ಏಕೀಕರಣ: ಅಪೂರ್ಣವಾದ್ದಕ್ಕೆ ಇತರ ಭಾಗಗಳನ್ನು ಸೇರಿಸಿಯೋ ಬೇರೆ ಬೇರೆ ಭಾಗಗಳನ್ನು ಸಂಯೋಜಿಸಿಯೋ ಸಾಧಿಸುವ ಸಮಗ್ರೀಕರಣ, ಪೂರ್ಣಕರಣ; ಅನುಬಂಧ; ಅನುಕಲನ (ಇಂಟಿಗ್ರೇಷನ್). ಈ ಪ್ರಕ್ರಿಯೆಯ ಫಲವಾಗಿ ಪ್ರತಿ ಬಿಡಿ ಭಾಗವೂ ಪುರ್ಣತೆಯ ಅಥವಾ ಸಮಗ್ರತೆಯ ಅಂಗವಾಗಿ ಮಾರ್ಪಡುತ್ತದೆ. ಆ ಭಾಗಗಳು ಪರಸ್ಪರವಾಗಿಯಲ್ಲದೆ ಪುರ್ಣತೆಯ ಜೊತೆಗೆ ಸಂಬಂಧ ತಳೆಯುತ್ತವೆ; ತಮ್ಮ ಪ್ರತ್ಯೇಕತೆಯನ್ನು ಕರಗಿಸಿಕೊಳ್ಳುತ್ತವೆ. ಐಕ್ಯ ಸ್ಥಾಪಿಸುವ ಎಲ್ಲ ಕ್ರಿಯೆಯೂ ಏಕೀಕರಣವೇ. ಸಮಾಜ, ಸಂಸ್ಕೃತಿ, ರಾಜಕೀಯ, ಆಡಳಿತ, ಕೈಗಾರಿಕೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಏಕೀಕರಣ ಸಾಧ್ಯ. ಈ ನಾನಾ ಬಗೆಯ ಏಕೀಕರಣಗಳನ್ನು ಕುರಿತ ಲೇಖನಗಳನ್ನು ಮುಂದೆ ಕೊಡಲಾಗಿದೆ.

ಏಕೀಕರಣ, ಆಡಳಿತ ಮತ್ತು ರಾಜಕೀಯ: ಆಡಳಿತ

ಬದಲಾಯಿಸಿ

ಆಡಳಿತ ವೈಯಕ್ತಿಕವಾಗಿರಬಹುದು ಅಥವಾ ಸಾರ್ವಜನಿಕವಾಗಿರಬಹುದು. ಸರ್ಕಾರ ನಿಶ್ಚಿತ ಗುರಿ ತಲುಪಲು ಕೈಕೊಳ್ಳುವ ಚಟುವಟಿಕೆ ಅಥವಾ ಕಾರ್ಯವಿಧಾನವೇ ಸಾರ್ವಜನಿಕ ಆಡಳಿತ. ಸರ್ಕಾರ ಆಡಳಿತ ಶಾಖೆಗಳಿಂದ ಕೂಡಿದ ವ್ಯವಸ್ಥೆ. ಸಾರ್ವಜನಿಕ ಆಡಳಿತ ಸುಲಭವಾದ ಕಾರ್ಯವಲ್ಲ. ಅದು ಅನೇಕ ಗುರಿಗಳನ್ನು ಏಕಕಾಲಕ್ಕೆ ಸಾಧಿಸಬೇಕಾಗುತ್ತದೆ. ಆದ್ದರಿಂದ ಅದು ಅನೇಕ ಆಡಳಿತ ಇಲಾಖೆಗಳನ್ನು ಹೊಂದಿರಬೇಕಾದ್ದು ಅನಿವಾರ್ಯ. ಆಧುನಿಕ ಸರ್ಕಾರಗಳ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದ್ದು ಅದು ರಕ್ಷಣೆ, ವಿದೇಶ ವ್ಯವಹಾರ, ಸಾರಿಗೆ ಸಂಪರ್ಕ, ಗೃಹ, ಹಣಕಾಸು, ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಕಾಯಿದೆ ಮುಂತಾದ ಅನೇಕ ಇಲಾಖೆಗಳನ್ನು ಹೊಂದಿರುತ್ತದೆ. ಈ ವಿಧದ ಇಲಾಖೆಗಳು ಏಕಕಾಲಕ್ಕೆ ಪ್ರತ್ಯೇಕವಾಗಿಯೂ ಆಡಳಿತಯಂತ್ರದ ಅಂಗಗಳಾಗಿಯೂ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ವಿವಿಧ ಇಲಾಖೆಗಳನ್ನು ಏಕೀಕರಿಸಿ ಒಂದು ಆಡಳಿತ ಯಂತ್ರವನ್ನು ಸಂಘಟಿಸುವ ಕಾರ್ಯವಿಧಾನವೇ ಆಡಳಿತ ಏಕೀಕರಣ. ಇಂಥ ಏಕೀಕೃತ ಆಡಳಿತಯಂತ್ರದಲ್ಲಿ ನಾನಾ ಇಲಾಖೆಗಳು ಅದರ ಅಂಗಗಳಾಗಿ ಚಟುವಟಿಕೆ ನಡೆಸಿ ಅದಕ್ಕೆ ಪುರ್ಣತೆ ನೀಡುತ್ತವೆ. ಹೀಗೆ ಏಕೀಕರಿಸಲಾದ ಆಡಳಿತ ವ್ಯವಸ್ಥೆಯಲ್ಲಿ ಪ್ರತಿ ಕಾರ್ಯಸಂಸ್ಥೆಯೂ ನೇರವಾಗಿಯಾಗಲಿ ಇಲಾಖೆಗಳ ಮೂಲಕವಾಗಿಯಾಗಲಿ ಮುಖ್ಯ ಕಾರ್ಯದರ್ಶಿಯ ಅಥವಾ ಶಾಸನಾಂಗದ ನೇರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಇದರಿಂದ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಅಥವಾ ಯೋಜನೆಯನ್ನು ಸಿದ್ಧಪಡಿಸಲು ಅನುಕೂಲವಾಗುತ್ತದೆ. ಇಂಥ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ಮುಖ್ಯ ಕಾರ್ಯದರ್ಶಿಯಿಂದ ವಿವಿಧ ಇಲಾಖೆಗಳ ಮೂಲಕ ತಳದ ಕೊನೆಯವರೆಗೆ ಪಸರಿಸುತ್ತದೆ.[]

ಏಕೀಕೃತ ಆಡಳಿತ

ಬದಲಾಯಿಸಿ

ಇಂದು ಸಾಮಾನ್ಯವಾಗಿ ಎಲ್ಲ ಸರ್ಕಾರಗಳೂ ಈ ವ್ಯವಸ್ಥೆ ಅನುಸರಿಸುತ್ತಿವೆ. ಭಾರತದಲ್ಲಿ ಕೂಡ ಏಕೀಕೃತ ಆಡಳಿತ ವ್ಯವಸ್ಥೆಯಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ರಾಷ್ಟ್ರಪತಿಯ ಹೆಸರಿನಲ್ಲಿ ಮತ್ತು ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿಯ ಅಧೀನಕ್ಕೊಳಪಟ್ಟಿರುತ್ತವೆ. ಈ ಪದ್ಧತಿ ಅನೇಕ ರೀತಿಯಿಂದ ಪ್ರಯೋಜನಕಾರಿಯಾದದ್ದು. ಇದರಿಂದಾಗಿ ಸರ್ಕಾರದ ವಿವಿಧ ಸೇವಾಸಂಸ್ಥೆಗಳನ್ನು ಒಗ್ಗೂಡಿಸಲು ಅನುಕೂಲವಾಗುತ್ತದೆ; ಅಧಿಕಾರವ್ಯಾಪ್ತಿ ಸರಾಗವಾಗಿ ಹೊಣೆಗಾರಿಕೆ ನಿಶ್ಚಿತವಾಗುತ್ತದೆ. ಅಲ್ಲದೆ ವಿವಿಧ ಇಲಾಖೆಗಳು ಒಂದೆಡೆ ಬರುವುದರಿಂದ ತಾಂತ್ರಿಕ ಆವಶ್ಯಕತೆಗಳನ್ನು ಸುಲಭವಾಗಿ ಪುರೈಸಿಕೊಳ್ಳಬಹುದು. ಕಾರ್ಯದ ಪುನರಾವರ್ತನೆ ಅಥವಾ ಘರ್ಷಣೆಯಾಗದಂತೆ ನೋಡಿಕೊಳ್ಳುವುದು ಸಾಧ್ಯ. ಇಲಾಖೆ-ಇಲಾಖೆಗಳ ನಡುವೆ ಸಹಕಾರ ಹೆಚ್ಚಿಸಿ ಆಡಳಿತ ಮಟ್ಟವನ್ನು ಸುಧಾರಿಸಲು ಅನುವಾಗುತ್ತದೆ. ಇದಲ್ಲದೆ ಆಯವ್ಯಯಗಳ ಅಂದಾಜನ್ನು ಯೋಗ್ಯರೀತಿಯಲ್ಲಿ ರಚಿಸಿ ಯೋಜನೆಗಳನ್ನು ಯಶಸ್ವಿಯಾಗಿಸಲೂ ಸಹಕಾರಿಯಾಗುತ್ತದೆ. ಆದ್ದರಿಂದ ಏಕೀಕೃತ ಆಡಳಿತ ವ್ಯವಸ್ಥೆಯಲ್ಲಿ ಸಮತೋಲನ ಸಾಧ್ಯ.ಈ ಬಗೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕಾದರೆ ಆಡಳಿತ ಸಂಸ್ಥೆಗಳ ಪುನರ್ ವಿಂಗಡಣೆಯಾಗುವುದು ಆವಶ್ಯ. ಭಾರತ ಸ್ವಾತಂತ್ರ್ಯ ಪಡೆದ ಅನಂತರ ಈ ಪ್ರಕಾರದ ಆಡಳಿತ ವ್ಯವಸ್ಥೆ ರಚಿತವಾಗಿದ್ದು, ಆ ಕಾರ್ಯ ಮುಂದುವರಿಯುತ್ತಿದೆ. ಈ ರೀತಿ ಏಕೀಕೃತವಾದ ಆಡಳಿತ ವ್ಯವಸ್ಥೆಗೂ ಕೇಂದ್ರೀಕೃತ ಆಡಳಿತ ವ್ಯವಸ್ಥೆಗೂ ಬಹಳ ವ್ಯತ್ಯಾಸವುಂಟು. ಕೇಂದ್ರೀಕೃತ ಆಡಳಿತ ವ್ಯವಸ್ಥೆ ವಸ್ತುತಃ ಏಕೀಕೃತ ಆಡಳಿತ ವ್ಯವಸ್ಥೆಗೆ ವಿರುದ್ಧವಾದದ್ದು. ಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ, ಮೇಲಿನಿಂದ ಕೆಳಗಿನವರೆಗೆ ಅಧಿಕಾರ ಹಂತಹಂತವಾಗಿ ಹರಿದುಬರುತ್ತದೆ. ಇಂಥ ವ್ಯವಸ್ಥೆಯಲ್ಲಿ ಆಡಳಿತಯಂತ್ರ ನಿಧಾನವಾಗಿ ಚಲಿಸುವುದರಿಂದ ಆಡಳಿತ ಕಾರ್ಯಗಳಲ್ಲಿ ವಿಳಂಬವಾಗುವುದು ಸಹಜ. ಈ ದೋಷವನ್ನು ನಿವಾರಿಸಲೆಂದೇ ಆಡಳಿತದ ವಿಕೇಂದ್ರೀಕರಣವನ್ನು ಅನುಮೋದಿಸಲಾಗಿದೆ. ಆದರೆ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲೂ ಅನೇಕ ನ್ಯೂನತೆಗಳಿರುವುದು ಕಂಡುಬಂದಿದೆ. ಹೀಗೆ ಕೇಂದ್ರೀಕೃತ ಮತ್ತು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗಳಿಗಿಂತ ಏಕೀಕೃತ ಆಡಳಿತ ವ್ಯವಸ್ಥೆಯೇ ಹೆಚ್ಚು ಉಪಯುಕ್ತವಾದದ್ದೆನ್ನಬಹುದು. ಈ ಕಾರಣದಿಂದ ಇಂದು ಅನೇಕ ರಾಷ್ಟ್ರಗಳು ತಮ್ಮ ಆಡಳಿತ ಯಂತ್ರರಚನೆಯಲ್ಲಿ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣಗಳಿಗಿಂತ ಏಕೀಕೃತ ಆಡಳಿತ ವ್ಯವಸ್ಥೆಯನ್ನು ಹೆಚ್ಚುಹೆಚ್ಚಾಗಿ ಅಳವಡಿಸಿಕೊಳ್ಳುತ್ತಲಿವೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲೂ ಏಕೀಕೃತ ಆಡಳಿತ ವ್ಯವಸ್ಥೆಯನ್ನು ಕಾಣಬಹುದು.[]

ರಾಜಕೀಯ ಏಕೀಕರಣ

ಬದಲಾಯಿಸಿ

ಒಂದು ಭೌಗೋಳಿಕ ಪ್ರದೇಶದಲ್ಲಿರುವ ಜನರನ್ನೆಲ್ಲ ಒಂದು ಸರ್ಕಾರ ಅಥವಾ ಆಡಳಿತವ್ಯವಸ್ಥೆಗೆ ಒಳಪಡಿಸಿ, ಅವರಲ್ಲಿ ತಾವೆಲ್ಲ ಒಂದೆಂಬ ಭಾವನೆ ಮೂಡುವಂತೆ ಕ್ರಮಕೈಕೊಳ್ಳುವುದೇ ರಾಜಕೀಯ ಏಕೀಕರಣ. ಒಂದು ಆಡಳಿತವ್ಯವಸ್ಥೆಗೆ ಒಳಪಟ್ಟವರು ಒಂದು ರಾಷ್ಟ್ರದವರೆಂಬ ಕಲ್ಪನೆ ಹೊಂದಿ ಏಕೀಭವಿಸುವುದು ಸಹಜವೂ ಅನಿವಾರ್ಯವೂ ಆಗಿ ಪರಿಣಮಿಸಬಹುದು. ಸಾಮಾನ್ಯವಾಗಿ ಒಂದು ರಾಷ್ಟ್ರದಲ್ಲಿ ಅನೇಕ ಬುಡಕಟ್ಟುಗಳೂ ಜನಾಂಗಗಳೂ ಧರ್ಮಗಳೂ ಹಿತಾಸಕ್ತಿಗಳೂ ರಾಜಕೀಯ ಪಕ್ಷಗಳೂ ಗುಂಪುಗಳೂ ಪ್ರದೇಶಗಳೂ ಇರುತ್ತವೆ. ಇವನ್ನೆಲ್ಲ ಒಂದುಗೂಡಿಸಿ ಇವೆಲ್ಲ ಯಾವುದಾದರೊಂದು ಸಾಮಾನ್ಯ ಸೂತ್ರಕ್ಕೆ ಬದ್ಧವಾಗುವ ಹಾಗೆ ಮಾಡುವುದು ರಾಜಕೀಯ ಏಕೀಕರಣದ ಗುರಿ. ರಾಜಕೀಯ ವ್ಯಕ್ತಿಗಳ, ಘಟಕಗಳ, ಗುಂಪುಗಳ, ಸ್ಥಳೀಯ ಸಂಸ್ಥೆಗಳ, ಪ್ರದೇಶಗಳ ಅಥವಾ ದೇಶಗಳ ನಡುವೆ ಏಕತೆ ಸಾಧಿಸಿ ಅವುಗಳ ಪರಸ್ಪರ ರಾಜಕೀಯ ಚಟುವಟಿಕೆಗಳಿಗೆ ಒಂದು ನಿರ್ದಿಷ್ಟ ರೂಪು ಕೊಡುವುದೇ ರಾಜಕೀಯ ಏಕೀಕರಣ ಅಥವಾ ಅನುಕಲನ. ರಾಜಕೀಯ ಏಕೀಕರಣದ ಬಗ್ಗೆ ಏಕ್ ಕೆಲವು ಮುಖ್ಯ ಅಂಶಗಳನ್ನು ಸೂಚಿಸಿದ್ದಾನೆ:

  • 1. ರಾಜ್ಯದ ಆಡಳಿತದ ಬಗ್ಗೆ ಪ್ರಜೆಗಳಿಗೆ ದೃಢವಾದ ಭಕ್ತಿಯಿರಬೇಕು. ರಾಜ್ಯ ತಮಗಿಂತಲೂ ಮಹತ್ತರವಾದ್ದು ಎಂಬ ನಂಬುಗೆ ಅವರಿಗೆ ಇರಬೇಕು.
  • 2. ರಾಜಕೀಯ ಪಕ್ಷಗಳು ಒಂದಾಗಿ ಸಹಕರಿಸುವ ಅವಕಾಶವಿರಬೇಕು.
  • 3. ಪೈಪೋಟಿಗಿಳಿದಿರುವ ಹಿರಿಯ ರಾಜಕೀಯ ಪಕ್ಷಗಳ ಗಮನವನ್ನು ಬೇರೆ ಕಡೆ ತಿರುಗಿಸಬೇಕು.
  • 4. ರಾಜಕೀಯ ಪಕ್ಷಗಳ ಸದಸ್ಯರು ರಾಜಕೀಯ ಹುದ್ದೆಯ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕಲ್ಲದೆ, ಆ ಹುದ್ದೆಯನ್ನು ಅಲಂಕರಿಸುವ ವ್ಯಕ್ತಿಯನ್ನಲ್ಲ.
  • 5. ರಾಜ್ಯಗಳು ಎಲ್ಲ ಸಂದರ್ಭದಲ್ಲೂ ಒಕ್ಕೂಟಕ್ಕೆ ವಿಧೇಯವಾಗಿರಬೇಕು.
  • 6. ಬಹುಕಾಲದಿಂದ ಸ್ಥಿರವಾಗಿರುವ ಗುಂಪಿನಲ್ಲಿ ಏಕೀಕರಣವಾಗಬೇಕು.
  • 7. ರಾಜಕೀಯ ವ್ಯವಸ್ಥೆ ಮೇಲಿಂದ ಮೇಲೆ ಮಾರ್ಪಡಿಸಲು ಬಾರದಂತಿರಬೇಕು.

ರಾಜಕೀಯ ವ್ಯವಸ್ಥೆಯ ಕಕ್ಷೆ

ಬದಲಾಯಿಸಿ

ರಾಜಕೀಯ ಏಕೀಕರಣದಲ್ಲಿ ಮುಖ್ಯವಾಗಿ ಭೌಗೋಳಿಕ ಪ್ರದೇಶಗಳನ್ನು ಮತ್ತು ಅದರ ಜನತೆಯನ್ನು ಒಂದು ರಾಜಕೀಯ ವ್ಯವಸ್ಥೆಯ ಕಕ್ಷೆಯಲ್ಲಿ ತರುವ ಪ್ರಯತ್ನವನ್ನು ಕಾಣಬಹುದು. ಭಿನ್ನ ರೀತಿಯ ಜನರನ್ನು, ಭಿನ್ನ ರೀತಿಯ ಪ್ರದೇಶಗಳನ್ನು ಒಂದುಗೂಡಿಸುವಾಗ ಅವುಗಳಲ್ಲಿ ಒಂದೇ ವಿಧದ ವರ್ತನೆಯನ್ನುಂಟುಮಾಡುವ ಕೆಲವು ಅಂಶಗಳು ಇರುವುದು ವಿಹಿತ. ಉದಾಹರಣೆಗಾಗಿ, ಸ್ವತಂತ್ರವಾಗಿದ್ದ ದೇಶಗಳು ತಮ್ಮ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಾಗಲಿ ಇತರ ಪ್ರಬಲ ರಾಷ್ಟ್ರಗಳಿಂದ ಒದಗಬಹುದಾದ ಗಂಡಾಂತರ ಮತ್ತು ಆಕ್ರಮಣವನ್ನು ಎದುರಿಸುವುದಕ್ಕಾಗಲಿ ತಮ್ಮಲ್ಲೇ ಒಂದು ಕೂಟ ರಚಿಸಿಕೊಂಡು ಸಂಯುಕ್ತ ರಾಜ್ಯವಾಗಿ ಪರಿವರ್ತಿತವಾಗಬಹುದು. ಈ ಬಗೆಯ ಒಕ್ಕೂಟದಲ್ಲಿ ಸೇರುವಂಥ ಜನರು ಒಂದೇ ಬಗೆಯ ಧರ್ಮ ಸಂಸ್ಕೃತಿಗಳಿಗೆ ಒಳಪಟ್ಟವರೂ ಒಂದೇ ಭಾಷೆ ಆಡುವವರೂ ಆಗಿದ್ದರೆ ಅದು ಹೆಚ್ಚು ಭದ್ರವಾಗಿರುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್‌ ದೇಶಗಳು ಒಂದುಗೂಡಿದಾಗ ಇದು ಕೇವಲ ರಾಜಕೀಯ ಒಂದುಗೂಡಿಕೆ ಮಾತ್ರವಾಗಿರದೆ ಇಂಗ್ಲೆಂಡಿನ ಚರ್ಚಿನ ಮುಖಾಂತರ ಧಾರ್ಮಿಕ ಒಂದುಗೂಡುವಿಕೆಯೂ ಆಗಿತ್ತು. ಆದರೆ ಅಮೆರಿಕ ಸಂಯುಕ್ತಸಂಸ್ಥಾನ ಒಂದುಗೂಡಿದಾಗ ಅದಕ್ಕೆ ಇಂಥ ಧಾರ್ಮಿಕ ತಳಹದಿ ಇರಲಿಲ್ಲ. ಅಂದು ವಸಾಹತುಗಳಾಗಿದ್ದ ಅನೇಕ ಪ್ರದೇಶಗಳು ತಮ್ಮವೇ ಆದ ಪರಂಪರೆಗಳನ್ನು ಹೊಂದಿದ್ದ ಭಾಗಗಳಾಗಿದ್ದರೂ ಅವು ಅಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಒಂದಾಗಬೇಕಾಯಿತು. ಭಾರತ ಬ್ರಿಟಿಷರ ಆಡಳಿತದಲ್ಲಿದ್ದಾಗ ಒಂದು ರೀತಿಯ ರಾಜಕೀಯ ಏಕೀಕರಣ ಹಾಗೂ ಆಡಳಿತ ಏಕತೆ ಉಂಟಾಗಿತ್ತು. ಆದರೆ ಅದು ಸಂಪುರ್ಣ ಐಕ್ಯವಾಗಿರಲಿಲ್ಲ. ರಾಜಕೀಯವಾಗಿ ಇಲ್ಲಿ ಹಲವಾರು ಪ್ರಾಂತ್ಯಗಳೂ ದೇಶೀಯ ಸಂಸ್ಥಾ£ Àಗಳೂ ಇದ್ದುವು. ಸ್ವಾತಂತ್ರ್ಯಾನಂತರ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸ್ಥಾಪಿಸಲಾಯಿತು. ರಾಜ್ಯಗಳನ್ನೂ ಕೇಂದ್ರ ಶಾಸಿತ ಪ್ರದೇಶಗಳನ್ನೂ ಒಳಗೊಂಡ ಭಾರತ ಒಕ್ಕೂಟ ಈಗ ಅಸ್ತಿತ್ವದಲ್ಲಿದೆ. ಭಾರತದಲ್ಲಿ ಭಿನ್ನ ಪ್ರದೇಶಗಳೂ ಭಿನ್ನ ಭಾಷೆಗಳೂ ಭಿನ್ನ ಧರ್ಮಗಳೂ ಭಿನ್ನ ಸಂಸ್ಕೃತಿಗಳೂ ಇದ್ದರೂ ರಾಜಕೀಯ ಏಕೀಕರಣವನ್ನು ಕಾಣಬಹುದು. ಆದರೆ ಇಂಥ ಸಂದರ್ಭದಲ್ಲಿ ಒಂದು ವಿಶಿಷ್ಟ ಸಮಸ್ಯೆ ಉದ್ಭವಿಸುತ್ತದೆ. ಎಂದರೆ ವಿಭಿನ್ನ ರೀತಿಯ ಜನ ಹಾಗು ಪ್ರದೇಶಗಳು ಯಾವುದೇ ಸಂದರ್ಭದಲ್ಲಿ ಅನಿವಾರ್ಯವಾಗಿ ರಾಜಕೀಯ ಒಗ್ಗಟ್ಟನ್ನು ಸ್ಥಾಪಿಸಿದರೂ ಇಂಥ ಏಕೀಕರಣ ಸುಮಧುರ ಮತ್ತು ಶಾಶ್ವತ ಆಗಬೇಕಾದರೆ ಕೇವಲ ಬಾಹ್ಯ ಒಂದುಗೂಡುವಿಕೆ ಇದ್ದರೆ ಸಾಲದು. ಅದರೊಡನೆ ಆಂತರಿಕ ಒಂದುಗೂಡುವಿಕೆ ಅಥವಾ ಭಾವೈಕ್ಯ ಅತ್ಯವಶ್ಯ. ಹಾಗಿಲ್ಲದ ಪಕ್ಷದಲ್ಲಿ ಅಂಥ ರಾಜಕೀಯ ಒಂದುಗೂಡುವಿಕೆ ಅಪಾಯಕಾರಿಯಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದಲೇ ಭಾರತದ ಪ್ರಧಾನಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂರವರು ಭಾರತೀಯರಲ್ಲಿ ಆತ್ಮೀಯತೆ ಬೆಳೆದು ಭಾವೈಕ್ಯ ಉಂಟಾಗಬೇಕೆಂದು ಪದೇ ಪದೇ ಹೇಳುತ್ತಿದ್ದರು. ಇಲ್ಲದಿದ್ದರೆ ಅಂತಃಕಲಹಗಳು ಹೆಚ್ಚಾಗಿ ಒಕ್ಕೂಟದ ರಾಜ್ಯಗಳ ನಡುವೆ ಗಡಿಸಂಬಂಧವಾಗಿಯಾಗಲಿ ನದೀ ನೀರಿನ ವಿತರಣೆಗಾಗಲಿ ಕಲಹಗಳು ಉಂಟಾಗಿ ಏಕತೆಗೆ ಧಕ್ಕೆ ತಗಲಬಹುದು. ಸಾಂಸ್ಕೃತಿಕವಾಗಿಯೂ ಧಾರ್ಮಿಕವಾಗಿಯೂ ಭದ್ರವಾದ ಏಕತೆ ಸ್ಥಾಪಿಸಿರುವೆವೆಂದು ಕೊಂಡಿರುವ ದೇಶಗಳಲ್ಲೂ ಪದೇ ಪದೇ ಪ್ರಾದೇಶಿಕ ಸಾಂಸ್ಕೃತಿಕ ಅಥವಾ ಆರ್ಥಿಕ ಹಿತಾಸಕ್ತಿ ಭಿನ್ನತೆಗಳು ಬೃಹದಾಕಾರ ತಾಳಿ ರಾಜಕೀಯ ಏಕತೆಯನ್ನೊಡೆಯುವಂಥ ಅಪಾಯದ ಹಂತ ಮುಟ್ಟುವುದುಂಟು. ಬ್ರಿಟಿಷ್ ಸಂಯುಕ್ತ ರಾಜ್ಯದಲ್ಲಿ ವೆಲ್ಸ್‌ ಹಾಗೂ ಸ್ಕಾಟ್ ಜನರ ಆತ್ಮಪ್ರತ್ಯಯ ಬೆಳೆಯುತ್ತಿರುವುದಾದರೂ ಅದು ಏಕತೆಯ ಕಟ್ಟನ್ನೊಡೆಯುವ ಹಂತಕ್ಕೆ ಬಂದಿಲ್ಲ. ಆದರೆ ಭಾರತದಲ್ಲಿ ಹಲವು ಶತಮಾನಗಳ ಕಾಲ ಒಟ್ಟಿಗಿದ್ದವರೇ ಭಾರತ-ಪಾಕಿಸ್ತಾನಗಳ ಅಡಿಯಲ್ಲಿ ರಾಜ್ಯವನ್ನು ಹಂಚಿಕೊಂಡದ್ದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳ ವೈಪರೀತ್ಯದ ಪರಿಣಾಮ. ನಾನಾ ಸಂಸ್ಕೃತಿಯುಕ್ತವಾದ ಮತ್ತು ಹಲವಾರು ರಾಷ್ಟ್ರೀಯ ಮನೋಧರ್ಮಗಳಿರುವ ರಾಜ್ಯಗಳು ಸೋವಿಯತ್ ಒಕ್ಕೂಟದಡಿಯಲ್ಲಿ ಸಾಧಿಸಿರುವ ಏಕತೆಯನ್ನು ಭಿನ್ನತೆಗಳ ನಡುವಣ ಏಕತೆಯೆನ್ನ ಬಹುದು. ಸಮಾನ ಗುರಿಯೇ ಈ ಭಿನ್ನ ಸಂಸ್ಕೃತಿಗಳ ಏಕತೆಯ ಸೂತ್ರ.

