ಎರ್ನಾಂಡೋ ಡಿ ಸೋಟೋ (1500-1542). ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಪ್ರದೇಶದಲ್ಲಿ ಸುತ್ತಾಡಿದ ಸ್ಪ್ಯಾನಿಷ್ ಪರಿಶೋಧಕ ಹಾಗೀ ಮಿಸಿಸಿಪಿ ನದಿಯ ಆವಿಷ್ಕರ್ತ.

ಜನನ, ಸ್ಪೇನಿನ ಎಸ್ಟ್ರಮಡುರ ಪ್ರಾಂತ್ಯದಲ್ಲಿ. ಡಾರಿಯನ್‍ನ (ಪನಾಮಾ) ರಾಜ್ಯಪಾಲ ಪೆದ್ರಾರಿಯಾಸ್ ದಾವಿಲಾನ ಆಶ್ರಯದಲ್ಲಿದ್ದ. 1519ರಲ್ಲಿ ಅವನೊಂದಿಗೆ ಮಧ್ಯ ಅಮೆರಿಕಕ್ಕೆ ಹೋದ. ದಾವಿಲಾನ ಮಗಳು ಇಸಬೆಲಳನ್ನು ಮದುವೆಯಾದ.

ಅನ್ವಷಣೆಗಳು

ಬದಲಾಯಿಸಿ

1532ರಲ್ಲಿ ಪೆರುವಿನಲ್ಲಿ ಫ್ರಾಂತೀಸ್ಕೋ ಪಿದಾರೋನನ್ನು ಕೂಡಿಕೊಂಡು, ಇನ್ಕದ ದೊರೆ ಆಟಾವಾಲ್ಪಾನನ್ನು ಸೆರೆಹಿಡಿಯಲು ಸಹಾಯಮಾಡಿ, ಅದರ ರಾಜಧಾನಿ ಕೊಸ್ಕೋಗೆ ಹಾದಿ ತೋರಿಸಿದ. ಅನಂತರ ಸ್ಪೇನಿಗೆ ಹಿಂದಿರುಗಿದ. ಆದರೆ 1536ರಲ್ಲಿ ಉತ್ತರ ಅಮೆರಿಕದ ಫ್ಲಾರಿಡ ಪ್ರದೇಶವನ್ನು ಜಯಿಸಲು 5ನೆಯ ಚಾರ್ಲ್ಸ್ ನ ಅನುಮತಿ ಪಡೆದು, 1538ರ ಏಪ್ರಿಲ್‍ನಲ್ಲಿ ಅಲ್ಲಿಗೆ ಹೊರಟ. ಇವನು ಕ್ಯೂಬದ ರಾಜ್ಯಪಾಲನಾಗಿ ನೇಮಕವಾಗಿದ್ದ. ಈಗಿನ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಭಾಗವನ್ನು ಪರಿಶೋಧಿಸಿದವನು ಈತ.

1539ರ ಮೇ 18ರಂದು ಹವಾನದಿಂದ ಒಂಬತ್ತು ನೌಕೆಗಳು, ನಾವಿಕರು ಹಾಗೂ ಸೈನಿಕರೊಂದಿಗೆ ಹೊರಟು ಮೇ 25ರಂದು ಮೆಕ್ಸಿಕೋ ಖಾರಿಯಲ್ಲಿರುವ ಟ್ಯಾಂಪ ಕೊಲ್ಲಿಯನ್ನು ಸೇರಿ ವಾಯುವ್ಯ ದಿಕ್ಕಿನ ಒಳನಾಡನ್ನು ಪರಿಶೋಧಿಸಿ ಕೊಲಂಬಿಯದತ್ತ ಪ್ರಯಾಣ ಬೆಳೆಸಿ ಸವಾನ ನದಿಯ ಪೂರ್ವದಲ್ಲಿ ವಾಯವ್ಯಾಭಿಮುಖವಾಗಿ ಹೊರಟು ಉತ್ತರ ಕ್ಯಾರಲೈನ ಪ್ರದೇಶ ಸೇರಿ ಅಲ್ಲಿಂದ ಪಶ್ಚಿಮಕ್ಕೆ ತಿರುಗಿ ಅಲಬಾಮದ ಟಾಲಡೀಗ ಕೌಂಟಿಯ ಪ್ರದೇಶವನ್ನು ತಲಪಿ, ಕೆಳಕ್ಕೆ ಸಾಗಿ ಟಸ್ಕಲೂಸ ಸೀಮೆಯನ್ನು ಸೇರಿ ಅಲ್ಲಿಂದ ಪಶ್ಚಿಮಕ್ಕೆ ತಿರುಗಿ ಆಲಬಾಮ ನದಿಯನ್ನು ದಾಟಿ ಕ್ಲಾರ್ಕ್ ಕೌಂಟಿಗೆ ಬಂದ. ಅಲ್ಲಿ ನಡೆದ ಒಂದು ಯುದ್ಧದಲ್ಲಿ ಇವನ ಕಡೆಯ 70 ಮಂದಿ ಮೃತರಾಗಿ ಅನೇಕರು ಗಾಯಗೊಂಡರು. ಇವನಿಗೂ ತೀವ್ರಗಾಯಗಳಾದುವು. ಅನಂತರ ಇವನು ವಾಯುವ್ಯಾಭಿಮುಖವಾಗಿ ಮುಂದುವರಿದು ಮುಂದೆ ಮಿಸಿಸಿಪಿ ಎನಿಸಿಕೊಂಡ ಪ್ರದೇಶವನ್ನು ಪ್ರವೇಶಿಸಿದ. ಇವನು 1541ರ ಜೂನ್ 18ರಂದು ಮಿಸಿಸಿಪಿ ನದಿಯನ್ನು ಕಂಡು ಹಿಡಿದನೆಂದು ಹೇಳಲಾಗಿದೆ. ಅದನ್ನೂ ದಾಟಿ ಈಗಿನ ಆರ್ಕಾನ್ಸಸ್ ತಲುಪಿದ ಇವನ ತಂಡದವರು ಈ ಪ್ರದೇಶದಲ್ಲಿ ಮುಂದುವರಿದು ಲವೂಸಿಯಾನದಲ್ಲಿರುವ ಫೆರಿಡೇ ಬಳಿಯ ಒಂದು ಸ್ಥಳಕ್ಕೆ ಬಂದರು. ಅಲ್ಲಿ 1542ರ ಮೇ 21ರಂದು ಡಿ ಸೋಟೋ ಮರಣ ಹೊಂದಿದ. ಅನಂತರ ಈ ತಂಡ ಮೊಸ್ಕೋಸೋನ ನೇತೃತ್ವದಲ್ಲಿ ಮೆಕ್ಸಿಕೋವನ್ನು ತಲುಪಿತು.

ಜಾರ್ಜಿಯದಿಂದ ಟೆಕ್ಸಸ್‍ವರೆಗಿನ ಇಂಡಿಯನ್ ಸಂಸ್ಕೃತಿಗಳ ಮೊದಲ ಪರಿಚಯ, ಉತ್ತರ ಅಮೆರಿಕದ ಆಗ್ನೇಯ ಭಾಗದಲ್ಲಿ ಐರೋಪ್ಯ ವಸಾಹತುಗಳ ಸ್ಥಾಪನೆ-ಇವು ಡಿ ಸೋಟೋನ ಪರಿಶೋಧನೆಯ ಫಲಿತಾಂಶಗಳು.



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: