ಉಪಾಧ್ಯಾಯರ ಶಿಕ್ಷಣ

ಉಪಾಧ್ಯಾಯರ ಶಿಕ್ಷಣ: ಶಿಕ್ಷಣವೃತ್ತಿಯಲ್ಲಿ ತನ್ನ ಕರ್ತವ್ಯಗಳನ್ನು ಪರಿಣಾಮಕಾರಿ ಯಾಗಿ ನಿರ್ವಹಿಸಲು ವ್ಯಕ್ತಿಯೊಬ್ಬನಿಗೆ ಸಾಧ್ಯವಾಗುವಂತೆ ಮಾಡಲು ರೂಪಿಸಿರುವ, ಔಪಚಾರಿಕ ಮತ್ತು ಅನೌಪಚಾರಿಕ ರೀತಿಯ ವಿವಿಧ ಅನುಭವಗಳನ್ನೂ ಚಟುವಟಿಕೆಗಳನ್ನೂ ಒಳಗೊಂಡ, ಕಾರ್ಯಕ್ರಮ ಎಂದರೆ ಅಭ್ಯರ್ಥಿಯನ್ನು ಶಿಕ್ಷಣವೃತ್ತಿಗೆ ಸಿದ್ಧಪಡಿಸುವುದಕ್ಕೂ ಆಗಲೇ ಶಿಕ್ಷಣವೃತ್ತಿಯಲ್ಲಿ ನಿರತರಾಗಿರತಕ್ಕ ಅಧ್ಯಾಪಕರಿಗೆ ಅಗತ್ಯವೆನಿಸುವ ವೃತ್ತಿಸಿದ್ಧತೆಯನ್ನು ದೊರಕಿಸುವುದಕ್ಕೂ ಅನಂತರ ಆ ಕೌಶಲದ ಬೆಳೆವಣಿಗೆಯನ್ನು ಸಾಧಿಸುವುದಕ್ಕೂ ವೃತ್ತಿ ಶಿಕ್ಷಣಸಂಸ್ಥೆ ವ್ಯವಸ್ಥೆಗೊಳಿಸಿರುವ ವಿಧ್ಯುಕ್ತವೆನಿಸುವ ಮತ್ತು ವಿಧ್ಯುಕ್ತವಲ್ಲದ ಎಲ್ಲ ಕಾರ್ಯಕ್ರಮಗಳು.

ಜನಾಂಗವೊಂದರ ಸಂಸ್ಕೃತಿಯನ್ನು ದಪ್ಪಗಿನ ಅಕ್ಷರಅರಿಯಬೇಕಾದರೆ ಅಲ್ಲಿನ ಶಾಲೆಗೆ ಹೋಗಬೇಕು; ಆ ಜನಾಂಗದ ಭವಿಷ್ಯವನ್ನು ದರ್ಶಿಸಬೇಕಾದರೆ ಅಲ್ಲಿನ ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು - ಎಂದು ಹೇಳುವುದುಂಟು. ಅಂಥ ಕಾರ್ಯಕ್ರಮಗಳ ವಿನ್ಯಾಸವನ್ನು ರೂಪಿಸಿ ಕಾರ್ಯಾಚರಣೆಯನ್ನು ನಡೆಸುವವರು ಅಲ್ಲಿ ಕೆಲಸ ಮಾಡುತ್ತಿರುವ ಉಪಾಧ್ಯಾಯ ಉಪಾಧ್ಯಾಯಿನಿಯರು. ಆದ್ದರಿಂದ ಒಂದು ರಾಷ್ಟ್ರದ ಸಂಸ್ಕೃತಿ, ಅದರ ಭವಿಷ್ಯ ಮತ್ತು ಪುರೋಭಿವೃದ್ಧಿ ಬಹುಮಟ್ಟಿಗೆ ಆ ನಾಡಿನ ಅಧ್ಯಾಪಕರನ್ನು ಅವಲಂಬಿಸಿರುತ್ತದೆ. ಅಂಥ ಪ್ರಮುಖ ಕರ್ತವ್ಯದ ನಿರ್ವಹಣೆಗೆಂದು ನೇಮಕವಾಗುವ ವ್ಯಕ್ತಿಗಳು ಪಡೆಯುವ ವೃತ್ತಿಶಿಕ್ಷಣದ ಸಿದ್ಧಿ ಸಂಸ್ಕಾರಗಳು ಎಂಥ ಪ್ರಮುಖ ವಿಷಯವೆಂಬುದು ಇದರಿಂದ ಸ್ಪಷ್ಟಪಡುತ್ತದೆ.

ಇತಿಹಾಸ ಬದಲಾಯಿಸಿ

ಗುರುಕುಲಗಳಿದ್ದ ಕಾಲದಲ್ಲಿ ವಿದ್ಯೆ ಮತ್ತು ಬೋಧನಕ್ರಮಗಳು ಗುರುವಿನಿಂದ ಶಿಷ್ಯರಿಗೆ, ಅವರಿಂದ ಇತರರಿಗೆ ಪಾಂಕ್ತವಾಗಿ ನಡೆದು ಬರುತ್ತಿತ್ತಾದರೂ ಅಧ್ಯಾಪಕರ ವೃತ್ತಿಶಿಕ್ಷಣದಲ್ಲಿ ಪ್ರಾಚೀನವೆನ್ನಬಹುದಾದ ಯಾವ ಪರಂಪರೆಯೂ ಇಲ್ಲ. ಅದು ಕೇವಲ ಎರಡು ಮೂರು ಶತಮಾನಗಳಿಂದ ಮಾತ್ರ ಪ್ರಚಾರಕ್ಕೆ ಬಂದಿರುವ ವಿಷಯ. 17ನೆಯ ಶತಮಾನದಲ್ಲಿ ಇಂಗ್ಲೆಂಡು ಮತ್ತು ಫ್ರಾನ್ಸ್‌ಗಳಲ್ಲಿ ಅಧ್ಯಾಪಕರ ವೃತ್ತಿಶಿಕ್ಷಣದ ಬಗ್ಗೆ ಆಸಕ್ತಿ ಆರಂಭವಾಯಿತೆನ್ನಬಹುದು. ಜರ್ಮನಿಯಲ್ಲಿ 19ನೆಯ ಶತಮಾನದ ಆರಂಭದಲ್ಲಿ ಶಿಕ್ಷಣವನ್ನು ಸಾಮಾಜಿಕ ಅಂಶವನ್ನಾಗಿ ಮಾಡಿ ಶಿಕ್ಷಣಕ್ಕಾಗಿ ರಾಷ್ಟ್ರವ್ಯಾಪಕ ಯೋಜನೆಯನ್ನು ತಯಾರಿಸು ವಾಗ ಅಧ್ಯಾಪಕರ ಶಿಕ್ಷಣಕ್ಕಾಗಿ ನಿರ್ದಿಷ್ಟ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಳ್ಳಲಾಯಿತು. ಜೊತೆಗೆ 1826ರಲ್ಲಿ ಅಧ್ಯಾಪಕರಾಗಿ ನೇಮಿಸಿಕೊಳ್ಳುವ ಮುನ್ನ ಒಂದು ವರ್ಷ ಕಾಲ ಪರೀಕ್ಷಾರ್ಥ ಬೋಧನೆ ಅಗತ್ಯವೆಂದು ಶಾಸನವಾಯಿತು. 1831ರಿಂದ ವೃತ್ತಿಶಿಕ್ಷಣ ಪಡೆಯುವು ದರ ಜೊತೆಗೆ ಅಧ್ಯಾಪಕರಾಗತಕ್ಕವರು ಬೋಧಿಸುವ ವಿಷಯದಲ್ಲೂ ಶಿಕ್ಷಣಶಾಸ್ತ್ರದಲ್ಲೂ ಪರೀಕ್ಷೆಯೊಂದಕ್ಕೆ ಕುಳಿತು ಉತ್ತೀರ್ಣರಾಗಬೇಕೆಂದೂ ನಿಯಮವಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಶತಮಾನದ ಮಧ್ಯಕಾಲದ ವೇಳೆಗೆ ಅಧ್ಯಾಪಕರಿಗೆ ವೃತ್ತಿ ಶಿಕ್ಷಣ ವೀಯಲು ನಾರ್ಮಲ್ ಸ್ಕೂಲುಗಳೆಂಬ ವಿಶಿಷ್ಟಸಂಸ್ಥೆಗಳು ಆರಂಭವಾದವು. ಇಂಗ್ಲೆಂಡಿನಲ್ಲಿ ಆ ಶತಮಾನದ ಆದಿಯಲ್ಲಿ ಪ್ರಚಾರಕ್ಕೆ ಬಂದ ಹಿರೇಮಣಿಗಳ ಬೋಧನಕ್ರಮ ಅಲ್ಲಿನ ಅಧ್ಯಾಪಕರ ವೃತ್ತಿ ಶಿಕ್ಷಣ ಪದ್ಧತಿಗೆ ಒಂದು ರೀತಿಯ ತಳಹದಿಯಾಯಿತೆನ್ನಬಹುದು. ಭಾರತದಲ್ಲಿ ಪ್ರಚಾರದಲ್ಲಿದ್ದ ಈ ಪದ್ಧತಿಯನ್ನು ಇಂಗ್ಲೆಂಡಿನ ಬೆಲ್ ಮತ್ತು ಲ್ಯಾಂಕ್ಯಾಸ್ಟರ್ ಎಂಬವರು ತಮ್ಮ ದೇಶಕ್ಕೆ ತಂದು ಪ್ರಚಾರ ಮಾಡಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಾಠವನ್ನು ತಾವು ತಮ್ಮ ಅಧ್ಯಾಪಕರಿಂದ ಕಲಿತಂತೆ ಬೋಧಿಸುತ್ತಿದ್ದ ಈ ಪದ್ಧತಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಜನಕ್ಕೆ ಶಿಕ್ಷಣವೀಯಲು ತುಂಬ ಅನುಕೂಲವಾಗಿ ತೋರಿತು. ಆದರೆ ಅದು ತನಕ ಕೇವಲ ಓದು ಬರಹ ಲೆಕ್ಕಾಚಾರಗಳನ್ನು ಮಾತ್ರ ಹೇಳಿಕೊಡುತ್ತಿದ್ದ ಶಾಲೆಗಳಲ್ಲಿ ಇತರ ವಿಷಯಗಳ ಬೋಧನೆಯೂ ಸೇರಿಕೊಂಡಿತು. ಅದಕ್ಕಾಗಿ ಅಧ್ಯಾಪಕರಾಗತಕ್ಕವರಿಗೆ ಮೂರರಿಂದ ಆರು ತಿಂಗಳ ಅವಧಿಯ ಒಂದು ರೀತಿಯ ವೃತ್ತಿಶಿಕ್ಷಣವನ್ನು ಲ್ಯಾಂಕ್ಯಾಸ್ಟರ್ ಆರಂಭಿಸಿದರು. ಅನಂತರ 1846ರಲ್ಲಿ ಆ ಶಿಕ್ಷಣದ ತಳಹದಿಯ ಮೇಲೆ ಬ್ಯಾಟರ್ಸೀ ಎಂಬ ಸ್ಥಳದಲ್ಲಿ ಕೇಯಿ ಷೆಟ್ಲ್‌ವರ್ತ್ ಎಂಬಾತ 18 ತಿಂಗಳ ಅವಧಿಯ ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ. ಇದು ಮುಂದೆ ಆ ನಾಡಿನಲ್ಲಿ ಯಥೇಚ್ಛವಾಗಿ ಸ್ಥಾಪನೆಯಾದ ಎರಡು ವರ್ಷದ (ಈಗ ಮೂರು ವರ್ಷ) ಟ್ರೈನಿಂಗ್ ಕಾಲೇಜುಗಳಿಗೆ ಮಾದರಿಯಾಯಿತು.

ಭಾರತದಲ್ಲಿ ಅನೇಕ ವರ್ಷಗಳಿಂದಲೂ ಶಾಲೆಯ ಹಿರೇಮಣಿಗಳು ಕಿರಿಯರಿಗೆ ಪಾಠ ಹೇಳಿ ಅನುಭವಗಳಿಸುತ್ತಿದ್ದುದು ಒಂದು ರೀತಿಯ ವೃತ್ತಿಶಿಕ್ಷಣವೇ ಆಗಿತ್ತೆಂದು ಭಾವಿಸಬಹುದಾದರೂ ಆಧುನಿಕ ಸ್ವರೂಪದ ವೃತ್ತಿಶಿಕ್ಷಣ ಇಲ್ಲಿ ಆರಂಭವಾದದ್ದು ಕಳೆದ ಶತಮಾನದ ಮಧ್ಯಕಾಲದ ಅನಂತರವೇ. 19ನೆಯ ಶತಮಾನದ ಪೂರ್ವಾರ್ಧದಲ್ಲಿ ಕ್ರೈಸ್ತಪಾದ್ರಿಗಳು ಬಂಗಾಳ ಮತ್ತು ಮುಂಬಯಿ ಪ್ರಾಂತ್ಯಗಳಲ್ಲಿ ಅಧ್ಯಾಪಕರ ತರಬೇತಿ ಕೇಂದ್ರಗಳನ್ನು ತೆರೆದರು. ಮೊದಮೊದಲು ಅಲ್ಲಿ ಕೇವಲ ಕ್ರೈಸ್ತ ಅಧ್ಯಾಪಕರಿಗೆ ಮಾತ್ರ ತರಬೇತಿ ನೀಡುತ್ತಿದ್ದರೂ ಕ್ರಮೇಣ ಇತರರಿಗೂ ಅವಕಾಶ ಕಲ್ಪಿಸಿಕೊಟ್ಟರು. 1854ರಲ್ಲಿ ಈಸ್ಟ್‌ ಇಂಡಿಯ ಕಂಪನಿಯವರಿಗೆ ಭಾರತದ ಆಡಳಿತದ ಸನ್ನದನ್ನು ಮುಂದುವರಿಸುವಾಗ ಕಳಿಸಿದ ವುಡ್ಡರಪತ್ರದಲ್ಲಿ ಬ್ರಿಟಿಷ್ ಸರ್ಕಾರ ಇಲ್ಲಿ ವಿಸ್ತರಿಸುತ್ತಿದ್ದ ಶಿಕ್ಷಣ ಸೌಲಭ್ಯವನ್ನು ಉತ್ತಮ ಪಡಿಸಲು ಅಧ್ಯಾಪಕರ ತರಬೇತಿ ಕೇಂದ್ರಗಳನ್ನು ತೆರೆಯಬೇಕೆಂದು ಸೂಚಿಸಿತು. ಅಂದಿಗಾಗಲೇ ಇಂಗ್ಲೆಂಡಿನಲ್ಲಿ ಪ್ರಚಾರಕ್ಕೆ ಬಂದಿದ್ದ ವಿದ್ಯಾರ್ಥಿ - ಅಧ್ಯಾಪಕರ ಪದ್ಧತಿಯನ್ನೂ ಆಚರಣೆಗೆ ತರುವಂತೆ ಸಲಹೆ ಮಾಡಲಾಗಿತ್ತು. ಸಾಮಾನ್ಯ ಶಿಕ್ಷಣ ಮುಗಿಸಿ ಶಿಕ್ಷಕರಾಗ ಬಯಸುವ ಅಭ್ಯರ್ಥಿಗಳಿಗೆ ವೇತನವನ್ನು ನೀಡಿ ಒಂದು ವರ್ಷಕಾಲ ಪರೀಕ್ಷಾರ್ಥ ಬೋಧನೆಯನ್ನು ಒಂದು ಶಾಲೆಯಲ್ಲಿ ನಡೆಸಿದ ಮೇಲೆ ಸೂಕ್ತವೆಂದು ತೋರಿ ಬಂದರೆ ಅಂಥವರನ್ನು ತರಬೇತಿಗೆ ಆರಿಸಿಕೊಂಡು ಅದನ್ನು ಮುಗಿಸಿದ ಮೇಲೆ ಕೆಲಸಕ್ಕೆ ಸೇರಿಸಿಕೊಳ್ಳು ವುದು ಈ ಪದ್ಧತಿಯಲ್ಲಿ ವಾಡಿಕೆಯಲ್ಲಿತ್ತÄ. ಸ್ವಲ್ಪಕಾಲ ಈ ಪದ್ಧತಿ ಪ್ರಚಾರದಲ್ಲಿದ್ದರೂ ವಿಸ್ತರಿಸುತ್ತಿದ್ದ ಪ್ರಾಥಮಿಕ ಶಿಕ್ಷಣರಂಗಕ್ಕೆ ತಕ್ಕ ಷ್ಟು ಸೂಕ್ತ ರೀತಿಯಲ್ಲಿ ಶಿಕ್ಷಣ ಪಡೆದ ಅಧ್ಯಾಪಕರು ದೊರಕುವುದು ಕಷ್ಟವಾಗಿತ್ತು. ಅನಂತರ 1859ರಲ್ಲಿ ಕಂಪನಿಯಿಂದ ಆಡಳಿತ ಸೂತ್ರವನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಕಳಿಸಿದ ಪತ್ರವೊಂದರಲ್ಲಿ ವುಡ್ಡರ ಪತ್ರದಲ್ಲಿ ಸೂಚಿಸಿದ್ದ ಮೇಲಿನ ಸಲಹೆಯನ್ನು ನಿಧಾನವಿಲ್ಲದೆ ಕಾರ್ಯರೂಪಕ್ಕೆ ತರುವಂತೆ ಆಗ್ರಹದಿಂದ ಸೂಚಿಸಿತು. ಅದರ ಫಲವಾಗಿ ಕೂಡಲೇ ದೇಶದ ಅನೇಕ ಭಾಗಗಳಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರ ತರಬೇತಿಗಾಗಿ ನಾರ್ಮಲ್ ಸ್ಕೂಲುಗಳು ಆರಂಭವಾದವು. ಅಲ್ಲಿ ಅಧ್ಯಾಪಕ ವೃತ್ತಿಗೆ ಸೇರಬಯಸುವ ಅಭ್ಯರ್ಥಿಗಳಿಗೆ ಓದವುದು, ಬರೆಯುವುದು, ಲೆಕ್ಕ, ಚರಿತ್ರೆ, ಭೂಗೋಳ ಮತ್ತು ಬೋಧನಕಲೆ - ಈ ವಿಷಯಗಳಲ್ಲಿ ಶಿಕ್ಷಣವೀಯಲಾಗುತ್ತಿತ್ತು. ಅಲ್ಲಿ ನೀಡುತ್ತಿದ್ದ ಸಾಮಾನ್ಯ (ಸಾಂಸ್ಕೃತಿಕ) ಮತ್ತು ವೃತ್ತಿ ಸಂಬಂಧದ ಶಿಕ್ಷಣ ತೀರ ಕೆಳಮಟ್ಟದ್ದಾಗಿದ್ದರೂ ಬಹುಬೇಗ ಅವು ಜನಪ್ರಿಯವೆನಿಸಿದವು. 1882ರ ಹೊತ್ತಿಗೆ ದೇಶಾದ್ಯಂತ 106 ನಾರ್ಮಲ್ ಸ್ಕೂಲುಗಳು ಏರ್ಪಟ್ಟು ಅವುಗಳಲ್ಲಿ ಸುಮಾರು ನಾಲ್ಕು ಸಹಸ್ರ ಅಭ್ಯರ್ಥಿಗಳು ವೃತ್ತಿ ಶಿಕ್ಷಣ ಪಡೆಯುತ್ತಿದ್ದರು.

1882ರಲ್ಲಿ ಭಾರತ ಸರ್ಕಾರ ನೇಮಿಸಿದ ಶಿಕ್ಷಣ ಆಯೋಗ ಅಧ್ಯಾಪಕರ ತರಬೇತಿಯ ಬಗ್ಗೆ ಹೆಚ್ಚಿನ ಉತ್ಸಾಹ ತೋರಿತು. ಪ್ರಾಥಮಿಕ ಶಿಕ್ಷಣಕ್ಕೆ ಒದಗಿಸುವ ಹಣದಲ್ಲಿ ತಕ್ಕಷ್ಟನ್ನು ಮೊದಲು ಅಧ್ಯಾಪಕರ ತರಬೇತಿಗಾಗಿ ತೆಗೆದಿಡಬೇಕೆಂದು ಸಲಹೆ ಮಾಡಿತು. ಆ ಸಲಹೆಯನ್ನನುಸರಿಸಿ ನೂತನವಾಗಿ ಅನೇಕ ನಾರ್ಮಲ್ ಸ್ಕೂಲುಗಳು ಅಸ್ತಿತ್ವಕ್ಕೆ ಬಂದವು. ಅಧ್ಯಾಪಕರ ಸಿದ್ಧತೆಯ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಿತು. ಆ ವೇಳೆಗೆ ಪ್ರಾಥಮಿಕ ಶಿಕ್ಷಣಶಾಲೆಗಳು ಭರದಿಂದ ಹೆಚ್ಚ ತೊಡಗಿದವು. ಆ ಸುಮಾರಿಗೆ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಸರ್ಕಾರಗಳಿಗೆ ವಹಿಸಲಾಯಿತು. ಧನಬಲವಿಲ್ಲದ ಈ ನೂತನ ಆಡಳಿತಸಂಸ್ಥೆ ಅಧ್ಯಾಪಕರ ವೃತ್ತಿಶಿಕ್ಷಣದ ವ್ಯವಸ್ಥೆಯನ್ನು ಅಷ್ಟಾಗಿ ವಿಸ್ತರಿಸಲಿಲ್ಲ.

ಪ್ರೌಢಶಾಲೆಯ ಅಧ್ಯಾಪಕರಿಗೆ ವೃತ್ತಿಶಿಕ್ಷಣ ಅನಿವಾರ್ಯವೆಂದು ಶಿಕ್ಷಣವೇತ್ತರನೇಕರು ಮೊದಮೊದಲು ಭಾವಿಸಿರಲಿಲ್ಲ. ಅವರಿಗೆ ವಿಷಯ ಪಾಂಡಿತ್ಯವೊಂದೇ ಸಾಕೆಂಬ ಭಾವನೆ ಇದ್ದುದೇ ಇದಕ್ಕೆ ಕಾರಣ. ಪ್ರತಿಭಾವಂತ ಅಧ್ಯಾಪಕರ ಬಗ್ಗೆ ಈ ಮಾತು ನಿಜವೆನಿಸ ಬಹುದಾದರೂ ಮಿಕ್ಕ ಬಹುತೇಕ ಮಂದಿಗೆ ಇದು ಅನ್ವಯಿಸಲಾರದು. ಕಲಿತದ್ದನ್ನು ಪರಿಣಾಮಕಾರಿಯಾಗಿ ಬೋಧಿಸುವುದು ಅವರಿಗೆ ವೃತ್ತಿಶಿಕ್ಷಣದಿಂದ ಸಾಧ್ಯವಾಗುವುದೆಂಬ ಅಭಿಪ್ರಾಯ ಕ್ರಮಕ್ರಮವಾಗಿ ಬಲಗೊಳ್ಳುತ್ತ ಬಂತು. 1856ರಲ್ಲಿ ಭಾರತದಲ್ಲಿ ಪ್ರೌಢಶಾಲೆಯ ಅಧ್ಯಾಪಕರ ಪ್ರಥಮ ತರಬೇತಿ ಸಂಸ್ಥೆ ಮದ್ರಾಸಿನಲ್ಲಿ ನಾರ್ಮಲ್ ಸ್ಕೂಲ್ ಎಂಬ ಹೆಸರಿನಿಂದ ಆರಂಭವಾಯಿತು (ಮುಂದೆ ಇದನ್ನು ಟೀಚರ್ಸ್ ಕಾಲೇಜೆಂದು ಕರೆಯಲಾಯಿತು). ಆನಂತರ 1880ರಲ್ಲಿ ಲಾಹೋರಿನಲ್ಲಿ ಮತ್ತೊಂದು ಟೀಚರ್ಸ್ ಕಾಲೇಜು ಆರಂಭವಾಯಿತು. ಆಗ ಅವೆರಡೂ ಸೇರಿ ಅರುವತ್ತು ಮಂದಿಗೆ ಶಿಕ್ಷಣ ನೀಡುತ್ತಿದ್ದವು. ಜೊತೆಗೆ ಅಲ್ಲಲ್ಲಿ ಸಾಂಸ್ಕೃತಿಕ ಕಾಲೇಜುಗಳಲ್ಲಿ ಪ್ರೌಢಶಾಲೆಯ ಅಧ್ಯಾಪಕರಿಗೆ ತರಬೇತಿ ಕೇಂದ್ರಗಳನ್ನೂ ತರಗತಿಗಳನ್ನೂ ಏರ್ಪಡಿಸಲಾಗಿತ್ತು. 1902ರ ವೇಳೆಗೆ ಅಂಥ ಆರು ಟೀಚರ್ಸ್ ಕಾಲೇಜುಗಳೂ ಹಲವಾರು ತರಬೇತಿ ಕೇಂದ್ರ ಮತ್ತು ತರಗತಿಗಳೂ ಏರ್ಪಟ್ಟಿದ್ದವು. ಆದರೆ ಅಂದಿಗಾಗಲೇ ಪ್ರೌಢಶಿಕ್ಷಣ ದೇಶಾದ್ಯಂತ ವಿಸ್ತರಿಸಿತ್ತು. ಇಷ್ಟಾದರೂ ತರಬೇತಿ ಪಡೆದ ಶಿಕ್ಷಕರು ಮಾತ್ರ ತಕ್ಕ ಷ್ಟು ದೊರಕುತ್ತಿರಲಿಲ್ಲ. ಅಧ್ಯಾಪಕವೃತ್ತಿಗೆ ಮೊದಮೊದಲು ಅಷ್ಟಾಗಿ ಭಾರತೀಯ ಮಹಿಳೆಯರು ಬರುತ್ತಿರಲಿಲ್ಲ; ಹಾಗೂ ಬರುತ್ತಿದ್ದವರಲ್ಲಿ ಕ್ರೈಸ್ತ ಮಹಿಳೆಯರೇ ಹೆಚ್ಚಾಗಿರುತ್ತಿದ್ದರು. ಆದ್ದರಿಂದ ಇತರ ಮತದ ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ಆದರೆ ಮಹಿಳಾ ಶಿಕ್ಷಣದ ಅಗತ್ಯವನ್ನು ಕುರಿತು ಎಲ್ಲೆಡೆಯಲ್ಲೂ ಪ್ರಚಾರ ಮಾತ್ರ ನಡೆಯುತ್ತಿತ್ತು. 1866ರಲ್ಲಿ ಭಾರತಕ್ಕೆ ಬಂದಿದ್ದ ಶ್ರೀಮತಿ ಕಾರ್ಪೆಂಟರ್ ಎಂಬ ಆಂಗ್ಲ ಸಮಾಜ ಸೇವಕಿ ಭಾರತದ ಸದ್ಯದ ಆವಶ್ಯಕತೆ ಮಹಿಳಾಶಿಕ್ಷಣ; ಅದಕ್ಕಾಗಿ ಶಾಲೆಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಅಧ್ಯಾಪಕರಾಗಿ ಬರಬೇಕು - ಎಂದು ಪ್ರಚಾರ ಮಾಡಿ ಸರ್ಕಾರದ ಮತ್ತು ಸಾರ್ವಜನಿಕರ ಬೆಂಬಲವನ್ನು ದೊರಕಿಸಿಕೊಂಡಳು. ಇದರಿಂದ ಭಾರತೀಯ ಮಹಿಳೆಯರೂ ಅಧ್ಯಾಪಕರ ತರಬೇತಿ ಕಾಲೇಜುಗಳಿಗೆ ಸೇರಲಾರಂಭಿಸಿದರು. ಆದರೆ ಅವರಲ್ಲನೇಕರು ತಕ್ಕ ಷ್ಟು ಸಾಮಾನ್ಯ (ಸಾಂಸ್ಕೃತಿಕ) ಶಿಕ್ಷಣ ಪಡೆದಿರುತ್ತಿರಲಿಲ್ಲ. ಆದ್ದರಿಂದ ನಾರ್ಮಲ್ ಸ್ಕೂಲುಗಳಲ್ಲಿ ಅವರಿಗೆ ತಕ್ಕ ಷ್ಟು ಸಾಮಾನ್ಯ ಶಿಕ್ಷಣವನ್ನು ಮೊದಲು ಕೊಟ್ಟು, ಅನಂತರ ವೃತ್ತಿಶಿಕ್ಷಣ ನೀಡುವ ನೂತನ ಪ್ರಚಾರಕ್ಕೆ ಬರಹತ್ತಿತು.

ಲಾರ್ಡ್ ಕರ್ಜನ್ನನ ನೇತೃತ್ವದಲ್ಲಿ ಈ ಶತಮಾನದ ಆದಿಯಿಂದ ಭಾರತೀಯ ಶಿಕ್ಷಣ ಪ್ರಗತಿಯ ತೀವ್ರ ವೇಗದ ನೂತನ ಯುಗವೊಂದಕ್ಕೆ ಕಾಲಿಟ್ಟಿತು. ಅಧ್ಯಾಪಕರ ತರಬೇತಿಯ ಬಗ್ಗೆ ಆತ ಹೆಚ್ಚಿನ ಆಸಕ್ತಿಯನ್ನೂ ಶ್ರದ್ಧೆಯನ್ನೂ ವ್ಯಕ್ತಪಡಿಸಿದ; ವಿಸ್ತರಿಸುತ್ತಿದ್ದ ಪ್ರಾಥಮಿಕ ಶಿಕ್ಷಣರಂಗಕ್ಕೆ ಅಧ್ಯಾಪಕರನ್ನೊದಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ನಾರ್ಮಲ್ ಸ್ಕೂಲ್ಗಳನ್ನು ಆರಂಭಿಸಲು ಕಾರ್ಯತಃ ನೆರವಾದ, ಬಹುಬೇಗ ತರಬೇತಿ ಕಾರ್ಯಕ್ರಮದ ಅವಧಿ ಒಂದರಿಂದ ಎರಡು ವರ್ಷಗಳಿಗೆ ಹೆಚ್ಚಿತು. 1922ರ ವೇಳೆಗೆ ಭಾರತದಲ್ಲಿ 1,072 ನಾರ್ಮಲ್ ಸ್ಕೂಲ್ಗಳೂ 27,000 ವಿದ್ಯಾರ್ಥಿಗಳೂ ಇದ್ದರು. ಅವರಲ್ಲಿ ಹತ್ತು ಸಹಸ್ರಕ್ಕೂ ಮಿಕ್ಕು ಮಹಿಳಾ ಅಭ್ಯರ್ಥಿಗಳು ವೃತ್ತಿ ಶಿಕ್ಷಣ ಪಡೆಯುತ್ತಿದ್ದರು. ಹಲವು ನಾರ್ಮಲ್ ಸ್ಕೂಲ್ಗಳೂ ಕೇವಲ ಅಪ್ಪರ್ ಪ್ರೈಮರಿ ತರಗತಿಗಳನ್ನು ಮುಗಿಸಿದ ಅಭ್ಯರ್ಥಿಗಳನ್ನು ತರಬೇತಿಗೆ ಸೇರಿಕೊಳ್ಳುತ್ತಿದ್ದವು. ಅವರಿಗೆ ಎರಡು ವರ್ಷಗಳ ಅವಧಿಯ ವೃತ್ತಿಸಿದ್ಧತೆ ಸಾಲದೆಂದು ಮೂರು ವರ್ಷಕ್ಕೆ ವಿಸ್ತರಿಸುವ ಯತ್ನವೂ ನಡೆಯುತ್ತಿತ್ತು.

