ಏಕರೂಪ ಶಬ್ದಗಳು
ಏಕರೂಪ ಶಬ್ದಗಳು: ಭಾಷೆಯಲ್ಲಿ ಕಾಣಬರುವ ಒಂದೇ ಉಚ್ಛಾರಣೆಯ ಅಥವಾ ಒಂದೇ ಲಿಖಿತರೂಪದ ಆದರೆ ಅರ್ಥಭೇದವುಳ್ಳ ಪದಗಳನ್ನು ಏಕರೂಪ ಶಬ್ದಗಳು ಅಥವಾ ಸಮಾನ ರೂಪದ ಪದಗಳು ಎನ್ನುತ್ತಾರೆ (ಹೋಮೋನಿಮ್ಸ್). ಉದಾ: ವರ್ಣ ಎಂಬ ರೂಪಕ್ಕೆ ಬಣ್ಣ, ಜಾತಿ ಎಂಬೆರಡು ಅರ್ಥಗಳೂ ದ್ವಿಜ ಎಂಬ ಪದಕ್ಕೆ ಬ್ರಾಹ್ಮಣ, ಹಲ್ಲು ಮತ್ತು ಹಕ್ಕಿ ಎಂಬ ಮೂರು ಅರ್ಥಗಳು ಇವೆ. ಹಿಂದಿನ ಭಾರತೀಯ ಶಬ್ದಕೋಶಗಳಲ್ಲಿ ಈ ಬಗೆಯ ಪದಗಳನ್ನು ನಾನಾರ್ಥವುಳ್ಳ ಪದಗಳೆಂದು ಕರೆದಿದ್ದಾರೆ. ಅಂದರೆ, ಒಂದೇ ಪದಕ್ಕೆ ಪರಿಸರಣ (ಕಾಂಟೆಕ್ಸ್‌್ಟ) ಭೇದದಿಂದ ಬೇರೆ ಬೇರೆ ಅರ್ಥಸೂಚಕ ಶಕ್ತಿ ಇದೆಯೆಂದು ಹಿಂದಿನವರ ತಿಳಿವಳಿಕೆಯಾಗಿತ್ತು. ಆದರೆ, ನಿಜಕ್ಕೂ ಇವು ಸಮಾನ ರೂಪದ, ಅರ್ಥಭೇದವಿರುವ ಎರಡು ಮೂರು ಬೇರೆ ಬೇರೆ ಪದಗಳು.
ಈ ಬಗೆಯ ಜೋಡಿ ಪದಗಳಲ್ಲಿ (ಎರಡಕ್ಕಿಂತ ಹೆಚ್ಚು ಪದಗಳೂ ಈ ಜೋಡಿಗಳಲ್ಲಿರಬಹುದು) ಒಂದು ನಾಮವಾಚಕವಾಗಿಯೂ ಇನ್ನೊಂದು ಕ್ರಿಯಾವಾಚಕ ವಾಗಿಯೂ ಇರಬಹುದು. ಹಾಗಿದ್ದಲ್ಲಿ ಅವುಗಳ ಪ್ರಯೋಗ ಭೇದದಿಂದ ವ್ಯವಹಾರದಲ್ಲಿ ತೊಂದರೆಯೆನಿಸುವುದಿಲ್ಲ. (ಉದಾ: ಸೇರು-ಅಳತೆಯ ಒಂದು ಪ್ರಮಾಣ; ತಲಪುವುದು). ಎರಡು ಪದಗಳೂ ನಾಮವಾಚಕಗಳಾಗಿಯೂ ಕ್ರಿಯಾವಾಚಕ ಗಳಾಗಿಯೂ ಇರಬಹುದು (ಉದಾ: ಹದ್ದು-ಒಂದು ಹಕ್ಕಿ; ಗಡಿ).
