ಏಕವ್ಯಕ್ತಿ ಸಂಸ್ಥೆ

ಏಕವ್ಯಕ್ತಿ ಸಂಸ್ಥೆ: ಒಬ್ಬ ವ್ಯಕ್ತಿಯೇ ಉದ್ಯಮಕ್ಕೆ ಅಗತ್ಯವಾದ ಬಂಡವಾಳ ಒದಗಿಸಿಕೊಂಡು ಹೊಣೆ ಹೊತ್ತು ನಿರ್ವಹಿಸುವ ವ್ಯವಹಾರ ಸಂಸ್ಥೆ (ಸೋಲ್ ಟ್ರೇಡಿಂಗ್ ಕನ್ಸರ್ನ್). ವ್ಯವಹಾರ ಸಂಘಟನೆಯ ಇತಿಹಾಸದಲ್ಲಿ ಇದು ಅತ್ಯಂತ ಪ್ರಾಚೀನ ಪ್ರಭೇದ; ಅತ್ಯಂತ ಸಹಜ. ಈ ಸಂಸ್ಥೆಯ ಮಾಲೀಕನೊಬ್ಬನೇ. ಅವನಿಗೆ ಅವನೇ ಯಜಮಾನ. ತನಗಾಗಿ ತಾನೇ ಇದನ್ನು ನಡೆಸುತ್ತಾನೆ. ಏನು ಮಾಡಬೇಕೆಂಬ ಬಗ್ಗೆ ತೀರ್ಮಾನ ಕೈಕೊಳ್ಳುವವನೂ ತೀರ್ಮಾನವನ್ನು ಕಾರ್ಯಗತಗೊಳಿಸುವವನೂ ಸ್ವತಃ ಈತನೇ. ತನ್ನ ವ್ಯವಹಾರದ ಎಲ್ಲ ಹೊಣೆಯೂ ಎಲ್ಲ ಲಾಭ ನಷ್ಟಗಳೂ ಇವನವೇ. ಈತ ಸ್ವತಃ ತಂದ ಬಂಡವಾಳ ವ್ಯಾಪಾರಕ್ಕೆ ಸಾಲದಿದ್ದ ಪಕ್ಷದಲ್ಲಿ ಇತರರಿಂದ ಸಾಲದ ರೂಪದಲ್ಲಿ ತರಬಹುದಷ್ಟೆ. ಇವನೇ ತನ್ನ ಉದ್ಯಮದ ಸರ್ವಾಧಿಕಾರಿ, ಸಂಘಟಕ ಮತ್ತು ಆಡಳಿತಗಾರ. ಸಂಸ್ಥೆಯ ಅವನತಿ-ಅಭಿವೃದ್ಧಿಯೆಲ್ಲ ಈತನದೇ. ಈತನ ಚಾತುರ್ಯ ಹಾಗೂ ಈತ ಕೈಗೊಳ್ಳುವ ಸೂಕ್ತ ನಿರ್ಣಯಗಳನ್ನೇ ಅದು ಅವಲಂಬಿಸಿರುತ್ತದೆ.