ಭಾರತದ ಬೇರೆ ಬೇರೆ ಭಾಗಗಳಲ್ಲಿ ಪ್ರಾಥಮಿಕ ಶಿಕ್ಷಣ ತೀವ್ರ ವೇಗದಿಂದ ವಿಸ್ತರಿಸುತ್ತಿತ್ತು. ಅದಕ್ಕನುಕೂಲಿಸಲು ಅಧ್ಯಾಪಕರ ತರಬೇತಿ ಸಂಸ್ಥೆಗಳೂ ಹೆಚ್ಚಿದ್ದವು. ಆದರೆ ಅಲ್ಲಿ ಅವರಿಗೆ ದೊರಕುತ್ತಿದ್ದ ಶಿಕ್ಷಣ ಪರಿಣಾಮಕಾರಿಯಾಗಿರಲಿಲ್ಲ. ಆದ್ದರಿಂದ ಶಿಕ್ಷಣರಂಗ ವಿಸ್ತರಿಸಿದ್ದರೂ ಶಾಲೆಗಳಲ್ಲಿ ಶಿಕ್ಷಣದ ಮಟ್ಟ ತೀರ ಹಿಂದುಳಿದಿತ್ತು. ಆ ಸುಮಾರಿನಲ್ಲಿ ಎಂದರೆ 1928ರಲ್ಲಿ ನೇಮಕವಾದ ಹರ್ಟಾಗ್ ಶಿಕ್ಷಣ ಸಮಿತಿ ಈ ಅಂಶಗಳನ್ನು ತೀವ್ರವಾಗಿ ಟೀಕಿಸಿ ಪ್ರಾಥಮಿಕ ಶಿಕ್ಷಕರ ಶಿಕ್ಷಣ ಸೂಕ್ತವಾಗಿಲ್ಲ; ಅವರಿಗೆ ದೊರಕುವ ವೃತ್ತಿಶಿಕ್ಷಣ ಏನೇನೂ ಸಾಲದು ಅಲ್ಲದೆ ಪರಿಣಾಮಕಾರಿಯಾಗಿಯೂ ಇಲ್ಲ; ಹಾಗೂ ತಕ್ಕ ಪ್ರಮಾಣದಲ್ಲಿ ತರಬೇತಿ ಪಡೆದ ಅಧ್ಯಾಪಕರೂ ಇಲ್ಲ - ಎಂದು ಸೂಚಿಸಿ ಆ ಬಗ್ಗೆ ರಾಷ್ಟ್ರದ ಗಮನ ಸೆಳೆಯಿತು. ಆಗ ಪ್ರಾಥಮಿಕ ಶಾಲೆಗಳಲ್ಲಿ ಶೇ. 44 ತರಬೇತಿ ಪಡೆದ ಅಧ್ಯಾಪಕರು ಮಾತ್ರ ಇದ್ದರು.

ಶಿಕ್ಷಣದ ಮಟ್ಟವನ್ನು ಉತ್ತಮಪಡಿಸುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಸಂಸ್ಥೆಗಳನ್ನು ಆರಂಭಿಸಿದುದರ ಫಲವಾಗಿ ಶಾಲೆಗಳಲ್ಲಿ ತರಬೇತಿ ಪಡೆದ ಅಧ್ಯಾಪಕರ ಸಂಖ್ಯೆ 1937ರ ವೇಳೆಗೆ ಶೇ. 57 ಕ್ಕೇರಿತ್ತು. ಲಾರ್ಡ್ ಕರ್ಝನ್ ಪ್ರೌಢಶಾಲೆಗಳ ಶಿಕ್ಷಣದ ಮಟ್ಟವನ್ನು ಉತ್ತಮಪಡಿಸಲು ಇಲ್ಲಿನ ಶಿಕ್ಷಕರ ತರಬೇತಿ ವ್ಯವಸ್ಥೆಯನ್ನು ವಿಸ್ತರಿಸಿ ಉತ್ತಮಪಡಿಸುವ ಕಡೆಯೂ ತಕ್ಕ ಷ್ಟು ಗಮನ ನೀಡಿದ್ದಲ್ಲದೆ ಶಿಕ್ಷಣವೃತ್ತಿಗೆ ಸಂಬಂಧಿಸಿದ ಜ್ಞಾನ ಮತ್ತು ಅಭ್ಯಾಸ ಎರಡೂ ಅಧ್ಯಾಪಕರಿಗೆ ಅಗತ್ಯವೆಂದು ಸೂಚಿಸಿ ತರಬೇತಿ ಸಂಸ್ಥೆಗಳು ಶಾಲೆಗಳೊಡನೆ ನಿಕಟ ಸಂಪರ್ಕ ಹೊಂದಿರುವು ದರ ಅಗತ್ಯವನ್ನು ತೋರಿಸಿಕೊಟ್ಟ. ಅವನ ಪ್ರೋತ್ಸಾಹದಿಂದ ಪ್ರೌಢಶಾಲೆಯ ಅಧ್ಯಾಪಕರ ತರಬೇತಿ ಸಂಸ್ಥೆಗಳು ಸಂಖ್ಯೆಯಲ್ಲಿ ಹೆಚ್ಚಿದವು. ಇತರ ತರಬೇತಿ ಕಾಲೇಜುಗಳಿಗೆ ಮಾದರಿ ಯಾಗುವಂಥ ಕಾಲೇಜುಗಳ ಆರಂಭಕ್ಕೂ ಆತ ಕಾರಣನಾದ. 1906ರಲ್ಲಿ ಮುಂಬಯಿಯಲ್ಲಿ ಆರಂಭವಾದ ಸೆಕೆಂಡರಿ ಟ್ರೈನಿಂಗ್ ಕಾಲೇಜೂ 1908ರಲ್ಲಿ ಕಲ್ಕತ್ತದಲ್ಲಿ ಆರಂಭವಾದ ಡೇವಿಡ್ ಹೇರ್ ಟ್ರೈನಿಂಗ್ ಕಾಲೇಜೂ ಅವುಗಳಲ್ಲಿ ಮುಖ್ಯವಾದವು. ಅವೆಲ್ಲ ಉತ್ತಮ ಅಧ್ಯಾಪಕ ವರ್ಗವನ್ನೂ ಉಪಕರಣಾದಿ ವಸ್ತು ಸಂಪತ್ತನ್ನೂ ಪಡೆದಿದ್ದು ಪ್ರೌಢಶಾಲೆಯ ಅಧ್ಯಾಪಕರ ಶಿಕ್ಷಣದಲ್ಲಿ ಹೊಸ ಮಾದರಿಯನ್ನು ಹಾಕಿಕೊಟ್ಟವು.

ಈ ನಡುವೆ ಲಾರ್ಡ್ ಕರ್ಜನ್ ಎಲ್ಲ ಶಾಲೆಗಳೂ ಕೆಲವು ವರ್ಷಗಳೊಳಗಾಗಿ ವೃತ್ತಿ ಶಿಕ್ಷಣ ಪಡೆದ ಅಧ್ಯಾಪಕರನ್ನೇ ನೇಮಿಸಿಕೊಳ್ಳುವಂತಾಗಬೇಕು, ಅರ್ಹತೆಯ ಪ್ರಮಾಣಪತ್ರ ವಿಲ್ಲದವರಿಗೆ ಭೋಧಿಸುವ ಅವಕಾಶವಿರಬಾರದು - ಎಂದು ಅಧಿಕೃತವಾಗಿ ಸೂಚಿಸಿದ (1913). ಖಾಸಗಿ ಶಾಲೆಗಳೂ ಅಂಥ ವೃತ್ತಿಶಿಕ್ಷಣ ಪಡೆದವರನ್ನೇ ನೇಮಿಸಿಕೊಳ್ಳಲೆಂಬ ಉದ್ದೇಶದಿಂದ ತರಬೇತಿ ಸಂಸ್ಥೆಗಳನ್ನು ಏಕಪ್ರಕಾರವಾಗಿ ಹೆಚ್ಚಿಸಿದ. ಪ್ರಾಥಮಿಕ ಶಿಕ್ಷಣವನ್ನು ಅತಿಯಾಗಿ ಟೀಕಿಸಿದ ಹರ್ಟಾಗ್ ಸಮಿತಿ ಪ್ರೌಢಶಿಕ್ಷಣದ ನೂತನ ಸ್ಥಿತಿಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿತ್ತು.

ದ್ವಿತೀಯ ಯುದ್ಧದ ದೆಸೆಯಿಂದ ಶಿಕ್ಷಣದ ಇತರ ಕ್ಷೇತ್ರಗಳಂತೆ ಅಧ್ಯಾಪಕರ ತರಬೇತಿ ವ್ಯವಸ್ಥೆಯೂ ಕೆಲವು ವರ್ಷಗಳವರೆಗೆ ವಿಸ್ತರಿಸಲಿಲ್ಲ. ಆದರೆ ಆ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳು ಆರಂಭವಾಗಿದ್ದವು. ರಾಜಕೀಯವಾಗಿ ಭಾರತ ಸ್ವಾತಂತ್ರ್ಯವನ್ನು ಸಾಧಿಸಿತ್ತು. ಗಾಂಧೀಜಿಯವರ ನೇತೃತ್ವದಲ್ಲಿ ಮೂಲಶಿಕ್ಷಣ ಶಾಲೆಗಳೂ ಅಸ್ತಿತ್ವಕ್ಕೆ ಬರಹತ್ತಿದ್ದವು. ಅವುಗಳಿಗೂ ವಿಶಿಷ್ಟರೀತಿಯ ಶಿಕ್ಷಕರನ್ನೊದಗಿಸಲು ನೂತನ ರೀತಿಯ ತರಬೇತಿ ಸಂಸ್ಥೆಗಳು ಆರಂಭವಾದವು. ಯಾವ ಮಟ್ಟದ ಶಾಲೆಯಲ್ಲೇ ಆಗಲಿ ಅಧ್ಯಾಪಕರ ತರಬೇತಿ ಹೊಂದಿಯೇ ಇರಬೇಕೆಂದೂ ಇಲ್ಲದವರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರೆ ಅವರೆಲ್ಲರಿಗೂ ತರಬೇತಿ ನೀಡಬೇಕೆಂದೂ 1924ರಲ್ಲಿ ಭಾರತದ ಕೇಂದ್ರ ಶಿಕ್ಷಣ ಸಲಹಾಮಂಡಲಿ, ಸೂಚಿಸಿತು. 1947ರ ಅನಂತರ ಕಡ್ಡಾಯ ಶಿಕ್ಷಣ ಆರಂಭವಾಗಿ ಪ್ರಾಥಮಿಕ ಮಟ್ಟದ ಶಿಕ್ಷಣ ಇಮ್ಮಡಿ ಮುಮ್ಮಡಿ ವಿಸ್ತರಿಸಹತ್ತಿತು; ಅದೇ ಪ್ರಮಾಣದಲ್ಲಿ ಪ್ರೌಢಶಿಕ್ಷಣವೂ ವಿಸ್ತರಿಸತೊಡಗಿತು. ಅಲ್ಲಿಗೆ ವೃತ್ತಿ ಶಿಕ್ಷಣ ಪಡೆದ ಅಧ್ಯಾಪಕರನ್ನೊದಗಿಸಲು ಎರಡೂ ಅಂತಸ್ತಿನ ತರಬೇತಿ ಸಂಸ್ಥೆಗಳೂ ಸಂಖ್ಯೆಯಲ್ಲಿ ಹೆಚ್ಚಿದವು.

ಯುನೆಸ್ಕೊ, ಪ್ರಾಥಮಿಕ(1935) ಮತ್ತು ಪ್ರೌಢಶಾಲೆಗಳ(1953) ಶಿಕ್ಷಕರ ವೃತ್ತಿಶಿಕ್ಷಣವನ್ನು ಕುರಿತು ಪ್ರಪಂಚದಾದ್ಯಂತ ಪರಿಶೀಲನೆ ನಡೆಸಿ ಈ ಕೆಲವು ಸೂಚನೆಗಳನ್ನು ನೀಡಿತು; 1.ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣವನ್ನು ವಿಶ್ವವಿದ್ಯಾನಿಲಯಗಳಿಗೆ ವಹಿಸಬೇಕು, 2. ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ಹೆಚ್ಚಿನ ಕಾಲಾವಧಿಯ ಸಾಂಸ್ಕೃತಿಕ ಶಿಕ್ಷಣವೂ ಪ್ರೌಢಶಾಲೆಯ ಅಧ್ಯಾಪಕರಿಗೆ ಹೆಚ್ಚಿನ ಕಾಲಾವಧಿಯ ವೃತ್ತಿಶಿಕ್ಷಣವೂ ಅಗತ್ಯ. 3. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರುಗಳಲ್ಲಿ ಸಂಪರ್ಕ ಹೆಚ್ಚಿಸಬೇಕು, 4.ಅಧ್ಯಾಪಕರಿಗೆ ಬೌದ್ಧಿಕ ಶಿಕ್ಷಣದ ಜೊತೆಗೆ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಶಿಕ್ಷಣವೂ ಅಗತ್ಯ. 5. ಎಲ್ಲ ಮಟ್ಟದ ಶಾಲೆಗಳ ಎಲ್ಲ ರೀತಿಯ ವಿಷಯಗಳ ಅಧ್ಯಾಪಕರಿಗೂ ಮನೋವೈಜ್ಞಾನಿಕ ಶಿಕ್ಷಣ ಅಗತ್ಯ, 6. ಶಾಲೆಯ ಕಾರ್ಯಕ್ರಮಗಳ ವಿವಿಧ ಮುಖಗಳಿಗೆ ಸಂಬಂಧಿಸಿದಂತೆ ವೃತ್ತಿಶಿಕ್ಷಣ ಅಗತ್ಯ, 7. ಬೇರೆ ಬೇರೆ ವಿಧಾನಗಳಲ್ಲಿ ಬೋಧಿಸುವ ಮತ್ತು ಉಪಕರಣಗಳನ್ನು ಬಳಸುವ ಕೌಶಲದಲ್ಲೂ ಶಿಕ್ಷಣ ಅಗತ್ಯ.-ಇವು ನೀಡಿದ ಪ್ರಮುಖ ಸಲಹೆಗಳು. ಈ ಸಲಹೆಗಳು ಈಚೆಗೆ ಹೇಗೆ ಪರಿಣಾಮ ಬೀರಿವೆಯೆಂಬುದನ್ನು ಗಮನಿಸ ಬಹುದು. ಸ್ವತಂತ್ರ ಭಾರತದ ಶಿಕ್ಷಣ ಯೋಜನೆ ಏಕಪ್ರಕಾರವಾಗಿ ವಿಸ್ತರಿಸುತ್ತ ಬಂದುದರ ಫಲವಾಗಿ ವೃತ್ತಿಶಿಕ್ಷಣ ಪಡೆದ ಅಧ್ಯಾಪಕರ ಅಗತ್ಯ ಈಗ ಹತ್ತಾರು ಪಾಲು ಹೆಚ್ಚಿದೆ. ಅದಕ್ಕಾಗಿ ಸದ್ಯದಲ್ಲಿ ಭಾರತದಲ್ಲಿ ಎರಡು ಸಹಸ್ರಕ್ಕೂ ಹೆಚ್ಚಿನ ಸಂಖ್ಯೆಯ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಸುಮಾರು 250 ಪದವೀಧರ ಅಧ್ಯಾಪಕರ ತರಬೇತಿ ಸಂಸ್ಥೆಗಳು, ಮಿಕ್ಕವು ಪ್ರಾಥಮಿಕ ಶಾಲೆಯ ಅಧ್ಯಾಪಕರ ತರಬೇತಿ ಸಂಸ್ಥೆಗಳು. ತರಬೇತಿಗೆ ಬದಲಾಗಿ ಶಿಕ್ಷಣ: ಮೊದಲ ಮಹಾಯುದ್ಧ ಮುಗಿದ ಈ ಶತಮಾನದ ಎರಡನೆಯ ದಶಮಾನ ಉರುಳಿದಂತೆ ಶಿಕ್ಷಣದ ಬಗ್ಗೆ ನೂತನ ಸಂಶೋಧನೆಗಳೂ ನಡೆದು ಹೊಸ ವಿಷಯಗಳು ಬೆಳಕಿಗೆ ಬಂದವು. ಮಕ್ಕಳಿಗೆ ವಿಷಯ ಜ್ಞಾನ ನೀಡುವುದೊಂದೇ ಶಿಕ್ಷಣವಲ್ಲ - ಅವರ ದೇಹ, ಮನಸ್ಸು, ಆತ್ಮ ಅವರ ಇಡೀ ವ್ಯಕ್ತಿತ್ವವೇ ವಿಕಾಸವಾಗಬೇಕು; ಆದ್ದರಿಂದ ವಿಷಯಬೋಧನೆ ಮಾತ್ರ ಅಧ್ಯಾಪಕರ ಕೆಲಸವಲ್ಲ - ಮಕ್ಕಳ ಸಮಗ್ರ ವ್ಯಕ್ತಿತ್ವ ಸಮರಸವಾಗಿ ರೂಪುಗೊಳ್ಳುವಂತೆ ಮಾಡುವುದೂ ಅವರಕೆಲಸ; ಹಾಗೂ ಆ ಕಾರ್ಯಗಳು ಸಾಮಾಜಿಕ ಹಿನ್ನೆಲೆಯಲ್ಲಿ ಸಾಧನೆಯಾಗಬೇಕು. ಹೀಗೆಂಬ ಭಾವನೆ ಪ್ರಚಾರವಾದಂತೆ ಅಧ್ಯಾಪಕರ ಸಿದ್ಧತೆಯ ಕಾರ್ಯದ ಬಗ್ಗೆ ತೀವ್ರವಾಗಿ ಆಲೋಚನೆ ಆರಂಭವಾಯಿತು. ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳು ಅಭ್ಯರ್ಥಿಗಳಿಗೆ ಮಕ್ಕಳ ತಲೆಗೆ ವಿಷಯಜ್ಞಾನವನ್ನು ತುರುಕುವ ಬೋಧನಕ್ರಮಗಳನ್ನು ಮಾತ್ರ ಪರಿಚಯ ಮಾಡಿಕೊಡುವುದು ತೀರ ಅಸಮರ್ಪಕ ವಾಗಿ ತೋರಿತು. ಶಿಕ್ಷಣದ ಹೊಸ ಅರ್ಥದ ಬೆಳಕಿನಲ್ಲಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾದರೆ ಅವರಿಗೆ ಬರೀ ಬೋಧನಕ್ರಮವನ್ನು ಕಲಿಸುವುದು ಸಾಲದು; ಅವರ ಸಾಂಸ್ಕೃತಿಕ ವ್ಯಕ್ತಿತ್ವ. ಸಾಮಾಜಿಕ ವ್ಯಕ್ತಿತ್ವ ಮತ್ತು ವೃತ್ತಿವ್ಯಕ್ತಿತ್ವ ಪರಿಪುಷ್ಟಿಗೊಳ್ಳುವಂಥ ಶಿಕ್ಷಣ ಅನಿವಾರ್ಯವೆಂಬುದು ಸ್ಪಷ್ಟಪಡುತ್ತ ಬಂತು. ಎರಡನೆಯ ಮಹಾಯುದ್ಧದ ವೇಳೆಗೆ ವೃತ್ತಿಶಿಕ್ಷಣ ಸಂಸ್ಥೆಗಳು ಅದಕ್ಕನುಗುಣವಾಗಿ ತಮ್ಮ ಕಾರ್ಯಕ್ರಮಗಳನ್ನು ಮಾರ್ಪಡಿಸಿಕೊಳ್ಳ ಹತ್ತಿದವು. ಕೇವಲ ಬೋಧನ ಕ್ರಮವನ್ನು ಬೋಧಿಸುತ್ತಿದ್ದ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳು ಅವರಿಗೆ ವಿಶಾಲವೂ ವ್ಯಾಪ್ತಿಯುತವೂ ಆದ ಸರ್ವಾಂಗೀಣ ಶಿಕ್ಷಣವನ್ನೀಯುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾರಂಭಿಸಿದವು. ತಮ್ಮ ನೂತನ ಕರ್ತವ್ಯ ನಿರ್ವಹಣೆಯ ದೃಷ್ಟಿಯಿಂದ ಹಿಂದೆ ಬಳಸುತ್ತಿದ್ದ ‘ಅಧ್ಯಾಪಕರ ತರಬೇತಿ’ ಎಂಬುದರ ಬದಲು ಅಧ್ಯಾಪಕರ ಶಿಕ್ಷಣ ಎಂಬ ಪಾರಿಭಾಷಿಕನಾಮವನ್ನು ಬಳಸಲಾರಂಭಿಸಿದವು. ಅಂತೆಯೇ ಅಧ್ಯಾಪಕರ ಟ್ರೈನಿಂಗ್ ಕಾಲೇಜು ಎಂಬುದರ ಬದಲು ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆ ಎಂಬ ಹೆಸರೂ ಪ್ರಚಾರಕ್ಕೆ ಬರುತ್ತಿದೆ. 1944ರಲ್ಲಿ ಇಂಗ್ಲೆಂಡಿನ ಪ್ರಸಿದ್ಧ ಶಿಕ್ಷಣವೇತ್ತನಾದ ಎಚ್.ಸಿ.ಡೆಂಟ್ ಎಂಬಾತ ಈ ಬಗ್ಗೆ ಬರೆಯುತ್ತ ಶಿಕ್ಷಣದ ಉದ್ದೇಶ, ವಿಷಯ, ಕ್ರಮ, ವ್ಯವಸ್ಥೆ - ಇವುಗಳಲ್ಲೆಲ್ಲ ತೀವ್ರ ರೀತಿಯ ಬದಲಾವಣೆಗಳಾಗಿರುವಾಗ ಅಧ್ಯಾಪಕರ ತರಬೇತಿ ಸಂಸ್ಥೆಗಳಲ್ಲೂ ಸೂಕ್ತ ರೀತಿಯ ಬದಲಾವಣೆಗಳಾಗುವುದು ಅನಿವಾರ್ಯ-ಎಂದು ಸೂಚಿಸಿದ. ಅದೇ ವರ್ಷ ಅಲ್ಲಿ ಪ್ರಕಟವಾದ ಮೆಕ್ನೇರ್ ಸಮಿತಿಯ ವರದಿಯಲ್ಲಿ (ಟೀಚರ್ಸ್ ಅಂಡ್ ಯೂತ್ ಲೀಡರ್ಸ್‌) ಅಧ್ಯಾಪಕರು ಪಡೆಯುವ ಸಿದ್ಧತೆಯಿಂದ ಅವರು ತಮ್ಮಷ್ಟಕ್ಕೆ ವೈವಿಧ್ಯವೂ ಪರಿಪೂರ್ಣವೂ ಆದ ಜೀವನವನ್ನು ನಡೆಸುವಂತಾಗಬೇಕು; ಅಂಥ ಅನುಭವಪೂರ್ಣವಾದ ಜೀವನದಿಂದ ಮಕ್ಕಳಿಗೆ ವಿಷಯಜ್ಞಾನ ನೀಡುವುದರ ಜೊತೆಗೆ ಜೀವನದ ಇತರ ಸಾಧನಕ್ಷೇತ್ರಗಳ ಕಡೆಗೂ ಹೆಜ್ಜೆಯಿಡುವಂತೆ ಮಾಡುವ ಶಕ್ತಿ ದೊರಕುವಂತಾಗಬೇಕು - ಎಂದು ವಿವರಿಸಿ ಅಧ್ಯಾಪಕವೃತ್ತಿಯ ಸಿದ್ಧತೆಯ ನೂತನ ತತ್ತ್ವದೃಷ್ಟಿಯನ್ನು ಸ್ಪಷ್ಟಪಡಿಸಿತು. ಅಮೆರಿಕದಲ್ಲಿ ಅಧ್ಯಾಪಕರ ಶಿಕ್ಷಣ ಎಂಬ ಪದ ಅಂದಿಗಾಗಲೇ ಬಳಕೆಗೆ ಬಂದಿದ್ದರೂ ಇಂಗ್ಲೆಂಡಿನಲ್ಲಿ ಮೊದಲ ಬಾರಿಗೆ ಈ ಪದವನ್ನು ಈ ವರದಿಯಲ್ಲಿ ಅಧಿಕೃತವಾಗಿ ಬಳಸಲಾಯಿತು. ಭಾರತದ ಶಿಕ್ಷಣ ಕ್ಷೇತ್ರದ ಮೇಲೆ ಅಲ್ಲಿನ ಬದಲಾವಣೆಗಳು ತದ್ವತ್ತಾದ ಬದಲಾವಣೆಗಳನ್ನು ಮೂಡಿಸುತ್ತಿದ್ದುದರಿಂದ ಇಲ್ಲಿನ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳೂ ತಮ್ಮ ಕಾರ್ಯವ್ಯಾಪ್ತಿಯನ್ನೂ ತಮ್ಮ ಹೆಸರನ್ನೂ ಬದಲಾಯಿಸಿಕೊಳ್ಳುತ್ತಿವೆ.

ಅಧ್ಯಾಪಕರ ಶಿಕ್ಷಣದ ಉದ್ದೇಶ ಬದಲಾಯಿಸಿ

ಅಧ್ಯಾಪಕರ ವೃತ್ತಿಶಿಕ್ಷಣದ ಉದ್ದೇಶ ಪರಿಣಾಮಕಾರಿ ಯಾಗಿ ಬೋಧಿಸುವುದೇ ಆಗಿದೆಯೆಂದು ಸ್ಥೂಲವಾಗಿ ಹೇಳಬಹುದಾದರೂ ಅದನ್ನು ವಿವರವಾಗಿ ಪರಿಶೀಲಿಸುವ ಯತ್ನ ಎಲ್ಲೆಡೆಯೂ ನಡೆದಿದೆ. ಅಂಥ ಪರಿಶೀಲನೆಯಿಂದ ವೃತ್ತಿಶಿಕ್ಷಣ ಸಂಸ್ಥೆ ತನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದಕ್ಕೂ ಅನಂತರ ಅವುಗಳನ್ನು ನಿರ್ವಹಿಸುವ ಮಾರ್ಗವನ್ನು ಕಂಡುಕೊಳ್ಳುವುದಕ್ಕೂ ಅನುಕೂಲವಾಗುವುದು. ಅಮೆರಿಕದ ನ್ಯಾಷನಲ್ ಸರ್ವೆ ಆಫ್ ಎಜುಕೇಷನ್ ಆಫ್ ಟೀಚರ್ಸ್ ಎಂಬ ಸಂಸ್ಥೆ ಆ ಬಗ್ಗೆ ನಡೆಸಿದ ಒಂದು ಪರಿಶೀಲನೆಯಲ್ಲಿ, ಅಧ್ಯಾಪಕರ ಶಿಕ್ಷಣದ ಉದ್ದೇಶಗಳನ್ನು ಕುರಿತು ಹೀಗೆ ಹೇಳಿದೆ:

1. ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಮತ್ತು ಇತರ ಸೇವಾಕ್ಷೇತ್ರಗಳ ದೃಷ್ಟಿಯಲ್ಲಿ ಶಿಕ್ಷಣದ ಪ್ರಾಮುಖ್ಯ ಇತ್ಯಾದಿಯಾದ ವೃತ್ತಿಜ್ಞಾನವನ್ನು ದೊರಕಿಸಬೇಕು;

2. ವೃತ್ತಿಗೆ ಸಂಬಂಧಿಸಿದ ಉಪಕರಣಗಳೆನ್ನಬಹುದಾದ ವೃತ್ತಿಕೌಶಲವನ್ನೂ ವೃತ್ತಿಭಾವನೆಗಳನ್ನೂ ಬೆಳಸಬೇಕು;

3. ಮಕ್ಕಳ ಬೆಳವಣಿಗೆಯ ಎಲ್ಲ ಅಂತಸ್ತುಗಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಗುಣ ಧರ್ಮಗಳನ್ನು ಪರಿಚಯ ಮಾಡಿಕೊಡಬೇಕು;

4. ವಿಷಯದ ಸ್ವರೂಪ, ಅದನ್ನು ಕಲಿಯಲಿರುವ ವಿದ್ಯಾರ್ಥಿಯ ವಯೋಮಟ್ಟ - ಇವುಗಳಿಗೊಪ್ಪುವಂಥ ಬೋಧನಕ್ರಮಗಳನ್ನು ಪರಿಚಯ ಮಾಡಿಕೊಡಬೇಕು.

5. ತಾವು ಬೋಧಿಸಲಿರುವ ಶಾಲೆಯ ಉದ್ದೇಶ, ವ್ಯವಸ್ಥೆ, ಪಠ್ಯಕ್ರಮ, ಕಾರ್ಯಕ್ರಮಗಳ ಯೋಜನೆ, ಆಡಳಿತ ನಿರ್ವಹಣೆ ಇತ್ಯಾದಿ ಅಂಶಗಳ ಪರಿಚಯ ಮಾಡಿಕೊಡಬೇಕು,

6. ಪಾಠ ಬೋಧನೆಯ ಪರಿವೀಕ್ಷಣೆ, ಅಭ್ಯಾಸಾರ್ಥ ಬೋಧನೆ, ಪಾಠವಿಮರ್ಶೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅವರ ಬೋಧನ ಕೌಶಲವನ್ನು ರೂಪಿಸಬೇಕು,

7. ತನ್ನ ಕರ್ತವ್ಯ ನಿರ್ವಹಣೆಯಲ್ಲಿ ನೆರವಾಗಬಲ್ಲ ಶಿಕ್ಷಣತತ್ತ್ವವನ್ನೂ ತನ್ನ ಸೇವಾ ಜೀವನದಲ್ಲಿ ತಾನು ವೃತ್ತಿಗೆ ನೀಡಬಹುದಾದ ಕಾಣಿಕೆಯನ್ನೂ ಪರಿಚಯ ಮಾಡಿಕೊಡಬೇಕು.

ಈ ಅಭಿಪ್ರಾಯಗಳನ್ನೇ ಸ್ವಲ್ಪ ಸ್ಥೂಲವಾಗಿ ಇಂಗ್ಲೆಂಡಿನಲ್ಲಿ ಮೆಕ್ನೇರ್ ಸಮಿತಿ 1944ರಲ್ಲಿ ತನ್ನ ವರದಿಯಲ್ಲಿ ಸೂಚಿಸುತ್ತ, ವೃತ್ತಿಶಿಕ್ಷಣದಿಂದ ಅಧ್ಯಾಪಕರು -

1.ಮಾತೃ ಭಾಷೆಯ ಬಳಕೆಯಲ್ಲಿ ತಕ್ಕ ಷ್ಟು ಸೌಲಭ್ಯವನ್ನೂ ಸ್ಪಷ್ಟವಾಗಿ ಮಾತನಾಡುವ ಶಕ್ತಿಯನ್ನೂ ಪಡೆದುಕೊಳ್ಳ ಬೇಕು;

2. ಶಿಕ್ಷಣದ ಮೂಲಭೂತ ತತ್ತ್ವಗಳನ್ನು ಪರಿಚಯ ಮಾಡಿಕೊಳ್ಳಬೇಕು;

3. ಬೋಧನಕಾರ್ಯದಲ್ಲಿ ತಕ್ಕ ಮಟ್ಟಿನ ಅನುಭವ, ಕೌಶಲ ಮತ್ತು ದಕ್ಷತೆಯನ್ನು ಪಡೆದುಕೊಳ್ಳಬೇಕು-ಎಂದು ತನ್ನದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದೆ.

