ಉಬ್ಬರ
ಉಬ್ಬರ: ಮೈಯಲ್ಲಿರುವ, ಕೂಡಿಸುವ ಊತಕದ (ಕನೆಕ್ಟಿವ್ ಟಿಷ್ಯು) ಜೀವಕಣಗಳ ನಡುವಣ ತೆರಪುಗಳಲ್ಲೂ ರಸಿಕೆಯ (ಸೀರಮ್) ಪೊಳ್ಳುಗಳಲ್ಲೂ ನೀರಿನಂತಿರುವ ದ್ರವ ಸೇರಿಕೊಂಡು ಉಬ್ಬಿರುವಿಕೆ (ಈಡೀಮ). ಹೀಗೆ ಊದಿರುವ ಊತಕಗಳನ್ನು ಚುಚ್ಚಿದರೆ ತೆಳುವಾದ ಹೆಪ್ಪುಗಟ್ಟದ ರಸ ಒಸರುವುದು. ರಕ್ತದಲ್ಲಿನ ರಸಿಕೆಯನ್ನು ತೀರ ಹೆಚ್ಚು ಸೋಸಿ ಬಳಸಿರುವ ಈ ರಸದಲ್ಲಿ ಒಂದಿಷ್ಟು ಪ್ರೋಟೀನೂ ಇರುತ್ತದೆ. ಉಬ್ಬರದ ಕಾರಣವಾದ ರೋಗಗಳನ್ನು ಅನುಸರಿಸಿ ಈ ರಸದಲ್ಲಿ ಕೊಂಚ ವ್ಯತ್ಯಾಸಗಳಿರುವುವು. ಪ್ರೋಟೀನು ತುಂಬಿರುವ ಬಿಳಿರಕ್ತಕಣಗಳಿರುವ ಉರಿತದಲ್ಲಿನ (ಇನ್ಫಮೇಷನ್) ಸೊನೆಯಿಂದ (ಎಕ್ಸುಡೇಟ್) ವ್ಯತ್ಯಾಸ ತೋರಲು ಈ ರಸಕ್ಕೆ ಉಬ್ಬರದ ಒಸರು (ಟ್ರಾನ್ಸುಡೇಟ್) ಎಂದು ಹೆಸರಿದೆ. ಸೊನೆ ಬಲು ಮಟ್ಟಿಗೆ ರಕ್ತರಸವನ್ನು ಹೋಲುವುದು. ಶೋಫದಲ್ಲಿ (ಡ್ರಾಪ್ಸಿ, ಬಲ್ಲೆ, ಶೋಬೆ) ಮೈಯಲ್ಲೆಲ್ಲ ಉಬ್ಬರ ಹರಡಿಕೊಂಡು ಎದೆ ಹೊಟ್ಟೆಗಳ ತೆರನ ಮೈಪೊಳ್ಳುಗಳಲ್ಲೂ ಊತಕಗಳಲ್ಲೂ ಮಿತಿಮೀರಿ ಈ ರಸ ಸೇರಿಕೊಂಡಿರುವುದು. ಉಬ್ಬರ ಕೆಲವು ರೋಗಗಳ ಲಕ್ಷಣವೇ ಹೊರತು ಅದೇ ಒಂದು ರೋಗವಲ್ಲ. ಉಬ್ಬರಿಸಿಕೊಂಡಿರುವ ಜಾಗದಲ್ಲಿ ಬೆರಳು ಒತ್ತಿ ಹಿಡಿದಿದ್ದು ಮತ್ತೆ ಎತ್ತಿದರೆ ಅಲ್ಲಿ ಗುಳಿ ಬೀಳುವುದು. ರೋಗಗಳಲ್ಲಿ ಜೀವಕಣಗಳ ಊತಕಗಳ ರಕ್ತದಲ್ಲಿನ ನೀರನ ಸಮತೋಲ ಕೆಟ್ಟಿರುವುದೇ ಉಬ್ಬರದ ಕಾರಣ. ಗುಂಡಿಗೆ, ಮೂತ್ರಪಿಂಡಗಳು, ಸಿರಗಳು, ಹಾಲುರಸಮಂಡಲ (ಲಿಂಫ್ಯಾಟಿಕ್ ಸಿಸ್ಟಂ), ನ್ಯೂನಪೋಷಣೆ, ಒಗ್ಗದಿಕೆಯ (ಅಲರ್ಜಿ) ರೋಗಗಳಲ್ಲಿ ಹೀಗಾಗಿರುವುದು. ಗುಂಡಿಗೆಯೊ ಮೂತ್ರ ಪಿಂಡಗಳೊ ಕೆಟ್ಟಿರುವಾಗ ಅವುಗಳ ಕೆಲಸವನ್ನು ಸರಿಪಡಿಸುವಂತೆ ಸಾಮಾನ್ಯವಾಗಿ ಮೂಲಕಾರಣಗಳನ್ನು ಹೋಗಲಾಡಿಸುವುದೇ ಇದರ ಚಿಕಿತ್ಸೆ. ತುರುಚೆದದ್ದಿನ (ಅರ್ಟಿಕೇರಿಯ) ಹಾಗೆ ಕೇವಲ ಒಂದೆಡೆಯಲ್ಲೊ ಮೂತ್ರಪಿಂಡಕ (ನೆಫ್ರಿಟಿಕ್) ಉಬ್ಬರದಲ್ಲಿದ್ದಂತೆ ಮೈಯಲ್ಲಿ ಎಲ್ಲೆಲ್ಲೂ ಕಾಣಿಸಿಕೊಳ್ಳಬಹುದು. ಕೈಕಾಲುಗಳೊ ಮೊಗವೊ ಮತ್ತಾವ ಅಂಗದಲ್ಲೊ ಹೀಗೆ ನೀರು ಸೇರಿಕೊಂಡರೆ ಬೋದುಗೆ (ಅನಸಾರ್ಕ) ಎನ್ನುವುದುಂಟು. ಶೋಫ, ಬಲ್ಲೆ, ಶೋಬೆ, ಬೋದುಗೆ ಹಳೆಯ ಕಾಲದ ಪದಗಳು. ಈಗಿನ ಪದ ಉಬ್ಬರ. ಹೊಟ್ಟೆಯ ಪೊಳ್ಳಿನಲ್ಲಿ ಮಿತಿಮೀರಿ ನೀರು ಸೇರಿಕೊಂಡಿರುವುದಕ್ಕೆ ನೀರ್ದೊಳ್ಳು (ಅಸೈಟಿಸ್) ಎನ್ನುತ್ತಾರೆ.
