ಉಪಾಧ್ಯಾಯ, ಅಯೋಧ್ಯಾಸಿಂಹ
ಉಪಾಧ್ಯಾಯ, ಅಯೋಧ್ಯಾಸಿಂಹ: 1865-1941. ಆಧುನಿಕ ಹಿಂದ ಕಾವ್ಯ ಪಿತಾಮಹ ಎಂದು ಖ್ಯಾತಿವೆತ್ತವ. ಕಾವ್ಯನಾಮ ಹರಿಔಧ್.
ಬದುಕು
ಬದಲಾಯಿಸಿಜನಿಸಿದ್ದು ಉತ್ತರ ಪ್ರದೇಶದ ಆಜ಼ಮ್ಗಢದಲ್ಲಿ, ಕಾವ್ಯನಾಮವನ್ನು ಆಯ್ದುಕೊಳ್ಳುವಲ್ಲೂ ಈತ ಔಚಿತ್ಯ ತೋರಿದ್ದಾನೆ. ಹರಿ ಎಂದರೆ ಸಿಂಹ, ಔಧ್ ಎಂದರೆ ಅಯೋಧ್ಯಾ. ಉಪಾಧ್ಯಾಯ ಮನೆತನದ ಹೆಸರು. ಈತನ ಪುರ್ವಿಕರು ಬದಾಯೂನ್ ಜಿಲ್ಲೆಯವರಾದರೂ ಕಳೆದ ಕೆಲವು ತಲೆಮಾರಿನಿಂದ ಆಜ಼ಮ್ಗಢದಲ್ಲಿದ್ದಾರೆ.
ಈತನ ಬಹುಮುಖ ಸಾಹಿತ್ಯ ಸೇವೆಯನ್ನು ಗಮನಿಸಿ, 20ನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ, ನಾಗರೀ ಪ್ರಚಾರಿಣೀ ಸಭೆ ಅಭಿನಂದನ ಗ್ರಂಥವೊಂದನ್ನು ಸಮರ್ಪಿಸಿ ಗೌರವಿಸಿತು (1938). ದೆಹಲಿಯಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನಕ್ಕೆ ಈತ ಅಧ್ಯಕ್ಷನಾಗಿದ್ದ.
ಉಪಾಧ್ಯಾಯ ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಅಧ್ಯಾಪಕನಾಗಿ ನಿವೃತ್ತನಾದ. ವೃತ್ತಿಯಿಂದ ಅಧ್ಯಾಪಕನಾದರೂ ಪ್ರವೃತ್ತಿಯಿಂದ ಸಾಹಿತಿಯಾಗಿದ್ದು, ಸಾಹಿತ್ಯಸೇವೆಯನ್ನು ಸತತವಾಗಿ ನಡೆಸಿಕೊಂಡು ಬಂದ ಈತ ಹಿಂದಿಸಾಹಿತ್ಯದ ವರಕವಿಗಳಲ್ಲಿ ಒಬ್ಬ.
ಆಧುನಿಕ ಹಿಂದಿ ಸಾಹಿತ್ಯಕ್ಕೆ ಈತನ ಕೊಡುಗೆ
ಬದಲಾಯಿಸಿಖಡಿಬೋಲೀ (ಆಧುನಿಕ ಹಿಂದಿ) ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡದ್ದು ಇಪ್ಪತ್ತನೆಯ ಶತಮಾನದಲ್ಲಿ, ಗದ್ಯ ಮತ್ತು ಪದ್ಯಗಳಿಗೆ ಆಡುನುಡಿ ಬಳಸುವಲ್ಲಿ ಅನೇಕರು ವಿಫಲರಾಗಿ ಭಾಷೆಯನ್ನೇ ತೆಗಳುತ್ತಿದ್ದ ಕಾಲದಲ್ಲಿ ಅದನ್ನು ಬಹು ಚತುರತೆಯಿಂದ ಬಳಸಿ ಅದರ ಕೈ ಹಿಡಿದವರಲ್ಲಿ ಉಪಾಧ್ಯಾಯನೂ ಒಬ್ಬ. ಉಪಾಧ್ಯಾಯ ಮೊದಲಿಗೆ ವ್ರಜಭಾಷೆಯಲ್ಲಿ ಕಾವ್ಯರಚನೆ ಮಾಡುತ್ತಿದ್ದು, ಅನಂತರ ಆಡುಮಾತಿನಲ್ಲಿ ಕಾವ್ಯರಚನೆಯ ಹಾದಿ ಹಿಡಿದ.