ಭಾರತದ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ಅಂಡ್ ಟ್ರೈನಿಂಗ್ ಸಂಸ್ಥೆ (ಎನ್.ಸಿ.ಇ.ಆರ್.ಟಿ) ಅಧ್ಯಾಪಕರಿಗೆ ವೃತ್ತಿಶಿಕ್ಷಣದಿಂದ ಬರಬೇಕಾದ ದಕ್ಷತೆಯನ್ನು ವಿವರಿಸುತ್ತ

1. ವೃತ್ತಿದಕ್ಷತೆಯೂ ವೃತ್ತಿಸೌಜನ್ಯವೂ ಮೂಡಬೇಕು;

2. ಬೋಧಿಸುವ ವಿಷಯದಲ್ಲಿ ತಕ್ಕಷ್ಟು ಪಾಂಡಿತ್ಯವೂ ಅದನ್ನು ಬೋಧಿಸುವ ತಂತ್ರ ಮತ್ತು ಕೌಶಲಗಳೂ ಮೂಡಬೇಕು;

3. ಬೋಧನೆ ಮತ್ತು ಕಲಿವುಗಳೆರಡರ ಪರಿಜ್ಞಾನವನ್ನೂ ಪಡೆದಿದ್ದು ಅವುಗಳನ್ನೂ ಸಾಧಿಸುವ ವಿವಿಧ ಕ್ರಮಗಳನ್ನು ಅರಿತುಕೊಳ್ಳಬೇಕು;

4. ಬೋಧನ ವಿಷಯವನ್ನೂ ಪಾಠೋಪಕರಣಗಳನ್ನೂ ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವ ಅನುಭವ ಸಿದ್ಧಿಸಬೇಕು;

5. ವಿಷಯನ್ನು ಬೋಧನೆಗೆ ಯುಕ್ತ ರೀತಿಯಲ್ಲಿ ವ್ಯವಸ್ಥೆಗೊಳಿಸಿಕೊಳ್ಳುವ ಶಕ್ತಿ ಮೂಡಬೇಕು;

6. ವೈಯಕ್ತಿಕ ಭಿನ್ನತೆಗಳನ್ನು ಗುರುತಿಸಿಕೊಂಡು ಮಕ್ಕಳಿಗೆ ಸೂಕ್ತರೀತಿಯಲ್ಲಿ ಸಹಾಯ ನೀಡುವ ಶಾಸ್ತ್ರೀಯ ಜ್ಞಾನದ ಪರಿಚಯವಾಗಬೇಕು;

7. ತರಗತಿಯಲ್ಲಿ ಶಿಸ್ತಿನ ಪಾಲನೆ, ಶೈಕ್ಷಣಿಕ ನಿರ್ದೇಶನ, ಸಹಪಠ್ಯ ಚಟುವಟಿಕೆ - ಇವುಗಳಲ್ಲಿ ಅನುಭವ, ಆಸಕ್ತಿಗಳು ಮೂಡಬೇಕು;

8. ತನ್ನ ವೃತ್ತಿದಕ್ಷತೆಯನ್ನು ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚಿಸಿಕೊಳ್ಳುವ ಮನೋಭಾವವೂ ಶಕ್ತಿಯೂ ಸಿದ್ಧಿಸಬೇಕು ಇತ್ಯಾದಿಯಾಗಿ ಹೇಳಿದೆ.

ಮೇಲಿನ ಮೂರು ರಾಷ್ಟ್ರಗಳೂ ಬೇರೆ ಬೇರೆ ವಿಧದಲ್ಲಿ ವಿವರಿಸಿದ್ದರೂ ಅಧ್ಯಾಪಕರ ವೃತ್ತಿಶಿಕ್ಷಣದಿಂದ ಅವರಲ್ಲಿ ಮೂಡಬೇಕಾದ ಫಲಗಳನ್ನು ಸ್ಪಷ್ಟವಾಗಿ ಸೂಚಿಸಿವೆ. ಅಂಥ ಸಿದ್ಧಿ ಸಂಸ್ಕಾರಗಳನ್ನು ಮೂಡಿಸುವಲ್ಲಿ ಇಂದಿನ ನಮ್ಮ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳು ವಿಫಲವಾಗಿವೆಯೆಂಬ ಮಾತು ಎಲ್ಲ ಕಡೆಯಿಂದಲೂ ಕೇಳಿಬರುತ್ತಿದೆ. ಜೊತೆಯಲ್ಲೇ ಆ ಉದ್ದೇಶಗಳು ಈಡೇರುವಂತೆ ಅವನ್ನು ಪರಿವರ್ತಿಸುವ ಕಾರ್ಯವೂ ನಡೆಯುತ್ತಿದೆ.

ವೃತ್ತಿಶಿಕ್ಷಣ ಸಂಸ್ಥೆಯ ಅಂತಸ್ತುಗಳು ಬದಲಾಯಿಸಿ

ಎಲ್ಲ ದೇಶಗಳಲ್ಲೂ ಶಿಕ್ಷಣ ನಾಲ್ಕು ಅಂತಸ್ತುಗಳಲ್ಲಿ ವ್ಯವಸ್ಥೆಗೊಳ್ಳುತ್ತಿದೆ - ಪ್ರಾಥಮಿಕ ಪೂರ್ವದ ಶಿಶುವಿಹಾರ ಅಥವಾ ಕಿಂಡರ್ಗಾರ್ಟನ್ ಪಾಠಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢ(ಸೆಕಂಡರಿ)ಶಾಲೆಗಳು ಮತ್ತು ಉನ್ನತಶಿಕ್ಷಣ ಸಂಸ್ಥೆಗಳು, ಈ ವ್ಯವಸ್ಥೆಯನ್ನು ಅನುಸರಿಸಿ ಅಧ್ಯಾಪಕರ ಶಿಕ್ಷಣದ ಮಟ್ಟವೂ ನಾಲ್ಕು ಹಂತಗಳಲ್ಲಿ ವ್ಯವಸ್ಥೆಗೊಳ್ಳುತ್ತಿದೆ. ಇತ್ತೀಚಿನ ವರೆಗೂ ಪ್ರಾಥಮಿಕ ಶಿಕ್ಷಣ ನಾಲ್ಕು ವರ್ಷದ್ದಾಗಿದ್ದು ಅನಂತರದ 3 - 4 ವರ್ಷಗಳ ಶಿಕ್ಷಣ ಮಾಧ್ಯಮಿಕ ಶಿಕ್ಷಣವೆನಿಸಿತ್ತು. ಆದ್ದರಿಂದ ಅವೆರಡು ಅಂತಸ್ತಿನ ಶಾಲೆಗಳಿಗೂ ವಿ.ಟಿ.ಸಿ. (ವರ್ನಾಕ್ಯುಲರ್ ಟೀಚರ್ಸ್ ಸರ್ಟಿಫಿಕೇಟ್) ಮತ್ತು ಯು.ಜಿ.ಟಿ. (ಅಂಡರ್ ಗ್ರಾಜುಯೇಟ್ ಟ್ರೈನಿಂಗ್) ಎಂಬ ಎರಡು ಬೇರೆ ಬೇರೆ ಅಂತಸ್ತಿನ ಅಧ್ಯಾಪಕರ ವೃತ್ತಿಶಿಕ್ಷಣದ ವ್ಯವಸ್ಥೆಯಿತ್ತು. ಕೇವಲ ಪ್ರೌಢ, ಅಪ್ಪರ್ ಪ್ರೈಮರಿ ತರಗತಿಯ ಸಾಮಾನ್ಯ ಶಿಕ್ಷಣವನ್ನು ಪಡೆದಿರುವ ಅಭ್ಯರ್ಥಿಗಳನ್ನು ವಿ.ಟಿ.ಸಿ. ತರಗತಿಗೆ ಸೇರಿಸಿಕೊಳ್ಳಲಾಗು ತ್ತಿತ್ತು. ಈಚೆಗೆ ಪ್ರಾಥಮಿಕ ಶಿಕ್ಷಣ 6-7ವರ್ಷದ ಅವಧಿಯದಾಗುತ್ತ ಬಂದಂತೆ ಮಾಧ್ಯಮಿಕ ಶಾಲೆಗಳು ಮಾಯವಾಗುತ್ತಿವೆ. ಜೊತೆಗೆ ಯಾವ ಮಟ್ಟದ ಶಾಲೆಯಲ್ಲೇ ಆಗಲಿ ಅಧ್ಯಾಪಕರಿಗೆ ಎಸ್.ಎಸ್.ಎಲ್.ಸಿ. ಯಷ್ಟು ಕನಿಷ್ಠ ಮಟ್ಟದ ಸಾಮಾನ್ಯ (ಸಾಂಸ್ಕೃತಿಕ) ಶಿಕ್ಷಣ ಅಗತ್ಯವೆಂಬ ಅಂಶವನ್ನು ಎಲ್ಲ ರಾಷ್ಟ್ರಗಳಂತೆ ಭಾರತದಲ್ಲೂ ಅಂಗೀಕರಿಸಲಾಗಿದೆ. ಆದ್ದರಿಂದ ವಿ.ಟಿ.ಸಿ. ಈಗ ನಿಂತುಹೋಗುತ್ತಿದೆ. ಪ್ರಾಥಮಿಕ ಶಾಲೆಗಳಿಗೆಲ್ಲ ಎಸ್.ಎಸ್.ಎಲ್.ಸಿ. ಆದವರನ್ನೇ ಸೇರಿಸಿಕೊಂಡು ಒಂದೇ ಅಂತಸ್ತಿನ ವೃತ್ತಿಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರೌಢಶಾಲೆಯ ಅಧ್ಯಾಪಕರಿಗೆ ವಿಶ್ವವಿದ್ಯಾನಿಲಯದ ಪದವಿ ಕನಿಷ್ಠಮಟ್ಟದ ಸಾಂಸ್ಕೃತಿಕ ಶಿಕ್ಷಣವೆಂದು ಪರಿಗಣಿಸಿ ಪದವಿಯೋತ್ತರ ವೃತ್ತಿಶಿಕ್ಷಣ ವ್ಯವಸ್ಥೆ ಏರ್ಪಟ್ಟಿದೆ. ಕಾಲೇಜುಗಳಂಥ ಉನ್ನತ ಶಿಕ್ಷಣಸಂಸ್ಥೆಗಳ ಅಧ್ಯಾಪಕರಿಗೂ ವೃತ್ತಿಶಿಕ್ಷಣ ಅಗತ್ಯವೆಂಬ ಭಾವನೆ ಬೆಳೆಯುತ್ತಿದ್ದರೂ ಆ ಬಗ್ಗೆ ಇನ್ನೂ ನಿರ್ದಿಷ್ಟ ವೃತ್ತಿಶಿಕ್ಷಣ ಕಾರ್ಯಕ್ರಮಗಳು ರೂಪುಗೊಂಡಿಲ್ಲ. ಪ್ರಾಥಮಿಕ ಪೂರ್ವದ ಶಿಕ್ಷಣ ಅನೇಕ ದೇಶಗಳಲ್ಲಿ ಇನ್ನೂ ರಾಷ್ಟ್ರದ ನೇರ ಹೊಣೆಗಾರಿಕೆಗೆ ಬಂದಿಲ್ಲವಾದ್ದ ರಿಂದ ಆ ಅಂತಸ್ತಿನ ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ನಿರ್ದಿಷ್ಟ ವೃತ್ತಿಶಿಕ್ಷಣ ಸಂಸ್ಥೆಗಳು ಅಷ್ಟಾಗಿ ರೂಪುಗೊಂಡಿಲ್ಲ. ಆದರೆ ಆ ಕಾರ್ಯವನ್ನು ಪ್ರಾಥಮಿಕ ಶಿಕ್ಷಕರ ವೃತ್ತಿಶಿಕ್ಷಣ ಸಂಸ್ಥೆಗಳೂ ಶಿಶುವಿಹಾರಗಳಿಗೆ ಸೇರಿದಂಥ ಕೇಂದ್ರಗಳೂ ನಿರ್ವಹಿಸುತ್ತಿವೆ. ಇನ್ನು ನಾಡಿನಲ್ಲಿ ಪ್ರಚಾರದಲ್ಲಿ ರುವ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳು ಮುಖ್ಯವಾಗಿ ಎರಡೇ ಅಂತಸ್ತ್ತಿನಲ್ಲಿ ವ್ಯವಸ್ಥೆಗೊಂಡಿವೆ - ಪ್ರಾಥಮಿಕ ಅಧ್ಯಾಪಕರನ್ನು ಸಿದ್ಧಪಡಿಸುವವು. ಪ್ರೌಢಶಾಲೆಯ ಶಿಕ್ಷಕರನ್ನು ಸಿದ್ಧಪಡಿಸುವವು.

ಭಾರತದಲ್ಲಿ ಶಿಕ್ಷಣ ರಾಜ್ಯಸರ್ಕಾರಗಳಿಗೆ ಸೇರಿದ ವಿಷಯ, ರಾಜ್ಯದ ಪಾಠ ಶಾಲೆಗಳಿಗೆ ಅಧ್ಯಾಪಕರನ್ನು ಸಿದ್ಧಪಡಿಸುವ ಕಾರ್ಯವೂ ಆಯಾ ರಾಜ್ಯದ ಹೊಣೆಗಾರಿಕೆ. ಆದರೂ ಇಡೀ ಭಾರತದಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಗಳ ಆಡಳಿತ ವಿಷಯದಲ್ಲಿ ಏಕರೂಪತೆ ಕಂಡುಬರುತ್ತದೆ. ಅದೆಲ್ಲ ನೇರವಾಗಿ ಆಯಾ ರಾಜ್ಯದ ಶಿಕ್ಷಣ ಶಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಅವುಗಳಲ್ಲಿ ಕೆಲವು ಸರ್ಕಾರೀ ಸಂಸ್ಥೆಗಳು; ಇನ್ನು ಕೆಲವು ಖಾಸಗಿ ಸಂಸ್ಥೆಗಳು. ಖಾಸಗಿ ಸಂಸ್ಥೆಗಳಿಗೆ ಶಿಕ್ಷಣಶಾಖೆ ಅಂಗೀಕಾರ ನೀಡುವುದಲ್ಲದೆ ಸಹಾಯಧನವನ್ನೂ ಕೊಡುತ್ತದೆ. ಜೊತೆಗೆ ಆ ಸಂಸ್ಥೆಗಳ ಮೇಲ್ವಿಚಾರಣೆಯನ್ನೂ ತನಿಖೆ ಯನ್ನೂ ನಡೆಸುತ್ತದೆ. ಸರ್ಕಾರದ ಮತ್ತು ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳ ಶಿಕ್ಷಣದ ಮಟ್ಟದಲ್ಲಿ ವ್ಯತ್ಯಾಸವಿದ್ದರೂ ಪಠ್ಯಕ್ರಮದಲ್ಲಿ ಮಾತ್ರ ಏಕರೂಪತೆಯುಂಟು.

ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳೆಲ್ಲ ಪದವೀಧರ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವುದೊಂದನ್ನು ಬಿಟ್ಟರೆ ಮಿಕ್ಕ ಅನೇಕ ಅಂಶಗಳಲ್ಲಿ ಏಕರೂಪತೆಯನ್ನು ತಳೆದಿಲ್ಲ. ಆಡಳಿತದ ದೃಷ್ಟಿಯಿಂದ ಅವನ್ನು ನಾಲ್ಕು ವಿಧಗಳನ್ನಾಗಿ ವಿಂಗಡಿಸಬಹುದು;

1. ವಿಶ್ವವಿದ್ಯಾನಿಲಯವೊಂದಕ್ಕೆ ಅಂಗಸಂಸ್ಥೆಯಾಗಿದ್ದು ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುತಕ್ಕವು;

2. ವಿಶ್ವವಿದ್ಯಾಲಯದ ಅಂಗಸಂಸ್ಥೆಗಳಾಗಿದ್ದು ಖಾಸಗಿ ಆಡಳಿತಕ್ಕೆ ಒಳಪಟ್ಟಿರತಕ್ಕವು;

3. ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರದ ವಿಭಾಗಕ್ಕೆ ಸೇರಿದವು;

4. ಯಾವ ವಿಶ್ವವಿದ್ಯಾನಿಲಯಕ್ಕೂ ಸೇರದೆ, ಆದರೆ ಸರ್ಕಾರದ ಡಿಪ್ಲೊಮಾಗಳನ್ನು ನೀಡುವ ಖಾಸಗಿ ಅಥವಾ ಸರ್ಕಾರಿ ಆಡಳಿತದಲ್ಲಿರುವ ಸಂಸ್ಥೆಗಳು, ಅಧ್ಯಾಪಕರ ವೃತ್ತಿಶಿಕ್ಷಣದ ಬಗ್ಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳು ತಳೆದಿರುವ ಆಸಕ್ತಿಯ ಪ್ರಮಾಣದಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಸರ್ಕಾರದ ಮತ್ತು ವಿಶ್ವವಿದ್ಯಾಲಯಗಳ ಆಡಳಿತದಲ್ಲಿರುವ ಸಂಸ್ಥೆಗಳಲ್ಲಿ ಶುಲ್ಕದ ದರ ಖಾಸಗಿ ಸಂಸ್ಥೆಗಳಲ್ಲಿರುವುದ ಕ್ಕಿಂತ ಕಡಿಮೆಯಿರುವುದು; ಈಚೆಗೆ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ವಿಧಿಸಬಾರ ದೆಂಬ ಪ್ರಚಾರ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ಅಭ್ಯರ್ಥಿಗಳಲ್ಲಿ ಬಹುತೇಕ ಮಂದಿಗೆ ವೇತನವನ್ನು ನೀಡುತ್ತಿವೆ.

ವೃತ್ತಿ ಶಿಕ್ಷಣದ ತ್ರಿಮುಖಗಳು ಬದಲಾಯಿಸಿ

ಅಧ್ಯಾಪಕರ ವೃತ್ತಿಶಿಕ್ಷಣ ಟ್ರೇನಿಂಗ್ ಕಾಲೇಜಿನಲ್ಲಿ ನಡೆಯುವುದಾದರೂ ಅದೊಂದೆ ಅಧ್ಯಾಪಕರ ಸಿದ್ಧತೆಯ ಸಂಪೂರ್ಣ ಹೊಣೆಯನ್ನು ಹೊರುವಂತಿಲ್ಲ. ಏಕೆಂದರೆ ಆ ಸಿದ್ಧತೆಗೆ ಮೂರು ನಿರ್ದಿಷ್ಟ ಮುಖಗಳಿವೆ - ವೃತ್ತಿ ಶಿಕ್ಷಣ ಪೂರ್ವದ ಮುಖ; ವೃತ್ತಿಮುಖ ಮತ್ತು ವೃತ್ತಿನಿರತಮುಖ, ಇವು ಮೂರೂ ಬೇರೆ ಬೇರೆ ಕ್ಷೇತ್ರಗಳಿಗೆ ಸೇರಿದ ಹೊಣೆಗಾರಿಕೆ.

1. ವೃತ್ತಿಶಿಕ್ಷಣಕ್ಕೆ ಪೂರ್ವದ ಸಿದ್ಧತೆ; ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗೆ ಸೇರುವ ಮುನ್ನ ಅಭ್ಯರ್ಥಿ ಪಡೆಯಬೇಕೆಂದು ನಿಷ್ಕರ್ಷಿಸಿರುವ ಸಾಮಾನ್ಯ ಶಿಕ್ಷಣ, ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿಗೆ ಸೇರತಕ್ಕವರಿಗೆ ಪ್ರೌಢಶಾಲೆಯ ಶಿಕ್ಷಣವೂ ಪ್ರೌಢಶಾಲೆಯ ಅಧ್ಯಾಪಕರಾಗತಕ್ಕವರಿಗೆ ಪದವೀ ಮಟ್ಟದ ಶಿಕ್ಷಣವೂ ಆಗಿರಬೇಕೆಂದು ಎಲ್ಲ ಕಡೆಯೂ ಪ್ರಚಾರದಲ್ಲಿದೆ. ಆದರೂ 1947ರಲ್ಲಿ ಭಾರತದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಆದ ಅಧ್ಯಾಪಕರ ಸಂಖ್ಯೆ ಕೇವಲ 6% ಮಾತ್ರ ಇತ್ತು.

ಪ್ರಾಥಮಿಕ ಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣ ಇಂದಿಗೂ ತೀರ ಕಡಿಮೆಯಾಗಿಯೇ ಉಳಿದಿದೆಯೆಂಬುದು ಕೊಠಾರಿ ಶಿಕ್ಷಣ ಆಯೋಗದ (1966) ವರದಿಯಿಂದ ಸ್ಪಷ್ಟಪಡುತ್ತದೆ. ಅದರೊಡನೆ ಹೋಲಿಸಿದರೆ ಪ್ರೌಢಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣ ಉತ್ತಮವಾಗಿರು ವುದು ಕಂಡುಬರುತ್ತದೆ:

ತಕ್ಕಷ್ಟು ಸಾಮಾನ್ಯ ಶಿಕ್ಷಣವಿಲ್ಲದವರ ಸಂಖ್ಯೆಯನ್ನು ಇಳಿಸುವುದು ನಿಧಾನವಾಗುವುದಕ್ಕೆ ಕೆಲವು ಕಾರಣಗಳಿವೆ. ಈಚೆಗೆ ಕೆಲವು ಪ್ರದೇಶಗಳಲ್ಲಿ ಅಧ್ಯಾಪಕರನ್ನು ನೇಮಿಸಿಕೊಳ್ಳುವಾಗ ಎಲ್ಲರೂ ಪ್ರೌಢಶಾಲೆಯ ಶಿಕ್ಷಣ ಮುಗಿಸಿರಬೇಕೆಂಬ ಅಂಶವನ್ನು ಕಡ್ಡಾಯಮಾಡುತ್ತಿಲ್ಲ; ಆದಿವಾಸಿಗಳ ಮತ್ತು ಮಹಿಳೆಯರ ಬಗ್ಗೆ ಆ ನಿಯಮವನ್ನು ಸಡಿಲಿಸಲಾಗುತ್ತಿದೆ; ಹಿಂದುಳಿದ ವರ್ಗಗಳ ಅಧ್ಯಾಪಕರ ಬಗ್ಗೆಯೂ ಈ ಸಡಿಲಿಕೆ ಉಂಟು, ಜೊತೆಗೆ ತಕ್ಕ ಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸಿಕ್ಕದಿರುವಾಗಂತೂ ಇಂಥ ಸಡಿಲಿಕೆ ಅನಿವಾರ್ಯವಾಗುತ್ತಿದೆ. ಇದನ್ನು ಒಪ್ಪಬಹುದಾದರೂ ಅನಿವಾರ್ಯವೆಂದು ವಾದಿಸಬಹುದಾದರೂ ಕೆಲಸಕ್ಕೆ ಸೇರಿದಮೇಲಾದರೂ ಅವರು ಹತ್ತು ವರ್ಷಗಳ ಸಾಮಾನ್ಯ ಶಿಕ್ಷಣವನ್ನು ಆದಷ್ಟು ಬೇಗ ಮುಗಿಸಿಕೊಳ್ಳಬೇಕೆಂದು ಕಡ್ಡಾಯ ಮಾಡುವುದು ಅಗತ್ಯ.

ಪ್ರೌಢಶಾಲೆಯಲ್ಲಿ ವಿಶಿಷ್ಟ ವಿಷಯಗಳ ಅಧ್ಯಾಪಕರನ್ನುಳಿದು ಮಿಕ್ಕವರೆಲ್ಲ ಪದವೀಧರ ಅಧ್ಯಾಪಕರು. ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಬರತಕ್ಕ ಗಂಡಸರಿಗಿಂತ ಹೆಂಗಸರು ಹೆಚ್ಚಿನ ಶಿಕ್ಷಣಾರ್ಹತೆ ಪಡೆದಿರುವುದು ಈಚೆಗೆ ನಡೆದಿರುವ ಸಂಶೋಧನೆಯಿಂದ ಕಂಡುಬರುತ್ತದೆ. ಗಂಡಸರಲ್ಲಿ ಶೇ. 75 ಮೂರನೆಯ ದರ್ಜೆಯಲ್ಲಿ ಉತ್ತೀರ್ಣರಾದ ಪದವೀಧರರು. ಎಂ.ಎ., ಎಂ.ಎಸ್.ಸಿ., ಎಂ.ಕಾಂ. ಆಗಿರತಕ್ಕವರು ಬರುವುದೇ ಅಪರೂಪ. ಹಾಗೇನಾದರೂ ಬಂದಿದ್ದರೆ ಸಾಮಾನ್ಯವಾಗಿ ಅವರು ಮೂರನೆಯ ದರ್ಜೆಯಲ್ಲಿ ಉತ್ತೀರ್ಣರಾದವರು. ಅನೇಕ ವೇಳೆ ಬಿ.ಕಾಂ.ಮತ್ತು ವ್ಯವಸಾಯ ಶಿಕ್ಷಣದ ಪದವೀಧರರನ್ನು ದೊರಕಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಬಹುಶಃ ಇತರ ಸೇವಾಕ್ಷೇತ್ರಗಳು ಆರ್ಥಿಕವಾಗಿ ತೋರುತ್ತಿರುವ ಹೆಚ್ಚಿನ ಆಕರ್ಷಣೆ ಇದಕ್ಕೆ ಕಾರಣವಾಗಿರಬೇಕು. ಈಚೆಗೆ ವೃತ್ತಿನಿರತ ಅಧ್ಯಾಪಕರು ಖಾಸಗಿ ಅಧ್ಯಯನದಿಂದಲೋ ಪತ್ರಮುಖೇನ ಶಿಕ್ಷಣದಿಂದಲೋ ತಮ್ಮ ಸಾಮಾನ್ಯ ಶಿಕ್ಷಣಾರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದ ಅಥವಾ ಉನ್ನತ ಪದವಿಗಳನ್ನು ಪಡೆದ ಅಭ್ಯರ್ಥಿಗಳು ಶಿಕ್ಷಣವೃತ್ತಿಗೆ ಬಾರದಿರುವುದರ ಜೊತೆಗೆ ವಿಜ್ಞಾನದ ಪದವೀಧರರು ಬರುವುದು ಕಡಿಮೆಯಾಗುತ್ತಿದೆ. ಶಾಲೆಯಲ್ಲಿ ವಿಜ್ಞಾನ ಪ್ರಧಾನಬೋಧನ ವಿಷಯವಾಗುತ್ತಿದ್ದರೂ ಅದನ್ನು ಬೋಧಿಸುವ ಅಧ್ಯಾಪಕರು ತಕ್ಕ ಷ್ಟು ಸಂಖ್ಯೆಯಲ್ಲಿ ದೊರಕದೆ ಅನೇಕ ಶಾಲೆಗಳಲ್ಲಿ ಅವರ ಸ್ಥಾನಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಖಾಲಿ ಉಳಿದಿರುತ್ತವೆ.

ಪ್ರೌಢಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣದ ಬಗ್ಗೆ ಮತ್ತೊಂದು ನ್ಯೂನತೆ ಈಚೆಗೆ ಬೆಳಕಿಗೆ ಬರುತ್ತಿದೆ. ಶೇ. ಸು. 331/3 ರಷ್ಟು ಅಧ್ಯಾಪಕರು ಪದವೀಧರರಾಗಿದ್ದರೂ ತಾವು ಬೋಧಿಸುತ್ತಿರುವ ವಿಷಯದಲ್ಲಿ ಪದವಿಮಟ್ಟದಲ್ಲಿ ಶಿಕ್ಷಣವನ್ನು ಪಡೆದಿರುವುದಿಲ್ಲ. ಇತರ ವಿಷಯಗಳನ್ನು ಅಭ್ಯಸಿಸಿ ಪದವಿ ಪಡೆದಿರುತ್ತಾರೆ. ಆದರೂ ಅನಿವಾರ್ಯವಾಗಿ ಅವರು ಆ ಪಾಠ ಮಾಡುತ್ತಿರುವುದುಂಟು. ಅಂಥವರು ತಾವು ಅಭ್ಯಸಿಸದಿರುವ ವಿಷಯವನ್ನು ಬೋಧಿಸುವುದರಿಂದ ಬೋಧನೆ ಪರಿಣಾಮಕಾರಿಯಾಗದಿರುವುದು ಸ್ವಾಭಾವಿಕ.

ಮೇಲಿನ ತೊಂದರೆಗಳ ನಿವಾರಣೆಗೆ ಎರಡು ಅಂತಸ್ತಿನಲ್ಲಿ ಪ್ರಯತ್ನ ನಡೆಯಬೇಕಾಗಿದೆ. ಮೊದಲನೆಯ ಅಂತಸ್ತಿನಲ್ಲಿ, ಪ್ರೌಢಶಾಲೆಯಲ್ಲಿ ಬೋಧಿಸುವ ವಿಷಯಗಳನ್ನು ಪದವಿ ಪರೀಕ್ಷೆಗೆ ಆರಿಸಿಕೊಂಡಿದ್ದ ಅಭ್ಯರ್ಥಿಗಳನ್ನು ಮಾತ್ರ ವೃತ್ತಿ ಶಿಕ್ಷಣಕ್ಕೆ ಆರಿಸಿಕೊಳ್ಳಬೇಕು; ಎರಡನೆಯ ಅಂತಸ್ತಿನಲ್ಲಿ, ಅಧ್ಯಾಪಕರನ್ನು ನೇಮಿಸಿಕೊಳ್ಳವಾಗ ಅವರು ಬೋಧಿಸಬೇಕಾಗಿರುವ ವಿಷಯಗಳನ್ನು ಅಧ್ಯಯನ ಮಾಡಿರುವವರನ್ನೇ ಆರಿಸಿಕೊಳ್ಳಬೇಕು. ಜೊತೆಗೆ ದಕ್ಷ ಅಧ್ಯಾಪಕರನ್ನು ದೊರಕಿಸಿಕೊಳ್ಳಲು. ಉನ್ನತದರ್ಜೆಯಲ್ಲಿ ಉತ್ತೀರ್ಣರಾದವರನ್ನೂ ವಿಜ್ಞಾನದ ಪದವೀಧರ ರನ್ನೂ ಆಕರ್ಷಿಸಲು ಅಂಥವರಿಗೆ ಹೆಚ್ಚಿನ ಆರ್ಥಿಕ ಆಕರ್ಷಣೆ ತೋರುವುದೂ ಅಗತ್ಯ.

2. ವೃತ್ತಿಶಿಕ್ಷಣದ ಮುಖ: ಅಧ್ಯಾಪಕರ ಸಿದ್ಧತೆಯ ಎರಡನೆಯ ಮುಖವೇ ವೃತ್ತಿಶಿಕ್ಷಣ. ಪ್ರಾಥಮಿಕ ಶಿಕ್ಷಕರ ವೃತ್ತಿಶಿಕ್ಷಣದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಆಡಳಿತ ದೃಷ್ಟಿಯಿಂದ ಏಕರೂಪತೆ ಕಂಡುಬಂದರೂ ಕಾಲಾವಧಿ, ಉದ್ದೇಶ, ಕಾರ್ಯಕ್ರಮ. ಪ್ರವೇಶನಿಯಮ ಇತ್ಯಾದಿಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕೆಲವು ರಾಜ್ಯಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಧ್ಯಾಪಕರಿಗೆ ಪ್ರತ್ಯೇಕ ಪಠ್ಯಕ್ರಮಗಳುಂಟು; ಅವರ ವೃತ್ತಿಶಿಕ್ಷಣದ ಕಾಲಾವಧಿಯಲ್ಲೂ ವ್ಯತ್ಯಾಸವಿದೆ; ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ 2-3 ವರ್ಷಗಳ ಅವಧಿಯದಾದರೆ ಮಾಧ್ಯಮಿಕ ಶಿಕ್ಷಕರಿಗೆ 1-2 ವರ್ಷಗಳದಾಗಿರುತ್ತದೆ. ಪಥ್ಯ ವಿಷಯಗಳಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲದಿದ್ದರೂ ಸಾಮಾನ್ಯ ವಿಷಯಗಳ ಬೋಧನೆಯ ಪ್ರಮಾಣದಲ್ಲಿ ವ್ಯತ್ಯಾಸವಿರುವು ದುಂಟು. ಅದರಲ್ಲಿ ಮಾತೃಭಾಷೆ, ಚರಿತ್ರೆ, ಭೂಗೋಳ, ವಿಜ್ಞಾನ, ಗಣಿತ, ಪೌರನೀತಿ ಇತ್ಯಾದಿ ಸಾಮಾನ್ಯವಿಷಯಗಳೂ ಚಿತ್ರಲೇಖನ, ದೈಹಿಕಶಿಕ್ಷಣ, ಕಸುಬು ಇತ್ಯಾದಿಗಳೂ ಸೇರಿರುತ್ತವೆ; ವೃತ್ತಿವಿಷಯಗಳಲ್ಲಿ ಬೋಧನತತ್ತ್ವ, ಶಾಲಾನಿರ್ವಹಣೆ, ಬೋಧನಕ್ರಮ, ಆರೋಗ್ಯಶಾಸ್ತ್ರ, ಶೈಕ್ಷಣಿಕ ಮನೋವಿಜ್ಞಾನ ಮತ್ತು ಅಭ್ಯಾಸಾರ್ಥಬೋಧನೆ-ಇವು ಸೇರಿರುತ್ತವೆ; ಮಹಿಳೆಯರಿಗೆ ಸಂಗೀತ ಮತ್ತು ಹೊಲಿಗೆ ಕೆಲಸ ಸೇರಿರುತ್ತವೆ. ಈಚೆಗೆ ಶಾಲಾಶಿಕ್ಷಣವನ್ನು ಎರಡೇ ಅಂತಸ್ತುಗಳಲ್ಲಿ ವ್ಯವಸ್ಥೆ ಮಾಡುತ್ತಿರುವುದರಿಂದ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆಲ್ಲ ಸಾಮಾನ್ಯವಾಗಿ ಎರಡು ವರ್ಷಗಳ ಕಾಲಾವಧಿಯ ಒಂದೇ ಅಂತಸ್ತಿನ ವೃತ್ತಿಶಿಕ್ಷಣ ವ್ಯವಸ್ಥೆ ಆಚರಣೆಗೆ ಬರುತ್ತಿದೆ.

ಪ್ರೌಢಶಾಲೆಯ ವಿಶಿಷ್ಟ ವಿಷಯಗಳ ಅಧ್ಯಾಪಕರನ್ನುಳಿದು ಮಿಕ್ಕ ಸಾಮಾನ್ಯ ವಿಷಯಗಳ ಅಧ್ಯಾಪಕರ ವೃತ್ತಿಶಿಕ್ಷಣದಲ್ಲಿ ಸದ್ಯದಲ್ಲಿ ಸಾಮಾನ್ಯ ವಿಷಯಗಳು (ಕಂಟೆಂಟ್ಸ್‌) ಸೇರಿರದಿದ್ದರೂ ಅವನ್ನು ಸೇರಿಸುವ ಬಗ್ಗೆ ಒತ್ತಾಯ ಹೆಚ್ಚುತ್ತಿದೆ.ವೃತ್ತಿ ವಿಷಯಗಳಲ್ಲಿ ಆಳವಾದ ಅಧ್ಯಯನವೂ ವೈವಿಧ್ಯವೂ ಕಂಡುಬರುತ್ತಿದೆ. ಶಿಕ್ಷಣತತ್ತ್ವ, ಶೈಕ್ಷಣಿಕ ಮನೋವಿಜ್ಞಾನ, ಶಿಕ್ಷಣದ ಆಡಳಿತ - ಈ ವಿಷಯಗಳ ಜೊತೆಗೆ ಶಾಲೆಯಲ್ಲಿ ಅಧ್ಯಾಪಕರು ಬೋಧಿಸಲುದ್ದೇಶಿಸಿರುವ ಎರಡು ವಿಷಯಗಳಿಗೆ ಸಂಬಂಧಿಸಿದ ಬೋಧನಕ್ರಮ, ಐಚ್ಛಿಕ ವಿಷಯ ಇತ್ಯಾದಿಗಳೂ ಸೇರಿರುತ್ತವೆ. ಐಚ್ಛಿಕ ವಿಷಯಗಳಲ್ಲಿ ಪ್ರಾಥಮಿಕ ಪೂರ್ವಶಿಕ್ಷಣ, ಮೂಲಶಿಕ್ಷಣ, ಶೈಕ್ಷಣಿಕ ಮತ್ತು ಔದ್ಯೋಗಿಕ ನಿರ್ದೇಶನ, ಪ್ರಾಯೋಗಿಕ ಶಿಕ್ಷಣ ಮತ್ತು ಶೈಕ್ಷಣಿಕ ಸಂಖ್ಯಾಶಾಸ್ತ್ರ - ಇತ್ಯಾದಿಗಳು ಸೇರಿರುವುದುಂಟು.

ವೃತ್ತಿಶಿಕ್ಷಣದಲ್ಲಿ ಮೇಲೆ ಉಲ್ಲೇಖಿಸಿರುವ ವಿವರಗಳು ತತ್ತ್ವ ವಿಷಯಗಳಿಗೆ ಸಂಬಂಧಿಸಿದವು; ಅವುಗಳಷ್ಟೇ ಮುಖ್ಯವೆನ್ನಬಹುದಾದ ಪ್ರಾಯೋಗಿಕ ಅಥವಾ ಅಭ್ಯಾಸಾರ್ಥ ಬೋಧನೆಯ ಶಿಕ್ಷಣವೂ ಸೇರಿರುತ್ತದೆ. ತರಗತಿಯಲ್ಲಿ ಪಾಠಬೋಧನೆ, ಪಾಠಯೋಜನೆಯ ತಯಾರಿಕೆ, ಪಾಠದ ಟಿಪ್ಪಣಿಯ ನಿರೂಪಣೆ, ಪಾಠಗಳ ವಿಮರ್ಶೆ, ಪಾಠವೀಕ್ಷಣೆ ಇತ್ಯಾದಿಗಳೆಲ್ಲ ಅಧ್ಯಾಪಕವೃತ್ತಿಗೆ ಸಂಬಂಧಿಸಿದ ನಿಜವಾದ ಅನುಭವವನ್ನು ಕೊಡತಕ್ಕ ಚಟುವಟಿಕೆಗಳಾದ್ದರಿಂದ ಆ ವಿಭಾಗವನ್ನು ಮುಂದೆ ಪ್ರತ್ಯೇಕವಾಗಿ ಪರಿಶೀಲಿಸಿದೆ.

ಮೇಲಿನ ಕಾರ್ಯಕ್ರಮಗಳ ಜೊತೆಗೆ ಅಧ್ಯಾಪಕವೃತ್ತಿಗೆ ಅಗತ್ಯವೆನಿಸುವ ಹಲವು ಕಾರ್ಯಕ್ರಮಗಳೂ ಸೇರಿರುತ್ತವೆ; ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಪ್ರವಾಸ ಗಳನ್ನು ಏರ್ಪಡಿಸುವುದು, ಗೋಷ್ಠಿಗಳನ್ನು ವ್ಯವಸ್ಥೆಗೊಳಿಸಿ ಕಾರ್ಯನಿರ್ವಹಿಸುವುದು, ಸಭೆ, ಸಮ್ಮೇಳನ, ಹಬ್ಬದಿನಾಚರಣೆಗಳನ್ನು ನಡೆಸುವುದು - ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅವರ ಸಾಮಾಜಿಕ ವ್ಯಕ್ತ್ತಿತ್ವವನ್ನು ಬೆಳೆಸುವ ಕಾರ್ಯವೂ ಸೇರಿರುತ್ತದೆ. ಅಧ್ಯಯನದ ಕಾಲಾವಧಿ ಮುಗಿದ ಅನಂತರ ವೃತ್ತಿವಿಷಯಗಳ ತಾತ್ತ್ವಿಕ ವಿಭಾಗ ಮತ್ತು ಪ್ರಾಯೋಗಿಕ ವಿಭಾಗಗಳೆರಡಕ್ಕೂ ಸಂಬಂಧಿಸಿದಂತೆ ಪರೀಕ್ಷೆ ನಡೆಯುತ್ತದೆ.

ವಿಶಿಷ್ಟವಿಷಯಗಳ ಅಧ್ಯಾಪಕರ ವೃತ್ತಿಶಿಕ್ಷಣ: ಪ್ರೌಢಶಾಲೆಯಲ್ಲಿ ಸಾಮಾನ್ಯ ವಿಷಯಗಳಂತೆ ಸಂಗೀತ, ವ್ಯವಸಾಯ, ನೇಯ್ಗೆ, ಮುದ್ರಣ ಇತ್ಯಾದಿ ವಿಶೇಷ ವಿಷಯಗಳನ್ನು ಐಚ್ಛಿಕವಾಗಿ ಬೋಧಿಸುವ ವ್ಯವಸ್ಥೆಯೂ ಉಂಟಷ್ಟೆ. ಆ ವಿಶೇಷ ಅಧ್ಯಾಪಕರಿಗೆ ಇದುವರೆಗೆ ವೃತ್ತಿಶಿಕ್ಷಣ ಬೇಕೆಂದು ಭಾವಿಸಿರಲಿಲ್ಲ. ಈಚೆಗೆ ಅವರಿಗೂ ವೃತ್ತಿಶಿಕ್ಷಣ ಅಗತ್ಯವೆಂದು ಭಾವಿಸಿ ಅವರ ವೃತ್ತಿಶಿಕ್ಷಣಕ್ಕಾಗಿಯೇ ಪ್ರಾದೇಶಿಕ ಶಿಕ್ಷಣ ಕಾಲೇಜುಗಳಂಥ (ರೀಜನಲ್ ಕಾಲೇಜುಗಳು) ನೂತನ ಸಂಸ್ಥೆಗಳು ಆರಂಭವಾಗಿವೆ. ಅಲ್ಲಿ ಅವರು ಬೋಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣವೀಯುವುದರ ಜೊತೆಗೆ ಆ ವಿಷಯವನ್ನು ಬೋಧಿಸುವ ವಿಧಾನ ಮೊದಲಾದ ವೃತ್ತಿಸಂಬಂಧವಾದ ಶಿಕ್ಷಣವನ್ನೂ ನೀಡಲಾಗುತ್ತದೆ.

ಮೂಲಶಿಕ್ಷಣಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣ: ಸಹಕಾರತತ್ತ್ವದ ಆಧಾರದ ಮೇಲೆ ವ್ಯವಸ್ಥೆಗೊಂಡಿರುವ ಸಮಾಜ ಜೀವನದ ಅನುಭವ ಪಡೆಯುವುದು: ಸತ್ಯ, ಅಹಿಂಸೆಗಳ ಆಧಾರದ ಮೇಲೆ ನೂತನ ಸಮಾಜವ್ಯವಸ್ಥೆಯನ್ನು ಒಪ್ಪಿ ಅದರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು; ಅಧ್ಯಾಪಕರ ವೃತ್ತಿಯನ್ನನುಸರಿಸುವ ಅಭ್ಯರ್ಥಿಗಳ ದೈಹಿಕ, ಮಾನಸಿಕ ಮತ್ತು ಗುಣಗ್ರಾಹಕ ಶಕ್ತಿಗಳನ್ನು ಬೆಳೆಸಿ ಅವರು ಸಮತೂಕದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಮಾಡುವುದು; ಮಕ್ಕಳ ಮಾನಸಿಕ, ದೈಹಿಕ ಮತ್ತು ಭಾವಾತ್ಮಕ ಆವಶ್ಯಕತೆಗ ಳನ್ನು ಅರಿತು ಅವರ ಬೆಳೆವಣಿಗೆಯನ್ನು ಸಾಧಿಸಲು ನೆರವಾಗುವ ವೃತ್ತಿಕೌಶಲವನ್ನೂ ಜ್ಞಾನವನ್ನೂ ದೊರಕಿಸುವುದು - ಇವಿಷ್ಟೂ ಮೂಲಶಿಕ್ಷಣದ ಅಧ್ಯಾಪಕರ ವೃತ್ತಿ ಶಿಕ್ಷಣದ ಉದ್ದೇಶಗಳು, ಇಂಥ ವೃತ್ತಿಶಿಕ್ಷಣಕ್ಕಾಗಿ ಅನೇಕ ಸಂಸ್ಥೆಗಳೂ ಏರ್ಪಟ್ಟಿವೆ. ಅಲ್ಲಿ ಅಧ್ಯಾಪಕರಿಗೆ ವೃತ್ತಿಶಿಕ್ಷಣದ ಜೊತೆಗೆ ಸಮಾಜ ಜೀವನಕ್ಕೆ ಸಂಬಂಧಿಸಿದ ಅನುಭವವನ್ನೂ ದೊರಕಿಸುವರು. ವೃತ್ತಿಶಿಕ್ಷಣದಲ್ಲಿ ಸಾಮಾನ್ಯ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುವುದರ ಜೊತೆಗೆ ಪಠ್ಯವಿಷಯ ಗಳನ್ನು (ಅಲ್ಲಿ ಕೇಂದ್ರ) ವಿಷಯವಾಗಿರುವ ಕಸಬಿಗೆ ಸಂಬಂಧಿಸಿದಂತೆ ಬೋಧಿಸುವ ಸಮನ್ವಯ ಪಾಠಕ್ರಮವನ್ನೂ ಬೋಧಿಸುವರು, ಕೇವಲ ತಾತ್ತ್ವಿಕ ವಿಷಯ ಜ್ಞಾನಕ್ಕೇ ಪ್ರಾಧಾನ್ಯವೀಯದೆ ಪ್ರಾಯೋಗಿಕ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಿಕೊಂಡಿರುವರು. ಮೂಲಶಿಕ್ಷಣಶಾಲೆಗಳ ಪಠ್ಯಕ್ರಮದಲ್ಲಿ ಸೇರಿರುವ ಸಾಮಾನ್ಯ ವಿಷಯಗಳನ್ನೂ ಅಲ್ಲಿ ಬೋಧಿಸಲಾಗುವುದು. ಈ ಸಂಸ್ಥೆಗಳು ಏಕೋ ಜನಪ್ರಿಯವಾಗಿಲ್ಲ ಆದರೆ ಅದರಲ್ಲಿರುವ ಉತ್ತಮಾಂಶಗಳನ್ನು ಸಾಮಾನ್ಯ ವೃತ್ತಿಶಿಕ್ಷಣ ಸಂಸ್ಥೆಗಳಲ್ಲೂ ಬಳಸಿಕೊಳ್ಳುವ ಯತ್ನವೇನೋ ನಡೆಯುತ್ತಿದೆ.

3. ವೃತ್ತಿನಿರತ ಮುಖ: ವೃತ್ತಿಶಿಕ್ಷಣ ಎಷ್ಟೇ ಸಮರ್ಪಕವಾಗಿದ್ದರೂ ಅಧ್ಯಾಪಕರಾಗತಕ್ಕವರು ತಮ್ಮ ಕಾರ್ಯದಲ್ಲಿ ಪೂರ್ಣ ಕೌಶಲವನ್ನು ಸಾಧಿಸಿರುವರೆನ್ನುವಂತಿಲ್ಲ; ಆ ಕಾರ್ಯಕ್ಕೆ ಅನಿವಾರ್ಯವಾಗಿ ಬೇಕಾಗುವ ಕನಿಷ್ಠಮಟ್ಟದ ಕೌಶಲವನ್ನು ಮಾತ್ರ ಸಾಧಿಸಿರುತ್ತಾರೆ. ಆ ಕೌಶಲ ನಿಜವಾಗಿ ವೃದ್ಧಿಯಾಗುವುದು ಅವರು ವೃತ್ತಿಗೆ ಸೇರಿದಮೇಲೆಯೆ. ತಾತ್ತ್ವಿಕವಾಗಿ ಅರಿತ ಅನೇಕ ಅಂಶಗಳ ನಿಜವಾದ ಪರಿಜ್ಞಾನವೂ ಆ ಕಾರ್ಯಕ್ಷೇತ್ರದಲ್ಲೇ ಪ್ರಕಾಶಕ್ಕೆ ಬರುವುದು, ಮೇಲಾಗಿ ಶಿಕ್ಷಣಶಾಖೆ, ವಿಶ್ವವಿದ್ಯಾನಿಲಯ, ವೃತ್ತಿಶಿಕ್ಷಣಸಂಸ್ಥೆ ಮುಂತಾದವು ವೃತ್ತಿನಿರತ ಅಧ್ಯಾಪಕರಿಗಾಗಿಯೆ ವ್ಯಾಪಕವಾದ ಶಿಕ್ಷಣ ಸೌಲಭ್ಯಗಳನ್ನೊದಗಿಸುತ್ತಿರುವುವು. ಅಧ್ಯಾಪಕರು ತಮ್ಮ ವೃತ್ತಿಜೀವನದಲ್ಲಿ ಪಡೆಯಬಹುದಾದ ಈ ಶಿಕ್ಷಣ ಬಹುಮುಖ್ಯವಾದ್ದರಿಂದ ಅದನ್ನು ಪ್ರತ್ಯೇಕವಾಗಿ ಈ ಲೇಖನದ ಕೊನೆಯಲ್ಲಿ ವೃತ್ತಿನಿರತ ಉಪಾಧ್ಯಾಯರ ಶಿಕ್ಷಣ ಎಂಬ ಉಪಶೀರ್ಷಿಕೆಯ ಅಡಿ ಪರಿಶೀಲಿಸಿದೆ. ಪಠ್ಯಕ್ರಮ: ಪ್ರಾಥಮಿಕ ಅಧ್ಯಾಪಕರ ವೃತ್ತಿಶಿಕ್ಷಣದ ಪಠ್ಯಕ್ರಮವನ್ನು ಎರಡು ವಿಭಾಗ ಮಾಡಿದ್ದಾರೆ. ಸೈದ್ಧಾಂತಿಕ (ತಾತ್ತ್ವಿಕ) ವಿಭಾಗ ಮತ್ತು ಪ್ರಾಯೋಗಿಕ ವಿಭಾಗ ಸೈದ್ಧಾಂತಿಕ ವಿಭಾಗದಲ್ಲಿ ಶಿಕ್ಷಣತತ್ತ್ವ, ಮಕ್ಕಳ ಬೆಳೆವಣಿಗೆ, ಬಾಲಮನೋವಿಜ್ಞಾನ, ಬೋಧನಕ್ರಮ, ಶಾಲಾವ್ಯವಸ್ಥೆ, ಆರೋಗ್ಯಶಿಕ್ಷಣ-ಈ ವಿಷಯಗಳು ಸೇರಿವೆ. ಪ್ರಾಯೋಗಿಕ ವಿಭಾಗದಲ್ಲಿ ಕಸಬು, ಅಭ್ಯಾಸಾರ್ಥ ಬೋಧನಕ್ರಮ, ಸಾಮೂಹಿಕ ಜೀವನಕ್ಕೆ ಸಂಬಂಧಿಸಿದ ಚಟುವಟಿಕೆಗಳು - ಈ ವಿಷಯಗಳು ಒಳಗೊಂಡಿವೆ. ಅಭ್ಯರ್ಥಿಗಳಿಗೆ ಅದುತನಕ ದೊರೆತಿರುವ ಸಾಮಾನ್ಯಶಿಕ್ಷಣ ಸಾಲದೆಂಬ ಉದ್ದೇಶದಿಂದ ಅವರು ಮಕ್ಕಳಿಗೆ ಮುಂದೆ ಬೋಧಿಸಬೇಕಾದ ವಿಷಯಗಳನ್ನೂ ಬೋಧಿಸಲಾಗುವುದು. ಆ ಮೂಲಕ ಅವರಿಗೆ ಸಾಮಾಜಿಕ ಪರಿಜ್ಞಾನ, ಸಂಸ್ಕೃತಿಯ ದರ್ಶನ, ಸಮಾಜದ ಆಶೋತ್ತರಗಳು ಆಧುನಿಕ ಜೀವನದೃಷ್ಟಿ, ಮಾನವೀಯತೆಯ ವಿಶಾಲಭಾವನೆ - ಇವುಗಳ ಪರಿಚಯಮಾಡಿಕೊಡಲು ಸಹಕಾರಿಯಾಗುವುದೆಂದು ಆಶಿಸಿದೆ. ಪ್ರಾಯೋಗಿಕ ವಿಭಾಗದಲ್ಲಿ ಅಭ್ಯಾಸಾರ್ಥ ಪಾಠಬೋಧನೆ, ಪರಿವೀಕ್ಷಣೆ, ಪಾಠದ ಟಿಪ್ಪಣಿಯ ತಯಾರಿಕೆ - ಇವೂ ಸೇರಿರುತ್ತವೆ. ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣದಲ್ಲೂ ಬಹುಮಟ್ಟಿಗೆ ಪಠ್ಯಕ್ರಮ ಇದೇ ರೀತಿಯಲ್ಲಿದೆ. ಆದರೆ ಸೈದ್ಧಾಂತಿಕ ವಿಭಾಗದಲ್ಲಿ ಆಳವಾದ ಅಧ್ಯಯನವೂ ಕೆಲವು ನೂತನ ಅಧ್ಯಯನ ವಿಷಯಗಳೂ ಸೇರಿರುತ್ತವೆ. ಸದ್ಯದಲ್ಲಿ ಬೋಧನಾವಿಷಯವನ್ನು (ಕಂಟೆಂಟ್ಸ್‌) ಸೇರಿಸಿಲ್ಲ.

ವೃತ್ತಿಶಾಸ್ತ್ರಕ್ಕೆ ಸಂಬಂಧಿಸಿದ ತತ್ತ್ವಜ್ಞಾನವನ್ನು ಅಧ್ಯಾಪಕರ ವೃತ್ತಿಕೌಶಲವನ್ನೂ ವೃತ್ತಿಪರಿಜ್ಞಾನವನ್ನೂ ಹೆಚ್ಚಿಸಿ ಅವರು ಪರಿಣಾಮಕಾರಿಯಾಗಿ ಶಿಕ್ಷಣದಲ್ಲಿ ತೊಡಗುವಂತಾಗ ಲೆಂಬ ಉದ್ದೇಶದಿಂದ ರೂಪಿಸಿದ್ದರೂ ಅದಕ್ಕೇ ಅನಗತ್ಯವಾದ ಪ್ರಾಮುಖ್ಯ ಮೂಡಿಕೊಂಡು ಪ್ರಾಯೋಗಿಕ ಕಾರ್ಯದ ಕಡೆ ತಕ್ಕ ಷ್ಟು ಗಮನ ನೀಡದಾಗಿದೆ. ಇವೆರಡೂ ಕಾರಣಗಳಿಂದ ಅಧ್ಯಾಪಕರ ವೃತ್ತಿಶಿಕ್ಷಣ ಆಶಿಸಿದಷ್ಟು ಯಶಸ್ಸನ್ನು ಸಾಧಿಸುತ್ತಿಲ್ಲ. ಆದ್ದರಿಂದ ಆ ಬಗ್ಗೆ ಅಗತ್ಯವಾಗಿ ಕೈಕೊಳ್ಳ ಬೇಕಾದ ಕೆಲವುಮಾರ್ಪಾಡುಗಳನ್ನು ಮುಂದೆ ಸೂಚಿಸಿದೆ.

ಅಭ್ಯಾಸಾರ್ಥ ಬೋಧನೆ (ಪ್ರಾಕ್ಟೀಸ್ ಟೀಚಿಂಗ್): ಅಭ್ಯಾಸಕ್ಕಾಗಿ ಅಧ್ಯಾಪಕರ ವೃತ್ತಿಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಅಭ್ಯರ್ಥಿಯೊಬ್ಬ ನಡೆಸುವ ಪಾಠಬೋಧನೆ ಎಂಬಿಷ್ಟು ಅರ್ಥ ಮಾತ್ರ ಇದರಿಂದ ಸ್ಪಷ್ಟಪಡುವುದಾದರೂ ಇದರ ವ್ಯಾಪ್ತಿಯಲ್ಲಿ ಇತರರು ಮಾಡುವ ಪಾಠಗಳ ಪರಿಶೀಲನೆ, ಅವುಗಳ ವಿಮರ್ಶೆಗಳೂ ಸೇರಿವೆ: ಜೊತೆಗೆ, ಪಾಠಕ್ಕೆ ಅಧ್ಯಾಪಕರು ನಡೆಸುವ ಸಿದ್ಧತೆ, ಪಾಠದ ಟಿಪ್ಪಣಿಯ ತಯಾರಿಕೆಯೂ ಸೇರುತ್ತವೆ. ಆದ್ದರಿಂದ ಈಚೆಗೆ ಅಭ್ಯಾಸಾರ್ಥ ಬೋಧನೆ ಎಂಬುದಕ್ಕೆ ಬದಲಾಗಿ ವಿದ್ಯಾರ್ಥಿಬೋಧನೆ (ಸ್ಟೂಡೆಂಟ್ ಟೀಚಿಂಗ್) ಎಂಬುದು ಬಳಕೆಗೆ ಬರುತ್ತಿದೆ. ಅಲ್ಲದೆ ಅನುಭವ ಸಾಧಿಸಲು ವೃತ್ತಿಶಿಕ್ಷಣಕಾಲದಲ್ಲಿ ವಿದ್ಯಾರ್ಥಿ- ಅಧ್ಯಾಪಕ ನಡೆಸುವ ಎಲ್ಲ ಕ್ರಿಯಾತ್ಮಕ (ಪ್ರಾಯೋಗಿಕ) ಚಟುವಟಿಕೆಗಳನ್ನೂ ಈ ವಿಭಾಗದಲ್ಲಿ ಸೇರಿಸಿ ವೃತ್ತಿಶಿಕ್ಷಣದ ಈ ಭಾಗವನ್ನು ಪ್ರಾಕ್ಟಿಕಲ್ ವರ್ಕ್ ಎಂದು ಕರೆಯುವ ಹೊಸ ಸಂಪ್ರದಾಯವೂ ಆಚರಣೆಗೆ ಬರುತ್ತಿದೆ. ಆದ್ದರಿಂದ ಅವೆಲ್ಲ ಅಂಶಗಳನ್ನು ಇಲ್ಲಿ ಪರಿಶೀಲಿಸಬೇಕಾಗಿದೆ.

ವೃತ್ತಿಶಿಕ್ಷಣದ ಪಠ್ಯಕ್ರಮವನ್ನು ತತ್ತ್ವಜ್ಞಾನ (ಸೈದ್ಧಾಂತಿಕ) ಮತ್ತು ಪ್ರಾಯೋಗಿಕ ಚಟುವಟಿಕೆಗಳೆಂದು ಎರಡು ಭಾಗಮಾಡಿರುವುದು ಕೇವಲ ವಿವರಣೆಯ ಅನುಕೂಲಕ್ಕಾಗಿ ಮಾತ್ರ. ಅವೆರಡು ಒಂದನ್ನೊಂದು ಅವಲಂಬಿಸಿಕೊಂಡು, ಒಂದನ್ನೊಂದು ಪೋಷಿಸುವಂತೆ ಸಮನ್ವಯವಾಗಿ ಹೆಣೆದುಕೊಂಡೇ ಸಾಗುತ್ತವೆ. ವಿದ್ಯಾರ್ಥಿಗಳು ಪಾಠಮಾಡುವಾಗ ಅಧ್ಯಾಪಕರು ಉಪನ್ಯಾಸಗಳ ಮೂಲಕ ನೀಡಿದ ತಾತ್ತ್ವಿಕ ಜ್ಞಾನದ ಮಾರ್ಗದರ್ಶನ ನೀಡಬೇಕು; ಅಲ್ಲಿ ರೂಪುಗೊಳ್ಳುವ ತತ್ತ್ವಸಿದ್ಧಾಂತಗಳನ್ನು ಅವರು ಕಾರ್ಯಕ್ಷೇತ್ರದಲ್ಲಿ ಪರೀಕ್ಷಿಸಿ ನೋಡಬೇಕು. ಹಾಗೆಯೇ, ಕಾರ್ಯಕ್ಷೇತ್ರದಲ್ಲಿ ಎದುರು ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆ ತತ್ತ್ವಜ್ಞಾನ ನೆರವಾಗಬೇಕು.

ಇಂಗ್ಲೆಂಡಿನಲ್ಲಿ ಅಭ್ಯಾಸಾರ್ಥ ಬೋಧನೆಗಾಗಿ 12 ವಾರಗಳ ಪೂರ್ಣಕಾಲವನ್ನು ಗೊತ್ತು ಮಾಡಿರುವರು. ಅದು ಕೇವಲ ಅಭ್ಯಾಸ ಬೋಧನೆಗಾಗಿ ಎಂದು ಅರ್ಥ ಮಾಡಬೇಕಾ ಗಿಲ್ಲ. ನಿಜವಾಗಿ ಅದು ಶಿಕ್ಷಕರ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನೂ ಆಚರಿಸಿ ಅನುಭವ ಪಡೆಯುವ ಉದ್ದೇಶಕ್ಕಾಗಿ. ಈ ಅವಧಿಯಲ್ಲಿ ಅಧ್ಯಾಪಕರು ತಮ್ಮ ಕಾರ್ಯದಲ್ಲಿ ಪೂರ್ಣ ಕೌಶಲವನ್ನು ಸಾಧಿಸದಿದ್ದರೂ ಅದು ತಪ್ಪು ಮಾಡದ ಮಟ್ಟಿನ ಕನಿಷ್ಠಮಟ್ಟದ್ದಾದರೂ ಆಗಿರಬೇಕು. ಈ ದೃಷ್ಟಿಯಿಂದ ಅಭ್ಯಾಸಾರ್ಥ ಬೋಧನೆಯ ಉದ್ದೇಶ ಗಳನ್ನು ಪರಿಶೀಲಿಸಿದರೆ, ಅಭ್ಯರ್ಥಿಗಳಿಗೆ ತಾವು ಕೆಲಸಮಾಡಬೇಕಾಗಿರುವ ಸನ್ನಿವೇಶಗಳ ಸಾಮಾಜಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಪರಿಚಯಮಾಡಿಕೊಟ್ಟು ಮಕ್ಕಳ ಜೀವನದಲ್ಲಿ ಆಸಕ್ತಿ ಮೂಡಿಸಿ ಬೋಧನಕ್ರಮ ಮತ್ತು ಮನೋವಿಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು: ಆ ವಿದ್ಯಾರ್ಥಿಗಳ ಶಿಕ್ಷಣದ ಗುರಿಯನ್ನು ಸ್ಪಷ್ಟಪಡಿಸಿ ಆ ಗುರಿಯನ್ನು ಸಾಧಿಸಲು ಪುರಕವಾಗುವಂಥ ಸ್ಪಷ್ಟವೂ ಮೂರ್ತ ಸ್ವರೂಪದ್ದೂ ಆದ ನಿದರ್ಶನ, ಸಾಕ್ಷ್ಯ ಮತ್ತು ಉದಾಹರಣೆಗಳ ಮೂಲಕ ತತ್ತ್ವಜ್ಞಾನಕ್ಕೂ ಅನುಷ್ಠಾನಕ್ಕೂ ಪರಸ್ಪರ ಹೊಂದಾಣಿಕೆ ಯನ್ನು ಮೂಡಿಸುವುದು - ಇವೆಲ್ಲ ಸೇರುತ್ತವೆಂಬುದು ಸ್ಪಷ್ಟಪಡುತ್ತದೆ.

ವೃತ್ತಿಶಿಕ್ಷಣಕ್ಕೆ ಬರತಕ್ಕ ಅಭ್ಯರ್ಥಿಗಳು ಅಲ್ಲಿನ ಅಧ್ಯಾಪಕರೂ ಅಭ್ಯಾಸಾರ್ಥ ಪಾಠ ಬೋಧನೆಯ ಪ್ರಾಮುಖ್ಯವನ್ನು ಚೆನ್ನಾಗಿ ಮನಗಂಡಿರುವರು. ಆದ್ದರಿಂದಲೇ ಒಂದು (ಅಥವಾ ಎರಡು) ವರ್ಷಗಳ ವೃತ್ತಿಶಿಕ್ಷಣದಲ್ಲಿ ಅದಕ್ಕೆ ಅರ್ಧ ಕಾಲಾವಧಿಯನ್ನು ಮೀಸಲಿಡಲಾಗಿದೆ. ಉಪನ್ಯಾಸಗಳ ಮೂಲಕ ಅಭ್ಯರ್ಥಿಗಳಿಗೆ ಪರಿಚಯ ಮಾಡಿಕೊಡುವ ತತ್ತ್ವಜ್ಞಾನದ ವಿಷಯದಲ್ಲಿ ಅಂಥ ವ್ಯತ್ಯಾಸಗಳು ಕಂಡುಬರದಿದ್ದರೂ ಅಭ್ಯಾಸಾರ್ಥ ಬೋಧನೆಯಲ್ಲಿ ವಿವಿಧರೀತಿಯ ಕಾರ್ಯ ಯೋಜನೆಗಳು ಪ್ರಚಾರದಲ್ಲಿವೆ. ಎಲ್ಲ ಕಡೆಯೂ ಸಾಮಾನ್ಯವಾಗಿ ಬಳಕೆಯಲ್ಲಿರುವ ರೂಪದಲ್ಲಿ ಅಭ್ಯಾಸಾರ್ಥ ಬೋಧನೆ ಕೆಳಗಿನ ಕಾರ್ಯಕ್ರಮಗಳನ್ನೊಳಗೊಂಡಿರುತ್ತದೆ.

