ಉದ್ದರಿ ನಿಯಂತ್ರಣ: ಒಂದು ಗೊತ್ತಾದ ಕಾಲದಲ್ಲಿರುವ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಉದ್ದರಿಯನ್ನು ಒಂದು ಗೊತ್ತಾದ ಪ್ರಮಾಣದಲ್ಲಿ ಏರಿಸುವ ಅಥವಾ ತಗ್ಗಿಸುವ ಉದ್ದೇಶದಿಂದ ಸರ್ಕಾರ, ಕೇಂದ್ರೀಯ ಬ್ಯಾಂಕು ಮತ್ತು ಇತರ ಸಂಸ್ಥೆಗಳು ಕೈಕೊಳ್ಳುವ ಕ್ರಮ (ಕ್ರೆಡಿಟ್ ಕಂಟ್ರೋಲ್). ಮುಖ್ಯವಾಗಿ ಇದು ಕೇಂದ್ರೀಯ ಬ್ಯಾಂಕಿನ ಒಂದು ಕಾರ್ಯಭಾರ. ಈ ಉದ್ದೇಶಕ್ಕಾಗಿ ಈ ಸಂಸ್ಥೆ ತನ್ನ ಬತ್ತಳಿಕೆಯಲ್ಲಿ ಇಟ್ಟಿರುವ ಅಸ್ತ್ರಗಳು ಅನೇಕ. ಕೇಂದ್ರೀಯ ಬ್ಯಾಂಕು ತನಗೆ ಸರಿತೋರಿದಾಗ

  1. ತನ್ನ ಮಟ್ಟದ ದರವನ್ನು ಬದಲಾವಣೆ ಮಾಡಬಹುದು;
  2. ಬುದ್ಧಿಪೂರ್ವಕವಾಗಿ ತಾನೇ ಮಾರುಕಟ್ಟೆಯಲ್ಲಿ ಕಾಲಿಟ್ಟು ಸರ್ಕಾರೀ ಬಂಡವಾಳ ಪತ್ರವೇ ಮುಂತಾದವನ್ನು ನೇರವಾಗಿ ಕೊಳ್ಳಬಹುದು, ಇಲ್ಲವೆ ಮಾರಬಹುದು;
  3. ಸದಸ್ಯ ಬ್ಯಾಂಕುಗಳು ತನ್ನಲ್ಲಿ ಕಾನೂನುಬದ್ದವಾಗಿ ಇಡಬೇಕಾದ ನಗದು ನಿಧಿಯ ಶೇಕಡವಾರು ಪ್ರಮಾಣವನ್ನು ತನ್ನ ಅಧಿಕಾರದತ್ತ ಮಿತಿಗಳೊಳಗೆ ಬದಲಾಯಿಸಬಹುದು. ಇದಕ್ಕೆ ಪುರಕವಾಗಿ ಅವು ತಮ್ಮಲ್ಲಿರುವ ಬಂಡವಾಳಪತ್ರಗಳನ್ನು, ಒಂದು ಗೊತ್ತಾದ ಪ್ರಮಾಣದಲ್ಲಿ ನಿಧಿಯಾಗಿ ತನ್ನಲ್ಲಿ ತಂದಿಟ್ಟು ಆ ಹಣದ ಮೇಲೆ ಬಡ್ಡಿ ಪಡೆಯಬಹುದೆಂದೂ ಸೂಚಿಸಬಹುದು;
  4. ತಾನು ಅಂದಂದು ಕೊಡಲಾಗುವಷ್ಟು ಉದ್ದರಿಯನ್ನು ಅದಕ್ಕಾಗಿ ಬೇಡಿಕೆ ಸಲ್ಲಿಸುವ ಸದಸ್ಯ ಬ್ಯಾಂಕುಗಳಿಗೆ ಪಡಿತರವಾಗಿ ಹಂಚಿಕೊಡ ಬಹುದು;
  5. ಬ್ಯಾಂಕುಗಳು ತನ್ನ ಸಲಹೆಯಂತೆ ವಹಿವಾಟು ನಡೆಸಬೇಕೆಂದು ಅವುಗಳ ಮೇಲೆ ನೈತಿಕ ಪ್ರೇರಣೆ ಬೀರಬಹುದು;
  6. ತನ್ನ ನೈತಿಕ ಒತ್ತಾಯಕ್ಕೆ ಬಗ್ಗದ ಬ್ಯಾಂಕುಗಳ ಮೇಲೆ ನೇರ ಕಾರ್ಯಾಚರಣೆಯನ್ನೂ ಕೈಗೊಳ್ಳಬಹುದು;
  7. ಬ್ಯಾಂಕುಗಳು ತಮ್ಮ ಲೇಣಿದೇಣಿ ಸ್ಥಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಬಹಿರಂಗವಾಗಿ ಪ್ರಕಟಿಸಬೇಕೆಂದು ಆಜ್ಞಾಪಿಸ ಬಹುದು;
  8. ಅಷ್ಟೇ ಅಲ್ಲದೆ, ಯಾವುದಾದರೂ ನಿರ್ದಿಷ್ಟ ಕ್ಷೇತ್ರಗಳಲ್ಲಿ ಉದ್ದರಿಯನ್ನು ನಿಯಂತ್ರಣಗೊಳಿಸಬಹುದು. ಉದಾ : ಅನುಭೋಗಿ ಉದ್ದರಿ, ಷೇರುಪೇಟೆ ಉದ್ದರಿ.

