಲೂ ಮಹತ್ತರವಾದ್ದು ಎಂಬ ನಂಬುಗೆ ಅವರಿಗೆ ಇರಬೇಕು. 2. ರಾಜಕೀಯ ಪಕ್ಷಗಳು ಒಂದಾಗಿ ಸಹಕರಿಸುವ ಅವಕಾಶವಿರಬೇಕು. 3. ಪೈಪೋಟಿಗಿಳಿದಿರುವ ಹಿರಿಯ ರಾಜಕೀಯ ಪಕ್ಷಗಳ ಗಮನವನ್ನು ಬೇರೆ ಕಡೆ ತಿರುಗಿಸಬೇಕು. 4. ರಾಜಕೀಯ ಪಕ್ಷಗಳ ಸದಸ್ಯರು ರಾಜಕೀಯ ಹುದ್ದೆಯ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕಲ್ಲದೆ, ಆ ಹುದ್ದೆಯನ್ನು ಅಲಂಕರಿಸುವ ವ್ಯಕ್ತಿಯನ್ನಲ್ಲ. 5. ರಾಜ್ಯಗಳು ಎಲ್ಲ ಸಂದರ್ಭದಲ್ಲೂ ಒಕ್ಕೂಟಕ್ಕೆ ವಿಧೇಯವಾಗಿರಬೇಕು. 6. ಬಹುಕಾಲದಿಂದ ಸ್ಥಿರವಾಗಿರುವ ಗುಂಪಿನಲ್ಲಿ ಏಕೀಕರಣವಾಗಬೇಕು. 7. ರಾಜಕೀಯ ವ್ಯವಸ್ಥೆ ಮೇಲಿಂದ ಮೇಲೆ ಮಾರ್ಪಡಿಸಲು ಬಾರದಂತಿರಬೇಕು.