  1. ಅಧ್ಯಾಪಕರ ಅಥವಾ ಶಾಲೆಯ ಹಿರಿಯ ಅಧ್ಯಾಪಕರೊಬ್ಬರ ಮೇಲ್ವಿಚಾರಣೆಯಲ್ಲಿ ನಿರ್ದಿಷ್ಟಗೊಳಿಸಿರುವಷ್ಟು ಸಂಖ್ಯೆಯ ಪಾಠಗಳನ್ನು ಮಾಡುವುದು, ಕೆಲವು ಕಡೆ ಎರಡು ವಿಷಯಗಳಲ್ಲಿ ಇನ್ನು ಕೆಲವು ಕಡೆ ಮೂರು ಅಥವಾ ಹೆಚ್ಚು ವಿಷಯಗಳಲ್ಲಿ ಪಾಠಮಾಡುವು ದುಂಟು; ಮಾಡಬೇಕಾದ ಪಾಠಗಳ ಪ್ರತಿವಿಷಯದಲ್ಲೂ ಒಟ್ಟು ಸಂಖ್ಯೆಯಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಅದು 8ರಿಂದ50ರ ವರೆಗೂ ಇರಬಹುದು.
  2. ಪಾಠ ಪರಿವೀಕ್ಷಣೆ, ಇತರ ವಿದ್ಯಾರ್ಥಿಗಳು ಮಾಡುವ ಪಾಠವನ್ನು ನೋಡಿ ವಿಮರ್ಶಿಸುವ ಕಾರ್ಯ ಎಲ್ಲ ಕಡೆಯೂ ಕಂಡುಬಂದರೂ ಅದಕ್ಕಾಗಿ ಪ್ರತಿವಿಷಯಕ್ಕೂ ನಿಗದಿಯಾಗಿರುವ ಪಾಠಗಳ ಸಂಖ್ಯೆಯಲ್ಲಿ ವ್ಯತ್ಯಾಸವುಂಟು. ಅದು 5 ರಿಂದ 50ರ ವರೆಗೂ ವ್ಯತ್ಯಾಸವಾಗುವುದು.
  3. ಮಾದರಿ ಅಥವಾ ನಿದರ್ಶನ ಪಾಠಗಳಿಗೆ ಹಾಜರಾಗುವುದು. ಅಭ್ಯರ್ಥಿಗಳೆಲ್ಲ ಕಾಲೇಜಿನ ಅಧ್ಯಾಪಕರು ಅಥವಾ ಇತರ ಹಿರಿಯ ಅಧ್ಯಾಪಕರು ನೀಡುವ ನಿದರ್ಶನ ಪಾಠವನ್ನು ನೋಡುವರು. ಅನೇಕ ಕಡೆ ಪ್ರತಿವಿಷಯದಲ್ಲೂ ಎರಡು ಪಾಠಗಳನ್ನು ನೀಡುವುದುಂಟು: ವರ್ಷದ ಆದಿಯಲ್ಲಿ ಒಂದು; ಅಂತ್ಯದಲ್ಲಿ ಇನ್ನೊಂದು. ಮೇಲಿನ ಕಾರ್ಯಕ್ರಮಗಳ ಜೊತೆಗೆ ಕೆಲವು ಕಾಲೇಜುಗಳಲ್ಲಿ ವಿಮರ್ಶಾ ಪಾಠಗಳನ್ನು ಏರ್ಪಡಿಸುವುದುಂಟು; ಸಹಪಠ್ಯ ಚಟುವಟಿಕೆಯಲ್ಲಿ ಪಾತ್ರವಹಿಸುವುದನ್ನೂ ನಿಗದಿಮಾಡಿರುವು ದುಂಟು; ಹಂಚಿಕೆ ಹಾಕಿಕೊಡುವ ಕಾರ್ಯವನ್ನು ಸೇರಿಸಿರುವುದುಂಟು.

ಪಾಠಬೋಧನೆ ಬದಲಾಯಿಸಿ

ಅಭ್ಯಾಸಬೋಧನೆಗೆ ಗೊತ್ತುಮಾಡಿರುವ ಪಾಠಭಾಗವನ್ನು ಮೊದಲು ಅಭ್ಯರ್ಥಿಗಳು ಪರಿಚಯಮಾಡಿಕೊಂಡು ಅದನ್ನು ಪಾಠಭಾಗಗಳನ್ನಾಗಿ ವಿಂಗಡಿಸಿಕೊಳ್ಳುವರು, ತಮ್ಮ ಪಾಠಕ್ಕೆ ಗೊತ್ತು ಮಾಡಿರುವ ಶಾಲೆಗೆ ಹೋಗಿ ತರಗತಿಯನ್ನು ಪರಿಚಯಮಾಡಿ ಕೊಳ್ಳುವರು, ಪಾಠಬೋಧನೆ ಇರುವ ದಿನ ಆ ಪಾಠ ಭಾಗಕ್ಕೆ ಸಿದ್ಧತೆಯ ರೂಪದಲ್ಲಿ ವಿವರವಾದ ಟಿಪ್ಪಣಿಯೊಂದನ್ನು ಬರೆದುಕೊಳ್ಳುವರು. ಅದನ್ನು ಕಾಲೇಜಿನ ಅಧ್ಯಾಪಕರು ನೋಡಿ ಅಗತ್ಯವಾದ ಮಾರ್ಪಾಟುಗಳನ್ನು ಮಾಡಿಕೊಡುವರು. ತಿದ್ದಿದ ಆ ಟಿಪ್ಪಣಿಯನ್ನು ಆಧಾರ ಮಾಡಿಕೊಂಡು ವಿದ್ಯಾರ್ಥಿ, ಅಧ್ಯಾಪಕರು ಅಭ್ಯಾಸಬೋಧನೆಯನ್ನು ನಡೆಸುವರು; ಕಾಲೇಜಿಗೆ ಸಂಬಂಧಿಸಿದ ಅಧ್ಯಾಪಕರೂ ಬಂದು ವೀಕ್ಷಿಸುವರು, ಪಾಠಮುಗಿದ ಮೇಲೆ ಅವರೆಲ್ಲ ಒಂದಡೆ ಕುಳಿತು ಪಾಠದ ಗುಣದೋಷಗಳನ್ನು ವಿಮರ್ಶಿಸುವರು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳೆರಡರಲ್ಲೂ ಈ ರೀತಿಯ ಕಾರ್ಯಕ್ರಮ ಕಂಡುಬರುತ್ತದೆ.

ಮೇಲಿನ ಕಾರ್ಯಚಟುವಟಿಕೆಗಳ ಜೊತೆಗೆ ಉಪಕರಣಗಳ ತಯಾರಿಕೆ, ನೂತನ ಪರೀಕ್ಷಣಗಳ ರಚನೆ ಮತ್ತು ಪ್ರಯೋಗ, ಪಠ್ಯವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತ ಯೋಜನೆಗಳ (ಉದ್ಯಮ, ಪ್ರಾಜೆಕ್ಟ್‌)ರಚನೆ, ಶೈಕ್ಷಣಿಕ ಪ್ರಯೋಗ, ಪೌರಶಿಕ್ಷಣ ಶಿಬಿರ, ರಾಷ್ಟ್ರೀಯ ಸೇನಾ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮಗಳು - ಇವೆಲ್ಲ ಸೇರಿರುವುದುಂಟು.

ಕೆಲವು ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸಾರ್ಥ ಬೋಧನೆ ಆರಂಭವಾಗುವ ಮುನ್ನ ಅಭ್ಯರ್ಥಿಗಳು ಅಭ್ಯಾಸಾರ್ಥ ಬೋಧನೆಗೆಂದು ಗೊತ್ತು ಮಾಡಿರುವ ಪಾಠಶಾಲೆಯಲ್ಲಿ ಹಿರಿಯ ಅಧ್ಯಾಪಕರು ಮಾಡುವ ಪಾಠಗಳನ್ನು ನೋಡಿ ಅನುಭವ ಪಡೆಯುವುದುಂಟು. ಇದರಿಂದ ಅನುಕೂಲಗಳಂತೆ ಅನನುಕೂಲಗಳೂ ಇವೆಯೆಂಬುದು ಸ್ಪಷ್ಟಪಟ್ಟಿರುವುದರಿಂದ ಈಚೆಗೆ ಇದನ್ನು ಕೈಬಿಡಲಾಗುತ್ತಿದೆ. ಅನೇಕ ದೇಶಗಳಲ್ಲಿ ಅಭ್ಯಾಸಬೋಧನೆಗಾಗಿ ಹನ್ನೆರಡು ವಾರಗಳನ್ನು ಗೊತ್ತುಮಾಡಿದ್ದರೂ ಆ ಕಾಲವನ್ನು ಬಳಸಿಕೊಳ್ಳುವ ರೀತಿಯಲ್ಲಿ ಎರಡು ಮೂರು ಮುಖ್ಯ ಪ್ರವೃತ್ತಿಗಳು ಕಂಡುಬರುತ್ತವೆ. ಪ್ರತಿ ಅಭ್ಯರ್ಥಿಯೂ ಹನ್ನೆರಡು ವಾರಗಳ ತನಕ ಒಂದೇ ಸಮನೆ ಒಂದು ಶಾಲೆಯಲ್ಲಿ ಪಾಠಮಾಡುವ ಒತ್ತಂಡದ ಅಭ್ಯಾಸಾರ್ಥ ಬೋಧನೆ (ಬ್ಲಾಕ್ ಪ್ರಾಕ್ಟೀಸ್) ಒಂದು ವಿಧ; ವಾರಕ್ಕೆ ಎರಡು ದಿನ ಎರಡು ಪಾಠಗಳನ್ನು ಮಾತ್ರ ಮಾಡುತ್ತ ಅದನ್ನು ವರ್ಷವೆಲ್ಲ ನಡೆಸಿಕೊಂಡು ಹೋಗುವ ಹರಡಿಕೆಯ ಪದ್ಧತಿ (ಸ್ಟ್ರೆಡ್ ಸಿಸ್ಟಂ) ಇನ್ನೊಂದು ವಿಧ. ಒತ್ತಂಡದ ಪದ್ಧತಿಯನ್ನು ಅನುಸರಿಸುವವರು ವರ್ಷದ ಮಧ್ಯಭಾಗವನ್ನು ಆ ಕಾರ್ಯಕ್ಕಾಗಿ ಬಳಸುವರು. ಒಂದೇ ಶಾಲೆಯಲ್ಲಿ ಅಭ್ಯರ್ಥಿ ಅನೇಕ ವಾರಗಳ ತನಕ ಪಾಠಮಾಡುವುದರಿಂದ ಅವನ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿಯಿಂದಿದ್ದು ನಿಜವಾದ ಶಿಕ್ಷಣ ಸಾಧಿಸುವರೆಂದೂ ತರಗತಿಯ ನಿಜವಾದ ಅಧ್ಯಾಪಕರಾಗಿದ್ದುಕೊಂಡು ಅವರೂ ತಮ್ಮ ಕಾರ್ಯವನ್ನು ವಾಸ್ತವಿಕ ಸನ್ನಿವೇಶಗಳಲ್ಲಿ ನಡೆಸಿ ಆಗ ಮೂಡಬಹುದಾದ ಸಮಸ್ಯೆಗಳನ್ನು ಎದುರಿಸಿ ಒಳ್ಳೆಯ ಅನುಭವ ಪಡೆಯುವರೆಂದೂ ಕೆಲವರು ವಾದಿಸುವರು. ಈ ಪದ್ಧತಿಗೆ ಪರ್ಯಾಯವಾಗಿ ಅನುಸರಿಸುವ ಹರಡಿಕೆಯ ಪದ್ಧತಿಯಲ್ಲಿ ವಾರಕ್ಕೊಂದು ಅಥವಾ ಎರಡುಸಲ ವಿದ್ಯಾರ್ಥಿಗಳನ್ನು ಸಂಧಿಸಿ ಪಾಠಮಾಡುವಾಗ ಅವರನ್ನು ಪರಿಚಯಮಾಡಿ ಕೊಂಡು ಅವರಲ್ಲಿ ಕಲಿವಿನ ಮನೋಭಾವವನ್ನು ಮೂಡಿಸುವುದಾಗಲಿ ತಾವು ಶಾಲೆಯಲ್ಲಿ ನಿಜವಾದ ಅನುಭವವನ್ನು ಪಡೆಯುವುದಾಗಲಿ ಅಸಾಧ್ಯವಾಗುವುದೆಂದು ಕೆಲವರು ವಾದಿಸುವರು. ಈಚೆಗೆ ಈ ಎರಡು ಪದ್ಧತಿಗಳಿಗೂ ಮಧ್ಯಸ್ಥವೆನ್ನುವ ಒಂದು ಸಂಯೋಜಿತ ಪದ್ಧತಿ ಆಚರಣೆಗೆ ಬರುತ್ತಿದೆ. ವರ್ಷವೆಲ್ಲ ವಾರಕ್ಕೆ ಎರಡು ದಿನಗಳಂತೆ ಅಧ್ಯಾಪಕರ ಮೇಲ್ವಿಚಾರಣೆಗೆ ಬರುತ್ತಿದೆ. ವರ್ಷವೆಲ್ಲ ವಾರಕ್ಕೆ ಎರಡು ದಿನಗಳಂತೆ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಹರಡಿಕೊಂಡು ಪಾಠಮಾಡುವ ಪದ್ಧತಿಯೊಡನೆ ಮಧ್ಯೆ ಆರು ವಾರಗಳ ಒತ್ತಂಡದ ಅಭ್ಯಾಸ ಬೋಧನೆಯನ್ನು ಏರ್ಪಡಿಸಿಕೊಳ್ಳುವುದರಿಂದ ಅವೆರಡರ ಉತ್ತಮ ಪ್ರತಿಫಲಗಳೂ ದೊರಕುವಂತಾಗುತ್ತದೆ. ಈ ಸಮ್ಮಿಶ್ರ ಪದ್ಧತಿಯಲ್ಲೂ ಬಗೆ ಬಗೆಯ ವಿಧಗಳುಂಟು. ಕಾಲಕಳೆದಂತೆ ಅವುಗಳಲ್ಲಿ ಯಾವುದು ಉತ್ತಮ ವಿಧಾನವೆಂಬುದು ಸ್ಪಷ್ಟಪಡಬೇಕಾಗಿದೆ.

ಲೋಪದೋಷಗಳು ಬದಲಾಯಿಸಿ

ಪೂರ್ವಸಿದ್ಧತೆ, ಅಧ್ಯಾಪಕರ ಸಲಹೆ, ಅಭ್ಯರ್ಥಿಯ ಎಚ್ಚರಿಕೆಯ ತರಗತಿಯ ನಿರ್ವಹಣೆ, ಸಹಪಾಠಿಗಳ ಮತ್ತು ಅಧ್ಯಾಪಕರ ಟೀಕೆ ಮತ್ತು ಸಲಹೆ-ಇಷ್ಟೆಲ್ಲ ಕ್ರಮವಾಗಿ ನಿಷ್ಠೆಯಿಂದ ನಡೆಯುತ್ತಿದ್ದರೂ ಅಭ್ಯರ್ಥಿಗೆ ದೊರಕುವ ಪ್ರಾಯೋಗಿಕ ಅನುಭವ ಫಲಕಾರಿಯಾಗುತ್ತಿಲ್ಲವೆಂಬ ಟೀಕೆ ಕೇಳಿಬರುತ್ತಿದೆ. ವೃತ್ತಿ ಶಿಕ್ಷಣವನ್ನು ಮುಗಿಸಿಕೊಂಡು ಶಾಲೆಯಲ್ಲಿ ಕೆಲಸಕ್ಕೆ ಬರುವ ಅಭ್ಯರ್ಥಿಗಳು ಕೂಡ ತೃಪ್ತಿ ವ್ಯಕ್ತಪಡಿಸುತ್ತಿಲ್ಲ. ಅವರು ವೃತ್ತಿಶಿಕ್ಷಣ ಸಂಸ್ಥೆಯಲ್ಲಿ ಕಲಿತ ಬೋಧನಕ್ರಮಗಳೆಲ್ಲ ತಮ್ಮ ಶಾಲೆಯಲ್ಲಿ ಪ್ರಯೋಜನಕ್ಕೆ ಬಾರದಾಗಿವೆ ಎಂದು ಕೊಳ್ಳುವುದುಂಟು. ನಿಜ, ಇದಕ್ಕೆ ವೃತ್ತಿಶಿಕ್ಷಣ ಸಂಸ್ಥೆಗಳು ಪ್ರತಿ ಹೇಳುವಂತಿಲ್ಲ. ಅಲ್ಲಿ ಬೋಧಿಸುವ ವೃತ್ತಿಯ ತಾತ್ತ್ವಿಕ ಜ್ಞಾನಕ್ಕೂ ಶಾಲೆಗಳಲ್ಲಿ ಇರತಕ್ಕ ಸನ್ನಿವೇಶಗಳಿಗೂ ಹೊಂದಿಕೆಯಾಗುತ್ತಿಲ್ಲ. ಆದ್ದರಿಂದ ಪ್ರಾಥಮಿಕ ಅಥವಾ ಪ್ರೌಢಶಾಲೆಯ ಅಧ್ಯಾಪಕರು ತಾವು ಕಲಿತ ಜ್ಞಾನವನ್ನು ಮುಂದೆ ತಮ್ಮ ವೃತ್ತಿಯಲ್ಲಿ ಬಳಸಿಕೊಳ್ಳದಾಗುವರು. ಬಹಳ ಮಟ್ಟಿಗೆ ವೃತ್ತಿಶಿಕ್ಷಣ ಸಂಸ್ಥೆಗಳು ಬೋಧಿಸುವುದೆಲ್ಲ ಇಂಗ್ಲೆಂಡು ಅಮೆರಿಕಗಳಲ್ಲಿ ಮುದ್ರಣವಾದ ಗ್ರಂಥಗಳಿಂದ. ಆ ಪರಿಜ್ಞಾನ ಭಾರತದ ಪಾಠಶಾಲೆಗಳ ಸನ್ನಿವೇಶಗಳಿಗೆ ಹೊಂದದಿರುವುದೇ ಮೇಲಿನ ಲೋಪದೋಷಗಳಿಗೆ ಮುಖ್ಯ ಕಾರಣವೆನ್ನಬೇಕು. ಆದ್ದರಿಂದ ಅನುಷ್ಠಾನಕ್ಕೆ ನಿಜವಾಗಿಯೂ ನೆರವಾಗುವಂಥ ಜ್ಞಾನವನ್ನೊಳಗೊಂಡಂತೆ ವೃತ್ತಿಶಿಕ್ಷಣದ ಪಠ್ಯಕ್ರಮವನ್ನು ಪುನಃ ವ್ಯವಸ್ಥೆಗೊಳಿಸುವುದು ಅಗತ್ಯವಾಗುತ್ತದೆ. ಜೊತೆಗೆ ಇಲ್ಲಿನ ಸನ್ನಿವೇಶಕ್ಕೊಪ್ಪುವಂಥ ಪುಸ್ತಕಗಳ ರಚನೆಯೂ ಅಗತ್ಯವಾಗಿ ಆಗಬೇಕು.

ಆಧುನಿಕ ಜೀವನದಂತೆ ಇಂದಿನ ಶಾಲೆಯ ಕೆಲಸಕಾರ್ಯಗಳು ಹೆಚ್ಚಿರುವುದೂ ಅಲ್ಲದೆ ಸಂಕೀರ್ಣಸ್ವರೂಪವನ್ನೂ ತಾಳಿವೆ. ವೃತ್ತಿಶಿಕ್ಷಣಸಂಸ್ಥೆಗಳು, ಅಧ್ಯಾಪಕರು ಅಂಥ ಶಾಲೆಗಳಲ್ಲಿ ಕೆಲಸಮಾಡಲು ಅಗತ್ಯವೆನಿಸುವ ವಿವಿಧ ಅನುಭವಗಳನ್ನು ಅಭ್ಯರ್ಥಿಗಳಿಗೆ ಒದಗಿಸುತ್ತಿಲ್ಲ ಎಂಬುದು ಮತ್ತೊಂದು ಕೊರತೆ. ತರಗತಿಯ ಬೋಧನೆ ಅಧ್ಯಾಪಕರ ಹಲವಾರು ಹೊಣೆಗಾರಿಕೆಗಳಲ್ಲೊಂದು ಮಾತ್ರ. ಶಾಲೆಯ ಇತರ ಕಾರ್ಯಗಳಲ್ಲಿ ಅವರು ಪಾತ್ರವಹಿಸಬೇಕು. ಆಡಳಿತನೀತಿಯನ್ನು ರೂಪಿಸುವುದರಲ್ಲೂ ಅವರ ಪಾತ್ರ ಇಲ್ಲದೇ ಇಲ್ಲ: ಶಾಲೆ ಇರುವ ಸಮಾಜಜೀವನದಲ್ಲೂ ಅವರು ಪಾತ್ರವಹಿಸಬೇಕಾಗುತ್ತದೆ. ಆದ್ದರಿಂದ ಆ ಅನುಭವಗಳೆಲ್ಲ ದೊರಕುವಂತೆ ವೃತ್ತಿಶಿಕ್ಷಣ ಸಂಸ್ಥೆಗಳು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಂಥ ಕಾರ್ಯಗಳಲ್ಲಿ ಮುಖ್ಯವಾದವನ್ನು ಇಲ್ಲಿ ಉಲ್ಲೇಖಿಸಿದೆ:

1. ಅಭ್ಯಾಸಬೋಧನೆ,

2. ಮಕ್ಕಳ ಮತ್ತು ಪಾಠಗಳ ಪರಿವೀಕ್ಷಣೆ,

3. ವಿಮರ್ಶಾತ್ಮಕ ಪಾಠಬೋಧನೆ,

4. ಬೇರೆ ಬೇರೆ ಅಂತಸ್ತುಗಳ ಮತ್ತು ವಿಧಗಳ ಪಾಠಶಾಲೆಗಳ ಪರಿಶೀಲನೆ,

5. ಶಾಲೆಯ ಮಕ್ಕಳಿಗೆ ಮನೆಗೆಲಸ ಕೊಟ್ಟು ಅವರು ಮಾಡಿತೋರಿಸಿದ ಕೆಲಸಗಳನ್ನು ತಿದ್ದಿಕೊಡುವುದು,

6. ಸಹಪಠ್ಯಚಟುವಟಿಕೆಗಳ ವ್ಯವಸ್ಥೆ ಮತ್ತು ನಿರ್ವಹಣೆ,

7. ಶಾಲೆಯ ಪಠ್ಯವಿಷಯಗಳನ್ನು ಕುರಿತ ಪರೀಕ್ಷಾಪತ್ರಿಕಗಳ ತಯಾರಿಕೆ ಮತ್ತು ಉತ್ತರಪತ್ರಿಕೆಗಳ ಮೌಲ್ಯ ನಿರ್ಣಯ.

8. ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಅಧ್ಯಯನ ನಡೆಸುವುದು (ಕೇಸ್ ಸ್ಟಡಿ),

9. ಕಪ್ಪು ಹಲಗೆಯ ಮೇಲೆ ಬರೆಯುವ ಕಾರ್ಯ,

10. ತರಗತಿಯ ಮಕ್ಕಳ ಗುಂಪುಗಳ ಜೀವನಕ್ಕೆ ಸಂಬಂಧಿಸಿದಂತೆ ಸಮಾಜಮಿತಿಯ ಅಧ್ಯಯನ ನಡೆಸುವುದು,

11. ವಿಜ್ಞಾನದ ಅಧ್ಯಾಪಕರಿಗೆ ಪ್ರಯೋಗಮಂದಿರದ ಅನುಭವ,

12. ಶಾಲೆಯಲ್ಲಿ ಬೋಧಿಸುವ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗ ಕಾರ್ಯಗಳಲ್ಲಿ ಅನುಭವ,

13. ಪಾಠೋಪಕರಣಗಳನ್ನು ರೂಪಿಸಿಕೊಂಡು ಬಳಸುವುದು,

14. ಕೆಲವು ಮುಖ್ಯ ಶ್ರವ್ಯ - ದೃಶ್ಯೋಪಕರಣಗಳನ್ನು ಬಳಸುವುದು,

15. ರೇಡಿಯೊ (ಮತ್ತು ಟೆಲಿವಿಷನ್) ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳುವುದು - ಇತ್ಯಾದಿ.

ಈ ಎಲ್ಲ ಅನುಭವಗಳನ್ನೂ ಎಲ್ಲ ಅಭ್ಯರ್ಥಿಗಳಿಗೂ ಕೊಡುವುದು ಅಸಾಧ್ಯವೆನಿಸಬಹುದು. ಅವುಗಳಲ್ಲಿ ಕೆಲವು ಅನುಭವಗಳು ಕೆಲವರಿಗೆ ಆಗಲೇ ಆಗಿರಬಹುದು, ಮಿಕ್ಕ ಅನುಭವಗಳನ್ನು ಅಂಥವರಿಗೆ ಒದಗಿಸಬೇಕಾಗುತ್ತದೆ. ವೃತ್ತಿಶಿಕ್ಷಣಸಂಸ್ಥೆ ಆರಂಭವಾದ ಕೆಲವು ದಿನಗಳವರೆಗೆ ಸಾಮಾನ್ಯವಾಗಿ ಅಭ್ಯಾಸಾರ್ಥ ಬೋಧನೆ ಆರಂಭವಾಗಲಾರದು, ಆ ಮಧ್ಯಕಾಲದಲ್ಲಿ ಮೇಲೆ ಸೂಚಿಸಿದ ಹಲವು ಅನುಭವಗಳನ್ನು ಅಗತ್ಯವಿರುವಲ್ಲಿ ದೊರಕಿಸಬಹುದು. ಮಿಕ್ಕವನ್ನು ಅಭ್ಯಾಸಾರ್ಥಪಾಠ ಬೋಧನೆಯ ಅಂಗವಾಗಿ ದೊರಕುವಂತೆ ವ್ಯವಸ್ಥೆಗೊಳಿಸಬಹುದು.

ಅಭ್ಯಾಸಬೋಧನೆ ಪರಿಣಾಮಕಾರಿಯಾಗುವಂತೆ ಮಾಡಲು ಅದರ ವ್ಯವಸ್ಥೆಗೆ ಸಂಬಂಧಿಸಿದ ಕೆಲವಂಶಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಅಭ್ಯಾಸ ಬೋಧನೆಯನ್ನು ವರ್ಷದ ಆರಂಭದಲ್ಲೇ ಮೊದಲು ಮಾಡದೆ ವಿದ್ಯಾರ್ಥಿಗಳು ತಾವು ಬೋಧಿಸಬೇಕಾದ ಶಾಲೆ, ಅದರ ಸುತ್ತಣ ಸಮಾಜದ ಸ್ವರೂಪ, ಅಲ್ಲಿನ ಅಧ್ಯಾಪಕರ ಮತ್ತು ಪಠ್ಯಕ್ರಮದ ಪರಿಚಯ - ಇವನ್ನೆಲ್ಲ ಮಾಡಿಕೊಂಡಮೇಲೆ ಆರಂಭಿಸಬೇಕು. ಅಭ್ಯಾಸಬೋಧನೆಯ ಯಶಸ್ಸು ಆ ಶಾಲೆ ಮತ್ತು ವೃತ್ತಿಶಿಕ್ಷಣಸಂಸ್ಥೆ ಇವೆರಡಕ್ಕೂ ಸೇರಿದ ಹೊಣೆಗಾರಿಕೆಯೆಂಬುದನ್ನು ಸಂಬಂಧಿಸಿದವರು ಮನಗಂಡು ತಕ್ಕಂತೆ ನಡೆದುಕೊಳ್ಳಬೇಕು. ಅಲ್ಲಿ ಪಾಠಬೋಧನೆಗೆ ಸೂಕ್ತ ಸನ್ನಿವೇಶವನ್ನು ದೊರಕಿಸಿಕೊಡುವುದು. ಶಾಲೆಗೆ ಸೇರಿದ್ದು, ಅಭ್ಯಾಸಪಾಠಮಾಡತಕ್ಕ ಅಭ್ಯರ್ಥಿಗಳಿಗೆ ಸೂಕ್ತ ನಿರ್ದೇಶನ ನೀಡುವುದು ವೃತ್ತಿಶಿಕ್ಷಣ ಸಂಸ್ಥೆಯ ಮತ್ತು ಶಾಲೆಯ ಹಿರಿಯ ಅಧ್ಯಾಪಕರುಗಳಿಗೆ ಸೇರಿದ್ದು, ಅಭ್ಯಾಸಾರ್ಥ ಬೋಧನೆ ನಿಜವಾಗಿಯೂ ಪರಿಣಾಮಕಾರಿಯಾಗಬೇಕಾದರೆ ಇವೆರಡು ಮುಖಗಳೂ ಸಹಕರಿಸಿ ನಡೆದುಕೊಳ್ಳುವುದು ಅಗತ್ಯ. ಅಭ್ಯಾಸಾರ್ಥ ಬೋಧನೆಗಾಗಿ ಶಾಲೆಯನ್ನು ಆರಿಸಿಕೊಳ್ಳುವಾಗ ಬಹುಮಂದಿ ವಿದ್ಯಾರ್ಥಿಗಳನ್ನು ಒಂದೇ ಶಾಲೆಗೆ ಕಳುಹಿಸುವುದರ ಬದಲು ಆಯಾ ವಿದ್ಯಾರ್ಥಿಬೋಧಿಸಲಿ ರುವ ವಿಷಯದ ಪರಿಗಣನೆಯ ಮೇಲೆ ಹಲವಾರು ಶಾಲೆಗಳಿಗೆ ಹಂಚಬೇಕು. ಸಾಮಾನ್ಯವಾಗಿ ಅಭ್ಯಾಸಾರ್ಥಬೋಧನೆಗೆ ಬರತಕ್ಕವರಿಂದ ತಮಗೆ ಅನಿವಾರ್ಯತೊಂದರೆ ಆಗುವುದೆಂದು ಅನೇಕ ಶಾಲೆಗಳು ಭಾವಿಸುವುದುಂಟು. ಹೀಗಿರುವಲ್ಲಿ ಒಂದೇ ಶಾಲೆಗೆ ಅಧಿಕಮಂದಿಯನ್ನು ಕಳಿಸುವುದು ಉಚಿತವೆನಿಸಲಾರದು. ಅದಕ್ಕಾಗಿ ವಿದ್ಯಾರ್ಥಿ-ಅಧ್ಯಾಪಕರನ್ನು ಬೇರೆ ಬೇರೆ ಶಾಲೆಗಳಿಗೆ ಮಿತವಾಗಿ ಹಂಚಬೇಕು. ಆರಿಸಿಕೊಳ್ಳತಕ್ಕ ಶಾಲೆಗಳಲ್ಲಿ ಅಭ್ಯಾಸಾರ್ಥ ಬೋಧನೆಗೆ ಅಗತ್ಯ ಸನ್ನಿವೇಶಗಳೂ ಉಪಕರಣಾದಿಗಳೂ ಅಗತ್ಯ. ಆದ್ದರಿಂದ ಅಂಥ ಶಾಲೆಗಳಿಗೆ ಆಡಳಿತವರ್ಗದವರು ಅಥವಾ ಶಿಕ್ಷಣಶಾಖೆಯವರು ತಕ್ಕ ಷ್ಟು ಅನುಕೂಲಗಳನ್ನು ಕಲ್ಪಿಸಿಕೊಡ ಬೇಕು.

ಅಭ್ಯಾಸಾರ್ಥ ಬೋಧನೆಯ ಕಾಲಾವಧಿ ಸ್ಥೂಲವಾಗಿ 12 ವಾರಗಳಿಗೆ ಕಡಿಮೆಯಿರಬಾರದೆಂದು ಹೇಳಿದ್ದರೂ ಭಾರತದ ಅನೇಕ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಒತ್ತಂಡ ಪದ್ಧತಿಯನ್ನು ಪೂರ್ಣವಾಗಿ ಅನುಸರಿಸದ ಸಂಸ್ಥೆಗಳು ಬೇರೆ ಬೇರೆ ಕಾಲಾವಧಿಯನ್ನು ನಿಷ್ಕರ್ಷೆ ಮಾಡಿಕೊಂಡಿವೆ. ಸಮಾನ್ಯವಾಗಿ ವರ್ಷವೆಲ್ಲ ಹರಡಿಕೊಂಡು ವಾರಕ್ಕೆರಡು ದಿನ ಪಾಠ ಮಾಡುವುದರ ಜೊತೆಗೆ ಎರಡು ವಾರದೊತ್ತಂಡದ ಅಭ್ಯಾಸಾರ್ಥ ಬೋಧನೆಗೂ ಅವಕಾಶ ಕಲ್ಪಿಸಿಕೊಂಡಿವೆ. ಈ ಅಲ್ಪ ಕಾಲಾವಧಿಯಲ್ಲಿ ವಿದ್ಯಾರ್ಥಿ ಆ ನೂತನ ಸನ್ನಿವೇಶಕ್ಕೆ ಹೊಂದಿ ಕೊಂಡು ಅಲ್ಲಿನ ಮಕ್ಕಳನ್ನೂ ಅಧ್ಯಾಪಕರನ್ನೂ ಪರಿಚಯ ಮಾಡಿಕೊಂಡು ಉದ್ದೇಶಿಸಿದ ಅನುಭವಗಳನ್ನು ಸಾಧಿಸುವುದು ಅಸಾಧ್ಯವಾಗುತ್ತದೆ. ಆ ಬಗ್ಗೆ ಎನ್.ಸಿ.ಇ.ಆರ್.ಟಿ. ನೇಮಿಸಿದ್ದ ರಾಷ್ಟ್ರೀಯ ಮಟ್ಟದ ಅಧ್ಯಯನ ತಂಡವೊಂದು ಅದಕ್ಕಾಗಿ 8-12 ವಾರಗಳಾದರೂ ಅಗತ್ಯವೆಂದು ಸೂಚಿಸಿ, ಆ ಕಾಲದಲ್ಲಿ ಅಭ್ಯಾಸಿ ಅಧ್ಯಾಪಕರು ಆ ಶಾಲೆಯ ಅಧ್ಯಾಪಕರ ಕೆಲಸದ ಹೊರೆಯಲ್ಲಿ ಅರ್ಧದಷ್ಟನ್ನಾದರೂ ನಿರ್ವಹಿಸಬೇಕೆಂದು ಸೂಚಿಸಿದೆ. ಅಂದು ಮಾತ್ರ ವಿದ್ಯಾರ್ಥಿ-ಅಧ್ಯಾಪಕರು ತಾವೂ ಆ ಅಧ್ಯಾಪಕರೊಬ್ಬರೆಂದು ಭಾವಿಸಿ ಅಲ್ಲಿ ದೊರಕಬಹುದಾದ ಸೌಲಭ್ಯಗಳನ್ನೆಲ್ಲ ಬಳಸಿಕೊಂಡು ಅನುಭವ ಸಾಧಿಸಲು ಸಾಧ್ಯವಾದೀತು.

ಅಭ್ಯಾಸಾರ್ಥ ಪಾಠಗಳ ಪರಿವೀಕ್ಷಣೆ ಬದಲಾಯಿಸಿ

ಅಭ್ಯಾಸಾರ್ಥ ಬೋಧನೆಯ ಯಶಸ್ಸಿಗೆ ಆ ಪಾಠಗಳನ್ನು ನೋಡಿ ಗುಣದೋಷಗಳನ್ನು ವಿಮರ್ಶಿಸಿ ಸೂಕ್ತ ನಿರ್ದೇಶನ ನೀಡುವ ಕಾರ್ಯವೂ ಮುಖ್ಯವೆ. ಈ ಕಾರ್ಯವನ್ನು ಪ್ರೌಢಶಾಲೆಯ ಅಧ್ಯಾಪಕರೂ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ವಿಷಯಬೋಧನೆಯ ಕ್ರಮವನ್ನು ಬೋಧಿಸುವ ಅಧ್ಯಾಪಕರೂ ಪರಿಶೀಲಿಸುವುದು ವಾಡಿಕೆ. ಕೆಲವು ಕಡೆ ಶಾಲೆಯಲ್ಲಿ ಆಯಾ ವಿಷಯವನ್ನು ಬೋಧಿಸುವ ಅಧ್ಯಾಪಕರು ಮೇಲ್ವಿಚಾರಣೆ ನೋಡಿಕೊಳ್ಳುವರು. ಹೇಗೇ ಆಗಲಿ, ಪಾಠವನ್ನು ಮೊದಲಿಂದ ಕೊನೆಯವರೆಗೂ ನೋಡಿ ಲೋಪದೋಷಗಳನ್ನು ಸೂಚಿಸಿ ಸೂಕ್ತವೆನಿಸುವ ಮಾರ್ಗದರ್ಶನ ನೀಡುವುದು ಅಗತ್ಯ. ಆದರೆ ಒಬ್ಬೊಬ್ಬ ವಿದ್ಯಾರ್ಥಿ ನೀಡುವ ಒಂದೊಂದು ವಿಷಯದಲ್ಲೂ ಒಟ್ಟು ಎಷ್ಟೆಷ್ಟು ಪಾಠಗಳನ್ನು ಪೂರ್ಣವಾಗಿ ನೋಡಬೇಕು ಎಂಬ ಬಗ್ಗೆ ಏಕರೀತಿಯ ಅಭಿಪ್ರಾಯ ಕಂಡುಬರುತ್ತಿಲ್ಲ.

ಅಭ್ಯಾಸಾರ್ಥ ಬೋಧನೆಯ ಮೌಲ್ಯನಿಷ್ಕರ್ಷೆ; ಅಭ್ಯಾಸಾರ್ಥ ಬೋಧನೆಗೆ ಸಂಬಂಧಿಸಿ ದಂತೆ ದಾಖಲಾತಿಗಳನ್ನು ಇಟ್ಟುಕೊಂಡು ಪ್ರತಿಯೊಂದು ಪಾಠದ ಮೌಲ್ಯ ನಿಷ್ಕರ್ಷೆಯನ್ನೂ ನಡೆಸುವುದು ಅಗತ್ಯ. ಆ ಮೂಲಕವೇ ಅಂದಿಗಂದಿಗೆ ವಿದ್ಯಾರ್ಥಿ-ಬೋಧಕರಿಗೆ ಸೂಕ್ತ ನಿರ್ದೇಶನ ನೀಡುವುದು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರಿಗೂ ಒಂದೊಂದು ಸಂಚಿತಾಭಿವೃದ್ಧಿ ಪತ್ರವನ್ನಿಟ್ಟು, ಅದರಲ್ಲಿ ಅವರ ಪ್ರತಿಪಾಠದ ಮೌಲ್ಯ ನಿಷ್ಕರ್ಷೆಯನ್ನೂ ಆಗ ಕಂಡುಬಂದ ದೋಷಗಳನ್ನೂ ನೀಡಿದ ಸಲಹೆಗಳನ್ನೂ ಉಲ್ಲೇಖಿಸಬೇಕು. ಅದನ್ನೆಲ್ಲ ಅಧ್ಯಾಪಕರೂ ವಿದ್ಯಾರ್ಥಿಯೂ ಸಹಕರಿಸಿ ಬರೆದಿಡಬೇಕು. ಆಗ ಪ್ರತಿ ವಿದ್ಯಾರ್ಥಿಯೂ ಕ್ರಮಕ್ರಮವಾಗಿ ಸಾಧಿಸಿರುವ ಅಭಿವೃದ್ಧಿ ವ್ಯಕ್ತವಾಗುತ್ತದೆ. ಸಂಚಿತಾಭಿವೃದ್ಧಿ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ಆರಿಸಿಕೊಂಡಿರುವ ಬೋಧನ ವಿಷಯ, ಆಗಲೆ ಮಾಡಿರುವ ಪಾಠಗಳ ಸಂಖ್ಯೆ, ಅದಕ್ಕೆ ಕೊಟ್ಟಿರುವ ಸ್ಥಾನ-ಇಷ್ಟನ್ನು ಮಾತ್ರ ಬರೆದುಕೊಳ್ಳುವುದು ಅನೇಕ ಸಂಸ್ಥೆಗಳಲ್ಲಿ ಕಂಡುಬರುತ್ತದೆ. ಅವಷ್ಟರಿಂದ ನಿಜವಾದ ಪ್ರಯೋಜನವಾಗಲಾರದು. ಅದರಲ್ಲಿ ವಿದ್ಯಾರ್ಥಿಯ ವೈಯಕ್ತಿಕಗುಣಗಳು, ಬೋಧನಶಕ್ತಿ, ಕೆಲಸಮಾಡುವ ಅಭ್ಯಾಸ, ಅಭ್ಯಾಸದಲ್ಲಿ ಅನುಸರಿಸುವ ಕ್ರಮ, ಇತ್ಯಾದಿ ಅಂಶಗಳನ್ನೂ ಬರೆದಿಡಬೇಕು. ತಮ್ಮ ತಮ್ಮ ಸಂಚಿತಾಭಿವೃದ್ಧಿ ಪತ್ರವನ್ನು ವಿದ್ಯಾರ್ಥಿಗಳು ನೋಡಿಕೊಳ್ಳಲು ಎಂದಾದರೂ ಅವಕಾಶವಿರಬೇಕು.

ಅಭ್ಯಾಸಾರ್ಥ ಬೋಧನೆಯ ಪಾಠಶಾಲೆ ಬದಲಾಯಿಸಿ

ಬೋಧನೆಯ ಪ್ರಯೋಗ ಪಾಠಶಾಲೆ, ಮಾದರಿ ಪಾಠಶಾಲೆ, ನಿದರ್ಶನ ಪಾಠಶಾಲೆ ಇತ್ಯಾದಿ ಹೆಸರುಗಳಿಂದ ಕರೆಯಲಾಗುವ, ಅಭ್ಯಾಸಿ ವಿದ್ಯಾರ್ಥಿಗಳು ಅಭ್ಯಾಸ ಪಾಠ ಮಾಡಲು ಗೊತ್ತುಮಾಡಿಕೊಳ್ಳುವ, ಪಾಠಶಾಲೆಗಳಲ್ಲಿ ಎರಡು ರೀತಿಯವಿರುವುದುಂಟು-ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಣೆಯಲ್ಲೇ ನಡೆಯುತ್ತಿರುವ, ಅದಕ್ಕೆ ಸೇರಿದ ಪಾಠಶಾಲೆ ಮತ್ತು ಆ ಸಂಸ್ಥೆಯೊಡನೆ ಸಹಕರಿಸುವ ಇತರ ಖಾಸಗಿ ಅಥವಾ ಸರ್ಕಾರಿ ಪಾಠಶಾಲೆಗಳು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ಅಭ್ಯಾಸ ಪಾಠಶಾಲೆಗಳನ್ನು ವ್ಯವಸ್ಥೆಗೊಳಿಸು ವುದು ಅಗತ್ಯ. ಅಲ್ಲಿ ಆದರ್ಶರೀತಿಯಲ್ಲಿ ಎಲ್ಲವನ್ನೂ ಏರ್ಪಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಅಭ್ಯಾಸಾರ್ಥ ಬೋಧನೆಯ ಜೊತೆಗೆ ಅಧ್ಯಾಪಕರು ನೂತನ ಬೋಧನ ವಿಧಾನ, ಪಠ್ಯಕ್ರಮ. ಆಡಳಿತ ವ್ಯವಸ್ಥೇ ಇತ್ಯಾದಿಗಳನ್ನು ಅಲ್ಲಿ ಪ್ರಾಯೋಗಿಕವಾಗಿ ನಡೆಸಲು ಸಾಧ್ಯವಾಗುತ್ತದೆ. ಆದರೂ ಅದರ ಜೊತೆಗೆ ಇತರ ಪಾಠಶಾಲೆಗಳನ್ನು ಅಭ್ಯಾಸ ಬೋಧನೆಗೆ ಆರಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಸದ್ಯದಲ್ಲಿ ಅಭ್ಯಾಸಾರ್ಥ ಬೋಧನೆ ಸಮರ್ಪಕವಾಗಿಲ್ಲವೆಂದೂ ಅದರ ವ್ಯಾಪ್ತಿ ತೀರ ಸಂಕುಚಿತವಾಗಿದ್ದು ಉದ್ದೇಶ ಸ್ಪಷ್ಟವಾಗಿಲ್ಲವೆಂದೂ ಅದು ನಡೆಯುತ್ತಿರುವ ಸನ್ನಿವೇಶ ತೀರ ಕೃತಕರೀತಿಯದೆಂದೂ ಟೀಕೆಗಳು ಕೇಳಿಬರುತ್ತಿವೆ. ಆದ್ದರಿಂದ ಎಲ್ಲ ದೇಶಗಳಲ್ಲೂ ಅದನ್ನು ಮೇಲೆ ಉಲ್ಲೇಖಿಸಿರುವ ರೀತಿಯಲ್ಲಿ ಉತ್ತಮ ಪಡಿಸುವ ಬಗ್ಗೆ ಯತ್ನ ನಡೆಯುತ್ತಿದೆ.

ವ್ಯಕ್ತಿತ್ವದ ಶಿಕ್ಷಣ ಬದಲಾಯಿಸಿ

ಅಧ್ಯಾಪಕರು ಮಕ್ಕಳಿಗೆ ಬಹುಮುಖ ಶಿಕ್ಷಣವಿತ್ತು ಅವರ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಕಾರ್ಯವನ್ನು ನಿರ್ವಹಿಸಬೇಕಾದರೆ ಅವರಿಗೆ ಆ ಮುಖವಾದ ಶಿಕ್ಷಣವೂ ವೃತ್ತಿಶಿಕ್ಷಣದ ಅಂಗವಾಗಿ ದೊರಕಬೇಕು. ಅಲ್ಲಿ ಅವರಿಗೆ ಸಮಾಜದಲ್ಲಿ ವಯಸ್ಕರ ಸ್ಥಾನಮಾನಗಳನ್ನೂ ಹೊಣೆಗಾರಿಕೆಯನ್ನೂ ತಳೆಯುವಂತೆ, ಜೀವನದಲ್ಲಿ ನಿರ್ದಿಷ್ಟವೂ ವಿಹಿತವೂ ಆದ ತತ್ತ್ವದೃಷ್ಟಿಯನ್ನು ರೂಪಿಸಿಕೊಳ್ಳುವಂಥ ಅವರ ವ್ಯಕ್ತಿತ್ವ ಬಹುಮುಖದ್ದೂ ಸಮರಸದ್ದೂ ಆಗಿರೂಪುಗೊಳ್ಳುವಂತೆ ಹಾಗೂ ಜೀವನದ ಕಲೆಯನ್ನು ಪರಿಚಯ ಮಾಡಿಕೊಳ್ಳುವಂಥ ಶಿಕ್ಷಣ ದೊರೆಯಬೇಕು. ಇದೆಲ್ಲ ಅತಿಯಾದ ಆದರ್ಶವಾದವೆಂದು ತೋರಿದರೂ ಅಧ್ಯಾಪಕರಿಗೆ ವಹಿಸುವ ಕೆಲಸದ ಪ್ರಾಮುಖ್ಯದ ದೃಷ್ಟಿಯಿಂದ ಅನಿವಾರ್ಯವೇ ಎನ್ನಬೇಕಾಗುತ್ತದೆ. ವೃತ್ತಿಶಿಕ್ಷಣದಂತೆ ವ್ಯಕ್ತಿತ್ವದ ಶಿಕ್ಷಣವೂ ದೊರಕುವಂತೆ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ನಿಯೋಜಿಸಿ ಕೊಳ್ಳಬೇಕಾಗುತ್ತದೆ. ಅಲ್ಲಿ ನೀಡುವ ವೃತ್ತಿಶಿಕ್ಷಣದಿಂದ ಅದಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳ ಫಲವಾಗಿ ವಿದ್ಯಾರ್ಥಿಗಳ ದೇಹ, ಮನಸ್ಸು, ಆತ್ಮ-ಇವೆಲ್ಲ ಸಂಸ್ಕರಣ ಗೊಂಡು ಅವರ ಪರಿಪೂರ್ಣವ್ಯಕ್ತಿತ್ವ ರೂಪುಗೊಳ್ಳಬೇಕು. ಎಂದರೆ, ಅಧ್ಯಾಪಕರು ಪಡೆಯುವ ಸಾಮಾನ್ಯ ಶಿಕ್ಷಣ, ಜ್ಞಾನಾರ್ಜನೆಯಂತೆ ಕ್ರಿಯಾತ್ಮಕ ಅನುಭವಗಳನ್ನೂ ಒಳಗೊಂಡಿದ್ದು ಅವರ ವ್ಯಕ್ತಿತ್ವವನ್ನು ವಿಹಿತ ರೀತಿಯಲ್ಲಿ ಪೋಷಿಸಲು ನೆರವಾಗಬೇಕು. ಅಂಥ ಅಧ್ಯಾಪಕರು ಮಕ್ಕಳಿಗೆ ಪಾಠ ಬೋಧಿಸುವುದರ ಜೊತೆಗೆ ಅವರ ವ್ಯಕ್ತಿತ್ವವನ್ನೂ ಸೂಕ್ತರೀತಿಯಲ್ಲಿ ಬೆಳೆಸಬಲ್ಲರು.

ವೃತ್ತಿಶಿಕ್ಷಣದ ತಾಂತ್ರಿಕ ಮುಖವೆನ್ನಬಹುದಾದ ಬೋಧನಕ್ರಮವನ್ನು ಅಧ್ಯಾಪಕರಿಗೆ ಪರಿಚಯ ಮಾಡಿಕೊಡುವುದರ ಜೊತೆಗೆ ವೃತ್ತಿಯ ಅಂತರಾಳದಲ್ಲಿರುವ ತತ್ತ್ವ ದೃಷ್ಟಿಯನ್ನೂ ಪರಿಚಯಮಾಡಿಕೊಡಬೇಕು; ಆಗ ವೃತ್ತಿಗೆ ಸರಿಯಾದ ಮಾನವನನ್ನೂ ಅಧ್ಯಾಪಕನನ್ನೂ ಸಿದ್ಧಪಡಿಸಿದಂತಾಗುತ್ತದೆ. ಆದ್ದರಿಂದ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಮುಂದೆ ಅವರು ಬೋಧಿಸಬೇಕಾದ ವಿಷಯ, ವೃತ್ತಿ ವಿಷಯಗಳು ಮತ್ತು ಹಲವು ವಿಶಿಷ್ಟ (ಐಚ್ಛಿಕ) ವಿಷಯಗಳು-ಈ ಮುಖವಾದ ಶಿಕ್ಷಣವೀಯಬೇಕು.

ಸಾಮೂಹಿಕ ಜೀವನದ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಲು ವಸತಿಗೃಹಗಳ ಜೀವನ ತುಂಬ ಪರಿಣಾಮಕಾರಿಯಾಗಬಲ್ಲುದು. ಆದರೆ ಅಲ್ಲಿನ ಮೇಲ್ವಿಚಾರಣೆಯೂ ನಿರ್ದೇಶನವೂ ದಕ್ಷತೆಯಿಂದ ಕೂಡಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಆದರ್ಶವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿರಬೇಕು.

ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಅನುಸರಿಸುವ ಕ್ರಮ ಬದಲಾಯಿಸಿ

ಇತ್ತೀಚಿನವರೆಗೂ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಶಾಸ್ತ್ರಕ್ಕೆ ಸಂಬಂಧಿಸಿದ ಉಪನ್ಯಾಸಗಳಿಗೆ ಮೀಸಲಾಗಿದ್ದ ಪ್ರಾಶಸ್ತ್ಯ ಈಗ ಚರ್ಚೆ, ವಿಚಾರವಿನಿಮಯ, ಸಮಾಲೋಚನೆ, ವಿಚಾರಸಂಕಿರಣ, ಕಾರ್ಯಶಿಬಿರ ಇತ್ಯಾದಿ ಕ್ರಮಗಳಿಗೆ ಹಂಚಿಹೋಗುತ್ತಿದೆ. ಅಧ್ಯಾಪಕರು ನೀಡುವ ವಿವರಣೆಯನ್ನು ಕುರಿತು ವಿದ್ಯಾರ್ಥಿ ಗಳು ಚರ್ಚಿಸುವುದು ಒಂದು ನೂತನ ಸಂಪ್ರದಾಯವಾಗಿ ಬೆಳೆದು ಬರುತ್ತಿದೆ. ಈ ಕ್ರಮ ಪ್ರಚಾರವಾದಂತೆ ವಿದ್ಯಾರ್ಥಿಗಳಲ್ಲಿ ವಿಮರ್ಶಿಸುವ ಮನೋಭಾವವೂ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಅವಕಾಶವೂ ಹೆಚ್ಚುತ್ತಿವೆ; ಉಪನ್ಯಾಸಕ್ರಮ ಅಧ್ಯಾಪಕರು ಬರೆದು ತಂದಿರುವ ಟಿಪ್ಪಣಿಯನ್ನು ವಿದ್ಯಾರ್ಥಿಗಳು ಸುಮ್ಮನೆ ಬರೆದುಕೊಳ್ಳಲು ನೆರವಾದರೆ ಚರ್ಚಾಪದ್ಧತಿಯಲ್ಲಿ ವಿಷಯವನ್ನು ವಿವೇಚನೆಯಿಂದ ಅರಿತುಕೊಳ್ಳುವ ಸೌಲಭ್ಯವಿರುತ್ತದೆ. ಚರ್ಚೆಗೆ ಸೂಕ್ತ ಸನ್ನಿವೇಶವನ್ನೂ ಮಾರ್ಗದರ್ಶನವನ್ನೂ ನೀಡುವುದರ ಮೂಲಕ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮೇಲ್ಪಂಕ್ತಿಯಾಗಿ ಪರಿಣಮಿಸುತ್ತಾರೆ; ವಿದ್ಯಾರ್ಥಿಗಳು ಆ ಕ್ರಮವನ್ನು ಪರಿಚಯಮಾಡಿಕೊಳ್ಳವು ದಲ್ಲದೆ ಆ ಮನೋಭಾವವನ್ನೂ ಬೆಳೆಸಿಕೊಳ್ಳುತ್ತಾರೆ. ಅವರು ಮುಂದೆ ಅಧ್ಯಾಪಕರಾದಾಗ ಆ ಮನೋಭಾವ ಎಳೆಯ ಮಕ್ಕಳಲ್ಲಿ ವಿಚಾರಶೀಲತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಹಾಗೆ ನೂತನವಾಗಿ ಪ್ರಚಾರಕ್ಕೆ ಬರುತ್ತಿರುವ ಕೆಲವು ಕ್ರಮಗಳನ್ನು ಇಲ್ಲಿ ಉಲ್ಲೇಖಿಸಿದೆ.

1 ವಿಚಾರಗೋಷ್ಠಿ: ಚರ್ಚೆಯಂತೆ ವಿಚಾರಗೋಷ್ಠಿಯ (ಸೆಮಿನಾರ್) ಕ್ರಮವೂ ಪ್ರಚಾರಕ್ಕೆ ಬರುತ್ತಿದೆ. ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಿಷಯವನ್ನು ಅಧಾರ ಗ್ರಂಥಗಳಿಂದ ಸಂಗ್ರಹಿಸುವ ಮತ್ತು ಚರ್ಚೆ ನಡೆಸುವ ಅಭ್ಯಾಸಗಳು ಬೆಳೆಯುತ್ತವೆ. ಇತರರ ಅಭಿಪ್ರಾಯಗಳನ್ನು ಅರಿತು, ಲಾಭಪಡೆಯುವ ಅವಕಾಶವೂ ಇರುತ್ತದೆ. ಇಡೀ ತರಗತಿ ಸಣ್ಣ ಸಣ್ಣ ತಂಡಗಳಾಗಿ ವಿಷಯದ ಬೇರೆ ಬೇರೆ ಮುಖಗಳಿಗೆ ಸಂಬಂಧಿಸಿದ ಅಂಶಗಳನ್ನು ಸಂಗ್ರಹಿಸಿ, ಸಮಗ್ರ ತರಗತಿಯ ಮುಂದೆ ಮಂಡಿಸುವಾಗ ಎಲ್ಲ ವಿದ್ಯಾರ್ಥಿಗಳಿಗೂ ಅಪಾರವಾದ ಜ್ಞಾನರಾಶಿಯ ಪರಿಚಯವಾಗುತ್ತದೆ.

2 ಉಪಬೋಧೆ (ಟ್ಯುಟೋರಿಯಲ್): ಸಣ್ಣ ಸಣ್ಣ ತಂಡಗಳಲ್ಲಿ ಕುಳಿತು ಅಧ್ಯಾಪಕರೊಡನೆ ವಿಷಯವನ್ನು ಚರ್ಚಿಸಿ ಅರ್ಥಮಾಡಿಕೊಳ್ಳುವ ಉಪಬೋಧನ ಪದ್ಧತಿ ಕೆಲವು ಕಡೆ ಪ್ರಚಾರದಲ್ಲಿದೆ. ಅಧ್ಯಾಪಕರ ಅಭಾವದಿಂದ ಇದನ್ನು ಆಚರಣೆಗೆ ತರುವುದು ಕಷ್ಟವಾಗಿದ್ದರೂ ಅದರ ಉಪಯುಕ್ತತೆ ಚೆನ್ನಾಗಿ ವ್ಯಕ್ತಪಟ್ಟಿದೆ. ಆಗ ಹಿರಿಯ ಅನುಭವಿಗಳಾದ ಅಧ್ಯಾಪಕರ ವ್ಯಕ್ತಿಪ್ರಭಾವ ವಿದ್ಯಾರ್ಥಿಗಳ ಮೇಲೆ ಬಿದ್ದು ಅವರ ನೈತಿಕ ಜೀವನ, ಸಾಮಾಜಿಕ ಪರಿಜ್ಞಾನ, ಅಧ್ಯಯನ ವಿಭಾಗ ಇವೆಲ್ಲ ಪರಿಣಾಮಗೊಳ್ಳುವುವು. ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಲೋಚನೆಯನ್ನು ಪ್ರಚೋದಿಸಿ ಅವರೇ ಚಟುವಟಿಕೆಯಾಗಿದ್ದು ಮುಂದುವರಿಯಲು ನೆರವಾಗುತ್ತಾರೆ. ವಿಷಯವನ್ನು ಪರಿಶೀಲಿಸಿ, ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಮಾರ್ಗದಲ್ಲಿ ಕಂಡುಬರುವ ದೋಷಗಳನ್ನು ತೋರಿಸಿ ಅಧ್ಯಾಪಕರು ತಿದ್ದಿಕೊಟ್ಟು ಸರಿಯಾದ ಮಾರ್ಗದಲ್ಲಿ ಮುಂದುವರಿಯಲು ನೆರವಾಗುತ್ತಾರೆ. ಅನೇಕ ದೇಶಗಳಲ್ಲಿ ಈ ಉಪಬೋಧಪದ್ಧತಿ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳಲ್ಲಿ ಆಚರಣೆಯಲ್ಲಿದೆ. ವಿದ್ಯಾರ್ಥಿಗಳನ್ನು ಸಣ್ಣ ಸಣ್ಣ ತಂಡಗಳನ್ನಾಗಿ ವಿಂಗಡಿಸಿ, ಒಂದೊಂದು ತಂಡವನ್ನು ಅಲ್ಲಿನ ಒಬ್ಬೊಬ್ಬ ಅಧ್ಯಾಪಕರಿಗೆ ವಹಿಸಿರುವುದುಂಟು. ಭಾರತದಲ್ಲೂ ಈ ಪದ್ಧತಿ ಜನಪ್ರಿಯವಾಗಿ ತೋರಿಬಂದಿದ್ದರೂ ತಕ್ಕ ಷ್ಟು ಅಧ್ಯಾಪಕರು ಇಲ್ಲದ ಕಾರಣದಿಂದ ಕೈ ಬಿಡಲಾಗಿದೆ.

3 ಉದ್ಯಮಾಚರಣೆ: ಹಲವು ವಿಷಯಗಳನ್ನು ಉದ್ಯಮಗಳ (ಪ್ರಾಜೆಕ್ಟ್‌) ರೂಪದಲ್ಲಿ ಆಚರಿಸಿ ಕಲಿಸುವುದು ಕೆಲವು ಸಂಸ್ಥೆಗಳಲ್ಲಿ ಪ್ರಚಾರದಲ್ಲಿದೆ. ಮಾಡಿಕಲಿಸುವ ವಿಧಾನವನ್ನು ಉದ್ಯಮಾಚರಣೆಯ ಮೂಲಕ ಅಧ್ಯಾಪಕರಿಗೆ ಪರಿಚಯ ಮಾಡಿಕೊಡಬಹುದು. ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ಈ ವಿಧಾನದ ಪರಿಚಯ ಎಷ್ಟು ಅಗತ್ಯವೆಂಬುದನ್ನು ವಿವರಿಸಬೇಕಾಗಿಲ್ಲ.

4 ನಿರ್ದೇಶಿತ ಅಧ್ಯಯನ: ಅಧ್ಯಾಪಕರೊಬ್ಬರ ನಿರ್ದೇಶನದಲ್ಲಿ ಖಾಸಗಿಯಾಗಿ ಅಧ್ಯಯನ ವನ್ನು ಕೈಗೊಂಡು ಪ್ರತಿ ವಿದ್ಯಾರ್ಥಿಯೂ ತನಗೊಪ್ಪಿಸಿದ ವಿಷಯದ ಬಗ್ಗೆ ಒಂದು ವರದಿಯನ್ನು ಸಲ್ಲಿಸುವ ಈ ವಿಧಾನ ಕೆಲವೆಡೆ ಪ್ರಚಾರದಲ್ಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಸಂಶೋಧನೆಯ ಕ್ರಮದ ಪರಿಚಯವಾಗುತ್ತದೆ.

