ಉದ್ಯೋಗ ಮೀಮಾಂಸೆ: ಉತ್ಪಾದನೆ, ಉದ್ಯೋಗ ಮತ್ತು ವರಮಾನಗಳ ನಿರ್ಣಾಯಕಗಳನ್ನು ಕುರಿತ ಆರ್ಥಿಕ ವಿವೇಚನೆ (ಥಿಯೊರಿ ಆಫ್ ಎಂಪ್ಲಾಯ್ಮೆಂಟ್). ಈ ಬಗ್ಗೆ ಎರಡು ಬಗೆಯ ಸಿದ್ಧಾಂತಗಳು ಪ್ರಚಲಿತವಾಗಿವೆ. ಇವುಗಳಲ್ಲೊಂದು ಅಭಿಜಾತ ಪಂಥದ್ದಾದರೆ ಇನ್ನೊಂದು ಕೇನ್ಸ್‌ ಪ್ರತಿಪಾದಿಸಿದ್ದು. ಕೇನ್ಸ್‌ ವಿವರಣೆಗೆ ಹೆಚ್ಚಿನ ಮನ್ನಣೆ ದೊರೆತಿದೆ. ಇದನ್ನು ಈಚಿನ ಅನೇಕರು ಪುಷ್ಟೀಕರಿಸಿದ್ದಾರೆ. ಅಭಿಜಾತ ದೃಷ್ಟಿಯೂ ಕೆಲವು ಆಧುನಿಕ ಅರ್ಥಶಾಸ್ತ್ರಜ್ಞರಿಂದ ಪುನಶ್ಚೇತನಗೊಂಡು ನವ ಅಭಿಜಾತ ಸಿದ್ಧಾಂತವಾಗಿ ಕೆಲವರ ಮನ್ನಣೆ ಪಡೆದಿದೆ.

ಅಭಿಜಾತ ಸಿದ್ಧಾಂತ

ಬದಲಾಯಿಸಿ

ಉದ್ಯೋಗವನ್ನು ಕುರಿತ ಅಭಿಜಾತ ಅರ್ಥಶಾಸ್ತ್ರಜ್ಞರ ಸಿದ್ಧಾಂತ ನಿಂತಿರುವುದು. ಎರಡು ಆಧಾರಸ್ತಂಭಗಳ ಮೇಲೆ. ಸಮಾಜದಲ್ಲಿ ಅನುಭೋಗಿಗಳೂ ಇತರರೂ ತಮಗೆ ಬಂದ ವರಮಾನವನ್ನೆಲ್ಲಾ ವೆಚ್ಚಮಾಡುತ್ತಾರೆ; ವೆಚ್ಚಮಾಡದೆ ಇರುವ ಸಂಭವವೇ ಇಲ್ಲ ಎಂಬುದು ಇವರ ಒಂದು ಊಹೆ. ಒಂದು ವೇಳೆ ಸಮಾಜದಲ್ಲಿ ಉಂಟಾದ ಒಟ್ಟು ವರಮಾನದಲ್ಲಿ ಸ್ವಲ್ಪ ಭಾಗವನ್ನು ವೆಚ್ಚ ಮಾಡದೆ ಇರುವ ಪರಿಸ್ಥಿತಿ ಇದ್ದರೂ ಬೆಲೆ ಕೂಲಿಗಳ ಪುಟಿತದ ಪರಿಣಾಮವಾಗಿ ಸಮಾಜದಲ್ಲಿ ಉದ್ಯೋಗ, ವಾಸ್ತವ ವರಮಾನ, ವಾಸ್ತವ ಉತ್ಪಾದನೆ ಇವುಗಳಲ್ಲಿ ಇಳಿತಾಯ ಉಂಟಾಗದೆ, ಪೂರ್ಣಮಟ್ಟದ ಉದ್ಯೋಗ-ಪರಿಸ್ಥಿತಿ ಇರುತ್ತದೆ ಎಂಬುದು ಇವರ ಎರಡನೆಯ ಊಹೆ. ಅಭಿಜಾತ ಅರ್ಥಶಾಸ್ತ್ರಜ್ಞರು ಸಂಪೂರ್ಣ ಉದ್ಯೋಗಸಮತೆಯ ಸಿದ್ಧಾಂತ ಪ್ರತಿಪಾದಿಸಿದರೆನ್ನಬಹುದು. ಅಭಿಜಾತ ದೃಷ್ಟಿಯ ಸಂಪೂರ್ಣ ಉದ್ಯೋಗ ಸಮತೆಯ ಸಿದ್ಧಾಂತದ ಪ್ರಕಾರ ನಿರುದ್ಯೋಗಕ್ಕೆ ಅಸ್ತಿತ್ವವಿಲ್ಲ. ಅಂದರೆ ಸಮಾಜದಲ್ಲಿ ನಿರುದ್ಯೋಗ ಇರುವುದೇ ಇಲ್ಲವೆಂಬ ಅಭಿಪ್ರಾಯವಲ್ಲ. ನಿರುದ್ಯೋಗ ಸಂಭವಿಸಿದರೂ ಅದು ತಾತ್ಕಾಲಿಕ. ಅದು ಸಮಾಜದಲ್ಲಿ ಉದ್ಭವಿಸುವ ಕೆಲವು ಆತಂಕಗಳ ಫಲ ಅಥವಾ ಉತ್ಪಾದನ ವ್ಯವಸ್ಥೆಯಲ್ಲಿ ಉತ್ಪಾದನಾಂಗಗಳ ಗತಿಶೀಲತೆಯ ಪರಿಣಾಮ. ಇದು ಈ ಪಂಥದವರ ಭಾವನೆ. ಇಂಥ ನಿರುದ್ಯೋಗ ಸಾಧಾರಣವಾಗಿ ಮೂರು ವಿಧ: ಒಬ್ಬ ಉದ್ಯೋಗಿ ತಾನಿದ್ದ ನೌಕರಿ ಬಿಟ್ಟು ಮತ್ತೊಂದನ್ನು ಹುಡುಕಲು ಯತ್ನಿಸಬಹುದು. ಇಂಥ ಸಂದರ್ಭದಲ್ಲಿ ಮತ್ತೊಂದು ಉದ್ಯೋಗ ದೊರಕುವ ತನಕ ಆತ ನಿರುದ್ಯೋಗಿ. ಇದು ಕಿಂಚಿತ್ಕಾಲದ ನಿರುದ್ಯೋಗ (ಟ್ರಾನ್ಸಿಟರಿ ಅನೆಂಪ್ಲಾಯ್ ಮೆಂಟ್). ಇನ್ನು ಕೆಲವು ಸಂದರ್ಭಗಳಲ್ಲಿ ಉತ್ಪಾದನ ವ್ಯವಸ್ಥೆಯಲ್ಲಿ ಉಂಟಾಗುವ ಘರ್ಷಣೆಗಳಿಂದ ನಿರುದ್ಯೋಗ ಸಂಭವಿಸಬಹುದು. ಯಾವುದಾದರೂ ಕಾರಣದಿಂದ ಒಂದು ಉದ್ಯಮಸಂಸ್ಥೆ ಮುಚ್ಚಲ್ಪಡಬಹುದು. ಆಗ ಅಲ್ಲಿದ್ದ ಉದ್ಯೋಗಿಗಳು ಹೊಸ ಸಂಸ್ಥೆಯಲ್ಲಿ ಕೆಲಸ ದೊರಕಿಸಿಕೊಳ್ಳುವ ತನಕ ನಿರುದ್ಯೋಗಿಗಳಾಗಿರುತ್ತಾರೆ. ಏಕೆಂದರೆ ಇವರ ಪರಿಶ್ರಮಕ್ಕೆ ತಕ್ಕ ಉದ್ಯೋಗ ಹುಡುಕಬೇಕು. ಜೊತೆಗೆ ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳಲು ಸ್ವಲ್ಪಕಾಲ ಕಷ್ಟಪಟ್ಟು ತರಬೇತಿಯನ್ನೂ ಪಡೆಯಬೇಕಾದೀತು. ಇದು ಘರ್ಷಣಾತ್ಮಕ ನಿರುದ್ಯೋಗ (ಫ್ರಿಕ್ಷನಲ್ ಅನೆಂಪ್ಲಾಯ್ಮೆಂಟ್). ಮತ್ತೆ ಕೆಲವು ಸಂದರ್ಭಗಳಲ್ಲಿ ಉದ್ಯೋಗಾಕಾಂಕ್ಷಿಗಳು ಸಮಾಜದಲ್ಲಿ ದೊರೆಯುವ ಉದ್ಯೋಗಾವಕಾಶಗಳ ಅರಿವಿಲ್ಲದೆ ನಿರುದ್ಯೋಗಿಗಳಾಗಿರಬಹುದು. ಇದು ತಾತ್ಕಾಲಿಕ ನಿರುದ್ಯೋಗ ಪರಿಸ್ಥಿತಿ.

