ಎಮ್. ಗೋಪಾಕೃಷ್ಣ ಅಡಿಗ

ಕವಿ ಮತ್ತು ಸಾಹಿತಿ

ಬದಲಾಯಿಸಿ

ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸಾರ್ವಜನಿಕ ಸಾರ್ವಜನಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ಯುಗ ಪ್ರವರ್ತಕ ಕವಿ. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಅಡಿಗರು ಕನ್ನಡ ವಿಮರ್ಶೆಯಲ್ಲೂ ಪ್ರಬುದ್ಧತೆಯನ್ನು ತಂದರು. `ಸಾಕ್ಷಿ' ಎಂಬ ಉನ್ನತಮಟ್ಟದ ಸಾಹಿತ್ಯಪತ್ರಿಕೆಯನ್ನು ಸುಮಾರು ಇಪ್ಪತ್ತು ವರ್ಷ ಕಾಲ ನಡೆಸಿ, ಹೊಸ ಸಂವೇದನೆಯನ್ನು ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಅಡಿಗರು ಮಾಡಿದ ಸಾರಸ್ವತ ಸಾಡನೆ ಅನನ್ಯವಾದುದು.

ಹುಟ್ಟು,ಎಳೆ ಹರೆಯ

ಬದಲಾಯಿಸಿ

ಗೋಪಾಲಕೃಷ್ಣ ಅಡಿಗರು ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ ೧೮-೨-೧೯೧೮ರಲ್ಲಿ ಜನಿಸಿದರು. ಅವರದು ಮಧ್ಯಮ ವರ್ಗದ ಕನ್ನಡ ಮಾತಾಡುವ ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಕುಟುಂಬ. ಅಡಿಗರ ಮನೆತನ ಜ್ಯೋತಿಷ್ಯ, ವೇದ ಶಾಸ್ತ್ರ ಪಾಂಡಿತ್ಯ ಮತ್ತು ಪಂಚಾಂಗ ನಿರ್ಮಾಣಕ್ಕೆ ಪ್ರಸಿದ್ಧವಾದುದು. ಈಗಲೂ `ಮೊಗೇರಿ ಪಂಚಾಂಗ ಪ್ರಸಿದ್ಧವಾಗಿದೆ. ಗೋಪಾಲಕೃಷ್ಣ ಅಡಿಗರ ತಂದೆ ರಾಮಪ್ಪ ಅಡಿಗರು ಸಾತ್ವಿಕ ಸ್ವಭಾವದ ವಿದ್ವಾಂಸ, ಕವಿ ಹಾಗೂ ಯಕ್ಶಗಾನ ಅರ್ಥಧಾರಿಯಾಗಿದ್ದರು. ತಾಯಿ ಗೌರಮ್ಮ ಸೌಮ್ಯ ಸ್ವಭಾವದ ಗೃಹಿಣಿ. ಅಡಿಗರ ಎಳೆ ಹೃದಯ ಒಂದು ಕಡೆ ಪಶ್ಚಿಮ ಘಟ್ಟ ಇನ್ನೊಂದು ಕಡೆ ಭೋರ್ಗರೆವ ಅರಬೀ ಸಮುದ್ರಗಳ ನಡುವಿನ ಸಸ್ಯ ಶ್ಯಾಮಲ ಗ್ರಾಮೀಣ ಪರಿಸರದಲ್ಲಿ ಬೆಳೆಯಿತು. ಅವರು ಮುಂದೆ ರಚಿಸಿದ ಪ್ರಸಿದ್ಧ ಕವನಗಳಾದ `ಒಳತೋಟ', `ಭೂಮಿಗೀತ',ಗಳಲ್ಲಿ ಈ ಅಂಶಗಳು ಅನನ್ಯ ರೀತಿಯಲ್ಲಿ ಪ್ರತಿಬಿಂಬಿಸಿವೆ. ಭೂಮಿ-ಆಕಾಶಗಳು ದ್ವಂದ್ವಶ್ಕ್ತಿಗಳ ನಡುವೆ ಸಿಲುಕಿ ತತ್ತರಿಸುತ್ತಿರುವ ಮನುಷ್ಯನ ಪಾಡನ್ನು ಅದ್ಭುತವಾಗಿ ಅಡಿಗರನ್ನು ಇವು ಬಾಲ್ಯದಿಂದಲೂ ಕಾಡುತ್ತಿದ್ದವು. ಅವರೇ ಹೇಳುತ್ತಾರೆ. `ಮೇಲಿನ ಆಕಾಶ, ಹತ್ತಿರದಲ್ಲಿರುವಸಮುದ್ರ, ದೂರದಲ್ಲಿ ನೆಲೆನಿಂತ ಬೆಟ್ಟಗಳು - ತಮ್ಮ ಸ್ಥಿರ,ಚಂಚಲ ಪ್ರಭಾವದಿಂದ ನನ್ನ ಬದುಕಿನುದ್ದಕ್ಕೂ ಅಂತರಂಗದಲ್ಲಿ ನೆಲೆಸಿ ನನ್ನ ಕಾವ್ಯಕ್ಕೆ ಹಿನ್ನೆಲೆಯನ್ನೊದಗಿಸಿದೆ.(ಸಮಗ್ರ ಕಾವ್ಯ ಮುನ್ನುಡಿ: ೬೧)