ಹೀಗೆ ರೂಪಿತವಾಗಿ ತನ್ನ ಬತ್ತಳಿಕೆಯಲ್ಲಿ ಸಿದ್ದವಾಗಿರುವ ಈ ಉದ್ದರಿ ನಿಯಂತ್ರಣಗಳನ್ನು ಕೇಂದ್ರೀಯ ಬ್ಯಾಂಕು ಎಂದು, ಹೇಗೆ, ಯಾವ ಉದ್ದೇಶಸಾಧನೆಗಾಗಿ ಪ್ರಯೋಗಿಸ ಬೇಕೆಂಬುದು ಆಯಾ ದೇಶಗಳ ಅಂದಂದಿನ ಅರ್ಥ ವ್ಯವಸ್ಥೆ. ಆರ್ಥಿಕ ಪರಿಸ್ಥಿತಿ, ಅನುಸರಣೆಯಲ್ಲಿರುವ ಹಣಪ್ರಮಿತಿಯ ವಿಶಿಷ್ಟಗುಣ ಅಮದು, ರಫ್ತುಗಳ ವೈಲಕ್ಷಣ್ಯ ಮತ್ತು ಪ್ರಮಾಣ ಇತ್ಯಾದಿ ಅಂಶಗಳನ್ನು ಪ್ರಧಾನವಾಗಿ ಅವಲಂಬಿಸಿದೆ. ಐತಿಹಾಸಿಕ ಉದ್ದರಿ ನಿಯಂತ್ರಣ ಕ್ರಮ ಒಂದೋ ಎರಡೋ ಉದ್ದೇಶಗಳಿಂದ ನಿಯಮಬದ್ಧವಾಗಿ ಕಾರ್ಯಾಚರಣೆಗೆ ಬಂದದ್ದು ಕೇವಲ 1ನೆಯ ಮಹಾಯುದ್ದದಿಂದೀಚೆಗೆ. ಹಣಕಾಸಿನ ಸ್ಥಿತಿಯಲ್ಲಿ ಭದ್ರತೆ ಇರಬೇಕು, ಆ ದೃಷ್ಟಿಯಿಂದ ಹಣದ ಆಡಳಿತನಿರ್ವಹಣೆ ಯಾಗಬೇಕು ಎಂಬ ಸುಧಾರಣೆಗಳ ಬಯಕೆಯ ಉಗಮವಾದದ್ದೂ ಈ ಕಾಲದಲ್ಲೇ. 1ನೆಯ ಮಹಾಯುದ್ದಕ್ಕೆ ಪೂರ್ವದಲ್ಲಿ ಸ್ವಯಂಚಾಲಿತವಾದ ಸ್ವರ್ಣಪ್ರಮಿತಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಜಾರಿಯಲ್ಲಿತ್ತು. ಆಗ ಒಂದು ದೇಶದ ಬ್ಯಾಂಕುಗಳು ಎಷ್ಟು ಹಣವನ್ನು ನಗದಾಗಿ ತಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕು ಎಂಬ ಮುಖ್ಯ ವಿಚಾರವನ್ನು ಕೇಂದ್ರೀಯ ಬ್ಯಾಂಕು ನಿರ್ಣಯಿಸುತ್ತಿರಲಿಲ್ಲ; ಈ ನಿರ್ಣಯವಾಗುತ್ತಿದ್ದುದ್ದು ಆ ದೇಶದಿಂದ ಪರದೇಶಗಳಿಗೆ ಹೋದ ಮತ್ತು ಪರದೇಶಗಳಿಂದ ಆ ದೇಶಕ್ಕೆ ಬಂದ ಚಿನ್ನವೆಷ್ಟು ಎಂಬುದರಿಂದ. ಆ ಸನ್ನಿವೇಶದಲ್ಲಿ ಕೇಂದ್ರೀಯ ಬ್ಯಾಂಕು ಮಾಡುತ್ತಿದ್ದ ಕೆಲಸ ಬಲು ಸರಳ. ಸ್ವದೇಶದಿಂದ ಪರದೇಶಗಳಿಗೆ ಹೋಗುವ ಹಾಗೂ ಪರದೇಶದಿಂದ ಸ್ವದೇಶಕ್ಕೆ ಬರುವ ಚಿನ್ನದ ಪ್ರಮಾಣ ದಿಂದಲೇ ದೇಶದೊಳಗಿನ ಉದ್ದರಿಯ ಪ್ರಮಾಣವೂ ದರವೂ ನಿರ್ಣಯವಾಗುವಂತೆ ಅನುವು ಮಾಡುವುದೇ ಅಲ್ಲದೆ, ಮಾರುಕಟ್ಟೆಯ ದರವನ್ನು ನೋಡಿಕೊಂಡು ಅದಕ್ಕೆ ತಕ್ಕಂತೆ ತನ್ನ ಮಟ್ಟದ ದರವನ್ನು ಏರಿಸುತ್ತಲೂ ಇಳಿಸುತ್ತಲೂ ಇತ್ತು. ಧಾರಣೆ, ಕೂಲಿ, ಬಾಡಿಗೆ, ಉದ್ಯೋಗ ಇತ್ಯಾದಿಗಳ ಮಟ್ಟಗಳು ತಾವಾಗಿಯೇ ಚಿನ್ನದ ಗಳಿಕೆಯ ಮೊತ್ತದ ಆಧಾರದ ಮೇಲೆಯೇ ನಿರ್ಣಯಗೊಳ್ಳುವಂತೆಯೂ ಕೇಂದ್ರೀಯ ಬ್ಯಾಂಕು ಅವಕಾಶ ಮಾಡಿಕೊಡುತ್ತಿತ್ತೇ ವಿನಃ ಅವುಗಳ ಮಾರ್ಗದಲ್ಲಿ ತಾನು ಯಾವ ಬಗೆಯ ಎಡರು ತೊಡರುಗಳನ್ನೂ ಒಡ್ಡುತ್ತಿರಲಿಲ್ಲ. ಆಗಿನ ಕಾಲದಲ್ಲಿದ್ದ ನೋಟುಗಳು ಸಂಪೂರ್ಣವಾಗಿ ಪರಿವರ್ತಕ. ಯಾರು ಬೇಕಾದರೂ ಅವನ್ನು ಕೊಟ್ಟು ನಿಯತಬೆಲೆಯಲ್ಲಿ ಚಿನ್ನ ಪಡೆಯ ಬಹುದಿತ್ತು. ಚಿನ್ನ ಕೊಟ್ಟು ನೋಟು ಪಡೆಯಬಹುದಿತ್ತು. ಎಲ್ಲಕ್ಕೂ ಸಾಮಾನ್ಯವಾಗಿ ಚಿನ್ನವೇ ಆಧಾರ. ಒಂದು ದೇಶದ ಕೇಂದ್ರೀಯ ಬ್ಯಾಂಕಿನ ಚಿನ್ನದ ದಾಸ್ತಾನು ಕರಗಿ ಹೋಗದಂತೆ ನೋಡಿಕೊಳ್ಳುವ ಅಗತ್ಯವಿತ್ತು. ಈ ದೃಷ್ಟಿಯಿಂದಲೇ ಅದು ವಹಿವಾಟು ನಡೆಸುತ್ತಿತ್ತು. ಈ ಉದ್ದೇಶದಿಂದಲೇ ಅದು ತನ್ನ ಮಟ್ಟದ ದರವನ್ನು ಸೂಕ್ತಕಂಡಂತೆ ಬದಲಾಯಿಸುತ್ತಿತ್ತು. ಆದರೆ 1ನೆಯ ಮಹಾಯುದ್ಧದ ತರುವಾಯ ಈ ವ್ಯವಸ್ಥೆ ಬದಲಾಯಿತು. ಅನೇಕ ಪಾಶ್ಚಾತ್ಯ ದೇಶಗಳ ವಿದೇಶೀ ವಿನಿಮಯದಲ್ಲಿ ಬಿಕ್ಕಟ್ಟು ಒದಗಿ, ಚಿನ್ನ ಸಾಗಿ, ಅವುಗಳ ಸ್ವರ್ಣ ಪ್ರಮಿತಿಯನ್ನು ಕಾಯ್ದಿಟ್ಟುಕೊಳ್ಳುವುದು ಕಷ್ಟವಾಗಿತ್ತಲ್ಲದೆ, ಹಣವ್ಯವಸ್ಥೆಯ ಸ್ವಯಂಚಾಲನಶಕ್ತಿಯೂ ಕುಂಠಿತವಾಯಿತು. ಕೇಂದ್ರೀಯ ಬ್ಯಾಂಕು ಅದನ್ನು ತನ್ನ ಆಡಳಿತ ವ್ಯಾಪ್ತಿಗೆ ಒಳಪಡಿಸಿಕೊಂಡು ನಿಶ್ಚಿತ ಆರ್ಥಿಕ ಗುರಿಗಳ ಸಾಧನೆಗಾಗಿ ಉದ್ದರಿಯ ಪ್ರವಾಹದ ಪ್ರಮಾಣವನ್ನೂ ದರವನ್ನೂ ನಿಯಂತ್ರಿಸುವ ಅಗತ್ಯ ತೋರಿಬಂದದ್ದು ಆಗ. 20ನೆಯ ಶತಮಾನದ ಮೂರನೆಯ ದಶಕದ ಆದಿಭಾಗದವರೆಗೂ ಸ್ವರ್ಣ ಪ್ರಮಿತಿಯ ಆ ಬಗೆಯ ಕುಂಠಿತ ಆಧಿಪತ್ಯ ಸಾಗಿಬಂತು. ಅದುವರೆಗೆ ಕೈಗಾರಿಕೆಯೇ ಮುಂತಾದ ಉದ್ಯಮಗಳ ಸ್ವಾಮ್ಯ ಹೆಚ್ಚಾಗಿ ಖಾಸಗಿ ಜನರ ಕೈಯಲ್ಲಿ ಇತ್ತು. ಕೇಂದ್ರೀಯ ಬ್ಯಾಂಕುಗಳೂ ಉದ್ದೇಶಿತ ಆರ್ಥಿಕ ಗುರಿಗಳ ಸಾಧನೆಯ ದೃಷ್ಟಿಯಿಂದ ಚಿನ್ನದ ಪ್ರವಾಹವನ್ನು ಹತೋಟಿಗೆ ತಂದುಕೊಳ್ಳುತ್ತಿದ್ದುವು. ಆ ಉದ್ದೇಶಿತ ಆರ್ಥಿಕ ಗುರಿಗಳಾದರೂ ಏನು ? ವಿದೇಶೀ ಹಣಗಳ ದೃಷ್ಟಿಯಲ್ಲಿ ತಮ್ಮ ದೇಶೀಯ ಹಣದ ವಿನಿಮಯ ದರ ಹೆಚ್ಚು ಏರುಪೇರುಗಳಿಗೆ ಒಳಗಾಗದಂತೆ, ನಿಗದಿಯಾದ ಮಟ್ಟದಲ್ಲೇ ದೃಢವಾಗಿರುವಂತೆ ನೋಡಿಕೊಳ್ಳುವುದೂ ತನ್ಮೂಲಕ ತಮ್ಮ ದೇಶ ಮತ್ತು ಪರದೇಶಗಳ ನಡುವೆ ಪಾವತಿ ಶಿಲ್ಕಿನ ಪರಿಸ್ಥಿತಿ ತೃಪ್ತಿದಾಯಕವಾಗಿದ್ದು, ತಮ್ಮ ಚಿನ್ನದ ನಿಧಿಯ ಸಂರಕ್ಷಣೆಯಾಗುವಂತೆ ನೋಡಿಕೊಳ್ಳುವುದೂ ಜೊತೆಗೆ ಒಳದೇಶದಲ್ಲಿ ಬೆಲೆಗಳ ಮಟ್ಟವನ್ನು ಸ್ಥಿರವಾಗಿಡುವುದೂ ವ್ಯಾಪಾರೇತ್ಯಾದಿ ಉದ್ಯಮಸ್ಥಿತಿಯಲ್ಲಿ ಉಂಟಾಗುವ ಉಬ್ಬರವಿಳಿತಗಳನ್ನು ನಿವಾರಿಸಿ ಉದ್ಯೋಗ ಸೌಲಭ್ಯಗಳನ್ನು ಉನ್ನತ ಮಟ್ಟಕ್ಕೆ ಒಯ್ಯುವುದೂ ಕೇಂದ್ರೀಯ ಬ್ಯಾಂಕುಗಳ ಉದ್ದರಿ ನಿಯಂತ್ರಣ ನೀತಿಯ ಮುಖ್ಯಗುರಿಗಳಾಗಿದ್ದವು. ಅಷ್ಟೇ ಅಲ್ಲ. ಇವುಗಳಲ್ಲಿ ಯಾವುದಾದರೂ ಒಂದು ಗುರಿಯನ್ನು ಸಾಧಿಸಲು ಹೊರಟರೆ ಸಾಕು, ಮಿಕ್ಕ ಎಲ್ಲ ಗುರಿಗಳೂ ತಾವಾಗಿಯೇ ಸಿದ್ದಿಸುವುವು ಎಂದೂ ಅಂದು ನಂಬಲಾಗಿತ್ತು. ಆದರೆ ಈ ಗುರಿಗಳು ಪರಸ್ಪರವಾಗಿರಲಿಲ್ಲ. ಅವುಗಳಲ್ಲಿ ಸಾಮರಸ್ಯ ಸುಲಭವಾಗಿರಲಿಲ್ಲ. ಎರಡನೆಯ ಮಹಾಯುದ್ಧದಿಂದೀಚೆಗೆ ಇದು ಸ್ಪಷ್ಟವಾಗಿ ಅನುಭವಕ್ಕೆ ಬಂತು ಎನ್ನಬಹುದು. ಆದ್ದರಿಂದ ದೇಶ ಒಟ್ಟಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿಕೊಳ್ಳುತ್ತ ಹೋಗಬೇಕಾದರೆ, ಈ ಗುರಿಗಳೆಲ್ಲದರ ಒಂದು ಅತ್ಯಂತ ತೃಪ್ತಿಕರ ಸಮತೋಲ ಸಾಧಿಸಬೇಕಾದ್ದು ಅನಿವಾರ್ಯವೆಂಬುದು ಈಗ ಸ್ಪಷ್ಟವಾಗಿ ಮನವರಿಕೆಯಾಗಿದೆ. ದೇಶದ ಅರ್ಥವ್ಯವಸ್ಥೆಯಲ್ಲಿ ಕೂಡ ಈಗ ಕೆಲವು ಪರಿಣಾಮಕಾರಿ ಪರಿವರ್ತನೆಗಳುಂಟಾಗಿವೆ. ಆರ್ಥಿಕ ಬೆಳೆವಣಿಗೆಯನ್ನು