ಉಮ್ಮತ್ತೂರು
ಉಮ್ಮತ್ತೂರು, ಇದು ಚಾಮರಾಜನಗರ ಜಿಲ್ಲೆಯ ಅತಿ ದೊಡ್ಡ ಊರು.[ಸಾಕ್ಷ್ಯಾಧಾರ ಬೇಕಾಗಿದೆ] ೧೫೫೦ರ ಹಾಸುಪಾಸಿನಲ್ಲಿ ಗಂಗರಾಜ ಎಂಬ ಪಾಳೇಗಾರ ಊರನ್ನು ಆಳಲ್ಪಟ್ಟು ವಿಜಯ ನಗರ ಸಾಮ್ರಾಜ್ಯದ ಅರಸರ ಸಾಮ್ರಾಜ್ಯ ವಿಸ್ತಾರಣಾ ಪರ್ವದಲ್ಲಿ ವಿಜಯ ನಗರ ಸಮ್ರಾಜ್ಯದ ಅಳ್ವಿಕೆಗೆ ಒಳಪಟ್ಟಿತು. ೪೦೦ಎಕರೆ ವಿಸ್ತೀರ್ಣದ ಕೆರೆ ಊರಿನ ದೊಡ್ಡ ಆಸ್ತಿ. ಆದರೆ, ಸರಿಯಾದ ನಿರ್ಹವಣೆ ಇಲ್ಲದೆ ನೀರು ತುಂಬದೆ ಜನರ ಬದುಕು ಮೂರಾಬಟ್ಟೆಯಾಗಿದೆ ಉಮ್ಮತ್ತೂರು: ಚಾಮರಾಜನಗರ ಜಿಲ್ಲೆಯ ಅದೇ ತಾಲ್ಲೂಕಿನಲ್ಲಿ ಯಳಂದೂರಿನಿಂದ 14ಕಿಮೀ ದೂರದಲ್ಲಿರುವ ಗ್ರಾಮ. ಹಿಂದೆ ಇದು ಉಮ್ಮತ್ತೂರು ಪಾಳೆಯಗಾರರ ರಾಜಧಾನಿಯಾಗಿತ್ತು. 11ನೆಯ ಶತಮಾನದಲ್ಲಿಯೇ ಈ ಊರು ಇದ್ದುದಕ್ಕೆ ಇಲ್ಲಿರುವ ನಿಷಧಿಶಾಸನಗಳು ಸಾಕ್ಷಿ. ಆಗ ಇಲ್ಲಿ ಜೈನರ ವಸತಿ ಹೆಚ್ಚಾಗಿದ್ದಂತೆ ತೋರುತ್ತದೆ. ಇಲ್ಲಿರುವ ವರ್ಧಮಾನ ಬಸದಿ 13ನೆಯ ಶತಮಾನಕ್ಕೆ ಸೇರಿದ ಸರಳವಾದ ದ್ರಾವಿಡ ಶೈಲಿಯ ಕಟ್ಟಡ. 15-16ನೆಯ ಶತಮಾನಗಳಲ್ಲಿ ಈ ಪ್ರಾಂತ್ಯವನ್ನಾಳಿದ ಉಮ್ಮತ್ತೂರು ಅರಸರು ಇಲ್ಲಿ ಒಂದು ಕೋಟೆಯನ್ನು ಕಟ್ಟಿದ್ದರು. ಅದರ ಅವಶೇಷಗಳನ್ನು ಈಗಲೂ ಅಲ್ಲಲ್ಲಿ ಕಾಣಬಹುದು. ಊರಿನ ನೈಋತ್ಯಕ್ಕೆ ಆ ಅರಸರ ಅರಮನೆ ಇದ್ದುದು ನಾಮಾವಶೇಷವಾಗಿದೆ. ಅರಮನೆಯ ಹೊಲ ಎಂದು ಒಂದು ಹೊಲವನ್ನು ಸ್ಥಳೀಕರು ಗುರುತಿಸುತ್ತಾರೆ. ಉಮ್ಮತ್ತೂರರಸರ ಕಾಲದಲ್ಲಿ ಈ ಊರಿನಲ್ಲಿ ಹಲವು ದೇವಾಲಯಗಳು ನಿರ್ಮಿತವಾದುವು. ಅವುಗಳಲ್ಲಿ ರಂಗನಾಥ ದೇವಾಲಯ ಮತ್ತು ಭುಜಂಗೇಶ್ವರ ದೇವಾಲಯಗಳು ದ್ರಾವಿಡ ಶೈಲಿಯಲ್ಲಿ ಕಟ್ಟಿರುವ ದೊಡ್ಡ ದೇವಾಲಯಗಳು. ಈ ದೇವಾಲಯಗಳ ಮುಂದೆ ಉನ್ನತವಾದ ಮತ್ತು ಸ್ಥೂಲವಾದ ಗರುಡಗಂಬಗಳಿವೆ. ರಂಗನಾಥಸ್ವಾಮಿ ದೇವಾಲಯದ ಮುಂದಿನ ಗರುಡಗಂಬದ ಬುಡದ ನಾಲ್ಕು ಮುಖಗಳಲ್ಲಿಯೂ ಕ್ರಮವಾಗಿ ಭಕ್ತವಿಗ್ರಹ ಹನುಮಾನ್, ಗರುಡ ಮತ್ತು ಪರವಾಸುದೇವರ ಮೂರ್ತಿಗಳಿವೆ. ಭಕ್ತವಿಗ್ರಹ, ಉಮ್ಮತ್ತೂರರಸನೊಬ್ಬನದಿರಬಹುದು. ಭುಜಂಗೇಶ್ವರ ದೇವಾಲಯದಲ್ಲಿಯೂ ಇಂಥದೇ ಒಂದು ಭಕ್ತವಿಗ್ರಹವನ್ನು ನೋಡಬಹುದು. ಈ ದೇವಾಲಯದಲ್ಲಿರುವ ಪಂಚಲಿಂಗಗಳಲ್ಲೊಂದರ ಮೇಲೆ ಜಟೆಯಿದ್ದು ಅದರ ಮೇಲೆ ಚತುರ್ಭುಜಳಾದ ಗಂಗೆಯ ಮೂರ್ತಿ ಇದೆ. ಇದು ಒಂದು ಅಪರೂಪ ಕೃತಿ. ಈ ದೇವಾಲಯದ ಮುಂದಿನ ಗರುಡಗಂಬದ ಚೌಕನಾದ ಬುಡದ ಮೇಲು ಮೂಲೆಯೊಂದರಲ್ಲಿ ತೆರೆದ ಬಾಯಿ ಕೋರೆಹಲ್ಲುಗಳು ಉಬ್ಬಿದ ಕಣ್ಣು ಕೆದರಿದ ತಲೆಯುಳ್ಳ ಸ್ಥೂಲಕಾಯದ ಒಂದು ಮೂರ್ತಿ ಇದೆ. ಇದನ್ನು ಬೇತಾಳನೆಂದೂ ಭುಜಂಗೇಶ್ವರ ದೇವಾಲಯವನ್ನು ಕಟ್ಟಿದ ಅನಂತರ ಆ ಊರ ಅರಸನಿಗೆ ಅದರಿಂದ ಬಿಡುಗೆಡಯಾಯಿತೆಂದೂ ಅದರಿಂದ ಆತ ಆ ಮೂರ್ತಿಯನ್ನು ಅಲ್ಲಿ ಕಂಡರಿಸಿದನೆಂದೂ ಹೇಳಿಕೆ ಇದೆ. ಈ ಎರಡು ದೇವಾಲಯಗಳಲ್ಲದೆ ಸಪ್ತಮಾತೃಕಾ, ವೀರಭದ್ರ ದೇವಾಲಯಗಳೂ ಇಲ್ಲಿವೆ. ಉಪ್ಪರಿಗೆ ಸಿಂಹಾಸನ ಮಠವೆಂಬ ಒಂದು ಮಠವೂ ಇಲ್ಲಿದ್ದುದಾಗಿ ತಿಳಿದುಬರುತ್ತದೆ. (ಎಂ.ಎಚ್.)