ಯಕ್ಷಗಾನದ ಪ್ರಭಾವ

ಬದಲಾಯಿಸಿ

ಅಡಿಗರ ಮನೆಯಲ್ಲಿ ಸಾಹಿತ್ಯಕ್ಕೆ ಪ್ರೇರಕವಾದ ವಾತಾವರಣ ಇತ್ತು. ಅಡಿಗರ ತಂದೆ, ಅಜ್ಜ, ಅಜ್ಜಿ, ಸೋದರತ್ತೆಯರು, ಚಿಕ್ಕಪ್ಪ-ಎಲ್ಲರಿಗೂ ಪದ್ಯ ರಚನೆ ಮಾಡುವ ಅಭ್ಯಾಸವಿತ್ತು. ತಂದೆ ರಾಮಪ್ಪ ಅಡಿಗರು ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನೂ ರಚಿಸುತ್ತಿದ್ದರು. ಯಕ್ಶಗಾನದ ತಾಳಮದ್ದಲೆಗಳಲ್ಲಿ ಅರ್ಥ ಹೇಳುತ್ತಿದ್ದರು. ಸೋದರತ್ತೆ ಪ್ರತಿ ರಾತ್ರಿಯೂ ಗದುಗು ಭಾರತ, ಜೈಮಿನಿ ಭಾರತಗಳನ್ನು ರಾಗವಾಗಿ ಹಾಡುತ್ತಿದ್ದರು. ಇವರಲ್ಲೊಬ್ಬರಾದ ಮೂಕಾಂಬು(ಮೂಕಜ್ಜಿ) ಎಂಬವರು ಸ್ವತಃ ಪದ್ಯಗಳನ್ನು ರಚಿಸುತ್ತಿದ್ದರು. ಅಜ್ಜಿಯ ತಮ್ಮ ಬವಳಾಡಿ ಹಿರಿಯಣ್ಣ ಹೆಬ್ಬಾರ ಎಂಬವರು ಹೆಸರಾಂತ ಯಕ್ಷಗ್ನ ಅರ್ಥಧಾರಿಯಾಗಿದ್ದರು. ಇವರ ವಂಶಜರಾದ ಪ್ರೊ. ಬಿ. ಎಚ್. ಶ್ರೀಧರ್ ಅವರು ಮುಂದೆ ಕನ್ನಡದಲ್ಲಿ ಓರ್ವ ಗಣ್ಯ ಕವಿಯಾಗಿ ಪ್ರಸಿದ್ಧರಾದರು. ಕರಾವಳಿಯ ಮಹಾನ್ ಕಲೆ ಯಕ್ಷಗಾನವೇ ಅಡಿಗರ ಮೇಲೆ ಗಾಢ ಪ್ರಭಾವ ಬೀರಿತ್ತು. ಅವರ ಪ್ರಸಿದ್ಧ ಕವನ`ಗೊಂದಲಒಉರ'ದಲ್ಲಿ ಗೊಂದಲಾಸುರನ ಪ್ರವೇಶದ ಸಂದರ್ಭ - ಯಕ್ಷಗಾನದಲ್ಲಿ ರಂಗಸ್ಥಳ ಪ್ರವೇಶ ಮಾಡುವ ರಾಕ್ಷಸನ ಪ್ರವೇಶ ಶೈಲಿಯಲ್ಲಿದೆ. `ಅಜ್ನಾತ ವೇಷ' ಎಂಬ ಕವನದಲ್ಲಿ ವೇಷಭೂಷಣಗಳ ಪೆಟ್ಟಿಗೆಯನ್ನು ಹೊರುವ ಬಡ ಕೂಲಿಗಳ ಪ್ರತಿಮೆಯನ್ನು ಪ್ರಜಾಸತ್ತೆಯಲ್ಲಿ ಪುಢಾರಿಗಳ ಚಾಕರಿ ಮಾಡುವ ಜನಸಾಮಾನ್ಯರ ಪ್ರತೀಕವಾಗಿ ಬಳಸಿದ್ದಾರೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು

ಶಿಕ್ಷಣ

ಬದಲಾಯಿಸಿ

ಸಮೀಪದ ಬಿಜೂರು, ಬೈಂದೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಹದಿಮೂರರ ಹರೆಯದಲ್ಲೇ ಪದ್ಯ ಬರೆಯಲಾರಂಭಿಸಿದ ಅವರಿಗೆ ಕುಂದಾಪುರದ ವಾತಾವರಣ ಇನ್ನಷ್ಟು ಬರೆಯಲು ಪ್ರೇರಣೆ ನೀಡಿತು.ಮೊದಲೇ ಇದ್ದ ಓದುವ ಹುಚ್ಚು ಇನ್ನಷ್ಟು ಬಲವಾಯಿತು. ಆ ಸಂದರ್ಬದಲ್ಲಿ ಶಿವರಾಮ ಕಾರಂತರ ಅಣ್ಣ ಕೋ ಲ ಕಾಆರಂತರು ಅಡಿಗರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಅದು ಇಡೀ ದೇಶವೇ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ, ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದ ಕಾಲ. ಅಡಿಗರೂ ಹುಮ್ಮಸ್ಸಿನಿಂದ ಹೋರಾಟದಲ್ಲಿ ಭಾಗಿಯಾದರು. ಹೆಂಡದಂಗಡಿಯ ಮುಂದೆ `ಪಿಕೆಟಿಂಗ್' ಮಾಡಿದರು. ದೇಶ ಭಕ್ತಿಯ ಉತ್ಸಾಹ, ಉದ್ರೇಕಗಳು ಅವರ ಕಾವ್ಯ ರಚನೆಗೆ ಪೂರಕವಾದವು. ಅವರ ಕೆಲವು ಕವನಗಳು ಬೆಂಗಳೂರಿನ `ಸುಬೋಧ', ಮಂಗಳೂರಿನ `ಬಡವರ ಬಂಧು', ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್. ಎಸ್. ಎಲ್. ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ಮೀಡಿಯಟ್ತರಗತಿಗೆ ಸೇರಿಕೊಂಡರು. ಅಲ್ಲಿ ಕಳೆದ ಐದಾರು ವರ್ಷ ಅವರ ಬದುಕಿನ ಒಂದು ಮಹತ್ವದ ಅವಧಿಯಾಗಿತ್ತು. ಈ ಅವಧಯಲ್ಲಿ ಅವರಿಗೆ ಬಿ. ಎಚ್. ಶ್ರೀಧರ್, ಹೆಚ್ ವೈ. ಶಾರದಾಪ್ರಸಾದ್, ಚದುರಂಗ, ಟಿ. ಎಸ್.ಸಂಜೀವ ರಾವ್. ಎಂ. ಶಂಕರ್, ಕೆ. ನರಸಿಂಹಮೂರ್ತಿ ಮುಂತಾದವರ ಒಡನಾಟ, ಸ್ನೇಹ ಅವರಿಗೆ ಲಭ್ಯವಾಯಿತು. `ಭಾವತರಂಗ' ಸಂಕಲನದ ಹೆಚ್ಚಿನ ಕವನಗಳು ಈ ಅವಧಿಯಲ್ಲಿ ರಚಿತವಾದವು. ಅವುಗಳಲ್ಲೊಂದಾದ`ಒಳತೋಟಿ' ಎಂಬ ಕವನ ಬಿ. ಎಂ. ಶ್ರೀ ರಜತ ಮಹೋತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಸುವರ್ಣ ಪದಕವನ್ನು ಪಡೆಯಿತು.