ಜಾಗತಿಕ ಸರ್ಕಾರ ಸ್ಥಾಪನೆ

ಬದಲಾಯಿಸಿ

ಇದೂ ಅಲ್ಲದೆ ಇಂದು ಜಾಗತಿಕ ಸರ್ಕಾರ ಸ್ಥಾಪನೆಯ ದಿಶೆಯಲ್ಲಿ ಹಲವರು ವಿಚಾರ ಮಾಡುತ್ತಿದ್ದಾರೆ. ಕೇವಲ ರಾಷ್ಟ್ರಗಳ ಒಕ್ಕೂಟವಲ್ಲದೆ ಅಂತಾರಾಷ್ಟ್ರೀಯ ಒಕ್ಕೂಟ ಸಾಧಿಸುವುದರ ಮೂಲಕ ಜಾಗತಿಕ ಸರ್ಕಾರ ಸ್ಥಾಪಿಸುವ ಕನಸು ಕಾಣುವವರಿದ್ದಾರೆ. ಈ ಒಕ್ಕೂಟದ ಮೂಲಕ ವಿಶ್ವಶಾಂತಿ ಸ್ಥಾಪನೆಯಾಗಬೇಕೆಂಬ ಆಕಾಂಕ್ಷೆಯಿಂದ 19ನೆಯ ಶತಮಾನದ ಕೊನೆಯ ಭಾಗದಿಂದ ಇಂದಿನವರೆಗೆ ಅನೇಕ ಪ್ರಯತ್ನಗಳು ನಡೆದಿವೆ. ಅಂತಾರಾಷ್ಟ್ರೀಯ ಅಂಚೆಸಂಸ್ಥೆ, ಅಂತಾರಾಷ್ಟ್ರೀಯ ಕಾರ್ಮಿಕಸಂಸ್ಥೆ, ಅಂತಾರಾಷ್ಟ್ರೀಯ ರೆಡ್ಕ್ರಾಸ್, ಅಂತಾರಾಷ್ಟ್ರೀಯ ಸಂಪರ್ಕಸಾಧನ ಸಂಸ್ಥೆ ಮುಂತಾದವುಗಳಲ್ಲದೆ ರಾಷ್ಟ್ರಕೂಟ ವಿಶ್ವಸಂಸ್ಥೆ ಇವು ಈ ಬಗೆಯ ವಿಶ್ವ ಏಕೀಕರಣ ಪ್ರಯತ್ನದ ನಿದರ್ಶನಗಳು.

ಏಕೀಕರಣ, ಕೈಗಾರಿಕೆಯಲ್ಲಿ

ಬದಲಾಯಿಸಿ

ಆಧುನಿಕ ಕೈಗಾರಿಕೆಯ ಒಂದು ಮುಖ್ಯ ಲಕ್ಷಣವೆಂದರೆ ಕಾರ್ಖಾನೆಗಳ ಗಾತ್ರದಲ್ಲಿ ಕಂಡುಬರುವ ಅತಿ ಬೆಳೆವಣಿಗೆಯ ಪ್ರವೃತ್ತಿ. ಕಾರ್ಖಾನೆಗಳ ಗಾತ್ರ ಎರಡು ವಿಧಗಳಲ್ಲಿ ಬೆಳೆಯುತ್ತದೆ. ಕಾರ್ಖಾನೆಗಳು ಸ್ವಾಭಾವಿಕ ವಾಗಿಯೇ ಬೆಳೆದು ದೊಡ್ಡ ಉದ್ಯಮಗಳಾಗಿ ಪರಿಣಮಿಸಬಹುದು. ಉದಾಹರಣೆಗೆ 1,000 ಘಟಕಗಳನ್ನು ಉತ್ಪಾದಿಸುತ್ತಿರುವ ಒಂದು ಕಾರ್ಖಾನೆ ಕೆಲವು ವರ್ಷಗಳ ಅನಂತರ 10,000 ಘಟಕಗಳನ್ನು ತಯಾರಿಸುವ ದೊಡ್ಡ ಉದ್ಯಮವಾಗಿ ಬೆಳೆಯಬಹುದು. ಸ್ವಾಭಾವಿಕ ಬೆಳೆವಣಿಗೆಯಿಂದ ಕಾರ್ಖಾನೆಗಳು ಬೃಹದ್ ಗಾತ್ರ ಪಡೆಯಬೇಕಾದರೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಸಣ್ಣ ಉದ್ಯಮ ಸಂಸ್ಥೆಗಳು ಅತ್ಯಲ್ಪಕಾಲದಲ್ಲಿ ಬೃಹತ್ ಉದ್ಯಮಗಳಾಗಿ ಬೆಳೆಯುವ ಮತ್ತೊಂದು ಮಾರ್ಗವೆಂದರೆ ಏಕೀಕರಣ.

ಬೃಹದ್ ಗಾತ್ರದ ಅನುಕೂಲ

ಬದಲಾಯಿಸಿ

ಸ್ಪರ್ಧೆಯ ಅನಿಷ್ಟಗಳನ್ನು ನಿವಾರಿಸಿಕೊಳ್ಳಲೋ ಬೃಹದ್ ಗಾತ್ರದ ಅನುಕೂಲಗಳನ್ನು ಪಡೆಯಲೋ ಹಲವು ಉದ್ಯಮಗಳು ಒಂದಾಗುವ ಎಲ್ಲ ಕ್ರಮಗಳೂ ಸ್ಥೂಲವಾಗಿ ಏಕೀಕರಣವೇ, ಇದನ್ನು ಉದ್ಯಮಕೂಟ ಎಂಬ ಲೇಖನದಲ್ಲಿ ವಿವರಿಸಲಾಗಿದೆ. ಏಕೀಕರಣದ ಫಲವಾಗಿ ಒಂದು ಕೈಗಾರಿಕಾ ಸಂಸ್ಥೆಯ ಬೆಳೆವಣಿಗೆಯಾಗುವುದಕ್ಕೂ ಉದ್ಯಮಗಳ ಸಂಘಟನೆಯಿಂದ ಆಗುವ ಬೆಳವಣಿಗೆಗೂ ಬಹಳ ವ್ಯತ್ಯಾಸವುಂಟು. ಕಚ್ಚಾಸಾಮಗ್ರಿಯನ್ನು ಪಡೆಯುವುದರಿಂದ ಹಿಡಿದು ಪದಾರ್ಥಗಳು ಅನುಭೋಗಿಯ ಕೈಸೇರುವವರೆಗೆ ತಯಾರಿಕೆ ಹಂಚಿಕೆಗಳ ಎಲ್ಲ ಘಟ್ಟಗಳ ಮೇಲೂ ಹತೋಟಿ ಹೊಂದುವುದೇ ಕೈಗಾರಿಕೆಯ ಏಕೀಕರಣ. ತಯಾರಿಕೆಯ ಒಂದು ಕಾರ್ಯಗತಿಯಿಂದ ಇನ್ನೊಂದು ಕಾರ್ಯಗತಿಗೆ ಸುಲಲಿತವಾಗಿ ಮುಂದುವರಿಯುವಂಥ ಸುವ್ಯವಸ್ಥೆಯೇ ಕೈಗಾರಿಕೆಯ ನಿಜವಾದ ಏಕೀಕರಣವೆನ್ನಬಹುದು; ಸಂಘಟಿತ ಉದ್ಯಮಗುಂಪುಗಳದ್ದು ಇನ್ನೊಂದು ಬಗೆಯ ಏಕೀಕರಣ. ಇಲ್ಲಿ ಈ ಉದ್ಯಮಗಳು ಸಂಘಟಿತವಾಗದಿದ್ದರೆ ಮಾರುಕಟ್ಟೆಯಲ್ಲಿ ಇವುಗಳ ನಡುವೆ ಸ್ಪರ್ಧೆ ಇರುತ್ತದೆ. ಕೈಗಾರಿಕೆಯ ನಾನಾ ಕಾರ್ಯಗತಿಗಳ ಸಂಯೋಜನೆಯಿಂದ ಸಂಭವಿಸುವ ಏಕೀಕರಣದ ವಿವಿಧ ಘಟಕಗಳ ನಡುವೆ ವಾಸ್ತವವಾಗಿ ಪರಸ್ಪರ ಸ್ಪರ್ಧೆಯ ಪ್ರಶ್ನೆಯೇ ಇರುವುದಿಲ್ಲ. ಕಚ್ಚಾಸಾಮಗ್ರಿಯ ಸರಬರಾಜು ಮತ್ತು ಮಾರುಕಟ್ಟೆಗಳ ಹತೋಟಿ ಹೊಂದಬಯಸುವ ತಯಾರಿಕೆದಾರನ ವತಿಯಿಂದಲೋ ತಾನು ಮಾರಾಟಮಾಡುವ ಸರಕುಗಳ ಮೇಲೆ ಸಮರ್ಪಕ ನಿಯಂತ್ರಣ ಹೊಂದಲಿಚ್ಛಿಸುವ ವ್ಯಾಪಾರಿಯ ಪ್ರಯತ್ನದಿಂದಲೋ ತನ್ನ ಉತ್ಪಾದನೆಗೆ ಗ್ರಾಹಕರ ಭರವಸೆ ಪಡೆಯಬಂiÀÄಸುವ ಕಚ್ಚಾಸಾಮಗ್ರಿ ತಯಾರಕನಿಂದಲೋ ಅಥವಾ ಇವರೆಲ್ಲರ ಪರಸ್ಪರಾವಲಂಬನದ ಅರಿವಿನ ಫಲವಾಗಿಯೋ ಈ ಬಗೆಯ ಏಕೀಕರಣ ಸಾಧ್ಯವಾಗಬಹುದು. ಆದ್ದರಿಂದ ಒಂದು ದೃಷ್ಟಿಯಿಂದ ಉದ್ಯಮ ಕೂಟಗಳು ಏಕೀಕರಣ ಪ್ರಯತ್ನಗಳೇ ಆದರೂ ಸ್ಪರ್ಧೆಯ ನಿವಾರಣೆಗಿಂತ ಹೆಚ್ಚಾಗಿ ಕೈಗಾರಿಕೆಯ ಬೆಳೆವಣಿಗೆಯ ದೃಷ್ಟಿಯಿಂದ ಏಕೀಕರಣವನ್ನು ಇಲ್ಲಿ ಪರಿಶೀಲಿಸಲಾಗಿದೆ.

ಉದಗ್ರ ಏಕೀಕರಣ

ಬದಲಾಯಿಸಿ

ಸ್ಥೂಲವಾಗಿ ಹೇಳುವುದಾದರೆ ಎಲ್ಲ ಉದ್ಯಮಗಳಲ್ಲೂ ಇಷ್ಟಿಷ್ಟು ಏಕೀಕರಣ ಇದ್ದೇ ಇರುವುದುಂಟು. ಇದು ಸಾಪೇಕ್ಷವಾದ್ದು. ಬಲು ಸಣ್ಣ ಪದಾರ್ಥವಾದ ಗುಂಡುಸೂಜಿಯ ತಯಾರಿಕೆಯಿಂದ ಹಿಡಿದು, ಅತಿ ದೊಡ್ಡ ಯಂತ್ರಸ್ಥಾವರದ ನಿರ್ಮಾಣದವರೆಗೆ ಪ್ರತಿಯೊಂದು ಉದ್ಯಮವೂ ನಾನಾ ಕಾರ್ಯಗತಿಗಳ ಸಮ್ಮಿಲನದ ಫಲ. ಒಂದು ಕಾರ್ಯಗತಿಯ ಪುರೈಕೆಯಲ್ಲೇ ಇನ್ನೊಂದು ಕಾರ್ಯಗತಿಯ ಆರಂಭ. ಅದು ಮತ್ತೊಂದಕ್ಕೆ ಪುರಕ. ಉತ್ಪಾದನೆಯ ಗಾತ್ರ ಹೆಚ್ಚಿದಂತೆಲ್ಲ ಇಡೀ ಉತ್ಪಾದನೆಯನ್ನೇ ಅಧಿಕಾಧಿಕ ಕಾರ್ಯಗತಿಗಳಾಗಿ ವಿಂಗಡಿಸಿ ಅವಕ್ಕೆ ವಿಶಿಷ್ಟವಾದ ಯಂತ್ರೋಪಕರಣಗಳನ್ನು ಅಳವಡಿಸುವ ಪ್ರಯತ್ನ ನಡೆಯುವಂತೆ, ಈ ಇಡೀ ಕೈಗಾರಿಕೆಯೇ ಒಂದು ಕಾರ್ಯಗತಿಯಾಗಿ ಪರಿಣಮಿಸಿ ಇದಕ್ಕೆ ಹಿಂದಣ ಮುಂದಣ ಕೊಂಡಿಗಳನ್ನೆಲ್ಲ ಕೂಡಿಸುವ ಪ್ರಯತ್ನವೂ ಸಾಗಬಹುದು. ಅಚ್ಚುಕೂಟದಲ್ಲಿ ಅಕ್ಷರಸಂಯೋಜನೆ, ಪಡಿಯಚ್ಚು ತಯಾರಿಕೆ, ಮುದ್ರಣ, ಮಡಿಸುವಿಕೆ, ಅಂಚು ಕತ್ತರಿ, ಹೊಲಿಗೆ, ಕಟ್ಟು ಮುಂತಾದ ನಾನಾ ಕಾರ್ಯಗತಿಗಳಿರಬಹುದು. ಆದರೆ ಇಡೀ ಅಚ್ಚುಕೂಟದ ಉದ್ಯಮವೇ ಒಂದು ಕಾರ್ಯಗತಿಯೆಂದು ಪರಿಗಣಿಸಿ ಇದಕ್ಕೆ ಹಿಂದಿನ ಕಾಗದತಯಾರಿಕೆ, ಇದಕ್ಕೆ ಹೊಂದಿಕೊಳ್ಳಬಹುದು. ಹೀಗೆ ತುದಿಯಿಂದ ಕೆಳಮೊಗನಾಗಿಯೋ ಬುಡದಿಂದ ಮೇಲುಮೊಗನಾಗಿಯೋ ನಡುವಿನಿಂದ ಊಧರ್ವ್‌ ಮತ್ತು ಅಧೋಮುಖಗಳಲ್ಲೂ ಇದು ಬೆಳೆಯಬಹುದು. ಈ ನಾನಾ ಉದ್ಯಮಗಳನ್ನೆಲ್ಲ ಕೂಡಿಸಿ ಒಂದೇ ಆಡಳಿತದೊಳಗೆ ಬರುವಂತೆ ವ್ಯವಸ್ಥೆಯಾಗಬಹುದು. ವಾಸ್ತವವಾಗಿ ಇದು ಉದಗ್ರ ಏಕೀಕರಣ ಅಥವಾ ಕೂಟವೇ ಎನ್ನಬಹುದು.

ಏಕೀಕರಣದಿಂದ ಲಭಿಸುವ ಅನುಕೂಲ

ಬದಲಾಯಿಸಿ

ಇಲ್ಲಿ ಒಂದು ಉದ್ಯಮದ ಪದಾರ್ಥವೇ ಇನ್ನೊಂದರ ಕಚ್ಚಾಸಾಮಗ್ರಿ. ನಾನಾ ಉದ್ಯಮಗಳ ಏಕೀಕರಣದಿಂದ ಇಡೀ ಉತ್ಪಾದನಸರಣಿಯೇ ಬಹುತೇಕ ಸ್ವಯಂಪುರ್ಣ ವಾಗಿ ಪರಿಣಮಿಸುವುದಲ್ಲದೆ ನಾನಾ ಬಿಡಿ ಕೈಗಾರಿಕೆಗಳ ಉಪೋತ್ಪನ್ನಗಳ ಸದುಪಯೋಗ ವಾಗುತ್ತದೆ. ಈ ಉದಗ್ರ ಏಕೀಕರಣದಿಂದ ಲಭಿಸುವ ಅನುಕೂಲಗಳಿವು: ಒಂದನೆಯದಾಗಿ, ಕಚ್ಚಾಪದಾರ್ಥಗಳಿಗಾಗಿ ಇತರ ಉದ್ಯಮ ಸಂಸ್ಥೆಗಳ ಮೇಲೆ ಅವಲಂಬಿಸುವ ಅಗತ್ಯವಿರು ವುದಿಲ್ಲ. ಉತ್ಪಾದಿಸಿದ ಪದಾರ್ಥದ ಉತ್ಕೃಷ್ಟತೆ ಏಕರೀತಿಯಾಗಿರುವುದು ಸಾಧ್ಯ. ಕಚ್ಚಾಪದಾರ್ಥದ ವ್ಯವಸ್ಥಿತ ಸರಬರಾಜಿನ ಫಲವಾಗಿ ಉತ್ಪಾದನೆ ಕ್ರಮಬದ್ಧವಾಗಿರುತ್ತದೆ. ಎರಡನೆಯದಾಗಿ, ಒಂದೇ ವಸ್ತುವನ್ನು ಬೇರೆ ಬೇರೆ ಉದ್ಯಮ ಸಂಸ್ಥೆಗಳು ಉತ್ಪಾದಿಸುವಾಗ ಪ್ರತಿಯೊಂದು ಸಂಸ್ಥೆಯೂ ತನ್ನ ಪದಾರ್ಥದ ಮಾರಾಟಕ್ಕಾಗಿ ಮತ್ತೊಂದನ್ನವಲಂಬಿಸ ಬೇಕಾಗುತ್ತದೆ. ತಮ್ಮ ಪುರೈಸಿದ ವಸ್ತುಗಳ ಕ್ರಮಬದ್ಧ ಮಾರಾಟ ಸೌಕರ್ಯ ಪಡೆಯುವ ದೃಷ್ಟಿಯಿಂದ ಇಂಥ ಸಂಸ್ಥೆಗಳು ತಮ್ಮ ಪದಾರ್ಥಗಳನ್ನು ಕೊಳ್ಳುವ ಸಂಸ್ಥೆಗಳೊಡನೆ ಏಕೀಕರಣ ಹೊಂದಬಹುದು. ಬೃಹದ್ ಗಾತ್ರ ಉತ್ಪಾದನೆಯ ಫಲವಾಗಿ ಇದಕ್ಕೆ ಅಗತ್ಯವಾದ ಕಚ್ಚಾಸಾಮಗ್ರಿಯ ಪರಿಮಾಣವೂ ಮಾರಾಟಕ್ಕಾಗಿ ಉತ್ಪಾದಿಸುವ ಸರಕುಗಳ ಮೊತ್ತವೂ ಅಧಿಕವಾಗಿರುವುದರಿಂದ ಈ ಬಗೆಯ ಉದಗ್ರ ಏಕೀಕರಣದಿಂದ ಹೆಚ್ಚು ಸೌಕರ್ಯವೂ ಉಳಿತಾಯವೂ ಸಂಭವಿಸುತ್ತವೆ.

ಸಮತಲ ಏಕೀಕರಣ

ಬದಲಾಯಿಸಿ

ಒಂದೇ ಬಗೆಯ ಪದಾರ್ಥಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಸಂಸ್ಥೆಗಳ ಏಕೀಕರಣವೂ ದಕ್ಷತೆಯಲ್ಲೂ ಮಿತವ್ಯಯದಲ್ಲೂ ಪರಿಣಮಿಸುತ್ತದೆ. ಒಂದೇ ಪದಾರ್ಥವನ್ನು ಅಥವಾ ಸಾಮ್ಯವಿರುವ ಅನೇಕ ಪದಾರ್ಥಗಳನ್ನು ಉತ್ಪಾದಿಸುವ ಬೇರೆ ಬೇರೆ ವ್ಯವಸ್ಥಾಪಕರ ಹತೋಟಿಯಲ್ಲಿರುವ ಅನೇಕ ಉದ್ಯಮಸಂಸ್ಥೆಗಳನ್ನು ಸಂಯೋಜಿಸಿದರೆ ಸಂಭವಿಸುವ ಸಮತಲ ಏಕೀಕರಣ ದಿಂದ ಈ ಪದಾರ್ಥಗಳ ಉತ್ಪಾದನೆಯ ಗಾತ್ರ ದೊಡ್ಡದಾಗಿ, ಬೃಹದ್ ಗಾತ್ರದ ಉತ್ಪಾದನೆಯ ಎಲ್ಲ ಅನುಕೂಲಗಳೂ ದೊರಕುತ್ತವೆ.

ಪಾರ್ಶ್ವಸ್ಥ ಏಕೀಕರಣ

ಬದಲಾಯಿಸಿ

ವಿವಿಧವಾದರೂ ಸಂಬಂಧಿವಸ್ತುಗಳನ್ನು ಉತ್ಪಾದಿಸುವ ಸಂಸ್ಥೆಗಳು ಸಂಯೋಜಿಸಿದರೆ ಅದು ಪಾಶರ್ವ್‌ಸ್ಥ ಏಕೀಕರಣವೆನಿಸುತ್ತದೆ. ಚಕ್ಕಳದಿಂದ ಜೀನು, ಎಕ್ಕಡ, ಕೈಚೀಲ ಮುಂತಾದವನ್ನು ಉತ್ಪಾದಿಸಬಹುದು. ಈ ಪದಾರ್ಥಗಳ ಉತ್ಪಾದನೆಯನ್ನು ಪ್ರತ್ಯೇಕವಾಗಿ ಬೇರೆ ಬೇರೆ ಉದ್ಯಮ ಸಂಸ್ಥೆಗಳು ಕೈಗೊಳ್ಳುವುದಕ್ಕೆ ಬದಲಾಗಿ ಒಂದೇ ಉದ್ಯಮ ಸಂಸ್ಥೆ ಇವೆಲ್ಲವನ್ನೂ ಉತ್ಪಾದಿಸಿದರೆ ಹಲವು ಸೌಕರ್ಯಗಳನ್ನು ಪಡೆಯಬಹುದು. ಹೀಗಾಗಿ, ಚಕ್ಕಳವನ್ನು ಕಚ್ಚಾಸಾಮಗ್ರಿಯಾಗಿ ಉಪಯೋಗಿಸುವ ಅನೇಕ ಸಂಸ್ಥೆಗಳು ಪಾಶರ್ವ್‌ಸ್ಥ ಏಕೀಕರಣ ಹೊಂದಬಹುದು.ಪಾರ್ಶ್ವಸ್ಥ ಏಕೀಕರಣ ಎರಡು ಬಗೆಯದಾಗಿರಬಹುದು. ಮೇಲಿನ ಉದಾಹರಣೆ ಯಲ್ಲಿ ತೋರಿಸಿರುವಂತೆ ಒಂದೇ ಕಚ್ಚಾಪದಾರ್ಥದಿಂದ ಉತ್ಪಾದಿಸಲಾಗುವ ಅನೇಕ ಪುರೈಸಿದ ವಸ್ತುಗಳನ್ನು ತಯಾರುಮಾಡುವ ಉದ್ಯಮಗಳು ಏಕೀಕರಣ ಹೊಂದಿದರೆ ಅದು ವಿಭಿನ್ನ ಪಾಶರ್ವ್‌ಸ್ಥ ಏಕೀಕರಣ. ಏಕೆಂದರೆ ಇಲ್ಲಿ ಒಂದೇ ಕಚ್ಚಾವಸ್ತುವಾದ ಚಕ್ಕಳ ವಿಭಿನ್ನ ಪದಾರ್ಥಗಳಿಗೆ ಕಚ್ಚಾಸಾಮಗ್ರಿಯಾಗಿ ಪರಿಣಮಿಸುತ್ತದೆ. ಈ ಉದ್ಯಮಗಳನ್ನು ಸಂಯೋಜಿಸಿದರೆ ಕಚ್ಛಾಸಾಮಗ್ರಿಯಾದ ಚಕ್ಕಳವನ್ನು ಅಧಿಕ ಪ್ರಮಾಣದಲ್ಲಿ ಕೊಳ್ಳುವ ಕಾರಣ ಬೃಹದ್ ಗಾತ್ರದ ಕೊಳ್ಳುವಿಕೆಯ ಸೌಕರ್ಯಗಳನ್ನು ಪಡೆಯಲು ಸಾಧ್ಯ. ಇದಕ್ಕೆ ವಿರುದ್ಧವಾಗಿ ಒಂದೇ ಸಿದ್ಧ ವಸ್ತುವನ್ನು ಉತ್ಪಾದಿಸುವ ಸಂಸ್ಥೆಗಳಿಗೆ ಬೇಕಾಗುವ ಬೇರೆ ಬೇರೆ ಕಚ್ಚಾಸಾಮಗ್ರಿಗಳನ್ನು ಪ್ರತ್ಯೇಕವಾಗಿ ಸರಬರಾಜು ಮಾಡುವ ಅನೇಕ ಉದ್ಯಮಗಳು ಏಕೀಕರಣ ಹೊಂದಬಹುದು. ಉದಾಹರಣೆಗೆ, ಉಕ್ಕು ತಯಾರಿಸುವ ಸಂಸ್ಥೆಗೆ ಕಬ್ಬಿಣದ ಅದಿರು, ಕಲ್ಲಿದ್ದಲು, ಕಲ್ಲಿದ್ದಲಿನ ಕಿಟ್ಟ ಮೊದಲಾದವು ಆವಶ್ಯಕ. ಇವನ್ನು ತಯಾರಿಸುವ ಉದ್ಯಮಗಳೆಲ್ಲ ಒಂದಾದರೆ ಅದರಿಂದ ಮಾರುಕಟ್ಟೆಯ ವೆಚ್ಚಗಳೆಷ್ಟೋ ಕಡಿಮೆಯಾಗುವುದಲ್ಲದೆ ಸಿದ್ಧಗೊಂಡ ಪದಾರ್ಥದ ಗುಣಮಟ್ಟ ಏಕರೀತಿಯಾಗಿರುತ್ತದೆ.

