ಎಂ. ಎಲ್. ರಾಘವೇಂದ್ರರಾವ್
ಕ್ರಮಬದ್ಧವಾದ ಯಾವುದೇ ಒಂದು ವಿದ್ಯಾಭ್ಯಾಸ ಸೌಲಭ್ಯವೂ ದೊರೆಯದಿದ್ದರೂ ಕನ್ನಡ ಸಾಹಿತ್ಯ ರಚನೆಯಲ್ಲಷ್ಟೇ ಅಲ್ಲದೆ ಹಲವಾರು ಮೌಲಿಕ ಕೃತಿಗಳ ಪ್ರಕಾಶಕರಾಗಿಯೂ ಪ್ರಸಿದ್ಧರಾಗಿರುವ ರಾಘವೇಂದ್ರರಾವ್‌ರವರು ಹುಟ್ಟಿದ್ದು ಮೈಸೂರಿನಲ್ಲಿ. ಬೆಳದದ್ದೆಲ್ಲ ಆಂಧ್ರಪ್ರದೇಶದ ಹಿಂದುಳಿದ ಗ್ರಾಮವಾದ ‘ಮೋದ’ ಎಂಬಲ್ಲಿ. ತಂದೆ ಲಕ್ಷ್ಮಣರಾವ್, ತಾಯಿ ಅನಸೂಯಾಬಾಯಿ.
ಅಕ್ಷರ ಕಲಿಯ ತೊಡಗಿದ್ದು ಮೊದಲು ತೆಲುಗು ಭಾಷೆಯಲ್ಲಾದರೂ ನಂತರ ಕನ್ನಡವನ್ನು ರೂಢಿಸಿಕೊಂಡಿದ್ದು ತಾಯಿ ಹಾಗೂ ತಾತನವರಿಂದ ದೊರೆತ ಮನೆ ಶಿಕ್ಷಣದಿಂದ. ಪರಿಶ್ರಮ ಪಟ್ಟು ಕಲಿತ ಕನ್ನಡ ಭಾಷೆಯನ್ನುಪಯೋಗಿಸಿಕೊಂಡು ರಚಿಸಿದ ಕಥೆಗಳು ಮೊದಲು ಪ್ರಕಟವಾದದ್ದು ಜನಪ್ರಗತಿ ಹಾಗೂ ಮಲ್ಲಿಗೆ ಮೊದಲಾದ ಪತ್ರಿಕೆಗಳಲ್ಲಿ. ಇವರ ಮೊಟ್ಟ ಮೊದಲ ಅನುವಾದಿತ (ತೆಲುಗು) ಕಥೆ ಪ್ರಕಟವಾದುದು ಕಸ್ತೂರಿ ಮಾಸ ಪತ್ರಿಕೆಯಲ್ಲಿ (೧೯೭೫).
೧೯೭೬ರಲ್ಲಿ ‘ಮುರಳಿ’ ಎಂಬ ಮಾಸ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಲ್ಲದೆ ಧೃವ ಪತ್ರಿಕೆಯಲ್ಲಿ ಸಹಸಂಪಾದಕರ ಜವಾಬ್ದಾರಿಯನ್ನು ವಹಿಸಿಕೊಂಡರು. ಸಾಹಿತ್ಯ ಕೃತಿಗಳನ್ನು ರಚಿಸಿದ್ದಲ್ಲದೆ ಹಲವಾರು ಲೇಖಕ-ಲೇಖಕಿಯರು ರಚಿಸಿದ ಕೃತಿಗಳು ಬೆಳಕು ಕಾಣಲು ಕಾರಣರಾಗಿ ೧೯೮೦-೮೧ರಲ್ಲಿ ‘ಮಧುರ’ ಎಂಬ ಸ್ವಂತ ಪ್ರಕಾಶನ ಸಂಸ್ಥೆಯನ್ನೇ ಪ್ರಾರಂಭಿಸಿ ಪ್ರಕಟಿಸಿದ ಪುಸ್ತಕಗಳು ಹಲವಾರು.[೧]
ಕಾದಂಬರಿಗಳು
ಬದಲಾಯಿಸಿ- ಇವರ ಬರಹಗಳು ವೈವಿಧ್ಯಮಯವಾಗಿದ್ದು ಬರೀ ಕಥೆ – ಕಾದಂಬರಿಗಳಿಗಷ್ಟೇ ಸೀಮಿತವಾಗದೆ ಆಧ್ಯಾತ್ಮಿಕ, ವ್ಯಕ್ತಿವಿಕಸನ, ಭಕ್ತಿ – ಜ್ಞಾನ ಪ್ರಸಾರ ಮುಂತಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.
- ಕರ್ಮವೀರ, ರಾಗಸಂಗಮ, ಮಧುರ ಮುಂತಾದ ಪತ್ರಿಕೆಗಳಲ್ಲಿ ಇವರು ಬರೆದ ಹಲವಾರು ಕಾದಂಬರಿಗಳು ಧಾರಾವಾಹಿಯಾಗಿ ಬೆಳಕು ಕಂಡಿವೆ.