ಇವೇ ಅಲ್ಲದೆ ಇನ್ನೂ ಒಂದು ಬಗೆಯ ಪರಿಸ್ಥಿತಿ ಉದ್ಭವಿಸಬಹುದು. ಅದು ಅನೈಚ್ಛಿಕ ನಿರುದ್ಯೋಗ: ಸಮಾಜದಲ್ಲಿ ಉದ್ಭವಿಸುವ ಅಸಾಧಾರಣ ಘಟನೆಗಳ ಪರಿಣಾಮ; ಜನರಿಗೆ ಉದ್ಯೋಗ ಮಾಡುವ ಆಕಾಂಕ್ಷೆ ಇದ್ದರೂ ಉದ್ಯೋಗ ದೊರೆಯದ ಪರಿಸ್ಥಿತಿ; ಪ್ರಚಲಿತ ಕೂಲಿ ಮಟ್ಟವನ್ನೊಪ್ಪಿ ಕೆಲಸ ಮಾಡಲಿಚ್ಛಿಸಿದರೂ ಉದ್ಯೋಗ ದೊರೆಯದೆ ಇರುವಂಥ ಸಂದರ್ಭ. ಆದರೆ ಇದಕ್ಕಾಗಿ ಕಳವಳಪಡುವ ಅಗತ್ಯವಿಲ್ಲ. ಆರ್ಥಿಕ ಶಕ್ತಿಗಳು ಕ್ರಮೇಣ ತಮ್ಮ ಪ್ರಭಾವ ಬೀರಿ ಸಮಾಜದಲ್ಲಿ ಸಂಪೂರ್ಣ ಉದ್ಯೋಗಪರಿಸ್ಥಿತಿ ಉಂಟುಮಾಡುತ್ತವೆ. ನಿರುದ್ಯೋಗ ತಾನಾಗೇ ಮಾಯವಾಗುತ್ತದೆ. ಇದು ಅಭಿಜಾತ ಭಾವನೆ.

ಉದ್ಯೋಗಸಿದ್ಧಾಂತ

ಬದಲಾಯಿಸಿ

ಅಭಿಜಾತ ಅರ್ಥಶಾಸ್ತ್ರಜ್ಞರ ಉದ್ಯೋಗಸಿದ್ಧಾಂತ ಜೆ.ಬಿ.ಸೇ ಸೂಚಿಸಿದ ಮಾರುಕಟ್ಟೆ ಸೂತ್ರಗಳ ಮೇಲೆ ರೂಪಿತವಾದದ್ದು. ಸೇ ಸೂತ್ರ ಬಲು ಸರಳ: ಸರಬರಾಯಿಯೇ ಬೇಡಿಕೆಯನ್ನು ಸೃಷ್ಟಿಸುತ್ತದೆ. ಪದಾರ್ಥ ಉತ್ಪಾದನೆ ಮಾಡಲು ಉತ್ಪಾದಕರು ವಿವಿಧ ಉತ್ಪಾದನಾಂಗಗಳನ್ನು ಕೊಳ್ಳುತ್ತಾರೆ. ಈ ಅಂಗಗಳ ಮಾಲೀಕರು ಇವುಗಳ ಪ್ರಯೋಜನವನ್ನು ಉತ್ಪಾದಕರಿಗೆ ದೊರಕಿಸಿಕೊಟ್ಟು, ಪ್ರತಿಯಾಗಿ ವರಮಾನ ಪಡೆಯುತ್ತಾರೆ. ಹೀಗೆ ಪಡೆದ ವರಮಾನವನ್ನು ಅವರೆಲ್ಲರೂ ತಮಗೆ ಬೇಕಾದ ಅನುಭೋಗಿ ಸರಕುಗಳನ್ನೂ ಸೇವೆಗಳನ್ನೂ ಕೊಳ್ಳಲು ಉಪಯೋಗಿಸುತ್ತಾರೆ. ಆದ್ದರಿಂದ ಪದಾರ್ಥೋತ್ಪಾದನೆಯ ಪ್ರಕ್ರಿಯೆಯಲ್ಲಿ ವಿತರಣೆಯಾದ ವರಮಾನ ಅದನ್ನು ಪಡೆದವರಲ್ಲೇ ಉಳಿಯುವುದಿಲ್ಲ; ಅದು ಸರಕು ಕೊಳ್ಳುವುದಕ್ಕಾಗಿ ಮಾರುಕಟ್ಟೆ ಪ್ರವೇಶಿಸುತ್ತದೆ. ಆಗ ಉತ್ಪಾದಕರು ತಯಾರಿಸಿದ ಪದಾರ್ಥಗಳಿಗೆ ಸಂಪೂರ್ಣವಾಗಿ ಬೇಡಿಕೆ ಒದಗಿಬಂದು ಮಾರುಕಟ್ಟೆಯಲ್ಲಿನ ಪದಾರ್ಥಗಳೆಲ್ಲ ವಿನಿಯೋಗ ವಾಗುತ್ತವೆ. ಹೀಗೆ ಮಾರುಕಟ್ಟೆಯಲ್ಲಿ ಯಾವ ವಿಧವಾದ ಸಂದಿಗ್ಧ ಪರಿಸ್ಥಿತಿಯೂ ಸಂಭವಿಸದೆ ಸುಸೂತ್ರವಾಗಿ ಪದಾರ್ಥಗಳ ಸರಬರಾಜು ಮತ್ತು ಬೇಡಿಕೆಗಳ ನಡುವೆ ಸಮತೋಲ ಉಂಟಾಗುತ್ತದೆ. ಇದರ ಪರಿಣಾಮವಾಗಿ ಸರಕುಗಳ ಬೇಡಿಕೆಯ ಸಮಸ್ಯೆಯೇ ಉದ್ಭವಿಸುವು ದಿಲ್ಲ. ಇದು ಅಭಿಜಾತ ಅರ್ಥಶಾಸ್ತ್ರಜ್ಞರ ಪ್ರತಿಪಾದನೆ. ಯಾವಾಗ ಬೇಡಿಕೆ ಮತ್ತು ಸರಬರಾಜು ಗಳ ಮಧ್ಯೆ ಸಮತೋಲವಿರುತ್ತದೋ ಆಗ ನಿರುದ್ಯೋಗ ಸಮಸ್ಯೆಯೇ ಇರುವುದಿಲ್ಲವೆಂಬುದು ಇವರ ವಾದ.

ಆದರೆ ಅನೇಕ ಅರ್ಥಶಾಸ್ತ್ರಜ್ಞರು ಅಭಿಜಾತ ಸಿದ್ಧಾಂತವನ್ನೂ ಜೆ.ಬಿ.ಸೇ ಸೂಚಿಸಿದ ಮಾರುಕಟ್ಟೆ ಸೂತ್ರಗಳನ್ನೂ ಒಪ್ಪಿಕೊಳ್ಳಲಿಲ್ಲ. ಜನ ತಾವು ಪಡೆದ ವರಮಾನವೆಲ್ಲವನ್ನೂ ಸಂಪೂರ್ಣವಾಗಿ ಖರ್ಚು ಮಾಡುತ್ತಾರೆಂಬ ಭರವಸೆ ಸರಿಯಲ್ಲ. ಇವರು ವರಮಾನದ ಒಂದು ಭಾಗವನ್ನು ಕೂಡಿಡುವುದುಂಟು. ವರಮಾನದ ಈ ಭಾಗ ಮಾರುಕಟ್ಟೆ ಪ್ರವೇಶಿಸುವುದಿಲ್ಲ. ಎಂದರೆ ಈ ಪ್ರಮಾಣದಲ್ಲಿ ಪದಾರ್ಥಗಳಿಗೆ ಬೇಡಿಕೆ ತಗ್ಗುತ್ತದೆ. ಮಾರುಕಟ್ಟೆಯಲ್ಲಿ ಸರಕುಗಳು ಶೇಖರವಾಗಿ ಉತ್ಪಾದನೆಯನ್ನು ಮೊಟಕುಗೊಳಿಸುವಂಥ ಪರಿಸ್ಥಿತಿ ಉದ್ಭವಿಸುತ್ತದೆ. ಇದರ ಫಲವೆಂದರೆ ನಿರುದ್ಯೋಗ. ಜನರ ವರಮಾನದ ಇಳಿತ. ಅರ್ಥವ್ಯವಸ್ಥೆಯಲ್ಲಿ ಪುರ್ಣೋದ್ಯೋಗ ಸ್ಥಿತಿ ತನಗೆ ತಾನೇ ಸ್ಥಾಪಿತವಾಗುವುದೆಂಬ ಅಭಿಜಾತ ದೃಷ್ಟಿ ಸರಿಯಲ್ಲ. ಇದು ಅಭಿಜಾತ ವಿಚಾರಧಾರೆಯನ್ನು ಕುರಿತ ಟೀಕೆಯ ಸಾರಾಂಶ.

ಆದರೆ ಅಭಿಜಾತ ಅರ್ಥಶಾಸ್ತ್ರಜ್ಞರು ಈ ಟೀಕೆಗೆ ಮನ್ನಣೆ ಕೊಡಲಿಲ್ಲ. ಅದರ ಬದಲು ತಮ್ಮ ಅಭಿಪ್ರಾಯವನ್ನು ಸ್ವಲ್ಪ ಮಾರ್ಪಡಿಸಿ ಪ್ರತಿಪಾದಿಸಿದರು. ವರಮಾನದಲ್ಲಿ ಉಳಿತಾಯ ವಾದರೂ ಅದೂ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆಯೆಂಬುದು ಇವರ ವಾದ. ಬಂಡವಾಳದ ಆವಶ್ಯಕತೆ ಇರುವ ಉತ್ಪಾದಕರು ಈ ಉಳಿತಾಯವನ್ನು ಬಡ್ಡಿಗೆ ಪಡೆದು ಅದನ್ನು ನಿಯೋಜಿಸುತ್ತಾರೆ. ಬಡ್ಡಿಯ ಆಕರ್ಷಣೆಯಿರುವುದರಿಂದ ಉಳಿತಾಯಗಾರರು ತಮ್ಮ ಹಣವನ್ನು ಬಂಡವಾಳ ನಿಯೋಜಕರಿಗೆ ಕೊಡುತ್ತಾರೆ. ಹೀಗೆ ಇದು ಬಂಡವಾಳರೂಪದಲ್ಲಿ ಸಮಾಜದಲ್ಲಿ ಉಪಯೋಗಕ್ಕೆ ಬರುವುದರಿಂದ ಪುನಃ ವರಮಾನ ಸಂಪೂರ್ಣವಾಗಿ ಮಾರುಕಟ್ಟೆಗೆ ಬರುತ್ತದೆ. ಆದ್ದರಿಂದ ಪೂರ್ಣ ಉದ್ಯೋಗ ಸ್ಥಿತಿಗೆ ಧಕ್ಕೆಯಾಗುವುದಿಲ್ಲ ವೆಂಬುದು ಇವರ ತರ್ಕ.

