ಉದ್ಯಮ ಘಟಕ: ಒಂದೇ ಪದಾರ್ಥದ (ಕಮಾಡಿಟಿ) ತಯಾರಿಕೆಯಲ್ಲಿ ನಿರತವಾದ ಸ್ವತಂತ್ರಘಟಕ (ಫರ್ಮ್). ಇದು ಏಕವ್ಯಕ್ತಿ ಉದ್ಯಮವಾಗಿರಬಹುದು, ಪಾಲುದಾರಿಕೆಯಾಗಿರ ಬಹುದು, ಖಾಸಗಿ ಕಂಪನಿಯಾಗಿರಬಹುದು, ಸಾವಿರಾರು ಮಂದಿ ಷೇರುದಾರರನ್ನೂ ನೌಕರರನ್ನೂ ಉಳ್ಳ ಸಾರ್ವಜನಿಕ ಕಂಪನಿಯಾಗಿರುವುದೂ ಸಾಧ್ಯ. ಇದು ಕೈಗಾರಿಕೆಯ ಒಂದು ಅಂಗ. ಒಂದೇ ಬಗೆಯ ಪದಾರ್ಥಗಳನ್ನುತ್ಪಾದಿಸುವ ಅನೇಕ ಘಟಕಗಳ ಸಮೂಹಕ್ಕೆ ಕೈಗಾರಿಕೆಯೆಂದು ಹೆಸರು. ಒಂದು ಕೈಗಾರಿಕೆಯಲ್ಲಿ ಸ್ಪರ್ಧೆಯ ಪರಿಸ್ಥಿತಿಯಿದ್ದರೆ ಒಂದಕ್ಕಿಂತ ಹೆಚ್ಚು ಉದ್ಯಮಘಟಕ ಗಳಾಗಿರುತ್ತವೆ. ಇಡೀ ಕೈಗಾರಿಕೆಗೆ ಒಂದೇ ಉದ್ಯಮ ಘಟಕವಿದ್ದರೆ ಅಲ್ಲಿ ಪರಿಪೂರ್ಣ ಏಕಸ್ವಾಮ್ಯವಿದೆಯೆಂದು ಅರ್ಥ (ನೋಡಿ-ಏಕಸ್ವಾಮ್ಯ). ಸ್ಪರ್ಧೆಯ ಪರಿಸ್ಥಿತಿಯಲ್ಲಿ ಕೈಗಾರಿಕೆ ಯಿಂದ ನಿರ್ಧಾರವಾದ ಬೆಲೆಯನ್ನೇ ಉದ್ಯಮ ಘಟಕ ಪುರಸ್ಕರಿಸುವುದಲ್ಲದೆ, ಅದಕ್ಕೆ ತಕ್ಕಂತೆ ತನ್ನ ಸರಕಿನ ಪ್ರಮಾಣವನ್ನು ಹೊಂದಿಸಿಕೊಳ್ಳುತ್ತದೆ. ಏಕಸ್ವಾಮ್ಯದಲ್ಲಿ ಉದ್ಯಮ ಘಟಕವೇ ಸರಕಿನ ಬೆಲೆಯನ್ನು ಅಥವಾ ಪರಿಮಾಣವನ್ನು ನಿರ್ಣಯಿಸುವ ಸಾಮರ್ಥ್ಯ ಹೊಂದಿರುತ್ತದೆ. (ಆರ್.ಕೆ.ಇ.)