ರಾಜಕೀಯ ಏಕೀಕರಣ ಬದಲಾಯಿಸಿ

ರಾಜಕೀಯ ಏಕೀಕರಣದಲ್ಲಿ ಮುಖ್ಯವಾಗಿ ಭೌಗೋಲಿಕ ಪ್ರದೇಶಗಳನ್ನು ಮತ್ತು ಅದರ ಜನತೆಯನ್ನು ಒಂದು ರಾಜಕೀಯ ವ್ಯವಸ್ಥೆಯ ಕಕ್ಷೆಯಲ್ಲಿ ತರುವ ಪ್ರಯತ್ನವನ್ನು ಕಾಣಬಹುದು. ಭಿನ್ನ ರೀತಿಯ ಜನರನ್ನು, ಭಿನ್ನ ರೀತಿಯ ಪ್ರದೇಶಗಳನ್ನು ಒಂದುಗೂಡಿಸುವಾಗ ಅವುಗಳಲ್ಲಿ ಒಂದೇ ವಿಧದ ವರ್ತನೆಯನ್ನುಂಟುಮಾಡುವ ಕೆಲವು ಅಂಶಗಳು ಇರುವುದು ವಿಹಿತ. ಉದಾಹರಣೆಗಾಗಿ, ಸ್ವತಂತ್ರವಾಗಿದ್ದ ದೇಶಗಳು ತಮ್ಮ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಾಗಲಿ ಇತರ ಪ್ರಬಲ ರಾಷ್ಟ್ರಗಳಿಂದ ಒದಗಬಹುದಾದ ಗಂಡಾಂತರ ಮತ್ತು ಆಕ್ರಮಣವನ್ನು ಎದುರಿಸುವುದಕ್ಕಾಗಲಿ ತಮ್ಮಲ್ಲೇ ಒಂದು ಕೂಟ ರಚಿಸಿಕೊಂಡು ಸಂಯುಕ್ತ ರಾಜ್ಯವಾಗಿ ಪರಿವರ್ತಿತವಾಗಬಹುದು. ಈ ಬಗೆಯ ಒಕ್ಕೂಟದಲ್ಲಿ ಸೇರುವಂಥ ಜನರು ಒಂದೇ ಬಗೆಯ ಧರ್ಮ ಸಂಸ್ಕøತಿಗಳಿಗೆ ಒಳಪಟ್ಟವರೂ ಒಂದೇ ಭಾಷೆ ಆಡುವವರೂ ಆಗಿದ್ದರೆ ಅದು ಹೆಚ್ಚು ಭದ್ರವಾಗಿರುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್ ದೇಶಗಳು ಒಂದುಗೂಡಿದಾಗ ಇದು ಕೇವಲ ರಾಜಕೀಯ ಒಂದುಗೂಡಿಕೆ ಮಾತ್ರವಾಗಿರದೆ ಇಂಗ್ಲೆಂಡಿನ ಚರ್ಚಿನ ಮುಖಾಂತರ ಧಾರ್ಮಿಕ ಒಂದುಗೂಡುವಿಕೆಯೂ ಆಗಿತ್ತು. ಆದರೆ ಅಮೆರಿಕ ಸಂಯುಕ್ತಸಂಸ್ಥಾನ ಒಂದುಗೂಡಿದಾಗ ಅದಕ್ಕೆ ಇಂಥ ಧಾರ್ಮಿಕ ತಳಹದಿ ಇರಲಿಲ್ಲ. ಅಂದು ವಸಾಹತುಗಳಾಗಿದ್ದ ಅನೇಕ ಪ್ರದೇಶಗಳು ತಮ್ಮವೇ ಆದ ಪರಂಪರೆಗಳನ್ನು ಹೊಂದಿದ್ದ ಭಾಗಗಳಾಗಿದ್ದರೂ ಅವು ಅಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಒಂದಾಗಬೇಕಾಯಿತು. ಭಾರತ ಬ್ರಿಟಿಷರ ಆಡಳಿತದಲ್ಲಿದ್ದಾಗ ಒಂದು ರೀತಿಯ ರಾಜಕೀಯ ಏಕೀಕರಣ ಹಾಗೂ ಆಡಳಿತ ಏಕತೆ ಉಂಟಾಗಿತ್ತು. ಆದರೆ ಅದು ಸಂಪೂರ್ಣ ಐಕ್ಯವಾಗಿರಲಿಲ್ಲ. ರಾಜಕೀಯವಾಗಿ ಇಲ್ಲಿ ಹಲವಾರು ಪ್ರಾಂತ್ಯಗಳೂ ದೇಶೀಯ ಸಂಸ್ಥಾನಗಳೂ ಇದ್ದುವು. ಸ್ವಾತಂತ್ರ್ಯಾನಂತರ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸ್ಥಾಪಿಸಲಾಯಿತು. ರಾಜ್ಯಗಳನ್ನೂ ಕೇಂದ್ರ ಶಾಸಿತ ಪ್ರದೇಶಗಳನ್ನೂ ಒಳಗೊಂಡ ಭಾರತ ಒಕ್ಕೂಟ ಈಗ ಅಸ್ತಿತ್ವದಲ್ಲಿದೆ. ಭಾರತದಲ್ಲಿ ಭಿನ್ನ ಪ್ರದೇಶಗಳೂ ಭಿನ್ನ ಭಾಷೆಗಳೂ ಭಿನ್ನ ಮತಗಳೂ ಭಿನ್ನ ಸಂಸ್ಕøತಿಗಳೂ ಇದ್ದರೂ ರಾಜಕೀಯ ಏಕೀಕರಣವನ್ನು ಕಾಣಬಹುದು. ಆದರೆ ಇಂಥ ಸಂದರ್ಭದಲ್ಲಿ ಒಂದು ವಿಶಿಷ್ಟ ಸಮಸ್ಯೆ ಉದ್ಭವಿಸುತ್ತದೆ. ಎಂದರೆ ವಿಭಿನ್ನ ರೀತಿಯ ಜನ ಹಾಗು ಪ್ರದೇಶಗಳು ಯಾವುದೇ ಸಂದರ್ಭದಲ್ಲಿ ಅನಿವಾರ್ಯವಾಗಿ ರಾಜಕೀಯ ಒಗ್ಗಟ್ಟನ್ನು ಸ್ಥಾಪಿಸಿದರೂ ಇಂಥ ಏಕೀಕರಣ ಸುಮಧುರ ಮತ್ತು ಶಾಶ್ವತ ಆಗಬೇಕಾದರೆ ಕೇವಲ ಬಾಹ್ಯ ಒಂದುಗೂಡುವಿಕೆ ಇದ್ದರೆ ಸಾಲದು. ಅದರೊಡನೆ ಆಂತರಿಕ ಒಂದುಗೂಡುವಿಕೆ ಅಥವಾ ಭಾವೈಕ್ಯ ಅತ್ಯವಶ್ಯ. ಹಾಗಿಲ್ಲದ ಪಕ್ಷದಲ್ಲಿ ಅಚಿಥ ರಾಜಕೀಯ ಒಂದುಗೂಡುವಿಕೆ ಅಪಾಯಕಾರಿಯಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದಲೇ ಭಾರತದ ಪ್ರಧಾನಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂರವರು ಭಾರತೀಯರಲ್ಲಿ ಆತ್ಮೀಯತೆ ಬೆಳೆದು ಭಾವೈಕ್ಯ ಉಂಟಾಗಬೇಕೆಂದು ಪದೇ ಪದೇ ಹೇಳುತ್ತಿದ್ದರು. ಇಲ್ಲದಿದ್ದರೆ ಅಂತಃಕಲಹಗಳು ಹೆಚ್ಚಾಗಿ ಒಕ್ಕೂಟದ ರಾಜ್ಯಗಳ ನಡುವೆ ಗಡಿಸಂಬಂಧವಾಗಿಯಾಗಲಿ ನದೀ ನೀರಿನ ವಿತರಣೆಗಾಗಲಿ ಕಲಹಗಳು ಉಂಟಾಗಿ ಏಕತೆಗೆ ಧಕ್ಕೆ ತಗಲಬಹುದು. ಸಾಂಸ್ಕøತಿಕವಾಗಿಯೂ ಧಾರ್ಮಿಕವಾಗಿಯೂ ಭದ್ರವಾದ ಏಕತೆ ಸ್ಥಾಪಿಸಿರುವೆವೆಂದುಕೊಂಡಿರುವ ದೇಶಗಳಲ್ಲೂ ಪದೇ ಪದೇ ಪ್ರಾದೇಶಿಕ ಸಾಂಸ್ಕøತಿಕ ಅಥವಾ ಆರ್ಥಿಕ ಹಿತಾಸಕ್ತಿ ಭಿನ್ನತೆಗಳು ಬೃಹದಾಕಾರ ತಾಳಿ ರಾಜಕೀಯ ಏಕತೆಯನ್ನೊಡೆಯುವಂಥ ಅಪಾಯದ ಹಂತ ಮುಟ್ಟುವುದುಂಟು. ಬ್ರಿಟಿಷ್ ಸಂಯುಕ್ತ ರಾಜ್ಯದಲ್ಲಿ ವೆಲ್ಸ್ ಹಾಗೂ ಸ್ಕಾಟ್ ಜನರ ಆತ್ಮಪ್ರತ್ಯಯ ಬೆಳೆಯುತ್ತಿರುವುದಾದರೂ ಅದು ಏಕತೆಯ ಕಟ್ಟನ್ನೊಡೆಯುವ ಹಂತಕ್ಕೆ ಬಂದಿಲ್ಲ. ಆದರೆ ಭಾರತದಲ್ಲಿ ಹಲವು ಶತಮಾನಗಳ ಕಾಲ ಒಟ್ಟಿಗಿದ್ದವರೇ ಭಾರತ-ಪಾಕಿಸ್ತಾನಗಳ ಅಡಿಯಲ್ಲಿ ರಾಜ್ಯವನ್ನು ಹಂಚಿಕೊಂಡದ್ದು ಧಾರ್ಮಿಕ ಹಾಗೂ ಸಾಂಸ್ಕøತಿಕ ಭಿನ್ನತೆಗಳ ವೈಪರೀತ್ಯದ ಪರಿಣಾಮ. ನಾನಾ ಸಂಸ್ಕøತಿಯುಕ್ತವಾದ ಮತ್ತು ಹಲವಾರು ರಾಷ್ಟ್ರೀಯ ಮನೋಧರ್ಮಗಳಿರುವ ರಾಜ್ಯಗಳು ಸೋವಿಯತ್ ಒಕ್ಕೂಟದಡಿಯಲ್ಲಿ ಸಾಧಿಸಿರುವ ಏಕತೆಯನ್ನು ಭಿನ್ನತೆಗಳ ನಡುವಣ ಏಕತೆಯೆನ್ನಬಹುದು. ಸಮಾನ ಗುರಿಯೇ ಈ ಭಿನ್ನ ಸಂಸ್ಕøತಿಗಳ ಏಕತೆಯ ಸೂತ್ರ.