ಅಭಿಜಾತ ಸಿದ್ಧಾಂತದ ಪ್ರಕಾರ ಸಮಾಜದಲ್ಲಿ ಉಳಿತಾಯಕ್ಕೂ ಬಂಡವಾಳ ನಿಯೋಜನೆಗೂ ನಡುವೆ ಸಮತೋಲವನ್ನುಂಟುಮಾಡುವುದು ಬಡ್ಡಿದರದ ಮಹತ್ತ್ವದ ಪಾತ್ರ. ಪುರ್ಣೋದ್ಯೋಗ ಸ್ಥಾಪನೆಗೆ ಇದು ಪ್ರಚೋದನೆ. ಜನ ತಮ್ಮ ವರಮಾನದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಬೇಕಾದರೆ ಅದಕ್ಕೆ ಬಡ್ಡಿಯ ದರ ಆಕರ್ಷಕವಾಗಿರಬೇಕು. ಬಡ್ಡಿಯ ದರ ಹೆಚ್ಚಿದ ಹಾಗೆಲ್ಲಾ ಉಳಿತಾಯ ಮಾಡುವವರು ಹೆಚ್ಚು ಹೆಚ್ಚಾಗಿ ಉಳಿತಾಯ ಮಾಡಲೆತ್ನಿಸುತ್ತಾರೆ. ಆದರೆ ಬಡ್ಡಿಯ ದರ ಒಂದೇ ಸಮನೆ ಅಧಿಕವಾಗಲೂ ಸಾಧ್ಯವಿಲ್ಲ. ಏಕೆಂದರೆ ಬಂಡವಾಳ ನಿಯೋಜಕರು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ಬಡ್ಡಿಕೊಡಲು ಇಷ್ಟಪಡುವುದಿಲ್ಲ. ಆದಷ್ಟು ಕಡಿಮೆ ದರದಲ್ಲಿ ಬಡ್ಡಿಕೊಟ್ಟು ಬಂಡವಾಳ ಪಡೆದು ಆದಷ್ಟು ಹೆಚ್ಚು ಲಾಭ ಸಂಪಾದಿಸಬೇಕೆಂಬುದು ಅವರ ಆಸೆ. ಉಳಿತಾಯಗಾರರ ಮತ್ತು ಬಂಡವಾಳ ನಿಯೋಜಕರ ಮಧ್ಯೆ ಉಂಟಾಗುವ ಕ್ರಿಯೆ-ಪ್ರತಿಕ್ರಿಯೆಗಳ ಪರಿಣಾಮವಾಗಿ ಕಟ್ಟಕಡೆಯದಾಗಿ ಬಡ್ಡಿದರ ಒಂದು ಗೊತ್ತಾದ ಮಟ್ಟದಲ್ಲಿ ನಿರ್ಧಾರವಾಗುತ್ತದೆ. ಹಣದ ಮಾರುಕಟ್ಟೆಯಲ್ಲಿ ಉಳಿತಾಯಕ್ಕೂ ಬಂಡವಾಳ ನಿಯೋಜನೆಗೂ ನಡುವೆ ಸಮತೋಲ ಏರ್ಪಡಿಸುವುದು ಬಡ್ಡಿದರ. ಪೂರ್ಣ ಉದ್ಯೋಗ ಸ್ಥಾಪನೆಗೆ ಇದು ಸಹಕಾರಿ. ಇದು ಅಭಿಜಾತ ಅರ್ಥಶಾಸ್ತ್ರಜ್ಞರ ಪ್ರತಿಪಾದನೆ. ನಕ್ಷೆ ೧ ರಲ್ಲಿ ಇದನ್ನು ವಿವರಿಸಲಾಗಿದೆ. ಇಲ್ಲಿ SS ಎಂಬುದು ಉಳಿತಾಯದ ರೇಖೆ. II ನಿಯೋಜಕರಿಂದ ಬಂಡವಾಳಕ್ಕಿರುವ ಬೇಡಿಕೆಯನ್ನು ಸೂಚಿಸುತ್ತದೆ.

ಯಾವ ಬಡ್ಡಿದರದಲ್ಲಿ ಉಳಿತಾಯದ ರೇಖೆಯೂ ನಿಯೋಜಕರ ಬೇಡಿಕೆಯ ರೇಖೆಯೂ ಸಂಧಿಸುತ್ತವೋ ಅಲ್ಲಿ ಸಮತೋಲಸ್ಥಿತಿಯೇರ್ಪಡುತ್ತದೆ. ಯಾವುದಾದರೂ ಕಾರಣಕ್ಕಾಗಿ ಸಮಾಜದಲ್ಲಿ ಉಳಿತಾಯದ ಮೊತ್ತ ಹೆಚ್ಚಾದರೆ ಆ ಬಡ್ಡಿದರದಲ್ಲಿ ಅದಕ್ಕೆ ಬೇಡಿಕೆ ಇರುವುದಿಲ್ಲ. ಬಡ್ಡಿದರ ಇಳಿಯುತ್ತದೆ. ಉಳಿತಾಯ ಕಡಿಮೆಯಾಗುತ್ತದೆ. ಮತ್ತೆ ಸಮತೋಲಸ್ಥಿತಿ ಏರ್ಪಡುತ್ತದೆ. ಉಳಿತಾಯ ಕಡಿಮೆಯಾದರೂ ಬಂಡವಾಳದ ಬೇಡಿಕೆ ಹೆಚ್ಚು ಕಡಿಮೆಯಾದರೂ ಅದಕ್ಕನುಗುಣವಾದ ಪ್ರತಿಕ್ರಿಯೆಯೇರ್ಪಟ್ಟು ಸಮತೋಲ ಸ್ಥಾಪಿತವಾಗುತ್ತದೆ. ಹೀಗಾಗಿ ಬಡ್ಡಿದರದ ಮಧ್ಯವರ್ತಿ ಪಾತ್ರದಿಂದ ಉಳಿತಾಯಕ್ಕೂ ಬಂಡವಾಳ ನಿಯೋಜನೆಗೂ ಮಧ್ಯೆ ಸಮತೆ ಏರ್ಪಟ್ಟು ವ್ಯವಹಾರ ನಡೆದುಕೊಂಡು ಹೋಗುತ್ತದೆ. ಆದ್ದರಿಂದ ಪುರ್ಣೋದ್ಯೋಗ ಪರಿಸ್ಥಿತಿಗೇನೂ ಊನವಿಲ್ಲವೆಂಬುದು ಇವರ ವಾದ.

ತಾವು ಪ್ರತಿಪಾದಿಸಿರುವ ಪುರ್ಣೋದ್ಯೋಗ ಸಿದ್ಧಾಂತದ ಪುಷ್ಟೀಕರಣೆಗೆ ಅಭಿಜಾತ ಅರ್ಥಶಾಸ್ತ್ರಜ್ಞರು ಮತ್ತೊಂದು ವಾದವನ್ನು ಮುಂದೊಡ್ಡಿದ್ದಾರೆ. ಹಣದ ಮಾರುಕಟ್ಟೆಯಲ್ಲಿ ಬಡ್ಡಿದರ, ಉಳಿತಾಯ ಮತ್ತು ಬಂಡವಾಳ ನಿಯೋಜನೆಗಳ ನಡುವೆ ಯಾವ ರೀತಿ ಸಮತೋಲವೇರ್ಪಡುವುದೋ ಹಾಗೆಯೇ ಪದಾರ್ಥಗಳ ಮತ್ತು ಕಾರ್ಮಿಕರ ಮಾರುಕಟ್ಟೆಗಳಲ್ಲಿ ಬೆಲೆ ಮತ್ತು ಕೂಲಿ ದರಗಳು ಸಮತೋಲವನ್ನುಂಟುಮಾಡಿ ಪುರ್ಣೋದ್ಯೋಗ ಪರಿಸ್ಥಿತಿಯ ಸೃಷ್ಟಿಗೆ ನೆರವಾಗುತ್ತವೆಂದು ಅವರ ವಾದ. ಆದ್ದರಿಂದ ಕೆಲವು ವಿಶೇಷ ಸಂದರ್ಭಗಳಲ್ಲಿ ಸಮಾಜದ ಒಟ್ಟು ವೆಚ್ಚದಲ್ಲಿ ಖೋತ ಏರ್ಪಟ್ಟರೂ ನಿರುದ್ಯೋಗ ಪರಿಸ್ಥಿತಿ ಉಂಟಾಗುವುದಿಲ್ಲ ವೆಂಬುದು ಇವರ ವಾದ.

ಒಟ್ಟು ವೆಚ್ಚ ಕಡಿಮೆಯಾದರೆ ವಸ್ತುಗಳಿಗೆ ಬೇಡಿಕೆ ತಗ್ಗುತ್ತದೆ. ಆದರೆ ಪದಾರ್ಥಗಳಿಗೆ ಬೇಡಿಕೆ ತಗ್ಗಿದಾಗ ಉತ್ಪಾದಕರು ತಮ್ಮ ಪದಾರ್ಥಗಳನ್ನು ಹಾಗೇ ಶೇಖರಿಸಿಡಲು ಯತ್ನಿಸುವುದಿಲ್ಲ. ಅದರ ಬದಲು ಪದಾರ್ಥಗಳ ಬೆಲೆ ತಗ್ಗಿಸಿ ಮಾರಲು ಯತ್ನಿಸುತ್ತಾರೆ. ಅವುಗಳ ಬೆಲೆ ತಗ್ಗಿಸಿದ ಒಡನೆಯೇ ಬೇಡಿಕೆ ಹೆಚ್ಚುವುದು ಸಹಜ. ಆದ್ದರಿಂದ ಮಾರುಕಟ್ಟೆ ಯಲ್ಲಿರುವ ಎಲ್ಲ ಪದಾರ್ಥಗಳಿಗೂ ಗ್ರಾಹಕರು ದೊರೆತು ಪದಾರ್ಥಗಳ ವಿತರಣೆಯಾಗುತ್ತದೆ. ಎರಡನೆಯದಾಗಿ, ಪದಾರ್ಥಗಳು ಅಗ್ಗವಾದಾಗ ಜೀವನವೆಚ್ಚ ಕಡಿಮೆಯಾಗುತ್ತದೆ. ಆದ್ದರಿಂದ ಕಾರ್ಮಿಕರಿಗೆ ಕೊಡುವ ಕೂಲಿ ಕಡಿಮೆಯಾಗುತ್ತದೆ. ಕಡಿಮೆ ಬೇಡಿಕೆಯಿಂದಾಗಿ ಉತ್ಪಾದನೆಯನ್ನು ಕಡಿಮೆ ಮಾಡುವ ಪ್ರವೃತ್ತಿ ತೋರುವ ಉತ್ಪಾದಕರು ಕೂಲಿ ತಗ್ಗಿಸುತ್ತಾರೆ. ಇದರಿಂದ ಉತ್ಪಾದನೆಯ ವೆಚ್ಚ ಕೂಡ ತಗ್ಗಲೇಬೇಕು. ಕಡಿಮೆ ಬೆಲೆಗೆ ತಕ್ಕಂತೆ ಪದಾರ್ಥಗಳ ಉತ್ಪಾದನೆಯ ವೆಚ್ಚವೂ ತಗ್ಗುವುದು ಸಹಜ. ಹೀಗೆ ಬಡ್ಡಿದರದಿಂದ ಉಳಿತಾಯ, ಬಂಡವಾಳ ನಿಯೋಜನೆ ಇವುಗಳ ನಡುವಣ ಸಮತೋಲನವೂ ಪದಾರ್ಥಗಳ ಬೆಲೆ ಮತ್ತು ಕೂಲಿ ದರಗಳ ನಡುವಣ ಕ್ರಿಯೆಪ್ರತಿಕ್ರಿಯೆಗಳ ಪರಿಣಾಮವಾಗಿ ಪದಾರ್ಥಗಳ ಮತ್ತು ಕಾರ್ಮಿಕರ ಮಾರುಕಟ್ಟೆಯಲ್ಲಿ ಸಮತೋಲನವೂ ಉಂಟಾಗುತ್ತವೆ. ಆದ್ದರಿಂದ ಅಭಿಜಾತ ಅರ್ಥಶಾಸ್ತ್ರಜ್ಞರ ಪ್ರಕಾರ ಪೂರ್ಣ ಉದ್ಯೋಗ ಪರಿಸ್ಥಿತಿ ಎಂಬುದು ಸಮಾಜದಲ್ಲಿ ಸ್ವತಃಸಿದ್ಧ.

ಕೇನ್ಸ್‌ ಸಿದ್ಧಾಂತ

ಬದಲಾಯಿಸಿ

ಅಭಿಜಾತ ಅರ್ಥಶಾಸ್ತ್ರಜ್ಞರ ನಿರೂಪಣೆ ವಸ್ತುಸ್ಥಿತಿಗೆ ದೂರವೆಂಬುದನ್ನು ಕಂಡುಕೊಳ್ಳಲು ಅರ್ಥಶಾಸ್ತ್ರಜ್ಞರಿಗೆ ಕಷ್ಟವಾಗಲಿಲ್ಲ. ಈ ಅರಿವು ಮೂಡಿಸಲು ಕಾರಣವಾದ ಘಟನೆಯೆಂದರೆ ೧೯೨೦ರ ಸುಮಾರಿನಲ್ಲಿ ಸಂಭವಿಸಿದ ಆರ್ಥಿಕ ಮುಗ್ಗಟ್ಟು. ಆಗ ಪ್ರಪಂಚದ ಅನೇಕ ರಾಷ್ಟ್ರಗಳು ನಿರುದ್ಯೋಗ ಸಮಸ್ಯೆ ಎದುರಿಸಬೇಕಾಯಿತು. ಮುಂದುವರಿದ ರಾಷ್ಟ್ರಗಳಲ್ಲೇ ಇದು ಪ್ರಾರಂಭವಾದದ್ದು. ಈ ಕಾಲದಲ್ಲಿ ನಿರುದ್ಯೋಗ ಹಾಗೂ ಇತರ ಅಸ್ಥಿರತೆಯ ಸಮಸ್ಯೆಗಳನ್ನು ಆಗಿಂದಾಗ್ಗೆ ಎದುರಿಸಬೇಕಾಯಿತು. ಅಭಿಜಾತ ಸಿದ್ಧಾಂತದ ಪ್ರಕಾರ ನಿರುದ್ಯೋಗ ವೆಂಬುದೇ ಇಲ್ಲ; ಇದ್ದರೂ ಅದು ಕಿಂಚಿತ್ಕಾಲದ್ದು ಮಾತ್ರ. ಆದರೆ ೧೯೩೦ರ ದಶಕದಲ್ಲಿ ಪ್ರಪಂಚದ ಬೃಹದ್ರಾಷ್ಟ್ರಗಳು ನಿರುದ್ಯೋಗ ಸಮಸ್ಯೆಯಿಂದ ಬಹಳ ವರ್ಷಗಳ ಕಾಲ ತೊಂದರೆ ಅನುಭವಿಸಿದುವು. ಆದ್ದರಿಂದ ಅನೇಕ ಅರ್ಥಶಾಸ್ತ್ರಜ್ಞರು ಉದ್ಯೋಗ ಮಟ್ಟವನ್ನು ನಿರ್ಧರಿಸುವ ಶಕ್ತಿಗಳನ್ನು ಕುರಿತು ಹೆಚ್ಚು ವಾಸ್ತವಿಕ ದೃಷ್ಟಿಯಿಂದ ವಿವೇಚನೆ ನಡೆಸತೊಡಗಿದರು.

೧೯೩೬ರಲ್ಲಿ ಜಾನ್ ಮೇನಾರ್ಡ್ ಕೇನ್ಸ್‌ ಉದ್ಯೋಗ ಮಟ್ಟದ ನಿರ್ಣಾಯಕಗಳನ್ನು ಕುರಿತು ಹೊಸ ನಿರೂಪಣೆ ನೀಡಿದಾಗ ತಕ್ಷಣವೇ ಅದು ಎಲ್ಲ ಅರ್ಥಶಾಸ್ತ್ರಜ್ಞರ ಗಮನ ಸೆಳೆಯಿತು. ಉದ್ಯೋಗ, ಬಡ್ತಿ ಮತ್ತು ಹಣವನ್ನು ಕುರಿತು ಕೇನ್ಸ್‌ ಪ್ರತಿಪಾದಿಸಿದ ಸಿದ್ಧಾಂತ ಈಗ ಜಗತ್ಪ್ರಸಿದ್ಧ. ಇದು ಆರ್ಥಿಕ ಇಳಿತದ ನಿವಾರಣೆಗೆ ಒಂದು ನವ್ಯ ಸಾಧನವಾಗಿ ಬಳಕೆಗೆ ಬಂತು. ಈ ಸಿದ್ಧಾಂತದಿಂದ ಅಭಿಜಾತ ಸಿದ್ಧಾಂತಕ್ಕೆ ದೊಡ್ಡಪೆಟ್ಟು ಬಿತ್ತು. ನಿರುದ್ಯೋಗದ ಪ್ರಶ್ನೆಯನ್ನು ಕುರಿತು ಆರ್ಥಿಕ ಚಿಂತನೆಯಲ್ಲಿ ಇದೊಂದು ಮಹಾಕ್ರಾಂತಿಯೆನ್ನ ಬಹುದು. ಆಧುನಿಕ ಉದ್ಯೋಗ ಸಿದ್ಧಾಂತವನ್ನು ಕೇನ್ಸ್‌ ಪ್ರಥಮತಃ ರೂಪಿಸಿದರೂ, ಇತರ ಅನೇಕರು ಅದನ್ನು ಪರಿಷ್ಕರಿಸಿ ಅವನ ಕೃತಿಯನ್ನು ವಿಸ್ತರಿಸಿದ್ದಾರೆ.

