ಎಡ್ವರ್ಡ್ ಆಡೆಲ್ಬರ್ಟ್ ಡಾಯ್ಜಿ
ಎಡ್ವರ್ಡ್ ಆಡೆಲ್ಬರ್ಟ್ ಡಾಯ್ಜಿ ( 1893-1964) - ಅಮೆರಿಕಾದ ಜೀವರಸಾಯನ ವಿಜ್ಞಾನಿ. ವೈಟಮಿನ್-ಏಯನ್ನು ಕುರಿತಂತೆ ಅದರ ಇರವು, ಲಕ್ಷಣ, ಅಗತ್ಯಗಳ ಬಗ್ಗೆ ಮಹತ್ತರ ಅಧ್ಯಯನ ಮತ್ತು ಸಂಶೋಧನೆಗಳನ್ನು ಈತ ಡೆನ್ಮಾರ್ಕಿನ ಜೀವರಸಾಯನವಿಜ್ಞಾನಿ ಕಾರ್ಲ್ ಪೀಟರ್ ಹೆನ್ರಿಕ್ ಡ್ಯಾಮ್‍ನೊಡಗೂಡಿ ನಡೆಸಿದ್ದಕ್ಕೆ ಇವರಿಬ್ಬರಿಗೂ (1943) ಶರೀರ ವಿಜ್ಞಾನ ಮತ್ತು ವೈದ್ಯ ವಿಭಾಗದ ನೊಬೆಲ್ ಪಾರಿತೋಷಿಕ ನೀಡಲಾಯಿತು.
ಬದುಕು, ಸಂಶೋಧನೆ
ಬದಲಾಯಿಸಿಡಾಯ್ಜಿ ಜನಿಸಿದ್ದು (13 ನವೆಂಬರ್ 1893) ಇಲಿನಾಯ್ ರಾಜ್ಯ ಹ್ಯೂಮ್ ಎಂಬಲ್ಲಿ. ಇಲಿನಾಯ್ ವಿಶ್ವವಿದ್ಯಾಲಯದಿಂದ ಎ.ಬಿ. ಪದವಿಯನ್ನೂ (1914) ಎಂ.ಎಸ್. ಪದವಿಯನ್ನೂ (1916) ಪಡೆದು ಉನ್ನತ ಅಧ್ಯಯನಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ. ಅಲ್ಲಿ ಪಿಎಚ್.ಡಿ. ಪದವಿಯನ್ನು 1920ರಲ್ಲಿ ಪಡೆದ. ಹಾರ್ವರ್ಡ್ ಮೆಡಿಕಲ್ ಸ್ಕೂಲಿನಲ್ಲಿ ಜೀವರಸಾಯನವಿಜ್ಞಾನ ವಿಭಾಗದಲ್ಲಿ ಸಹಾಯಕನಾಗಿ ಈತ ಸೇವೆ ಸಲ್ಲಿಸಿದ್ದೂ (1915) ಉಂಟು. ಬಳಿಕ 1917-1919ರ ಅವಧಿಯಲ್ಲಿ ಅಮೆರಿಕದ ಸೇನೆಯನ್ನು ಸೇರಿ ಕಡ್ಡಾಯ ಸೈನಿಕ ಶಿಕ್ಷಣ ವಿಭಾಗದ ಆರೋಗ್ಯರಕ್ಷಣೆ ದಳದಲ್ಲಿ ಕೆಲಸಮಾಡಿದ. ವಾಷಿಂಗ್‍ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸನ್ನಿನಲ್ಲಿ ಜೀವರಸಾಯನಶಾಸ್ತ್ರ ಪ್ರಾಧ್ಯಾಪಕನಾಗಿದ್ದ (1919-1923). 