ಉದ್ಯೋಗಿಗಳ ರಾಜ್ಯವಿಮಾ ವ್ಯವಸ್ಥೆ

ಉದ್ಯೋಗಿಗಳ ರಾಜ್ಯವಿಮಾ ವ್ಯವಸ್ಥೆ: ಕಾಯಿಲೆ, ನಿಶ್ಯಕ್ತಿ, ಹೆರಿಗೆ, ಮುಪ್ಪು, ಅಪಘಾತ, ಅಂಗವೈಕಲ್ಯ, ಮರಣ ಮೊದಲಾದ ಕಾರಣಗಳಿಂದ ನೆಲೆತಪ್ಪಿದ ಕೆಲಸಗಾರರಿಗೆ ನೆರವು ನೀಡುವ ಸರ್ಕಾರಿ ವಿಮಾ ವ್ಯವಸ್ಥೆ (ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್‌ ಸ್ಕೀಮ್). ೧೯೪೮ರಿಂದ ಭಾರತದಲ್ಲಿ ವ್ಯಾಪಕವಾಗಿ ಜಾರಿಯಲ್ಲಿದೆ. ಕೆಲಸಗಾರರು ಸ್ವಂತವಾಗಿಯಾಗಲಿ ಖಾಸಗಿ ಸಂಘಟನೆಯಿಂದಾಗಲಿ ಎಲ್ಲರಿಗೂ ಅನುಕೂಲವಾಗುವಂತೆ ಭದ್ರತೆಯನ್ನೇರ್ಪಡಿಸಿ ಕೊಳ್ಳುವುದು ಅಸಾಧ್ಯ. ಜನಸಾಮಾನ್ಯರ ಯೋಗಕ್ಷೇಮ ನಿರ್ವಹಣೆಯ ಹೊಣೆ ಹೊತ್ತ ಸರ್ಕಾರವೂ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಉದ್ಯೋಗಪತಿಗಳೂ ಅವರ ನೌಕರರೂ ಕೂಡಿ ಈ ಹೊಣೆ ಹೊರುವಂತೆ ಪ್ರತಿಯೊಂದು ಆಧುನಿಕ ಸರ್ಕಾರವೂ ಈ ಬಗೆಯ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ೧೯೨೩ರ ಕೆಲಸಗಾರರ ಪರಿಹಾರ ಅಧಿನಿಯಮವೇ ಭಾರತದ ಈ ಬಗೆಯ ಸಾಮಾಜಿಕ ಭದ್ರತೆಯ ಬಗ್ಗೆ ಕೈಕೊಂಡ ಪ್ರಥಮ ಕ್ರಮ. ಅದಕ್ಕೆ ಹಿಂದೆ ಭಾರತದಲ್ಲಿ ಯಾವ ಕಾನೂನಾಗಲೀ ವ್ಯವಸ್ಥೆಯಾಗಲೀ ಇರಲಿಲ್ಲ. ಮಹಿಳಾ ಕೆಲಸಗಾರರಿಗೆ ಹೆರಿಗೆಯ ಪೂರ್ವದ ಮತ್ತು ಆ ತರುವಾಯದ ಕಾಲಾವಧಿಗಳಲ್ಲಿ ರಜಾ ಮಂಜೂರು ಮಾಡಲು ಮತ್ತು ಹೆರಿಗೆ ಸೌಲಭ್ಯಗಳ ನ್ನೊದಗಿಸಲು ಅನೇಕ ರಾಜ್ಯಗಳಲ್ಲಿ ಕಾನೂನು ಮಾಡಲಾಗಿತ್ತಾದರೂ ಇದರ ನಿರ್ವಹ ಣೆಯಲ್ಲಿ ಕೇಂದ್ರ-ಪ್ರಾಂತೀಯ ಸರ್ಕಾರಗಳಿಗೆ ಯಾವ ಬಗೆಯ ಆರ್ಥಿಕ ಹೊಣೆಗಾರಿಕೆಯೂ ಇರಲಿಲ್ಲ. ಆಗ ಇದು ಸಂಪೂರ್ಣವಾಗಿ ಉದ್ಯೋಗ ನಿಯೋಜಕರ ಜವಾಬ್ದಾರಿಯಾಗಿತ್ತು. ಕೈಗಾರಿಕೆ, ವಾಣಿಜ್ಯ ಮತ್ತು ವ್ಯವಸಾಯ ಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯವ ನ್ನೊದಗಿಸಬೇಕೆಂದು ೧೯೨೭ರ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಆದ ನಿರ್ಣಯದ ದೃಷ್ಟಿಯಲ್ಲಿ ಪ್ರೊಫೆಸರ್ ಅಡಾರ್ ಕರ್ ನೀಡಿದ ವರದಿಯ (೧೯೪೪) ಆಧಾರದ ಮೇಲೆ ಉದ್ಯೋಗಿಗಳ ರಾಜ್ಯಮಿಮೆಯ ಅಧಿನಿಯಮ ೧೯೪೮ರಲ್ಲಿ ಜಾರಿಗೆ ಬಂತು. ವರ್ಷವಿಡೀ ಕೆಲಸ ಮಾಡುವ ೨೦ ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ನೌಕರರನ್ನು ನೇಮಿಸಿಕೊಂಡಿರುವ, ವಿದ್ಯುತ್ ಅಥವಾ ಇತರ ಶಕ್ತಿಚಾಲಿತ ಯಂತ್ರ ಹೊಂದಿರುವ ಕಾರ್ಖಾನೆಗಳಲ್ಲಿ ತಿಂಗಳಿಗೆ ೫೦೦ ರೂ.ಗಳಿಗಿಂತ ಹೆಚ್ಚಿನ ವೇತನ ಪಡೆಯದ ಎಲ್ಲ ಉದ್ಯೋಗಿಗಳೂ ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಈ ಯೋಜನೆಯನ್ವಯ ಒಂದು ಕೇಂದ್ರನಿಧಿ ಏರ್ಪಡಿಸಲಾಗಿದೆ. ತಿಂಗಳಿಗೆ ೩೦ ರೂ.ಗಳಿಗಿಂತ ಕಡಿಮೆ ವೇತನ ಬರುವ ನೌಕರರು ಈ ನಿಧಿಗೆ ಯಾವ ವಂತಿಗೆಯನ್ನೂ ಸಲ್ಲಿಸುವುದಿಲ್ಲ; ಆದರೆ ಇವರಿಗೆ ಈ ವ್ಯವಸ್ಥೆಯ ಎಲ್ಲ ಸೌಲಭ್ಯಗಳೂ ಲಭಿಸುತ್ತವೆ. ತಿಂಗಳಿಗೆ ೩೦ ರೂ.ಗಳಿಂದ ೪೫ ರೂ.ಗಳ ವರೆಗೆ ತಲಬು ಬರುವವರು ವಾರಕ್ಕೆ ೧೨ ಪೈ. ಪಾವತಿ ಮಾಡುತ್ತಾರೆ. ಅಲ್ಲಿಂದ ಮುಂದಕ್ಕೆ ಈ ದರ ನೌಕರನ ವೇತನಾನುಗುಣವಾಗಿ ಏರುತ್ತದೆ. ಈ ವ್ಯವಸ್ಥೆಗೆ ಒಳಪಟ್ಟ ನೌಕರರು ಇದಕ್ಕಾಗಿ ನಿಯುಕ್ತವಾದ ವಿಶೇಷ ಆಸ್ಪತ್ರೆಗಳಲ್ಲಿ ಅಥವಾ ಅಗತ್ಯವಿದ್ದರೆ ಅವರ ಮನೆಗಳಲ್ಲಿ ಉಚಿತವಾಗಿ ವೈದ್ಯಕೀಯ ಸಲಹೆ, ಚಿಕಿತ್ಸೆಗಳನ್ನು ಪಡೆಯುತ್ತಾರೆ. ಆಸ್ಪತ್ರೆಯ ಸೌಲಭ್ಯಗಳಿಲ್ಲದ ದೂರದ ಸ್ಥಳಗಳಲ್ಲಿ ಇವರಿಗಾಗಿ ಸಂಚಾರಿ ಆಸ್ಪತ್ರೆಗಳಿವೆ. ಕಾಯಿಲೆ ಬಿದ್ದಾಗ ಇವರಿಗೆ ದಿನಗೂಲಿಯ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದ ಸಹಾಯಧನ ದೊರಕುತ್ತದೆ. ಒಟ್ಟು ೩೬೫ ದಿನಗಳಲ್ಲಿ ಎಂಟು ವಾರಗಳ ಕಾಲ ಇವರು ಇದನ್ನು ಪಡೆಯಲು ಅರ್ಹರು. ಕರ್ತವ್ಯನಿರತರಾಗಿದ್ದಾಗ ಗಾಯಗೊಂಡ ನೌಕರನಿಗೆ ಕಂತುಗಳಲ್ಲಿ ನಗದು ಸಹಾಯ ದೊರಕುತ್ತದೆ. ಕಾಯಂ ಊನ ಸಂಭವಿಸಿದರೆ ಮುಂದೆ ಆತ ಜೀವಿಸಿರುವವರೆಗೂ ಈ ಹಣ ಸೌಲಭ್ಯ ನೀಡಬೇಕೆಂದು ವಿಧಿಸಲಾಗಿದೆ. ಈ ಅಪಘಾತದ ಫಲವಾಗಿ ಆತನಿಗೆ ಮರಣ ಸಂಭವಿಸಿದ ಪಕ್ಷದಲ್ಲಿ ಆತನ ಆಶ್ರಿತರಿಗೆ ದೀರ್ಘಕಾಲದ ಮಾಸಾಶನ ದೊರಕಿಸುವ ವ್ಯವಸ್ಥೆಯುಂಟು. ಶವಸಂಸ್ಕಾರಗಳಿಗೂ ಧನಸಹಾಯ ನೀಡಲಾಗುತ್ತದೆ. ಸ್ತ್ರೀ ನೌಕರರು ಹೆರಿಗೆಯ ಸಮಯದಲ್ಲಿ ದಿನಕ್ಕೆ ಕನಿಷ್ಠ ೭೫ ಪೈಸೆಯಂತೆ ಒಟ್ಟು ೧೨ ವಾರ ಕಾಲ ಧನಸಹಾಯ ಪಡೆಯಬಹುದು. ಈ ವ್ಯವಸ್ಥೆಯ ಆಡಳಿತ ವೆಚ್ಚದಲ್ಲಿ ೨/೩ ಭಾಗವನ್ನು ಭಾರತ ಸರ್ಕಾರ ನೀಡುತ್ತದೆ. ವೈದ್ಯಕೀಯ ಖರ್ಚಿನಲ್ಲಿ ಒಂದು ಭಾಗ ರಾಜ್ಯ ಸರ್ಕಾರದ ಹೊಣೆ. ಉದ್ಯೋಗಪತಿಗಳು ಒಂದು ಭಾಗ ಹೊರಬೇಕಾಗುತ್ತದೆ. ಈ ವ್ಯವಸ್ಥೆ ಜಾರಿಯಲ್ಲಿರುವೆಡೆಗಳಲ್ಲಿ ನೌಕರರೂ ತಮ್ಮ ಪಾಲಿಗೆ ನಿಗದಿಯಾದ ವಂತಿಗೆ ಸಲ್ಲಿಸಬೇಕಾದ್ದು ಅವಶ್ಯ. ನೌಕರರ ರಾಜ್ಯವಿಮಾ ಯೋಜನೆಯ ಆಡಳಿತವನ್ನು ದೆಹಲಿಯಲ್ಲಿರುವ ಉದ್ಯೋಗಿಗಳ ರಾಜ್ಯ ವಿಮಾ ಕಾರ್ಪೊರೇಷನ್ ನಡೆಸುತ್ತದೆ. ಕೇಂದ್ರಗಳ, ರಾಜ್ಯ ಸರ್ಕಾರಗಳ, ಉದ್ಯೋಗಿಗಳ, ಉದ್ಯೋಗಪತಿಗಳ, ಸಂಸತ್ತಿನ ಹಾಗೂ ವೈದ್ಯರ ಪ್ರತಿನಿಧಿಗಳು ಇದರ ಸದಸ್ಯರು. ಇದೇ ರೀತಿ ರಾಜ್ಯಗಳಲ್ಲಿ ಪ್ರಾದೇಶಿಕ ಮಂಡಳಿಗಳಿವೆ. ಈ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಪ್ರಾದೇಶಿಕ ಕಚೇರಿಗಳ, ಪರಿಶೀಲಕರ, ದೂರುಗಳ ವಿಚಾರಣೆ ನಡೆಸುವ ವೈದ್ಯರ ಹಾಗೂ ವಿಮಾ ನ್ಯಾಯಾಲಯಗಳ ವ್ಯವಸ್ಥೆಯಿದೆ. ಮೈಸೂರು ರಾಜ್ಯ ವಿಮಾ ಯೋಜನೆ ಜಾರಿಗೆ ಬಂದದ್ದು ೧೯೫೮ರಲ್ಲಿ. ಇದು ಈಗ ಅನೇಕ ಪಟ್ಟಣಗಳಿಗೆ ವಿಸ್ತರಿಸಿದೆ. ೧,೮೬,೦೦ ಕಾರ್ಮಿಕರು ಇದರ ವಾಪ್ತಿಗೆ ಒಳಪಟ್ಟಿದ್ದಾರೆ. ಈ ವ್ಯವಸ್ಥೆಗಾಗಿಯೇ ಪ್ರತ್ಯೇಕವಾದ ಚಿಕಿತ್ಸಾಲಯಗಳೂ ಆಸ್ಪತ್ರೆಗಳೂ ಆಪದ್ವಾಹನ (ಆಂಬ್ಯುಲೆನ್ಸ್‌) ಸೌಕರ್ಯವೂ ಏರ್ಪಟ್ಟಿವೆ. ದೇಶೀಯ ವೈದ್ಯವನ್ನೇ ಬಯಸುವವರಿಗೆ ಕೆಲವು ಕಡೆಗಳಲ್ಲಿ ಈ ಸೌಲಭ್ಯವೂ ಉಂಟು. (ವಿ.ಎಸ್.ಕೆ.)