ಸ್ವರೂಪ

ಬದಲಾಯಿಸಿ
  • ಈ ಸಂಸ್ಥೆಯ ಬಂಡವಾಳ ಸಣ್ಣ ಪ್ರಮಾಣದಲ್ಲಿರುವುದರಿಂದಲೂ ವ್ಯಾಪಾರದ ಕಷ್ಟನಷ್ಟಗಳ ಹೊಣೆ ಹೆಚ್ಚಾಗಿರುವುದರಿಂದಲೂ ಆವಶ್ಯಕತೆಗೆ ಅನುಗುಣವಾಗಿ ವ್ಯಾಪಾರದ ಧ್ಯೇಯವನ್ನು ಬದಲಾಯಿಸುವ ಅನುಕೂಲ ಇರುವುದರಿಂದಲೂ ಈ ಬಗೆಯ ಸಂಘಟನೆ ಸಣ್ಣ ಉದ್ಯಮಗಳಿಗೆ ಸೀಮಿತಗೊಂಡಿದೆ. ಬಟ್ಟೆ, ಪಾನ್ ಮತ್ತು ದಿನಸಿ ಅಂಗಡಿಗಳೂ ದಳ್ಳಾಳಿ, ವಕೀಲಿ, ವೈದ್ಯಕೀಯ ಸಂಸ್ಥೆಗಳೂ ಏಕವ್ಯಕ್ತಿ ಉದ್ಯಮದ ಉದಾಹರಣೆಗಳು.
  • ಏಕವ್ಯಕ್ತಿಸಂಸ್ಥೆಯ ಆಸ್ತಿ ಮತ್ತು ಜವಾಬ್ದಾರಿಗಳಿಗೂ ಅದರ ಯಜಮಾನನ ಸ್ವಂತ ಆಸ್ತಿ-ಹೊಣೆಗಳಿಗೂ ಯಾವ ವಿಧವಾದ ಭೇದವೂ ಇಲ್ಲ. ಆದಕಾರಣ ಸಂಸ್ಥೆ ತನ್ನ ಸಾಲ ತೀರಿಸಲು ಅಶಕ್ತವಾಗಿದ್ದರೆ ಅದನ್ನು ತೀರಿಸುವ ಹೊಣೆಯನ್ನು ಯಜಮಾನನೇ ಹೊರಬೇಕು. ಸಂಸ್ಥೆಯ ಸಾಲಗಳಿಗೆ ಮಾಲೀಕನ ಸ್ವಂತ ಆಸ್ತಿಯೂ ಈಡಾಗುತ್ತದೆ.
  • ಅಂತೆಯೇ ಮಾಲೀಕನ ಸಾಲಿಗರು ತಮಗೆ ಬರಬೇಕಾದ ಸಾಲದ ವಸೂಲಿಗಾಗಿ ಸಂಸ್ಥೆಯ ಆಸ್ತಿಯ ಮೇಲೂ ಕ್ರಮ ಜರುಗಿಸಬಹುದಾಗಿದೆ. ಸಂಸ್ಥೆಯ ನಷ್ಟಗಳಿಗೆಲ್ಲ ಮಾಲೀಕನೇ ವೈಯಕ್ತಿಕವಾಗಿ ಅಪಾರ ಹೊಣೆಗಾರ. ಇದು ಅಮಿತ ಜವಾಬ್ದಾರಿ.