ಅಧ್ಯಾಪಕರ ಶಿಕ್ಷಣದ ಪೃಥಕ್ಕರಣ ಬದಲಾಯಿಸಿ

1966ರ ಕೊಠಾರಿ ಶಿಕ್ಷಣ ಆಯೋಗ ಅಧ್ಯಾಪಕರ ಶಿಕ್ಷಣ ವಿಶ್ವವಿದ್ಯಾನಿಲಯದ ಜ್ಞಾನಪ್ರವಾಹದಿಂದಲೂ ಶಾಲೆಗಳ ಸ್ಥಿತಿಗತಿ ಮತ್ತು ದಿನಚರಿ ಕಾರ್ಯಕ್ರಮಗಳಿಂದಲೂ ಪ್ರತ್ಯೇಕಿಸಿ ಹೋಗಿರುವ ಅಂಶದ ಕಡೆ ಬೆರಳಿಟ್ಟು ತೋರಿಸಿ ಅದನ್ನು ಒಂದು ದೊಡ್ಡ ನ್ಯೂನತೆ ಎಂದು ಕರೆದಿದೆ. ಸದ್ಯದ ಪ್ರಾಥಮಿಕ ಅಧ್ಯಾಪಕರ ಶಿಕ್ಷಣ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿಯೇ ಇಲ್ಲ. ಪ್ರೌಢಶಾಲೆಯ ಶಿಕ್ಷಕರ ಶಿಕ್ಷಣ ವಿಶ್ವವಿದ್ಯಾನಿಲಯಕ್ಕೆ ಸೇರಿದ್ದರೂ ಅಲ್ಲಿನ ಇತರ ಜ್ಞಾನ ಶಾಖೆಗಳಿಂದ ದೂರವುಳಿದುಕೊಂಡಿದೆ; ಜೊತೆಗೆ ವಿಶ್ವವಿದ್ಯಾನಿಲಯವೂ ಅದನ್ನು ಇತರ ಜ್ಞಾನಶಾಖೆಗಳಷ್ಟು ಗೌರವದಿಂದ ಕಾಣುತ್ತಿಲ್ಲ ಆದ್ದರಿಂದ ತನ್ನದೇ ಆದ ಒಂದು ಆವರಣದಲ್ಲಿ ಅಧ್ಯಾಪಕರ ಶಿಕ್ಷಣ ಕೂಪಕೂರ್ಮವಾಗುಳಿದು ಕೊಂಡಿದೆ. ಸಾಲದ್ದಕ್ಕೆ, ಶಾಲೆಗಳಲ್ಲಿ ಈಚೆಗೆ ಆಗುತ್ತಿರುವ ಪರಿವರ್ತನೆಗಳ ಕಡೆಗೆ ವೃತ್ತಿಶಿಕ್ಷಣ ಶಾಲೆಗಳು ಅಷ್ಟಾಗಿ ಗಮನಕೊಡದೆ ತಮ್ಮಷ್ಟಕ್ಕೆ ತಮ್ಮ ಮಾಮೂಲು ಕಾರ್ಯಮಾಡುತ್ತ ಹೋಗುತ್ತಿವೆ; ಅಲ್ಲದೆ, ಬೇರೆ ಬೇರೆ ಮಟ್ಟದ ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಗಳು ಒಂದಕ್ಕೊಂದಕ್ಕೆ ಸಂಪರ್ಕವಿಲ್ಲದೆ ಪ್ರತ್ಯೇಕವಾಗಿ ಕೆಲಸಮಾಡುತ್ತಿವೆ. ಈ ತ್ರಿಮುಖ ಪೃಥಕ್ಕರಣ ವನ್ನು ನಿವಾರಿಸಿದ ಹೊರತು ನಮ್ಮ ಶಿಕ್ಷಣಕ್ಷೇತ್ರಕ್ಕೆ ಸೂಕ್ತರೀತಿಯ ಅಧ್ಯಾಪಕರು ದೊರೆಯುವುದು ದುರ್ಲಭವೆಂದು ಮೇಲಿನ ಆಯೋಗ ಅಭಿಪ್ರಾಯಪಟ್ಟಿದೆ. ಅದು ಸಾಧ್ಯವಾಗಬೇಕಾದರೆ ಶಿಕ್ಷಣಶಾಸ್ತ್ರ ಬರೀ ವೃತ್ತಿ ಮಾತ್ರವಲ್ಲ, ಇತರ ಜ್ಞಾನಶಾಖೆಗಳಂತೆ ಅದೂ ಒಂದು ಸಾಂಸ್ಕೃತಿಕ ಜ್ಞಾನಶಾಖೆ ಎಂಬುದು ಸ್ಪಷ್ಟಪಡಬೇಕು, ಶಿಕ್ಷಣಶಾಸ್ತ್ರ ಸಮಾಜವಿಜ್ಞಾನದ ಒಂದು ಶಾಖೆಯೆಂಬು ದನ್ನೂ ಅದು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಇನ್ನಿತರ ಕ್ಷೇತ್ರಗಳ ಮೇಲೆ ಬೀರುವ ಪ್ರಭಾವವನ್ನೂ ಪರಿಗಣಿಸಿ ಅದನ್ನು ಬಿ.ಎ., ಬಿ.ಎಸ್ಸಿ. ಇತ್ಯಾದಿ ತರಗತಿಗಳಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಷಯವನ್ನಾಗಿ ಗೊತ್ತುಮಾಡಬಹುದು; ಅದನ್ನು ಸಾಂಸ್ಕೃತಿಕ ವಿಷಯವನ್ನಾಗಿ ಅಧ್ಯಯನ ಮಾಡಲು ಎಂ.ಎ.ತರಗತಿಯಲ್ಲೂ ಅವಕಾಶ ಕಲ್ಪಿಸಬಹುದು.

ಶಾಲೆಗಳೊಡನೆ ಸಂಪರ್ಕವಿಲ್ಲದೆ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳು ಪ್ರತ್ಯೇಕವಾಗುಳಿದಿರು ವುದನ್ನೂ ನಿವಾರಿಸಬೇಕು. ಇದಕ್ಕಾಗಿ ಪ್ರತಿ ವೃತ್ತಿಶಿಕ್ಷಣಸಂಸ್ಥೆಯೂ ತನ್ನ ಸುತ್ತಣ ಕೆಲವು ಶಾಲೆಗಳ ಕಾರ್ಯಕ್ರಮಗಳನ್ನು ರೂಪಿಸಲು ನೆರವು ನೀಡಬೇಕು. ಅದರಿಂದ ಅವೆರಡು ಸಂಸ್ಥೆಗಳಿಗೂ ಒಂದಕ್ಕೊಂದರ ಸ್ವರೂಪ, ಸ್ಥಿತಿಗತಿಗಳು ಕಾರ್ಯಕ್ರಮಗಳು ಮತ್ತು ಆವಶ್ಯಕತೆ ಗಳು ಪರಿಚಯವಾಗಿ ಸಂಪರ್ಕ ಹೆಚ್ಚುತ್ತದೆ. ಅದರಿಂದ ಅವೆರಡೂ ತಮ್ಮ ತಮ್ಮ ಕಾರ್ಯಗಳು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದು. ಈ ಮುಂಚಿನಲ್ಲಿ ಎನ್.ಸಿ.ಇ.ಆರ್.ಟಿ.ಯ ಪ್ರೌಢಶಾಲೆಗಳ ವಿಸ್ತರಣಕಾರ್ಯಕ್ರಮಗಳ ವಿಭಾಗವೂ (ಡೆಪ್ಸಿ) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬೇಸಿಕ್ ಎಜುಕೇಷನ್ ಸಂಸ್ಥೆಯೂ ನೂತನ ಆಸಕ್ತಿಯನ್ನು ವ್ಯಕ್ತಪಡಿಸುತ್ತಿವೆ. ಅವೆರಡೂ ತಮ್ಮ ಕಾರ್ಯಗಳನ್ನು ದೇಶಾದ್ಯಂತ ವಿಸ್ತರಿಸುವುದರಿಂದ ಮೇಲಿನ ಪ್ರತ್ಯೇಕತೆ ಕಡಿಮೆಯಾಗಬಲ್ಲದು.

ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳು ತಮ್ಮ ಹಳೆಯ ವಿದ್ಯಾರ್ಥಿಗಳೊಡನೆ ಸಂಪರ್ಕವಿಟ್ಟು ಕೊಂಡು ಅವರಿಂದ ಬರುವ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರಗಳನ್ನು ನೀಡುವುದರ ಮೂಲಕವೂ ಆ ಪ್ರತ್ಯೇಕತೆಯನ್ನು ಕಡಿಮೆಮಾಡಿಕೊಳ್ಳಬಹುದು. ಪ್ರತಿಸಂಸ್ಥೆಯೂ ತನ್ನ ಹಳೆಯ ವಿದ್ಯಾರ್ಥಿಗಳ ಸಂಘವನ್ನೇರ್ಪಡಿಸಿಕೊಂಡು, ಆಗಾಗ ಅವರ ಸಭೆ ನಡೆಸಿ, ಅವರಿಗೆ ಕಾಲೇಜಿನಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು. ಅದಕ್ಕಾಗಿ ಒಂದು ನಿಯತಕಾಲಿಕ ಪತ್ರಿಕೆಯನ್ನೂ ಹೊರಡಿಸಬಹುದು. ಅದರಿಂದ ತಮ್ಮ ವಿದ್ಯಾರ್ಥಿಗಳ ಕಾರ್ಯದ ಬಗ್ಗೆ ಅನುಪರೀಕ್ಷಣ (ಫಾಲೋ ಅಪ್) ಕಾರ್ಯವನ್ನೂ ನಡೆಸಿದಂತಾಗಿ ಆ ಮೂಲಕ ತಮ್ಮ ಲೋಪದೋಷಗಳನ್ನು ತಿದ್ದಿಕೊಳ್ಳಲೂ ನೆರವಾಗುತ್ತದೆ.

ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಇರತಕ್ಕ ಬೇರೆಬೇರೆ ಅಂತಸ್ತಿನ ಸಂಸ್ಥೆಗಳಲ್ಲೂ ಪ್ರತ್ಯೇಕತೆ ಕಂಡುಬರುತ್ತಿದೆ; ಬೇರೆಬೇರೆ ವಿಶಿಷ್ಟ ವಿಷಯಗಳ ಅಧ್ಯಾಪಕರ ಶಿಕ್ಷಣ ಬೇರೆಬೇರೆ ಸಂಸ್ಥೆಗಳ ಪಾಲಿಗಿದ್ದು ಅದೂ ಒಂದು ರೀತಿಯ ಪ್ರತ್ಯೇಕತೆಗೆ ಅವಕಾಶ ಕಲ್ಪಿಸಿದೆ. ಇದನ್ನು ನಿವಾರಿಸಲು, ಯಾವ ಶಾಲೆಯಲ್ಲೇ ಕೆಲಸಮಾಡಲಿ ಅಧ್ಯಾಪಕರೆಲ್ಲ ಒಂದೇ ವರ್ಗದವರೆಂದೂ ಅವರನ್ನು ಸಿದ್ಧಪಡಿಸುವ ವೃತ್ತಿಶಿಕ್ಷಣ ಸಂಸ್ಥೆಗಳು ಸಮಾನ ಗೌರವಕ್ಕೆ ಅರ್ಹವೆಂದೂ ಪರಿಗಣಿಸಬೇಕು. ಅಂತಿಮವಾಗಿ, ಎಲ್ಲ ಮಟ್ಟದ ಶಾಲೆಗಳ ಮತ್ತು ಎಲ್ಲ ವಿಶಿಷ್ಟ ವಿಷಯಗಳ ಅಧ್ಯಾಪಕರ ವೃತ್ತಿಶಿಕ್ಷಣವನ್ನೂ ನಡೆಸುವಂಥ ವ್ಯಾಪಕ ರೀತಿಯ ಸಂಸ್ಥೆಗಳನ್ನು (ಕಾಂಪ್ರಿಹೆನ್ಸಿವ್ ಕಾಲೇಜ್) ಸ್ಥಾಪಿಸುವ ಯತ್ನವೂ ನಡೆಯಬೇಕು.

ಪ್ರತಿಯೊಂದು ರಾಜ್ಯದಲ್ಲೂ ಅಧ್ಯಾಪಕರ ಶಿಕ್ಷಣದ ರಾಜ್ಯ ಸಮಿತಿ (ಸ್ಟೇಟ್ ಬೋರ್ಡ್ ಆಫ್ ಟೀಚರ್ ಎಜುಕೇಷನ್) ಸಂಸ್ಥೆಯನ್ನು ರಚಿಸಿ ಇಡೀ ರಾಜ್ಯದಲ್ಲಿ ಎಲ್ಲ ಮಟ್ಟದ ಮತ್ತು ಎಲ್ಲ ವಿಧದ ಅಧ್ಯಾಪಕರ ಶಿಕ್ಷಣದ ನಿರ್ದೇಶನ ಕಾರ್ಯವನ್ನೂ ಅದಕ್ಕೆ ವಹಿಸಬೇಕು. ಅದರಲ್ಲಿ ವಿಶ್ವವಿದ್ಯಾನಿಲಯ, ಶಿಕ್ಷಣ ಶಾಖೆ, ರಾಷ್ಟ್ರೀಯ ಅಧ್ಯಾಪಕರ ಶಿಕ್ಷಣದ ಸಂಘ - ಇವುಗಳ ಪ್ರತಿನಿಧಿಗಳೂ ಶಿಕ್ಷಣಶಾಸ್ತ್ರದ ಕಾಲೇಜುಗಳ ಪ್ರಿನ್ಸಿಪಾಲರೂ ಸದಸ್ಯರಾಗಿರಬೇಕು. ಅದು ತನ್ನ ನೇತೃತ್ವದಲ್ಲಿ ಅಧ್ಯಾಪಕರ ಶಿಕ್ಷಣದಮಟ್ಟ, ಪಠ್ಯಕ್ರಮ, ಕಾರ್ಯಕ್ರಮ, ಪಠ್ಯಪುಸ್ತಕಗಳು, ಬೋಧನಕ್ರಮ, ಪಾಠೋಪಕರಣಗಳು ಇತ್ಯಾದಿಗಳನ್ನು ಉತ್ತಮಪಡಿಸುವಿಕೆ, ಸಂಸ್ಥೆಗಳ ಅಂಗೀಕರಣ ಸೂತ್ರಗಳನ್ನು ರೂಪಿಸಿ ಕಾಲಕಾಲಕ್ಕೆ ಅವುಗಳ ತನಿಖೆ ನಡೆಸುವುದು, ಬೇಕಾದಾಗ ಆ ಸಂಸ್ಥೆಗಳಿಗೆ ತಾಂತ್ರಿಕ ಸಹಾಯನೀಡುವುದು, ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ಶಾಲೆಯಲ್ಲಿ ಬೋಧಿಸುವ ಅರ್ಹತೆಯನ್ನು ಸಾಧಿಸಿರುವ ಬಗ್ಗೆ ತಕ್ಕ ಎಚ್ಚರಿಕೆ ವಹಿಸುವುದು (ಪರೀಕ್ಷೆಯ ಮೂಲಕ), ಅಧ್ಯಾಪಕರ ಶಿಕ್ಷಣದ ಧೀರ್ಘಾವಧಿ ಯೋಜನೆಗಳನ್ನು ರೂಪಿಸುವುದು-ಇತ್ಯಾದಿ ಕಾರ್ಯಗಳ ಮೂಲಕ ವಿವಿಧ ಮಟ್ಟದ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳಲ್ಲೂ ಸಂಪರ್ಕ ಮತ್ತು ತಿಳಿವಳಿಕೆಗಳನ್ನು ಹೆಚ್ಚಿಸಬಹುದು.

ಉನ್ನತ ಶಿಕ್ಷಣ ಸಂಸ್ಥೆಯ ಅಧ್ಯಾಪಕರ ಶಿಕ್ಷಣ: ಕಾಲೇಜಿನಂಥ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸಮಾಡತಕ್ಕ ಅಧ್ಯಾಪಕರ ಶಿಕ್ಷಣ ಪೂರ್ಣವಾಗಿ ವಿಶ್ವವಿದ್ಯಾನಿಲಯಕ್ಕೆ ಸೇರಿದ್ದು. ಪ್ರತಿಭಾವಂತರಿಗೆ ವಿಷಯ ಪಾಂಡಿತ್ಯವಿದ್ದರೆ ಸಾಕು, ಅವರು ಚೆನ್ನಾಗಿ ಬೋಧಿಸಬಲ್ಲ ರೇನೊ. ಆದರೆ ಈ ಮಾತು ಬಹುಮಂದಿ ಸಾಮಾನ್ಯ ಅಧ್ಯಾಪಕರಿಗೆ ಅನ್ವಯಿಸದಿರಬಹುದು. ತಮ್ಮ ವೃತ್ತಿಯ ಬಗ್ಗೆ ಅಷ್ಟಿಷ್ಟು ಶಿಕ್ಷಣ ದೊರೆತರೆ ತಮ್ಮ ಕರ್ತವ್ಯವನ್ನು ಅವರು ಹೆಚ್ಚು ದಕ್ಷತೆಯಿಂದ ನಿರ್ವಹಿಸಿಬಲ್ಲರು. ಈಚೆಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಂಡುಬರುವ ಸ್ಥಿತಿಗತಿಗಳು ಈ ಅಭಿಪ್ರಾಯವನ್ನು ಎತ್ತಿ ಹಿಡಿಯುತ್ತವೆ. ಆದ್ದರಿಂದಲೇ ಕಾಲೇಜಿಗೆ ಅಧ್ಯಾಪಕರಾಗಿ ಬರುವವರಿಗೆ ಆರಂಭದಲ್ಲಿ ಒಂದು ರೀತಿಯ ವೃತ್ತಿಶಿಕ್ಷಣ ಅಗತ್ಯವೆಂಬ ಭಾವನೆ ಎಲ್ಲ ಕಡೆಯೂ ಬೆಳೆಯುತ್ತಿದೆ. ಈ ಮುಖವಾಗಿ ಆಗಲೇ ನಿರ್ದಿಷ್ಟ ಯತ್ನ ನಡೆಯುತ್ತಿದೆ. ಭಾರತದಲ್ಲಿ ವಿಶ್ವವಿದ್ಯಾನಿಲಯದ ಧನ ಆಯೋಗ ಆಸಕ್ತಿ ವಹಿಸಿ ಕಾಲೇಜಿನ ಕಿರಿಯ ಅಧ್ಯಾಪಕರಾಗಿ ಹಲವು ವಾರಗಳ ಕಾಲಾವಧಿಯ ಬೇಸಿಗೆಯ ವೃತ್ತಿಶಿಕ್ಷಣದ ಕಾರ್ಯಕ್ರಮಗಳನ್ನು ದೇಶಾದ್ಯಂತ ಏರ್ಪಡಿಸುತ್ತಿದೆ. ಈ ಕಾರ್ಯಕ್ಕೆ ಪ್ರತ್ಯೇಕ ಸಂಸ್ಥೆಗಳ ಅಗತ್ಯ ಸದ್ಯಕ್ಕೆ ಇಲ್ಲದಿದ್ದರೂ ಮೇಲೆ ಉಲ್ಲೇಖಿಸಿರುವಂಥ ಕಾರ್ಯಕ್ರಮಗಳನ್ನು ಏರ್ಪಡಿಸುವುದ ರಿಂದ ಉನ್ನತಶಿಕ್ಷಣ ಸಂಸ್ಥೆಗಳ ಶಿಕ್ಷಣದ ಮಟ್ಟ ಉತ್ತಮಗೊಳ್ಳುವುದೆಂದು ಭಾವಿಸಬಹುದು.

ವೃತ್ತಿಶಿಕ್ಷಣವಿಲ್ಲದ ಅಧ್ಯಾಪಕರ ಶಿಕ್ಷಣ ಬದಲಾಯಿಸಿ

ವೃತ್ತಿಶಿಕ್ಷಣಪಡೆದವರನ್ನೇ ಅಧ್ಯಾಪಕರನ್ನಾಗಿ ಸೇರಿಸಿಕೊಳ್ಳುವ ಯತ್ನ ನಡೆಯುತ್ತಿದ್ದರೂ ಅನಿವಾರ್ಯ ಕಾರಣಗಳಿಗಾಗಿ ವೃತ್ತಿಶಿಕ್ಷಣವಿಲ್ಲದ ಅನೇಕರನ್ನು ಈಗಾಗಲೇ ವೃತ್ತಿಗೆ ಸೇರಿಸಿಕೊಂಡಿದೆ. ಅವರಲ್ಲಿ ಶೇ. 90 ಮಂದಿ 40 ವರ್ಷ ವಯಸ್ಸಿನೊಳಗೆ ಇರತಕ್ಕವರು: ಮಿಕ್ಕ ಶೇ. 10 ಮಂದಿ ಮೇಲ್ಪಟ್ಟ ವಯಸ್ಸಿನವರು. 40 ವರ್ಷ ವಯಸ್ಸಿಗೆ ಮೀರದವರಿಗೆ ವೃತ್ತಿ ಶಿಕ್ಷಣ ವ್ಯವಸ್ಥೆ ಮಾಡುವುದು ಅಗತ್ಯ. ಎಲ್ಲ ರಾಜ್ಯಗಳಲ್ಲೂ ಅವರಿಗೆಲ್ಲ ಸರ್ಕಾರದ ವೆಚ್ಚದಲ್ಲೇ ವೃತ್ತಿಶಿಕ್ಷಣ ನೀಡುವ ತತ್ತ್ವವನ್ನು ಒಪ್ಪಿದ್ದರೂ ಅಂಥವರು ಪತ್ರ ಮುಖೇನ ಶಿಕ್ಷಣ, ಸಂಜೆಯ ತರಗತಿ, ಬೇಸಿಗೆ ತರಗತಿ ಇತ್ಯಾದಿಯಾದ ಇತರ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ವೃತ್ತಿಶಿಕ್ಷಣದ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅಗತ್ಯ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಪ್ರಚಾರದಲ್ಲಿರುವಂತೆ ತಮ್ಮ ವೆಚ್ಚದಲ್ಲೇ ವೃತ್ತಿಶಿಕ್ಷಣ ಪಡೆಯುವ ಅಧ್ಯಾಪಕರಿಗೆ ವಿಶೇಷ ಬಡ್ತಿಗಳನ್ನು ನೀಡಿಯೂ ಪ್ರೋತ್ಸಾಹಿಸಬಹುದು.

ಪರೀಕ್ಷಾ ವ್ಯವಸ್ಥೆ ಬದಲಾಯಿಸಿ

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರ ವೃತ್ತಿ ಶಿಕ್ಷಣದ ಅವಧಿ ಮುಗಿದನಂತರ ತಾತ್ತ್ವಿಕ ಮತ್ತು ಪ್ರಾಯೋಗಿಕ ವಿಭಾಗಗಳ ಪರೀಕ್ಷೆ ನಡೆಯುತ್ತಿದೆ. ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಯೋಗಿಕ ವಿಭಾಗದ ಪರೀಕ್ಷೆಯನ್ನು ನಡೆಸುವುದಿಲ್ಲ. ಅದಕ್ಕೆ ಬದಲು ಸತತವಾಗಿ ನಡೆಸಿದ ಆಂತರಿಕ ಮೌಲ್ಯ ನಿಷ್ಕರ್ಷೆಯಿಂದ ನಿರ್ಧರಿಸಿದ ಅಂಕಗಳನ್ನು ಆ ಬಗ್ಗೆ ಪರಿಗಣಿಸುವುದುಂಟು. ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ಬೋಧನ ವಿಷಯದಲ್ಲೂ ಪರೀಕ್ಷೆ ನಡೆಯುತ್ತದೆ. ಈಚೆಗೆ ಕೆಲವುಕಡೆ ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣದಲ್ಲೂ ವೃತ್ತಿವಿಷಯ, ಪ್ರಾಯೋಗಿಕ ವಿಭಾಗ-ಈ ಮೂರು ಕ್ಷೇತ್ರಗಳಲ್ಲೂ ಪರೀಕ್ಷೆ ನಡೆಯಬೇಕಾಗುತ್ತದೆ. ಅಧ್ಯಾಪಕರ ಆವಶ್ಯಕತೆ ಮತ್ತು ಪೂರೈಕೆ: ಸದ್ಯದಲ್ಲಿ ಪ್ರತಿವರ್ಷವೂ ವಿವಿಧ ಕಾರಣಗಳಿಂದ ತೆರವಾದ ಪ್ರಾಥಮಿಕ ಶಾಲೆಗಳ ಅಧ್ಯಾಪಕರ ಸ್ಥಾನವನ್ನು ತುಂಬಲು ಹೊಸ ಅಧ್ಯಾಪಕರು ಬೇಕಾಗುತ್ತಾರೆ. ಪ್ರೌಢಶಾಲೆಗಳಲ್ಲಿ ತೆರವಾದ ಸ್ಥಾನವನ್ನು ಭರ್ತಿಮಾಡಲು 35,000 ಅಧ್ಯಾಪಕ ರಾದರೂ ಬೇಕು. ಜೊತೆಗೆ ಅವೆರಡೂ ಕ್ಷೇತ್ರಗಳು ನಿರಂತರವೂ ವಿಸ್ತರಿಸುತ್ತಿರುವುದರಿಂದ ಅವಕ್ಕೂ ಅಧ್ಯಾಪಕರು ಬೇಕಾಗುತ್ತದೆ. ಆದರೆ ಸದ್ಯದಲ್ಲಿ ದೇಶದಲ್ಲಿರುವ ವೃತ್ತಿಶಿಕ್ಷಣಸಂಸ್ಥೆಗಳು ಅಗತ್ಯವಿರುವುದರಲ್ಲಿ ಕೇವಲ ಅರ್ಧಸಂಖ್ಯೆಯ ಅಧ್ಯಾಪಕರನ್ನು ಮಾತ್ರ ಒದಗಿಸುತ್ತಿದೆ. ಎಂದರೆ ಸದ್ಯದ ಅಗತ್ಯವನ್ನು ಪುರೈಸಲು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳ ಸಂಖ್ಯೆಯನ್ನು ಇಮ್ಮಡಿಗೊಳಿಸಬೇಕು. ಇದು ಆರ್ಥಿಕದೃಷ್ಟಿಯಿಂದ ಅಧಿಕ ಹೊರೆಯಾಗುತ್ತದೆ; ಅಗತ್ಯವಿರುವ ಕಡೆ ಹೆಚ್ಚಿಗೆ ವೃತ್ತಿಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರೂ ಇತರ ಸೌಲಭ್ಯಗಳನ್ನೂ ಆ ಮುಖವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಈಗ ಇರತಕ್ಕ ಸಂಸ್ಥೆಗಳಿಗೆ ಹೆಚ್ಚಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತೆ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು; ಸಂಜೆಯ ತರಗತಿಯನ್ನೂ ಆರಂಭಿಸಬೇಕು; ಪತ್ರಮುಖೇನ ಶಿಕ್ಷಣದ ಸೌಲಭ್ಯವನ್ನೂ ಬಳಸಿಕೊಳ್ಳಬೇಕು, ಜೊತೆಗೆ ಬೇಸಿಗೆಯ ರಜಾಕಾಲದಲ್ಲಿ ವಿಶೇಷ ತರಗತಿಯನ್ನೂ ನಡೆಸಬಹುದು.

ವಿಶಿಷ್ಟ ವಿಷಯಗಳ ಅಧ್ಯಾಪಕರ ಕೊರತೆ; ಪ್ರಾಥಮಿಕ ಶಾಲೆಗಳಿಗೆ ಅಧ್ಯಾಪಕರ ಕೊರತೆಯಿದ್ದು ಪ್ರೌಢಶಾಲೆಗಳಲ್ಲಿ ವಿಶಿಷ್ಟ ವಿಷಯಗಳ ಅಧ್ಯಾಪಕರ ಕೊರತೆ ತೀವ್ರವಾಗಿ ಕಂಡುಬರುತ್ತಿದೆ; ಹಾಗೂ ವಿಜ್ಞಾನ, ಗಣಿತ, ಇಂಗ್ಲಿಷ್, ಅರ್ಥಶಾಸ್ತ್ರಗಳಲ್ಲಿ ಪಾಠ ಮಾಡತಕ್ಕ ಅಧ್ಯಾಪಕರ ಕೊರತೆ ತೀವ್ರವಾಗಿದೆ. ವೃತ್ತಿಶಿಕ್ಷಣಕ್ಕೆ ಬರತಕ್ಕ ಅಭ್ಯರ್ಥಿಗಳಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಮಂದಿ ಕಲಾಶಾಸ್ತ್ರದ ಪದವೀಧರರು. ತೆರವಾಗುವ ಮತ್ತು ಇತರ ಸ್ಥಾನಗಳನ್ನು ಭರ್ತಿಮಾಡಲು ಬೇಕಾದ ಅಧ್ಯಾಪಕರಲ್ಲಿ ಬಹುಮಂದಿ ಮೇಲಿನ ವಿಷಯಗಳನ್ನು ಬೋಧಿಸತಕ್ಕ ಅಧ್ಯಾಪಕರಾಗಿರುತ್ತಾರೆ. ಈ ಕೊರತೆಯನ್ನು ತುಂಬಿಕೊಳ್ಳಲು ಮೇಲ್ಕಂಡ ಕೊರತೆಯಿರುವ ವಿಷಯಗಳಲ್ಲಿ ಪದವಿ ಪಡೆದವರನ್ನು ವೃತ್ತಿಶಿಕ್ಷಣಶಾಲೆಗೆ ಹೆಚ್ಚು ಹೆಚ್ಚಾಗಿ ಸೇರಿಸಿಕೊಳ್ಳಬೇಕು; ಜೊತೆಗೆ ಆ ವಿಷಯಗಳ ಅಧ್ಯಾಪಕರನ್ನು ಸಿದ್ಧಪಡಿಸುವುದಕ್ಕಾಗಿಯೆ ಪ್ರತಿರಾಜ್ಯದಲ್ಲೂ ಒಂದೆರಡು ವೃತ್ತಿಶಿಕ್ಷಣಸಂಸ್ಥೆಗಳನ್ನು ಮೀಸಲಿಡಬೇಕು. ಪ್ರಾದೇಶಿಕ ಶಿಕ್ಷಣ ಕಾಲೇಜುಗಳಲ್ಲಿ 4 ವರ್ಷದ ಪದವಿ ಪಠ್ಯಕ್ರಮವನ್ನು ಮೇಲಿನ ವಿಷಯಗಳಲ್ಲಿ ಮುಂದುವರಿಸಿ ಕೊಂಡು ಬರಬೇಕು.

ಸ್ನಾತಕೋತ್ತರ ಶಿಕ್ಷಣ ಬದಲಾಯಿಸಿ

ವಿಸ್ತರಿಸುತ್ತಿರುವ ಶಿಕ್ಷಣದ ಆಡಳಿತ ಕ್ಷೇತ್ರಕ್ಕೂ ಸಂಖ್ಯೆಯಲ್ಲಿ 8 - 10 ಪಟ್ಟು ಹೆಚ್ಚಿರುವ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳಿಗೂ ತಜ್ಞರನ್ನೂ ಅಧ್ಯಾಪಕರನ್ನೂ ಒದಗಿಸುವ ಕಾರ್ಯ ಈಚೆಗೆ ರಾಷ್ಟ್ರದ ಗಮನವನ್ನು ಸೆಳೆದಿದೆ.

ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳ ಅಧ್ಯಾಪಕರಲ್ಲಿ ಸುಮಾರು ಅರ್ಧದಷ್ಟು ಮಂದಿ ಕೇವಲ ಶಿಕ್ಷಣದ ಪ್ರಥಮ (ಬಿ.ಎಡ್.ಬಿ.ಟಿ. ಅಥವಾ ಎಲ್.ಟಿ) ಪದವಿಯನ್ನು ಮಾತ್ರ ಪಡೆದಿರುತ್ತಾರೆ. ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳ ಅಧ್ಯಾಪಕರಲ್ಲಿ ಸಾಮಾನ್ಯವಾಗಿ ಬಿ.ಎಡ್. ಪದವಿ ಪಡೆದಿದ್ದರೂ ಪ್ರಾಥಮಿಕ ಶಿಕ್ಷಕರ ತರಬೇತಿಯಲ್ಲಿ ವಿಶಿಷ್ಟ ಶಿಕ್ಷಣ ಪಡೆದವರು ಅಪೂರ್ವ, ಶಿಕ್ಷಣಕ್ಷೇತ್ರದಲ್ಲಿ ನೂತನ ರೀತಿಯ ವಿವಿಧ ಕಾರ್ಯಾಚರಣೆಗಳು ಆರಂಭವಾಗಿವೆ. ಅವನ್ನು ನಿರ್ವಹಿಸಲು ಶಿಕ್ಷಣಾಧಿಕಾರಿಗಳೂ ಅಧ್ಯಾಪಕರೂ ಸಿದ್ಧತೆ ಪಡೆದಿರಬೇಕು. ಆದ್ದರಿಂದ ಅಧ್ಯಾಪಕರ ಶಿಕ್ಷಕರೂ ಇತರ ಶಿಕ್ಷಣಾಧಿಕಾರಿಗಳೂ ಬುದ್ಧಿಪರೀಕ್ಷಣ ಮತ್ತು ಮಾಪನ, ಬೆಳೆವಣಿಗೆಯ ಮನೋವಿಜ್ಞಾನ, ಶಿಕ್ಷಣತತ್ತ್ವಶಾಸ್ತ್ರ, ಶೈಕ್ಷಣಿಕ ಸಂಶೋಧನೆ, ಶೈಕ್ಷಣಿಕ ಸಮಾಜ ವಿಜ್ಞಾನ, ಶಿಕ್ಷಣದ ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ವಿಶೇಷ ಶಿಕ್ಷಣ ಪಡೆದಿರುವುದು ಅಗತ್ಯ.