ಉದ್ಯೋಗ ಪರ್ವ

ಬದಲಾಯಿಸಿ

ಬಿ.ಏ ಆನರ್ಸ್ ಮುಗಿಸಿದ ಬಳಿಕ ಅಡಿಗರು ತುಮುಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮುಂತಾದ ಊರುಗಳಲ್ಲಿ ಅಧ್ಯಾಪಕರಾಗಿ ದುಡಿದರು. ಸ್ವಲ್ಪ ಕಾಲ ಅಠಾರಾ ಕಚೇರಿಯಲ್ಲಿಯೂ ಗುಮಾಸ್ತರಾಗಿ ದುಡಿದರು. ಅನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದರು. (೧೯೪೮-೫೨) ಬಳಿಕ ಎರಡು ವರ್ಷ ಕುಮಟಾದ ಕೆನರಾ ಕಾಲೇಜಿನಲ್ಲೂ, ಅನಂತರ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿಯೂ, ಇಂಗ್ಲಿಷ್ ಉಪನ್ಯಾಸಕರಾಗಿ (೧೯೫೪-೫೨) ಹತ್ತು ವರ್ಷ ದುಡಿದರು.೧೯೬೪ರಿಂದ ೬೮ರವರೆಗೆ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಆಹೊಸ ಕಾಲೇಜನ್ನು ಕಟ್ಟಿದರು. ೧೯೬೮ರಲ್ಲಿ ಆ ಹುದ್ದೆಯನ್ನು ತ್ಯಜಿಸಿ, ಉಡುಪಿಯ ಪೂರ್ಣಪ್ರಜ್ನ ಕಾಲೇಜಿನ ಪ್ರಿನ್ಸಿಪಾಲರಾದರು. ೧೯೭೧ರಲ್ಲಿ ಅವರ ಬದುಕಿನಲ್ಲಿ ಒಂದು ಅನಿರೀಕ್ಷಿತ ತಿರುವು ಬಂತು. ಲೋಕಸಭಾ ಚುನಾವಣೆಯಲ್ಲಿ ೯ ಪಕ್ಷಗಳ ಒಕ್ಕೂಟದ ಪರವಾಗಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಸ್ಪರ್ಧಿಸಬೇಕೆಂಬ ಸ್ನೇಹಿತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದರು. ಆಗ ವಿಜೃಂಭಿಸುತ್ತಿದ್ದ `ಇಂದಿರಾ ಅಲೆ'ಯ ಅಬ್ಬರದಲ್ಲಿ ಅವರಿಗೆ ಸೋಲಾಯಿತು. ತತ್ಪರಿಣಾಮವಾಗಿ ಪೂರ್ಣಪ್ರಜ್ನ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಗೆ ರಾಜಿನಾಮೆ ಕೊಡಬೇಕಾಯಿತು. ಅನಂತರ ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ನಲ್ಲಿ ಉಪನಿರ್ದೇಶಕರಾಗಿ ಸ್ವಲ್ಪ ಕಾಲ ದುಡಿದ ಬಳಿಕ ಶಿಮ್ಲಾದ `ಇಂಡಿಯನ್ ಇನ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್' ಸಂಸ್ಥೆಯಲ್ಲಿ ಮೂರು ವರ್ಷ ವಿಸಿತ್ಟಿಂಗ್ ಫೆಲೊ ಆಗಿ ಕೆಲಸ ಮಾಡಿದರು.