ಬಹುಭುಜ ಏಕೀಕರಣ:

ಬದಲಾಯಿಸಿ

ಯಾವುದೇ ಉದ್ಯಮಸಂಸ್ಥೆ ತನ್ನ ಉತ್ಪಾದನ ಪರಂಪರೆಗೆ ಬೇಕಾಗುವ ಸಹಾಯಕ ವಸ್ತುಗಳನ್ನಾಗಲಿ ಸೇವೆಗಳನ್ನಾಗಲಿ ತನ್ನಲ್ಲಿಯೆ, ಆಂತರಿಕವಾಗಿ, ಒದಗಿಸುವ ವ್ಯವಸ್ಥೆ ಮಾಡಿಕೊಂಡ ಪಕ್ಷದಲ್ಲಿ ಅದು ಬಹುಭುಜ ಏಕೀಕರಣ. ಉದಾಹರಣೆಗೆ, ಪಾದರಕ್ಷೆ ತಯಾರಕ ತನಗೆ ಬೇಕಾಗುವ ದಾರ, ಮೊಳೆ, ರಟ್ಟುಪೆಟ್ಟಿಗೆ, ಡಬ್ಬಗಳು ಮೊದಲಾದವುಗಳನ್ನು ತನ್ನಲ್ಲಿಯೇ ತಯಾರಿಸಬಹುದು. ಹಾಗೆಯೇ ತನ್ನವೇ ಉಪಕರಣಗಳಿಂದ ತನ್ನ ಕಾರ್ಮಿಕರ ಸೇವೆಗಳನ್ನು ಉಪಯೋಗಿಸಿ ದುರಸ್ತು ಕಾರ್ಯವನ್ನೂ ಕೈಗೊಳ್ಳಬಹುದು. ಇದು ಬಹುಭುಜ ಏಕೀಕರಣ. ವೆಚ್ಚವನ್ನು ಕಡಿಮೆಗೊಳಿಸುವುದೇ ಇದಕ್ಕೆ ಮೂಲ ಪ್ರೇರಣೆ.ಯಾವುದೇ ಬಗೆಯ ಏಕೀಕರಣವಾಗಲಿ, ಉದ್ಯಮಸಂಸ್ಥೆಯ ಗಾತ್ರವನ್ನು ಅಧಿಕಗೊಳಿಸಿ ಅಧಿಕ ಉತ್ಪಾದನೆಯ ಅನುಕೂಲವನ್ನೊದಗಿಸುತ್ತದೆ. ಈ ವ್ಯವಸ್ಥೆಯಿಂದ ಉದ್ಯಮಸಂಸ್ಥೆಗಳು ತಮಗೆ ಬೇಕಾದ ಕಚ್ಚಾಸಾಮಗ್ರಿಗಳ ಮೇಲೆ ಹತೋಟಿ ಸ್ಥಾಪಿಸಿಕೊಳ್ಳುವವು. ತಮ್ಮ ಪದಾರ್ಥಗಳ ಮಾರಾಟವನ್ನು ನಿಶ್ಚಿತಗೊಳಿಸುವವು. ಅಲ್ಲದೆ ಮಾರುಕಟ್ಟೆ ವೆಚ್ಚ ಮೊದಲಾದವುಗಳನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ಅನುಕೂಲಗಳೂ ಇವಕ್ಕೆ ಲಭಿಸುತ್ತವೆ.ಆದರೆ ಈ ಪ್ರವೃತ್ತಿ ಮಿತಿಮೀರಿ ಬೆಳೆದರೆ ಕೈಗಾರಿಕೆಯ ಏಕಸ್ವಾಮ್ಯ ಬೆಳೆದು ಸಮಾಜಕ್ಕೆ ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ಇಂಥ ಸಂಭವವನ್ನು ನಿವಾರಿಸಲು ಎಲ್ಲ ಮುಂದುವರಿದ ದೇಶಗಳಲ್ಲೂ ಸೂಕ್ತ ಕಾನೂನುಗಳು ಜಾರಿಯಲ್ಲಿವೆ.

ಏಕೀಕರಣ, ರಾಷ್ಟ್ರೀಯ

ಬದಲಾಯಿಸಿ

ಒಂದೇ ಪ್ರಭುತ್ವದ ಅಡಿಯಲ್ಲಿ, ಸಾರ್ವಜನಿಕವಾಸ ಒಂದೇ ಸೀಮೆಯಲ್ಲಿ ವಾಸಿಸುತ್ತಿರುವ, ಎಂದರೆ ಸಮಾನ ಆಡಳಿತ ಮತ್ತು ಸಾಂಸ್ಕೃತಿಕ ಲಕ್ಷಣಗಳನ್ನು ಪಡೆದಿರುವ ಜನಸಮುದಾಯವೇ ರಾಷ್ಟ್ರ, ಎಂಬ ವ್ಯಾಖ್ಯೆಯಲ್ಲಿಯೇ ಏಕೀಕರಣದ ತತ್ತ್ವ ಅಡಗಿದೆ. ಆದರೆ ಈ ವ್ಯಾಖ್ಯೆಯನ್ನು ಕಟ್ಟುನಿಟ್ಟಾಗಿ ಅನ್ವಯಿಸುವುದಾದರೆ ವಿಶ್ವದ ಅನೇಕ ದೇಶಗಳು ರಾಷ್ಟ್ರಗಳೆನಿಕೊಳ್ಳಲಾರವು. ಈ ವ್ಯಾಖ್ಯೆ ಒಂದು ಆದರ್ಶವಷ್ಟೆ. ಸಂಪುರ್ಣ ಏಕತಾಭಾವ ಇಂಥ ಸಂದರ್ಭದಲ್ಲಿ ಮಾತ್ರ ಸಾಧ್ಯ. ಆಗಲೂ ಜೀವನ ವಿಧಾನಗಳಲ್ಲಿನ ಭಿನ್ನತೆ, ವರಮಾನ ಸಂಪತ್ತುಗಳ ತರ-ತಮ, ಸಂಪರ್ಕಸಾಧನಗಳ ಅಸಮರ್ಪಕತೆ ಮುಂತಾದ ನಾನಾ ಕಾರಣಗಳಿಂದ ಈ ಏಕತೆಗೆ ಭಂಗ ಬರಬಹುದು. ಆದರೆ ನಿಸ್ತೇಜವೂ ವರ್ಣರಹಿತವೂ ಆದ ಸಮಾನತೆಯೇ ಏಕತೆಯಲ್ಲ. ಭಿನ್ನ ಭಾಷೆ ಧರ್ಮ ಸಂಸ್ಕೃತಿಗಳ ಜನ ಒಂದಾಗಿ ಬಾಳುವುದು ಸಾಧ್ಯ. ಎಲ್ಲ ರೀತಿಯಲ್ಲೂ ಅಖಂಡವೆನಿಸಿದ ರಾಷ್ಟ್ರ ಗತಕಾಲದ ಮೃತಕಲ್ಪನೆ. ಇಂಥ ಕಲ್ಪನೆಯ ಫಲವಾಗಿ ಅನೇಕ ರಾಷ್ಟ್ರಗಳಲ್ಲಿ ಇಡೀ ಜನಾಂಗಗಳೇ ಕಷ್ಟಕ್ಕೆ ಒಳಗಾಗಿ ಆ ರಾಷ್ಟ್ರಗಳ ಹಿತಕ್ಕೆ ಧಕ್ಕೆ ಒದಗಿರುವುದು ಇತಿಹಾಸದ ಸಂಗತಿ. ಜನಾಂಗ ಪರಿವರ್ತನೆ ಮತ್ತು ಬಹಿಷ್ಕಾರಗಳ ಮೂಲಕ ರಾಷ್ಟ್ರೀಯ ಭಾವೈಕ್ಯ ಸ್ಥಾಪಿಸುವ ಯತ್ನಗಳೆಲ್ಲ ಸಾಮಾನ್ಯವಾಗಿ ವಿಫಲಗೊಂಡಿವೆ. ಬ್ರಿಟನ್, ಫ್ರಾನ್ಸ್‌, ಸ್ಪೇನ್ಗಳು ಯುರೋಪಿನ ಅತ್ಯಂತ ಪ್ರಾಚೀನ ರಾಷ್ಟ್ರಗಳು. ಆದರೆ ಅವು ಕೂಡ ಸಂಪುರ್ಣ ಭಾವೈಕ್ಯ ಪಡೆದ ರಾಷ್ಟ್ರಗಳೆನ್ನಲಾಗುವುದಿಲ್ಲ. ಅಲ್ಲಿನ ಜನ ಉಜ್ವಲ ರಾಷ್ಟ್ರಪ್ರೇಮಿಗಳು. ಆದರೆ ಅಲ್ಲೂ ಪ್ರಾದೇಶಿಕ ವೈವಿಧ್ಯಗಳುಂಟು. ಬ್ರಿಟನ್ ಸ್ಕಾಟ್, ಇಂಗ್ಲಿಷ್ ಮತ್ತು ವೆಲ್ಷ್‌ ಜನರ ತಮ್ಮತನ ಗಮನಾರ್ಹವಾದ್ದು. ಕೆನಡದಲ್ಲಿ ಕ್ವಿಬೆಕ್ ಪ್ರಾಂತ್ಯದ ಜನ ಹೊರಡಿರುವ ಪ್ರತ್ಯೇಕತಾ ಚಳವಳಿಯನ್ನೂ ಉದಾಹರಿಸಬಹುದು. ಫ್ರಾನ್ಸಿನಲ್ಲೂ ಪ್ರಾಂತೀಯ ಭಿನ್ನತೆಗಳುಂಟೇ ಉಂಟು. ಸ್ಪೇನಿನ ಕ್ಯಾಟಲೇನಿಯ ಪ್ರಾಂತ್ಯದ ಸ್ವಾಯತ್ತೆಯ ಚಳವಳಿಯ ಹಿಂದೆ ಪ್ರತ್ಯೇಕತಾಭಾವವನ್ನು ಕಾಣಬಹುದು. ಆದರೂ ಈ ದೇಶಗಳ ಏಕತೆಗೆ ಧಕ್ಕೆ ಬಂದಿದೆಯೆಂದು ಭಾವಿಸಲಾಗುವುದು. 20ನೆಯ ಶತಮಾನದ ಕಲ್ಪನೆಯೇ ಬೇರೆ ತರ. ಸರ್ವಜನಹಿತ ಸಾಧಿಸುವ ಉದ್ದೇಶ ಹೊಂದಿರುವ ರಾಜಕೀಯ ವ್ಯವಸ್ಥೆಯ ಅಡಿಯಲ್ಲಿ ಭಿನ್ನ ಭಾಷೆ ಧರ್ಮ ಸಂಸ್ಕೃತಿಗಳ ಜನಾಂಗಗಳು ಸಹಜೀವನ ನಡೆಸುವಂತಾಗಬೇಕೆಂಬುದೇ 20ನೆಯ ಶತಮಾನದ ಆದರ್ಶ. ಸೋವಿಯತ್ ದೇಶ ಅನೇಕ ಜನಾಂಗಗಳ ಒಕ್ಕೂಟ. ಅಲ್ಲೂ ಅಯಾ ಪ್ರಾದೇಶಿಕ ವೈಶಿಷ್ಟ್ಯಗಳಿಲ್ಲದೆ ಇಲ್ಲ. ಜಾರ್ಜಿಯ, ಉಕ್ರೇನ್ ಮುಂತಾದವು ರಾಜಕೀಯವಾಗಿಯೂ ಸಾಂಸ್ಕೃತಿಕವಾಗಿಯೂ ಸಾಹಿತ್ಯಿಕವಾಗಿಯೂ ತಮ್ಮ ವೈಶಿಷ್ಟ್ಯಗಳನ್ನು ಬೆಳಸಿಕೊಳ್ಳುತ್ತಿವೆ. ಪಶ್ಚಿಮ ಯುರೋಪಿನ ಸಂಘಟನೆಯ ಪ್ರಯತ್ನ ನಡೆಯುತ್ತಿರುವಾಗಲೇ ಅಲ್ಲಿನ ರಾಷ್ಟ್ರಗಳ ವಿಭಿನ್ನ ಧರ್ಮ ಸಂಸ್ಕೃತಿಗಳ ರಕ್ಷಣೆಗೂ ಮಹತ್ತ್ವ ಕೊಡಲಾಗಿದೆ. ಭಿನ್ನತೆಗಳೇನೇ ಇರಲಿ, ಸರ್ವರಿಗೂ ಸಮಾನವಾದ ವಿಶಾಲ ತತ್ತ್ವಗಳ ತಳಹದಿಯ ಮೇಲೆ ಏಕೀಕರಣ ಸಾಧಿಸುವುದೇ ಇಂದಿನ ಆದರ್ಶ.