ಲಿಖಿತರೂಪ
ಬದಲಾಯಿಸಿಭಾಷಾ ಬೆಳೆವಣಿಗೆಯ ಯಾವುದೇ ಕಾಲದಲ್ಲಿನ ಭಿನ್ನಾರ್ಥಕ ಎರಡು ಅಥವಾ ಹೆಚ್ಚಿನ ಪದಗಳ ಲಿಖಿತರೂಪ ಅಥವಾ ಉಚ್ಚಾರಣೆಯ ರೂಪ ಒಂದೇ ಆಗಿ ಕಂಡು ಬಂದರೂ ಅವು ಭಿನ್ನ ಮೂಲದಿಂದ ಬಂದವುಗಳಾಗಿರುತ್ತವೆ. ಹೀಗೆ ಒಂದು ಕಾಲದಲ್ಲಿ ಭಿನ್ನರೂಪದ ಪದಗಳಾಗಿದ್ದು ಇನ್ನೊಂದು ಕಾಲದಲ್ಲಿ ಸಮಾನರೂಪದ ಪದಗಳಾಗಿ ಮಾರ್ಪಡಲು ಭಾಷೆಯಲ್ಲುಂಟಾಗುವ ಧ್ವನಿ ಪರಿಣಾಮಗಳೇ ಕಾರಣವೆನ್ನಬಹುದು. ಹಳಗನ್ನಡದ ಅ¾=ತಿಳಿ ಮತ್ತು ಅರಿ=ಕತ್ತರಿಸು ಎಂಬ ಎರಡು ಪದಗಳೂ ಈಗ ಅರಿ ಎಂಬ ರೂಪದಲ್ಲಿ ಕಂಡುಬರುತ್ತವೆ. ¾ಕಾರವು ರಕಾರವಾಗಿ ಪರಿವರ್ತಿತವಾದ್ದರಿಂದ ಭಿನ್ನರೂಪದಲ್ಲಿದ್ದ ಪದಗಳು ಸಮಾನರೂಪವನ್ನು ತಾಳಿದುವು.[೧]
ಬರೆವಣಿಗೆ ಮತ್ತು ಉಚ್ಚಾರಣೆ
ಬದಲಾಯಿಸಿಬರೆವಣಿಗೆ ಮತ್ತು ಉಚ್ಚಾರಣೆ ಎರಡರಲ್ಲೂ ಸಮಾನರೂಪದ ಪದಗಳಿರುವಂತೆ ಬರೆವಣಿಗೆಯಲ್ಲಿ ಮಾತ್ರ ಸಮಾನರೂಪವಿದ್ದು ಉಚ್ಚಾರಣೆಯಲ್ಲಿ ಭೇದವಿರುವ ಪದಗಳೂ ಉಂಟು. ಲಿಖಿತ ರೂಪದಲ್ಲಿ ವ್ಯತ್ಯಾಸವಿಲ್ಲದ ತಂದೆ ಎಂಬ ಜೋಡಿ ಪದಗಳಲ್ಲಿ (ಒಂದು ನಾಮವಾಚಕ, ಇನ್ನೊಂದು ಕ್ರಿಯಾವಾಚಕ) ಒಂದರ ಮೊದಲ ಸ್ವರ ಕೆಲವರ ಉಚ್ಚಾರಣೆಯಲ್ಲಿ ವಿವೃತ ಸ್ವರ (ಓಪನ್ ಓವೆಲ್)ವಾಗಿಯೂ ಇನ್ನೊಂದರ ಮೊದಲ ಸ್ವರ ಸಂವೃತ ಸ್ವರ (ಕ್ಲೋಸ್ಡ್ ಓವೆಲ್) ವಾಗಿಯೂ ಕಾಣಬರುತ್ತದೆ. ಇನ್ನು ಕೆಲವರ ಉಚ್ಚಾರಣೆಯಲ್ಲಿ ಈ ಎರಡು ಸಂದರ್ಭಗಳಲ್ಲೂ ವಿವೃತ ಸ್ವರದ ಪ್ರಯೋಗವಿದೆ. ಇಲ್ಲಿ ತಂದೆ ಎಂಬ ಸಮಾನರೂಪದ ಜೋಡಿಪದಗಳೆರಡರಲ್ಲೂ ಮೊದಲ ಸ್ವರ ವಿವೃತ ಸ್ವರವಾಗಿರುವ ಉಪಭಾಷೆಯಲ್ಲಿ ಮಾತ್ರ ಈ ಪದಗಳು ಸಮಾನರೂಪದ ಪದಗಳೆನ್ನಿಸಿಕೊಳ್ಳುತ್ತವೆ. ಉಚ್ಚಾರಣೆಯಲ್ಲಿ ಭೇದವಿಲ್ಲದ ಜೋಡಿ ಪದಗಳಿಗೇ ಸಮಾನರೂಪದ ಪದಗಳು ಎನ್ನುವ ಪಾರಿಭಾಷಿಕ ಶಬ್ದವನ್ನು ಮೀಸಲಾಗಿಟ್ಟುಕೊಂಡು ಬರೆವಣಿಗೆಯಲ್ಲಿ ಮಾತ್ರ ಭೇದವಿಲ್ಲದ ಪದಗಳನ್ನು ಲಿಖಿತ ಸಮಾನ ರೂಪದ ಪದಗಳೆನ್ನಬಹುದು (ಹೋಮೊಗ್ರ್ಯಾಫ್).