ನವ್ಯದ ನಾಯಕತ್ವ

ಬದಲಾಯಿಸಿ

೧೯೫೫ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದ ಶಿಖರದಲ್ಲಿದ್ದರು. ಹೊಸ ಪೀಳಿಗೆಯ ಯು. ಆರ್. ಅನಂತಮೂರ್ತಿ, ಏ. ಕೆ. ರಾಮಾನುಜನ್, ರಾಮಚಂದ್ರ ಶರ್ಮಾ,ನಿಸಾರ್ ಅಹಮದ್, ಲಂಕೇಶ್,ತೇಜಸ್ವಿ, ಲಕ್ಶ್ಮಿನಾರಾಯಣ ಭಟ್ಟ, ಕೆ.ವಿ.ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಚಂದ್ರಶೇಖರ ಪಾಟೀಲ ಎಂ. ಎನ್. ವ್ಯಾಸರಾವ್, ಜಯಂತ ಕೈಕಿಣಿ, ಕ. ವೆಂ.ರಾಜಗೋಪಾಲ್, ಮಾಧವ ಕುಲಕರ್ಣಿ, ಜಿ. ಎಚ್. ನಾಯಕ್, ಶ್ರೀಕೃಸ್ಣ ಅಲನ ಹಳ್ಳಿ ನಾ. ಮೊಗಸಾಲೆ ಮುಂತಾದ ಅನೇಕ ಲೇಖಕರು ತಮ್ಮದೇ ಆದ ರೀತಿಯಲ್ಲಿ ನವ್ಯಪ್ರಜ್ನೆಯ ಸಾಹಿತ್ಯವನ್ನು ರಚಿಸಿದರು. ಇವರಲ್ಲಿ ಚಂಪಾ ಮತ್ತು ತೇಜಸ್ವಿ ಮುಂತಾದ ಕೆಲವರು ಕೆಲಕಾಲದ ನಂತರ ನವ್ಯ ಮಾರ್ಗದಿಂದ ಕೊಂಚ ಭಿನ್ನವಾದ ಮಾರ್ಗವನ್ನು ಹಿಡಿದರೂ ಆರಂಭದಲ್ಲಿ ಅಡಿಗರು ಪ್ರವರ್ತಿಸಿದ ನವ್ಯತೆಯ ಪ್ರಭಾವಾದಲ್ಲೇ ತಮ್ಮ ಸೃಜನಶೀಲತೆಯನ್ನು ರೂಪಿಸಿಕೊಂಡುದುದನ್ನು ಮರೆಯುವಂತಿಲ್ಲ.

ಅಡಿಗರ ಕಾವ್ಯ- ಒಂದು ಪಕ್ಶಿ ನೋಟ

ಬದಲಾಯಿಸಿ

ಅಡಿಗರು ೧೯೪೬ರಿಂದ ೧೯೯೨ರವರೆಗೆ ಕಾವ್ಯ ರಚನೆ ಮಾಡಿದರು. ಅವುಗಳ ಒಟ್ಟು ಸಂಖ್ಯೆಯು ಸುಮಾರು ಇನ್ನೂರ ಐವತ್ತು. ಅವು `ಭಾವತರಂಗ'(೧೯೪೬) ಕಟ್ಟುವೆವು ನಾವು(೧೯೪೮), ನಡೆದು ಬಂದ ದಾರಿ(೧೯೫೨),ಚಂಡೆಮದ್ದಳೆ(೧೯೫೪), ಭೂಮಿಗೀತ(೧೯೫೯) ವರ್ಧಮಾನ(೧೯೭೨),ಇದನ್ನು ಬಯಾಸಿರಲಿಲ್ಲ,(೧೯೭೫), ಮೂಲಕ ಮಹಾಶಯರು(೧೯೮೦), ಬತ್ತಲಾರದ ಗಂಗೆ(೧೯೮೩), ಚಿಂತಾಮಣಿಯಲ್ಲಿ ಕಂಡ ಮುಖ(೧೯೮೭), ಸುವರ್ಣ ಪುತ್ಥಳಿ(೧೯೯೦), ಬಾ ಇತ್ತ ಇತ್ತ(೧೯೯೨) ಎಂಬ ಹನ್ನೆರಡು ಸಂಕಲನಗಳಲ್ಲಿ ಪ್ರಕಟವಾಗಿವೆ. ಅವರ ಕವನಗಳಲ್ಲಿ ಗಾತ್ರದಲ್ಲೂ, ವಸ್ತುವಿನಲ್ಲೂ,ನಿರೂಪಣಾ ವಿಧಾನದಲ್ಲೂ ಅಪಾರ ವೈವಿಧ್ಯವಿದೆ.