ಉಮ್ಮತ್ತೂರು ಪಾಳೆಯಗಾರರು
ಬದಲಾಯಿಸಿ15ನೆಯ ಶತಮಾನದ ಅಂತ್ಯ ಮತ್ತು 16ನೆಯ ಶತಮಾನದ ಆದಿಭಾಗಗಳಲ್ಲಿ ಮೈಸೂರು ಜಿಲ್ಲೆಯ ದಕ್ಷಿಣ ಭಾಗ ಮತ್ತು ಕೊಯಮತ್ತೂರು ಜಿಲ್ಲೆಯ ಕೆಲವು ಭಾಗಗಳನ್ನು ಆಳುತ್ತಿದ್ದ ಪಾಳೆಯಗಾರರು. ಚಾಮರಾಜನಗರ ತಾಲ್ಲೂಕಿನ ನಂಜನಗೂಡು-ಯಳಂದೂರು ರಸ್ತೆಯಲ್ಲಿ ಈಗ ಒಂದು ಚಿಕ್ಕ ಗ್ರಾಮವಾಗಿರುವ ಉಮ್ಮತ್ತೂರು ಇವರ ರಾಜಧಾನಿ. ಈ ವಂಶದ ಕೆಲವರು ಬೆಟ್ಟದ ಕೋಟೆ ಮತ್ತು ತೆರಕಣಾಂಬಿಯಲ್ಲಿ ಸಹ ಆಳುತ್ತಿದ್ದಂತೆ ತೋರುತ್ತದೆ. ಮೂಲಾಧಾರಗಳು ಬಹು ವಿರಳವಾಗಿರುವದರಿಂದ ಈ ವಂಶದ ಇತಿಹಾಸ ಅಸ್ಪಷ್ಟ. ಶಾಸನಗಳ ಪ್ರಕಾರ ಈ ವಂಶದ ಆದ್ಯ ಹನುಮಪ್ಪ ಒಡೆಯ. ಇವನ ಮಗ ಇಮ್ಮಡಿರಾಯ ಒಡೆಯ. ಇವನಿಗೆ ಸೋಮರಾಯ ಎಂಬ ಹೆಸರೂ ಇದ್ದಂತೆ ತೋರುತ್ತದೆ. ಇವನ ಹಿರಿಯ ಮಗ ದೇವಣ್ಣ ಒಡೆಯ. ಈತ ಚೇರ, ಚೋಳ, ಪಾಂಡ್ಯ ಮೂವರುರಾಯರ ಗಂಡ, ನೀಲಗಿರಿ ಸಾಧಾರ ಒಡೆಯ, ನೀಲಗಿರಿ ನಾಡಾಳ್ವ ಇತ್ಯಾದಿ ಬಿರುದುಗಳನ್ನು ಧರಿಸಿ ಮೂಡಣಕೋಟೆಯಲ್ಲಿ (ಪ್ರಾಯಶಃ ಗುಂಡ್ಲುಪೇಟೆ ಬಳಿಯ ಗೋಪಾಲಸ್ವಾಮಿಬೆಟ್ಟ) ಆಳ್ವಿಕೆ ನಡೆಸುತ್ತಿದ್ದ (ಸು.1488-1504). ಇದೇ ಬಿರುದುಗಳಿರುವ ಗೋವಣ್ಣ ಒಡೆಯ (1504) ದೇವಣ್ಣನ ಮಗ. ದೇವಣ್ಣನ ಇನ್ನೊಬ್ಬ ಮಗ ಚಿಕ್ಕರಾಯ (ಮಲ್ಲರಾಜ) ಪೆನುಗೊಂಡೆ ಚಕ್ರೇಶ್ವರ ಎಂಬ ಬಿರುದಿನೊಡನೆ ತೆರಕಣಾಂಬಿಯಿಂದ ಆಳುತ್ತಿದ್ದ (ಸು.1505-12). ಇವನ ರಾಜ್ಯ ಕೊಯಮತ್ತೂರು ಜಿಲ್ಲೆಯ ಅವನಾಸಿ ತಾಲ್ಲೂಕಿನ ಭಾಗಗಳನ್ನೂ ಒಳಗೊಂಡಂತೆ ತೋರುತ್ತದೆ. ಇವನ ಚಿಕ್ಕಪ್ಪ, ಅಂದರೆ ದೇವಣ್ಣ ಒಡೆಯನ ತಮ್ಮ ನಂಜರಾಜ ಉಮ್ಮತ್ತೂರಿನಲ್ಲಿ ಆಳ್ವಿಕೆ ನಡೆಸಿದ (ಸು.1482-1504). ಇವನಿಗೆ ಘೕಣಾಂಕ ಚಕ್ರೇಶ್ವರ, ಪೆಸಾಳಿ ಹನುಮ ಇತ್ಯಾದಿ ಬಿರುದುಗಳಿದ್ದವು. ಇವನ ರಾಜ್ಯ ಮೈಸೂರು ಜಿಲ್ಲೆಯ ದಕ್ಷಿಣ ಭಾಗವಲ್ಲದೆ ಕೊಯಮತ್ತೂರು ಜಿಲ್ಲೆಯ ಭಾಗಗಳಿಗೂ ಹಬ್ಬಿತ್ತು. ವಿಜಯನಗರದ ಕೃಷ್ಣದೇವರಾಯ ಪಟ್ಟಕ್ಕೆ ಬಂದ ತರುಣದಲ್ಲಿ (1509-12) ಉಮ್ಮತ್ತೂರು ಪಾಳೆಯಗಾರನನ್ನು ನಿಗ್ರಹಿಸಿ ತನ್ನ ಪ್ರತಿನಿಧಿಯನ್ನು ಇಲ್ಲಿಯ ಆಡಳಿತಕ್ಕೆ ನೇಮಿಸಿದ. ಈತ ಸೋಲಿಸಿದ ರಾಜನ ಹೆಸರು ಗಂಗರಾಜ ಎಂದು ಸಾಹಿತ್ಯಿಕ ಮೂಲಗಳಲ್ಲಿ ದೊರೆತರೂ ಈತ ನಂಜರಾಜ ಇರಬಹುದೆಂದು ಊಹಿಸಲಾಗಿದೆ. ಆದರೆ ಈ ನಂಜರಾಜ ಉಮ್ಮತ್ತೂರÀನ್ನು ಕಳೆದುಕೊಂಡರೂ ಕೊಯಮತ್ತೂರು ಜಿಲ್ಲೆಯ ಕೆಲವು ಭಾಗಗಳನ್ನು ಸು.1519ರವರೆಗೂ ಉಳಿಸಿಕೊಂಡಿರಬಹುದೆಂದು ಅಲ್ಲಿ ದೊರಕಿರುವ ಕೆಲವು ಶಾಸನಗಳಿಂದ ಊಹಿಸಬಹುದಾಗಿದೆ. ಉಮ್ಮತ್ತೂರಿನ ನಾಯಕರಿಗೂ ಕಳಲೆ ಒಡೆಯರಿಗೂ ಹಗೆತನವಿತ್ತು. ಒಮ್ಮೆ ಉಮ್ಮತ್ತೂರಿನ ನಾಯಕನೊಬ್ಬ ಕಳಲೆ ಮನೆತನದ ಎಲ್ಲರನ್ನೂ ವಂಚನೆಯಿಂದ ಕೊಲ್ಲಿಸಿದ ನೆಂದೂ ಆಗ ಒಬ್ಬ ಬಾಲಕ ಮಾತ್ರ ತಪ್ಪಿಸಿಕೊಂಡು ಅನಂತರ ತನ್ನ ಮನೆತನದ ಆಳ್ವಿಕೆಯನ್ನು ಪುನಃ ಸ್ಥಾಪಿಸಿದನೆಂದೂ ತಿಳಿದುಬರುತ್ತದೆ. 1612ರಲ್ಲಿ ವಿಜಯನಗರದ ವೆಂಕಟಪತಿರಾಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿ ಶ್ರೀರಂಗಪಟ್ಟಣ ಮತ್ತು ಉಮ್ಮತ್ತೂರುಗಳನ್ನು ರಾಜ ಒಡೆಯರಿಗೆ ನೀಡಿದುದಾಗಿ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿ ದೊರೆತಿರುವ ಶಾಸನವೊಂದ ರಿಂದ ತಿಳಿದುಬರುತ್ತದೆ. 1613ರಲ್ಲಿ ರಾಜ ಒಡೆಯ ಉಮ್ಮತ್ತೂರಿನ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ಪಾಳೆಯಗಾರರರನ್ನು ಸೋಲಿಸಿ ಅವನ ರಾಜ್ಯವನ್ನು ಮೈಸೂರು ರಾಜ್ಯಕ್ಕೆ ಸೇರಿಸಿಕೊಂಡ. ಈ ಅನಂತರ ಕಾಲದ ಉಮ್ಮತ್ತೂರಿನ ಪಾಳೆಯಗಾರರು ಯಾರು, ಇವರಿಗೂ ಮೊದಲಿನ ನಂಜರಾಜ ಇತ್ಯಾದಿ ಪಾಳೆಯಗಾರರಿಗೂ ಇದ್ದ ಸಂಬಂಧವೇನೆಂದು ತಿಳಿಯುವುದಿಲ್ಲ. (ಜಿ.ಆರ್.ಆರ್.)