ಧ್ವನಿ ಪರಿಣಾಮ
ಬದಲಾಯಿಸಿಭಿನ್ನರೂಪದಲ್ಲಿದ್ದ ಪದಗಳು ಧ್ವನಿ ಪರಿಣಾಮದಿಂದ ಸಮಾನರೂಪದ ಪದಗಳಾಗು ವಂತೆಯೇ ಸಮಾನರೂಪದ ಜೋಡಿಪದಗಳಲ್ಲಿ ವ್ಯವಹಾರದಲ್ಲಿ ಕಷ್ಟವೆಂದು ತೋರಿದಾಗ ಧ್ವನಿ ಪರಿಣಾಮಗಳಿಂದ ಒಂದು ಪದದ ರೂಪ ಮಾತ್ರ ಬದಲಾವಣೆಯಾಗಿ ಇನ್ನೊಂದು ಹಾಗೇ ಉಳಿದು ಅವೆರಡೂ ಭಿನ್ನ ರೂಪದ ಪದಗಳಾಗುವುದೂ ಉಂಟು. ಪದಾದಿಯಲ್ಲಿನ ಪಕಾರ ನಡುಗನ್ನಡದಲ್ಲಿ (ಸು. 10ನೆಯ ಶ.) ಹಕಾರವಾಗಿ ಪರಿವರ್ತಿತವಾಯಿತು. ಈ ಧ್ವನಿ ಪರಿಣಾಮದಿಂದ ಸಮಾನರೂಪದ ಪಾಲು (ಹಿಸ್ಸೆ; ಹಾಲು) ಎಂಬ ಜೋಡಿಪದಗಳಲ್ಲಿ ಒಂದರ ರೂಪ ಹಾಗೇ ಉಳಿದು (ಹಿಸ್ಸೆ ಎಂಬರ್ಥದ ಪದ) ಇನ್ನೊಂದರ ರೂಪ ಹಾಲು ಎಂದಾಯಿತು. ಹಾಗೆಯೇ ಪಾಡು (ದುಃಸ್ಥಿತಿ; ಹಾಡು) ಎಂಬ ಜೋಡಿ ಪದಗಳಲ್ಲೊಂದು ಹಾಗೇ ಉಳಿದು ಇನ್ನೊಂದರ ರೂಪ ಹಾಡಾಗಿ ಪರಿವರ್ತಿತವಾಯಿತು.
ಸಮಾನ ರೂಪದ ಜೋಡಿಪದಗಳಲ್ಲಿ ಯಾವ ಅರ್ಥದ ಪದ ಹಾಗೇ ಉಳಿಯುತ್ತದೆ ಮತ್ತು ಯಾವ ಅರ್ಥದ ಪದ ಪರಿವರ್ತನೆ ಹೊಂದುತ್ತದೆಂಬುದನ್ನು ಧ್ವನಿ ಪರಿಣಾಮಗಳಾಗುವ ಮುಂಚೆ ಹೇಳಲು ಬರುವುದಿಲ್ಲ. ಸಮಾನ ರೂಪದ ಜೋಡಿ ಪದಗಳಲ್ಲೆಲ್ಲ ಧ್ವನಿ ಪರಿಣಾಮದಿಂದಾಗಿ ಒಂದರ ರೂಪ ಬದಲಾಯಿಸಿ ಅವು ಭಿನ್ನ ರೂಪದ ಪದಗಳಾಗುವುದಿಲ್ಲವೆನ್ನುವುದಕ್ಕೆ ಭಾಷೆಯಲ್ಲಿ ಯಾವುದೇ ಕಾಲದಲ್ಲೂ ಸಮಾನ ರೂಪದ ಪದಗಳು ಉಳಿದು ಬರುವುದೇ ನಿದರ್ಶನ. ಸಾಕಷ್ಟು ಅರ್ಥ ಭೇದವುಳ್ಳ ಮತ್ತು ಅತಿ ಭಿನ್ನ ಪ್ರಸಾರದ ಸಮಾನ ರೂಪದ ಪದಗಳು ಬಹುಕಾಲ ಭಾಷೆಯಲ್ಲಿ ಉಳಿದು ಬರುವುದು ಸಾಧ್ಯ.