ಮನ್ನಣೆ, ಪ್ರಶಸ್ತಿ

ಬದಲಾಯಿಸಿ

೧೯೬೮ರಲ್ಲಿ ಅಡಿಗರಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರೊ. ಕು. ಶಿ. ಹರಿದಾಸ ಭಟ್ಟ ಮತ್ತು ವಿಜಯನಾಥ ಶೇಣೈ ಮುಂತಾದ ಸಾಹಿತ್ಯಾಭಿಮಾನಿಗಳು ಒಂದು ಅಪೂರ್ವ ಸಮಾರಂಭವನ್ನು ಏರ್ಪಡಿಸಿದರು. ಅದರಲ್ಲಿ ಹೊಸ ಪೀಳಿಗೆಯ ಮಹತ್ವದ ಕವಿ, ಸಾಹಿತಿ, ವಿಮರ್ಶಕರುಗಳಾದ ಲಂಕೇಶ್, ಚಂದ್ರಶೇಖರ ಕಂಬಾರ,ಎಂ.ಜಿ. ಕೃಷ್ಣಮೂರ್ತಿ, ಶಾಂತಿನಾಥ ದೇಸಾಯಿ, ಜಿ. ಎಚ್. ನಾಯಕ, ಕಿ ರಂ. ನಾಗರಾಜ. ಗಿರಡ್ಡಿ ಗೋವಿಂದರಾಜ, ಬನ್ನಂಜೆ ಗೋವಿಂದಾಚರ್ಯ, ಡಿ. ಎಸ್. ರಾಯಕರ್ ಮುಂತಾದವರು ಭಾಗವಹಿಸಿದ್ದರು. ವಿಮರ್ಶಕ ನಿಸ್ಸಿಂ ಇಝೆಕಿಲ್ ಅವರು` ಅಡಿಗರು ಕನ್ನಡದಲ್ಲಿ ಬರೆಯುತ್ತಿರುವ ಒಬ್ಬ ಶ್ರೇಷ್ಠ ಭಾರತೀಯ ಕವಿ' ಎಂದು ಕೊಆಂಡಾಡಿದರು. ೧೯೭೪ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು. ೧೯೭೫ರಲ್ಲಿ ಅಡಿಗರಿಗೆ `ವರ್ಧಮಾನ'ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು. ೧೯೭೯ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರನ್ ಆಸನ್' ಪ್ರಶಸ್ತಿ ಲಭ್ಯವಾಯಿತು. ೧೯೮೦ರಲ್ಲಿ `ಸಮಗ್ರ ಕಾವ್ಯಕ್ಕೆ ಮೂಡಬಿದ್ರೆಯ `ವರ್ಧಮಾನ' ಪ್ರಶಸ್ತಿ ದೊರೆಯಿತು. ೧೯೮೨ರಲ್ಲಿ ಪ್ಯಾರಿಸ್, ಯುಗೋಸ್ಲಾವಿಯಗಳಲ್ಲಿ ನಡೆದ ವಿಶ್ವ ಕವಿ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಭಾಗವಹಿಸಿದರು. ೧೯೮೬ರಲ್ಲಿ ಮಧ್ಯಪ್ರದೇಶ ಸರಕಾರ ಆರಂಭಿಸಿದ ಪ್ರಥಮ `ಕಬೀರ್ ಸನ್ಮಾನ್' ಅಡಿಗರಮಡಿಲಿಗೆ ಬಂತು. ೧೯೮೮ರಲ್ಲಿ ಥ್ಯಾಲಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಜಾಗತಿಕಕವಿ ಸಮ್ಮೇಳನದಲ್ಲಿ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಎಂಡ್ ಕಲ್ಚರ್' ಸಂಸ್ಥೆ ಅವರಿಗೆ ಡೊಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ ನೀಡಿತು. ಹೀಗೆ ಕನ್ನಡದ ಮಹತ್ವದಕವಿಯಾಗಿ ಮೂರು ದಶಕಗಳ ಕಾಲ ಬೆಳಗಿದ ಅಡಿಗರು ೧೯೯೨ ನವೆಂಬರ್ ೪ರಂದು ಅಸ್ತ್ಂಗತರಾದರು.