ಆಧುನಿಕ ಉದ್ಯೋಗ ಸಿದ್ಧಾಂತ ಅಭಿಜಾತ ನಿಲುವಿಗೆ ಸಂಪೂರ್ಣವಾಗಿ ವಿರುದ್ಧವಾ ದದ್ದು. ಸದಾಕಾಲದಲ್ಲೂ ಪೂರ್ಣ ಉದ್ಯೋಗ ಪರಿಮಿತಿಯನ್ನೊದಗಿಸುವ ಯಾವುದೇ ವಿಧಾನವೂ ಬಂಡವಾಳವ್ಯವಸ್ಥೆಯಲ್ಲಿಲ್ಲವೆಂಬುದೇ ಆಧುನಿಕ ಸಿದ್ಧಾಂತದ ಮುಖ್ಯ ಅಂಶ. ಅರ್ಥವ್ಯವಸ್ಥೆಯನ್ನು ಪರಿಶೀಲಿಸಿದರೆ ಅದು ಯಾವ ಸಮಯದಲ್ಲೂ ಗಮನಾರ್ಹ. ನಿರುದ್ಯೋಗ ಸಮಸ್ಯೆಯ ಪರಿಣಾಮವಾಗಿ ಅಥವಾ ತೀವ್ರವಾದ ಹಣದ ಉಬ್ಬರದ ಪರಿಣಾಮವಾಗಿ, ನಿಲುಗಡೆಯ ಸ್ಥಿತಿ ತಲುಪಬಹುದು ಎಂಬ ಶಂಕೆಗೆ ಎಡೆಯುಂಟಾಗುತ್ತದೆ. ಬೆಲೆಗಳು ಸ್ಥಿರವಾಗಿರುವ ಪುರ್ಣೋದ್ಯೋಗ ಪರಿಸ್ಥಿತಿ ಕೇನ್ಸ್‌ ದೃಷ್ಟಿಯಲ್ಲಿ ಅಪವಾದವೇ ಹೊರತು ನಿಯಮವಲ್ಲ. ಕೇನ್ಸ್‌ ಪ್ರಕಾರ ಬಂಡವಾಳಪದ್ಧತಿಯಲ್ಲಿ ನಿರಂತರ ಪ್ರಗತಿಸಾಧಕವಾದ ಸ್ವಯಂಚಾಲಿತ ವ್ಯವಸ್ಥೆಯೇನೂ ಇಲ್ಲ. ಅಭಿಜಾತ ಅರ್ಥಶಾಸ್ತ್ರಜ್ಞರು ಭಾವಿಸಿದ್ದಂತೆ ಅರ್ಥವ್ಯವಸ್ಥೆಯು ಕೇವಲ ಬಾಹ್ಯಶಕ್ತಿಗಳಾದ ಯುದ್ಧ, ಕ್ಷಾಮ, ಮತ್ತಿತರ ಅಸಾಧಾರಣ ಪರಿಸ್ಥಿತಿಗಳಿಂದ ಉಂಟಾಗುವುದಿಲ್ಲ. ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳು ಸಮಾಜದಲ್ಲಿ ಕೈಗೊಳ್ಳಲಾಗುವ ಪ್ರಮುಖನಿರ್ಣಯಗಳಿಂದ ಸಂಭವಿಸುತ್ತವೆ ಎನ್ನಬಹುದು. ಸಮಾಜದಲ್ಲಿ ಉದ್ಭವಿಸುವ ಆರ್ಥಿಕ ಸಮಸ್ಯೆಗಳು ಪ್ರಮುಖವಾಗಿ ಉಳಿತಾಯ ಮತ್ತು ಬಂಡವಾಳ ನಿಯೋಜನೆಗಳ ಪರಿಣಾಮ. ಬಾಹ್ಯಶಕ್ತಿಗಳ ಜೊತೆಗೆ ಆಂತರಿಕ ಶಕ್ತಿಗಳೂ ಆರ್ಥಿಕ ಅಸ್ಥಿರತೆಗೆ ಬಹಳ ಮಟ್ಟಿಗೆ ಕಾರಣ.

ಉಳಿತಾಯ ಮತ್ತು ಬಂಡವಾಳ ನಿಯೋಜನೆಗಳ ನಡುವೆ ಸಮತೋಲನ ಏರ್ಪಡುವುದು ಬಡ್ಡಿಯ ದರದಿಂದ-ಎಂಬ ಸಿದ್ಧಾಂತವನ್ನು ಆಧುನಿಕ ಉದ್ಯೋಗ ಸಿದ್ಧಾಂತ ತಿರಸ್ಕರಿಸುತ್ತದೆ. ಉಳಿತಾಯ ಮಾಡುವವರು ಮತ್ತು ಬಂಡವಾಳ ನಿಯೋಜಿಸುವವರು ತಮ್ಮ ಕಾರ್ಯ ನಿರ್ವಹಿಸುವಾಗ ಕೇವಲ ಬಡ್ಡಿದರವನ್ನೇ ಆಧಾರವನ್ನಾಗಿ ಇರಿಸಿಕೊಳ್ಳುವುದಿಲ್ಲ. ಉಳಿತಾಯ ನಿಯೋಜನೆಗಳ ಹಿಂದೆ ನಾನಾ ಉದ್ದೇಶಗಳಿರುತ್ತವೆ.

ಅಭಿಜಾತ ಅರ್ಥಶಾಸ್ತ್ರಜ್ಞರು ಊಹಿಸಿದ್ದಂತೆ ಬೆಲೆಯೂ ಕೂಲಿದರವೂ ಮಾರುಕಟ್ಟೆಯಲ್ಲಿ ತಮ್ಮ ಪ್ರಕ್ರಿಯೆ-ಪ್ರತಿಕ್ರಿಯೆಗಳನ್ನುಂಟುಮಾಡುವುದಿಲ್ಲವೆಂಬುದು ಆಧುನಿಕ ಸಿದ್ಧಾಂತದಲ್ಲಿ ವೇದ್ಯವಾಗಿದೆ. ಕಾರ್ಮಿಕ ಸಂಘಗಳೂ ಏಕಸ್ವಾಮ್ಯ ಸಂಸ್ಥೆಗಳೂ ಕನಿಷ್ಠವೇತನ ಕಾನೂನುಗಳೂ ಸಮಾಜದಲ್ಲಿ ತಮ್ಮ ಪ್ರಭಾವ ಬೀರುವುದರಿಂದ ಬೆಲೆ ಮತ್ತು ಕೂಲಿ ದರಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಲಾಗುವುದಿಲ್ಲ. ಸಮಾಜದಲ್ಲಿ ಉಂಟಾಗುವ ಉತ್ಪಾದನೆ ಮತ್ತು ಉದ್ಯೋಗ ಮಟ್ಟಗಳು ಅಲ್ಲಿ ದೊರೆಯುವ ಸಂಪನ್ಮೂಲಗಳನ್ನು ಅವಲಂಬಿಸಿರುತ್ತವೆ. ಜೊತೆಗೆ ಸಮಾಜದಲ್ಲಿ ಉಂಟಾಗುವ ಒಟ್ಟು ಖರ್ಚಿನ ಆಧಾರದ ಮೇಲೆ ಉತ್ಪಾದಿತ ವಸ್ತುಗಳ ಮತ್ತು ಸೇವೆಗಳ ಪ್ರಮಾಣದ ಮತ್ತು ಅದರಿಂದಾಗಿ ಉದ್ಯೋಗಮಟ್ಟದ ನಿರ್ಧಾರವಾಗುತ್ತದೆ. ಒಂದು ಕಡೆ ಒಟ್ಟು ಖರ್ಚು, ಮತ್ತೊಂದು ಕಡೆ ಒಟ್ಟು ಉತ್ಪಾದನೆ ಹಾಗೂ ಉದ್ಯೋಗ ತುಂಬ ನೇರವಾಗಿ ವ್ಯತ್ಯಾಸಗೊಳ್ಳುತ್ತವೆ. ಅಂದರೆ ಒಟ್ಟು ಖರ್ಚು ಅಧಿಕವಾದಂತೆಲ್ಲ ಉತ್ಪಾದನೆ ಮತ್ತು ಉದ್ಯೋಗ ಅಧಿಕಗೊಳ್ಳುತ್ತವೆ. ಒಟ್ಟು ಖರ್ಚು ಕಡಿಮೆಯಾದ ಹಾಗೆಲ್ಲ ಉತ್ಪಾದನೆ ಮತ್ತು ಉದ್ಯೋಗ ಕ್ಷೀಣಿಸುತ್ತವೆ. ಅನುಭೋಗ, ಉಳಿತಾಯ ಮತ್ತು ಬಂಡವಾಳನಿಯೋಜನೆ-ಇವು ಆಧುನಿಕ ಉದ್ಯೋಗ ಸಿದ್ಧಾಂತದ ಮೂಲಸ್ತಂಭಗಳು. ಈ ಮೂರು ಅಂಶಗಳು ಯಾವ ರೀತಿ ಉತ್ಪಾದನೆ ಮತ್ತು ಉದ್ಯೋಗಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ ಎಂಬುದನ್ನು ಪರಿಶೀಲಿಸಬೇಕು.

ಒಂದು ಅರ್ಥವ್ಯವಸ್ಥೆಯಲ್ಲಿ ಅನುಭೋಗ ಹಾಗೂ ಉಳಿತಾಯಗಳನ್ನು ನಿರ್ಧರಿಸುವ ಅಂಶಗಳು ಹಲವಾರು ಉಂಟು: ಕುಟುಂಬಗಳು ಹೊಂದಿರುವ ನಗದು ಮುಂತಾದ ದ್ರವರೂಪಿ ಆಸ್ತಿ; ದೀರ್ಫಕಾಲ ಬಳಸಬಹುದಾದ ಅನುಭೋಗ ವಸ್ತುಸಂಗ್ರಹ; ಭವಿಷ್ಯದಲ್ಲಿ ಲಭಿಸುವ ವರಮಾನ, ಬೆಲೆ, ಪದಾರ್ಥ ಇವುಗಳನ್ನು ಕುರಿತ ನಿರೀಕ್ಷೆ; ಮಿತವ್ಯಯದ ಬಗ್ಗೆ ಇರುವ ಒಟ್ಟು ಭಾವನೆ; ಅನುಭೋಗಿಗಳ ಸಾಲದ ಮೊತ್ತ; ತೆರಿಗೆವ್ಯವಸ್ಥೆ-ಇವೆಲ್ಲವೂ ಅನುಭೋಗ ಮತ್ತು ಉಳಿತಾಯಗಳನ್ನು ಪರೋಕ್ಷವಾಗಿ ನಿರ್ಧರಿಸುತ್ತವೆ.

ಬಂಡವಾಳ ನಿಯೋಜನೆಯನ್ನು ನಿರ್ಧರಿಸುವ ಅಂಶಗಳು ಇವು: ೧ ಲಾಭದ ನಿರೀಕ್ಷೆ, ೨ ತಾಂತ್ರಿಕ ಪ್ರಗತಿ, ೩ ನಿಜಬಂಡವಾಳ ಪಡೆಯಲು ತಗಲುವ ವೆಚ್ಚ, ೪ ಬಡ್ಡಿಯ ದರ, ೫ ಸರ್ಕಾರದ ನೀತಿ, ೬ ಸದ್ಯದಲ್ಲಿ ನಿಯೋಜಿತವಾಗಿರುವ ಬಂಡವಾಳದ ಮೊತ್ತ ಭವಿಷ್ಯದಲ್ಲಿ ಉದ್ಯಮಪರಿಸ್ಥಿತಿಯಲ್ಲಿ ಸಂಭವಿಸಬಹುದಾದ ಘಟನೆಗಳು.

ಸಮಾಜದಲ್ಲಿ ಬಂಡವಾಳ ನಿಯೋಜನೆಯ ವಿಧಾನವನ್ನು ಪರಿಶೀಲಿಸಿದಾಗ ಅಲ್ಲಿ ಅಸ್ಥಿರತೆ ಬಹಳವಾಗಿರುವುದು ಕಂಡುಬರುತ್ತದೆ. ಬಂಡವಾಳ, ವಸ್ತುಗಳ ಬಾಳಿಕೆ. ಇದಕ್ಕಿ ದ್ದಂತೆಯೇ ಉತ್ಪಾದನ ಕ್ಷೇತ್ರದಲ್ಲಿ ಸಂಭವಿಸುವ ಬದಲಾವಣೆಗಳು, ಲಾಭಗಳಿಕೆಯಲ್ಲಿ ಇರುವ ಅಸ್ಥಿರತೆ, ನಿರೀಕ್ಷಣೆಯನ್ನೂ ಮೀರಿದ ಘಟನೆಗಳು-ಇವೆಲ್ಲ ಬಂಡವಾಳ ನಿಯೋಜನೆ ಯಲ್ಲಿ ಅಸ್ಥಿರತೆಗೆ ಕಾರಣ. ಬಂಡವಾಳ ನಿಯೋಜನೆಯಲ್ಲಿ ಉಂಟಾಗುವ ಏರುತಗ್ಗುಗಳಿಂದ ಉತ್ಪಾದನೆ, ವರಮಾನ, ಉದ್ಯೋಗಾವಕಾಶ-ಇವುಗಳಲ್ಲೂ ಏರುಪೇರುಗಳಾಗುತ್ತವೆ.

ವರಮಾನವೇ ಉದ್ಯೋಗಕ್ಕೆ ಮೂಲ-ಎಂಬುದು ಕೇನ್ಸ್‌ ಸಿದ್ಧಾಂತಕ್ಕೆ ಆಧಾರ. ರಾಷ್ಟ್ರೀಯ ವರಮಾನದ ಹೆಚ್ಚಳಕ್ಕೆ ಅನುಸಾರವಾಗಿ ಉದ್ಯೋಗದ ಮೊತ್ತ ಹೆಚ್ಚುತ್ತದೆ. ಉದ್ಯೋಗವನ್ನು ಕುರಿತ ವಿವೇಚನೆ ನಡೆಸಲು ಈ ಅರ್ಥಶಾಸ್ತ್ರಜ್ಞರು ಎರಡು ತರ್ಕಮಾರ್ಗಗಳನ್ನು ಬಳಸಿಕೊಂಡಿದ್ದಾರೆ. ಮೊದಲನೆಯದು ಒಟ್ಟು ಬೇಡಿಕೆ ಮತ್ತು ಒಟ್ಟು ಸರಬರಾಯಿಯನ್ನು ಕುರಿತ ತರ್ಕಮಾರ್ಗ. ಅನುಭೋಗಿ ಖರ್ಚು (ಅ) ಬಂಡವಾಳದ ಖರ್ಚು ( I ) ಒಟ್ಟು ಉತ್ಪಾದನೆಯನ್ನೂ ಉದ್ಯೋಗವನ್ನೂ (ಙ) ನಿರ್ಧರಿಸುತ್ತವೆ (ಅ + I = ಙ). ಉಳಿತಾಯವೂ ಬಂಡವಾಳ ನಿಯೋಜನೆಯೂ ಸಮನಾಗಿರುತ್ತವೆಯೆನ್ನುವುದೂ (S=I) ಇವು ಉದ್ಯೋಗ ವನ್ನೂ ಉತ್ಪಾದನೆಯನ್ನೂ ನಿಷ್ಕರ್ಷಿಸುತ್ತವೆಯೆನ್ನುವುದೂ ಎರಡನೆಯ ತರ್ಕಮಾರ್ಗ.

ಒಂದು ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯಾದ ಎಲ್ಲ ಸರಕುಗಳ ಹಾಗೂ ಸೇವೆಗಳ ಮೌಲ್ಯವನ್ನೂ ಒಟ್ಟುಗೂಡಿಸಿದಾಗ ಬಂದದ್ದೇ ಅಲ್ಲಿನ ಒಟ್ಟು ಸರಬರಾಯಿ. ಎಂದರೆ ಇದು ರಾಷ್ಟ್ರೀಯ ಉತ್ಪನ್ನ. ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆ ಮಾಡಲಾದ ಎಲ್ಲ ಸರಕು ಹಾಗೂ ಸೇವೆಗಳಿಗೆ ಉಂಟಾಗುವ ಬೇಡಿಕೆಯೇ ಒಟ್ಟು ಬೇಡಿಕೆ. ಇದನ್ನು ಪರಿಣಾಮಕಾರಿ ಬೇಡಿಕೆ ಎಂದೂ ಕರೆಯುತ್ತಾರೆ. ಒಟ್ಟು ಬೇಡಿಕೆ ಒಟ್ಟು ಸರಬರಾಜನ್ನು ಸಂಧಿಸುವ ಮಟ್ಟದಲ್ಲಿ ಸಮಾಜದಲ್ಲಿಯ ಒಟ್ಟು ಉದ್ಯೋಗದ ಮಟ್ಟದ ನಿರ್ಧಾರವಾಗುತ್ತದೆ. ವಾಸ್ತವವಾಗಿ ಉದ್ಯೋಗದ ಮಟ್ಟದ ನಿರ್ಧಾರವಾದಾಗ ಉದ್ಯಮಿಗಳು ತಾವು ಉತ್ಪಾದನೆಯಲ್ಲಿ ವೆಚ್ಚಮಾಡಿದ್ದನ್ನು ತಮ್ಮ ಸರಕು ಸರಬರಾಜು ಮಾಡಿ ಪಡೆಯುತ್ತಾರೆ.

ನಕ್ಷೆಯಲ್ಲಿ ೪೫º ರೇಖೆ ಒಟ್ಟು ಸರಬರಾಜನ್ನು ತೋರಿಸುತ್ತದೆ. ತಾವು ಉತ್ಪತ್ತಿಮಾಡಿದ ಒಟ್ಟು ವಸ್ತುಗಳು ಮತ್ತು ಸೇವೆಗಳಿಗೆ ಸಮನಾದ ಬೇಡಿಕೆ ಮಾರುಕಟ್ಟೆಯಿಂದ ಬರುತ್ತದೆ ಎಂದು ಕಂಡುಬಂದರೆ ಉದ್ಯಮಿಗಳು ಎಷ್ಟು ಪ್ರಮಾಣದಲ್ಲಿ ಬೇಕಾದರೂ ಉತ್ಪಾದಿಸಲು ಸಿದ್ಧರಾಗಿರುತ್ತಾರೆ. ಎಲ್ಲಿ ಒಟ್ಟು ಸರಬರಾಯಿ ರೇಖೆ ಮತ್ತು ಒಟ್ಟು ಬೇಡಿಕೆ ರೇಖೆ (ಅ+I) ಸಂಧಿಸುತ್ತವೋ ಆ ಮಟ್ಟದಲ್ಲಿ ಒಟ್ಟು ಉತ್ಪಾದನೆ, ಉದ್ಯೋಗ ಮತ್ತು ವರಮಾನದ ನಿರ್ಧಾರವಾಗುತ್ತದೆ.