ಶ್ಲೇಷೆ (ಪನ್) ಇರುವಂಥ ಕಾವ್ಯ ರಚಿಸಲು ಈ ರೀತಿಯ ಸಮಾನ ರೂಪದ ಪದಗಳು ಸಹಾಯಕಾರಿಯಾಗಿವೆ. ಇಂಥ ಕಾವ್ಯ ರಚನೆ ಸಂಸ್ಕೃತದಲ್ಲಿ ಹೇರಳವಾಗಿದೆ. ಕನ್ನಡದಲ್ಲಿ ಕೂಡ ಶ್ಲೇಷೆಯನ್ನುಪಯೋಗಿಸಿಕೊಂಡು ಸಾಕಷ್ಟು ಕಾವ್ಯ ರಚನೆಯಾಗಿದೆ. ಪಂಪಭಾರತದ ಈ ಪದ್ಯವನ್ನು ಇಲ್ಲಿ ಉದಾಹರಣೆಯಾಗಿ ಕೊಡಬಹುದು. ಕುವಳಯಬಾಂಧವನೆಸೆವನೆ | ಕುವಳಯಮಂ ಬೆಳಗಿ ಕುವಳಯಂ ಪೊ¾ಗೆನೆ ಪಾಂ || ಡವರೆ ಪೊ¾ಗಾಗೆನಿನಗೀ | ಕುವಳಯಪತಿಯೆಂಬ ಪೆಂಪೊಡಂಬಡೆ ನೃಪತೀ ||
ಸಮಾನಾರ್ಥಕ ಆದರೆ ಭಿನ್ನರೂಪದ ಪದಗಳಿಗೂ (ಸಿನೊನಿಮ್ಸ್) ಸಮಾನ ರೂಪದ ಆದರೆ ಭಿನ್ನಾರ್ಥಕ ಪದಗಳಿಗೂ ವ್ಯತ್ಯಾಸವಿರುವುದನ್ನಿಲ್ಲಿ ಗಮನಕ್ಕೆ ತಂದುಕೊಳ್ಳಬಹುದು. ಮನುಷ್ಯ, ಮನುಜ, ನರ ಹಾಗೂ ಸ್ತ್ರೀ, ಅಬಲೆ, ನಾರೀ-ಇವು ಭಿನ್ನರೂಪದ, ಸಮಾನಾರ್ಥಕ ಪದಗಳು. ಅಂದರೆ, ಕೆಲವಾರು ಪರಿಸರಣಗಳಲ್ಲಿ ಈ ಗುಂಪಿನ ಪದಗಳಲ್ಲಿ ಯಾವುದೇ ಒಂದನ್ನು ಉಪಯೋಗಿಸಬಹುದು. ನಿಜಕ್ಕೂ, ಈ ಪದಗಳಲ್ಲಿ ಯಾವುದೇ ಎರಡರ ಪ್ರಸಾರ ಒಂದೇ ಆಗಿರುವುದಿಲ್ಲ. ಈ ಪದಗಳ ಅರ್ಥವ್ಯಾಪ್ತಿಯಲ್ಲಿ ಅಂತರವಿದೆ.
ಕೆಲವೊಮ್ಮೆ ಒಂದೇ ಪದವನ್ನು, ಆ ಪದ ಸೂಚಿಸುವ ವಸ್ತುವಿನ ಸದೃಶವಿರುವೆಡೆಗಳಲ್ಲಿ ಕೂಡ ಬಳಸಿರುವುದು ಕಂಡುಬರುತ್ತದೆ. ಕುರ್ಚಿಯ ಕಾಲುಗಳು, ಸೂಜಿಯ ಕಣ್ಣು, ಬಾಚಣಿಗೆಯ ಹಲ್ಲುಗಳು, ಗಡಿಯಾರದ ಕೈಗಳು, ಗಂಟೆಯ ನಾಲಗೆ ಇತ್ಯಾದಿ ಶಬ್ದಗಳಲ್ಲಿ ಕಾಲು, ಕಣ್ಣು, ಹಲ್ಲು, ಕೈ ಮತ್ತು ನಾಲಗೆ ಈ ಬಗೆಯ ಪ್ರಯೋಗಕ್ಕೆ ಸೇರಿವೆ. ಮನುಷ್ಯನ ಕಾಲುಗಳು ಮತ್ತು ಕುರ್ಚಿಯ ಕಾಲುಗಳು ಎಂಬಲ್ಲಿನ ಕಾಲು ಸಮಾನರೂಪದ ಭಿನ್ನಾರ್ಥಕ ಜೋಡಿಪದವಲ್ಲ. ಸಮಾನರೂಪವಿರುವುದೇನೋ ನಿಜ. ಆದರೆ ಇದು ಒಂದೇ ಪದವಾಗಿದ್ದು ಅರ್ಥದಲ್ಲಿ ಸ್ವಲ್ಪ ವಿಸ್ತಾರ ಉಂಟಾಗಿದೆ ಎನ್ನಬಹುದು. ಇಂಥ ಪ್ರಯೋಗಗಳನ್ನು ಅಲಂಕಾರಿಕ ಪ್ರಯೋಗಗಳು (ಮೆಟಫಾರಿಕಲ್ ಯೂಸೇಜ್) ಎನ್ನುತ್ತಾರೆ. (ಎಚ್.ಎಸ್.ಎ.)