ಭಾರತದ ಭಾವೈಕ್ಯ

ಬದಲಾಯಿಸಿ

ರಾಜಕೀಯವಾಗಿಯೂ ಭೌಗೋಳಿಕವಾಗಿಯೂ ಒಂದಾಗಿರುವ ಸ್ವತಂತ್ರ ಭಾರತದ ಅಖಂಡತೆಯ ಕಲ್ಪನೆ ಬಲು ಪುರಾತನವಾದ್ದು; ಆಡಳಿತ ದೃಷ್ಟಿಯಿಂದ ಇಡೀ ದೇಶ ಒಂದಾಗದಿದ್ದಾಗಲೂ ಇದು ಇದ್ದದ್ದು. ರಾಷ್ಟ್ರದ ಅಖಂಡತೆಯ ದೃಷ್ಟಿ ಬ್ರಿಟಿಷರ ಕೊಡುಗೆಯೆಂದೂ ಭಾರತದಲ್ಲಿ ಇದು ಅತ್ಯಂತ ಈಚೆಗೆ ಬಂದ ಭಾವನೆಯೆಂದೂ ಪರಿಗಣಿಸುವುದು ತಪ್ಪು. ಬ್ರಿಟಿಷರ ಆಡಳಿತದ ಕಾಲದಲ್ಲಿ ಇಡೀ ದೇಶ ಒಂದೇ ಆಡಳಿತಕ್ಕೆ ಒಳಪಟ್ಟಿತ್ತಾದರೂ ಇದಕ್ಕೂ ಹಿಂದೆ ಈ ಬಗೆಯ ಸಾಧನೆ ಆಗಿಲ್ಲದಿರಲಿಲ್ಲ. ಅಶೋಕನ ಸಾಮ್ರಾಜ್ಯ ಆಫ್ಘಾನಿಸ್ತಾನದಿಂದ ಕರ್ನಾಟಕದವರೆಗೆ ಹಬ್ಬಿತ್ತು. ಗುಪ್ತರೂ ಚೋಳರೂ ಮೊಘಲರೂ ಭಾರತದ ಬಹು ಭಾಗದ ಮೇಲೆ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದರು. ಬ್ರಿಟಿಷರ ಕಾಲದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗಿನ ಅಖಂಡ ಪ್ರದೇಶ ಅವರ ಆಡಳಿತಕ್ಕೆ ಬಂತು. ಎಲ್ಲರಿಗೂ ಸಮಾನವಾಗಿದ್ದ ದಾಸ್ಯವೂ ಕ್ಲೈಬ್ಯವೂ ಭಾರತೀಯರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಹಂಬಲವನ್ನೂ ಏಕತೆಯ ಕಲ್ಪನೆಯನ್ನೂ ಭದ್ರಗೊಳಿಸದುವೆಂಬುದು ನಿಸ್ಸಂಶಯ.ಆದರೆ ಪ್ರಾಂತ್ಯ, ಜಾತಿ, ಧರ್ಮ, ಭಾಷೆಗಳನ್ನೂ ಮೀರಿದ ಭಾರತೀಯತ್ವ ಬಲು ಹಳೆಯದು. ನಾನಾ ಧರ್ಮಗಳನ್ನು ಅನುಸರಿಸುವ, ಅನೇಕ ಭಾಷೆಗಳನ್ನಾಡುವ ಜನರಿರುವ ದೇಶವೆಂದು ಇದನ್ನು ಹೊಗಳಿರುವ ಮಾತು ಅಥರ್ವವೇದದಲ್ಲಿದೆ. ವಿಷ್ಣುಪುರಾಣ, ಮಹಾಭಾರತ, ಕಾಳಿದಾಸನ ರಘುವಂಶ ಮುಂತಾದ ಅಸಂಖ್ಯಾತ ಕೃತಿಗಳಲ್ಲಿ ಭಾರತದ ಭೌಗೋಳಿಕ ಏಕತೆಯ ಚಿತ್ರ ನಿಚ್ಚಳವಾಗಿ ಮೂಡಿಬಂದಿದೆ. ಸಮಾನ ಸುಖ, ಸಮಾನ ದುಃಖ ಮತ್ತು ಸಮಾನ ಆಕಾಂಕ್ಷೆಗಳ ದೃಷ್ಟಿಯಿಂದ ಭಾರತದ ಜನವೆಲ್ಲ ಒಂದು.

ಪಾಶ್ಚಾತ್ಯ ದೇಶ

ಬದಲಾಯಿಸಿ

ಭಾರತದಲ್ಲಿ ಹಿಂದಿನಿಂದಲೂ ಅನೇಕ ಧರ್ಮಗಳ ಜನ ಒಂದಾಗಿ ಬಾಳಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ನಡೆದಂಥ ಧರ್ಮಮೂಲ ಯುದ್ಧಗಳು ಭಾರತದಲ್ಲಿ ಎಂದೂ ನಡೆದಿಲ್ಲ. ಪರ್ಷಿಯನರು, ಗ್ರೀಕರು, ಶಕರು, ಹೂಣರು ಮುಂತಾದ ಅನೇಕ ಜನ ಭಾರತದ ಮೇಲೆ ಆಕ್ರಮಣ ನಡೆಸಿದ್ದುಂಟು. ಇವರಲ್ಲನೇಕರು ಕೊಳ್ಳೆಯೊಂದಿಗೆ ಹಿಂದಿರುಗಿದರು. ಇಲ್ಲೇ ಉಳಿದವರು ಭಾರತೀಯರೇ ಅದರು. ಅವರಿಂದ ಭಾರತೀಯ ಸಂಸ್ಕೃತಿ ಹೆಚ್ಚು ವಿಶಾಲವಾಯಿತು. ಭಾರತದಲ್ಲಿ ದೇವರುಗಳು ಕೂಡ ಕಾಲದಿಂದ ಕಾಲಕ್ಕೆ ಬದಲಾಗಿರುವುದನ್ನು ಕಾಣಬಹುದು. ಇದಕ್ಕೆ ಏಕೀಕರಣದ ಪ್ರಭಾವವೂ ಒಂದು ಮುಖ್ಯಕಾರಣ. ಏಕತೆಯಲ್ಲಿ ಅನೇಕತೆಯ ತತ್ತ್ವವೇ ಭಾರತದ ಧರ್ಮ ಸಂಸ್ಕೃತಿ ಭಾಷೆ ಸಾಹಿತ್ಯಗಳ ತಳಹದಿ. ಮುಸ್ಲಿಮರು ಭಾರತವನ್ನು ಗೆದ್ದಾಗ ಭಾವೈಕ್ಯಕ್ಕೆ ಇನ್ನೊಂದು ಮುಖ ಬಂತು. ಹಿಂದಿನ ಆಕ್ರಮಣಕಾರರಂತೆ ಇವರು ಭಾರತದ ಆದುವರೆಗಿನ ಸಂಸ್ಕೃತಿಯಲ್ಲಿ ಒಂದಾಗಲಿಲ್ಲ. ಇವರು ದೇಶ ಗೆದ್ದದ್ದೇ ಅಲ್ಲದೆ ತಮ್ಮ ಧರ್ಮದ ಪ್ರಸಾರವನ್ನೂ ಮಾಡಿದರು. ಭಾರತದಲ್ಲಿ ಇವರ ವೈಶಿಷ್ಟ್ಯ ಉಳಿದುಕೊಂಡು ಬಂತು; ಭಾರತೀಯರನೇಕರು ಮುಸ್ಲಿಮರಾಗಿ ಮತಾಂತರ ಹೊಂದಿದರು. ಹೊರಗಿನಿಂದ ಬಂದು ಇಲ್ಲೇ ಉಳಿದುಕೊಂಡ ವರೂ ಭಾರತೀಯರೇ ಅದರು. ಇವರ ಧರ್ಮವೂ ಭಾರತೀಯವೇ ಆಯಿತು. ಹಿಂದೂ-ಮುಸ್ಲಿಂ ಸಾಮರಸ್ಯ ಪ್ರಯತ್ನ ಸಂತತವಾಗಿ ಸಾಗಿತು; ಬಹಳಮಟ್ಟಿಗೆ ಸಿದ್ಧಿಸಿತು.ಅನಂತರ ಮೊಘಲ್ ಸಾಮ್ರಾಜ್ಯ ಮುರಿದು ಬಿತ್ತು. ಬ್ರಿಟಿಷರು ಭಾರತಕ್ಕೆ ಬಂದಾಗ ಸಾಮರಸ್ಯ ಪ್ರಯತ್ನ ಸ್ಥಗಿತವಾಯಿತು. ಸಾಮ್ರಾಜ್ಯವನ್ನು ಕಳೆದುಕೊಂಡ ನೋವು ಅನೇಕ ಮುಸ್ಲಿಮರ ಮನಸ್ಸಿನಲ್ಲಿದ್ದುದರಿಂದ ಅವರು ಪ್ರತ್ಯೇಕವಾಗುಳಿದರು. ಬ್ರಿಟಿಷರೂ ಈ ಪ್ರತ್ಯೇಕತೆಯನ್ನು ಪೋಷಿಸಿ ಭಾರತೀಯರ ಭಾವೈಕ್ಯಕ್ಕೆ ಭಂಗ ತಂದರು.ಸ್ವತಂತ್ರ ಭಾರತ, ರಾಜ್ಯಗಳ ಒಕ್ಕೂಟ ಮಾತ್ರವಲ್ಲ. ಸಂಸ್ಕೃತಿಗಳ ಕೂಟ. ಇಡೀ ಭಾರತಕ್ಕೆ ಏಕತೆಯನ್ನೂ, ಮಹತ್ತ್ವವನ್ನೂ ನೀಡಿರುವ ಹಿಂದೂ ಸಂಸ್ಕೃತಿಯೊಂದಿಗೆ ಮುಸ್ಲಿಂ ಸಂಸ್ಕೃತಿಯ ವೈಶಿಷ್ಟ್ಯವೂ ಸಹಬಾಳ್ವೆ ನಡೆಸುತ್ತಿದೆ. ಜೊತೆಗೆ ಪಾರ್ಸಿ, ಆಂಗ್ಲೊ-ಇಂಡಿಯನ್ ಮುಂತಾದ ಅಲ್ಪಸಂಖ್ಯಾತ ಸಂಸ್ಕೃತಿ ಸಮೂಹವೂ ಭಾರತದಲ್ಲಿ ಬೆರೆತುಕೊಂಡಿದೆ. ಇವುಗಳ ಜೊತೆಗೆ ಪ್ರಾದೇಶಿಕ ವೈಶಿಷ್ಟ್ಯಗಳೂ ಉಂಟು. `ಏಕದಲ್ಲಿ ಅನೇಕ’ ಎಂಬುದು ಇಲ್ಲಿನ ಹಳೆಯ ಸೂತ್ರ. ರಾಷ್ಟ್ರದ ಕಲ್ಪನೆ ಎಲ್ಲರಿಗೂ ಸಮಾನವಾದ್ದು. ಇತ್ತೀಚಿನ ಇತಿಹಾಸ, ಭೌಗೋಳಿಕ ಪರಿಸ್ಥಿತಿ, ಆರ್ಥಿಕ ಕ್ಷೇತ್ರದ ಸಮಾನ ಹಿತ, ಸಾರ್ವತ್ರಿಕ ಆಕಾಂಕ್ಷೆ-ಇವು ಭಾರತದ ಭಾವೈಕ್ಯವನ್ನು ಸ್ಥಿರಗೊಳಿಸುತ್ತಿರುವ ಪ್ರಧಾನ ಅಂಶಗಳು.