ಅನುಕೂಲಗಳು

ಬದಲಾಯಿಸಿ
  • ಏಕವ್ಯಕ್ತಿ ಉದ್ಯಮಸಂಸ್ಥೆಯಲ್ಲಿ ಕೆಲವು ಅನುಕೂಲಗಳುಂಟು. ಇದನ್ನು ಪ್ರಾರಂಭಿಸಲು ಸ್ಥಾನಿಕ ಸಂಸ್ಥೆಗಳಿಂದ ಪರವಾನಿಗೆ ಪಡೆಯುವುದರ ಹೊರತಾಗಿ ಬೇರೆ ಯಾವ ಬಗೆಯ ಕಾನೂನಿನ ವಿಧಿಗಳನ್ನು ಅನುಸರಿಸಬೇಕಾಗಿಲ್ಲ. ಕಂಪನಿಗಳಂತೆ ಇದನ್ನು ನೋಂದಣಿ (ರಿಜಿಸ್ಟರ್) ಮಾಡಿಸಬೇಕಾಗಿಲ್ಲ. ಅಂದರೆ ಯಾವಾಗ ಬೇಕಾದರೂ ಸುಲಭವಾಗಿ ವ್ಯಾಪಾರ ಪ್ರಾರಂಭಿಸಲೂಬಹುದು ಮತ್ತು ಮುಕ್ತಾಯ ಮಾಡಲೂಬಹುದು.
  • ಸಂಸ್ಥೆಯ ಮಾಲೀಕನಿಗೂ ಗ್ರಾಹಕರಿಗೂ ನಿಕಟ ಸಂಪರ್ಕ ಇರುವುದರಿಂದ ಗ್ರಾಹಕರ ಆವಶ್ಯಕತೆಗಳನ್ನು ಕೂಡಲೇ ತಿಳಿದುಕೊಂಡು ಅವನ್ನು ಕೂಡಲೇ ಪುರೈಸುವುದು ಸಾಧ್ಯ. ಇದರಿಂದ ಉದ್ಯಮಿ ಅವರ ವಿಶ್ವಾಸಕ್ಕೆ ಪಾತ್ರನಾಗುವುದಲ್ಲದೆ ಹೆಚ್ಚು ಹೆಚ್ಚು ಲಾಭ ಪಡೆಯಲೂ ಸಹಾಯವಾಗುತ್ತದೆ. ಉದ್ಯಮಿಯೇ ಸರ್ವಾಧಿಕಾರಿಯಾಗಿರುವುದರಿಂದ ವ್ಯಾಪಾರದಲ್ಲಿ ಬರಬಹುದಾದಂಥ ಸಮಸ್ಯೆಗಳನ್ನು ನಿವಾರಿಸಲು ಯಾರದೇ ಸಮ್ಮತಿಗೆ ದಾರಿ ಕಾಯದೆ ತಾನೇ ತೀವ್ರವಾಗಿ ತೀರ್ಮಾನ ಕೈಗೊಳ್ಳುತ್ತಾನೆ.
  • ಎಂದರೆ ಆವಶ್ಯಕತೆಗೆ ಅನುಗುಣವಾಗಿ ವ್ಯಾಪಾರದ ಧ್ಯೇಯ ಧೋರಣೆಗಳನ್ನು ತಕ್ಷಣವೇ ಬದಲಾಯಿಸಬಹುದು. ಯಜಮಾನ ತನ್ನ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಸ್ವತಃ ಆಸಕ್ತಿ ವಹಿಸಿ ಎಲ್ಲ ಕಾರ್ಯಗಳನ್ನೂ ನಡೆಸಿಕೊಂಡು ಹೋಗುವುದರಿಂದ ಯಶಸ್ಸು ಬಹುತೇಕ ಸ್ವತಃ ಸಿದ್ಧ. ಇಂಥ ಸಂಸ್ಥೆಯ ವಿಚಾರಗಳನ್ನಾಗಲಿ ಆಖೈರು ಲೆಕ್ಕಗಳನ್ನಾಗಲಿ ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟ ಪಡಿಸಬೇಕೆಂದು ಯಾವ ಕಾಯಿದೆಯೂ ಇಲ್ಲದಿರುವುದರಿಂದ ಈತ ವ್ಯಾಪಾರದ ಮರ್ಮವನ್ನು ಗೋಪ್ಯವಾಗಿ ಇಟ್ಟುಕೊಳ್ಳಬಹುದು.