ಆರ್ಥಿಕ ಬೆಂಬಲ: ಶಿಕ್ಷಣಕ್ಕೊದಗಿಸುವ ಹಣದಲ್ಲಿ 1946-47ರಲ್ಲಿ ಶೇ. 4.9ನ್ನು ಅಧ್ಯಾಪಕರ ಶಿಕ್ಷಣಕ್ಕೆಂದು ಮೀಸಲಿಡಲಾಗಿತ್ತು: ಸ್ವಾತಂತ್ರ್ಯ ಬಂದು ಶಿಕ್ಷಣ ವಿಸ್ತರಿಸಿದ ಮೇಲೆ 1958-59ರ ವೇಳೆಗೆ ಅದು ಶೇ.ಸು. 4ಗೆ ಇಳಿಯಿತು. ಉತ್ತಮ ಅಧ್ಯಾಪಕರು, ಇತರ ಸಿಬ್ಬಂದಿ ಶಿಕ್ಷಣವನ್ನು ಉತ್ತಮಪಡಿಸಲು ಅಗತ್ಯವೆನಿಸುವ ಕಟ್ಟಡ, ಉಪಕರಣಾದಿಗಳು ವರ್ಗ-ಇವೆಲ್ಲ ಅಗತ್ಯ. ಅದಕ್ಕೆ ತಕ್ಕ ಷ್ಟು ಹಣ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಣಕ್ಕಾಗಿ ಅಗಾಧಪ್ರಮಾಣದಲ್ಲಿ ಧನವಿನಿಯೋಗವಾಗುತ್ತಿದ್ದರೂ ಅಧ್ಯಾಪಕರ ಶಿಕ್ಷಣದ ಬಗ್ಗೆ ತಕ್ಕ ಷ್ಟು ಹಣ ಒದಗಿಸದಿರುವುದರಿಂದ ಅಧ್ಯಾಪಕರ ಪೂರೈಕೆಯಲ್ಲೂ ಅವರ ಕಾರ್ಯದ ದಕ್ಷತೆಯಲ್ಲೂ ಕೊರತೆ ತಲೆದೋರಿದೆ. ಅಧ್ಯಾಪಕರ ಶಿಕ್ಷಣಕ್ಕೆಂದು ಕೇಂದ್ರ ಸರ್ಕಾರದ ಆದೇಶದಂತೆ ಎನ್.ಸಿ.ಇ.ಆರ್.ಟಿ. ಈಗಾಗಲೆ ಆರಂಭಿಸಿರುವ ಪ್ರಾದೇಶಿಕ ಕಾಲೇಜುಗಳ ಜೊತೆಗೆ ಪ್ರತಿರಾಜ್ಯದಲ್ಲೂ ಒಂದೊಂದು ವ್ಯಾಪಕರೀತಿಯ (ಕಾಂಪ್ರಿಹೆನ್ಸಿವ್) ಕಾಲೇಜುಗಳನ್ನು ಆರಂಭಿಸಿ ನಡೆಸಿಕೊಂಡು ಬಂದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೆರವೂ ಸಿಕ್ಕಂತಾಗುತ್ತದೆ.

ಶಿಕ್ಷಣದ ಮಟ್ಟವನ್ನು ಉತ್ತಮ ಪಡಿಸುವಕಾರ್ಯ ಬದಲಾಯಿಸಿ

ಎಲ್ಲ ಮಟ್ಟದ ಅಧ್ಯಾಪಕರ ವೃತ್ತಿಶಿಕ್ಷಣವನ್ನೂ ಅಂತಿಮವಾಗಿ ವಿಶ್ವವಿದ್ಯಾನಿಲಯದ ಪರಿಮಿತಿಗೆ ಒಳಪಡಿಸುವ ಅಗತ್ಯವನ್ನು ಆಗಲೇ ಸೂಚಿಸಿದೆ. ಆದರೆ ರಾಷ್ಟ್ರೀಯ ಮಟ್ಟದಲ್ಲೂ ರಾಜ್ಯಮಟ್ಟದಲ್ಲೂ ಆ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಂಡು ಬರಲು ಶಾಸನದತ್ತ ಸಂಸ್ಥೆಗಳನ್ನು ಸ್ಥಾಪಿಸುವುದೂ ಅಗತ್ಯ. ಕೊಠಾರಿ ಶಿಕ್ಷಣ ಆಯೋಗದವರು ಸಲಹೆ ಮಾಡಿರುವಂತೆ, ರಾಜ್ಯಮಟ್ಟದಲ್ಲಿ ಅಧ್ಯಾಪಕರ ಶಿಕ್ಷಣದ ರಾಜ್ಯಮಂಡಲಿಯನ್ನು (ಸ್ಟೇಟ್ ಬೋರ್ಡ್ ಆಫ್ ಟೀಚರ್ ಎಜುಕೇಷನ್) ಸ್ಥಾಪಿಸಬೇಕು; ಅದು ಅಲ್ಲಿನ ವಿಶ್ವವಿದ್ಯಾನಿಲಯಗಳ ಮತ್ತು ವಿಶ್ವವಿದ್ಯಾನಿಲಯದ ಧನ ಆಯೋಗದ ಸಹಕಾರದಿಂದ ರಾಜ್ಯದಲ್ಲಿ ಹಿಂದೆ ಸೂಚಿಸಿರುವಂತೆ ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳನ್ನು ನೋಡಿಕೊಳ್ಳಬೇಕು; ರಾಷ್ಟ್ರೀಯ ಮಟ್ಟದಲ್ಲಿ, ವಿಶ್ವವಿದ್ಯಾನಿಲಯದ ಧನ ಆಯೋಗ ಎನ್.ಸಿ.ಇ.ಆರ್.ಟಿ.ಯ ಸಹಕಾರದಿಂದ ಅಧ್ಯಾಪಕರ ಶಿಕ್ಷಣದ ಸ್ಥಾಯೀ ಸಮಿತಿಯನ್ನು (ಸ್ಟಾಂಡಿಂಗ್ ಕಮಿಟಿ ಆನ್ ಟೀಚರ್ ಎಜುಕೇಷನ್) ಸ್ಥಾಪಿಸಬೇಕು. ಅದರಲ್ಲಿ ಸಂಬಂಧಿಸಿದ ಕ್ಷೇತ್ರಗಳ ಪ್ರತಿನಿಧಿಗಳೆಲ್ಲ ಸದಸ್ಯರಾಗಿರಬೇಕು. ಅದು

1. ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳ ಮತ್ತು ವಿಶ್ವವಿದ್ಯಾನಿಲಯಗಳ ಶಿಕ್ಷಣವಿಭಾಗದ ಶಿಕ್ಷಣದ ಗುಣಮಟ್ಟವನ್ನು ರೂಪಿಸಿ ಕಾಪಾಡಿಕೊಂಡು ಬರುವುದು;

2. ಎಲ್ಲ ಮಟ್ಟದ ಅಧ್ಯಾಪಕರ ಶಿಕ್ಷಣದಲ್ಲೂ ಸಮನ್ವಯವಿರು ವಂತೆ ಮಾಡುವುದು;

3. ಅಲ್ಲಿನ ಪಠ್ಯಕ್ರಮ, ಕಾರ್ಯಚಟುವಟಿಕೆಗಳು, ಪಠ್ಯಪುಸ್ತಕಗಳು, ಅಧ್ಯಾಪಕರ ಅರ್ಹತೆ-ಇವುಗಳ ಬಗ್ಗೆ ರಾಜ್ಯಸರ್ಕಾರಕ್ಕೂ ವಿಶ್ವವಿದ್ಯಾನಿಲಯಗಳಿಗೂ ಅಗತ್ಯವೆನಿಸುವ ಸಲಹೆ ನೀಡುವುದು:

4. ಅಧ್ಯಾಪಕರ ಶಿಕ್ಷಣ ಸಂಸ್ಥೆಗಳಿಗೆ ಧನ ಸಹಾಯ ನೀಡುವುದು:

5. ಆ ಸಂಸ್ಥೆಗಳನ್ನು ಆಗಾಗ ತನಿಖೆ ನಡೆಸುವುದು;

ವೃತ್ತಿ ನಿರತ ಅಧ್ಯಾಪಕರ ಮತ್ತು ಅಧ್ಯಾಪಕ ಶಿಕ್ಷಕರ (ಟೀಚರ್ ಎಜುಕೇಟರ್ಸ್‌) ಮುಂದುವರಿದ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಏರ್ಪಡಿಸಲು ಆ ಸಂಸ್ಥೆಗಳಿಗೆ ಧನಸಹಾಯ ನೀಡುವುದು-ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಬೇಕು. ಅದಕ್ಕೆ ಅಗತ್ಯವಾದ ಧನವನ್ನು ಕೇಂದ್ರಸರ್ಕಾರ ಒದಗಿಸ ಬೇಕು.

ಸಂಶೋಧನೆ ಮತ್ತು ಶೈಕ್ಷಣಿಕ ಸಾಹಿತ್ಯದ ಪ್ರಕಟಣೆ ಬದಲಾಯಿಸಿ

ಯಾವ ವೃತ್ತಿಯಲ್ಲೇ ಆಗಲಿ, ಸಂಬಂಧಿಸಿದ ಮೂಲಭೂತ ಮತ್ತು ಪ್ರಯುಕ್ತ (ಅಪ್ಲೈಡ್) ಸಂಶೋಧನೆಗಳು ನಡೆದ ಹೊರತು ಆ ವೃತ್ತಿ ಅಭಿವೃದ್ದಿ ಸಾಧಿಸುವಂತಿಲ್ಲ. ಈ ಮಾತು ಶಿಕ್ಷಣವೃತ್ತಿಗೂ ಅನ್ವಯಿಸುತ್ತದೆ. ಅಂಥ ಸಂಶೋಧನೆಗಳನ್ನು ನಡೆಸಲು ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳೂ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗಗಳೂ ಸೂಕ್ತ ಸ್ಥಳಗಳು, ಈಗಾಗಲೆ ಭಾರತದಲ್ಲಿ ಕೇಂದ್ರ ಮಂತ್ರಿಮಂಡಲ ಸಂಶೋಧನೆಗಳಿಗೆ ಉತ್ತೇಜನವೀಯುತ್ತಿದೆ. ಎನ್.ಸಿ.ಇ.ಆರ್.ಟಿ. ಮತ್ತು ಬರೋಡದ ಶಿಕ್ಷಣಶಾಸ್ತ್ರದ ಉನ್ನತಕೇಂದ್ರವೂ ಆ ಮುಖವಾಗಿ ಅಷ್ಟಿಷ್ಟು ಸಂಶೋಧನೆ ನಡೆಸುತ್ತಿವೆ. ಆದರೆ ಈ ಮುಖವಾದ ಯತ್ನ ರಾಷ್ಟ್ರಾದ್ಯಂತ ವ್ಯಾಪಕವಾಗಿ ನಡೆಯಬೇಕು.

ಆದ್ಯತೆಯ ದೃಷ್ಟಿಯಿಂದ ಸಮಸ್ಯೆಗಳನ್ನು ಆರಿಸಿಕೊಂಡು ಸಂಶೋಧನೆಗಳನ್ನು ನಡೆಸುವ ಅಗತ್ಯವನ್ನು ಒತ್ತಿಹೇಳಬೇಕಾಗಿಲ್ಲ. ಹಾಗೆಯೇ ಸಂಶೋಧನೆಯ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರುವ ನಿರ್ದಿಷ್ಟ ಯತ್ನವೂ ನಡೆಯಬೇಕು.

ಇಷ್ಟೇ ಮುಖ್ಯವೆನ್ನಬಹುದಾದ ಮತ್ತೊಂದು ಸಮಸ್ಯೆ ಅಧ್ಯಾಪಕರ ಶಿಕ್ಷಣಕ್ಕೆ ಸಂಬಂಧಿಸಿದ ಸಾಹಿತ್ಯದ ಪ್ರಕಟಣೆ. ಸದ್ಯದಲ್ಲಿ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳು ಬಳಸುತ್ತಿರುವ ಗ್ರಂಥಗಳು ಬಹುಮಟ್ಟಿಗೆ ಇಂಗ್ಲಿಷಿನಲ್ಲಿ ಮುದ್ರಿಸಿರುವ ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಬರೆಸಿ ಪ್ರಕಟಿಸಿದ ಗ್ರಂಥಗಳು ಅವು ಭಾರತದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಬರೆದವಲ್ಲ. ಆದ್ದರಿಂದ ಅಂಥ ಸಾಹಿತ್ಯ ಭಾರತೀಯರ ದೃಷ್ಟಿಯಲ್ಲಿ ಉತ್ತಮ ಫಲ ನೀಡಲಾರದು. ಭಾರತೀಯ ಸನ್ನಿವೇಶಗಳಿಗೆ ತಕ್ಕಂತೆ ರೂಪುಗೊಂಡ ಶಿಕ್ಷಣ ಸಾಹಿತ್ಯ ಅಗತ್ಯ. ಈ ಸಾಹಿತ್ಯ ಇಂಗ್ಲಿಷಿನಂತೆ ದೇಶೀಯ ಭಾಷೆಗಳಲ್ಲೂ ಪ್ರಕಟವಾಗಬೇಕು. ಅಂದು ಮಾತ್ರ ಅಧ್ಯಾಪಕರಿಗೂ ಅಧ್ಯಾಪಕರ ಶಿಕ್ಷಕರಿಗೂ ಈ ವೃತ್ತಿಗೆ ಸಂಬಂಧಿಸಿದ ನಿಖರವಾದ ಶಾಸ್ತ್ರೀಯ ಜ್ಞಾನ ದೊರೆತು ಅವರಿಂದ ಶಿಕ್ಷಣಕ್ಷೇತ್ರ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಲನುಕೂಲವಾದೀತು. (ಎನ್.ಎಸ್.ವಿ.)

ವೃತ್ತಿನಿರತ ಉಪಾಧ್ಯಾಯರ ಶಿಕ್ಷಣ ಬದಲಾಯಿಸಿ

ವೃತ್ತಿಶಿಕ್ಷಣ ಪಡೆದಿರುವ ಅಧ್ಯಾಪಕರು ತಮ್ಮ ವೃತ್ತಿಗೆ ಸಂಬಂಧಿಸಿದ ಜ್ಞಾನ ಮತ್ತು ಅನುಭವಗಳನ್ನು ಪಡೆದುಕೊಳ್ಳುವುದಕ್ಕೂ ವೃತ್ತಿಶಿಕ್ಷಣದಲ್ಲಿ ಕಲಿತ ಅಂಶಗಳನ್ನು ನವೀಕರಿಸಿಕೊಳ್ಳುವುದಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಬಳಕೆಗೆ ಬಂದಿರುವ ನೂತನ ಅಂಶಗಳನ್ನು ಅರಿತುಕೊಂಡು ಅನುಷ್ಠಾನಕ್ಕೆ ತರುವುದಕ್ಕೂ ವೃತ್ತಿಯಲ್ಲಿರತಕ್ಕ ಅಧ್ಯಾಪಕರಿಗಾಗಿಯೇ ವ್ಯವಸ್ಥೆಗೊಳಿಸಿರುವ ಶಿಕ್ಷಣ ಸೌಲಭ್ಯವಿದು.

ವೃತ್ತಿನಿರತ ಅಧ್ಯಾಪಕರ ತರಬೇತಿಯ ಉದ್ದೇಶಗಳಲ್ಲಿ

1. ಉಪಾಧ್ಯಾಯರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಎದುರಿಸಬೇಕಾದ ಸಮಸ್ಯೆಗಳನ್ನು ಬಿಡಿಸಲು ಸಹಾಯಮಾಡುವುದು;

2.ದೇಶ ಹಾಗೂ ವಿದೇಶಗಳ ಶಿಕ್ಷಣಕ್ಷೇತ್ರಗಳಲ್ಲಿ ಆದ ಸುಧಾರಣೆಗಳ ಪರಿಚಯ ಮಾಡಿಕೊಂಡು ಅವುಗಳನ್ನು ತಮ್ಮ ಶಾಲೆಗಳಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಹೇಗೆ ಅಳವಡಿಕೊಂಡು ಅನುಷ್ಠಾನಕ್ಕೆ ತರಬಹುದೆಂಬುದನ್ನು ಮನದಟ್ಟು ಮಾಡಿಕೊಡುವುದು;

3. ತಮ್ಮ ತಮ್ಮ ಐಚ್ಛಿಕ ವಿಷಯಗಳಲ್ಲಿ ಆಳವಾದ ಅಭ್ಯಾಸ ಮಾಡಿ ಆ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಸಂಶೋಧನೆಗಳನ್ನು ತಿಳಿದುಕೊಂಡು ಅವುಗಳಲ್ಲಿ ಬೇಕಾದವುಗಳನ್ನು ತಮ್ಮ ಶಾಲೆಯ ಶಿಕ್ಷಣಕ್ರಮದಲ್ಲಿ ಅಳವಡಿಸಿಕೊಳ್ಳಲು ನೆರವಾಗುವುದು-ಇವು ಮುಖ್ಯವಾದ ಅಂಶಗಳು.

ಭಾರತದಲ್ಲಿ ಕೇಂದ್ರ ಶಿಕ್ಷಣಶಾಲೆ 1961ರಲ್ಲಿ ಸ್ವಯಮಾಧಿಕಾರವುಳ್ಳ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿಮಂಡಲವನ್ನು (ಎನ್.ಸಿ.ಇ.ಆರ್.ಟಿ.) ಸಂಘಟಿಸಿತು. ಈ ಸಂಸ್ಥೆ ತನ್ನ ಅಧಿಕಾರ ಕ್ಷೇತ್ರಕ್ಕೆ ಸೇರಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ನಿನ ಮೂಲಕ ಉಚ್ಚ ಶಿಕ್ಷಣವನ್ನುಳಿದು ಶಿಕ್ಷಣದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದೆ.

ಇದರ ಅಂಗ ಸಂಸ್ಥೆಗಳಲ್ಲಿ ಬದಲಾಯಿಸಿ

  • 1. ಶಿಕ್ಷಕರ ತರಬೇತಿ ವಿಭಾಗ,
  • 2. ಕೇಂದ್ರ ಶಿಕ್ಷಣಸಂಸ್ಥೆ,
  • 3. ರಾಷ್ಟ್ರೀಯ ಮೂಲ ಶಿಕ್ಷಣಸಂಸ್ಥೆ,
  • 4. ಡೈರೆಕ್ಟರೇಟ್ ಆಫ್ ಫೀಲ್ಡ್‌ ಸರ್ವಿಸಸ್,
  • 5. ರಾಷ್ಟ್ರೀಯ ಮೂಲಭೂತ ಶಿಕ್ಷಣಸಂಸ್ಥೆ,
  • 6. ರಾಷ್ಟ್ರೀಯ ದೃಕ್ ಶ್ರಾವ್ಯಸಂಸ್ಥೆ,
  • 7. ಮೂಲಭೂತ ಮನೋವಿಜ್ಞಾನ ವಿಭಾಗ,
  • 8. ಪಾಠಕ್ರಮ, ಶಿಕ್ಷಣ ವಿಧಾನ ಮತ್ತು ಪಠ್ಯಪುಸ್ತಕ ವಿಭಾಗ,
  • 9. ವಿಜ್ಞಾನ ಶಿಕ್ಷಣ ವಿಭಾಗ,
  • 10. ಶಿಕ್ಷಣ ಆಡಳಿತ ವಿಭಾಗ,
  • 11. ಮೂಲಭೂತ ಶಿಕ್ಷಣಸಂಸ್ಥೆ - ಇವೆಲ್ಲ ಸೇರಿವೆ.

ಈ ಅಂಗ ಸಂಸ್ಥೆಗಳಲ್ಲದೆ ಶಿಕ್ಷಣದ ಪ್ರಾದೇಶಿಕ ಕಾಲೇಜುಗಳ ಮುಖಾಂತರ ಅದು ಶಿಕ್ಷಕರ ತರಬೇತಿಗಾಗಿ ಶ್ರಮಿಸುತ್ತಿದೆ. ಶಿಕ್ಷಣದ ಪ್ರಾದೇಶಿಕ ಕಾಲೇಜುಗಳು ಅಜಮೀರ್. ಭೂಪಾಲ್, ಭುವನೇಶ್ವರ ಮತ್ತು ಮೈಸೂರುಗಳಲ್ಲಿವೆ. ದೆಹಲಿಯಲ್ಲಿರುವ ಕೇಂದ್ರ ಶಿಕ್ಷಣಸಂಸ್ಥೆ ಹಾಗೂ ಈ ಮಹಾ ವಿದ್ಯಾಲಯಗಳು ಮಾಧ್ಯಮಿಕ ಶಿಕ್ಷಕರ ಪೂರ್ವ ತರಬೇತಿಗಳ ಕಡೆಗೆ ಗಮನವನ್ನು ಕೇಂದ್ರೀಕರಿಸಿದ್ದರೆ, ಉಳಿದ ವಿಭಾಗಗಳು ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಸಂಶೋಧನೆ ಹಾಗೂ ಶಿಕ್ಷಕರು ತಮ್ಮ ವೃತ್ತಿಯಲ್ಲಿ ತೊಡಗಿದಾಗ ಪಡೆಯಬೇಕಾದ ಶಿಕ್ಷಣದ ಕಡೆ ಗಮನವೀಯುತ್ತಿವೆ. ಈ ಅಂಗಸಂಸ್ಥೆಗಳಲ್ಲಿ ಒಂದಾದ ಫೀಲ್ಡ್‌ ಸರ್ವಿಸಸ್ ವಿಭಾಗ ತರಬೇತಿಯ ಅನಂತರ ಶಿಕ್ಷಣದತ್ತ ಗಮನ ಕೊಟ್ಟಿದೆ. ಈ ಕಾರ್ಯದಲ್ಲಿ ಅದು ಆಯಾ ರಾಜ್ಯಗಳಲ್ಲಿರುವ ಶಿಕ್ಷಣದ ಪ್ರಾದೇಶಿಕ ಕಾಲೇಜುಗಳ ನೆರವನ್ನು ತನ್ನ ವಿಸ್ತರಣಾ ವಿಭಾಗಗಳ ಮೂಲಕ ಪಡೆಯುತ್ತಿವೆ. ಇಂಥ ವಿಸ್ತರಣಾ ವಿಭಾಗಗಳು ಭಾರತದಲ್ಲಿ ಸದ್ಯ 97 ಇದ್ದು ಅವನ್ನು ಇನ್ನೂ ಹೆಚ್ಚಿಸುವ ಯೋಜನೆ ಇದೆ.

ಈ ವಿಸ್ತರಣಾ ವಿಭಾಗಗಳ ಮೂಲಕ ನಡೆಸುತ್ತಿರುವ ಅಲ್ಪಾವಧಿ ತರಬೇತಿ ಕೇಂದ್ರಗಳು, ಕಾರ್ಯಶಿಬಿರಗಳು ಬೇಸಿಗೆಯ ಶಿಬಿರಗಳು, ವ್ಯಾಸಂಗ ಗೋಷ್ಠಿಗಳು ಹಾಗೂ ಸಮ್ಮೇಳನಗಳು ಈಗಾಗಲೇ ಶಿಕ್ಷಣ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಒಂದು ಕ್ರಾಂತಿಯನ್ನುಂಟು ಮಾಡಿವೆ. ಈ ತರಬೇತಿ ಕೇವಲ ಉಪಾಧ್ಯಾಯರಿಗೆ ಮಾತ್ರ ಸೀಮಿತವಾಗಿರದೆ ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಪ್ರಾಧ್ಯಾಪಕರು ಮತ್ತು ರಾಜ್ಯದ ಶಿಕ್ಷಣ ಆಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಒಳಗೊಂಡಿದೆ. ಇದರಿಂದಾಗಿ ವಿವಿಧ ರಾಜ್ಯಗಳ ಪರೀಕ್ಷಾ ಮಂಡಳಿಗಳು ನಡೆಸುತ್ತಿರುವ ಶಾಲಾಂತ್ಯ ಪರೀಕ್ಷೆಗಳಲ್ಲಿ ಉಪಯೋಗಿಸುವ ಪ್ರಶ್ನೆಪತ್ರಿಕೆಗಳು ಹೆಚ್ಚು ಹೆಚ್ಚು ಉದ್ದೇಶಪುರಿತ ಹಾಗೂ ವಸ್ತುನಿಷ್ಠವಾಗುತ್ತಿವೆ. ಈ ಹೊಸ ಮೌಲ್ಯಮಾಪನ ಪದ್ಧತಿಯ ಪರಿಣಾಮ ಪರೀಕ್ಷಾಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿರದೆ ಅಭ್ಯಾಸ ಕ್ರಮದ ಮೇಲೂ ಪರಿಣಾಮ ಬೀರುತ್ತಿದೆ. ಈ ಪದ್ಧತಿ ಕಾಳನ್ನು ತೂಕ ಮಾಡುವುದರ ಜೊತೆಗೆ ಅದರ ಗುಣಾಂಶವನ್ನೂ ಹೆಚ್ಚಿಸುವ ಮಾಯಾ ತಕ್ಕಡಿಯಂತಿದೆ: ಹೇಗೆಂದರೆ ಉಪಾಧ್ಯಾಯ ಪಾಠ ಮಾಡುವ ಮೊದಲು ತಾನು ಕಲಿಸಲಿರುವ ಪಾಠದ ಉದ್ದೇಶವೇನು ಎಂಬುದನ್ನು ತಿಳಿದಿರುತ್ತಾನೆ. ಈ ಉದ್ದೇಶವನ್ನು ಸಾಧಿಸಲು ತರಗತಿಯ ಪರಿಸರಕ್ಕೆ ಅನುಗುಣವಾಗುವಂಥ ಕಲಿವಿನ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾನೆ. ವಿದ್ಯಾರ್ಥಿಗಳು ಈ ಸ್ವಾನುಭವದಿಂದ ತಾವು ಮನಸ್ಸಿನಲ್ಲಿಟ್ಟುಕೊಂಡ ಉದ್ದೇಶವನ್ನು ಸಾಧಿಸಿರುವರೇ ? ಇದರಿಂದ ವಿದ್ಯಾರ್ಥಿಗಳ ನಡೆವಳಿಕೆಯಲ್ಲಿ ಆದ ಬದಲಾವಣೆಗಳೇನು ? ಎಷ್ಟು? ಎಂಬುದನ್ನು ಈ ಮೌಲ್ಯಮಾಪನದಿಂದ ತಿಳಿಯಬಹುದು. ಇದರಿಂದ ಉಪಾಧ್ಯಾಯ ತಾನು ಮಾಡಿದ ಪಾಠದ ಪ್ರಭಾವ ವಿಧ್ಯಾರ್ಥಿಗಳ ಮೇಲೆ ಎಷ್ಟು ಪ್ರಮಾಣದಲ್ಲಿ ಆಗಿದೆ, ಹಾಗೆ ಆಗದೇ ಇದ್ದರೆ ಏಕೆ ಆಗಿಲ್ಲ? ಎಂದು ವಿಚಾರಿಸಿ ಆಯಾ ತರಗತಿಗಳಿಗೆ ಸರಿಹೊಂದುವ ವಿಧಾನಗಳಿಂದ ಪಾಠ ಮಾಡಿ ವಿದ್ಯಾರ್ಥಿಗಳಲ್ಲಿ ತಾನು ಊಹಿಸಿದ ವರ್ತನೆಯ ಪರಿವರ್ತನೆಗಳನ್ನು ಮೂಡಿಸಿ ಪಾಠದ ಉದ್ದೇಶವನ್ನು ಸಾಧಿಸಬಹುದು. ಈ ರೀತಿಯಲ್ಲಿ ಅದು ಅಭ್ಯಾಸಕ್ರಮದ ಮೇಲೂ ಪರಿಣಾಮವನ್ನುಂಟು ಮಾಡಿದೆ. ಈ ತರಬೇತಿ ಕಾಲದಲ್ಲಿ ಉಪಾಧ್ಯಾಯರ ಸಮ್ಮಿಲನದ ಫಲವಾಗಿ ಆಗುವ ವಿಚಾರವಿನಿಮಯ ಮತ್ತು ತಮ್ಮ ವಿಶಿಷ್ಟ ಕ್ಷೇತ್ರದಲ್ಲಾದ ಸುಧಾರಣೆಗಳ ಅರಿವಿನಿಂದಾಗಿ ಉಪಾಧ್ಯಾಯರಲ್ಲಿ ನವಚೇತನ ಮೂಡಿ ಅವರ ಶಿಕ್ಷಣ ಕಾರ್ಯ ಹೆಚ್ಚು ಪರಿಣಾಮಕಾರಿ ಯಾಗುತ್ತಿದೆ. ಇದರಿಂದಾಗಿ ಶಿಕ್ಷಣಮಟ್ಟ ಉತ್ತಮಗೊಳ್ಳುವುದೆಂಬ ಭರವಸೆಯೂ ಹೆಚ್ಚುತ್ತಿದೆ.

ಆರ್ಥಿಕ ಪರಿಸ್ಥಿತಿ, ವಯೋಪರಿಮಿತಿ ಮುಂತಾದ ಕಾರಣಗಳಿಂದ ತರಬೇತಿ ಪಡೆಯದೆ ವೃತ್ತಿಗಿಳಿದ ಅನೇಕ ಶಿಕ್ಷಕರಿಗೆ ಮೂಲ ತರಬೇತಿ ಪಡೆಯಲು ಸಾಧ್ಯವಾಗದು. ಅಂಥವರಿಗಾಗಿ ರಾಷ್ಟ್ರೀಯ ಶಿಕ್ಷಣ ಮಂಡಲಿಯೂ ಶಿಕ್ಷಣದ ಪ್ರಾದೇಶಿಕ ಕಾಲೇಜುಗಳೂ ಅಂಚೆಯ ಮುಖೇನ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಮಾಡಿವೆ. ಅಂಥ ಉಪಾಧ್ಯಾಯರು ತಮ್ಮ ಶಾಲೆಗಳಲ್ಲಿಯೇ ಕೆಲಸ ಮಾಡುತ್ತಿದ್ದು ನಿಯಮಿತ ವೃತ್ತಿಶಿಕ್ಷಣ ಪಡೆದ ಅನುಭವಿ ಉಪಾಧ್ಯಾಯರ ಮಾರ್ಗದರ್ಶನಲ್ಲಿ ನಿಗದಿ ಮಾಡಿರುವ ಸಂಖ್ಯೆಯಷ್ಟು ಅಭ್ಯಾಸಾರ್ಥ ಪಾಠಗಳನ್ನು ಕೊಡುವುದರ ಜೊತೆಗೆ ಬೇಸಿಗೆಯ ಬಿಡುವಿನಲ್ಲಿ ಸಂಬಂಧಿಸಿದ ಕಾಲೇಜುಗಳಿಗೆ ಹೋಗಿ ತಮ್ಮ ತಾತ್ತ್ವಿಕ ಪಾಠಕ್ರಮವನ್ನು ಸಾಗಿಸಬೇಕಾಗುವುದು. ಆಮೇಲೆ ಉಳಿದ ಶಿಕ್ಷಕ ವಿದ್ಯಾರ್ಥಿಗಳಂತೆ ಇವರೂ ವಿಶ್ವವಿದ್ಯಾನಿಲಯದ ಪರೀಕ್ಷೆಗಳಿಗೆ ಕೂಡಬೇಕಾಗುತ್ತದೆ.

ವೃತ್ತಿನಿರತ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರಿಗೆ ಅಗತ್ಯವಿರುವಂತೆ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ-ಶಿಕ್ಷಕರಿಗೂ (ಟೀಚರ್ ಎಜುಕೇಟರ್ಸ್‌) ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಣಾಧಿಕಾರಿಗಳಿಗೂ ಅಗತ್ಯವೆನಿಸುತ್ತದೆ. ಈಚೆಗೆ ಅಂಥ ಸೌಲಭ್ಯಗಳನ್ನು ಒದಗಿಸಲು ವಿಶ್ವವಿದ್ಯಾನಿಲಯಗಳೂ ರಾಜ್ಯ ಶಿಕ್ಷಣಶಾಖೆ ಯವರೂ ದೆಹಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್.ಸಿ.ಇ.ಆರ್.ಟಿ.) ಸಂಸ್ಥೆಯವರೂ ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆರಂಭಿಸಿರು ವರು. ನಡೆಯುತ್ತಿವೆ. ಎಲ್ಲ ರಾಜ್ಯಗಳಲ್ಲೂ ಈ ಕಾರ್ಯಕ್ರಮಗಳು ವ್ಯವಸ್ಥಿತರೂಪದಲ್ಲಿ ನಡೆದರೆ ಒಳ್ಳೆಯದು.(ಎಂ.ಎಚ್.ಎನ್.) [೧][೨]

ಉಲ್ಲೇಖಗಳು ಬದಲಾಯಿಸಿ