ಮೈ ನೀರಿನ ಸಮತೋಲನ
ಬದಲಾಯಿಸಿಆಹಾರ ಮತ್ತು ಪಾನೀಯಗಳ ಸೇವನೆಯಿಂದ ದೇಹದೊಳಕ್ಕೆ ನೀರು ಸೇರುವುದು, ಮಲ, ಮೂತ್ರ, ಬೆವರು, ಉಸಿರು, ಚರ್ಮಗಳ ಮೂಲಕ ನೀರು ಹೊರ ಸಾಗುತ್ತದೆ. ಆರೋಗ್ಯವಂತರಲ್ಲಿ ಇವೆಲ್ಲ ಚಟುವಟಿಕೆಗಳೂ ಸುಸೂತ್ರವಾಗಿ ನಡೆದು ದೇಹದಲ್ಲಿ ನೀರಿನ ಅಂಶ ಯುಕ್ತ ಪ್ರಮಾಣದಲ್ಲಿ ಉಳಿದಿರುವುದು. ಬೆಳೆದಿರುವ ಆರೋಗ್ಯವಂತ ಒಬ್ಬನಲ್ಲಿ ಮೈ ತೂಕದ 40%-60% ನೀರೇ ಇರುವುದು. ಎಳೆಗೂಸುಗಳು, ಮಕ್ಕಳಲ್ಲಿ ಇನ್ನೂ ಹೆಚ್ಚು. ಬೊಜ್ಜಿನವರಿಗಿಂತ ಸಣಕಲು ಶರೀರದವರಲ್ಲೂ ಹೆಂಗಸರಿಗಿಂತ ಗಂಡಸರಲ್ಲೂ ನೀರು ಹೆಚ್ಚಾಗಿರುವುದು. ಇರಬೇಕಾದುದಕ್ಕಿಂತ ಹೆಚ್ಚಾಗಿ ನೀರು ಸುಮಾರು ಐದಾರು ಲೀಟರುಗಳಷ್ಟು ಸೇರಿಕೊಂಡಾಗ ಉಬ್ಬರ ಕಾಣಿಸಿಕೊಳ್ಳುತ್ತದೆ. ಮೈಯಲ್ಲಿನ ನೀರೆಲ್ಲ ಮುಖ್ಯವಾಗಿ ಮೂರು ಜಾಗಗಳಲ್ಲಿ ತುಂಬಿದೆ; ಜೀವಕೋಶಗಳೊಳಗೆ ಮೈ ನೀರಿನ ಸು. 70%, ಊತಕಗಳೊಳಗೆ 22.5% ರಕ್ತನಾಳಗಳಲ್ಲಿ 7.5%. ಊತಕಗಳು ಮತ್ತು ರಕ್ತನಾಳಗಳಲ್ಲಿ ಇರುವ ನೀರು ಜೀವಕೋಶದಾಚಿನದು (ಎಕ್ಸಟ್ರಾಸೆಲ್ಯುಲರ್). ಇಲ್ಲಿ ನೀರು ಸೇರಿದಾಗಲೇ ಉಬ್ಬರವಾಗುವುದು ಸಾಮಾನ್ಯ. ಇವೇ ಅಲ್ಲದೆ ರಸಿಕೆ ಇಲ್ಲವೆ ಹಾಲುರಸದಿಂದ ಬರುವ ಇಳಿರಸದಿಂದ ತೇವಗೂಡಿರುವ ಪೊರೆಯೇ ಒಳವರಿಯಾಗಿರುವ ಗುಂಡಿಗೆ ಸುತ್ತುಪೊರೆಯ (ಪೆರಿಕಾರ್ಡಿಯಲ್) ಚೀಲ, ಪುಪ್ಪುಸದ ಸುತ್ತ ಇರುವ ಅಳ್ಳೆಪೊರೆಯ (ಪ್ಲುರಲ್) ಹಾಗೂ ಹೊಟ್ಟೆಯಲ್ಲಿ ಒಳಾಂಗಗಳ ಸುತ್ತ ಇರುವ ಹೊರ ಬಿಗಿಪೊರೆಯ (ಪೆರಿಟೋನಿಯಲ್) ಕೋಶಗಳು ಕೀಲುಗಳ ತೆರಪುಗಳಲ್ಲೂ ನೀರು ಸೇರಿಕೊಂಡು ಉಬ್ಬರಿಸಿಕೊಳ್ಳಬಹುದು. ಆರೋಗ್ಯವಂತರಲ್ಲಿ ಈ ಎಡೆಗಳಲ್ಲಿ ಎಲ್ಲ ಒಟ್ಟು ಕೇವಲ ಕೆಲವೇ ಮಿಲಿಲೀಟರುಗಳಷ್ಟು ನುಣುಪಿಸುವ (ಲೂಬ್ರಿಕೇಟಿಂಗ್) ರಸ ಇರುವುದು. ಹೀಗೆ ನೀರು ಮೈಯಲ್ಲಿ ಕೆಲವು ಗೊತ್ತಾದ ತೆರಪುಗಳಲ್ಲಿ ಸೇರಿಕೊಳ್ಳುವುದೆಂಬ ಕಲ್ಪನೆಗೆ ಇನ್ನೊಂದು ವಾದ ಇದೆ. ಊತಕಾಂತರ ಇಲ್ಲವೇ ತಳಗಟ್ಟಿನ ವಸ್ತುವಿನಲ್ಲಿ (ಗ್ರಾಂಡ್ ಸಬ್ಸ್ಟೆನ್ಸ್) ಕರಗುವ ವಸ್ತುವೂ ತೇವವೂ ಸೇರಿಕೊಂಡು ಗಿಜಿಯಂತಿದ್ದು (ಜೆಲ್) ಕೆಲವೆಡೆ ಇವುಗಳ ಪ್ರಮಾಣ ಹೆಚ್ಚು ಕಡಿಮೆ ಆಗಿರುವುದು ಎನ್ನುವುದೇ ಈ ವಾದ. ಈ ತಳಗಟ್ಟಿನ ವಸ್ತುವಿನ ನೀರಿಲ್ಲದೆ ನೀರ್ದುಂಬಿದ ಹಂತಗಳೂ, ಜೀವಕಣಗಳು, ಮೈಪೊಳ್ಳುಗಳು, ಹರಿವ ರಕ್ತ ಇವಲ್ಲಿರುವ ನೀರಿನೊಂದಿಗೆ ಚುರುಕಾದ ಸಮತೋಲನದಲ್ಲಿ ಇರುತ್ತವೆ. ಮೈಯಲ್ಲಿನ ನೀರಿನ ಪರಿಮಾಣವನ್ನು ನಿಜವಾಗಿಯೂ ಹತೋಟಿಯಲ್ಲಿ ಇಡುವುದು ಮೂತ್ರಪಿಂಡ. ಇದರ ಕೆಲಸ ಬಲು ಸಂಕೀರ್ಣವಾದದ್ದು. ಮೂತ್ರಪಿಂಡಕ್ಕೆ ಮೂತ್ರ ಪಿಂಡದ ನರದ ಹತೋಟಿ; ಅದರಲ್ಲಿನ ರಕ್ತದ ಹರಿವು; ಮೂತ್ರಪಿಂಡದ ಜೀವಕಣಗಳ ರಚಗಟ್ಟು, ನಿಜಗೆಲಸಗಳು ಚೆನ್ನಾಗಿರುವಿಕೆ; ತೆಮಡಿಕ (ಪಿಟ್ಯುಟರಿ), ಅಡ್ರಿನಲ್ ಮತ್ತಿತರ ಒಳಸುರಿಕ ಗ್ರಂಥಿಗಳ ಚಟುವಟಿಕೆ; ಮೂತ್ರಪಿಂಡದಲ್ಲಿ ಇವೆ ಎಂದಿರುವ ಘನಗಾತ್ರ (ವಾಲ್ಯೂಂ), ಹಿಗ್ಗಿತ ರಾಸಾಯನಿಕ ಗ್ರಾಹಕಗಳ (ರಿಸೆಪ್ಟರ್ಸ್) ನಿಯಂತ್ರಿಕ ಏರ್ಪಾಡುಗಳು ಇವೆಲ್ಲ ಈ ಯಾಂತ್ರಿಕತೆಯಲ್ಲಿ ಸೇರಿವೆ. ಈ ವಿಶೇಷ ನಿಯಂತ್ರಕಗಳ ಪುರಕ ಗುಣವನ್ನು ಚೋದನಿಕ (ಹಾರ್ಮೋನ್ಸ್) ವರ್ತನೆ ತೋರಿಸುವುದು. ಆಲ್ಡೋಸ್ಟಿರೋನ್ ತೆರನ ಸ್ಪೀರಾಯ್ಡ್ ಚೋದನಿಕಗಳು ಸೋಡಿಯಂ ಮತ್ತಿತರ ಖನಿಜಗಳನ್ನು ಮೂತ್ರಪಿಂಡ ನೀರನ್ನು ಮೈಯಲ್ಲೇ ಉಳಿಸಿಕೊಳ್ಳುವಂತೆ ಮಾಡಿದರೆ ತೆಮಡಿಕ ಗ್ರಂಥಿಯ ಮೂತ್ರಸ್ರಾವರೋಧಕ ಚೋದನಿಕ ಮೂತ್ರಪಿಂಡ ಉಳಿಸಿಕೊಳ್ಳುವಂತೆ ಮಾಡುವುದು. ಮೂತ್ರಪಿಂಡ ಖನಿಜಗಳನ್ನೂ ಹೊರದೂಡುವಂತೆ ಮಾಡುವ ಒಂದು ಚೋದನಿಕವೂ ಇದೆ ಎನ್ನಲಾಗಿದೆ. ಮೈಯಲ್ಲಿನ ನೀರಿನ ಹಂಚಿಕೆ ಸರಿಯಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಮೂತ್ರಪಿಂಡದ ಹತೋಟಿಯೇ ಅಲ್ಲದೆ ಬೇರೆ ಅಂಶಗಳು ಇವೆ. 1. ಲೋಮ ನಾಳಗಳ ಗೋಡೆಯ ಮೂಲಕ ನೀರು, ವಿದ್ಯುಲ್ಲೀನಿಗಳ (ಎಲಕ್ಟ್ರೋಲೈಟ್ಸ್) ಸಾಗಣೆಯ ನಿಯಂತ್ರಣ. 2. ಅಡಿಪಾಯದ ಪೊರೆ (ಬೇಸ್ಮೆಂಟ್ ಮೆಂಬ್ರೇನ್), ಒಳಪೊರೆಯ (ಎಂಡೊತೀಲಿಯಲ್) ಮತ್ತಿತರ ಜೀವಕಣಗಳ ಪಾರಗಮ್ಯ (ಪರ್ಮಿಯಬಲ್) ಬಲ. 3. ಊತಕಗಳಲ್ಲಿನ ಒತ್ತಡದ ಬಿಗುಪನ್ನು (ಟೋನ್)ಉಳಿಸಿಕೊಂಡಿರುವಿಕೆ. ಈ ಅಂಶಗಳಲ್ಲಿ ರಕ್ತನಾಳಾಂತರದ ನೀರುನಿಲುವಿನ (ಹೈಡ್ರೊಸ್ಟ್ಯಾಟಿಕ್) ಒತ್ತಡ; ಗುರುತ್ವ: ಗುಂಡಿಗೆಯ ಇಳುವರಿ (ಔಟ್ಪುಟ್); ರಕ್ತನಾಳಗಳ ತಳಹಾಸಿನ ಅಡ್ಡವಿಕೆ; ಪರಿಸರದ ಕಾವು; ವಿಷಗಳು, ಜೀವಿವಿಷಗಳು, ಹಿಸ್ಟಮೀನ್ ತೆರನ ರಾಸಾಯನಿಕ ವಸ್ತುಗಳ ತೂರಡಿಕೆಯ ಮೇಲಿನ ಪರಿಣಾಮಗಳು; ಊತಕಾಂತರದ ವಸ್ತುವಿನ ಬಹ್ವಂಗೀಕರಣದ (ಪಾಲಿಮರೈಸೇಷನ್) ಮಟ್ಟ; ಹಾಲುರಸದ ಹರಿವು; ಪುಷ್ಟಿ; ಆಸ್ಮಾಟಿಕ್ ಒತ್ತಡದೊಂದಿಗೆ ರಕ್ತರಸದಲ್ಲಿನ ಪ್ರೋಟೀನುಗಳು, ವಿದ್ಯುಲ್ಲೀನಿಗಳ ಹಂಚಿಕೆ; ಲೋಮನಾಳಗಳು ಇವನ್ನು ಹೊರಕ್ಕೆ ತೂರಬಿಡದ್ದರಿಂದ ರಕ್ತದ ಹರಿವಿನಲ್ಲಿ ರಕ್ತರಸದಲ್ಲಿನ ಪ್ರೋಟೀನುಗಳು, ಅದರಲ್ಲೂ ಲೋಳೆ (ಆಲ್ಬುಮಿನ್) ಒಂದೇ ಸಮನಾದ ಆಸ್ಮಾಟಿಕ್ ಒತ್ತಡವನ್ನು ತೋರುತ್ತದೆ. ಮೈಯಲ್ಲಿ ನೀರು ಜಾಗ ಬಿಟ್ಟು ಕದಲುವುದನ್ನು ಕೊಂಚಮಟ್ಟಿಗೆ ಮಾತ್ರ ಭೌತ ಮತ್ತು ರಾಸಾಯನಿಕ ಕಾರಣಗಳಿಂದ ವಿವರಿಸಬಹುದು. ಜೀವಿಯಲ್ಲಿ ನೀರಿನ ವಿನಿಮಯಕ್ಕೆ ರಾಸಾಯನಿಕ ನೀರ್ದುಂಬಿಕೆಯೂ ವಿದ್ಯುತ್ತಿನ ವಿಭವಗಳೂ (ಪೊಟೆನ್ಷಿಯಲ್ಸ್) ಕಾರಣವಿರು ವಂತಿದೆ. ಇದಲ್ಲದೆ ಬದುಕಿರುವ ಜೀವಕಣದ ಪೊರೆಗಳೂ ದ್ರವದ ವಿನಿಮಯದಲ್ಲಿ ಪಾಲ್ಗೊಂಡು ಅವುಗಳ ಸಾಂದ್ರತೆಯ ಓಟಕ್ಕೆ (ಗ್ರೇಡಿಯೆಂಟ್) ಎದುರು ದಿಕ್ಕಿನಲ್ಲಿ ನೀರನ್ನೂ ಕರಗುವ ವಸ್ತುಗಳನ್ನೂ ಸಾಗಿಸುವುದೂ ಗೊತ್ತಾಗಿದೆ.
ಆರೋಗ್ಯದಲ್ಲಿ ಉಬ್ಬರ
ಬದಲಾಯಿಸಿಪಾದಗಳು, ಹರಡುಗಳ ತೆರನ ಊತಕಗಳ ತೆರಪುಗಳಲ್ಲಿ ನೀರು ಸೇರಿಕೊಂಡು ಸಂಜೆಯೇ ಬಹು ಹೊತ್ತು ನಡೆದಾಗಲೊ, ನಿಂತೇ ಇದ್ದರೂ ಕಾಲು ಊದಿಕೊಳ್ಳುವುದು ಸಾಮಾನ್ಯ, ಗುರುತ್ವ, ಸಿರಗಳ ಮೇಲಿನ ಒತ್ತಡ, ಸುತ್ತಂಚಿನ (ಪೆರಿಫೆರಲ್) ರಕ್ತನಾಳಗಳು ರಕ್ತದಿಂದ ಬೀಗುವಿಕೆ-ಇವು ಕಾರಣಗಳಾಗಬಹುದು. ಬಸಿರಲ್ಲೊ ಕೊಂಕಿದ (ವೆರಿಕೋಸ್) ಸಿರಗಳಲ್ಲೊ ಇರುವಂತೆ ಸಿರಗಳಲ್ಲಿ ಒತ್ತಡ ಎಂದಿಗಿಂತಲೂ ಒಂದಿಷ್ಟು ಹೆಚ್ಚಾದರೆ ಅಂಥ ಉಬ್ಬರ ಕಾಣಿಸಿಕೊಳ್ಳಬಹುದು. ಕೂಡಿಸುವ ಊತಕದ ಮೇಲಿನ ಪರಿಣಾಮದಿಂದಲೂ ಮೂತ್ರಪಿಂಡದ ಕೆಲಸದ ಮೇಲಿನ ಹತೋಟಿಯಿಂದಲೂ ಎಂದಿನ ಒಳಸುರಿಕ ಗ್ರಂಥಿಗಳ ಚಟುವಟಿಕೆಯಿಂದಲೂ ನೀರು ಇದ್ದ ಜಾಗವನ್ನು ಬಿಟ್ಟು ಬೇರೆಡೆಗಳಲ್ಲಿ ಸೇರಿಕೊಳ್ಳಬಹುದು. ಹೆಂಗಸರಲ್ಲಿ ಮುಟ್ಟಿನ ಕಾಲದಲ್ಲಿ ಆಗುವ ಚೋದನಿಕಗಳ ಏರಿಳಿತಗಳ ಎಂದಿನ ಚಕ್ರದ ಪರಿಣಾಮವಾಗಿ ಮೂತ್ರಪಿಂಡ ನೀರನ್ನೂ ಸೋಡಿಯಮನ್ನೂ ಹಿಡಿದಿರುತ್ತದೆ. ಆಗ ಮೈಯಲ್ಲಿ ನೀರು ಹೆಚ್ಚಿಕೊಳ್ಳುತ್ತದೆ. ಇದರಿಂದ ಮುಟ್ಟು ಮುಂಚಿನ ತೂಕವೂ ಏರುವುದು. ರೋಗಗಳಲ್ಲಿ ಮೈಯಲ್ಲೆಲ್ಲ ಇಲ್ಲವೆ ಒಂದು ತಾವಿನಲ್ಲಿ ಉಬ್ಬರ ಆಗಬಹುದು. ಇಲ್ಲವೇ ಮೈಯ ಪೊಳ್ಳುಗಳಲ್ಲಿ ನೀರುತುಂಬಿಕೊಳ್ಳಬಹುದು.