ಸಾಧಿಸುವ ಮೂಲಕ ರಾಷ್ಟ್ರದ ಸಂಪದುತ್ಪಾದನೆಯನ್ನು ವೃದ್ದಿಗೊಳಿಸುತ್ತ ಹೋಗಿ, ಜನಜೀವನವನ್ನು ಉನ್ನತಮಟ್ಟಕ್ಕೆ ಒಯ್ದು ಅದನ್ನು ಹಸನು ಮಾಡುವ ತೀವ್ರ ಅಭಿಲಾಷೆಯಿಂದ ಸರ್ಕಾರ ಒಂದು ನಿರ್ದಿಷ್ಟ ದೀರ್ಘಾವಧಿ ಕಾರ್ಯನೀತಿ ಹಾಕಿಕೊಳ್ಳುತ್ತಿದೆ. ಈ ಉದ್ದೇಶ ಸಾಧನೆಗಾಗಿ ರಾಷ್ಟ್ರದ ಕೇಂದ್ರೀಯ ಬ್ಯಾಂಕು ಸರ್ಕಾರದೊಡನೆ ಮೇಳವಾಗಿ ನಿಂತು ಅದರ ಕಾರ್ಯನೀತಿಗೆ ಪುರಕವಾಗಿ ಹಣದ ಕಾರ್ಯನೀತಿಯನ್ನು ರೂಪಿಸಬೇಕೆಂಬುದು ಸರ್ಕಾರದ ಸಹಜ ನಿರೀಕ್ಷೆ. ಹಾಗೆ ಮಾಡುವುದೇ ತನ್ನ ಆದ್ಯ ಕರ್ತವ್ಯವೆಂದು ಕೇಂದ್ರೀಯ ಬ್ಯಾಂಕೂ ತಿಳಿಯುತ್ತದೆ; ಮತ್ತು ಸಂಪದಭಿವೃದ್ಧಿಯ ನೇರ ಸಾಧನೆಗಾಗಿ ತಾನು ಹಾಗೆ ರೂಪಿಸಿದ ಹಣದ ನೀತಿ ಸಫಲವಾಗುವಂತೆ, ಆಗೊಮ್ಮೆ ಈಗೊಮ್ಮೆ ಉದ್ದರಿ ಪ್ರವಾಹದಲ್ಲಿ ಅಡ್ಡಿಯಾಗಿ ಉದ್ಭವಿಸುವ ಅರ್ಥವಿಲ್ಲದ ಮತ್ತು ಗೊಂದಲಕಾರಿ ಏಳು ಬೀಳುಗಳನ್ನು ನಿಯಂತ್ರಣಾಸ್ತ್ರಗಳಿಂದ ತಕ್ಕರೀತಿಯಲ್ಲಿ ಮೇಳೈಸಿ ಪ್ರಯೋಗಿಸುತ್ತಿದೆ. ಮುಖ್ಯವಾಗಿ ಈ ದೃಷ್ಟಿಯಿಂದಲೇ ಈ ಹಿಂದೆ ಖಾಸಗಿಯವರ ಸ್ವಾಮ್ಯದಲ್ಲಿದ್ದ ಕೇಂದ್ರೀಯ ಬ್ಯಾಂಕುಗಳು ಬಹುತೇಕ ಇಂದು ರಾಷ್ಟ್ರೀಕರಣಗೊಂಡಿವೆ. ಮಿಶ್ರ ಅರ್ಥವ್ಯವಸ್ಥೆ ಜಾರಿಗೆ ಬಂದಿದೆ. ಸರ್ಕಾರಿ ಉದ್ಯಮಕ್ಷೇತ್ರ ದಿನದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಹಿಂದೆ ದೇಶದ ಆಡಳಿತ, ಸಂರಕ್ಷಣೆ ಮುಂತಾದ ಹೊಣೆಗಳ ನಿರ್ವಹಣೆಗೆ ಮಾತ್ರ ವರಮಾನವನ್ನು ಹುಡುಕಿಕೊಳ್ಳುತ್ತಿದ್ದ ಸರ್ಕಾರಗಳು ಇಂದು ತಮ್ಮ ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡುವುದ ಕ್ಕಾಗಿಯೂ ತತ್ಸಂಬಂಧವಾದ ಇತರ ಹೊಣೆಗಾರಿಕೆಯ ನಿರ್ವಹಣೆಗಾಗಿಯೂ ಹಣ ಎತ್ತಬೇಕಾಗಿದೆ. ಆದ್ದರಿಂದ ಸರ್ಕಾರಗಳು ತಮ್ಮ ತೆರಿಗೆ, ಸುಂಕ, ಸಾರಿಗೆ ಮತ್ತು ಸಾರ್ವಜನಿಕ ರಿಂದ ಸಾಲವೆತ್ತುವ ರಾಜ್ಯಾದಾಯ ನೀತಿಯನ್ನು ಉಚಿತರೀತಿಯಲ್ಲಿ ಮಾರ್ಪಡಿಸಿಕೊಳ್ಳುತ್ತಿವೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಕೊಳ್ಳುವುದೋ ಅದಕ್ಕನುಸಾರವಾಗಿ ಸಮಯೋಚಿತವಾಗಿ ತಾನೂ ಉದ್ದರಿನಿಯಂತ್ರಣ ಅಸ್ತ್ರಗಳನ್ನು ಅನುಸಂಧಾನ ಮಾಡುವುದು ಕೇಂದ್ರೀಯ ಬ್ಯಾಂಕಿನ ಹೊಣೆ. 2ನೆಯ ಮಹಾಯುದ್ಧಾನಂತರದ ಕಾಲದಲ್ಲಿ ಸರ್ಕಾರದ ಆರ್ಥಿಕ ಕಾರ್ಯನೀತಿಯ ಗುರಿಗಳೂ ಅದಕ್ಕೆ ಸಂಪುರಕವಾದ ಹಣಕಾರ್ಯನೀತಿಯ ಗುರಿಗಳೂ ಒಂದೇ ಆಗಿ ಪರಿಣಮಿಸಿವೆಯೆನ್ನಬಹುದು. ಒಳದೇಶದ ಬೆಲೆಗಳ ಸ್ಥೈರ್ಯಸಾಧನೆ, ವಿದೇಶಿ ವಿನಿಮಯ ದರಗಳ ದೃಢತೆ, ವಿದೇಶಿ ಕ್ಷೇತ್ರದಲ್ಲಿ ಅನುಕೂಲಕರ ಪಾವತಿ ಶಿಲ್ಕಿನ ಸ್ಥಾಪನೆ, ಪುರ್ಣೋ ದ್ಯೋಗ ಸ್ಥಿತಿ ಸಾಧನೆ, ಸಂರಕ್ಷಣೆ, ಸಂಪದಭಿವೃದ್ದಿ-ಇವು ಇಂದಿನ ಮುಖ್ಯ ಗುರಿಗಳು. ಸರ್ಕಾರ ಹಾಕಿಕೊಂಡ ಆರ್ಥಿಕ ಕಾರ್ಯನೀತಿಯ ಈ ಗುರಿಗಳ ತೃಪ್ತಿಕರ ಸಾಧನೆಗೆ ಪೋಷಕವಾಗುವ ರೀತಿಯಲ್ಲಿ ಮತ್ತು ಸರ್ಕಾರ ಪ್ರಯೋಗಿಸುವ ಸುಂಕ, ಸಾಲ, ತೆರಿಗೆ ಇತ್ಯಾದಿ ವರಮಾನ ಸಾಧನೆಗಳಿಗೆ ಸಂಪುರಕವಾದ ರೀತಿಯಲ್ಲಿ ಕೇಂದ್ರೀಯ ಬ್ಯಾಂಕು ತನ್ನ ದೀರ್ಘಾವಧಿ ಹಣ ಕಾರ್ಯನೀತಿಯನ್ನೂ ಅಲ್ಪಾವಧಿಯದಾದ ಉದ್ದರಿನಿಯಂತ್ರಣ ನೀತಿಯನ್ನೂ ರೂಪಿಸಿಕೊಳ್ಳಬೇಕಾದ್ದು ಅಗತ್ಯ. ಒಂದು ದೇಶದ ಕೇಂದ್ರೀಯ ಬ್ಯಾಂಕು ಉದ್ದರಿನಿಯಂತ್ರಣ ಕಾರ್ಯಕ್ರಮದಿಂದ ನಿರೀಕ್ಷಿಸಿದ ಮಟ್ಟಕ್ಕೆ ಆದಷ್ಟು ಹತ್ತಿರದ ಸಿದ್ದಿ ಪಡೆಯಲು ಯತ್ನಿಸುವುದು ಸಹಜ. ಅದು ಯಶಸ್ವಿಯಾಗಬೇಕಾದರೆ ಆ ದೇಶದ ವಾಣಿಜ್ಯ ಬ್ಯಾಂಕುಗಳು ಅದರ ಶಿಸ್ತಿಗೆ ಒಳಪಟ್ಟು ಅಷ್ಟೇ ಶ್ರದ್ದೆ ಮತ್ತು ನಿಷ್ಠೆಯಿಂದ ತಮ್ಮ ನಿತ್ಯದ ವಹಿವಾಟುಗಳನ್ನು ನಡೆಸಬೇಕಾದ್ದು ಅಗತ್ಯ. ಕೇಂದ್ರೀಯ ಬ್ಯಾಂಕಿನ ಶಿಸ್ತನ್ನು ಪಾಲಿಸುವುದರಲ್ಲಿ ವಾಣಿಜ್ಯ ಬ್ಯಾಂಕುಗಳು ಎಷ್ಟು ಹಿಂದೆ ಬೀಳುವುವೋ ಅಷ್ಟರಮಟ್ಟಿಗೆ ಉದ್ದರಿನಿಯಂತ್ರಣ ಕಾರ್ಯ ವಿಫಲವಾದಂತೆ. ವಾಣಿಜ್ಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕಿನ ನಾಯಕತ್ವವನ್ನು ಮಾನ್ಯಮಾಡಬೇಕು. ಅದರ ಸಲಹೆ ಯಂತೆ ಉದ್ದರಿ ನೀಡಬೇಕು. ಯಾವ ಉದ್ದೇಶಕ್ಕಾಗಿ ಉದ್ದರಿ ನೀಡಲಾಯಿತೋ ಅದೇ ಉದ್ದೇಶಕ್ಕೆ ಅದರ ಬಳಕೆಯಾಗುವಂತೆ ಎಚ್ಚರ ವಹಿಸುವುದಗತ್ಯ. ಮೇಲಾಗಿ ದೇಶದ ಎಲ್ಲ ಬ್ಯಾಂಕುಗಳೂ ಕೇಂದ್ರೀಯ ಬ್ಯಾಂಕಿನ ಸದಸ್ಯ ಬ್ಯಾಂಕುಗಳಾಗಿ ಒಂದೇ ಶಿಸ್ತಿನಿಂದ ತಮ್ಮ ತಮ್ಮ ವಹಿವಾಟು ನಡೆಸಬೇಕು. ಈ ಬಗೆಗೆ ಯಾವ ಕೇಂದ್ರೀಯ ಬ್ಯಾಂಕೇ ಆದರೂ ನೂರಕ್ಕೆ ನೂರರಷ್ಟು ಸಹಕಾರ ಮತ್ತು ಸಹೃದಯತೆಯನ್ನು ನಿರೀಕ್ಷಿಸುವುದು ಕಷ್ಟವೇ ಸರಿ. ಆದರೆ ಸಾಕಷ್ಟು ಸಹಕಾರವಾದರೂ ಬೇಕೇಬೇಕು. (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಕೇಂದ್ರೀಯ-ಬ್ಯಾಂಕು) ಅಂತಾರಾಷ್ಟ್ರೀಯವಾಗೂ ಉದ್ದರಿ ನಿಯಂತ್ರಣದ ಮಹತ್ತ್ವ ಇಂದು ಹೆಚ್ಚಿನದು. ವಿಶ್ವದ ನಾನಾ ರಾಷ್ಟ್ರಗಳ ಹಣಕಾಸಿನ ಸ್ಥಿತಿಯನ್ನು ಒಂದು ಹದದಲ್ಲಿಟ್ಟು ಅಂತಾರಾಷ್ಟ್ರೀಯ ವ್ಯವಹಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಅಂತಾರಾಷ್ಟ್ರೀಯ ದ್ರವ್ಯನಿಧಿಯ (ನೋಡಿ) ದೃಷ್ಟಿಯಿಂದ ಉದ್ದರಿನಿಯಂತ್ರಣ ಮಾಡಬೇಕಾಗಿದೆ. ದೇಶದ ಆರ್ಥಿಕ ಹಿತದೃಷ್ಟಿಯಿಂದ ವಾಣಿಜ್ಯ ಬ್ಯಾಂಕುಗಳ ಬಳಿ ಎಷ್ಟು ನಗದು ನಿಧಿ ಇರಬೇಕು, ಹೊರದೇಶಗಳಲ್ಲಿನ ಪಾವತಿಗಾಗಿ ನಗದಾಗಿ ದೇಶಿವಿದೇಶಿ ಹಣಗಳ ನಿಧಿ ಎಷ್ಟಿರಬೇಕು, ಎಂಬುದನ್ನು ಸದಾ ಗಮನದಲ್ಲಿ ಇಟ್ಟುಕೊಂಡು ಒಂದು ದೇಶದ ಕೇಂದ್ರೀಯ ಬ್ಯಾಂಕು ರಾಷ್ಟ್ರ ಮಟ್ಟದಲ್ಲಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉದ್ದರಿ ನಿಯಂತ್ರಣ ವ್ಯವಸ್ಥೆ ಮಾಡುವುದು ಅಗತ್ಯ. ಅಂತಾರಾಷ್ಟ್ರೀಯ ಬಟವಾಡೆಗಳಲ್ಲಿ ಸಮತೋಲನ ಸಾಧ್ಯವಾಗುವಂತಿರ ಬೇಕು; ಅಂಥ ಬಟವಾಡೆಗಳು ಸುಸೂತ್ರವಾಗಿ ನಡೆಯುವಂತೆ ಅಂತಾರಾಷ್ಟ್ರೀಯ ನಗದು ನಿಧಿ ಸದಾಕಾಲದಲ್ಲೂ ಸಾಕಷ್ಟಿರಬೇಕು. ಇದಾಗದಿದ್ದರೆ ಉದ್ದರಿ ನಿಯಂತ್ರಣ ವ್ಯವಸ್ಥೆ ಪರಿಪೂರ್ಣವೆನಿಸಿಕೊಳ್ಳಲಾರದು. ಈ ದೃಷ್ಟಿಯಿಂದ, ದೇಶಕ್ಕೊಂದು ಕೇಂದ್ರೀಯ ಬ್ಯಾಂಕು ಇರುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೇಂದ್ರೀಯ ಬ್ಯಾಂಕುಗಳೆಲ್ಲವನ್ನೂ ತನ್ನ ಸದಸ್ಯತ್ವದಲ್ಲಿ ಹೊಂದಿದ ಅಂತಾರಾಷ್ಟ್ರೀಯ ಬ್ಯಾಂಕು ಒಂದು ಇರಬೇಕು; ತನ್ನ ಸದಸ್ಯ ಬ್ಯಾಂಕುಗಳೆಲ್ಲ ತನ್ನ ಶಿಸ್ತಿಗೆ ಒಳಪಟ್ಟು ತಂತಮ್ಮ ಉದ್ದರಿ ವ್ಯವಹಾರ ನಡೆಸಬೇಕೆಂದು ಒಂದು ರಾಷ್ಟ್ರದ ಕೇಂದ್ರೀಯ ಬ್ಯಾಂಕು ಹೇಗೆ ನಿರೀಕ್ಷಿಸುತ್ತದೋ ಹಾಗೆ ಎಲ್ಲ ಕೇಂದ್ರೀಯ ಬ್ಯಾಂಕುಗಳೂ ಸ್ವಂತ ಇಚ್ಛೆಯಿಂದ ಅಂತಾರಾಷ್ಟ್ರೀಯ ಬ್ಯಾಂಕು ವ್ಯವಸ್ಥೆಯ ಶಿಸ್ತಿಗೆ ಒಳಪಟ್ಟು ತಮ್ಮ ವ್ಯವಹಾರ ನಡೆಸಬೇಕು; ಈ ಪಾತ್ರದ ಯಶಸ್ವೀ ನಿರ್ವಹಣೆಗಾಗಿ ಈಗಿನ ಅಂತಾರಾಷ್ಟ್ರಿಯ ದ್ರವ್ಯನಿಧಿ ಸಂಸ್ಥೆ ಅಂತರರಾಷ್ಟ್ರೀಯವಾಗಿ ಕೇಂದ್ರೀಯ ಬ್ಯಾಂಕಿನ ಪಾತ್ರವಹಿಸಬಹುದು. ಹೀಗೆ ಬದಲಾವಣೆಯಾದ ಹೊಸ ಸಂಖ್ಯೆಯಲ್ಲಿ ಕೇಂದ್ರೀಯ ಬ್ಯಾಂಕುಗಳು ನಗದು ನಿಧಿಯನ್ನು ತೃಪ್ತಿಕರವಾದ ಮಟ್ಟದಲ್ಲಿ ಇಡಬೇಕು; ಅಲ್ಲದೆ ಅಂತಾರಾಷ್ಟ್ರೀಯ ವಿಧಿಬದ್ಧ ಹಣವೆಂಬುದೊಂದನ್ನು ಪ್ರತ್ಯೇಕವಾಗಿಯೇ ಸೃಷ್ಟಿಸಿ ಅದರ ರೂಪದಲ್ಲೇ ಈ ನಿಧಿಯನ್ನು ಇಡಬೇಕೇ ಅಥವಾ ಚಿನ್ನದ ರೂಪದಲ್ಲಿ ಇಡಬೇಕೇ ಅಥವಾ ಪೌಂಡ್ಸ್ಟರ್ಲಿಂಗ್ ಇಲ್ಲವೇ ಡಾಲರ್ ರೂಪದಲ್ಲಿ ಇಡಬೇಕೇ ಅಥವಾ ಈ ಪ್ರಧಾನ ಸದಸ್ಯರಾಷ್ಟ್ರಗಳ ಹಣಗಳ ರೂಪದಲ್ಲಿ ಇಡಬೇಕೇ ಎಂಬ ಕ್ಲಿಷ್ಟ ಸಮಸ್ಯೆಯನ್ನೂ ಸಮರ್ಪಕವಾಗಿ ಬಿಡಿಸಬೇಕಾಗಿದೆ. ಕೇನ್ಸ್‌, ಟ್ರಿಫಿನ್ ಮುಂತಾದ ಅರ್ಥಶಾಸ್ತ್ರಜ್ಞರು ಈ ವಿಚಾರವಾಗಿ ವಿವೇಚನೆ ನಡೆಸಿದ್ದಾರೆ. (ನೋಡಿ-ಕೇನ್ಸ್‌-ಯೋಜನೆ) (ಸಿ.ಎಸ್.)