ಚಿತ್ರದಲ್ಲಿ (ಙe) ಎಂಬುದು ಒಟ್ಟು ವರಮಾನವನ್ನು ಸೂಚಿಸುತ್ತದೆ. ಈ ಮಟ್ಟದಲ್ಲಿ ಸಮಾಜದ ಉತ್ಪಾದನೆ ಮತ್ತು ಬೇಡಿಕೆಯ ಅಂಶಗಳು ಹೊಂದಿಕೊಳ್ಳುತ್ತವೆ. ಙe ಎಂಬ ಸಮತೋಲ ಮಟ್ಟದಲ್ಲಿ ಕಂಡು ಬಂದಿರುವುದಕ್ಕಿಂತ ಅಧಿಕ ವರಮಾನ ಉಂಟಾದರೆ, ಒಟ್ಟು ಬೇಡಿಕೆಗಿಂತ ಒಟ್ಟು ಸರಬರಾಜು ಅಧಿಕಗೊಳ್ಳುತ್ತದೆ. ಇದರ ಪರಿಣಾಮವಾಗಿ ಲಾಭಗಳು ಕುಸಿಯುತ್ತವೆ. ಮಾರಾಟವಾಗದೆ ವಸ್ತುಗಳು ಶೇಖರಿಸಲ್ಪಡುತ್ತವೆ. ಕೊನೆಯಲ್ಲಿ ಉತ್ಪಾದನೆ, ಉದ್ಯೋಗ ಮತ್ತು ವರಮಾನಗಳೂ ಕುಸಿಯುತ್ತವೆ. ಙe ಎಂಬ ಸಮತೋಲ ಮಟ್ಟದಲ್ಲಿ ಕಂಡುಬಂದಿರುವುದಕ್ಕಿಂತ ಅಧಿಕ ವರಮಾನ ಕಡಿಮೆಯಾದರೆ ಒಟ್ಟು ಬೇಡಿಕೆ ಒಟ್ಟು ಸರಬರಾಜಿಗಿಂತ ಅಧಿಕವಾಗುತ್ತದೆ. ಇದರಿಂದ ಲಾಭ ಅಧಿಕಗೊಳ್ಳುತ್ತದೆ, ಶೇಖರಿಸ ಲಾಗಿದ್ದ ಸರಕುಗಳ ಮಾರಾಟವಾಗುತ್ತದೆ. ಕ್ರಮೇಣ ಉದ್ಯೋಗ, ಉತ್ಪಾದನೆ ಮತ್ತು ವರಮಾನ ಹೆಚ್ಚುತ್ತವೆ.

ಉಳಿತಾಯ ಮಾಡಿದ ಹಣ ಬಂಡವಾಳ ನಿಯೋಜನೆಗೆ ಸಮಾನವಾಗಿರುತ್ತದೆ ಎಂಬ ತರ್ಕಸರಣಿಯನ್ನನುಸರಿಸಿ ಈ ಬಗ್ಗೆ ಈಗ ವಿವೇಚನೆ ನಡೆಸಬಹುದು. ಸಮಾಜದಲ್ಲಿ ಉತ್ಪಾದನೆ, ಉದ್ಯೋಗ ಮತ್ತು ವರಮಾನಗಳು ಯಾವ ರೀತಿ ಸಮತೋಲ ಮಟ್ಟದಲ್ಲಿರುತ್ತವೆ ಎಂಬುದನ್ನು ತೋರಿಸಲು ಅರ್ಥಶಾಸ್ತ್ರಜ್ಞರು ಮೊದಲನೆಯ ವಿಧಾನಕ್ಕೆ ಪುರಕವಾಗಿ ಈ ವಿಧಾನ ಅನುಸರಿಸಿದ್ದಾರೆ. ಇದರ ಪ್ರಕಾರ ಸಮಾಜದಲ್ಲಿಯ ಎಲ್ಲ ವರ್ಗಗಳ ಜನ ಉಳಿತಾಯ ಮಾಡುವ ಮೊತ್ತವೂ ಉದ್ಯಮಿಗಳು ಬಂಡವಾಳವಾಗಿ ಉಪಯೋಗಿಸಿಕೊಳ್ಳುವ ಮೊತ್ತವೂ ಸಮನಾಗಿಸುತ್ತವೆ ಎಂದು ತೋರಿಸಲಾಗಿದೆ. ಒಟ್ಟು ಉಳಿತಾಯ ಒಟ್ಟು ಬಂಡವಾಳ ನಿಯೋಜನೆಗೆ ಸಮನಾಗುವ ಮಟ್ಟದಲ್ಲಿ ಉತ್ಪಾದನೆ, ಉದ್ಯೋಗ ಮತ್ತು ವರಮಾನಗಳು ಸಮತೋಲ ಸ್ಥಿತಿಯಲ್ಲಿರುತ್ತವೆ. ಙe ಎಂಬುದು ಸಮತೋಲ ಮಟ್ಟವನ್ನು ಸೂಚಿಸುತ್ತದೆ. ಈ ಮಟ್ಟದಲ್ಲಿರುವುಕ್ಕಿಂತ ಅಧಿಕವಾಗಿ ಉಳಿತಾಯವಾದರೆ, ಒಟ್ಟು ವೆಚ್ಚದಲ್ಲಿ ಕೊರತೆ ಉಂಟಾಗುತ್ತದೆ. ಒಟ್ಟು ವೆಚ್ಚದಲ್ಲಿ ಕೊರತೆ ಉಂಟಾದರೆ ಪರಿಣಾಮಕಾರಿ ಬೇಡಿಕೆ ಕುಸಿಯುತ್ತದೆ. ಆಗ ಉತ್ಪಾದನೆ ಉದ್ಯೋಗ ಮತ್ತು ವರಮಾನ ಕುಸಿಯುತ್ತವೆ. ಉಳಿತಾಯ ಅಧಿಕವಾಗುವುದರ ಬದಲು ಬಂಡವಾಳ ನಿಯೋಜನೆ ಅಧಿಕವಾದರೆ ವ್ಯತಿರಿಕ್ತ ಪರಿಣಾಮಗಳು ಉದ್ಭವಿಸುತ್ತವೆ. ಆದ್ದರಿಂದ ಅರ್ಥವ್ಯವಸ್ಥೆ ಯಲ್ಲಿಯ ವಿವಿಧ ಆರ್ಥಿಕ ಪ್ರಭಾವಗಳು ಒಟ್ಟಾಗಿ ಕೆಲಸ ಮಾಡಿ ಪುನಃ ಉಳಿತಾಯ ಮತ್ತು ಬಂಡವಾಳ ನಿಯೋಜನೆಯ ಮಧ್ಯೆ ಸಮತೋಲನವನ್ನುಂಟುಮಾಡುತ್ತವೆ.

ಸಮತೋಲನ ಮಟ್ಟದಲ್ಲಿ ಯಾವ ರೀತಿ ಉತ್ಪಾದನೆ, ಉದ್ಯೋಗ ಮತ್ತು ವರಮಾನ ನಿರ್ಧಾರವಾಗುತ್ತವೆಯೆಂಬುದನ್ನು ಎರಡು ಭಿನ್ನಮಾರ್ಗಗಳಿಂದ ಇದುವರೆಗೂ ವಿವೇಚಿಸಿದ್ದಾ ಯಿತು. ಆದರೆ ಸಮತೋಲ ಮಟ್ಟ ಪುರ್ಣೋದ್ಯೋಗದ ಮಟ್ಟಕ್ಕೆ ಯಾವಾಗಲೂ ಸಮನಾಗಿರಬೇಕಾಗಿಲ್ಲ. ಕೆಲವು ವೇಳೆ ಸಮತೋಲನದ ಮಟ್ಟ ಪೂರ್ಣ ಉದ್ಯೋಗದ ಮಟ್ಟಕ್ಕಿಂತ ಅಧಿಕವಾಗಿರಬಹುದು ಅಥವಾ ಕಡಿಮೆಯಾಗಿಯೂ ಇರಬಹುದು. ಆರ್ಥಿಕ ವ್ಯವಸ್ಥೆಯಲ್ಲಿ ಅನೇಕ ಸಂದರ್ಭಗಳಲ್ಲಿ ಪುರ್ಣೋದ್ಯೋಗದ ಮಟ್ಟ ಏರ್ಪಡದೆ, ಉಳಿತಾಯ ಮತ್ತು ಬಂಡವಾಳ ನಿಯೋಜನೆಗಳಲ್ಲಿ ಸಮಾನತೆ ಉಂಟಾದರೆ ಅಥವಾ ಒಟ್ಟು ವೆಚ್ಚ ಮತ್ತು ಒಟ್ಟು ಸರಬರಾಜುಗಳ ಮಧ್ಯೆ ಸಮಾನತೆಯಿದ್ದರೆ ಆಗ ಅಪೂರ್ಣ ಉದ್ಯೋಗ ಸಮತೋಲ ಏರ್ಪಡುತ್ತದೆ. ಇಂಥ ಸಂದರ್ಭಗಳಲ್ಲಿ ಪುರ್ಣೋದ್ಯೋಗದ ಮಟ್ಟ ಮತ್ತು ಅಪೂರ್ಣ ಉದ್ಯೋಗದ ಮಟ್ಟ ಇವುಗಳಲ್ಲಿ ಅಂತರವನ್ನು ಕಾಣಬಹುದು. ಇದನ್ನೇ ಅರ್ಥಶಾಸ್ತ್ರಜ್ಞರು ಒಟ್ಟು ವೆಚ್ಚದ ಇಳಿತ-ಉಬ್ಬರಗಳಿಂದ ಉಂಟಾಗುವ ಅಂತರವೆಂದು ಕರೆಯುತ್ತಾರೆ. ಒಟ್ಟು ವೆಚ್ಚ ಪುರ್ಣೋದ್ಯೋಗದ ಮಟ್ಟದ ವರಮಾನಕ್ಕಿಂತ ಕಡಿಮೆಯಾಗಿದ್ದರೆ ಆರ್ಥಿಕ ವ್ಯವಸ್ಥೆಯಲ್ಲಿ ಅಂತರ ಉಂಟಾಗುತ್ತದೆ. ಇದರ ಫಲವಾಗಿ ಅನೇಕ ಪರಿಣಾಮಗಳು ಕಂಡುಬರುತ್ತವೆ. ನಿಜವರಮಾನ, ಉತ್ಪಾದನೆ ಮತ್ತು ಉದ್ಯೋಗಗಳು ಕುಸಿಯುತ್ತವೆ.

