ಎಡ್ವರ್ಡ್ ಜಾನ್ ಟ್ರೆಲಾನಿ
ಎಡ್ವರ್ಡ್ ಜಾನ್ ಟ್ರೆಲಾನಿ (1792-1881). ಸಾಹಸಿ ಮತ್ತು ಜೀವನಚರಿತ್ರೆಕಾರ. ಷೆಲೀ ಹಾಗೂ ಬೈರನ್ ಕವಿಗಳ ಸ್ನೇಹಿತನೆಂದು ಪ್ರಸಿದ್ಧನಾದವ.
ಬದುಕು
ಬದಲಾಯಿಸಿಲಂಡನ್ನಿನಲ್ಲಿ ಹುಟ್ಟಿದ ಈತ ಚಿಕ್ಕಂದಿನಿಂದಲೂ ಸಾಹಸಪ್ರವೃತ್ತಿಯವ. ತಡೆಬಡೆಯಿಲ್ಲದೆ ಸುಳ್ಳು ಹೇಳಿ ನಿಭಾಯಿಸಿಕೊಳ್ಳುವ ವಾಚಾಳಿತನವೇ ಈತನ ಮುಖ್ಯ ಬಂಡವಾಳ. ತನ್ನ 15ನೆಯ ವಯಸ್ಸಿನಲ್ಲಿ ನೌಕಾದಳಕ್ಕೆ ಸೇರಿ ಮುಂದೆ ಒಳ್ಳೆಯ ನಾವಿಕನೆಂದು ಹೆಸರು ಪಡೆದ. ಭಾರತಕ್ಕೆ ಹೊರಟ ಈತನ ನೌಕಾಪಡೆ ಮುಂಬಯಿಗೆ ಬಂದು ತಲುಪಿದ ಅನಂತರ ಈತ ತಲೆತಪ್ಪಿಸಿಕೊಂಡು ಭಾರತದಲ್ಲಿ ಕೆಲವು ವರ್ಷ ಕಳೆದ. ಸಾಹಸೀ ಜೀವನದಲ್ಲಿ ಹಲವಾರು ರಾಜ್ಯಗಳ ಸೈನ್ಯಗಳ ತರಬೇತಿ ಮಾಡಿದ್ದಾಗಿಯೂ ಅನೇಕ ರಾಜಮಹಾರಾಜರ ಗೌರವಯುತ ಸೇವೆಯಲ್ಲಿದ್ದು ಮೆಚ್ಚುಗೆ ಪಡೆದುದಾಗಿಯೂ ತನ್ನ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾನೆ. ಆದರೆ ಅದೆಲ್ಲ ಬಡಾಯಿಯೆಂದು ಹಲವರ ಟೀಕೆ. 1813ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿ ಅಲ್ಲಿ ಐಷಾರಾಮದ ಜೀವನ ನಡೆಸಿದ. 1822ರ ಜನವರಿ ತಿಂಗಳಲ್ಲಿ ಇಟಲಿಯ ಪೀಸಾ ನಗರದಲ್ಲಿ ಷೆಲೀ ಮತ್ತು ಬೈರನ್ನರ ಸ್ನೇಹ ಸಂಪಾದಿಸಿದ. ಷೆಲಿಯ ವಿಷಯಕ್ಕಂತೂ ತುಂಬುಸ್ನೇಹ ಈತನದು. ಷೆಲಿ ಮತ್ತು ಆತನ ಸ್ನೇಹಿತ ವಿಲಿಯಮ್ಸ್ ಸಮುದ್ರದಲ್ಲಿ ಬಿರುಗಾಳಿಯಲ್ಲಿ ಸಿಕ್ಕಿ ಮುಳುಗಿದಾಗ, ಅವರ ದೇಹಗಳನ್ನು ಹುಡುಕಿಸಲು ಮುಂದಾಳಾಗಿ ಬಂದವರಲ್ಲಿ ಈತನೇ ಮೊದಲಿಗ. ಅನಂತರ ಷೆಲಿಯ ದೇಹವನ್ನು ಬೆಂಕಿಗೊಡ್ಡಿದಾಗ, ಅವನ ಹೃದಯ ಸುಡದಂತೆ ಬೆಂಕಿಯ ಮಧ್ಯದಿಂದ ಅದನ್ನು ಹೊರಕ್ಕೆ ಕಸಿದು ತಂದ ಸಾಹಸಿ ಈತ. ಷೆಲಿಯ ಹೆಂಡತಿ ಇಂಗ್ಲೆಂಡಿಗೆ ಹಿಂತಿರುಗಲು ಹಣವನ್ನೊದಗಿಸಿದುದಲ್ಲದೆ ಷೆಲಿಯ ಗೋರಿಯ ಮೇಲೆ ಷೇಕ್ಸ್‍ಪಿಯರನ ಟೆಂಪೆಸ್ಟ್ ನಾಟಕದ ಸಾಲೊಂದನ್ನು ಬರೆಸಲೂ ಕಾರಣನಾದ. 1823ರಲ್ಲಿ ಟ್ರೆಲಾನಿ ಬೈರನ್ನನೊಂದಿಗೆ ಗ್ರೀಸಿಗೆ ಹೋಗಿ, ಅಲ್ಲಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗೊಂಡ. ಆದರೆ ಬೈರನ್ನನ ಚಂಚಲಬುದ್ಧಿಗೆ ಬೇಸರಗೊಂಡು ಆತನನ್ನು ಬಿಟ್ಟು ಕ್ರಾಂತಿಕಾರೀ ನಾಯಕ ಓಡಿಸ್ಯೂಸ್ ಜತೆ ಸೇರಿ ಒಳಗುದಿ ಯುದ್ಧದಲ್ಲಿ ಗೆರಿಲ್ಲಾ ತಂತ್ರದ ಸಂಗ್ರಾಮದಲ್ಲಿ ಭಾಗವಹಿಸಿ ಕೀರ್ತಿಶಾಲಿಯಾದ. ನಂತರ ಓಡಿಸ್ಯೂಸನ ಸೋದರಿ ಟೆರ್ಸಿಟ್ಸಾಳನ್ನು ಮದುವೆಯಾಗಿ ಇಂಗ್ಲೆಂಡಿಗೆ ಹಿಂತಿರುಗಿದ. ಷೆಲಿಗೆ ನೆರವಾದವನೆಂದೂ ಸಾಹಸಿಯೆಂದೂ ಲಂಡನ್ನಿನಲ್ಲಿ ಕೀರ್ತಿವಂತನಾದ. 1881ರ ಆಗಸ್ಟ್ 13ರಂದು ವೊರ್ತಿಂಗ್ ಬಳಿಯ ಹಳ್ಳಿಯಲ್ಲಿ ತೀರಿಕೊಂಡ
ಪುಸ್ತಕಗಳು
ಬದಲಾಯಿಸಿಷೆಲಿಯ ಜೀವನಚರಿತ್ರೆಯನ್ನು ಬರೆಯಲು ನಡೆಸಿದ ಪ್ರಯತ್ನ, ಈತ ಸುಳ್ಳುಗಾರನೆಂಬ ಅಪವಾದದ ಕಾರಣ ವಿಫಲವಾಯಿತು. ಆದರೂ 1835ರಲ್ಲಿ ತನ್ನ ಆತ್ಮಕಥೆಯಾದ ಅಡ್ವೆಂಚರ್ಸ್ ಆಫ್ ದಿ ಯಂಗರ್ ಸನ್-ಬರೆದ. 1858ರಲ್ಲಿ ಷೆಲೀ ಹಾಗೂ ಬೈರನ್ನರ ನೆನಪುಗಳು ಎಂಬ ಪುಸ್ತಕ ಹೊರತಂದ. ಇದೇ ಪುಸ್ತಕವನ್ನು 1878ರಲ್ಲಿ ಷೆಲೀ, ಬೈರನ್ ಹಾಗೂ ಲೇಖಕ ಇವರ ದಾಖಲೆಗಳು ಎಂಬ ಹೆಸರಿನಲ್ಲಿ ಪ್ರಕಟಿಸಿದ. ತನ್ನ ಬಗ್ಗೆ ವಿಪರೀತ ಅಹಂಕಾರದ ಪ್ರಶಂಸೆ, ಬೈರನ್ನನ ಬಗ್ಗೆ ಬಹುಮಟ್ಟಿಗೆ ಸುಳ್ಳು ನೆನಪುಗಳುಳ್ಳ ಈ ಪುಸ್ತಕದ ಹಿರಿಮೆಯೆಂದರೆ ಷೆಲಿಯ ಬಗ್ಗೆ ಇರುವ ಸತ್ಯವೂ ಸತ್ತ್ವಪೂರ್ಣವೂ ಆದ ಚಿತ್ರಣ. ಷೆಲಿಯ ಬಗ್ಗೆ ನಿಜವಾದ ಸ್ನೇಹ, ಅಭಿಮಾನಗಳು ಈತನಿಗಿತ್ತೆಂದು ಎಲ್ಲರೂ ಒಪ್ಪುತ್ತಾರೆ. ಟ್ರೆಲಾನಿಯ ಪ್ರಾಮುಖ್ಯ ಅವನು ಸಾಹಸೀ ನಾವಿಕನೆಂಬುದಕ್ಕಿಂತ ಹೆಚ್ಚಾಗಿ ಷೆಲಿಯ ಸ್ನೇಹಿತ ಹಾಗೂ ಷೆಲಿಯ ಕೊನೆಯ ದಿನಗಳ ಪೂರ್ಣ ದಾಖಲೆಯನ್ನು ಒದಗಿಸುವುದರಲ್ಲಿ ನೆರವಾದವ ಎಂಬುದರಲ್ಲಿದೆ.