ಉದ್ಯೋಗ ವಿನಿಮಯ ವ್ಯವಸ್ಥೆ

ಉದ್ಯೋಗ ವಿನಿಮಯ ವ್ಯವಸ್ಥೆ: ಉದ್ಯೋಗಾರ್ಥಿಗಳನ್ನೂ ಉದ್ಯೋಗಕ್ಕೆ ನೇಮಕಮಾಡಿಕೊಳ್ಳುವವರನ್ನೂ ಒಟ್ಟಿಗೆ ತರುವ ವ್ಯವಸ್ಥೆ (ಎಂಪ್ಲಾಯ್ಮೆಂಟ್ ಎಕ್ಸ್‌ಚೇಂಚ್). ವಿವಿಧ ಕ್ಷೇತ್ರಗಳಲ್ಲೂ ಸ್ಥಳಗಳಲ್ಲೂ ಇರುವ ಉದ್ಯೋಗಾವಕಾಶಗಳನ್ನು ಉದ್ಯೋಗಾರ್ಥಿಗಳಿಗೆ ತಿಳಿಯಪಡಿಸಿ, ಕಾರ್ಮಿಕರ ಚಲನೆಯನ್ನು ಹೆಚ್ಚಿಸುವುದು ಉದ್ಯೋಗ ವಿನಿಮಯ ವ್ಯವಸ್ಥೆಯ ಒಂದು ಉದ್ದೇಶ. ತೆರವಾದ ಸ್ಥಾನಗಳ ಪ್ರಕಟಣೆ, ನೌಕರಿ ಬಯಸುವ ಅಭ್ಯರ್ಥಿಗಳ ನೋಂದಣಿ, ಕಾರ್ಮಿಕರ ಮಾರುಕಟ್ಟೆಯಲ್ಲಿ ಸಂಭವಿಸುತ್ತಿರುವ ಅಗತ್ಯಗಳ ಏರಿಳಿತಗಳ ಅಳೆತ-ಇವುಗಳ ಮೂಲಕ ಬೇಡಿಕೆಗೆ ತಕ್ಕಂತೆ ಕಾರ್ಮಿಕರ ಸರಬರಾಜಿನ ನಿಯಂತ್ರಣ ಸಾಧ್ಯವಾಗುವುದೆಂಬ ತತ್ತ್ವದ ತಳಹದಿಯ ಮೇಲೆ ಈ ವ್ಯವಸ್ಥೆ ಕೆಲಸಮಾಡುತ್ತದೆ. ಒಂದು ಪ್ರದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿರುವ ಕಾರ್ಮಿಕರು ಅಭಾವವಿರುವ ಇನ್ನೊಂದು ಪ್ರದೇಶಕ್ಕೆ ಚಲಿಸುವಂತೆ ಮಾಡುವ ಕಾರ್ಯದಲ್ಲಿ ಸಹಾಯಮಾಡಲು ಈ ವ್ಯವಸ್ಥೆ ಕೆಲವು ಪೂರ್ವಭಾವಿ ಕರ್ತವ್ಯ ನಿರ್ವಹಿಸುತ್ತದೆ. ನೇಮಕದಾರರು ತಮ್ಮಲ್ಲಿ ಖಾಲಿಯಿರುವ ನೌಕರಿಗಳ ಸಂಖ್ಯೆಯನ್ನು ಪ್ರಕಟಿಸಬೇಕೆಂದು ಅವರನ್ನು ಈ ವ್ಯವಸ್ಥೆ ಪ್ರಾರ್ಥಿಸಿಕೊಳ್ಳುತ್ತದೆ. ನೌಕರಿಗಳನ್ನು ಕುರಿತ ವಿವರಗಳನ್ನು ಈ ಪ್ರಕಟಣೆಯಲ್ಲಿ ನೀಡಬೇಕಾಗುತ್ತದೆ. ಖಾಲಿಯಿರುವ ಉದ್ಯೋಗದ ಸ್ವರೂಪ, ನೌಕರಿಯ ಅವಧಿ, ಮುಂದೆ ನೌಕರಿ ಲಭಿಸುವ ಸಂಭವ, ಬಡ್ತಿಯ ಅವಕಾಶ, ಅಭ್ಯರ್ಥಿಗೆ ಇರಬೇಕಾದ ಅರ್ಹತೆ, ನೌಕರಿಯ ಷರತ್ತುಗಳು ಮುಂತಾದ ವಿವರಗಳನ್ನೂ ಕೊಡಬೇಕಾಗುತ್ತದೆ. ಉದ್ಯೋಗ ಬಯಸುವವರೂ ತಮ್ಮ ಹೆಸರು, ಅರ್ಹತೆ, ಅನುಭವ, ಬಯಸುವ ಉದ್ಯೋಗ ಮುಂತಾದ ವಿವರ ನೀಡಿ ತಮ್ಮ ಹೆಸರುಗಳನ್ನು ನೋಂದಣಿಮಾಡಿಸ ಬೇಕಾಗುತ್ತದೆ. ಉದ್ಯೋಗ ವಿನಿಮಯ ವ್ಯವಸ್ಥೆ ಈ ಎಲ್ಲ ವಿವರಗಳನ್ನೂ ಪಡೆದುಕೊಂಡಮೇಲೆ ಉದ್ಯೋಗಾರ್ಥಿಗಳನ್ನು ಅವರಿಗೆ ತಕ್ಕ ಉದ್ಯೋಗಗಳಲ್ಲಿ ನೇಮಿಸುವುದು ಸಾಧ್ಯವಾಗುತ್ತದೆ. ಉದ್ಯೋಗ ವಿನಿಮಯ ವ್ಯವಸ್ಥೆಯ ಶಾಖೆಗಳು ದೇಶಾದ್ಯಂತ ಇರುತ್ತವೆ. ಈ ಶಾಖೆಗಳು ಸದಾ ಪರಸ್ಪರ ಸಂಪರ್ಕ ಹೊಂದಿರುತ್ತವೆ. ಆದ್ದರಿಂದ ಇವು ಒಂದು ಪ್ರದೇಶದಲ್ಲಿ ಅಧಿಕವಾಗಿರುವವರನ್ನು ಅವರ ಸೇವೆ ಅಗತ್ಯವಿರುವ ಇನ್ನೊಂದು ಪ್ರದೇಶದಲ್ಲಿ ಉದ್ಯೋಗದಲ್ಲಿ ತೊಡಗಿಸಬಹುದಾಗಿದೆ. ನೌಕರಿ ಎಲ್ಲೇ ಇರಲಿ, ಅದನ್ನು ಪಡೆಯಲು ಪ್ರತಿಯೊಬ್ಬ ವ್ಯಕ್ತಿಯೂ ಒಪ್ಪುವುದಾದರೆ ಮಾತ್ರವೇ ಈ ವ್ಯವಸ್ಥೆಯನ್ನು ಜಾರಿಗೆ ತರುವುದು ಸುಲಭ. ಆದರೆ ವೇತನಮಟ್ಟಗಳ ಹಾಗೂ ಪ್ರಾವೀಣ್ಯಗಳ ವ್ಯತ್ಯಾಸ, ವಿಶೇಷ ಪ್ರಾವೀಣ್ಯ, ವಸತಿ ಸಮಸ್ಯೆ, ಕುಟುಂಬ ಪರಿಸ್ಥಿತಿ, ಭೌಗೋಳಿಕ ಅಭಿಮಾನ ಮುಂತಾದ ಹಲವಾರು ಅಂಶಗಳು ಉದ್ಯೋಗ ವಿನಿಮಯ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೆ ಕೆಲವು ಉದ್ಯೋಗಪತಿಗಳು ಉದ್ಯೋಗ ವಿನಿಮಯ ವ್ಯವಸ್ಥೆಯ ಮೂಲಕ ಸೂಕ್ತ ವ್ಯಕ್ತಿಗಳು ದೊರಕುವುದಿಲ್ಲವೆಂದೂ ಈ ವ್ಯವಸ್ಥೆಯನ್ನು ಅವಲಂಬಿಸುವುದರಿಂದ ಕಾಲ ಹಾಗೂ ಉತ್ಪಾದನೆಯ ನಷ್ಟವಾಗುವುದೆಂದೂ ಭಾವಿಸುತ್ತಾರೆ. ಆದರೆ ಈ ಭಾವನೆಗೆ ವ್ಯತಿರಿಕ್ತವಾದ ಭಾವನೆಯೂ ಉಂಟು. ಉದ್ಯೋಗಾರ್ಥಿಗಳ ಸಂಗ್ರಹಣೆ, ಅವರ ಯೋಗ್ಯತೆಯ ಪರೀಕ್ಷೆ ಕರ್ತವ್ಯಗಳನ್ನು ನಿರ್ವಹಿಸಿ, ಪ್ರತಿಯೊಂದು ಸಂಸ್ಥೆಗೂ ಅದಕ್ಕೆ ತಕ್ಕಂಥವರನ್ನೇ ನೇಮಿಸುವುದರ ಸಂಪೂರ್ಣ ಹೊಣೆಯನ್ನು ವಿನಿಮಯ ವ್ಯವಸ್ಥೆ ವಹಿಸುವುದರಿಂದ ಇದು ಇಲ್ಲದಿದ್ದರೆ ಇಡೀ ಅರ್ಥ ವ್ಯವಸ್ಥೆಗೆ ಸಂಭವಿಸುತ್ತಿದ್ದ ವೃಥಾ ಕಾಲವ್ಯಯ ತಪ್ಪುವುದೆಂದೂ ಅನೇಕರ ಭಾವನೆ. ಉದ್ಯೋಗ ವಿನಿಮಯ ವ್ಯವಸ್ಥೆ ನಿಷ್ಪಕ್ಷಪಾತವಾಗಿಯೂ ಸಕಾಲಿಕವಾಗಿಯೂ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರವೇ ಅದು ಉದ್ಯೋಗಾರ್ಥಿಗಳಿಗೆ ಒಪ್ಪಿಗೆಯಾಗುವಂಥ ನೌಕರಿಗಳನ್ನೂ ಉದ್ಯೋಗಪತಿಗಳಿಗೆ ಉಚಿತವಾದ ನೌಕರರನ್ನೂ ಒದಗಿಸುವ ಕಾರ್ಯದಲ್ಲಿ ಯಶಸ್ವಿಯಾಗಬಲ್ಲುದು; ಅಲ್ಲದೆ ಪರಿಣಾಮಕಾರಿಯಾಗಿ ಕಾರ್ಯ ನಡೆಸಲೂಬಹುದು. ವಿಕಾಸ: ಉದ್ಯೋಗ ವಿನಿಮಯ ಕೇಂದ್ರಗಳ ಆವಶ್ಯಕತೆಯ ಅರಿವು ವಿಶ್ವದ ಜನತೆಗೆ ಕೈಗಾರಿಕೆಯ ಬೆಳೆವಣಿಗೆ ಪ್ರಾರಂಭವಾದಂದಿನಿಂದ ಉಂಟಾಯಿತೆಂದು ಹೇಳಬಹುದು. ಪ್ರಾರಂಭದಲ್ಲಿ ಖಾಸಗಿ ಉದ್ಯೋಗ ವಿನಿಮಯ ಕೇಂದ್ರಗಳು ಸ್ಥಾಪಿತವಾಗಿದ್ದುವು. ಕ್ರಮೇಣ ಸಾರ್ವಜನಿಕ ಉದ್ಯೋಗ ವಿನಿಮಯ ಕೇಂದ್ರಗಳ ಪ್ರಯೋಜನದ ಅರಿವುಂಟಾಗಿ ಅವುಗಳಿಗೆ ಹೆಚ್ಚು ಬೆಂಬಲ ದೊರಕಿತು. ಖಾಸಗಿ ಉದ್ಯೋಗ ವಿನಿಮಯ ಕೇಂದ್ರಗಳು ಲಾಭ ಸಂಪಾದನೆಯ ದೃಷ್ಟಿಯಿಂದ ಕೆಲಸಮಾಡುವ ಸಂಭವವುಂಟು. ಸಾರ್ವಜನಿಕ ಉದ್ಯೋಗ ವಿನಿಮಯ ಕೇಂದ್ರಗಳ ಉದ್ದೇಶಲಾಭವಲ್ಲ; ಸಾರ್ವಜನಿಕ ಸೇವೆ. ಆದ್ದರಿಂದ ಸಾರ್ವಜನಿಕ ಉದ್ಯೋಗ ವಿನಿಮಯ ಕೇಂದ್ರಗಳ ಅಗತ್ಯವನ್ನು ೧೯೧೯ನೆಯ ಇಸವಿಯಲ್ಲಿ ವಾಷಿಂಗ್ಟನ್ನಿನಲ್ಲಿ ಸಮಾವೇಶಗೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಎತ್ತಿ ತೋರಿಸಲಾಯಿತು. ಈ ಸಮ್ಮೇಳನದ ಒಡಂಬಡಿಕೆಯ ಪ್ರಕಾರ ಸಮ್ಮೇಳನಕ್ಕೆ ಸೇರಿದ ಪ್ರತಿಯೊಂದು ಸದಸ್ಯರಾಷ್ಟ್ರವೂ ತನ್ನ ದೇಶದಲ್ಲಿ ಆಯಾ ಸರ್ಕಾರದ ಅಧೀನಕ್ಕೊಳಪಟ್ಟ ಹಾಗೆ ಒಂದು ಉಚಿತ ಉದ್ಯೋಗ ವಿನಿಮಯ ಸೇವಾವ್ಯವಸ್ಥೆ ಸ್ಥಾಪಿಸಬೇಕೆಂದು ತೀರ್ಮಾನಿಸಲಾಯಿತು. ೧೯೪೮ರಲ್ಲಿ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಸೇರಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಮೂವತ್ತೊಂದನೆಯ ಮಹಾಧಿವೇಶನದಲ್ಲಿ ಈ ವಿಷಯವನ್ನು ಪುನಃ ಪ್ರಸ್ತಾಪಿಸಲಾಯಿತು. ಉದ್ಯೋಗ ವಿನಿಮಯ ವ್ಯವಸ್ಥೆಯ ಸ್ಥಾಪನೆಗೆ ಸಂಬಂಧಪಟ್ಟ ಒಡಂಬಡಿಕೆಯನ್ನು ತತ್ಕ್ಷಣವೇ ಅನುಷ್ಠಾನಕ್ಕೆ ತರಬೇಕೆಂಬ ವಿಷಯ ಎಲ್ಲ ಸದಸ್ಯರಾಷ್ಟ್ರಗಳಿಂದ ಸ್ವೀಕೃತವಾಗಿ ಆ ರಾಷ್ಟ್ರಗಳಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ಅಂಕುರಾರ್ಪಣವಾಯಿತು. ಆಧುನಿಕ ಕೈಗಾರಿಕಾಯುಗದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ಅವುಗಳ ಬಹುಮುಖ ಕಾರ್ಯಚಟುವಟಿಕೆಗಳಿಂದಾಗಿ ಬಹಳ ಪ್ರಾಮುಖ್ಯ ಗಳಿಸಿವೆ. ಈ ಕೇಂದ್ರಗಳು ಉದ್ಯೋಗಗಳನ್ನು ಸ್ವತಃ ಸೃಷ್ಟಿಸಲು ಶಕ್ತಿಯುತವಾಗಿಲ್ಲದಿದ್ದರೂ ಉದ್ಯೋಗಗಳ ಬೇಡಿಕೆ ಪೂರೈಕೆಗಳನ್ನು ಸಮನ್ವಯಗೊಳಿಸಿ, ದೇಶದಲ್ಲಿ ನಿರುದ್ಯೋಗವನ್ನು ಹೋಗಲಾಡಿಸುವುದೇ ಅಲ್ಲದೆ ದೇಶದ ಜನಶಕ್ತಿ ಸಂಪೂರ್ಣವಾಗಿ ಉಪಯೋಗಕ್ಕೆ ಬಂದು ಅದರ ಮೂಲಕ ರಾಷ್ಟ್ರೀಯ ಉತ್ಪಾದನೆ ಹೆಚ್ಚಿ ರಾಷ್ಟ್ರೀಯ ಆದಾಯ ಗರಿಷ್ಠ ಪ್ರಮಾಣ ಮುಟ್ಟಲು ಸಾಧ್ಯವಾಗು ವಂತೆ ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಗೂ ಅವನ ಅರ್ಹತೆಗೆ ತಕ್ಕಂತೆ ಉದ್ಯೋಗ ಒದಗಿಸಿ ಕೊಡುತ್ತವೆ. ದಳ್ಳಾಳಿಗಳ ಮೂಲಕ ಕಾರ್ಮಿಕರನ್ನು ಕೆಲಸಗಳಿಗೆ ನೇಮಿಸಿಕೊಳ್ಳುವಾಗ ಉಂಟಾಗಬಹುದಾದ ಲೋಪದೋಷಗಳ ನಿವಾರಣೆ ಸಾಧ್ಯವಾಗಿದೆ. ದೇಶದಲ್ಲಿನ ಒಟ್ಟು ಜನಶಕ್ತಿಗೆ ಒಂದು ವ್ಯವಸ್ಥಿತ ಮಾರುಕಟ್ಟೆಯನ್ನು ಒದಗಿಸಿಕೊಟ್ಟು, ಉತ್ಪಾದನೆಯ ನಾನಾ ಕವಲುಗಳಲ್ಲಿ ಶ್ರಮ ನೈಪುಣ್ಯಗಳನ್ನು ಸಮರ್ಪಕವಾಗಿ ಹಂಚುತ್ತಿವೆ. ಉದ್ಯೋಗಗಳು, ನಿರುದ್ಯೋಗ, ಜನಶಕ್ತಿ ಇವುಗಳ ಬಗ್ಗೆ ದೇಶದ ಜನತೆಗೆ ಮತ್ತು ಸರ್ಕಾರಕ್ಕೆ ಆವಶ್ಯಕವಾದ ವಾಸ್ತವಾಂಶವನ್ನು ಪ್ರಚುರಪಡಿಸುತ್ತಿವೆ. ಈಗಂತೂ ನಿರಾಶ್ರಿತರ, ಮಾಜಿ ಯೋಧರುಗಳ ಪುನರ್ವಸತಿ ವ್ಯವಸ್ಥೆಯನ್ನೂ ಪ್ರಶಂಸಾರ್ಹವಾಗಿ ಮಾಡುತ್ತಿವೆ. ವಿಷಯಪ್ರಸರಣ ಕಾರ್ಯವ ನ್ನಷ್ಟೇ ಅಲ್ಲದೆ ಕಾರ್ಮಿಕರಿಗೆ ಆವಶ್ಯಕವಾದ ತರಬೇತಿಯನ್ನೂ ಕೊಡಿಸುತ್ತಿವೆ. ಮಾರುಕಟ್ಟೆಯಲ್ಲಿ ಶ್ರಮ, ಬೇಡಿಕೆ ಮತ್ತು ಪೂರೈಕೆಗಳ ಸಮನ್ವಯ ಕಾರ್ಯದಲ್ಲಿ ವಿಳಂಬವಾಗುವುದನ್ನು ತಪ್ಪಿಸುವುದೇ ಅಲ್ಲದೆ ಶ್ರಮಶಕ್ತಿಗೆ ಹೆಚ್ಚು ಚಾಲನೆ ಕೊಡಲು ಇವು ಸಹಾಯಕವಾಗಿವೆ. ಈ ರೀತಿಯ ಚಾಲನೆಯಿಂದ ಅದರ ಉಪಯೋಗ ಹೆಚ್ಚುತ್ತದೆ. ಪ್ರಪಂಚದ ಎಲ್ಲ ನಾಗರಿಕ ರಾಷ್ಟ್ರಗಳಲ್ಲೂ ಈ ಕೇಂದ್ರಗಳು ಈ ಉದ್ದೇಶಗಳಿಂದ ಕೆಲಸ ಮಾಡುತ್ತಿವೆ. ಸರ್ಕಾರದ ಅಧೀನಕ್ಕೊಳಪಟ್ಟ ಸಾರ್ವಜನಿಕ ಉದ್ಯೋಗ ವಿನಿಮಯ ಕೇಂದ್ರಗಳನ್ನು ಪ್ರಥಮತಃ ೧೮೯೧ರಲ್ಲಿ ನ್ಯೂಜಿûಲೆಂಡಿನಲ್ಲಿ ಸ್ಥಾಪಿಸಲಾಯಿತು. ಜರ್ಮನಿಯಲ್ಲಿ ಮೊದಲ ವಿನಿಮಯ ಕೇಂದ್ರಗಳು ೧೮೮೩ರಲ್ಲಿ ಸ್ಥಾಪಿತವಾದರೂ ೧೯೧೮ರಲ್ಲಿ ಅವುಗಳ ರಾಷ್ಟ್ರೀಕರಣ ವಾಯಿತು. ೧೯೨೭ರಲ್ಲಿ ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಲೇಬರ್ ಎಕ್ಸ್‌ಚೇಂಚ್ ಅಂಡ್ ಎಂಪ್ಲಾಯ್ಮೆಂಟ್ ಇನ್ಷೂರೆನ್ಸ್‌ ಎಂಬ ಉದ್ಯೋಗ ವಿನಿಮಯ ಕೇಂದ್ರ ಬರ್ಲಿನ್ನಿನಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆ ಸರ್ಕಾರ, ಕಾರ್ಮಿಕರು ಮತ್ತು ಮಾಲೀಕರ ಪ್ರತಿನಿಧಿಗಳನ್ನೊಳ ಗೊಂಡ ಒಂದು ಮಂಡಳಿಯ ಅಧೀನದಲ್ಲಿ ಕೆಲಸಮಾಡುತ್ತಿದೆ. ಫ್ರಾನ್ಸ್ ನಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ಪ್ರಾರಂಭದಲ್ಲಿ ಸಣ್ಣ ಸಣ್ಣ ಆಡಳಿತ ವಿಭಾಗಗಳಿಗೆ ಮೀಸಲಾದ ಕೇಂದ್ರಗಳಾಗಿದ್ದು ೧೯೧೪-೧೮ರಲ್ಲಿ ವಿನಿಮಯ ಇಲಾಖೆಗಳಾಗಿ ಪರಿವರ್ತನೆ ಹೊಂದಿದುವು. ಫ್ರಾನ್ಸಿನಲ್ಲಿ ಕಾರ್ಮಿಕ ಸಚಿವರ ಅಧೀನದಲ್ಲಿರುವ ಪ್ರಾದೇಶಿಕ ತೀರುವೆ ಮನೆ (ಕ್ಲಿಯರಿಂಗ್ ಹೌಸ್) ಮತ್ತು ಕೇಂದ್ರಗಳನ್ನು ಆಯಾ ಉದ್ಯೋಗಗಳಿಗನುಸಾರವಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಔದ್ಯೋಗಿಕ ಪಂಗಡವೂ ತನಗೆ ಸಂಬಂಧಿಸಿದ ಕಾರ್ಮಿಕರು ಮತ್ತು ಉದ್ಯೋಗಪತಿಗಳೊಂದಿಗೆ ಸಮಾಲೋಚನೆ ನಡೆಸಿ ರೂಪಿಸಲಾದ ನೀತಿ ಅನುಸರಿಸುತ್ತದೆ. ಸೋವಿಯತ್ ಒಕ್ಕೂಟದಲ್ಲಿ ೧೯೩೧ರಲ್ಲಿ ಸ್ಥಾಪಿತವಾದ ಸಿಬ್ಬಂದಿ ಕಚೇರಿಗಳು ಉದ್ಯೋಗ ವಿನಿಮಯ ಕೇಂದ್ರಗಳ ಕೆಲಸ ನಿರ್ವಹಿಸುತ್ತವೆ. ಎಲ್ಲ ಸಂಸ್ಥೆಗೂ ತಮಗೆ ಬೇಕಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಈ ಕೇಂದ್ರಗಳನ್ನು ಬಳಸಿಕೊಳ್ಳಬೇಕಾದ್ದು ಕಡ್ಡಾಯ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ೧೯೧೩ಕ್ಕೆ ಮುಂಚೆ ಪರವಾನಿಗೆ ಪಡೆದ ಉಚಿತ ಉದ್ಯೋಗ ನಿವಿಮಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದುವು. ಅಂಥ ಕೇಂದ್ರಗಳನ್ನು ಮೊದಲು ನ್ಯೂಯಾರ್ಕಿನಲ್ಲೂ ಅನಂತರ ಒಹಾಯೊ ರಾಜ್ಯದಲ್ಲೂ ಸ್ಥಾಪಿಸಲಾಯಿತು. ಸಂಯುಕ್ತಸಂಸ್ಥಾನ ಸರ್ಕಾರ ಒಂದನೆಯ ಮಹಾಯುದ್ಧದ ಕಾಲದಲ್ಲಿ ಒಂದು ರಾಷ್ಟ್ರೀಯ ಉದ್ಯೋಗ ಸೇವಾಸಂಸ್ಥೆಯನ್ನು ಕಾನೂನುಬದ್ಧವಾಗಿ ಸ್ಥಾಪಿಸಿತು. ರಾಜ್ಯ ಉದ್ಯೋಗ ಸೇವಾಸಂಸ್ಥೆಗಳೂ ಸೌಲಭ್ಯ ಇಲ್ಲದೆ ನಗರಗಳಲ್ಲಿ ಉದ್ಯೋಗ ವಿನಿಮಯ ಸೌಲಭ್ಯ ಒದಗಿಸಿಕೊಡುವುದೇ ಇದರ ಮುಖ್ಯ ಉದ್ದೇಶ. ಯುದ್ಧ ನಿಂತಮೇಲೆ ಈ ಸಂಸ್ಥೆಯ ಅಧೀನದಲ್ಲಿ ಕೆಲಸಮಾಡುತ್ತಿದ್ದ ವಿನಿಮಯ ಕೇಂದ್ರಗಳನ್ನು ಆಯಾ ರಾಜ್ಯಗಳ ಆಡಳಿತಗಳಿಗೆ ವಹಿಸಲಾಯಿತು. ಅಂತಾರಾಜ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾದ ಒಂದು ಕಾಯಿದೆಯ ಪ್ರಕಾರ ಈಗ ರಾಷ್ಟ್ರಾದ್ಯಂತ ಉಚಿತ ಸಾರ್ವಜನಿಕ ಉದ್ಯೋಗ ವಿನಿಮಯ ಕೇಂದ್ರಗಳಿವೆ. ಇವುಗಳ ಆಡಳಿತದ ಜವಾಬ್ದಾರಿ ರಾಜ್ಯಗಳದಾದರೆ ಇವುಗಳ ಕಾರ್ಯಚಟುವಟಿಕೆಗಳ ಪರಸ್ಪರ ಹೊಂದಾಣಿಕೆ ಸಂಯುಕ್ತ ಸರ್ಕಾರದ ಜವಾಬ್ದಾರಿ. ಅಮೆರಿಕಸಂಯುಕ್ತ ಸಂಸ್ಥಾನದಲ್ಲಿ ಈಗ ಸುಮಾರು ೨,೦೦೦ ಪೂರ್ಣಕಾಲಿಕ ಸ್ಥಳೀಯ ಸಾರ್ವಜನಿಕ ಉದ್ಯೋಗ ವಿನಿಮಯ ಕೇಂದ್ರಗಳಿವೆ. ಇವೂ ಅಲ್ಲದೆ ಖಾಸಗಿ ಉದ್ಯೋಗ ವಿನಿಯಮ ಕೇಂದ್ರಗಳೂ ಕಾರ್ಯ ನಿರ್ವಹಣೆಯಲ್ಲಿ ತೊಡಗಿದ್ದು ಹೆಚ್ಚು ಲಾಭ ಗಳಿಸುತ್ತಿವೆ. ಬ್ರಿಟನ್ನಿನಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ೧೮೮೫ರಲ್ಲಿ ಪ್ರಾರಂಭವಾದರೂ ಶಾಸನಬದ್ಧವಾಗಿ ೧೯೦೯ರ ಕಾರ್ಮಿಕ ಉದ್ಯೋಗ ವಿನಿಮಯ ಕಾಯಿದೆಯ ಪ್ರಕಾರ ಸರ್ಕಾರಿ ಉದ್ಯೋಗ ವಿನಿಮಯ ಕೇಂದ್ರಗಳು ಬೋರ್ಡ್ ಆಫ್ ಟ್ರೇಡಿನ ಆಡಳಿತಕ್ಕೊಳಪಟ್ಟು ಸ್ಥಾಪಿತವಾದುವು. ಇವುಗಳ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ೧೯೧೯ರಲ್ಲಿ ನೇಮಿಸಲಾದ ಒಂದು ಅಧ್ಯಯನ ಮಂಡಲಿಯ ಸಲಹೆಯ ಮೇರೆಗೆ ಬ್ರಿಟನ್ನಿನಲ್ಲಿ ನಿರುದ್ಯೋಗ ವಿಮೆ ಕಾಯಿದೆ ಜಾರಿಗೆ ಬಂತು ಈಗ ಬ್ರಿಟನ್ ನಲ್ಲಿ ಕಾರ್ಮಿಕ ಮತ್ತು ರಾಷ್ಟ್ರೀಯ ವಿಮಾ ಸಚಿವಾಲಯವೇ ಉದ್ಯೋಗ ಸೇವಾಸೌಲಭ್ಯಗಳ ಜವಾಬ್ದಾರಿ ಹೊತ್ತಿದೆ. ಇದರ ಜೊತೆಗೆ ವೃತ್ತಿ ಶಿಕ್ಷಣ ಮತ್ತು ವೃತ್ತಿ ನಿರ್ದೇಶನ ಕಾರ್ಯಗಳೂ ಇದರ ಕಾರ್ಯವ್ಯಾಪ್ತಿಯಲ್ಲಿ ಸೇರಿವೆ. ಈ ಸಂಬಂಧವಾಗಿಯೇ ೧೯೪೫ರಲ್ಲಿ ಉದ್ಯೋಗ ಮತ್ತು ತರಬೇತಿ ಕಾಯಿದೆ ಜಾರಿಗೆ ಬಂತು. ಉದ್ಯೋಗ ವಿನಿಮಯಕ್ಕೆ ಸಂಬಂಧಿಸಿದಂತೆ ೯೦೦ ಸ್ಥಳೀಯ ಮತ್ತು ಶಾಖಾ ಕಚೇರಿಗಳು ದೇಶಾದ್ಯಂತ ಕೆಲಸಮಾಡುತ್ತಿವೆ. ಕಾರ್ಮಿಕ-ಮಾಲೀಕರೊಂದಿಗೆ ನಿಕಟ ಸಂಬಂಧ ಹೊಂದುವುದು ಸ್ಥಳೀಯ ಸಮಿತಿಗಳ ಉದ್ದೇಶ. ಇವುಗಳ ಜೊತೆಗೆ ಯುವಕ ಉದ್ಯೋಗ ಸೇವಾಸಂಸ್ಥೆಗಳೂ ಅಶಕ್ತರ ಪುನವರ್ಯ್‌ ವಸ್ಥೆಯ ಸೇವಾ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ಬ್ರಿಟನ್ನಿನಲ್ಲಿರುವ ಉದ್ಯೋಗ ವಿನಿಮಯ ಕೇಂದ್ರಗಳೇ ನಿರುದ್ಯೋಗಿಗಳಿಗೆ ಪರಿಹಾರ ನೀಡುವ ಕರ್ತವ್ಯವನ್ನೂ ನಿರ್ವಹಿಸುತ್ತಿವೆ. ಏಕೆಂದರೆ ಇವೆರಡು ಕರ್ತವ್ಯಗಳನ್ನೂ ಒಂದೇ ಸಂಸ್ಥೆಯ ವ್ಯಾಪ್ತಿಗೆ ಒಳಪಡಿಸುವುದರಿಂದ ಅಭ್ಯರ್ಥಿಗಳ ಉದ್ಯೋಗೇಚ್ಛೆಯ ಹಿಂದಿರುವ ಪ್ರಾಮಾಣಿಕತೆಯನ್ನು ಪರಿಶೀಲಿಸುವುದು ಸಾಧ್ಯ. ಸರ್ಕಾರದಿಂದ ನಿಯಂತ್ರಿತವಾದ ಉದ್ಯೋಗ ವಿನಿಮಯ ವ್ಯವಸ್ಥೆಗಳೇ ಅಲ್ಲದೆ ಇನ್ನೂ ಅನೇಕ ಸಂಸ್ಥೆಗಳು ಕಾರ್ಮಿಕರಿಗೆ ನೌಕರಿಗಳನ್ನು ಒದಗಿಸುವ ಕೆಲಸದಲ್ಲಿ ನಿರತವಾಗಿವೆ. ಕಾರ್ಮಿಕ ಸಂಘಗಳು, ಭ್ರಾತೃಸಮಾಜಗಳು, ಮತೀಯ ಪಂಗಡಗಳು, ಲೋಕೋಪಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮುಂತಾದವು ಉದ್ಯೋಗ ವಿನಿಮಯ ವಿಭಾಗಗಳನ್ನು ನಡೆಸುತ್ತಿವೆ. ಶುಲ್ಕ ಪಡೆದು ಈ ಕೆಲಸ ನಿರ್ವಹಿಸುವ ಖಾಸಗಿ ಉದ್ಯೋಗ ವಿನಿಮಯ ಸಂಸ್ಥೆಗಳೂ ಉಂಟು. ೧೯೧೯ರ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಅನಂತರ ಅದರ ಸದಸ್ಯ ರಾಷ್ಟ್ರಗಳು ಕೇಂದ್ರೀಯ ಆಡಳಿತಕ್ಕೆ ಒಳಪಟ್ಟ ಉಚಿತ ಸಾರ್ವಜನಿಕ ಉದ್ಯೋಗ ವಿನಿಮಯ ವ್ಯವಸ್ಥೆಗಳನ್ನು ಸ್ಥಾಪಿಸಿವೆ. ಸಾರ್ವಜನಿಕ ಹಾಗೂ ಖಾಸಗಿ ವಿನಿಮಯ ವ್ಯವಸ್ಥೆಗಳೆರಡು ಇರುವ ಎಡೆಗಳಲ್ಲಿ ಇವೆರಡರ ಕಾರ್ಯಗಳಲ್ಲೂ ಹೊಂದಾಣಿಕೆ ತರುವ ಕ್ರಮಗಳನ್ನು ಕೈಕೊಳ್ಳಲಾಗಿದೆ. ಹೀಗೆ ಈಗ ಪ್ರಪಂಚದಲ್ಲಿ ಹೆಚ್ಚು ಕಡಿಮೆ ಎಲ್ಲ ದೇಶಗಳಲ್ಲೂ ಉದ್ಯೋಗ ವಿನಿಮಯ ವ್ಯವಸ್ಥೆಗಳು ಏಕರೀತಿಯ ವ್ಯವಸ್ಥೆಗೆ ಅನುಗುಣವಾಗಿ ಕೆಲಸಮಾಡುತ್ತಿರುವುದನ್ನು ಕಾಣಬಹುದು. ನೌಕರಿಗಳನ್ನು ದೊರಕಿಸಿಕೊಡುವುದರ ಜೊತೆಗೆ ಈ ವ್ಯವಸ್ಥೆ ಇನ್ನೂ ನಾನಾ ಬಗೆಯ ಸೇವೆಗಳನ್ನು ಸಲ್ಲಿಸುತ್ತದೆ; ಉದ್ಯೋಗ ಸಮಸ್ಯೆಗಳನ್ನು ಹೊಂದಿರುವವರಿಗೆ ಸಲಹೆ ನೀಡುವುದು ಒಂದು ಸೇವೆ. ಪ್ರಾವೀಣ್ಯಪಡೆದ ಉದ್ಯೋಗಾರ್ಥಿಗಳಿಗೂ ದೈಹಿಕ ನ್ಯೂನತೆಗಳಿಗೆ ಒಳಗಾದವ ರಿಗೂ ತಕ್ಕ ಉದ್ಯೋಗಗಳನ್ನು ದೊರಕಿಸಿಕೊಡಲು ಅನುಸರಿಸುತ್ತಿರುವ ವಿಧಾನಗಳು ವಿಶೇಷ ರೀತಿಯವು. ಭಾರತದಲ್ಲಿ: ಉಚಿತ ಉದ್ಯೋಗ ವಿನಿಮಯ ವ್ಯವಸ್ಥೆ ಏರ್ಪಡಿಸಬೇಕೆಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ೧೯೧೯ರಲ್ಲಿ ಮಾಡಿದ ಸಲಹೆಯನ್ನು ಭಾರತ ಸರ್ಕಾರ ಮೊದಲು ಅನುಮೋದಿಸಿದರೂ ಅನಂತರ ೧೯೩೮ರಲ್ಲಿ ಅದನ್ನು ತಿರಸ್ಕರಿಸಿತು. ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಕಾರ್ಖಾನೆಗಳ ಬಾಗಿಲುಗಳಲ್ಲೇ ದೊರಕುವುದರಿಂದ ಉದ್ಯೋಗ ವಿನಿಮಯ ಕೇಂದ್ರಗಳ ಆವಶ್ಯಕತೆ ಇಲ್ಲವೆಂಬುದು ಆಗ ನೇಮಕವಾದ ಒಂದು ಆಯೋಗದ (ರಾಯಲ್ ಕಮಿಷನ್ ಆಫ್ ಲೇಬರ್) ಅಭಿಪ್ರಾಯವಾಗಿತ್ತು. ಆದರೆ ಕಾರ್ಮಿಕರ ಹಾಗು ಉದ್ಯೋಗಪತಿಗಳ ಅನೇಕ ಸಂಘಗಳೂ ಸಪ್ರುಸಮಿತಿಯೂ ಕಾರ್ಮಿಕ ವಿಷಯಗಳ ಪರಿಶೀಲನಾ ಸಮಿತಿಯೂ ಇಂಥ ಅನೇಕ ಸಮಿತಿಗಳೂ ರಾಷ್ಟ್ರದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಸಲಹೆಗೆ ಬೆಂಬಲ ನೀಡಿದವು. ಎರಡನೆಯ ಮಹಾಯುದ್ಧದ ಕಾಲದಲ್ಲಿ ತಂತ್ರಜ್ಞರ ಅಭಾವವನ್ನು ಸರ್ಕಾರ ಎದುರಿಸ ಬೇಕಾಗಿ ಬಂದಾಗ ಯೋಗ್ಯವ್ಯಕ್ತಿಗಳಿಗೆ ತಾಂತ್ರಿಕ ತರಬೇತು ನೀಡುವುದಕ್ಕಾಗಿ ಒಂಬತ್ತು ಉದ್ಯೋಗ ವಿನಿಮಯ ಕೇಂದ್ರಗಳನ್ನು ೧೯೪೩-೪೪ರಲ್ಲಿ ಸ್ಥಾಪಿಸಬೇಕಾಯಿತು. ಯುದ್ಧ ಮುಗಿದ ಮೇಲೆ ಈ ತಂತ್ರಜ್ಞರ ಮತ್ತು ಯುದ್ಧಭೂಮಿಯಿಂದ ಹಿಂತಿರುಗಿದ ಸಿಪಾಯಿಗಳ ಪುನರ್ವ್ಯವಸ್ಥೆಗಾಗಿ ಈ ಉದ್ಯೋಗ ವಿನಿಮಯ ಕೇಂದ್ರಗಳ ಕಾರ್ಯವ್ಯಾಪ್ತಿಯನ್ನು ವಿಶಾಲಗೊಳಿಸುವುದು ಅನಿವಾರ್ಯವಾಯಿತು. ಉದ್ಯೋಗ ಮತ್ತು ಪುನರ್ ವ್ಯವಸ್ಥೆಯ ಡೈರೆಕ್ಟರ್-ಜನರಲ್ರ ಕಚೇರಿ ಸ್ಥಾಪಿತವಾದದ್ದು ಆಗ. ಈ ಸಂಸ್ಥೆಯ ಆಡಳಿತಕ್ಕೊಳಪಟ್ಟಂತೆ ಎಪ್ಪತ್ತು ಉದ್ಯೋಗ ವಿನಿಮಯ ಕೇಂದ್ರಗಳನ್ನು ದೇಶಾದ್ಯಂತ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಈ ಕೇಂದ್ರಗಳು ತರಬೇತಿ ಮತ್ತು ಪುನರ್ ವ್ಯವಸ್ಥೆ ಕೇಂದ್ರಗಳಾಗಿದ್ದುವು. ಇವುಗಳ ಕಾರ್ಯವ್ಯಾಪ್ತಿಯನ್ನು ಮತ್ತೆ ವಿಶಾಲಗೊಳಿಸಿದ್ದು ೧೯೪೮ರಲ್ಲಿ. ಉದ್ಯೋಗ ಬಯಸುವ ಎಲ್ಲ ಕಾರ್ಮಿಕರಿಗೂ ನೆರವು ನೀಡುವ ವ್ಯವಸ್ಥೆ ಬಂದದ್ದು ಆಗ. ಇವುಗಳ ಜೊತೆಗೆ ನವದೆಹಲಿಯಲ್ಲಿ ಸ್ಥಾಪಿಸಲಾದ ಕೇಂದ್ರೀಯ ಉದ್ಯೋಗ ವಿನಿಮಯ ವ್ಯವಸ್ಥೆ ಅಂತಾರಾಜ್ಯ ಉದ್ಯೋಗಾವಕಾಶಗಳ ತೀರುವಿಕೆಗೆ ಗಮನ ಕೊಟ್ಟಿದೆ. ಪ್ರತಿಯೊಂದು ಪ್ರಾದೇಶಿಕ ಉದ್ಯೋಗ ವಿನಿಮಯ ಕೇಂದ್ರದಲ್ಲೂ ಒಂದು ಪ್ರತ್ಯೇಕ ಸ್ತ್ರೀ ವಿಭಾಗ ತೆರೆಯಲಾಯಿತು. ಗ್ರಾಮಾಂತರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ದೊರಕಿಸುವ ಉದ್ದೇಶದಿಂದ ಚಲಿಸುವ ಉದ್ಯೋಗ ವಿನಿಮಯ ಕೇಂದ್ರಗಳು ಸ್ಥಾಪಿತವಾಗಿವೆ. ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ಬೆಳೆಸಿ ಸುವ್ಯವಸ್ಥಿತಗೊಳಿಸಲು ಸೂಕ್ತ ಸಲಹೆ ನೀಡಬೇಕೆಂದು ೧೯೫೬ರಲ್ಲಿ ಭಾರತ ಸರ್ಕಾರ ಶಿವರಾವ್ ಸಮಿತಿಯನ್ನು ನೇಮಿಸಿತು. ಆರ್ಥಿಕಾಭಿವೃದ್ಧಿ ಕಾರ್ಯದಲ್ಲಿ ಉದ್ಯೋಗ ವಿನಿಮಯ ವ್ಯವಸ್ಥೆಗಳು ಪ್ರಮುಖ ಪಾತ್ರವಹಿಸಬಲ್ಲುವೆಂಬುದು ಈ ಸಮಿತಿ ನೀಡಿದ ಅಭಿಪ್ರಾಯ. ಜಪಾನಿನಲ್ಲಿ ಶೀಘ್ರ ಕೈಗಾರಿಕಾಭಿವೃದ್ಧಿಯ ಕಾಲದಲ್ಲಿ ಅಲ್ಲಿನ ಉದ್ಯೋಗ ವಿನಿಮಯ ಕೇಂದ್ರಗಳು ಅನೇಕ ಬಗೆಯಲ್ಲಿ ಸೇವೆ ಸಲ್ಲಿಸಿದುವೆಂಬ ಅಂಶವನ್ನು ಆ ಸಮಿತಿ ಸರ್ಕಾರದ ಗಮನಕ್ಕೆ ತಂದಿತು. ಜಪಾನಿನ ಈ ಕೇಂದ್ರಗಳು ಅಗತ್ಯವಾದ ಸಿಬ್ಬಂದಿಗೆ ಕೆಲಸ ಕೊಡಿಸಿದುವು; ಕೆಲಸಗಾರರಿಗೆ ಅಗತ್ಯವಾದ ಔದ್ಯೋಗಿಕ ಸಲಹೆಗಳನ್ನೂ ತರಬೇತಿ ಸೌಲಭ್ಯಗಳನ್ನೂ ಒದಗಿಸಿಕೊಟ್ಟುವು; ಉದ್ಯೋಗಗಳು ಇದ್ದಲ್ಲಿಗೆ ಕಾರ್ಮಿಕರು ಚಲಿಸುವುದು ಸಾಧ್ಯವಾಗುವಂತೆ ಅವರಿಗೆ ಸಾಲ ನೀಡಿದುವು. ಆದ್ದರಿಂದ ಭಾರತದಲ್ಲೂ ಉದ್ಯೋಗ ವಿನಿಮಯ ಕೇಂದ್ರಗಳನ್ನು ಅಭಿವೃದ್ಧಿ ಗೊಳಿಸಲು ಈ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂಬುದು ಸರ್ಕಾರಕ್ಕೆ ಈ ಸಮಿತಿ ಮಾಡಿದ ಶಿಫಾರಸು. ೧೯೬೪ರ ಅಂತ್ಯದ ವೇಳೆಗೆ ಭಾರತದಲ್ಲಿ ಕೆಲಸಮಾಡುತ್ತಿದ್ದ ಉದ್ಯೋಗ ವಿನಿಮಯ ಕೇಂದ್ರಗಳ ಸಂಖ್ಯೆಯನ್ನು ೩೬೫ಕ್ಕೆ ಏರಿಸಲಾಯಿತು. ಇದರ ಜೊತೆಗೆ ಉದ್ಯೋಗ ವಿನಿಮಯ ವ್ಯವಸ್ಥೆಗಳ (ತೆರವಾದ ಸ್ಥಾನಗಳ ಕಡ್ಡಾಯ ಪ್ರಕಟಣೆ) ೧೯೬೦ರ ಶಾಸನವನ್ನು ಸರ್ಕಾರ ಜಾರಿಗೆ ತಂದಿತು. ಇದರ ಪ್ರಕಾರ ಇಪ್ಪತ್ತೈದಕ್ಕಿಂತ ಹೆಚ್ಚು ಸಂಖ್ಯೆಯ ಕೆಲಸಗಾರರನ್ನು ಹೊಂದಿರುವ ಎಲ್ಲ ಉದ್ಯೋಗಪತಿಗೂ ತಮ್ಮಲ್ಲಿ ಖಾಲಿ ಬೀಳುವ ಎಲ್ಲ ಪ್ರವೀಣ ಕರ್ಮಗಳ ಹುದ್ದೆಗಳನ್ನೂ ಉದ್ಯೋಗ ವಿನಿಮಯ ಕೇಂದ್ರಗಳಿಗೆ ತಿಳಿಯಪಡಿಸಬೇಕಾದ್ದು ಕಡ್ಡಾಯ. ಉದ್ಯೋಗ ವಿನಿಮಯ ಕೇಂದ್ರಗಳ ಆಡಳಿತ ವಿಷಯವೂ ಈಗ ರಾಜ್ಯ ಸರ್ಕಾರಗಳಿಗೆ ವರ್ಗವಾಗಿದೆ. ಕೇಂದ್ರ ಸರ್ಕಾರ ಸ್ಥೂಲ ನೀತಿ ನಿರ್ಣಯ ಹಾಗೂ ಪ್ರಚಾರ ಕಾರ್ಯವನ್ನು ಮಾತ್ರ ತನ್ನಲ್ಲಿ ಉಳಿಸಿಕೊಂಡಿದೆ. ಇಷ್ಟಾದರೂ ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ಸಾಕಷ್ಟು ಸಮರ್ಪಕವಾಗಿ ಕೆಲಸಮಾಡುತ್ತಿಲ್ಲವೆಂಬ ಆಕ್ಷೇಪಣೆ ಉಂಟು. ಇವುಗಳ ಸಿಬ್ಬಂದಿಯ ಅನನುಭವವೂ ಈ ಕೇಂದ್ರಗಳ ಕಾರ್ಯಗಳ ಸಮನ್ವಯದ ಅಭಾವವೂ ಈ ಪರಿಸ್ಥಿತಿಗೆ ಕಾರಣವೆಂದು ಹೇಳಲಾಗಿದೆ. (ಜಿ.ಬಿ.ಕೆ.;ಎಸ್.ಎನ್.ಎ.)