ಮೈಯಲ್ಲೆಲ್ಲ ಉಬ್ಬರ
ಬದಲಾಯಿಸಿಗುಂಡಿಗೆ, ಮೂತ್ರಪಿಂಡ, ನ್ಯೂನಪೋಷಣೆಯ, ಒಳಸುರಿಕ ಗ್ರಂಥಿಯ ಮತ್ತಿತರ ಕಾರಣಗಳಲ್ಲೂ ಇಡೀ ಮೈಯಲ್ಲಿನ ಒಟ್ಟು ನೀರು ಹೆಚ್ಚಿರುವುದಕ್ಕೆ ತೊಡಕಿನ ವಿಧಾನದ ವಿವರಣೆ ಇದೆ. ಕುಡುಕುತನದಿಂದ ಬರುವ ಪಿತ್ತಜನಕಾಂಗದ ಅರಿಶಿನಾರಿಗೆಯಲ್ಲಿ (ಲಿವರ್ ಸಿರೋಸಿಸ್) ಸಾಮಾನ್ಯವಾಗಿ ಹೊರಬಿಗಿಪೊರೆಯ ಚೀಲದಲ್ಲಿ ನೀರು ಸೇರಿಕೊಳ್ಳುತ್ತದೆ (ನೀರ್ದೊಳ್ಳು), ಅಲ್ಲದೆ ಕಾಲುಗಳಲ್ಲೂ ತರಡು ಚೀಲ (ಸ್ಕ್ರೋಟಂ) ಅಳ್ಳೆಪೊರೆಯ ಪೊಳ್ಳುಗಳಲ್ಲೂ ಕೂಡಿಕೊಳ್ಳಬಹುದು, ರೋಗದಿಂದ ಹಾಳಾದ ಪಿತ್ತಜನಕಾಂಗದ ಗಾಯ ಕಲೆಗಳು, ತಂತುವಿನ ಊತಕ ಪಟ್ಟಿಗಳು, ಮರುಹುಟ್ಟುತ್ತಿರುವ ಜೀವಕಣಗಳೂ ಪಿತ್ತಜನಕಾಂಗದ ತೂರುಗೊಂದಿಯ (ಪೋರ್ಟಲ್) ಸಿರವನ್ನು ಕಿವುಚಿ ಅದರೊಳಗಿನ ಒತ್ತಡವನ್ನು ಏರಿಸುವುವು. ಇದರಿಂದ ತೂರುಗೊಂದಿಯ ಲೋಮನಾಳಗಳ ಮೂಲಕ ದ್ರವ ಹೆಚ್ಚಾಗಿ ಹೊರಬಿದ್ದು ಹೊರಬಿಗಿಪೊರೆಯ ಪೊಳ್ಳಿನಲ್ಲಿ (ಹೊಟ್ಟೆಯಲ್ಲಿ) ನೀರು ಸೇರಿಕೊಳ್ಳುತ್ತದೆ. ಇದಲ್ಲದೆ ಕೆಟ್ಟಿರುವ ಪಿತ್ತಜನಕಾಂಗದ ಕೋಳೆಯನ್ನು ತಯಾರಿಸಲಾರದ ರಕ್ತದಲ್ಲಿನ ಕೋಳೆಯ ಮಟ್ಟ ಇಳಿಯುತ್ತದೆ. ಇದರಿಂದ ರಕ್ತರಸದ ಆಸ್ಮಾಟಿಕ್ ಒತ್ತಡವೂ ಕುಸಿದು ರಕ್ತದಲ್ಲಿನ ನೀರು ಊತಕಗಳೊಳಕ್ಕೆ ಸಾಗುತ್ತದೆ. ಹಸಿವು ಕೆಟ್ಟು ಪುಷ್ಟಿಗೆಡುತ್ತದೆ. ಊತಕಗಳೂ ಸೊರಗುತ್ತವೆ. ಆಗ ಊತಕಗಳಲ್ಲಿನ ಬಿಗುಪು ಕುಗ್ಗಿ ಸಡಿಲ ಬಿದ್ದೆಡೆಗಳಲ್ಲಿ ನೀರು ಸೇರಿಕೊಳ್ಳುವುದು. ಹಾಳಾಗಿರುವ ಪಿತ್ತಜನಕಾಂಗದ ಸ್ಟೀರಾಯ್ಡುಗಳನ್ನು ಎಂದಿನಂತೆ ಜಡಗೊಳಿಸಲಾಗದ್ದರಿಂದ ಅವು ಮೈಯಲ್ಲಿ ಮತ್ತಷ್ಟು ಹೆಚ್ಚುತ್ತವೆ. ರಕ್ತದಿಂದ ಕೋಳೆ ಇಳಿದು ಹೋದುದರಿಂದ ರಕ್ತದ ಘನಗಾತ್ರ ಹೆಚ್ಚಿದ್ದನ್ನು ಗಮನಿಸುವ ಘನಗಾತ್ರದ ಗ್ರಾಹಕದಿಂದೇಳುವ ಚೋದನೆಯ ಮೂಲಕ ಅಡ್ರಿನಲ್ ಸ್ಟೀರಾಯ್ಡುಗಳು ಹೇರಳವಾಗಿ ರಕ್ತ ಸೇರುತ್ತವೆ. ಸ್ಟೀರಾಯ್ಡುಗಳ ಹೆಚ್ಚಳದಿಂದ ಸೋಡಿಯ ಮನ್ನೂ ನೀರನ್ನೂ ಮೂತ್ರಪಿಂಡ ಹಿಡಿದಿಟ್ಟುಕೊಳ್ಳುವಂತಾಗುವುದು. ಹೀಗೆ ಉಬ್ಬರ, ನೀರ್ದೊಳ್ಳು ಆಗಲು ಹಲವಾರು