ಜೀವನೋಪಾಯ

(ಉದರಂಭರಣ ಇಂದ ಪುನರ್ನಿರ್ದೇಶಿತ)

ಒಬ್ಬ ವ್ಯಕ್ತಿಯ ಜೀವನೋಪಾಯ ಎಂದರೆ ಅವನ ಜೀವನದ ಮೂಲಭೂತ ಅಗತ್ಯಗಳನ್ನು (ಆಹಾರ, ನೀರು, ಆಶ್ರಯ ಮತ್ತು ಬಟ್ಟೆ) ಪಡೆದುಕೊಳ್ಳುವ ಸಾಧನ. ಜೀವನೋಪಾಯ ಪದವನ್ನು ಸಮರ್ಥನೀಯ ಆಧಾರದಲ್ಲಿ ಘನತೆಯೊಂದಿಗೆ ತನ್ನ ಮತ್ತು ತನ್ನ ಮನೆಯವರ ಅಗತ್ಯಗಳನ್ನು ಪೂರೈಸಲು ನೀರು, ಆಹಾರ, ಮೇವು, ಔಷಧಿ, ಆಶ್ರಯ, ಬಟ್ಟೆಬರೆಯನ್ನು ಪಡೆಯುವುದನ್ನು ಮತ್ತು (ಮಾನವ ಹಾಗೂ ವಸ್ತು ಸಂಬಂಧಿ ಎರಡೂ ಬಗೆಯ) ದತ್ತಿಗಳನ್ನು ಬಳಸಿ ಪ್ರತ್ಯೇಕವಾಗಿ ಅಥವಾ ಒಂದು ಗುಂಪಾಗಿ ಕಾರ್ಯನಿರ್ವಹಿಸಿ ಮೇಲೆ ಹೇಳಲಾದ ಅಗತ್ಯಗಳನ್ನು ಸಂಪಾದಿಸುವ ಸಾಮರ್ಥ್ಯವನ್ನು ಒಳಗೊಂಡ ಚಟುವಟಿಕೆಗಳ ಸಮೂಹವೆಂದು ವ್ಯಾಖ್ಯಾನಿಸಲಾಗುತ್ತದೆ. ಸಾಮಾನ್ಯವಾಗಿ ಈ ಚಟುವಟಿಕೆಗಳನ್ನು ಮತ್ತೆಮತ್ತೆ ಮಾಡಲಾಗುತ್ತದೆ. ಉದಾಹರಣೆಗೆ, ಒಬ್ಬ ಮೀನುಗಾರನ ಜೀವನೋಪಾಯವು ಮೀನುಗಳ ಲಭ್ಯತೆಯನ್ನು ಆಧರಿಸಿದೆ.

ಸಮರ್ಥನೀಯ ಜೀವನೋಪಾಯದ ಪರಿಕಲ್ಪನೆಯು ಬಡತನ ನಿರ್ಮೂಲನೆಯ ಸಾಂಪ್ರದಾಯಿಕ ವ್ಯಾಖ್ಯಾನಗಳು ಮತ್ತು ಕಾರ್ಯವಿಧಾನಗಳನ್ನು ಮೀರಿ ಮುಂದೆ ಹೋಗುವ ಒಂದು ಪ್ರಯತ್ನವಾಗಿದೆ.[] ಇವು ಬಹಳ ಸಂಕುಚಿತವಾಗಿದ್ದವೆಂದು ಕಂಡುಕೊಳ್ಳಲಾಗಿತ್ತು ಏಕೆಂದರೆ ಇವು ಬಡತನದ ನಿರ್ದಿಷ್ಟ ಅಂಶಗಳು ಅಥವಾ ಅಭಿವ್ಯಕ್ತಿಗಳ ಮೇಲೆ ಮಾತ್ರ ಕೇಂದ್ರೀಕರಿಸಿದ್ದವು, ಉದಾಹರಣೆಗೆ ಕಡಿಮೆ ಆದಾಯ, ಅಥವಾ ದುರ್ಬಲತೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಬಡತನದ ಇತರ ಮಹತ್ವದ ಅಂಶಗಳನ್ನು ಪರಿಗಣಿಸುತ್ತಿರಲಿಲ್ಲ. ಆರ್ಥಿಕವಾಗಿ, ಪಾರಿಸರಿಕವಾಗಿ, ಮತ್ತು ಸಾಮಾಜಿಕವಾಗಿ ಸಮರ್ಥನೀಯ ರೀತಿಯಲ್ಲಿ ಜೀವನೋಪಾಯ ಮಾಡುವ ಬಡವರ ಸಾಮರ್ಥ್ಯವನ್ನು ನಿರ್ಬಂಧಿಸುವ ಅಥವಾ ವರ್ಧಿಸುವ ವಿವಿಧ ಅಂಶಗಳು ಮತ್ತು ಪ್ರಕ್ರಿಯೆಗಳಿಗೆ ಹೆಚ್ಚು ಗಮನ ಕೊಡಬೇಕೆಂದು ಈಗ ಗುರುತಿಸಲಾಗಿದೆ.