ಏಕೀಕರಣ, ಸಾಂಸ್ಕೃತಿಕ

ಬದಲಾಯಿಸಿ

ಸಂಕೇತಗಳು ಸಂಸ್ಕೃತಿಯ ಲಕ್ಷಣಗಳು. ಈ ಲಕ್ಷಣಗಳ ಪರಸ್ಪರ ಸಂಬಂಧವೇ ಸಾಂಸ್ಕೃತಿಕ ಏಕೀಕರಣ. ಸಂಸ್ಕೃತಿಯ ಹುರುಳಿನ ಅರಿವು, ಸಾಂಸ್ಕೃತಿಕ ಏಕೀಕರಣದ ವರ್ಗೀಕರಣ ಮತ್ತು ಸಂಕೇತಗಳ ನಡುವಣ ಸಂಬಂಧ ಅಥವಾ ಸಾಂಸ್ಕೃತಿಕ ಏಕೀಕರಣದ ರೂಪ-ಈ ಪ್ರಶ್ನೆಗಳು ವಿದ್ವಾಂಸರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಗಳು.ಸಂಸ್ಕೃತಿಯ ವಿವಿಧ ಅಂಗಗಳು ಪರಸ್ಪರ ಸಮ್ಮಿಲನಗೊಳ್ಳಬಲ್ಲವು ಎಂಬ ಭಾವನೆ ಹಲವಾರು ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿವಿಧ ಸಂಸ್ಕೃತಿಗಳ ಸಾಮ್ಯತೆಗಳನ್ನು ಆದರ್ಶಭಾವನಾಪ್ರಧಾನವಾಗಿ ವರ್ಣಿಸುವಾಗ, ಒಂದು ಸಂಸ್ಕೃತಿಯ ವಿಶಿಷ್ಟಗುಣಗಳನ್ನು ಬೇರೆ ಸಂಸ್ಕೃತಿಯ ಜನ ಸ್ವೀಕರಿಸುವಾಗ, ಅಧಿಕಾರವರ್ಗದವರು ವಿವಿಧ ಸಂಸ್ಕೃತಿಗಳಿಗೆ ಸೇರಿದ ಜನರಿಂದ ಸ್ವೀಕೃತವಾಗಬಹುದಾದ ಸುಧಾರಣೆಗಳನ್ನು ಆಚರಣೆಗೆ ತರುವಾಗ, ಹಲವಾರು ಸಾಮಾಜಿಕ ನ್ಯೂನತೆಗಳನ್ನು ತಡೆಹಿಡಿಯಬೇಕಾದಾಗ ಅಥವಾ ವಿವಿಧ ಸಂಸ್ಕೃತಿಗಳ ತುಲನಾತ್ಮಕ ವಿಮರ್ಶೆಮಾಡುವಾಗ ಈ ರೀತಿಯ ಸಾಂಸ್ಕೃತಿಕ ಸಮ್ಮಿಲನ ಸಾಧ್ಯವೆಂಬ ನಂಬಿಕೆ ಉಪಯೋಗಕ್ಕೆ ಬರುತ್ತದೆ. ಆಧುನಿಕ ಸಮಾಜದಲ್ಲಿನ ಆಗುಹೋಗುಗಳು ಈ ಭಾವನೆಯ ಉಪಯುಕ್ತತೆಯನ್ನು ಎತ್ತಿ ತೋರಿಸಿವೆ. ಪ್ರೌಢಶಿಕ್ಷಣ, ರೇಡಿಯೋ, ಟೆಲಿವಿಷನ್, ಚಲನಚಿತ್ರ ಮುಂತಾದ ಬಹುಮುಖ ಸಂಪರ್ಕಮಾಧ್ಯಮ, ವಿರೋಧಾತ್ಮಕ ಸಂಸ್ಕೃತಿಗಳಲ್ಲಿ ಏರ್ಪಡುವ ಸಂಪರ್ಕ ಇವೇ ಮುಂತಾದ ಕಾರಣಗಳಿಂದ ಸಾಂಸ್ಕೃತಿಕ ಏಕೀಕರಣಭಾವನೆಗೆ ಹೆಚ್ಚು ಪ್ರಾಶಸ್ತ್ಯ ದೊರಕುತ್ತಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಸಾಂಪ್ರದಾಯಿಕ ಮತ್ತು ಆಧುನಿಕ ಸಮಾಜಗಳ ಏಕೀಕರಣಕ್ಕೆ ತಳಹದಿಯಾಗಬೇಕೆಂಬ ಆಶಯಕ್ಕೆ ಇದು ಪುರಕವಾಗಬೇಕಾಗಿದೆ.

ಆಂತರಿಕ ಹೊಂದಾಣಿಕೆಯೆ ಸಂಸ್ಕೃತಿ

ಬದಲಾಯಿಸಿ

ಸಾಂಸ್ಕೃತಿಕ ವಿಧಾನಗಳ ಸಮೂಹದಲ್ಲಿರಬೇಕಾದ ಆಂತರಿಕ ಹೊಂದಾಣಿಕೆಯೆ ಸಂಸ್ಕೃತಿ ಚಿಂತಕರ ಮುಖ್ಯ ಸಮಸ್ಯೆಯೆಂದು ಹಲವು ವಿದ್ವಾಂಸರು ವಾದಿಸಿದ್ದಾರೆ. ವಿವಿಧ ಸಂಸ್ಕೃತಿ ಸಮಾಜಗಳ ವಿಭಿನ್ನ ಲಕ್ಷಣಗಳ ವಿಶದೀಕರಣ ಮತ್ತು ಅವುಗಳ ಸಮನ್ವಯಕ್ಕೆ ಆಧುನಿಕ ವಿದ್ವಾಂಸರು ಮಾಡುತ್ತಿರುವ ಪ್ರಯತ್ನಗಳಿಗೆ ಈ ಸಮಸ್ಯೆ ಸಂಬಂಧಿಸಿದೆ. ಕೆಲವು ಹಳೆಯ ವಿದ್ವಾಂಸರು ಏಕೀಕರಣವೆಂಬ ಪದವನ್ನು ಶಿಥಿಲ ಮತ್ತು ಹೆಚ್ಚು ವಿಸ್ತರಿಸಿದ ಅರ್ಥದಲ್ಲಿ ಉಪಯೋಗಿಸಿದ್ದಾರೆ. ವೃತ್ತಿಸಂಬಂಧ ಮತ್ತು ತಾರ್ಕಿಕ ಅಥವಾ ಅರ್ಥವತ್ತಾದ ಏಕೀಕರಣವೆಂಬ ಎರಡು ವಿಧವಾದ ಏಕೀಕರಣವನ್ನು ಸೊರೊಕಿನ್ ವಿವೇಚಿಸಿದ್ದಾನೆ. ಈ ರೀತಿಯಲ್ಲಿ ನಿಖರವಾದ ಅರ್ಥ ವ್ಯಾಪ್ತಿಯನ್ನು ಕೊಡುವಾಗ ಸಾಂಸ್ಕೃತಿಕ ಏಕೀಕರಣದ ಆಧಾರ, ರೂಪ, ವ್ಯಾಪ್ತಿ ಮತ್ತು ಫಲಿತಾಂಶಗಳ ವಿಷಯವಾಗಿ ಸಾಕಷ್ಟು ಚರ್ಚೆ ನಡೆದಿದ್ದು, ಇದು ಏಕೀಕರಣದ ಭಾವನೆಗೆ ಭದ್ರವಾದ ಬುನಾದಿಯನ್ನೊದಗಿಸಿರುವುದಲ್ಲದೆ, ಅದಕ್ಕೊಂದು ನಿರ್ದಿಷ್ಟರೂಪವನ್ನೂ ಕೊಟ್ಟಿದೆ. ಈ ಪ್ರಯತ್ನಗಳ ಫಲವಾಗಿ ಸಾಮಾಜಿಕ ಸಾಂಸ್ಕೃತಿಕ ಪದ್ಧತಿಗಳಲ್ಲಿ ಆಂತರಿಕ ಸಮನ್ವಯ ಮತ್ತು ಐಕ್ಯಗಳನ್ನು ಕಾಣಬಹುದೆಂದು ವಿದ್ವಾಂಸರು ಒಪ್ಪಿಕೊಳ್ಳುವಂತಾಯಿತು.

ಸಂಸ್ಕೃತಿಗಳು ಪುರ್ಣ ಸಮ್ಮಿಲನ

ಬದಲಾಯಿಸಿ

ಸಂಸ್ಕೃತಿಗಳು ಪುರ್ಣ ಸಮ್ಮಿಲನಗೊಂಡ ಸಂಸ್ಥೆಗಳೆಂಬ ವಾದವನ್ನು ಇತ್ತೀಚೆಗೆ ನಡೆದ ಮಾನವಿಕವಿಜ್ಞಾನದ ಶೋಧನೆಗಳು ಒಪ್ಪುವುದಿಲ್ಲ. ಸಾಂಸ್ಕೃತಿಕ ಏಕೀಕರಣ ಕೇವಲ ಪ್ರಗತಿಯ ಲಕ್ಷಣ; ಸಹಜವಾದ ಉಪಾಧಿಯಲ್ಲ; ಬಲುಮಟ್ಟಿಗೆ ಆಂತರಿಕವಾಗಿ ಹೊಂದಾಣಿಕೆಯಿರುವ ಪ್ರಗತಿಪರ ನಡೆಯ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಈ ವಾದದ ಆಧಾರದ ಮೇಲೆ ವಿವಿಧ ಸಂಸ್ಕೃತಿಗಳು ಎಷ್ಟರಮಟ್ಟಿಗೆ ಸಮ್ಮಿಲನ ಹೊಂದಿವೆಯೆಂಬ ಅಂಶವನ್ನು ವಿದ್ವಾಂಸರು ವಿವೇಚಿಸಲಾರಂಭಿಸಿದ್ದಾರೆ. ಕೆಲವು ಸಂಸ್ಕೃತಿಗಳು ಪುರ್ಣ ಸಮ್ಮಿಲನ ಹೊಂದಿವೆಯೆಂದು ಈಚಿನವರೆಗೂ ರೂಢಿಯಲ್ಲಿದ್ದ ವಾದವನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಕಾರಣಾಂತರಗಳಿಂದ ಪ್ರತಿಯೊಂದು ಸಮಾಜ ದಲ್ಲೂ ಬದಲಾವಣೆಗಳು ಉಂಟಾಗುತ್ತಿರುವುದರಿಂದ ಅಂಥ ಸಂಸ್ಕೃತಿಗಳು ಪುರ್ಣವಾಗಿ ಸಮ್ಮಿಲನ ಹೊಂದಿರಲು ಸಾಧ್ಯವಿಲ್ಲ. ಒಂದು ಸಂಸ್ಕೃತಿಯ ವಿವಿಧ ಆಚಾರ ಪದ್ದತಿಗಳನ್ನು ಒಟ್ಟುಗೂಡಿಸಿದ ಮಾತ್ರಕ್ಕೆ ಆ ಸಂಸ್ಕೃತಿಯ ಪುರ್ಣರೂಪವಾಗುವುದಿಲ್ಲ. ಯಾವುದೇ ಒಂದು ಅಂಶವನ್ನು ಇತರ ಅಂಶಗಳಿಂದ ಪುರ್ಣವಾಗಿ ಬೇರ್ಪಡಿಸಲೂ ಸಾಧ್ಯವಿಲ್ಲ. ಈ ಮೇಲಿನ ವಾದದಿಂದ ಸಾಂಸ್ಕೃತಿಕ ಏಕೀಕರಣ ಪುರ್ಣವಲ್ಲವೆಂಬ ಮತ್ತು ಎಲ್ಲ ಹಂತಗಳಲ್ಲೂ ನಡೆಯುತ್ತಿರುವ ಒಂದು ಗುಣವೆಂಬ ಅಂಶ ವ್ಯಕ್ತವಾಗುತ್ತದೆ. ಇತ್ತೀಚೆಗೆ ಈ ಏಕೀಕರಣ ಸಮಸ್ಯೆಯನ್ನು ಆದರ್ಶದ ಮಟ್ಟಕ್ಕೆತ್ತಲಾಗಿದೆ. ಹಿಂದಿನ ಸಮಾಜಗಳಲ್ಲಿ ನೆಲಸಿದ್ದ ಪುರ್ಣ ಸಮನ್ವಯವೇ ಆ ಸಂಸ್ಕೃತಿಗಳ ಮುಖ್ಯ ಲಕ್ಷಣವೆಂದು ಮತ್ತು ಆಧುನಿಕ ಸಮಾಜದ ಕುಂದುಕೊರತೆಗಳಿಗೆ ಆ ಸಮಾಜದಲ್ಲಿ ಕಂಡುಬರುವ ವಿಚ್ಛಿದ್ರಕಾರಕ ಶಕ್ತಿಗಳೇ ಕಾರಣವೆಂದು ವಾದಿಸಲಾಗಿದೆ. ಇತ್ತೀಚೆಗೆ ಸಮಾಜವಿಜ್ಞಾನರಂಗದಲ್ಲಿ ನಡೆದಿರುವ ಪ್ರಗತಿಪರ ಶೋಧನೆಗಳು ಸಾಂಸ್ಕೃತಿಕ ಏಕೀಕರಣ ಸ್ವಾಭಾವಿಕವೇ ಅಲ್ಲವೇ ಎಂಬಂಶವನ್ನು ಕಡೆಗಣಿಸಿ ಯಾವ ರೀತಿಯ ಪ್ರಯೋಜನಗಳು ಉಂಟಾಗುತ್ತವೆ ಎಂಬ ಅಂಶಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿವೆ.ಸಾಂಸ್ಕೃತಿಕ ಏಕೀಕರಣ ಮಾನಸಿಕ ಭಾವನೆ ಅಥವಾ ಸಾಮಾಜಿಕ ವರ್ಗಗಳ ಹಿತಾಸಕ್ತಿಗಳನ್ನು ತರ್ಕಸಮ್ಮತವಾಗಿ ಕೈಗೂಡಿಸುವ ಒಂದು ಸಾಧನವೆಂಬ ಹಳೆಯ ವಾದಗಳು ತಿರಸ್ಕೃತವಾಗಿ ಪ್ರಗತಿಪರ ಸಂಸ್ಕೃತಿಗಳ ಮುಖ್ಯ ಲಕ್ಷಣಗಳೇ ಏಕೀಕರಣದ ಬುನಾದಿಯೆಂಬ ಭಾವನೆಗೆ ಆಧುನಿಕ ವಿದ್ವಾಂಸರಲ್ಲಿ ಪ್ರಾಶಸ್ತ್ಯ ದೊರಕುತ್ತಿದೆ.