  • ಇದು ವ್ಯಾಪಾರಾಭಿವೃದ್ಧಿಗೆ ಸಹಾಯಕ. ಸಂಸ್ಥೆಯ ಎಲ್ಲ ಕಾರ್ಯಗಳನ್ನೂ ತಾನೇ ನಡೆಸಿಕೊಂಡು ಹೋಗುವುದರಿಂದಲೂ ಉದ್ಯಮ ಸಣ್ಣ ಪ್ರಮಾಣದಲ್ಲಿ ಇರುವುದರಿಂದಲೂ ದೊಡ್ಡ ಉದ್ಯಮ ಸಂಸ್ಥೆಯಲ್ಲಿ ತಗಲುವ ಮೇಲ್ವಿಚಾರಣೆಯ ಖರ್ಚು ಇದಕ್ಕೆ ತಗಲುವುದಿಲ್ಲ. ಆದ್ದರಿಂದ ಪೈಪೋಟಿಯ ದರದಲ್ಲಿ ಸರಕುಗಳನ್ನು ಮಾರಿ ಹೆಚ್ಚಿನ ಲಾಭ ಸಂಪಾದಿಸುವುದು ಸಾಧ್ಯ.
  • ಸಂಸ್ಥೆಯ ಅಭಿವೃದ್ಧಿಗಾಗಿ ಈತ ಬ್ಯಾಂಕಿನಿಂದಲೂ ಸ್ನೇಹಿತರಿಂದಲೂ ಇತರರಿಂದಲೂ ಸಾಲ ಪಡೆಯಬಹುದು. ಸಂಸ್ಥೆಯ ಆಸ್ತಿಯಿಂದ ಸಾಲ ತೀರಿಸಲು ಸಾಧ್ಯವಿಲ್ಲವಾದರೆ ಯಜಮಾನನೇ ತೀರಿಸುವುದರಿಂದಲೂ ಸಂಸ್ಥೆಯ ಅಭಿವೃದ್ಧಿಯಲ್ಲಿ ಮಾಲೀಕನ ವೈಯಕ್ತಿಕ ಆಸಕ್ತಿ ಇರುವುದರಿಂದಲೂ ಸಾಲಿಗರಿಗೆ ಸಾಕಷ್ಟು ಭರವಸೆಯಿರುತ್ತದೆ. ಸಾಲ ಸುಲಭವಾಗಿ ದೊರಕುತ್ತದೆ. ಸಂಸ್ಥೆಯ ಲಾಭಕ್ಕೆಲ್ಲ ಇವನೊಬ್ಬನೆ ಭೋಕ್ತೃ.
  • ಈ ಸಂಸ್ಥೆಗೆ ಆನುವಂಶಿಕ ವ್ಯಾಪಾರಸಂಸ್ಥೆ ಅಥವಾ ಕೌಟುಂಬಿಕ ವ್ಯಾಪಾರ ಸಂಸ್ಥೆ ಎಂದೂ ಹೆಸರುಂಟು. ಅಂದರೆ ಯಜಮಾನ ಸತ್ತರೆ, ಮನೋವಿಕಲ್ಪ ಹೊಂದಿದರೆ ಅಥವಾ ಅಸ್ವಸ್ಥನಾದರೆ ಸಂಸ್ಥೆಯನ್ನು ಮುಚ್ಚದೆ ಅವನ ವಂಶದವರೋ ಕುಟುಂಬದವರೋ ಮುಂದುವರಿಸಿಕೊಂಡು ಹೋಗುತ್ತಾರೆ. ಕಂಪನಿ, ಪಾಲುದಾರಿಕೆ ಮುಂತಾದವನ್ನು ಕಾನೂನಿಗೆ ಅನುಸಾರ ಮುಚ್ಚಿಸುವಂತೆ ಇದನ್ನು ಮುಚ್ಚಿಸಲು ಸಾಧ್ಯವಿಲ್ಲ.
  • ಏಕವ್ಯಕ್ತಿಸಂಸ್ಥೆಯ ಇನ್ನೊಂದು ಅನುಕೂಲವೆಂದರೆ ಅನುಭವದ ಗಳಿಕೆ. ಈ ಸಂಸ್ಥೆಯ ಬೆಳೆವಣಿಗೆಯೊಂದಿಗೆ ಇದರ ಮಾಲೀಕನೂ ಬೆಳೆಯುತ್ತಾನೆ. ವ್ಯಾಪಾರದ ಅನುಭವಗಳನ್ನು ಚೆನ್ನಾಗಿ ಅರಿತುಕೊಳ್ಳುತ್ತಾನೆ. ಆದ್ದರಿಂದ ದೊಡ್ಡ ದೊಡ್ಡ ಉದ್ಯಮಗಳನ್ನು ಪ್ರಾರಂಭಿಸಿ ಬೆಳೆಸಲು ಇದು ನಾಂದಿ. ಸ್ವತಂತ್ರ ಮನೋವೃತ್ತಿಯನ್ನು ಕಾರ್ಯನಿಷ್ಠೆಯನ್ನೂ ಆತ್ಮವಿಶ್ವಾಸ, ಸಂತೃಪ್ತಿ ಮುಂತಾದ ಗುಣಗಳನ್ನೂ ಬೆಳೆಸಿ ವ್ಯಕ್ತಿತ್ವದ ವಿಕಾಸಕ್ಕೆ ಇದು ಕಾರಣವಾಗುತ್ತದೆ.

ಪ್ರತಿಕೂಲಗಳು

ಬದಲಾಯಿಸಿ
  • ಈ ಸಂಸ್ಥೆಯಲ್ಲಿ ಅನೇಕ ಪ್ರತಿಕೂಲಗಳೂ ಉಂಟು. ಮೊದಲನೆಯದಾಗಿ ಬಂಡವಾಳದ ಕೊರತೆ. ಒಬ್ಬ ವ್ಯಕ್ತಿ ತರುವ ಬಂಡವಾಳ ಅಲ್ಪ; ದೊಡ್ಡ ಉದ್ಯಮಕ್ಕೆ ಸಾಕಾಗುವುದಿಲ್ಲ. ಇತರ ಮೂಲಗಳಿಂದ ಈತ ಪಡೆಯಬಹುದಾದ ನೆರವಿಗೂ ಮಿತಿಯುಂಟು. ಒಬ್ಬ ವ್ಯಕ್ತಿಯನ್ನೇ ನಂಬಿ ಹೆಚ್ಚು ಹಣ ಕೊಡುವುದೂ ಅನೇಕ ವೇಳೆ ಕಠಿಣವೇ. ಕಡಿಮೆ ಬಂಡವಾಳದಿಂದ ಸಂಸ್ಥೆಯ ಅಭಿವೃದ್ಧಿ ಕುಂಠಿತವಾಗುವುದಲ್ಲದೆ ಯಜಮಾನನ ಆದಾಯವೂ ಕಡಿಮೆಯಾಗುತ್ತದೆ.
  • ಸಂಸ್ಥೆ ಹೆಚ್ಚಿನ ನಷ್ಟಹೊಂದಿ, ತನ್ನ ಸಾಲ ತೀರಿಸಲು ಸಾಕಷ್ಟು ಆಸ್ತಿ ಇಲ್ಲದಿದ್ದರೆ ಮಾಲೀಕನ ಸ್ವಂತ ಆಸ್ತಿಯೂ ಕರಗಬಹುದು. ಈ ಅಮಿತ ಜವಾಬ್ದಾರಿಯಿಂದ ಮಾಲೀಕನ ಸ್ಥೈರ್ಯ ಉಡುಗಬಹುದು. ಈ ಭಯದ ಹಿನ್ನೆಲೆಯಲ್ಲಿ ಆತನ ಸಾಹಸ ಪ್ರವೃತ್ತಿ ಮೊಟಕಾಗಬಹುದು.

ಸಂಸ್ಥೆ ಅಭಿವೃದ್ಧಿ ಹೊಂದಿ ಅನೇಕ ಶಾಖೆಗಳಿಂದ ಕೂಡಿದ್ದರೆ ಆಗ ಒಬ್ಬನೇ ಯಜಮಾನ ಎಲ್ಲ ಶಾಖೆಗಳ ಕಾರ್ಯಗಳನ್ನೂ ಸುಸೂತ್ರವಾಗಿ ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಗದೆ ಸಂಸ್ಥೆ ಅವನತಿ ಹೊಂದಬಹುದು.

  • ಅಲ್ಲದೆ ವ್ಯಾಪಾರದ ಚತುರತೆ, ಸಾಕಷ್ಟು ಬಂಡವಾಳ ಎರಡೂ ಇರುವ ವ್ಯಕ್ತಿಗಳು ಬಹಳ ವಿರಳ. ವ್ಯಾಪಾರದ ಕುಶಲತೆಯನ್ನು ತಿಳಿಯದ ವ್ಯಕ್ತಿ ಎಷ್ಟೇ ಬಂಡವಾಳ ಹಾಕಿ ವ್ಯಾಪಾರ ನಡೆಸಿದರೂ ನಷ್ಟ ಅನುಭವಿಸುವುದು ಖಂಡಿತ. ಅಂಥವ ದಿವಾಳಿಯಾದರೂ ಆಶ್ಚರ್ಯವಿಲ್ಲ. ಏಕವ್ಯಕ್ತಿ ಉದ್ಯಮ ಶಾಶ್ವತವೇನೂ ಅಲ್ಲ. ಸಂಸ್ಥೆಯ ಒಡೆಯ ಸಾವಿಗೋ ಹುಚ್ಚಿಗೋ ಕಾಯಿಲೆಗೋ ಈಡಾದರೆ ಸಂಸ್ಥೆಯನ್ನು ಮುಚ್ಚಲೇಬೇಕಾದ ಸಂದರ್ಭವೂ ಒದಗಬಹುದು.
  • ಆತನ ಕುಟುಂಬದವರೋ ಉತ್ತರಾಧಿಕಾರಿಗಳೋ ಅದನ್ನು ನಡೆಸಿಕೊಂಡು ಹೋಗಬಲ್ಲರೆಂಬ ಭರವಸೆಯೇನೂ ಇಲ್ಲ. ಏಕವ್ಯಕ್ತಿಸಂಸ್ಥೆಯ ಗಾತ್ರ ಕಿರಿದಾದ್ದರಿಂದ ದೊಡ್ಡ ಪ್ರಮಾಣದ ವಹಿವಾಟಿನಿಂದ ಸಿಗಬಹುದಾದ ರಿಯಾಯಿತಿಗಳು ಈ ಉದ್ಯಮಿಗೆ ದೊರಕಲಾರವು. ಈ ಕಾರಣದಿಂದ ಈತ ತನ್ನ ಸರಕುಗಳನ್ನು ಹೆಚ್ಚಿನ ಬೆಲೆಗೆ ಮಾರಬೇಕಾಗಬಹುದು. ಇದರಿಂದ ಗಿರಾಕಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಾಗುವುದಿಲ್ಲ. ಆಧುನಿಕ ಸೌಲಭ್ಯಗಳೂ ಸಲಕರಣೆಗಳೂ ಶ್ರಮವಿಭಜನೆಯ ಅನುಕೂಲಗಳೂ ಸಣ್ಣ ಸಂಸ್ಥೆಗೆ ಲಭ್ಯವಿಲ್ಲ.
  • ಇಷ್ಟೆಲ್ಲ ಅನಾನುಕೂಲಗಳಿದ್ದರೂ ಏಕವ್ಯಕ್ತಿ ಸಂಸ್ಥೆಗಳು ಇಂದಿಗೂ ಬಹು ಸಂಖ್ಯೆಯಲ್ಲಿವೆ. ಇದಕ್ಕೆ ಕಾರಣಗಳಿಲ್ಲದೆ ಇಲ್ಲ. ಚಿಲ್ಲರೆ ಮಾರಾಟಕ್ಕೆ ಈ ಬಗೆಯ ಸಂಸ್ಥೆಗಳು ಸೂಕ್ತ. ಕೆಲವು ವ್ಯವಹಾರಗಳಲ್ಲಿ ಗ್ರಾಹಕನಿಗೂ ವ್ಯಾಪಾರಿಗೂ ನಡುವೆ ಅತ್ಯಂತ ನಿಕಟ ಸಂಪರ್ಕವಿರಬೇಕು.