20ನೆಯ ಶತಮಾನದ ಮೊದಲಲ್ಲಿ ಕೆಲವು ಸಣ್ಣಪುಟ್ಟ ಕಾವ್ಯಗಳು, ನಾಲ್ಕಾರು ಅನುವಾದಗಳು ಹಾಗೂ ಮೈಥಿಲೀಶರಣಗುಪ್ತರ ಜನದ್ರಥವಧ ಕಾವ್ಯ ಬೆಳಕಿಗೆ ಬಂದಿದ್ದರೂ ಹಿಂದಿ ಕಾವ್ಯ ಸಾಂಪ್ರದಾಯಿಕ ಬಂಧನದಿಂದ ಪೂರ್ಣವಾಗಿ ಮುಕ್ತವಾಗಿರಲಿಲ್ಲ. ಆಧುನಿಕ ಹಿಂದಿ ಕಾವ್ಯಕ್ಕೆ ಇನ್ನೂ ಪೂರ್ಣ ಯಶಸ್ಸು ದೊರೆತಿರಲಿಲ್ಲ. ಇಂಥ ಪ್ರಯೋಗಾವಸ್ಥೆಯಲ್ಲಿ ಹರಿಜೌಧ್ ನ ಪ್ರಿಯಪ್ರವಾಸ ಎಂಬ ಕಾವ್ಯ ಜಯಭೇರಿ ಹೊಡೆಯಿತು. ಆಡುನುಡಿಯ ಬಳಕೆಗೆ ವಿರೋಧಿಗಳಾಗಿದ್ದವರಿಗೆ ಈ ಕಾವ್ಯ ಸವಾಲಾಗಿ ಪರಿಣಮಿಸಿತು.
ಆಧುನಿಕ ಭಾಷೆಯ ಪ್ರಾಯೋಗಿಕ ಸ್ಥಿತಿಯಲ್ಲಿ ಮೂಡಿಬಂದ ಕಾವ್ಯವಾದರೂ ಹಿಂದಿನ ಎಲ್ಲ ಕಾವ್ಯಗಳನ್ನೂ ಮೆಟ್ಟಿನಿಂತ ಕೀರ್ತಿ ಇದರದು. ಪ್ರಿಯಪ್ರವಾಸ ಈ ಯುಗದ್ದಲ್ಲ, ಮುಂದಿನ ಯುಗದ್ದು ಎನಿಸುವಷ್ಟು ವೈಶಿಷ್ಟ್ಯ ಪೂರ್ಣವಾಗಿತ್ತು. ಇಡೀ ಕಾವ್ಯ ಸಂಸ್ಕೃತ ವರ್ಣವೃತ್ತಗಳಲ್ಲಿದೆ. ಅಂತ್ಯಪ್ರಾಸದ ಬಂಧನವನ್ನು ಕಿತ್ತೊಗೆದ (ಹಿಂದಿ ಕಾವ್ಯ ಇನ್ನೂ ಈ ಬಂಧನದಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ) ಮೊಟ್ಟಮೊದಲ ಕಾವ್ಯವಿದು. ಸರಳತೆ, ಸರಸತೆ ಮತ್ತು ರಸಸಿಕ್ತತೆ ಇಲ್ಲಿ ಮೇಳವಿಸಿದೆ. ಹಿಂದಿ ಸಂಸ್ಕೃತ ಶಬ್ದಗಳ ಸಾಮರಸ್ಯಕ್ಕೆ ಇದೊಂದು ಸುಂದರ ನಿದರ್ಶನ. ಮಧುರಾಗಮನದವರೆಗಿನ ಶ್ರೀಕೃಷ್ಣ ಚರಿತ್ರೆ ಇದರ ಕಥಾವಸ್ತು ಗೋಪ ಗೋಪಿಯರ ವಿರಹ, ಯಶೋದೆಯ ದುಃಖ ಬಲು ಹೃದಯಸ್ಪರ್ಶಿಯಾಗಿ ಮೂಡಿದೆ. ಈ ಕಾವ್ಯಕ್ಕೆ ಮಂಗಲಪ್ರಸಾದ್ ಪಾರಿತೋಷಕವನ್ನು ನೀಡಲಾಯಿತು (1915).