ಏಕೀಕರಣ, ಸಾಮಾಜಿಕ

ಬದಲಾಯಿಸಿ

ವಿವಿಧ ಸಾಮಾಜಿಕ ಪದ್ಧತಿಗಳ ಅಥವಾ ವಿಭಿನ್ನ ಸಾಮಾಜಿಕ ಅಂಗಗಳ ಏಕೀಕರಣದ ಪ್ರಶ್ನೆ ದೀರ್ಘಕಾಲದಿಂದ ಬೌದ್ಧಿಕ ಮತ್ತು ವೈಜ್ಞಾನಿಕ ಆಸಕ್ತಿ ಕೆರಳಿಸಿದೆ. ಕೈಗಾರಿಕಾ ಕ್ರಾಂತಿಯ ಫಲವಾಗಿ ಸಾಮಾಜಿಕ ಸಂಬಂಧಗಳಲ್ಲಿ ಸಂಭವಿಸಿರುವ ಏರುಪೇರುಗಳಿಂದ ಸಮಾಜದ ಪುನರೇಕೀಕರಣ ಸಾಧಿಸುವ ಆವಶ್ಯಕತೆ ತೀವ್ರವೂ ಜರೂರೂ ಆಗಿ ಪರಿಣಮಿಸಿದೆ. ಸಣ್ಣ ಗುಂಪುಗಳಿಂದ ಆರಂಭಿಸಿ ವಿಶಾಲ ಸಮಾಜದಂಥ ವಿವಿಧ ಹಂತಗಳಲ್ಲಿ ಈ ಏಕೀಕರಣ ನಡೆಯಬೇಕಾಗಿರುವುದರಿಂದ ಹಲವಾರು ಸಮಸ್ಯೆಗಳು ಉದ್ಭವಿಸುವುದು ಸಹಜವೇ. ಆಯಾ ಹಂತಗಳಿಗೆ ಅನುಸಾರವಾಗಿ ಏಕೀಕರಣ ನಡೆಯಬೇಕು. ವಿವಿಧ ಪಂಗಡಗಳ ಏಕೀಕರಣದಲ್ಲಿ ಉದ್ಭವಿಸುವ ಸಮಸ್ಯೆಗಳಿಗಿಂತ ಅಂಥ ಪಂಗಡಗಳನ್ನೊಳಗೊಂಡ ವಿಶಾಲಜನಾಂಗಗಳ ಏಕೀಕರಣದ ಸಮಸ್ಯೆಗಳು ಕ್ಲಿಷ್ಟತರ. ಮೊದಲಿಗೆ ವಿದ್ವಾಂಸರು ಸಾಂಸ್ಕೃತಿಕ ಸಾಮಾಜಿಕ ಏಕೀಕರಣಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಿದ್ದರೂ ಕಳೆದ ಎರಡು ದಶಕಗಳಿಂದೀಚೆಗೆ ಪ್ರತ್ಯೇಕತೆ ಬೆಳೆದುಬಂದಿದೆ. ಸಾಮಾಜಿಕ ಮೌಲ್ಯ ಮತ್ತು ನಂಬಿಕೆಗಳು ಭಿನ್ನಸಮಾಜಗಳಲ್ಲಿ ಸಮಾನವಾಗಿದ್ದು, ಈ ಜನ ಫಲಪ್ರದವಾಗಿ ಸಹಕರಿಸುವದು ಯಾಂತ್ರಿಕ ಒಗ್ಗಟ್ಟೆಂದೂ ಏಕತೆ ಮತ್ತು ಪರಸ್ಪರ ಅವಲಂಬನೆಯಿಂದ ಸಂಭವಿಸುವುದು ಆಂಗಿಕ ಒಗ್ಗಟ್ಟೆಂದೂ ಕೆಲವು ವಿದ್ವಾಂಸರು ವಾದಿಸಿದರು.

ಪರಸ್ಪರ ವೈವಿಧ್ಯ ಭಿನ್ನತೆ

ಬದಲಾಯಿಸಿ

ಯಾಂತ್ರಿಕ ಒಗ್ಗಟ್ಟಿನಲ್ಲಿ ಸಮಾಜ ವಿಧಿಸಿದ ನಿಯಮಗಳಿಗನುಸಾರವಾಗಿ ಎಲ್ಲರೂ ನಡೆಯಬೇಕಾದರೆ, ಆಂಗಿಕ ಒಗ್ಗಟ್ಟಿನಲ್ಲಿ ಪರಸ್ಪರ ವೈವಿಧ್ಯ ಭಿನ್ನತೆಗಳನ್ನು ಸಮತೋಲ ಮಾಡಿಕೊಳ್ಳುವುದು ಮುಖ್ಯ ಲಕ್ಷಣ. ಸುಪ್ರಸಿದ್ಧ ಸಮಾಜವಿಜ್ಞಾನಿ ಸೊರೊಕಿನ್ ಈ ವಾದವನ್ನು ಒಪ್ಪುವುದಿಲ್ಲ. ಆತನ ಅಭಿಪ್ರಾಯದಂತೆ ಚಲನಾತ್ಮಕ ಸಮಾಜದಲ್ಲಿ ಸಾಂಸ್ಕೃತಿಕ ಅಂಶಗಳು ಪರಸ್ಪರಾವಲಂಬಿಗಳಾಗಿರುತ್ತವೆಯಾದ್ದರಿಂದ ಸಾಂಸ್ಕೃತಿಕ ಮತ್ತು ವೃತ್ತಿಸಹಜ ಏಕೀಕರಣ ವಿಧಾನಗಳೆರಡೂ ಒಂದೇ ಆಗಿರುತ್ತವೆ. ತಾರ್ಕಿಕ ಅರ್ಥಪುರ್ಣ ಏಕೀಕರಣ ಉತ್ತಮ ದರ್ಜೆಯದಾಗಿದ್ದು ಮೊದಲನೆಯ ರೀತಿಯ ಏಕೀಕರಣ ಕೀಳ್ತರದ್ದೆಂದು ತಿರಸ್ಕೃತ. ಆದರೆ ತಾರ್ಕಿಕ-ಅರ್ಥಪುರ್ಣ ಏಕೀಕರಣ ಸಾಂಸ್ಕೃತಿಕವಾದ್ದರಿಂದ ಅದು ಇಲ್ಲಿ ಅಪ್ರಕೃತ. ಅನಂತರ ಕಾಲದ ಸಮಾಜವಿಜ್ಞಾನಿಗಳು ಪ್ರಮಾಣಸಂಬಂಧ ಮತ್ತು ವೃತ್ತಿಸಂಬಂಧವೆಂಬ ಎರಡು ರೀತಿಯ ಏಕೀಕರಣಗಳನ್ನು ಸಾಂಸ್ಕೃತಿಕ ಏಕೀಕರಣದಿಂದ ಬೇರ್ಪಡಿಸಿದರು. ಇತ್ತೀಚೆಗೆ ಸಂಪರ್ಕಮೂಲ ಏಕೀಕರಣವೆಂಬ ಹೊಸ ವಿಧಾನವೊಂದು ಮಾನ್ಯವಾಗುತ್ತಿದೆ.

ಸಮಾಜ ವ್ಯವಸ್ಥೆ

ಬದಲಾಯಿಸಿ

ಸಮಾಜದ ಸಾಮಾನ್ಯ ಮೌಲ್ಯಗಳು ಒಟ್ಟುಗೂಡಿ ಸಂಸ್ಥೀಕರಿಸಲ್ಪಟ್ಟು ಸಮಾಜ ವ್ಯವಸ್ಥೆ ಏರ್ಪಡುವುದಕ್ಕೆ ಪ್ರಮಾಣಸಂಬಂಧ ಏಕೀಕರಣವೆಂದು ಹೇಳಲಾಗಿದೆ. ವ್ಯಕ್ತಿಗಳ ನಡುವೆ, ಸಂಸ್ಥೆಗಳ ನಡುವೆ ಅಥವಾ ಸಂಸ್ಥಾಂತರ್ಗತ ಪ್ರತ್ಯೇಕ ಅಂಗಗಳ ನಡುವೆ ಈ ರೀತಿಯ ಏಕೀಕರಣ ಸಾಧ್ಯ. ಅನೇಕ ಸಂದರ್ಭಗಳಲ್ಲಿ ಈ ಬಗೆಯ ಏಕೀಕರಣ ಸಾಮಾಜಿಕ ಸಂಬದ್ಧತೆಯನ್ನು ಅವಲಂಬಿಸಿರುತ್ತದೆ. ಬಾಹ್ಯಾತಂಕಗಳು ಹೆಚ್ಚಾದಾಗ ಸಮಾಜದಲ್ಲಿ ಆಂತರಿಕ ಸಂಬದ್ಧತೆಯೇರ್ಪಡುತ್ತದೆಂದು ಜನಸಾಮಾನ್ಯರ ನಂಬಿಕೆ. ಆದರೆ ಈ ಏಕತೆಯ ಅಡಿಪಾಯವಾಗಿ ಕೆಲವು ಮೂಲಭೂತ ಸಾಮ್ಯಗಳಿದ್ದರೆ ಮಾತ್ರ ಇಂಥ ಐಕ್ಯ ಸಾಧ್ಯ. ಪ್ರಮಾಣ ಸಂಬಂಧ ಏಕೀಕರಣದ ವಿವಿಧ ಮಟ್ಟಗಳ ಪ್ರಭಾವ ಇತರ ಸಾಮಾಜಿಕ ಘಟನೆಗಳ ಮೇಲೆ ಯಾವ ರೀತಿಯದೆಂಬುದು ಮುಖ್ಯವಾದ ಅಂಶ. ಅದರ ಪ್ರಭಾವದಿಂದ ಸಾಮಾಜಿಕ ವ್ಯವಸ್ಥೆ ಸ್ಥಿರಗೊಳ್ಳುವುದೆಂದು ಕೆಲವರ ನಂಬಿಕೆ. ಮತ್ತೆ ಕೆಲವರು ಹಲವಾರು ಸಂದರ್ಭಗಳಲ್ಲಿ ನಿಯಮಿತ ವೃತ್ತಿಮಾರ್ಗ ಬಿಡುವುದರಿಂದಲೇ ಪ್ರಗತಿ ಸಾಧ್ಯವೆಂದು ವಾದಿಸುತ್ತಾರೆ.

ವೃತ್ತಿಸಂಬಂಧ ಏಕೀಕರಣ

ಬದಲಾಯಿಸಿ

ವೃತ್ತಿಸಂಬಂಧ ಏಕೀಕರಣವಾದದ ಪ್ರಕಾರ ವೃತ್ತಿಪ್ರಾವೀಣ್ಯವೇ ಸಮಾಜದ ಪ್ರಗತಿಗೆ ಸಾಧನ. ವಿವಿಧ ಅಂಗಗಳು ಒಂದೇ ಸಮಾಜದ ಪ್ರಗತಿಗಾಗಿ ಶ್ರಮಿಸುವುದರಿಂದ ಪರಸ್ಪರ ಪುರಕಗಳಾಗುತ್ತವೆ. ಕೆಲವು ಬಾರಿ ವಿವಿಧ ಅಂಗಗಳಲ್ಲಿ ಪುರ್ಣ ಸಮನ್ವಯ ಇಲ್ಲದಿರುವುದರಿಂದ ಏಕೀಕರಣ ಅಪುರ್ಣವಾಗಿರಲು ಸಾಧ್ಯ.ಚಲನಾತ್ಮಕ ಸಮತೋಲವೇ ಸಾಮಾಜಿಕ ಏಕೀಕರಣದ ಮುಖ್ಯಲಕ್ಷಣವೆಂದು ಕೆಲವರ ವಾದ. ಆದರೆ ಸಮಾಜದ ಭಿನ್ನ ಅಂಗಗಳಲ್ಲಿ ಸಾಕಷ್ಟು ಸಂಬದ್ಧತೆಯಿಲ್ಲವಾದಾಗ ಏಕೀಕರಣದ ಬದಲು ಸಮಾಜದಲ್ಲಿ ಅಸಮತೆ ಹೆಚ್ಚಾಗಿ ವಿಚ್ಛಿದ್ರಗೊಳ್ಳಬಹುದೆಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ.ಸಂಪರ್ಕಮೂಲ ಏಕೀಕರಣವಾದದ ಪ್ರಕಾರ ಆಧುನಿಕ ಸಮಾಜಗಳಲ್ಲಿ ರೇಡಿಯೋ, ಟೆಲಿವಿಷನ್, ಚಲನಚಿತ್ರ ಮುಂತಾದ ಸಂಪರ್ಕಮಾಧ್ಯಮಗಳ ಮೂಲಕ ಸಮಾಜದ ಏಕೀಕರಣದ ಸಾಧನೆಯಾಗುತ್ತದೆ. ಈ ಮಾಧ್ಯಮಗಳ ಮೂಲಕ ಸಮಾಜದ ಕೇಂದ್ರಸ್ಥ ಮತ್ತು ಎಲ್ಲೆಗಳಲ್ಲಿರುವ ಅಂಶಗಳಲ್ಲಿ ಪರಿಣಾಮಕಾರಿ ಸಂಪರ್ಕವೇರ್ಪಟ್ಟು ಒಂದುಗೂಡಲು ಸಾಧ್ಯವಾಗುತ್ತದೆ.ಸಾಮಾಜಿಕ ಏಕೀಕರಣ ಅನೇಕರ ಮಹದಾಶಯವಾಗಿದೆ. ಆದರೆ ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯದಿರುವುದರಿಂದಲೂ ಸಂಶೋಧಕರು ತಮ್ಮ ಮೂಲ ತತ್ತ್ವಗಳನ್ನು ಶ್ರುತಪಡಿಸದಿರುವುದರಿಂದಲೂ ಇದು ಇನ್ನೂ ಸಂಪುರ್ಣ ಫಲಕಾರಿಯಾಗಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2017-02-12. Retrieved 2016-10-27.
  2. http://www.prajavani.net/news/article/2012/05/27/81872.html


"https://kn.wikipedia.org/w/index.php?title=ಏಕೀಕರಣ&oldid=1065820" ಇಂದ ಪಡೆಯಲ್ಪಟ್ಟಿದೆ