ಸಮರ್ಥನೀಯ ಜೀವನೋಪಾಯದ ಪರಿಕಲ್ಪನೆಯು ಬಡತನಕ್ಕೆ ಹೆಚ್ಚು ಸುಸಂಬದ್ಧ ಹಾಗೂ ಸಂಯೋಜಿತ ವಿಧಾನವನ್ನು ಒದಗಿಸುತ್ತದೆ. ಸಮರ್ಥನೀಯ ಜೀವನೋಪಾಯದ ಕಲ್ಪನೆಯನ್ನು ಪರಿಸರ ಮತ್ತು ಅಭಿವೃದ್ಧಿ ಮೇಲಿನ ಬ್ರಂಟ್‍ಲಂಡ್ ಆಯೋಗವು ಮೊದಲು ಪರಿಚಯಿಸಿತು.

ಸಮಾಜ ವಿಜ್ಞಾನಗಳಲ್ಲಿ, ಜೀವನೋಪಾಯದ ಪರಿಕಲ್ಪನೆಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಧನಗಳನ್ನು ಒಳಗೊಳ್ಳುವಂತೆ ವಿಸ್ತರಿಸುತ್ತದೆ, ಅಂದರೆ "ಒಬ್ಬ ವ್ಯಕ್ತಿ, ಕುಟುಂಬ, ಅಥವಾ ಇತರ ಸಾಮಾಜಿಕ ಗುಂಪಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಳಸಬಹುದಾದ ಅಥವಾ ವಿನಿಮಯ ಮಾಡಿಕೊಳ್ಳಬಹುದಾದ ಆದಾಯ ಮತ್ತು/ಅಥವಾ ಸಂಪನ್ಮೂಲಗಳ ಸಮೂಹಗಳ ಮೇಲಿರುವ ನಿಯಂತ್ರಣ. ಇದು ಮಾಹಿತಿ, ಸಾಂಸ್ಕೃತಿಕ ಜ್ಞಾನ, ಸಾಮಾಜಿಕ ಜಾಲಗಳು ಮತ್ತು ಕಾನೂನು ಹಕ್ಕುಗಳು ಜೊತೆಗೆ ಉಪಕರಣಗಳು, ಜಮೀನು ಮತ್ತು ಇತರ ಭೌತಿಕ ಸಂಪನ್ಮೂಲಗಳನ್ನು ಒಳಗೊಳ್ಳಬಹುದು." ಜೀವನೋಪಾಯದ ಪರಿಕಲ್ಪನೆಯನ್ನು ಸಮರ್ಥನೀಯತೆ ಮತ್ತು ಮಾನವ ಹಕ್ಕುಗಳ ಮೇಲೆ ಕೇಂದ್ರೀಕರಿಸುವ ರಾಜಕೀಯ ಪರಿಸರ ವಿಜ್ಞಾನದ ಸಂಶೋಧನೆಯ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು" (PDF). Archived from the original (PDF) on 2013-10-05. Retrieved 2018-06-03.