ಯಾಂತ್ರಿಕತೆಗಳು ಬೇರೆ ಬೇರೆಯಾಗಿಯೊ ಒಟ್ಟಾಗಿಯೊ ಕೆಲಸ ಮಾಡುತ್ತಿರುವುವು. ಈಲಿಯ ಬೇರೆ ತೆರನ ರೋಗಗಳಲ್ಲೂ ಉಬ್ಬರ ಕಾಣಿಸಿಕೊಳ್ಳುವುದು (ನೋಡಿ-ಈಲಿ ; ಪಿತ್ತಕೋಶ ; ಪಿತ್ತನಾಳಗಳು). ಗುಂಡಿಗೆಯ ಸೋಲುವೆಯೊಂದಿಗೆ (ಹಾರ್ಟ್ ಫೇಲ್ಯರ್) ಹಲವೇಳೆ ಉಬ್ಬರವೂ ಕಾಣಿಸಿಕೊಳ್ಳುವುದು. ರೋಗಿ ಅಡ್ಡಾಡುತ್ತಿದ್ದಲ್ಲಿ ಕಾಲುಗಳಲ್ಲಿ ಉಬ್ಬರ ತೋರುತ್ತದೆ. ಹಾಸಿಗೆ ಹಿಡಿದಿದ್ದರೆ, ಕುಂಡಿ ಕೆಳಗೂ ಚರ್ಮದಡಿಯ ಊತಕಗಳಲ್ಲೂ ಉಬ್ಬರಿಸಿಕೊಳ್ಳವುದು. ರಕ್ತಗಟ್ಟಿನ (ಕಂಜೆಕ್ಟಿವ್) ಗುಂಡಿಗೆ ಸೋಲುವೆ ಇಲ್ಲವೇ ಹಿಂದೂಡುವ ಗುಂಡಿಗೆ ಸೋಲುವಿಕೆ ಸಾಮಾನ್ಯವಾಗಿ ಗುಂಡಿಗೆ ಕವಾಟಗಳ ಕುಂದುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಓಟದ (ಗ್ರೇಡಿಯೆಂಟ್) ಇಲ್ಲವೆ ಮುಂದೂಡುವ ಗುಂಡಿಗೆ ಸೋಲುವೆಗೆ ಕಾರಣ ರಕ್ತಕೊರೆ, ಅತಿಗುರಾಣಿಕತನ (ಹೈಪರ್ಥೈರಾಯ್ಡಿಸಂ), ಮೂತ್ರರಕ್ತ (ಯೂರೀಮಿಯ), ಪಿತ್ತರಕ್ತ (ಕೋಲೀಮಿಯ), ಬೆರಿಬೆರಿ. ಗುಂಡಿಗೆಯ ಕೂರಾದ (ಅಕ್ಯೂಟ್) ಸೋಲುವೆಯಿಂದ ಪುಪ್ಪುಸಗಳು ಉಬ್ಬರಿಸಿಕೊಳ್ಳುವುವು. ಸಾಸಿವೆ ಅನಿಲದ (ಮಸ್ಟರ್ಡ್ ಗ್ಯಾಸ್) ತೆರನ ಹಾನಿಕರ ರಾಸಾಯನಿಕಗಳನ್ನೂ ಉಸಿರಲ್ಲೆಳೆದುಕೊಂಡಾಗ ಪುಪ್ಪುಸದ ಲೋಮನಾಳಗಳ ಬಹ್ವಂಗೀಕರಣ ದಲ್ಲಿ ವ್ಯತ್ಯಾಸಗಳು ಆಗುವುದರಿಂದಲೂ ಪುಪ್ಪುಸ ಉಬ್ಬರಿಸಿಕೊಳ್ಳುವುದು. (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಗುಂಡಿಗೆಯ-ರೋಗಗಳು, ಊನಗಳು). ಎಷ್ಟೋ ವೇಳೆ ಮೂತ್ರಪಿಂಡದ ರೋಗದಲ್ಲಿ ಕಣ್ಣುರೆಪ್ಪೆಗಳು, ಮೊಗವೇ ಅಲ್ಲದೆ ಜೋಲುಬಿದ್ದಿರುವ ಭಾಗಗಳಲ್ಲೂ ಸಾಮಾನ್ಯವಾಗಿ ಉಬ್ಬರ ಕಾಣಿಸಿಕೊಳ್ಳುವುದು. ಕೆಲವು ತಾಸುಗಳು ಮಲಗಿದ್ದರಂತೂ ಇನ್ನೂ ಜೋರಾಗಿರುವುದು. ಎಲ್ಲ ಬಿಟ್ಟು ಕಣ್ಣುರೆಪ್ಪೆಗಳೂ ಮೊಗವೂ ಊದಿಕೊಳ್ಳುವುದರ ಕಾರಣ ತಿಳಿದಿಲ್ಲ. ಸಾಮಾನ್ಯವಾಗಿ ಕೂರಾದ ಬ್ರೈಟನ ರೋಗ ಮೂತ್ರ ಪಿಂಡದ ಅನುವಳಿಕ ಲಕ್ಷಣಕೂಟ (ನೆಫ್ರೋಟಿಕ್ ಸಿಂಡ್ರೋಂ ). ಅಸಾಮಾನ್ಯ ವಾಗಿ ಬೇರೂರಿ ಮೂತ್ರಪಿಂಡದ ಸೋಲುವೆಯಲ್ಲೂ ಉಬ್ಬರ ಇರುವುದು, ಕೂರಾದ ಮೂತ್ರಪಿಂಡದ ಸೋಲುವೆಯಲ್ಲಿ ಮಿತಿಮೀರಿ ನೀರು ಕುಡಿದರಂತೂ ಉಬ್ಬರಿಸಿಕೊಳ್ಳುತ್ತದೆ. ಶಸ್ತ್ರಕ್ರಿಯೆಗಳು ಆದಮೇಲೆ ಕೂರಾದ ಮೂತ್ರಪಿಂಡದ ಸೋಲುವೆಯಲ್ಲೂ ಈಲಿ ಇಲ್ಲವೇ ಗುಂಡಿಗೆಯ ಸೋಲುವೆಯ ಕೆಲವು ರೋಗಿಗಳಲ್ಲೂ ಕೊನೆಯ ಸಂಗಾತಿಯಾಗಿಯೂ ಮೂತ್ರಪಿಂಡಗಳು ನೀರನ್ನು ಹೊರದೂಡುವ ಬಲಗುಂದುವುದರಿಂದ ನೀರಿನ ವಿಷವೇರಿಕೆ ಕಂಡುಬರುವುದು. ಪುಷ್ಟಿಗೆಟ್ಟು ಬರುವ ಉಬ್ಬರ ಬಲುಮಟ್ಟಿಗೆ ಹೊಟ್ಟೆಗಿಲ್ಲದ ಇಲ್ಲವೇ ಬರಗಾಲದ ಉಬ್ಬರ, ಪ್ರೋಟೀನು ಬಳಸುವ ಮಟ್ಟ ಇಳಿದುದರಿಂದ ಉಬ್ಬರ ಈ ತೆರನ ಎರಡು ರೂಪಗಳಲ್ಲಿ ಬರುತ್ತದೆ. ತಯಮೀನ್ (ಬಿ 1) ಕೊರೆಯಲ್ಲೂ (ಬೆರಿಬೆರಿ), ಪೊಟ್ಯಾಸಿಯಂ ಕೊರೆಯಲ್ಲೂ ಉಬ್ಬರ ಇರುವುದು, ಬರಗಾಲ, ಮನೋರೋಗದ ಹಸಿವು ನಾಶ (ಅನೋರೆಕ್ಸಿಯ ನರ್ವೋಸ), ಏಡಿಗಂತಿ ಇತ್ಯಾದಿಗಳಿಂದ ಏಳುವ ಹೊಟ್ಟೆಗಿಲ್ಲದಾಗಿನ ಉಬ್ಬರಕ್ಕೆ ಮುಖ್ಯಕಾರಣ ಸಾಮಾನ್ಯವಾಗಿ ಊತಕಗಳಲ್ಲಿ ಬಿಗುಪು ಇಲ್ಲದೆ ಸಡಿಲ ಬಿದ್ದಿರುವುದೇ. ಇಷ್ಟಾದರೂ ಮೂತ್ರಪಿಂಡದಲ್ಲಿ ಸೋಡಿಯಮ್ನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವ ಇತರ ಕಾರಣಗಳೂ ಇವೆ. ಹೊಟ್ಟಿಗಿಲ್ಲದಿರುವ ರೋಗಿಗಳಿಗೆ ಉಪ್ಪಿರುವ ದ್ರವ ಇಲ್ಲವೇ ಉಣಿಸುಗಳನ್ನು ಬೇಗನೆ ಮೊದಲ ದಿನಗಳಲ್ಲೇ ಕೊಟ್ಟು ಚಿಕಿತ್ಸೆ ಮಾಡಿದರೆ ಉಬ್ಬರಿಸಿಕೊಂಡು ಗುಂಡಿಗೆ ಸೋತು ಕೆಡುಕಾಗುವುದು. ಸಹಜವಾದ ಇಲ್ಲವೆ ಚಿಕಿತ್ಸೆಯಿಂದಾದ ಒಳಸುರಿಕ ಗ್ರಂಥಿಗಳ ಏರುಪೇರುಗಳಲ್ಲೂ ಉಬ್ಬರ ತೋರಬಹುದು. ಬಸಿರುನಂಜಿನಲ್ಲೊ (ಎಕ್ಲಾಂಪ್ಸಿಯ) ಅದರ ಮುಂಚೆಯೋ ಬಸುರಿನಲ್ಲೂ ಮೈಯೆಲ್ಲ ಉಬ್ಬರಿಸಿಕೊಳ್ಳಬಹುದು. ಮನೋಬೇನೆಯಿಂದ ನರಳುವ ಹೆಂಗಸರಲ್ಲಿ ಬಿಟ್ಟೂ ಬಿಟ್ಟೂ ಉಬ್ಬರ ತೋರಬಹುದು. ಸ್ಟೀರಾಯ್ಡ ಚೋದನಿಕಗಳಿಂದ ಮಾಡುವ ಚಿಕಿತ್ಸೆಯ ಅಡ್ಡಪರಿಣಾಮವಾಗಿ ಉಬ್ಬರಿಸಿಕೊಳ್ಳವುದೂ ಸಾಮಾನ್ಯ. ಸಿಹಿಮೂತ್ರರೋಗಿ ತಾಯಂದಿರ ಮಕ್ಕಳಿಗೆ ಹುಟ್ಟಿದ ಹಸುಗೂಸುಗಳಲ್ಲೂ ಕಾಣುವುದು. ಮೈಯಲ್ಲಿ ಎಲ್ಲಾದರೂ ಒಂದೆಡೆ ಉಬ್ಬರ ಆಗಲು ದ್ರವದ ಬದಲು ಸಾಗಣೆಯೇ ಸಾಮಾನ್ಯ ಕಾರಣ. ಮೈ ನೀರಿನ ಒಟ್ಟು ಪರಿಮಾಣ ಮಾತ್ರ ಬದಲಾಗದು. ಇಲ್ಲವೇ ಕೊಂಚಮಾತ್ರವೇ ಹೆಚ್ಚುತ್ತದೆ. ಒಂದೆಡೆಯ ಲೋಮನಾಳದ ಬಹ್ವಂಗೀಕರಣದ ವ್ಯತ್ಯಾಸಗಳಿಂದ ಆಗುವುದು. ಇದಕ್ಕೆ ಕಾರಣಗಳೂ ಹಲವಾರು. 