ವೈದೇಹೀ ವನವಾಸ ಎಂಬುದು ಈತನ ಇನ್ನೊಂದು ಪ್ರಸಿದ್ಧ ಕಾವ್ಯ. ಸೀತೆಯ ವನವಾಸ ಈ ಕಾವ್ಯದ ವಸ್ತು. ಪಾಂಡಿತ್ಯ ಮತ್ತು ಸರಸತೆ ಇಲ್ಲಿ ಹೋಯ್ಕೈಯಾಗಿ ಸಾಗಿವೆ. ಚೌಖೇ ಚೌಪದೇ ಮತ್ತು ಚುಭತೇ ಚೌಪದೇ ಎಂಬುವು ದೇಸೀ ಶೈಲಿಯಲ್ಲಿ ರಚಿತವಾಗಿರುವ ಸರಸಪೂರ್ಣ ಕವನಸಂಗ್ರಹಗಳು, ನುಡಿಗಟ್ಟುಗಳನ್ನು ಇಲ್ಲಿ ವಿಶೇಷವಾಗಿ ಬಳಸಲಾಗಿದೆ. ಪ್ರಿಯಪ್ರವಾಸಕ್ಕೆ ಪೀಠಿಕಾರೂಪವಾಗಿ ಹಿಂದಿ ಕಾವ್ಯದ ವಿಕಾಸವನ್ನು ಕುರಿತು ಬರೆದ ದೀರ್ಘಪ್ರಬಂಧ. ಪಾಟ್ನ ವಿಶ್ವವಿದ್ಯಾನಿಲಯದ ಭಾಷಣಮಾಲೆಯಲ್ಲಿ ಬರೆದ ಹಿಂದಿ ಭಾಷೆ ಮತ್ತು ಸಾಹಿತ್ಯದ ವಿಕಾಸಕ್ಕೆ ಸಂಬಂಧಿಸಿದ ಪ್ರಬಂಧಗಳು ಈತನ ಮುಖ್ಯ ಗದ್ಯಕೃತಿಗಳು. ಕೆಲವು ಸಾಹಿತ್ಯಕ ಪ್ರಬಂಧಗಳನ್ನೂ ರಚಿಸಿದ್ದಾನೆ. ಜೊತೆಗೆ ನಾಟಕ, ಕಾದಂಬರಿ ಮತ್ತು ಪ್ರಬಂಧಗಳೂ ಮೂಡಿಬಂದಿವೆ. ಪ್ರದ್ಯುಮ್ನವಿಜಯ ನಾಟಕದ ವಸ್ತು ಹಳೆಯದಾದರೂ ನಿರೂಪಣೆ ಹೊಸತು. ಠೇರ್ ಹಿಂದಿ ಕಾ ಠಾಠ್ ಮತ್ತು ಅಧಖಿಲಾ ಫೂಲ್ ಸಾಮಾಜಿಕ ಕಾದಂಬರಿಗಳು ಕಾವ್ಯಾತ್ಮಕ ಶೈಲಿ ಈತನ ವಿಶೇಷ ಆಕರ್ಷಣೆ. ರಸಕಲಸ ರಸನಿರೂಪಣೆಗೆ ಸಂಬಂಧಿಸಿದ ಉತ್ತಮ ಗ್ರಂಥ, ರಸ ಮತ್ತು ನಾಯಿಕಾಭೇದದ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಒಳಗೊಂಡಿದೆ. ಲಕ್ಷಣಗಳನ್ನು ಗದ್ಯದಲ್ಲಿ ಕೊಟ್ಟು, ಸ್ವರಚಿತ ಸರಸ, ಸುಂದರ, ಅಪೂರ್ವ ಲಕ್ಷ್ಯ ಪದ್ಯಗಳನ್ನು ಲೇಖಕ ನೀಡಿದ್ದಾನೆ. ವಿಷಯ ವಿವೇಚನೆಗೆ ಪ್ರಾಚೀನ ಕಾವ್ಯ ಮೀಮಾಂಸಕರ ಅಭಿಪ್ರಾಯಗಳೇ ಈತನಿಗೆ ಆಧಾರ. ಬದಲಾದ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ನಾಯಿಕಾಭೇದದ ಹಳೆಯ ಕಲ್ಪನೆಗಳಿಗೆ ಬದಲಾಗಿ ಹೊಸವರ್ಗೀಕರಣ ಆವಶ್ಯಕವೆಂದು ಪ್ರತಿಪಾದಿಸಿ ಆ ಬಗೆಯಲ್ಲಿ ನಾಯಿಕೆಯರನ್ನು ವರ್ಗೀಕರಿಸಿರುವುದು, ಸಾಹಿತ್ಯಕ್ಷೇತ್ರದಲ್ಲಿನ ಅಧುನಾತನ ಪ್ರವೃತ್ತಿಗಳನ್ನು ಗಮನದಲ್ಲಿರಿಸಿಕೊಂಡು ರಸವಿವೇಚನೆ ಮಾಡಿರುವುದು ಈ ಗ್ರಂಥದ ವೈಶಿಷ್ಟ್ಯಗಳು.