ಅದರ ಬದಲು ಒಟ್ಟು ವೆಚ್ಚ ಪುರ್ಣೋದ್ಯೋಗದ ಮಟ್ಟದ ವರಮಾನಕ್ಕಿಂತ ಅಧಿಕವಾದರೆ ಆಗಲೂ ಅರ್ಥವ್ಯವಸ್ಥೆಯಲ್ಲಿ ಅಂತರ ಉಂಟಾಗುತ್ತದೆ. ಇದರಿಂದಲೂ ಕೆಲವು ದುಷ್ಪರಿಣಾಮಗಳು ಕಂಡು ಬರುತ್ತವೆ. ಅಂದರೆ ಹಣದ ಚಲಾವಣೆ ಅಧಿಕಗೊಂಡು (ನಿಜ ಉತ್ಪಾದನೆ, ಉದ್ಯೋಗ ಮತ್ತು ವರಮಾನ ಏರಲು ಸಾಧ್ಯವಿಲ್ಲದೆ ಇರುವುದರಿಂದ) ವಸ್ತುಗಳ ಮತ್ತು ಸೇವೆಗಳ ಬೆಲೆ ಜನರಿಗೆ ತೊಂದರೆಯಾಗುತ್ತದೆ. ಒಟ್ಟು ವೆಚ್ಚದ ಇಳಿತಾಯದ ಪರಿಣಾಮವೆಂದರೆ ಆರ್ಥಿಕ ಮುಗ್ಗಟ್ಟು. ಅಂದರೆ ಪರಿಣಾಮಕಾರಿ ಬೇಡಿಕೆಯ ಕೊರತೆಯಿಂದ ವಸ್ತುಗಳಿಗೆ ಸಾಕಷ್ಟು ಮಾರುಕಟ್ಟೆ ಇಲ್ಲದೆ ಉತ್ಪಾದನೆ ಕುಗ್ಗುತ್ತದೆ. ಉತ್ಪಾದನೆ ಕುಗ್ಗಿದಾಗ ನಿರುದ್ಯೋಗ ಉಂಟಾಗುತ್ತದೆ. ಇದನ್ನು ಸರಿಪಡಿಸಲು ಕೇನ್ಸ್‌ ಮತ್ತು ಆತನ ಅನುಯಾಯಿಗಳು ಕೆಲವು ಸಲಹೆ ನೀಡಿದ್ದಾರೆ:

  • ೧ ಸಮಾಜದಲ್ಲಿ ಪರಿಣಾಮಕಾರಿ ಬೇಡಿಕೆ ಏರ್ಪಡಿಸಲು ಕೊಳ್ಳುವ ಶಕ್ತಿ ಸೃಷ್ಟಿಸಬೇಕು.
  • ೨ ಇದಕ್ಕಾಗಿ ಸರ್ಕಾರ ಲೋಕೋಪಯೋಗಿ ಕಾರ್ಯ ಕೈಗೊಳ್ಳಬೇಕು.
  • ೩ ತೆರಿಗೆ ನೀತಿಯಲ್ಲಿ ಉದಾರ ರಿಯಾಯಿತಿ ತೋರಿಸಿ ಉದ್ಯಮಿಗಳಲ್ಲೂ ಅನುಭೋಗಿಗಳಲ್ಲೂ ಉತ್ಸಾಹ ಮೂಡಿಸಬೇಕು.
  • ೪ ಸರ್ಕಾರ ಬಡ್ಡಿಯ ದರ ತಗ್ಗಿಸಿ ಉದ್ಯಮಿಗಳಿಗೆ ಧಾರಾಳವಾಗಿ ಉದ್ದರಿ ಸೌಲಭ್ಯ ದೊರೆಯುವಂತೆ ಮಾಡಬೇಕು.

ಹಣದುಬ್ಬರದ ಪರಿಸ್ಥಿತಿ ಒದಗಿದಾಗ ಮೇಲೆ ಸೂಚಿಸಿರುವ ನೀತಿಗಳಿಗೆ ವ್ಯತಿರಿಕ್ತವಾದ ನೀತಿ ಅನುಸರಿಸುವುದು ಅವಶ್ಯ.[]

೧೯೩೦ರ ಸುಮಾರಿನಲ್ಲಿ ಪ್ರಪಂಚದಲ್ಲಿ ಅತ್ಯಂತ ಭೀಕರ ಆರ್ಥಿಕ ಮುಗ್ಗಟ್ಟು ಸಂಭವಿಸಿದಾಗ ಅನೇಕ ರಾಷ್ಟ್ರಗಳ ಸರ್ಕಾರಗಳ ಕೇನ್ಸ್‌ ಸಲಹೆಗಳನ್ನು ಪ್ರಯೋಗಿಸಿ ನೋಡಿದುವು. ಇವುಗಳಿಂದ ಸಾಕಷ್ಟು ಪರಿಣಾಮವೂ ಉಂಟಾಯಿತು. ಇದರಿಂದ ಅರ್ಥಿಕ ನೀತಿಗಳನ್ನು ರೂಪಿಸುವುದರಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಯಿತು ಎನ್ನಬಹುದು. ಹಣದುಬ್ಬರ ಪರಿಸ್ಥಿತಿ ಒದಗಿದಾಗಲೂ ಕೇನ್ಸ್‌ ಸಲಹೆಗಳು ಪ್ರಯೋಗ ಪರೀಕ್ಷೆಯಲ್ಲಿ ತಕ್ಕ ಮಟ್ಟಿಗೆ ಫಲಪ್ರದವಾಗಿವೆಯೆನ್ನಬಹುದು.

ಕೇನ್ಸ್‌ ಸಿದ್ಧಾಂತ ಪ್ರಸಿದ್ಧಿಗೆ ಬಂದ ಮೇಲೆ ಕೆಲ ಕಾಲ ಅಭಿಜಾತ ಸಿದ್ಧಾಂತ ಮಸುಳಿತ್ತು. ಆದರೆ ಈಚೆಗೆ ಕೆಲವು ಪ್ರಾಧ್ಯಾಪಕರು ಅಭಿಜಾತ ತತ್ತ್ವಕ್ಕೆ ಜೀವದಾನ ಕೊಡುವ ಯತ್ನ ನಡೆಸಿದ್ದಾರೆ. ಇವರ ಪೈಕಿ ಪ್ರಮುಖರಾದವರು ಪಿಗು ಮತ್ತು ಪ್ಯಾಟಿನ್ಕಿನ್. ಇವರ ಸಾಮರಸ್ಯ ಸಿದ್ಧಾಂತವನ್ನು ಈಗ ನವ ಅಭಿಜಾತ ಸಿದ್ಧಾಂತವೆಂದು ಕರೆಯಲಾಗುತ್ತಿದೆ. ಇದೇ ರೀತಿ ಕೇನ್ಸ್‌ ಪಂಥದವರು ತಮ್ಮ ಸಿದ್ಧಾಂತವನ್ನು ಪರಿಷ್ಕರಿಸಿ ಅದಕ್ಕೆ ಹಲವಾರು ನೂತನ ಅಂಶಗ ಳನ್ನು ಜೋಡಿಸಿದ್ದಾರೆ. ಇದರಿಂದಾಗಿ ಕೇನ್ಸನ ಉದ್ಯೋಗ ಸಿದ್ಧಾಂತ ಹೆಚ್ಚು ಉಪಯುಕ್ತವಾಗಿ ಕಂಡುಬಂದಿದೆ. ಉದ್ಯೋಗ, ಉತ್ಪಾದನೆ ಮತ್ತು ವರಮಾನಗಳನ್ನು ಕುರಿತು ಚರ್ಚಿಸುವಾಗ ಕೇನ್ಸನ ಪರಿಷ್ಕೃತ ಸಿದ್ಧಾಂತವೇ ಹೆಚ್ಚಾಗಿ ಬಳಕೆಯಲ್ಲಿದೆಯೆನ್ನಬಹುದು.


ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-06-23. Retrieved 2016-10-26.