1924ರಲ್ಲಿ ಈತನನ್ನು ಸೇಂಟ್ ಲೂಯಿ ಶಾಲೆಯ ಜೀವರಸಾಯನಶಾಸ್ತ್ರ ವಿಭಾಗದ ನಿರ್ದೇಶಕನಾಗಿಯೂ ಆಯ್ಕೆ ಮಾಡಲಾಯಿತು. ಈ ಶಾಲೆಯ ಅಂಗರಚನಾಶಾಸ್ತ್ರ ವಿಭಾಗದಲ್ಲಿ ಭ್ರೂಣ ಶಾಸ್ತ್ರಜ್ಞನಾಗಿದ್ದ ಎಡ್ಗರ್ ಆಲೆನ್ ಎಂಬಾತನೊಡಗೂಡಿ ಡಾಯ್‍ಜಿ ಬೆದೆಚೋದಕಗಳ (ಈಸ್ಟ್ರೋಜೆನಿಕ್ ಹಾರ್ಮೋನ್ಸ್) ಚಟುವಟಿಕೆಗಳನ್ನು ಅಳತೆ ಮಾಡುವ ಜೀವಮಾಪನ [ಬಯೋ ಆಸೇ] ವಿಧಾನವನ್ನು ಪರಿಷ್ಕರಿಸುವ ಕೆಲಸದಲ್ಲಿ ನಿರತನಾದ. ಈ ವೇಳೆ ಇವರೀರ್ವರು ನಿರ್ವಹಿಸಿದ ಕಾರ್ಯಕ್ಷೇತ್ರಗಳೆಂದರೆ ಬೆದೆಚೋದಕಗಳು, ರಕ್ತದ ಬಫರ್‍ಗಳು ಮತ್ತು ಏ - ಜೀವಸತ್ವಗಳು. ಈ ಕೆಲಸ ಮುಂದೆ ಇತರರಿಗೆ ಹೆಚ್ಚಿನ ಸಂಶೋಧನೆ ನಡೆಸಲು ಬಲುಮಟ್ಟಿಗೆ ಸಹಕಾರಿಯಾಯಿತು. ಅಲೆನ್ ಮತ್ತು ಡಾಯ್‍ಜಿû ಒಟ್ಟುಗೂಡಿ ಇಲಿಯ ಅಂಡಾಶಯ ಭಾಗದ ಬಳಿತವನ್ನು (ಸ್ಮಿಯರ್) ಶುದ್ಧಗೊಳಿಸಿ ಅದರಲ್ಲಿರುವ ಈಸ್ಟ್ರೊಜನ್ ಎಂಬ ಬೆದೆಚೋದಕ ಅಂಶವನ್ನು ಪತ್ತೆಮಾಡುವುದರಲ್ಲಿ ಸಮರ್ಥರಾದರು (1929-30). ಇದೇ ರೀತಿ 1936ರಲ್ಲಿ ಮ್ಯೂಕ್ ಕಾರ್ಕೊಡೋಲ್ ಮತ್ತು ಥಾಯಲ್ ರೋಡ ಎಂಬವರೊಡಗೂಡಿ ಹಂದಿಯ ಅಂಡಾಶಯದಲ್ಲಿ ಈಸ್ಟ್ರಡೈಯಾಲ್ ಎಂಬ ಬೆದೆಚೋದಕದ ಇರವನ್ನೂ ಅದರ ವ್ಯಾಪ್ತಿಯನ್ನೂ ಡಾಯ್‍ಜಿû ಪತ್ತೆಮಾಡಿದ. ರಕ್ತಹೆಪ್ಪುಗಟ್ಟಲು ಉಪಯುಕ್ತವಾದ ವಸ್ತು ಹೆಂಪ್ ಎಂಬ ಗಿಡದ ಬೀಜಗಳಲ್ಲಿರುವುದನ್ನು ಶೋಧಿಸಿದ. ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಮೊಲಗಳ ಮೇಲೆ ಪ್ರಯೋಗ ನಡೆಸಿ ಅಜ್ಞಾತ ಜೀವಸತ್ತ್ವವೊಂದರ ಕೊರತೆ ಇದ್ದರೆ ಆಗ ರಕ್ತಸ್ರಾವ ನಿಲ್ಲದು ಎಂಬುದನ್ನು ಮನಗಂಡ. ಅದೇ ಮೊಲಗಳಿಗೆ ಆಲ್ಫಾ-ಆಲ್ಫಾ ಎಂಬ ಹುಲ್ಲನ್ನು ತಿನ್ನಿಸಿದಾಗ ರಕ್ತಸ್ರಾವ ನಿಂತಿತು. ಆದ್ದರಿಂದ ಆ ಹುಲ್ಲಿನಲ್ಲಿ ರಕ್ತ ಹೆಪ್ಪುಗಟ್ಟಿಸುವಂಥ ಪದಾರ್ಥ ಇದೆಯೆಂದು ತೀರ್ಮಾನಿಸಿ ಅದನ್ನು ಕೊಯಾಗ್ಯುಲೇಟಿಂಗ್ ವೈಟಮಿನ್ ಎಂದು ಕರೆದ. ಇದೇ ಏ-ಜೀವಸತ್ತ್ವ . ಈ ಜೀವಸತ್ತ್ವವನ್ನು ಅದರ ಶುದ್ಧರೂಪದಲ್ಲಿ ಡಾಯ್‍ಜಿû 1939ರಲ್ಲಿ ಪ್ರತ್ಯೇಕಿಸಿದ. ಇದಕ್ಕೆ ಮೊದಲು ಮತ್ತೊಬ್ಬ ಜೀವರಸಾಯನವಿಜ್ಞಾನಿ ಪಾಲ್ ಕಾರರ್ ಎಂಬಾತನೊಡಗೂಡಿ ಏ-ಜೀವಸತ್ವವನ್ನು ಹಳದಿ ಎಣ್ಣೆಯ ಸ್ಥಿತಿಯಲ್ಲಿ ಡಾಯ್‍ಜಿû ಬೇರ್ಪಡಿಸಿ ಅದರ ಪರಿಶುದ್ಧತೆಯ ಮಟ್ಟವನ್ನು ಮುಟ್ಟುವಷ್ಟರ ಮಟ್ಟಿಗೆ ಬಂದದ್ದುಂಟು. 1940ರ ಹೊತ್ತಿಗೆ ಈತ ತನ್ನ ಸಹೋದ್ಯೋಗಿಗಳಾದ ಥಾಯರ್, ಮ್ಯಾಕ್ ಕಾರ್ಕೊಡೋಲ್, ಮೆಕೇ, ಬಿಂಕ್ಲೆ ಮುಂತಾದವರೊಡಗೂಡಿ ಆಲ್ಫಾ-ಆಲ್ಫಾ ಹುಲ್ಲಿನಿಂದಲೂ ಮೀನಿನ ಹಿಂಡಿಯಿಂದಲೂ ಏ-ಜೀವಸತ್ತ್ವವನ್ನು ಅದರ ಶುದ್ಧರೂಪದಲ್ಲಿ ಬೇರ್ಪಡಿಸಿದ. ಆಲ್ಫಾ-ಆಲ್ಫಾ ಹುಲ್ಲಿನಲ್ಲಿರುವ ಜೀವಸತ್ತ್ವಕ್ಕೂ ಮೀನಿನ ಹಿಂಡಿಯಿಂದ ಲಭಿಸಿದ ಜೀವಸತ್ತ್ವಕ್ಕೂ ಇರುವ ರಚನಾಸಾದೃಶ್ಯ-ವೈದ್ರಶ್ಯಗಳನ್ನು ಡಾಯ್‍ಜಿû ಕಂಡುಕೊಂಡು ಮೊದಲನೆಯದನ್ನು ಏ1-ಜೀವಸತ್ತ್ವವೆಂದೂ ಎರಡನೆಯದನ್ನು ಏ2- ಜೀವಸತ್ತ್ವವೆಂದೂ ಹೆಸರಿಸಿದ. ಇದೇ ವರ್ಷ ಕ್ಲೋಸ್ ಎಂಬ ಮತ್ತೊಬ್ಬ ಜೀವವಿಜ್ಞಾನಿಯೊಡನೆ ಕೆಲಸಮಾಡಿ ಏ-ಜೀವಸತ್ತ್ವವನ್ನು ಕೃತಕವಾಗಿಯೂ ತಯಾರಿಸಿದ (1943). ಮೇದೋಜೀರಕಾಂಗದಲ್ಲಿ (ಪ್ಯಾಂಕ್ರಿಯಾಸ್) ಕೆಲವು ವಿಶಿಷ್ಟ ಜೀವಕಣತಂಡಗಳಲ್ಲಿ ಹುಟ್ಟಿ ನೇರವಾಗಿ ರಕ್ತಕ್ಕೆ ಬಂದು ಸೇರುವ ಅಂತಸ್ಸ್ರಾವರಸ ಇನ್ಸುಲಿನ್ ಎಂಬುದನ್ನು ಬೇರ್ಪಡಿಸುವ ವಿಧಾನದಲ್ಲೂ ಡಾಯ್‍ಜಿû ಪರಿಷ್ಕಾರಗಳನ್ನು ತಂದ. ಪ್ರತಿಜೈವಿಕಗಳನ್ನು (ಆ್ಯಂಟಿಬಯಾಟಿಕ್ಸ್) ಮತ್ತು ಬೈಲ್ ಆಮ್ಲಗಳ ಚಯಾಪಚಯಗಳನ್ನು ಕುರಿತಂತೆ ಈತ ಹೆಚ್ಚಿನ ಸಂಶೋಧನೆಗಳನ್ನು ನಡೆಸಿದ. ಎಡ್ಗರ್ ಆಲೆನ್ ಮತ್ತು ಸಿ.ಎಚ್. ಡಾನ್‍ಫೋರ್ತ್ ಎಂಬವರೊಡಗೂಡಿ ಸೆಕ್ಸ್ ಅಂಡ್ ಇಂಟರ್ನಲ್ ಸೆಕ್ರೀಷನ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿದ (1939). ವಾಷಿಂಗ್‍ಟನ್, ಷಿಕಾಗೋ, ಇಲಿನಾಯ್, ಪ್ಯಾರಿಸ್, ಸೇಂಟ್ ಲೂಯಿ ವಿಶ್ವವಿದ್ಯಾನಿಲಯಗಳು ಹಾಗೂ ಇನ್ನಿತರ ಸ್ವತಂತ್ರ ಶಿಕ್ಷಣ ಸಂಸ್ಥೆಗಳು ಈತನಿಗೆ ಗೌರವ ಡಾಕ್ಟೊರೇಟ್ ಪದವಿಯನ್ನು ನೀಡಿ ಸನ್ಮಾನಿಸಿವೆ. ಲೀಗ್ ಆಫ್ ನೇಷನ್ಸಿನ ಕಮಿಟಿ ಫಾರ್ ಸ್ಟಾಂಡರ್ಡೈಜೇಷನ್ ಆಫ್ ಸೆಕ್ಸ್ ಹಾರ್ಮೋನ್ಸ್‍ನ ಒಬ್ಬ ಪ್ರತಿನಿಧಿಯಾಗಿಯೂ ನೇಮಕಗೊಂಡಿದ್ದ ಪಡೆದಿದ್ದ (1932-1935). ಅಮೆರಿಕನ್ ಬಯೊಲಾಜಿಕಲ್ ಕೆಮಿಸ್ಟ್ ಸಂಸ್ಥೆ (1943-1945), ಎಂಡೊಕ್ರೀನ್ ಸೊಸೈಟಿ ಆಫ್ ಎಕ್ಸ್‍ಪೆರಿಮೆಂಟಲ್ ಬಯಾಲಜಿ (1949-51)- ಹೀಗೆ ಹಲವಾರು ಜೀವರಸಾಯನವಿಜ್ಞಾನ ಸಂಸ್ಥೆಗಳಲ್ಲಿ ಡಾಯ್‍ಜಿ ಸೇವೆಸಲ್ಲಿಸಿದ. ಇವನು ಕೆಲಸಮಾಡಿದ ಸೇಂಟ್ ಲೂಯಿ ವಿಶ್ವವಿದ್ಯಾಲಯದ ಜೀವರಸಾಯನಶಾಸ್ತ್ರ ವಿಭಾಗವನ್ನು ಇವನ ಗೌರವಾರ್ಥ ಎಡ್ವರ್ಡ್ ಡಾಯ್‍ಜಿ ಡಿಪಾರ್ಟ್‍ಮೆಂಟ್ ಎಂದು ಪುನರ್‍ನಾಮಕರಿಸಲಾಯಿತು (1955).