1. ಸೊಳ್ಳೆ ಕಡಿದೆಡೆ ಊದುವಂತೆ ಜೀವಿವಿಷಗಳು ಒಳಹೋಗುವುಕೆ; 2. ತುಟಿ, ನಾಲಗೆ, ಗಂಟಲುಗಳು ರಕ್ತನಾಳಸೆಡೆತದ (ಆಂಜಿಯೊನ್ಯೂ ರೋಟಿಕ್) ಉಬ್ಬರದಲ್ಲಿ ಇದ್ದಂತೆ ಒಗ್ಗದಿಕೆ ಜನಕಗಳು (ಅಲರ್ಜೆನ್ಸ್) ಒಳಸೇರಿದಮೇಲೆ ಊತಕಗಳಲ್ಲಿ ಹಿಸ್ಟಮೀನಿನ ಬಿಡುಗಡೆಯೊಂದಿಗೆ ಒಗ್ಗದಿಕೆಯ (ಅಲರ್ಜಿಕ್) ಮಾರುವರ್ತನೆ ಗಳು ಆಗುವಿಕೆ; 3. ಕೂಡು ಗರಣೆ ಸಿರದುರಿತ (ತ್ರಾಂಬೋಫ್ಲೆಬೈಟಿಸ್) ಇಲ್ಲವೇ ಸಿರಗಳ ಮೇಲೆ ಗ್ರಂಥಿಗಳ ಒತ್ತಡದಲ್ಲಿ ಇರುವಂತೆ ಸಿರದ ರಕ್ತ ಗುಂಡಿಗೆಗೆ ಹಿಂತಿರುಗುವುದಕ್ಕೆ ಆತಂಕ; 4. ಎಳೆಕೀಟ ಬೇನೆಯಿಂದ (ಫೈಲೇರಿಯಾಸಿಸ್) ಆಗುವ ಆನೆದೊಗಲಿನಲ್ಲಿ (ಎಲಿಫೆಂಟಿಯಾಸಿಸ್) ಆಗುವಂತೆ ಹಾಲುರಸನಾಳಗಳ ಅಡಚಣೆ. ಮೈಯಲ್ಲಿನ ಕೆಲವು ಪೊಳ್ಳುಗಳಲ್ಲಿ ಉರಿಯೂತವೆದ್ದೊ (ಇನ್ಫ್ಲಮೇಷನ್), ಏಡಿಗಂತಿ ನುಗ್ಗಿ ಹರಡಿಯೊ ಕೆಲವು ಮೈಪೊಳ್ಳುಗಳಲ್ಲಿ ಮಾತ್ರ ನೀರು ತುಂಬಲೂಬಹುದು. ಆದರೆ ಇವನ್ನು ಉಬ್ಬರವಾಗಿ ಗಣಿಸಿಲ್ಲ. ಮೈಯಲ್ಲೆಲ್ಲ ಉಬ್ಬರವಾದರೆ, ಅಳ್ಳೆಪೊರೆ ಚೀಲದಲ್ಲೂ ಗುಂಡಿಗೆಸುತ್ತುಪೊರೆ ಚೀಲದಲ್ಲೂ ನೀರು ಕೂಡಿಕೊಳ್ಳುವುದು ಸಾಮಾನ್ಯ. (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಅಳ್ಳೆಪರೆಯ-ರೋಗಗಳು) ಆದರೆ ಕೀಲುವಾತದ (ರುಮ್ಯಾಟಿಕ್) ಬೇನೆಗಳನ್ನು ಬಿಟ್ಟರೆ ಕೀಲುಗಳಲ್ಲಿ ನೀರು ಸೇರುವುದು ಅಸಾಮಾನ್ಯ. ತೂರುಗೊಂದಿಯ ಸಿರದ ಕೂಡುಗರಣಿಕೆ ತೆರನ ಸಿರಗಳ ಅಲ್ಲದೆ ಹಾಲುರಸನಾಳಗಳ ಅಡಚಣೆಗಳಿಂದಲೂ ನೀರು ಸೂಸುವುದು. ಮಿದುಳುಬೆನ್ನುಹುರಿಯ ದ್ರವ ಎಂದಿನಂತೆ ಹರಿದು ಸಾಗುವ ಜೇಡಂದಡಿಯ (ಸಬ್ಅರ ಕ್ನಾಯ್ಡ್) ನಾಳದಾರಿಗಳಲ್ಲಿ ಉರಿತವಾಗಿ ಆತಂಕವಾಗುವುದರಿಂದ ಮಿದುಳ್ಗುಣಿಗಳೊಳಗೆ (ವೆಂಟ್ರಿಕಲ್ಸ್) ಮಿತಿಮೀರಿ ನೀರು ಸೇರುವುದೆಂಬ ಭಾವನೆ ಇದೆ. (ಡಿ.ಎಸ್.ಎಸ್.)