ವಕೀಲ-ಕಕ್ಷಿಗಾರ, ವೈದ್ಯ-ರೋಗಿ, ಇವರಲ್ಲಿ ನಿಕಟಸಂಪರ್ಕ ಇಲ್ಲದಿದ್ದ ಪಕ್ಷದಲ್ಲಿ ಗ್ರಾಹಕರ ಮನೋಭಾವವನ್ನರಿತು ಅವರ ಆಶಯಗಳನ್ನು ಪುರ್ಣಗೊಳಿಸಲು ಸಾಧ್ಯವಾಗುವುದಿಲ್ಲ.

  • ಆದ್ದರಿಂದ ಇಂಥ ಉದ್ಯಮಗಳಲ್ಲೆಲ್ಲ ಏಕಮೇವ ಒಡೆತನ ಸಂಸ್ಥೆಯೇ ಅತ್ಯಂತ ಯೋಗ್ಯ.

ಬೆಳ್ಳಿ-ಬಂಗಾರ, ಷೇರು ಮುಂತಾದ ವ್ಯವಹಾರಗಳಲ್ಲಿ, ಬೆಲೆಗಳಲ್ಲಿ ಬಹಳ ಏರಿಳಿತಗಳಾಗುವುದರಿಂದ ಶೀಘ್ರ ನಿರ್ಣಯದ ಆವಶ್ಯಕತೆ ಇರುತ್ತದೆ. ಇಂಥಲ್ಲೂ ಏಕವ್ಯಕ್ತಿ ಉದ್ಯಮವೇ ಹೆಚ್ಚು ಯಶಸ್ವಿಯಾಗುತ್ತದೆನ್ನಬಹುದು. ಬಂಡವಾಳ ಕಡಿಮೆಯಾಗಿಯೂ ಹಳ್ಳಿಗಳು ಹೆಚ್ಚಾಗಿಯೂ ಇರುವ ಭಾರತದಂಥ ದೇಶದಲ್ಲಿ ಏಕವ್ಯಕ್ತಿ ಉದ್ಯಮ ಸಂಸ್ಥೆಗಳ ಕ್ಷೇತ್ರ ವಿಸ್ತಾರವಾಗಿದೆ; ಅವಕಾಶಗಳೂ ಹೇರಳವಾಗುಂಟು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬದಲಾಯಿಸಿ


[] [] [] []

  1. https://en.m.wikipedia.org/wiki/Sole_proprietorship
  2. https://www.smallbusiness.wa.gov.au/business-advice/business-structure/sole-trader
  3. https://www.omtexclasses.com/2010/02/define-sole-trading-concern-explain-its.html?m=1
  4. "ಆರ್ಕೈವ್ ನಕಲು". Archived from the original on 2018-08-09. Retrieved 2018-08-27.