- ತೆಲುಗಿನಿಂದ ಹಲವಾರು ಕಾದಂಬರಿಗಳನ್ನು ಅನುವಾದಿಸಿದ್ದು ಅವುಗಳಲ್ಲಿ ಯಂಡಮೂರಿ ವೀರೇಂದ್ರನಾಥ್, ಡಾ. ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್, ಸೂರ್ಯದೇವರ ರಾಮಮೋಹನ ರಾವ್, ಮಾಲತಿ ಚೆಂಡೂರ್, ಮೈನಂಪಾಟಿ ಭಾಸ್ಕರ್ ಮುಂತಾದವರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ಮೌನ ರಾಗ, ಮೇಡ್ ಫಾರ್ ಈಚ್ ಅದರ್, ಭೂಮಿಗೀತೆ, ಹೈಜಾಕ್ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಅನುವಾದಿಸಿದ್ದಾರೆ.
ಅಂಕಣ
ಬದಲಾಯಿಸಿ- ದಿನ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ ಪ್ರಸಿದ್ಧರಾಗಿದ್ದು ಉದಯವಾಣಿ ಪತ್ರಿಕೆಗಾಗಿ ‘ಮನ ಮಂಥನ’ ಶೀರ್ಷಿಕೆಯಲ್ಲಿ ಅಂಕಣವನ್ನು ನಿರ್ವಹಿಸಿದ್ದು ಬಹು ಜನಪ್ರಿಯ ಅಂಕಣ ಬರಹಗಾರರೆಂದೇ ಪ್ರಸಿದ್ಧಿ ಪಡೆದರು.
ಕೃತಿಗಳು
ಬದಲಾಯಿಸಿ- ವ್ಯಕ್ತಿ ವಿಕಸನಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಅನುವಾದಿಸಿರುವುದಲ್ಲದೆ ಸ್ವತಂತ್ರವಾಗಿಯೂ ರಚಿಸಿದ್ದಾರೆ. ಅವುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆ, ವಿದ್ಯಾರ್ಥಿ ಶಿಕ್ಣಣ ವಿಕಾಸ ಮುಂತಾದವುಗಳಲ್ಲದೆ ಜೀವನ ಮಂತ್ರ, ನೀವು, ಈ ಕ್ಷಣ ನಿಮ್ಮದು, ರಿಲ್ಯಾಕ್ಷೇಷನ್, ನಿಮ್ಮೊಳಗಿನ ನೀವು, ಗೆಲುವಿನ ದಿಕ್ಸೂಚಿ, ಯಶಸ್ಸಿನ ರಹಸ್ಯ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.[೨]
- ಧ್ಯಾನ – ಯೋಗಕ್ಕೆ ಸಂಬಂಧಿಸಿದಂತೆ ‘ಮನ ಮಂಥನ’. ‘ಮನಸ್ಸು ಲಹರಿ’ ‘ಧ್ಯಾನ ಮನಸ್ಸು ನಿರಾಳ’ ಮುಂತಾದವುಗಳು.
- ಮಕ್ಕಳ ಲಾಲನೆ-ಪಾಲನೆಗಾಗಿ ಮಕ್ಕಳೇ ನೀವು ಹೇಗಿರಬೇಕು? ಗುಡ್ ಪೇರೆಂಟ್ ಗುಡ್ ಚಿಲ್ಡ್ರನ್, ಚಿಣ್ಣರ ಕುರಿತು ಹಿರಿಯರ ಕಿವಿ ಮಾತು, ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಉದರ ಸಂಬಂಧಿ ಸಮಸ್ಯೆಗಳು, ತೂಕ ಇಳಿಕೆ, ಆರೋಗ್ಯಗಳಿಕೆ, ನಡಿಗೆ, ವಯಸ್ಸು ಜೀವನ ನಿರ್ವಹಣೆ, ದೇಹಾಲಯ ಮುಂತಾದವು ಬಹು ಜನಪ್ರಿಯ ಕೃತಿಗಳಾಗಿವೆ.
- ಮಕ್ಕಳ ಮನಸ್ಸನ್ನರಿತು ಸಾಮಾನ್ಯ ಜ್ಙಾನವನ್ನು ಬೋಧಿಸುವ ಭೂಮಿಯ ನಂತರ ನಿಮ್ಮ ನೆಲೆಯೆಲ್ಲಿ? ಮೂರು ಹೆಜ್ಜೆಗಳಲ್ಲಿ ವಿಶ್ವ, ಕಪ್ಪು ಮರಿ ಮೀನು, ಜ್ಞಾನ ವಿಜ್ಞಾನ ಪ್ರಶ್ನೋತ್ತರಗಳು ಮುಂತಾದ ಹತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ.
- ‘ತಮ್ಮದೇ ಆದ ‘ಮಧುರ’ ಪ್ರಕಾಶನದಡಿಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
- ಹೀಗೆ ಕ್ರಮಬದ್ಧ ವಿದ್ಯಾಭ್ಯಾಸವಿಲ್ಲದೆ ಲೇಖಕ ಪ್ರಕಾಶಕರಾಗಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಶೇಷನಾರಾಯಣ ಮುಂತಾದವರ ಸಾಲಿನಲ್ಲಿ ಎಂ.ಎಲ್. ರಾಘವೇಂದ್ರರಾವ್‌ವರ ಕೊಡುಗೆಯೂ ಅಪಾರ.