ಜಾಗತಿಕ ಸರ್ಕಾರ ಸ್ಥಾಪನೆ ಬದಲಾಯಿಸಿ

ಇದೂ ಅಲ್ಲದೆ ಇಂದು ಜಾಗತಿಕ ಸರ್ಕಾರ ಸ್ಥಾಪನೆಯ ದಿಶೆಯಲ್ಲಿ ಹಲವರು ವಿಚಾರ ಮಾಡುತ್ತಿದ್ದಾರೆ. ಕೇವಲ ರಾಷ್ಟ್ರಗಳ ಒಕ್ಕೂಟವಲ್ಲದೆ ಅಂತರರಾಷ್ಟ್ರೀಯ ಒಕ್ಕೂಟ ಸಾಧಿಸುವುದರ ಮೂಲಕ ಜಾಗತಿಕ ಸರ್ಕಾರ ಸ್ಥಾಪಿಸುವ ಕನಸು ಕಾಣುವವರಿದ್ದಾರೆ. ಈ ಒಕ್ಕೂಟದ ಮೂಲಕ ವಿಶ್ವಶಾಂತಿ ಸ್ಥಾಪನೆಯಾಗಬೇಕೆಂಬ ಆಕಾಂಕ್ಷೆಯಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಿಂದ ಇಂದಿನವರೆಗೆ ಅನೇಕ ಪ್ರಯತ್ನಗಳು ನಡೆದಿವೆ. ಅಂತರರಾಷ್ಟ್ರೀಯ ಅಂಚೆಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕಸಂಸ್ಥೆ, ಅಂತರರಾಷ್ಟ್ರೀಯ ರೆಡ್‍ಕ್ರಾಸ್, ಅಂತರರಾಷ್ಟ್ರೀಯ ಸಂಪರ್ಕಸಾಧನ ಸಂಸ್ಥೆ ಮುಂತಾದವುಗಳಲ್ಲದೆ ರಾಷ್ಟ್ರಕೂಟ ವಿಶ್ವಸಂಸ್ಥೆ ಇವು ಈ ಬಗೆಯ ವಿಶ್ವ ಏಕೀಕರಣ ಪ್ರಯತ್ನದ ನಿದರ್ಶನಗಳು.

ಉಲ್ಲೇಖಗಳು ಬದಲಾಯಿಸಿ